ಭಾಷೆ ತರುವ ಮೌನ ಮಧುರಾತಿ ಮಧುರ
ಪರ ಊರು ಮತ್ತು ಪರದೇಶಗಳಲ್ಲಿ ತನ್ನ ಮಾತೃಭಾಷೆ ಬರುವವರು ಯಾರೂ ಇಲ್ಲ ಎನ್ನುವ ಭ್ರಮೆಯಲ್ಲಿ ಅಸಭ್ಯವಾಗಿ ನಡೆದುಕೊಳ್ಳುವುದು ಆಭಾಸಕ್ಕೆ ಎಡೆ ಮಾಡಿಕೊಡುತ್ತದೆ. ಭಾಷೆಯಲ್ಲಿನ ಅರ್ಥ ಅಡಗಿರುವುದು ಅದರಲ್ಲಿನ ಪದಗಳಲ್ಲಿ ಅಲ್ಲ, ಬದಲಿಗೆ ಅದು ಹೊರಡಿಸುವ ತರಂಗಗಳಲ್ಲಿ... ಅವು ಧ್ವನಿಸುವ decible ಮಟ್ಟದಲ್ಲಿ ಎನ್ನುವ ಸತ್ಯವನ್ನು ಅರ್ಥ ಮಾಡಿಸುವ ಕನ್ನಡಿಯೇ ಪ್ರವಾಸದಲ್ಲಿ ಕಾಣುವ ಪ್ರಪಂಚ.
- ಅಂಜಲಿ ರಾಮಣ್ಣ
ಮೊದಲ ಬಾರಿಗೆ ನೇಪಾಳಕ್ಕೆ ಹೋದಾಗ ಒಂದು ಅಂಗಡಿಯಲ್ಲಿ ಹರಳುಗಳನ್ನು ಕೊಳ್ಳಬೇಕು ಎಂದುಕೊಂಡು ಅಂಗಡಿಯ ಹೆಸರನ್ನು ನೋಡುತ್ತಿದ್ದಾಗ ಪಕ್ಕದಲ್ಲಿದ್ದ ಕನ್ನಡಿಗರು ‘ಅಯ್ಯೋ ಇಲ್ಲೆಲ್ಲಾ ಬ್ಲೇಡು ಅನ್ನಿಸುತ್ತೆ’ ಎಂದರು. ಕೂಡಲೇ ಅಂಗಡಿಯ ಒಳಗಡೆ ಗಲ್ಲಾಪೆಟ್ಟಿಗೆಯಲ್ಲಿ ಕುಳಿತಿದ್ದವರು ‘ಬ್ಲೇಡು ಇಲ್ಲ ಕತ್ತಿ ಮಚ್ಚೂನು ಇಲ್ಲ ಒಳಕ್ಕೆ ಬನ್ನಿ’ ಎಂದು ಕನ್ನಡದಲ್ಲಿಯೇ ಹೇಳಿದಾಗ ಅಲ್ಲಿದ್ದವರೆಲ್ಲಾ ಮುಜುಗರ ಅನುಭವಿಸಿದ್ದಾಯ್ತು. ಈಗಾದರೋ ಜಗತ್ತಿನ ಯಾವುದೇ ಮೂಲೆಗೆ ಹೋದರೂ ಒಂದು ಭಾಷೆಯೊಳಗೆ ಮತ್ತೊಂದು ಭಾಷೆಯ ಒಂದಾದರೂ ಪದವು ಹೊಕ್ಕಿಹೋಗಿರುವುದರಿಂದ ಬಹುಪಾಲು ಎಲ್ಲರಿಗೂ ಎಲ್ಲಾ ಭಾಷೆಯ ಭಾವಾರ್ಥವಾದರೂ ತಿಳಿಯುತ್ತದೆ.
ಅದಕ್ಕೇ ಪ್ರವಾಸಿ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಇದು ತನ್ನ ಊರಲ್ಲ, ಇಲ್ಲಿ ತನ್ನ ಮಾತೃಭಾಷೆ ಬರುವವರು ಯಾರೂ ಇಲ್ಲ ಎನ್ನುವ ಭ್ರಮೆಯಲ್ಲಿ ಅಸಭ್ಯವಾಗಿ ನಡೆದುಕೊಳ್ಳುವುದು ಆಭಾಸಕ್ಕೆ ಎಡೆ ಮಾಡಿಕೊಡುತ್ತದೆ. ಭಾಷೆಯಲ್ಲಿನ ಅರ್ಥ ಅಡಗಿರುವುದು ಅದರಲ್ಲಿನ ಪದಗಳಲ್ಲಿ ಅಲ್ಲ, ಬದಲಿಗೆ ಅದು ಹೊರಡಿಸುವ ತರಂಗಗಳಲ್ಲಿ... ಅವು ಧ್ವನಿಸುವ decible ಮಟ್ಟದಲ್ಲಿ ಎನ್ನುವ ಸತ್ಯವನ್ನು ಅರ್ಥ ಮಾಡಿಸುವ ಕನ್ನಡಿಯೇ ಪ್ರವಾಸದಲ್ಲಿ ಕಾಣುವ ಪ್ರಪಂಚ.
ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಸೇಂಟ್ ಮೊರಿಟ್ಜ್ ಎನ್ನುವ ನಗರವಿದೆ. ಅಲ್ಲಿ ಪೋರ್ಚುಗೀಸ್ ಖಾದ್ಯಗಳಿಗೆ ಹೆಸರಾಗಿರುವ ರೆಸ್ಟೋರೆಂಟ್ ಒಂದಿದೆ. ಮೆನು ಕಾರ್ಡಿನಲ್ಲಿ ಹತ್ತಿಯಂಥ ಬಿಳಿ ಮೋಡದ ನಡುವೆ ಹಾಲುಬಣ್ಣದ ಮುತ್ತುಗಳಂತೆ ಇರುವ ಒಂದು ಫೊಟೋ ಇತ್ತು. ಅದರಲ್ಲಿ ಯಾವ ವಿವರಣೆಯೂ ಇಂಗ್ಲಿಷ್‌ನಲ್ಲಿ ಇರದ ಕಾರಣ ಆ ಚಿತ್ರದಲ್ಲಿ ಇರುವುದು ಯಾವ ಖಾದ್ಯ ಎಂದು ತಿಳಿದುಕೊಳ್ಳಬೇಕು ಎನ್ನುವ ಕುತೂಹಲದಿಂದ ಅಲ್ಲಿನ ಸಿಬ್ಬಂದಿಗೆ ಪ್ರಶ್ನೆ ಕೇಳಿದಾಗ ಆತ ಸೀದಾ ಕರೆದುಕೊಂಡು ಹೋಗಿ ನಿಲ್ಲಿಸಿದ್ದು ಆ ದಿನದ ಮುಖ್ಯ ಬಾಣಸಿಗ Joaquim ಎದುರು. ಆತ ಆ ಫೊಟೋದಲ್ಲಿ ಇದ್ದ ತಿಂಡಿಯ ಹೆಸರು Claudine ಕೇಕ್ ಎಂದು ತಿಳಿಸಿದರು. ಅದರ ಹೆಸರನ್ನು ಗಂಟಲ ನಾಳದ ಮೇಲಿನ ಮುಚ್ಚಳದ (Epiglottis) ಸಂಧಿಯಿಂದ ಉಚ್ಚರಿಸಬೇಕಿತ್ತು. ಮಾಡುತ್ತಿದ್ದ ಕೆಲಸವನ್ನೆಲ್ಲಾ ಸ್ಥಗಿತಗೊಳಿಸಿ ಆ ಪದವನ್ನು ನನ್ನ ಬಾಯಲ್ಲಿ ಹೊರಳಿಸಲು ಆತ ಬರೋಬ್ಬರಿ 35 ನಿಮಿಷಗಳಷ್ಟು ಪ್ರಯತ್ನಪಟ್ಟು ಮಾತಿನ ಕೊನೆಯಲ್ಲಿ ಅದರ ಸರಿಯಾದ ಉಚ್ಚಾರಣೆ ನನ್ನಿಂದ ಹೊರಬಂದ ಕೂಡಲೇ ಆತ ಆ ಕೇಕ್ ತಿಂದಷ್ಟೇ ಖುಷಿ ಪಟ್ಟಿದ್ದರು. ಅಲ್ಲಿ ಇದ್ದದ್ದು ತಮ್ಮ ಭಾಷೆಯ ಬಗೆಗಿನ ಅಭಿಮಾನ ಮಾತ್ರ ಎಂದುಕೊಂಡರೆ ವಾಸ್ತವಕ್ಕಾಗುವ ಅವಮಾನವೇ ಹೌದು. ಅಲ್ಲಿದ್ದದ್ದು ತಮ್ಮನ್ನು ತಾವು ಪರಿಚಯಿಸಿಕೊಡಲು ಇರಬೇಕಿದ್ದ ಉತ್ಸಾಹ ಮಾತ್ರ. ಭಾಷೆ ಬಗೆಗಿನ ಅಭಿಮಾನಕ್ಕೂ ನಮ್ಮ ಕ್ಯಾರೆಕ್ಟರ್‌ಗೂ ಸಂಬಂಧವೇ ಇಲ್ಲ ಎನ್ನುವಂತಿಲ್ಲ.

