ಬೆಳ್ಳಿ ಬೆಟ್ಟಗಳ ಸೆರಗಿನಲ್ಲಿ ಮಲಗಿರುವ ಇತಿಹಾಸ
ಹಿಮದ ಬೆಳ್ಳಿ ಬೆಟ್ಟಗಳು, ಮುಗಿಲನ್ನು ಮುಟ್ಟುವ ಪರ್ವತ ಶ್ರೇಣಿಗಳು ಮತ್ತು ದೇಶಪ್ರೇಮದ ರಕ್ತಮಿಡಿತವನ್ನು ಹೆಚ್ಚಿಸುವ ಗಡಿಭಾಗ- ಇವಿಷ್ಟು ನೆನಪಿಗೆ ಬರುವುದು ಸಿಕ್ಕಿಂನ ಪ್ರಸಿದ್ಧ 'ನಾತುಲಾ ಪಾಸ್' ಹೆಸರನ್ನು ಕೇಳಿದಾಗ. ಪ್ರವಾಸ ಎಂದರೆ ಕೇವಲ ದಿನನಿತ್ಯದ ಜಂಜಾಟದಿಂದ ದೂರ ಸರಿಯುವುದಷ್ಟೇ ಅಲ್ಲ, ಮನಸಿನ ಖಾಲಿತನವನ್ನು ತುಂಬಿಕೊಳ್ಳುವ ಸುಂದರ ಕಾವ್ಯವೂ ಹೌದು.
- ಮಂಗಳಾ ಟಿ.ಎಸ್
ಭಾರತದ ಈಶಾನ್ಯ ಭಾಗದಲ್ಲಿರುವ ಸಿಕ್ಕಿಂ ರಾಜ್ಯವು ತನ್ನ ನೈಸರ್ಗಿಕ ಸೌಂದರ್ಯ, ಹಿಮಾಚ್ಛಾದಿತ ಪರ್ವತಗಳು ಮತ್ತು ಐತಿಹಾಸಿಕ ಸ್ಥಳಗಳಿಗಾಗಿ ಜಗತ್ಪ್ರಸಿದ್ಧವಾಗಿದೆ. ಅಂಥ ಮಹತ್ವದ ಸ್ಥಳಗಳಲ್ಲಿ 'ನಾತುಲಾ ಪಾಸ್' ಅತ್ಯಂತ ಪ್ರಮುಖವಾದುದು. ಸಮುದ್ರಮಟ್ಟದಿಂದ ಸುಮಾರು 14,140 ಅಡಿ ಎತ್ತರದಲ್ಲಿರುವ ಈ ಪರ್ವತ ಮಾರ್ಗವು ಭಾರತ ಮತ್ತು ಚೀನಾವನ್ನು ಸಂಪರ್ಕಿಸುವ ಪ್ರಮುಖ ಗಡಿದಾರಿಯಾಗಿದೆ. ಈ ಸ್ಥಳಕ್ಕೆ ಭೇಟಿ ನೀಡಿದ ಅನುಭವ ನನ್ನ ಜೀವನದ ಮರೆಯಲಾಗದ ನೆನಪು. ಅತ್ಯಂತ ವಿಷಾದ ಮತ್ತು ಖಾಲಿತನ ಆವರಿಸಿದ್ದ ಹೊತ್ತಿನಲ್ಲಿ, ಆ ಕ್ಷಣಗಳು ಸ್ಮೃತಿಗೆ ಬಂದರೆ ಸಾಕು, ಮನಸಿನ ಬೇಸರವನ್ನು ದೂರಮಾಡುವ ಅದ್ಭುತ ಶಕ್ತಿ ಈ ವಿಶೇಷ ಪ್ರವಾಸದ ಅನುಭವದಿಂದ ನನಗೆ ಸಿಕ್ಕಿತು.

ಸಿಕ್ಕಿಂನ ಮೂರು ದಿನಗಳ ಪ್ರವಾಸದಲ್ಲಿ ಒಂದು ದಿನವನ್ನು ನಾವು ನಾತುಲಾ ಪಾಸ್ ಭೇಟಿಗಾಗಿ ಯೋಜಿಸಿಕೊಂಡಿದ್ದೆವು. ಬೆಳಗಿನ ಜಾವವೇ ಗ್ಯಾಂಗ್ಟಾಕ್‌ನಿಂದ ನಾತುಲಾ ಪಾಸ್ ಕಡೆಗೆ ನಮ್ಮ ಪ್ರಯಾಣ ಆರಂಭವಾಯಿತು. ಬೆಟ್ಟಗಳ ನಡುವೆ ಬಳುಕುತ್ತ ಸಾಗುವ ರಸ್ತೆಗಳು, ಹಸಿರು ಕಣಿವೆಗಳು ಮತ್ತು ಮೋಡಗಳಿಂದ ಆವೃತವಾದ ಪರ್ವತಗಳು ಮನಸಿಗೆ ಅಪಾರ ಮುದ ನೀಡಿದವು. ಎತ್ತರ ಹೆಚ್ಚಾದಂತೆ ತಂಪು ವಾತಾವರಣ ಮತ್ತಷ್ಟು ತೀವ್ರವಾಗುತ್ತಿತ್ತು. ದಾರಿಯುದ್ದಕ್ಕೂ ಹಿಮದಿಂದ ಆವೃತವಾದ ಶಿಖರಗಳು, ಜಲಪಾತಗಳು ಮತ್ತು ನಿಸರ್ಗದ ಅದ್ಭುತ ದೃಶ್ಯಗಳು ನನ್ನ ಕಣ್ಮನ ಸೆಳೆದವು.
ಯೋಧರ ತ್ಯಾಗಕ್ಕೆ ನಮನ
ನಾತುಲಾ ಪಾಸ್‌ನ ತುತ್ತತುದಿ ತಲುಪಿದಾಗ, ಭಾರತದ ಗಡಿಯನ್ನು ಕಾಯುವ ಭಾರತೀಯ ಸೇನೆಯ ಶಿಸ್ತಿನ ಕಾರ್ಯವೈಖರಿ ಕಣ್ಣಿಗೆ ಕಟ್ಟಿದಂತೆ ಕಾಣಸಿಗುತ್ತದೆ. ಅಲ್ಲಿನ ನಾತುಲಾ ವಾರ್ ಮೆಮೊರಿಯಲ್ ಮೇಲಿದ್ದ ಸಾಲುಗಳು- 'We gave our lives for your tomorrow'. ಇವು ನಮ್ಮ ಯೋಧರ ತ್ಯಾಗ ಮತ್ತು ಬಲಿದಾನದ ಕುರಿತು ಹೆಮ್ಮೆ ಮೂಡಿಸುವಂತಿದ್ದವು.

ಗಡಿಯಲ್ಲಿ ನಮ್ಮ ಹೆಮ್ಮೆಯ ರಾಷ್ಟ್ರಧ್ವಜ ಹಾರಾಡುತ್ತಿರುವ ದೃಶ್ಯವನ್ನು ನೋಡಿದಾಗ, ದೇಶಭಕ್ತಿಯ ಭಾವನೆ ಗಾಢವಾಗಿ ಮೂಡಿ ಕಣ್ಣಂಚಿನಲ್ಲಿ ನೀರು ತುಂಬಿ ಬಂತು. ಅಲ್ಲಿ ನಿಯೋಜಿತರಾಗಿರುವ ಯೋಧರು ಅಷ್ಟು ಕಠಿಣ ಹಾಗೂ ಹೆಪ್ಪುಗಟ್ಟುವ ಹವಾಮಾನದಲ್ಲಿಯೂ ದೇಶದ ರಕ್ಷಣೆಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದನ್ನು ಕಂಡು, ಅವರ ತ್ಯಾಗ ಮತ್ತು ಧೈರ್ಯಕ್ಕೆ ಮನಸಾರೆ ಗೌರವ ಸಲ್ಲಿಸಿದೆ.
ಪ್ರಾಚೀನ ರೇಷ್ಮೆ ಮಾರ್ಗ
ನಾತುಲಾ ಪಾಸ್‌ನ ಇತಿಹಾಸವೂ ಅತ್ಯಂತ ಮಹತ್ವದ್ದಾಗಿದೆ. ಪ್ರಾಚೀನ ಕಾಲದಲ್ಲಿ ಇದು ಪ್ರಸಿದ್ಧ 'ರೇಷ್ಮೆ ಮಾರ್ಗ'ದ ಒಂದು ಪ್ರಮುಖ ಭಾಗವಾಗಿತ್ತು. ಭಾರತ, ಟಿಬೆಟ್ ಮತ್ತು ಚೀನಾದ ನಡುವೆ ವ್ಯಾಪಾರ ನಡೆಸಲು ಅಂದಿನ ವ್ಯಾಪಾರಿಗಳು ಇದೇ ಮಾರ್ಗವನ್ನು ಬಳಸುತ್ತಿದ್ದರು. ರೇಷ್ಮೆ, ಉಣ್ಣೆ, ಮಸಾಲೆ ಪದಾರ್ಥಗಳು ಸೇರಿದಂತೆ ವಿವಿಧ ಅಪರೂಪದ ವಸ್ತುಗಳ ವಿನಿಮಯ ಈ ದಾರಿಯ ಮೂಲಕವೇ ನಡೆಯುತ್ತಿತ್ತು. ಇದರಿಂದಾಗಿ ನಾತುಲಾ ಪಾಸ್ ಕೇವಲ ವ್ಯಾಪಾರ ಕೇಂದ್ರವಾಗಿರದೆ, ಸಾಂಸ್ಕೃತಿಕ ವಿನಿಮಯದ ಪ್ರಮುಖ ಕೊಂಡಿಯೂ ಆಗಿತ್ತು.
ಆದರೆ, 1962ರ ಭಾರತ- ಚೀನಾ ