Monday, September 15, 2025
Monday, September 15, 2025

ಹೆಡ್‌ ವಿಂಡ್‌ ಮತ್ತು ಟೇಲ್‌ ವಿಂಡ್

ವಿಮಾನಯಾನದಲ್ಲಿ ಹೆಡ್‌ವಿಂಡ್ (Headwind) ಮತ್ತು ಟೇಲ್ ವಿಂಡ್ (Tailwind) ಅಂತ ಹೇಳುವು‌ದನ್ನು ಕೇಳಿರಬಹುದು. ಹಾಗಂದರೇನು? ಸರಳವಾಗಿ ಹೇಳುವುದಾದರೆ, ನೀವು ಚಲಿಸುತ್ತಿರುವ ದಿಕ್ಕಿನ ಎದುರಿನಿಂದ ಬೀಸುವ ಗಾಳಿಯನ್ನು ಹೆಡ್‌ವಿಂಡ್ (ಎದುರು ಗಾಳಿ) ಎನ್ನುತ್ತಾರೆ. ನೀವು ಚಲಿಸುತ್ತಿರುವ ದಿಕ್ಕಿನ ಹಿಂದಿನಿಂದ ಬೀಸುವ ಗಾಳಿಯನ್ನು ಟೇಲ್‌ವಿಂಡ್ (ಹಿಂಗಾಳಿ) ಎಂದು ಕರೆಯುತ್ತಾರೆ.

ವಿಮಾನಯಾನದಲ್ಲಿ ಹೆಡ್‌ವಿಂಡ್ (Headwind) ಮತ್ತು ಟೇಲ್ ವಿಂಡ್ (Tailwind) ಅಂತ ಹೇಳುವುದನ್ನು ಕೇಳಿರಬಹುದು. ಹಾಗಂದರೇನು? ಸರಳವಾಗಿ ಹೇಳುವುದಾದರೆ, ನೀವು ಚಲಿಸುತ್ತಿರುವ ದಿಕ್ಕಿನ ಎದುರಿನಿಂದ ಬೀಸುವ ಗಾಳಿಯನ್ನು ಹೆಡ್‌ವಿಂಡ್ (ಎದುರು ಗಾಳಿ) ಎನ್ನುತ್ತಾರೆ. ನೀವು ಚಲಿಸುತ್ತಿರುವ ದಿಕ್ಕಿನ ಹಿಂದಿನಿಂದ ಬೀಸುವ ಗಾಳಿಯನ್ನು ಟೇಲ್‌ವಿಂಡ್ (ಹಿಂಗಾಳಿ) ಎಂದು ಕರೆಯುತ್ತಾರೆ.

ಇವೆರಡೂ ವಿಮಾನ ಯಾನ ಮತ್ತು ಹಡಗುಯಾನದ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಹೆಡ್‌ವಿಂಡ್ ವಿಮಾನದ ಚಲನೆಯನ್ನು ನಿಧಾನಗೊಳಿಸುತ್ತದೆ. ವಿಮಾನಯಾನದಲ್ಲಿ ಹೆಡ್‌ವಿಂಡ್ ಅನ್ನು ಸಾಮಾನ್ಯವಾಗಿ ಅನುಕೂಲಕರ ಎಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ. ವಿಮಾನ ಟೇಕಾಫ್ ಆಗಲು ಅದರ ರೆಕ್ಕೆಗಳ ಮೇಲೆ ಮತ್ತು ಕೆಳಗೆ ಗಾಳಿಯ ‌ಹರಿವು ಬೇಕು.

ಹೆಡ್‌ವಿಂಡ್ ಇದ್ದಾಗ, ವಿಮಾನವು ನಿಂತಿದ್ದರೂ ರೆಕ್ಕೆಗಳ ಮೇಲೆ ಗಾಳಿ ಹರಿಯುತ್ತಿರುತ್ತದೆ. ಇದರಿಂದ, ವಿಮಾನವು ಹಾರಲು ಬೇಕಾದ ವೇಗವನ್ನು (airspeed) ಕಡಿಮೆ ರನ್‌ವೇ ದೂರದ ತಲುಪುತ್ತದೆ. ಇದು ಟೇಕಾಫ್ ಅನ್ನು ಸುರಕ್ಷಿತ ಮತ್ತು ತ್ವರಿತಗೊಳಿಸುತ್ತದೆ. ಲ್ಯಾಂಡಿಂಗ್ ಆಗುವಾಗಲೂ ಹೆಡ್‌ವಿಂಡ್ ವಿಮಾನದ ವೇಗವನ್ನು ತಗ್ಗಿಸಲು ಸಹಾಯ ‌ಮಾಡುತ್ತದೆ.