ಮತ್ತೊಮ್ಮೆ ಸ್ವಿಟ್ಜರ್ಲ್ಯಾಂಡಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಇಡೀ ಬೋಗಿಯಲ್ಲಿ ನಡುವಯಸ್ಸಿನ ಒಬ್ಬಾಕೆ ಮತ್ತು ನಾನು ಇಬ್ಬರೇ ಇದ್ದೆವು. ಆಕೆಯ ಹತ್ತಿರ cello ಎನ್ನುವ ಸಂಗೀತ ವಾದನವಿತ್ತು. ರೈಲು ಹೊರಟ ಐದು ನಿಮಿಷಗಳಲ್ಲಿ ಮಾತಿಗಳಿದಳು. ಅವಳ ಭಾಷೆಯ ಒಂದೇ ಒಂದು ಅಕ್ಷರವೂ ನನಗೆ ತಿಳಿಯದು. ಅವಳಿಗೆ ಇಂಗ್ಲಿಷ್ ಬಾರದು. ಆದರೂ ನಗು ಮುಖದಿಂದ ಅದೇನೇನೋ ಶ್ರುತಿಬದ್ಧವಾಗಿ ಹೇಳುತ್ತಿದ್ದಳು. ನಡುವಿನ ಸಂವಹನಕ್ಕೆ ಏಕಭಾಷೆ ಇಲ್ಲದ್ದನ್ನು ಮನಗಂಡ ನಾನು ಕನ್ನಡದಲ್ಲಿಯೇ ಪ್ರತಿಕ್ರಿಯಿಸುತ್ತಿದ್ದೆ. ಸುಮಾರು 40 ನಿಮಿಷಗಳ ಕಾಲ ಅಲ್ಲಿ ನಡುವೆ ಮಾತನಾಡಿದ್ದು ನಾವಲ್ಲ, ನಮ್ಮ ನಮ್ಮ ಭಾವಗಳು. ಪರಸ್ಪರ ಅರ್ಥವಾಗದ ಭಾಷೆಗಳ ಮಾತುಗಳು ಅಂತರಂಗದ ನಿರ್ಮಲತೆಯಿಂದಾಗಿ ನಯವಾಗಿಯೂ ಸಭ್ಯವಾಗಿಯೂ ಶ್ರವ್ಯವಾಗುತ್ತಿತ್ತು. ಮನಸುಗಳ ಕಿರುಬೆರಳುಗಳನ್ನು ಬೆಸೆಯುವ ಭಾಷೆಯದ್ದು ಎಲ್ಲಿಂದ ಎಲ್ಲಿಗೆ ಪ್ರಯಾಣ.
