Thursday, November 13, 2025
Thursday, November 13, 2025

ನಮ್ಮಲ್ಲಿರುವ ನ್ಯೂನತೆಗಳಲ್ಲೂ ಸಾಮ್ಯ ಬಹಳಷ್ಟಿದೆ!

ಹಳೆ ತಲೆಮಾರಿನ ಜನರಿಗೆ ಇಂದಿಗೂ ರಾಜ ಮನೆತನದಲ್ಲಿ ಆಗುವ ಸಣ್ಣ ಪುಟ್ಟ ಬದಲಾವಣೆಗಳು ಬೇಕು. ತಮ್ಮ ಮನೆಯಲ್ಲಿ ಆದ ರೀತಿಯಲ್ಲಿ ಕುಳಿತು ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಕೇವಲ ಅವರ ಮನೆಯ ಚಾವಡಿಗಳಲ್ಲಿ ಇಂಥ ಮಾತುಕತೆಯಾಗುತ್ತವೆ ಎಂದುಕೊಂಡರೆ ಅದು ತಪ್ಪು. ಮುಖ್ಯ ಟೀವಿ ವಾಹಿನಿಯಲ್ಲಿ ಕುಳಿತು 'ರಾಣಿ ಹಾಕಿದ ಬಟ್ಟೆಯ ಬೆಲೆ ಎಷ್ಟು? ಆಕೆಯೇಕೆ ಇಂದು ಇಷ್ಟು ಸಸ್ತಾ ಬಟ್ಟೆಯನ್ನು ಹಾಕಿದ್ದಳು? ಎನ್ನುವ ಮಾತುಕತೆಯನ್ನು ಆಡುತ್ತಾರೆ. ಅದಕ್ಕೆ ಲಕ್ಷಾಂತರ ವೀಕ್ಷಕರ ದಂಡು ಬೇರೆ.