ಇದನ್ನೂ ಓದಿ: ಪ್ರಯಾಣಿಕರ ಸ್ಥಳಾಂತರ

ಇದರಿಂದ ವಿಮಾನವು ಕಡಿಮೆ ವೇಗದಲ್ಲಿ ಮತ್ತು ಕಡಿಮೆ ರನ್ ವೇ ಅಂತರದಲ್ಲಿ ಸುರಕ್ಷಿತವಾಗಿ ಇಳಿಯಲು ಸಾಧ್ಯವಾಗುತ್ತದೆ. ಆದರೆ, ಆಕಾಶದಲ್ಲಿ ಹಾರುತ್ತಿರುವಾಗ ಹೆಡ್‌ವಿಂಡ್ ವಿಮಾನದ ವೇಗವನ್ನು (ground speed) ಕಡಿಮೆ ಮಾಡುತ್ತದೆ. ಇದರಿಂದ ನಿಗದಿತ ಸ್ಥಳವನ್ನು ತಲುಪಲು ಹೆಚ್ಚು ಸಮಯ ಮತ್ತು ಹೆಚ್ಚು ಇಂಧನ ಬೇಕಾಗುತ್ತದೆ. ಓಟಗಾರರು ಅಥವಾ ಸೈಕ್ಲಿಸ್ಟ್‌ಗಳು ಹೆಡ್‌ ವಿಂಡ್‌ಗೆ ವಿರುದ್ಧವಾಗಿ ಚಲಿಸುವಾಗ ಹೆಚ್ಚು ಶ್ರಮ ಹಾಕಬೇಕಾಗುತ್ತದೆ ಮತ್ತು ಅವರ ವೇಗ ಕಡಿಮೆಯಾಗುತ್ತದೆ. ಇನ್ನು ಟೇಲ್‌ವಿಂಡ್ (Tailwind). ಟೇಲ್‌ ವಿಂಡ್ ಎಂದರೆ ವಾಹನ ಚಲಿಸುತ್ತಿರುವ ಅದೇ ದಿಕ್ಕಿನಲ್ಲಿ ಬೀಸುವ ಗಾಳಿ. ಇದು ಚಲನೆಯನ್ನು ವೇಗಗೊಳಿಸುತ್ತದೆ. ಟೇಲ್‌ವಿಂಡ್ ವಿಮಾನಯಾನದಲ್ಲಿ ಮಿಶ್ರ ಪರಿಣಾಮಗಳನ್ನು ಬೀರುತ್ತದೆ. ಟೇಲ್‌ವಿಂಡ್ ಇದ್ದರೆ, ವಿಮಾನವು ಹಾರಲು ಬೇಕಾದ ವೇಗವನ್ನು ತಲುಪಲು ಹೆಚ್ಚು ರನ್‌ವೇ ದೂರವನ್ನು ಕ್ರಮಿಸಬೇಕಾಗುತ್ತದೆ. ಏಕೆಂದರೆ, ಗಾಳಿಯು ಹಿಂದಿನಿಂದ ತಳ್ಳುವುದರಿಂದ ರೆಕ್ಕೆಗಳ ಮೇಲೆ ಪರಿಣಾಮಕಾರಿ ಗಾಳಿಯ ಹರಿವು (effective airspeed) ಕಡಿಮೆಯಾಗುತ್ತದೆ. ಇದು ಅಪಾಯಕಾರಿಯಾಗಿದ್ದು, ಸಾಮಾನ್ಯವಾಗಿ ಪೈಲಟ್‌ಗಳು ಟೇಲ್‌ವಿಂಡ್‌ನಲ್ಲಿ ಟೇಕಾಫ್ ಮಾಡುವುದನ್ನು ‌ತಪ್ಪಿಸುತ್ತಾರೆ.