ಜಪಾನಿನಲ್ಲಿ ಒಂದು ರೈಲು ನಿಲ್ದಾಣದಲ್ಲಿ ತಮ್ಮ ರೈಲು ಕಾಯುತ್ತಾ ಕುಳಿತಿದ್ದ ಒಬ್ಬರನ್ನು ನಾನು ಹೋಗಬೇಕಿದ್ದ ಸ್ಥಳಕ್ಕೆ ರೈಲಿನ ವಿವರ ಕೇಳಿದೆ. ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಸನ್ನೆಯಲ್ಲಿ ತಮ್ಮನ್ನು ಅನುಸರಿಸಲು ಹೇಳಿ ಇನ್ನೂ ಒಂದು ರೈಲಿನಲ್ಲಿ ಜತೆಗೇ ಬಂದು ನಾನು ಹೋಗಬೇಕಿದ್ದ ಜಾಗ ತಲುಪಿಸಿ ಅವರು ಹೋಗಬೇಕಾದ ದಾರಿ ಹಿಡಿದರು. ಹೊರಟಾಗಿನಿಂದ ಬೇರಾಗುವವರೆಗೂ ನಮ್ಮಿಬ್ಬರ ನಡುವೆ ಒಂದೇ ಒಂದು ಮಾತಿಲ್ಲ. ಅಂದಮೇಲೆ ಅಲ್ಲಿ ಇದ್ದದ್ದು ಭಾಷಾ ತೊಡಕಲ್ಲ; ಸಹಾಯ ಮಾಡಬೇಕು ಎನ್ನುವ ಅವರ ಉದ್ದೇಶ ಮತ್ತು ಅದಕ್ಕಾಗಿ ನನ್ನ ಕೃತಜ್ಞತಾ ಭಾವ ಅಷ್ಟೇ. ಮಾತು ಎಂದರೆ ಭಾಷೆಯ ಮೂಲಕ ಪದದ ಅರ್ಥವನ್ನು ಹೊರಹಾಕುವುದಲ್ಲ. ಮಾತೆಂದರೆ ಹೃದ್ಯಾರ್ಥವನ್ನು ಕಟ್ಟಿಕೊಡುವುದು. ಭಾಷೆ ಕೊಡುವ ಮೌನ ಮಧುರ.
ಗ್ರೀಸ್ ದೇಶದ Akrotiri Excavasion site ನ ಒಳ ಹೋಗುವಾಗ 30-32 ವರ್ಷದ ಸಭ್ಯರಂತೆ ಕಾಣುತ್ತಿದ್ದ ನಾಲ್ಕು ಕನ್ನಡಿಗ ಗಂಡಸರ ಮಾತು ಅನಾಯಾಸವಾಗಿ ಕಿವಿಗೆ ಬಿತ್ತು. ಅವರುಗಳು ಪ್ರವಾಸ ಮಾರ್ಗದರ್ಶಿ ವಿಕ್ಕಿ ಧರಿಸಿದ್ದ ಬಟ್ಟೆ ಮತ್ತು ಅವಳ ಅಂಗಾಂಗಗಳ ಬಗ್ಗೆ ಅತಿ ಎಂದರೆ ಅತೀ ಎನ್ನುವ ಅಸಭ್ಯ ಭಾಷೆಯಲ್ಲಿ ಜೋರಾಗಿ ಮಾತನಾಡುತ್ತಿದ್ದರು. ಬಹಳ ತಳಮಳಗೊಂಡೆ. ನಾಲ್ಕು ಜನರ ಮಾತಿನಲ್ಲಿ ನಾಲ್ಕು ಕುಟುಂಬಗಳ ಚಿತ್ರಣ ಕಣ್ಮುಂದೆ ಬರುತ್ತಿತ್ತು. ನನ್ನ ದೇಶದ ಬಗ್ಗೆ ಮನಮಿಡಿಯುತ್ತಿತ್ತು. ಅಪರಿಚಿತ ಸ್ಥಳಗಳಲ್ಲಿ ಪ್ರವಾಸ ಮಾಡುವುದು ಎಂದರೆ ಉಪಗ್ರಹದಲ್ಲಿ ಕುಳಿತು ಅನ್ಯಗ್ರಹಕ್ಕೆ ಹೋಗಿ ಇಳಿದಂತೆ ಅಲ್ಲ, ನಾಗರೀಕತೆಯ ಎಲ್ಲೆಯನ್ನು ವಿಸ್ತರಿಸಿಕೊಳ್ಳುವುದು ಎಂದು. ಭಾಷೆ ಎನ್ನುವುದು ನಿಜಾರ್ಥದಲ್ಲಿ ನಮ್ಮ ಆಲೋಚನೆಗಳ ಮೇಲೆ ಹೊದಿಸಿರುವ ಬಟ್ಟೆಯಾಗಿದೆ. ಪದಗಳು ವ್ಯಕ್ತಿತ್ವವನ್ನು ಹೊರಹಾಕುತ್ತವೆ ಭಾಷೆಯನ್ನಲ್ಲ.

ಓಸಾಕ ನಗರದಲ್ಲಿ Masako Yano ಅವರು ನಡೆಸಿಕೊಡುವ Tea Ceremony ಅದ್ಭುತವಾಗಿರುತ್ತದೆ. ಇಟಲಿ, ಉತ್ತರ ಅಮೆರಿಕ ಮತ್ತು ಉತ್ತರ ಭಾರತದಿಂದ ಬಂದಿದ್ದ ಜೋಡಿಗಳ ಜತೆಗೆ ನಾನು ಆ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇದ್ದ ತಂಡ. ಉತ್ತರಭಾರತದಿಂದ ಬಂದಿದ್ದ ಆಗತಾನೇ ಮದುವೆಯಾದಂತೆ ತೋರುತ್ತಿದ್ದ ಜೋಡಿಗೆ ಚಹಾ ಸಮಾರಂಭದ ಬಗ್ಗೆ ಏನೂ ತಿಳಿದಿರಲಿಲ್ಲ ಮತ್ತು ಆಸಕ್ತಿ ಇರಲಿಲ್ಲ. ತಮ್ಮ ಅಸಹನೆಯನ್ನು ಮುಖದಲ್ಲಿಯೇ ತೋರಿಸುತ್ತಿದ್ದರು. ಯಾನೋ ಅವರು ಹಸನ್ಮುಖದಿಂದಲೇ ಸಂಪೂರ್ಣ ವಿಧಾನ ತಿಳಿಸಿಕೊಟ್ಟರು. ಕೊನೆಯಲ್ಲಿ ಮಾಚಾ ಚಹಾ ಕುಡಿಯಲು ಕೊಟ್ಟಾಗ ಆ ಯುವ ದಂಪತಿಗಳು ಹಿಂದಿಯಲ್ಲಿಯೇ ‘ಇದು ತುಂಬಾ ಕೆಟ್ಟದಾಗಿದೆ. ಮನುಷ್ಯರು ಮುಟ್ಟುವ ಹಾಗಿಲ್ಲ’ ಎಂದು ಹೇಳಿದಾಗ ಭಾಷೆ ಬರದಿದ್ದರೂ ಯಾನೋ ಅವರಿಗೆ ಅರ್ಥವಾಗಿತ್ತು. ಅವರಿಗೆ ಬೇಸರವೆನಿಸಿದ್ದು ಎದ್ದು ಕಾಣುತ್ತಿತ್ತು. ಭಾಷೆಯನ್ನು ಬಳಸುವುದು ಎಂದರೆ ನಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವುದು ಎಂದೇ ಆಗಿದೆ. ಆದರೆ ಅಲ್ಲಿದ್ದ ಆ ಗಂಡ-ಹೆಂಡತಿ ಬೇರೆಯವರಿಗೆ ಅರ್ಥವಾಗಲಾರದು ಎಂದುಕೊಂಡು ತಮ್ಮ ಭಾಷೆಯಲ್ಲಿ ಅನಾಗರೀಕತೆಯನ್ನು ಪರಿಚಯಿಸಿಕೊಟ್ಟಿದ್ದರು. ಅಪರಿಚಿತರೊಂದಿಗಿನ ಒಡನಾಟ ನಮಗೆ ನಾವೇ ಪರಿಚಯವಾಗುವ ಅವಕಾಶ ಎನ್ನುವುದನ್ನು ಮರೆತಿದ್ದರು.
ಸ್ಕಾಟ್ಲೆಂಡ್ ಜನರು ಮಾತನಾಡುವ ಇಂಗ್ಲಿಷ್ ಭಾಷೆಯ ಶೈಲಿ ಬಡಪೆಟ್ಟಿಗೆ ಅರ್ಥವಾಗದು. ಅದರಲ್ಲೂ ಮಾರ್ಗದರ್ಶಕ ಟಿಮ್‌ನದ್ದು ಅಸ್ಖಲಿತ ಮಾತು. ಹೊಟ್ಟೆಯೊಳಗೆ ಹದವಾಗಿ ಬೋರಲಾಗಿದ್ದ ಬೆಳಗಿನ ತಿಂಡಿಯನ್ನು ಬಸ್ಸಿನಲ್ಲಿದ್ದ ಬೆಚ್ಚನೆಯ ಹವೆ ಮೋಹಿಸಲು ಶುರುವಿಟ್ಟಿದ್ದೇ ತಡ ರೆಪ್ಪೆಗಳು ಪೈಪೋಟಿಗೆ ಬಿದ್ದಂತೆ ಒಂದನ್ನು ಒಂದು ಮುತ್ತಿಡಲು ಶುರುವಿಟ್ಟಿದ್ದವು. ಮಧ್ಯಾಹ್ನದ ಊಟದ ಹೊತ್ತಿನವರೆಗೂ ಜೂಗರಿಸುತ್ತಿದ್ದೆ. ಆತ ಹೇಳಿದ್ದು ನನ್ನ ಕಿವಿಗೆ ಬಿದ್ದಿಲ್ಲ ಎನ್ನುವುದು ಆತನಿಗೆ ತಿಳಿದಿತ್ತು. ಉಳಿದುಕೊಂಡಿದ್ದ ಹೊಟೇಲಿನ ಎದುರು ಇಳಿಸಿ ಹೋಗುವಾಗ ಆತ ಹತ್ತಿರ ಬಂದು ‘ಕಾರಣ ಏನೇ ಇರಬಹುದು ನೀನು ನನ್ನೂರನ್ನು ನೋಡಲಿಲ್ಲ ಎನ್ನುವ ಕೊರಗಿದೆ ನನಗೆ. ಹಾಗಾಗಿ ನಾಳೆ ನಿನಗಾಗಿ ಮತ್ತೊಮ್ಮೆ ಎಲ್ಲವನ್ನೂ ತೋರಿಸುತ್ತೇನೆ’ ಎಂದಿದ್ದು ಮಾತ್ರವಲ್ಲ ಮಾರನೆಯ ದಿನ ಹಾಗೆಯೇ ಮಾಡಿದ್ದ. ಆಗ ನಿಧಾನವಾಗಿ ನನಗೆ ಅರ್ಥವಾಗುವ ಹಾಗೆ ಹೇಳಿದ್ದ. ಇದು ಕೇವಲ ಭಾಷೆಯ ವಿಷಯವಾಗಿದ್ದಿದ್ದರೆ ಆತ ಹಾಗೆ ಹೆಚ್ಚುವರಿ ಕೆಲಸ ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ Ludwig Wittgenstein ಹೇಳಿರುವಂತೆ ‘The limits of my language are the limits of my world’ ಎನ್ನುವುದನ್ನು ಟಿಮ್ ಅಕ್ಷರಶಃ ನಂಬಿದ್ದ. ಅವನ ನಡವಳಿಕೆ, ಅವನ ಭಾಷೆ, ಅದರ ಬಗೆಗಿನ ಆತನ ಅಭಿಮಾನ ಮತ್ತು ಇಷ್ಟವನ್ನು ತೋರುತ್ತಿರಲಿಲ್ಲ ತನ್ನ ಪ್ರಪಂಚವನ್ನು ಅತಿಥಿಯೊಬ್ಬನಿಗೆ ತೋರಿಸಬೇಕು ಎನ್ನುವ ತುಡಿತವನ್ನು ತುಂಬಿಕೊಂಡಿತ್ತು. ಭಾಷೆ ಮೇಲಿನ ಹಿಡಿತ, ಮಾತುಗಳಲ್ಲಿನ ಮರ್ಯಾದೆ, ಭಾವದಲ್ಲಿನ ಗೌರವ ಈ ದಿಕ್ಕಿನಲ್ಲಿ ಭಾರತೀಯ ಪ್ರವಾಸಿಗನ ದಾರಿ ಇನ್ನೂ ಬಲು ದೂರವಿದೆ.