- ರಂಗಸ್ವಾಮಿ ಮೂಕನಹಳ್ಳಿ


ಅದು 2013ನೇ ಇಸವಿಯ ಒಂದು ತಿಂಗಳು. ಇಂಗ್ಲೆಂಡ್ ದೇಶದಲ್ಲಿ ತಿಂಗಳುಗಳ ಬೆಟ್ಟಿಂಗ್ ಆಗತಾನೆ ಕೊನೆಗೊಂಡಿತ್ತು. ಬ್ರಿಟಿಷ್ ರಾಜಮನೆತನಕ್ಕೆ ಗಂಡು ಮಗು ಹುಟ್ಟಿತ್ತು. ಹುಟ್ಟುವ ಮಗು ಗಂಡೋ ಹೆಣ್ಣೋ ಎನ್ನುವುದರ ಬಗ್ಗೆ ಬೆಟ್ಟಿಂಗ್ ನಡೆದಿತ್ತು. ಮತ್ತೆ ಬೆಟ್ಟಿಂಗ್ ಮಗುವಿನ ಹೆಸರು ಜಾರ್ಜ್ ಅಥವಾ ಜೇಮ್ಸ್ ಎನ್ನುವುದರ ಕುರಿತು ಶುರು ಕೂಡ ಆಗಿತ್ತು. ಲಂಡನ್‌ನ ಬೀದಿಗಳಲ್ಲಿ ಹತ್ತು ಹೆಜ್ಜೆಗೆ ಒಂದು ಬೆಟ್ಟಿಂಗ್ ಶಾಪ್ ಇದೆ. ಜಗತ್ತಿನ ಶಾಂತಿ ಕದಡಿದ ಮಹಾನ್ ದೇಶ ಇವತ್ತಿಗೆ ಜರ್ಜರಿತವಾಗಿದೆ. 2013ರ ಆ ದಿನ ಲಂಡನ್ ನಲ್ಲಿ ವಿಪರೀತ ಮಳೆ, ಗುಡುಗು-ಸಿಡಿಲು ಕೂಡ ಇತ್ತು. ಇಲ್ಲಿನ ನ್ಯೂಸ್ ಚಾನೆಲ್ ರಾಜಕುಮಾರನ ಹುಟ್ಟು ಪ್ರಕೃತಿ ಆಚರಿಸುತ್ತಿದೆ ಎಂದು ಅರಚಾಡಿದ್ದು ಕೇಳಿದ್ದಕ್ಕೆ ಸಾಕ್ಷಿಯಾದೆ. ಅದೇ ನಮ್ಮ ಪುರಾಣಗಳಲ್ಲಿ ಮಹಾನ್ ಪುರುಷರು ಹುಟ್ಟಿದಾಗಲೂ ಆಗಿತ್ತು ಎನ್ನಿ. ಆಗ ನಾವು ಅಚಾನಕ್ಕಾಗಿ ವಿಜ್ಞಾನದಅರಿವಿಲ್ಲದ ಮೂಢನಂಬಿಕೆ ಉಳ್ಳವರಾಗಿ ಬದಲಾಗಿ ಬಿಡುತ್ತೇವೆ. ಈ ಮಾತುಗಳನ್ನು ಉಲ್ಲೇಖಿಸಲು ಕಾರಣ ಸ್ಪೇನ್ ದೇಶ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿಯೂ ರಾಜಮನೆತವನ್ನು ಬಹಳವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ. ಅದರಲ್ಲೂ ಮೀಡಿಯಾಗಳುಅವರು ಹಾಕುವ ಬಟ್ಟೆಯಿಂದ ಹಿಡಿದು ಎಲ್ಲವನ್ನೂ ಗಮನಿಸುತ್ತವೆ. ಪತ್ರಿಕೆಗಳು ಅವುಗಳ ಬಗ್ಗೆ ಉದ್ದುದ್ದ ಬರೆಯುತ್ತವೆ. ಹೀಗೆ ಗಾಸಿಪ್‌ಗಳನ್ನು ಪ್ರಕಟಿಸಲು ಪತ್ರಿಕೆಯಿದೆ. ಅದರ ತುಂಬಾ ರಾಜಮನೆತನ ಮತ್ತು ತೀರಾ ಪ್ರಸಿದ್ಧರ ಬಗ್ಗೆ ಸುದ್ದಿಗಳಿರುತ್ತವೆ. ಅದನ್ನು ಕೊಂಡು ಓದಲು ದೊಡ್ಡ ಸಂಖ್ಯೆಯಲ್ಲಿ ಜನರಿದ್ದಾರೆ ಎನ್ನುವುದನ್ನು ವಿಶೇಷವಾಗಿ ಹೇಳುವ ಅವಶ್ಯಕತೆಯಿಲ್ಲ ಎಂದುಕೊಳ್ಳುವೆ.