flight 1

ಲ್ಯಾಂಡಿಂಗ್ ಆಗುವಾಗ ಟೇಲ್‌ವಿಂಡ್ ವಿಮಾನದ ವೇಗವನ್ನು ಹೆಚ್ಚಿಸುತ್ತದೆ. ಇದರಿಂದ ವಿಮಾನವನ್ನು ನಿಲ್ಲಿಸಲು ಹೆಚ್ಚು ರನ್‌ವೇ ಬೇಕಾಗುತ್ತದೆ. ಇದು ಕೂಡ ಅಪಾಯಕಾರಿ. ಆಕಾಶದಲ್ಲಿ ಹಾರುತ್ತಿರುವಾಗ ಟೇಲ್‌ವಿಂಡ್ ಅತ್ಯಂತ ಅನುಕೂಲಕರ. ಗಾಳಿಯು ವಿಮಾನವನ್ನು ಹಿಂದಿನಿಂದ ತಳ್ಳುವು ದರಿಂದ ಅದರ ವೇಗ (ground speed) ಹೆಚ್ಚಾಗುತ್ತದೆ. ಇದರಿಂದ ಪ್ರಯಾಣದ ಸಮಯ ಕಡಿಮೆಯಾಗುತ್ತದೆ ಮತ್ತು ಇಂಧನ ಉಳಿತಾಯವಾಗುತ್ತದೆ.

ಜೆಟ್ ಸ್ಟ್ರೀಮ್‌ಗಳಂಥ (Jet Streams) ಶಕ್ತಿಯುತ ಟೇಲ್‌ವಿಂಡ್‌ಗಳನ್ನು ಬಳಸಿಕೊಂಡು ವಿಮಾನಗಳು ತಮ್ಮ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳುತ್ತವೆ. ಹಾಗೆಯೇ ಓಟಗಾರರಿಗೆ ಅಥವಾ ಸೈಕ್ಲಿಸ್ಟ್‌ಗಳಿಗೆ ಟೇಲ್ ವಿಂಡ್ ಇದ್ದರೆ, ಅವರು ಕಡಿಮೆ ಶ್ರಮದಿಂದ ಹೆಚ್ಚು ವೇಗವಾಗಿ ಚಲಿಸಬಹುದು. ಭೂಮಿಯ ವಾತಾವರಣದಲ್ಲಿ, ಅತಿ ಎತ್ತರದಲ್ಲಿ (ಸುಮಾರು 9-14 ಕಿ.ಮೀ.) ಅತ್ಯಂತ ವೇಗವಾಗಿ ಹರಿಯುವ ಗಾಳಿಯ ಕಿರಿದಾದ ಪಟ್ಟಿಗಳಿವೆ. ಇವುಗಳನ್ನು ‘ಜೆಟ್ ಸ್ಟ್ರೀಮ್’ ಎಂದು ಕರೆಯುತ್ತಾರೆ.

ಈ ಜೆಟ್ ಸ್ಟ್ರೀಮ್‌ಗಳು ಗಂಟೆಗೆ 200 ರಿಂ‌ದ 400 ಕಿಮೀ.ಗಿಂತ ಹೆಚ್ಚು ವೇಗದಲ್ಲಿ ಚಲಿಸುತ್ತವೆ. ವಿಮಾನಗಳು ಈ ಜೆಟ್ ಸ್ಟ್ರೀಮ್ ಅನ್ನು ಟೇಲ್ ವಿಂಡ್ ಆಗಿ ಬಳಸಿಕೊಂಡರೆ, ಅವುಗಳ ಪ್ರಯಾಣದ ಸಮಯ ಮತ್ತು ಇಂಧನ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತದೆ. 2020ರಲ್ಲಿ, ಬ್ರಿಟಿಷ್ ಏರ್‌ ವೇಸ್ ವಿಮಾನವೊಂದು ನ್ಯೂಯಾರ್ಕ್‌ನಿಂದ ಲಂಡನ್‌ಗೆ ಕೇವಲ 4 ಗಂಟೆ 56 ನಿಮಿಷಗಳಲ್ಲಿ ತಲುಪಿ ದಾಖಲೆ ನಿರ್ಮಿಸಿತು. ಇದಕ್ಕೆ ಕಾರಣ, ಅಟ್ಲಾಂಟಿಕ್ ಸಾಗರದ ಮೇಲೆ ಬೀಸುತ್ತಿದ್ದ ಅತ್ಯಂತ ಶಕ್ತಿಶಾಲಿ ಜೆಟ್ ಸ್ಟ್ರೀಮ್ (ಟೇಲ್‌ವಿಂಡ್). ಅದೇ ವಿಮಾನ ಲಂಡನ್‌ನಿಂದ ನ್ಯೂಯಾರ್ಕ್‌ಗೆ (ಹೆಡ್ ವಿಂಡ್‌ಗೆ ವಿರುದ್ಧವಾಗಿ) ಬರಲು ಸುಮಾರು 7-8 ಗಂಟೆ ತೆಗೆದುಕೊಳ್ಳುತ್ತದೆ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?