dia de rayes in spain

ಯುರೋಪಿಯನ್ನರು ಎಂದ ತಕ್ಷಣ ಅವರೇನೂ ಆಕಾಶದಿಂದ ಇಳಿದು ಬಂದವರಲ್ಲ ಎನ್ನುವುದನ್ನು ನಮ್ಮ ಜನತೆ ಅರಿತು ಕೊಳ್ಳಲಿ ಎನ್ನುವ ಉದ್ದೇಶದಿಂದ ಮಾತ್ರ ಮೇಲಿನ ಸಾಲುಗಳನ್ನು ಬರೆದಿದ್ದೇನೆ. ಜನವರಿ ಏಳನೆಯ ತಾರೀಕು ಸ್ಪೇನ್‌ನಲ್ಲಿ ದಿಯಾ ದೆ ರೇಯೆಸ್ ಎಂದು ಆಚರಿಸುತ್ತಾರೆ. ದೇಶದ ಎಲ್ಲಾ ಹಳ್ಳಿ ಮತ್ತು ನಗರಗಳಲ್ಲಿ ರಾಜನ ಪ್ರತಿಮೆ ಅಥವಾ ಕೆಲವೊಮ್ಮೆ ಡಮ್ಮಿ ರಾಜ ಕುಳಿತು ಮೆರವಣಿಗೆಯನ್ನು ಮಾಡುತ್ತಾರೆ. ನಾನು ಬಾರ್ಸಿಲೋನಾಗೆ ಬಂದ ಹೊಸತರಲ್ಲಿ ನಿಜವಾದ ರಾಜ ಬರುತ್ತಾನೆ ಎಂದು ರಸ್ತೆಯ ಮೆರವಣಿಗೆಯ ಸಾಲಿನಲ್ಲಿ ನಿಂತದ್ದು ಉಂಟು. ಆ ನಂತರ ಪ್ರತಿಮೆಯನ್ನು ಇಟ್ಟು ಬಂದ ಆ ಸವಾರಿಯನ್ನು ನೋಡಿ ದಂಗಾಗಿ ಹೋದೆ. ಮನಸ್ಸಿನಲ್ಲಿ ಅಯ್ಯಗಳಿರಾ ಕೇವಲ ರಾಜನ ಪ್ರತಿಮೆ ಹೊತ್ತು ಬರುವ ಸವಾರಿಯನ್ನು ನೋಡಲು ಈ ಮಟ್ಟದ ನೂಕುನುಗ್ಗಲು, ಇನ್ನು ನಿಜವಾದ ರಾಜ ಬಂದರೆ? ಹೇಗೆ ಎಂದುಕೊಂಡಿದ್ದೆ.

ಹಳೆ ತಲೆಮಾರಿನ ಜನರಿಗೆ ಇಂದಿಗೂ ರಾಜ ಮನೆತನದಲ್ಲಿ ಆಗುವ ಸಣ್ಣ ಪುಟ್ಟ ಬದಲಾವಣೆಗಳು ಬೇಕು. ತಮ್ಮ ಮನೆಯಲ್ಲಿ ಆದ ರೀತಿಯಲ್ಲಿ ಕುಳಿತು ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಕೇವಲ ಅವರ ಮನೆಯ ಚಾವಡಿಗಳಲ್ಲಿ ಇಂಥ ಮಾತುಕತೆಯಾಗುತ್ತವೆ ಎಂದುಕೊಂಡರೆ ಅದು ತಪ್ಪು. ಮುಖ್ಯ ಟೀವಿ ವಾಹಿನಿಯಲ್ಲಿ ಕುಳಿತು 'ರಾಣಿ ಹಾಕಿದ ಬಟ್ಟೆಯ ಬೆಲೆ ಎಷ್ಟು? ಆಕೆಯೇಕೆ ಇಂದು ಇಷ್ಟು ಸಸ್ತಾ ಬಟ್ಟೆಯನ್ನು ಹಾಕಿದ್ದಳು? ಎನ್ನುವ ಮಾತುಕತೆಯನ್ನು ಆಡುತ್ತಾರೆ. ಅದಕ್ಕೆ ಲಕ್ಷಾಂತರ ವೀಕ್ಷಕರ ದಂಡು ಬೇರೆ.

Monarchy

ತೀರಾ ಇತ್ತೀಚಿನ ತಲೆಮಾರಿನ ಹುಡುಗರು ಬದಲಾಗಿದ್ದಾರೆ. ಎಲ್ಲರೂ ಎಂದಲ್ಲ, ಆದರೆ ಒಂದು ದೊಡ್ಡ ವರ್ಗ 'ಮೊನಾರ್ಕಿಯ ಈಸ್ ಪೋರ್ಕರಿಯ' ಎನ್ನುವ ಕೂಗನ್ನು ಹುಟ್ಟುಹಾಕಿದೆ. ರಾಜ ವಂಶಸ್ಥ ಆಡಳಿತ ಕಸ ಎನ್ನುವ ಅರ್ಥವನ್ನು ಇದು ನೀಡುತ್ತದೆ. ವ್ಯಕ್ತಿಯ ಗುಣಾವಗುಣಗಳ ಆಧಾರದ ಮೇಲೆ ಅವನಿಗೆ ಹುದ್ದೆ ಸಿಗಬೇಕೇ ಹೊರತು ಯಾವ ಮನೆಯಲ್ಲಿ ಹುಟ್ಟಿದ ಎನ್ನುವುದರ ಆಧಾರದ ಮೇಲಲ್ಲ. ಆದರೇನು, ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ಅತಿ ದೊಡ್ಡ ಭಾರತ ದೇಶದಲ್ಲೇ ವಂಶಗಳ ಅಧಿಕಾರ ಇಳಿಯುವ ಸೂಚನೆಗಳು ಇಲ್ಲವಾದಾಗ, ಪುಟಾಣಿ ಸ್ಪೇನ್‌ನಲ್ಲಿ ರಾಜಮನೆತನದ ಶಕ್ತಿ ಇಂದು ನಾಳೆಗೆ ಕ್ಷೀಣಿಸುವ ಲಕ್ಷಣಗಳು ಕಾಣುತ್ತಿಲ್ಲ. ರಾಜ ಮನೆತನದವರಿಗೆ ಸರಕಾರಿ ಖಜಾನೆಯಿಂದ ನೀಡುವ ಹಣದ ಬಗ್ಗೆಯೂ ಆಗೀಗ ಜನರು ತಕರಾರು ಎತ್ತಲು ಶುರು ಮಾಡಿದ್ದಾರೆ. ಸ್ಪೇನ್ ಒಂದೇ ಅಲ್ಲ ಯುರೋಪಿನ ಹಲವು ದೇಶಗಳಲ್ಲಿ ಇಂದಿಗೂ ಸದ್ದಿಲ್ಲದೇ ರಾಜ ಅಥವಾ ರಾಣಿಯರ ಆಡಳಿತ ಸಾಗುತ್ತಿದೆ. ಭಾರತದಲ್ಲಿ ಇದ್ದ ರಾಜಮನೆತನದ ವ್ಯವಸ್ಥೆಯನ್ನು ಬದಲಿಸಿದ ಬ್ರಿಟಿಷರು ಮಾತ್ರ ಅದೇ ವ್ಯವಸ್ಥೆಗೆ ಜೋತು ಬಿದ್ದಿರುವುದು ಅವರ ದ್ವಂದ್ವ ನೀತಿಗೆ ದೊಡ್ಡ ಉದಾಹರಣೆ.

ಬಾರ್ಸಿಲೋನಾದಲ್ಲಿ ಇದ್ದಷ್ಟು ವರ್ಷವೂ ಪ್ರತಿ ನಿತ್ಯ ಬೆಳಗ್ಗೆ ಐದೂವರೆಗೆ ಎದ್ದು ಆರು ಗಂಟೆಗೆ ಜಾಗಿಂಗ್ ಹೊರಟರೆ ಏಳಕ್ಕೆ ವಾಪಸ್ ಬರುತ್ತಿದ್ದೆ. ಬೇಸಗೆಯಲ್ಲಿ ಸರಿ, ಚಳಿಗಾಲದಲ್ಲಿ ಎನ್ನುವ ಪ್ರಶ್ನೆ ನಿಮ್ಮಲ್ಲಿ ಹಲವರಿಗೆ ಉದ್ಭವಾಗಿರಬಹುದು. 2015ರ ಒಂದು ದಿನ -1 ಡಿಗ್ರೀ ತಾಪಮಾನವಿತ್ತು. ನಿತ್ಯದಂತೆ ಎದ್ದು, ಓಡಿ, ನಂತರ ಇಲ್ಲಿನ ಸರಕಾರಿ ಕಛೇರಿಗೆ ಭೇಟಿ ಕೊಟ್ಟು, ಕೆಲಸ ಮುಗಿದ ನಂತರ ಕಾಫಿ ಬಾರ್ ಹೊಕ್ಕೆ. ಹೋಸೆ ಅಲ್ಲಿ ಕೆಲಸ ಮಾಡುವನ ಹೆಸರು. ಅವನೊಂದಿಗೆ ಮಾತಿಗಿಳಿದೆ. ಬೇಸಗೆಯಿರಲಿ, ಚಳಿಗಾಲವಾಗಲಿ ಆತ ನಿತ್ಯ ಬೆಳಗ್ಗೆ ನಾಲ್ಕು ಗಂಟೆಗೆ ಕೆಲಸಕ್ಕೆ ಹಾಜರ್. ಕಳೆದ ಇಪ್ಪತ್ನಾಲ್ಕು ವರ್ಷದಿಂದ ಇದೇ ಅವನ ದಿನಚರಿಯಂತೆ! ನನ್ನ ಖುಷಿಗೆ ನಾನು ಎದ್ದು ಓಡುವುದಕ್ಕೂ, ಕೆಲಸ ಮಾಡಲೇಬೇಕೆಂಬ ಕಟ್ಟುಪಾಡಿಗಾಗಿ ಏಳುವುದಕ್ಕೂ ತುಂಬ ವ್ಯತ್ಯಾಸವಿದೆ. ಚಳಿಯಿರಲಿ ಬಿಸಿಲಿರಲಿ ನಾನು ಓಡುವುದು ತಪ್ಪಿಸಿಲ್ಲ. ಆ ಬಗ್ಗೆ ನನಗಿದ್ದ ಹೆಮ್ಮೆ ಮತ್ತು ಅಹಂಕಾರಕ್ಕೆ ತನ್ನ ನಗು ಮಾತಿನಿಂದ ಪೆಟ್ಟು ನೀಡಿದ್ದ ಹೋಸೆ. ಆತನಿಗೆ ಅದರ ಅರಿವು ಕೂಡ ಇರಲಿಲ್ಲ. ಈ ವಿಷಯವನ್ನು ಉಲ್ಲೇಖ ಮಾಡಲು ಕೂಡ ಕಾರಣವಿದೆ.

Barcelona (1)

ಸಾಮಾನ್ಯವಾಗಿ ಸ್ಪೇನ್ ಜನರು ಎಂದರೆ 'ಸೇರ್ವೆಸ' (ಬಿಯರ್) ಹಿಡಿದು ಕುಳಿತು ಬಿಡುತ್ತಾರೆ. ಇತರ ಯುರೋಪಿಯನ್ನರಿಗಿಂತ ಸ್ವಲ್ಪ ಮೈಗಳ್ಳರು ಎನ್ನುವ ಮಾತು ಪ್ರಸಿದ್ಧವಾಗಿದೆ. ನಾವೆಲ್ಲರೂ ಒಂದು ಪಾಪ್ಯುಲರ್ ವ್ಯೂ ಸೃಷ್ಟಿಯಾದರೆ ಸಾಕು ಅದಕ್ಕೆ ಜೋತು ಬೀಳುತ್ತೇವೆ. ಆದರೆ ಬದುಕು ಎಂದಿಗೂ ಆ ಚೌಕಟ್ಟಿನಲ್ಲಿ ಸಾಗುವುದಿಲ್ಲ. ಸಮಾಜವೆಂದ ಮೇಲೆ ಎಲ್ಲಾ ರೀತಿಯ ಜನರೂ ಇರುತ್ತಾರೆ. ಸಾಮಾನ್ಯವಾಗಿ ಸ್ಪ್ಯಾನಿಶರು ಎಂದಷ್ಟೇ ಹೊರ ಜಗತ್ತನ್ನು ಸುತ್ತಲು, ನೋಡಲು ಇಷ್ಟ ಪಡುವವರು, ಆದರೆ ಸ್ಪೇನ್ ಬಿಟ್ಟು ಪಕ್ಕದ ಫ್ರಾನ್ಸ್ ಅಥವಾ ಜರ್ಮನಿಗೆ ಕೂಡ ಪ್ರಯಾಣ ಮಾಡದ ಜನರೂ ಇದ್ದಾರೆ. ನಾವು ಯಾವುದನ್ನೇ ಆಗಲಿ ಇಷ್ಟೇ ಎಂದು ಗೆರೆ ಎಳೆಯುವಂತಿಲ್ಲ. ಏಕೆಂದರೆ ಗೆರೆಯ ಹಿಂದೆ ಮುಂದೆ ಗೆರೆಗಿಂತ ವಿಶಾಲವಾದ ಬದುಕಿರುತ್ತದೆ. ನಾವು ಒಂದು ದೇಶವನ್ನು ಕೇವಲ ಒಂದೆರಡು ವಾರ ನೋಡಿ ಬಂದು ನಮ್ಮ ಅನಿಸಿಕೆಯನ್ನು ಎಲ್ಲರದ್ದೂ ಎನ್ನುವಂತೆ ಬಿಂಬಿಸಿ ಬರೆದು ಬಿಡುತ್ತೇವೆ. ಅದು ತಪ್ಪು ಎನ್ನುವುದನ್ನು ಕೂಡ ಹೇಳುವುದು ಇನ್ನೊಂದು ಕಾರಣ.

ಇಪ್ಪತ್ತೈದು ವರ್ಷದ ಹಿಂದೆ ಬೆರಗುಗಣ್ಣಿನಿಂದ ಇದೇನು ಈ ಸಮಾಜ ಹೀಗಿದೆ? ಎಂದು ನಾನು ಯಾವ ಸಮಾಜವನ್ನು ನೋಡಿದ್ದೆನೋ, ಹೆಚ್ಚು ಕಡಿಮೆ ಅದೇ ಸಮಾಜವನ್ನು ನಾನು ಈಗ ಬೆಂಗಳೂರಿನಲ್ಲಿ, ಮೈಸೂರಿನಲ್ಲಿ ಒಟ್ಟಾರೆ ಭಾರತದಲ್ಲಿ ಕಾಣುತ್ತಿದ್ದೇನೆ. ಯಾವುದನ್ನು ನಾವು ಸಾಮಾಜಿಕವಾಗಿ ಮಾಡುವಾಗ ಗುರು ಹಿರಿಯರು, ಸಮಾಜ, ಸರೀಕರು ಎಂದೆಲ್ಲಾ ಹೆದರಿ ಮಾಡುವ ಮುನ್ನ ಚಿಂತಿಸುತ್ತಿದ್ದೆವೋ, ಅದು ಈಗ ಇಲ್ಲವಾಗಿದೆ. ಯಾರೂ ಯಾರಿಗೂ ಕೇರ್ ಮಾಡದ, ಅನ್ನಿಸಿದ್ದನ್ನು ಮಾಡುವ ಸಮಾಜ ಜಗತ್ತಿನಾದ್ಯಂತಶುರುವಾಗಿದೆ. ಬೇಡವಾದದ್ದು ಹಬ್ಬುವಷ್ಟು ವೇಗವಾಗಿ ಒಳಿತು ಪಸರಿಸದೆ ಇರುವುದು ಕೂಡ ಜಾಗತಿಕ.

ಹಿಂದೆ ಅಂದರೆ ನೂರಿನ್ನೂರು ವರ್ಷದ ಹಿಂದಿನ ನಮ್ಮ ಪೂರ್ವಜರ ಬದುಕು ಕೂಡ ಹೆಚ್ಚುಕಡಿಮೆ ಮೌಲ್ಯಗಳ ಹಿಂದೆ ಮುಂದೆ ಸಾಗುತ್ತಿತ್ತು. ಬದಲಾದ ಸನ್ನಿವೇಶದಲ್ಲಿ ಯಾವುದೋವೇಗ ಪಡೆದುಕೊಳ್ಳುತ್ತದೆ. ಆದರೆ ಸುತ್ತಮುತ್ತ ಜನರ ಬದುಕು ಸಾಗುತ್ತಿದೆ. ಸರಿ ತಪ್ಪುಗಳಲೆಕ್ಕಾಚಾರ ಹಾಕಲು ಕೂಡ ವೇಳೆಯಿಲ್ಲ ಎನ್ನುವುದು ಈ ವೇಗದ ಬದುಕಿನ ಮಹಾನ್ ವಿಪರ್ಯಾಸ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?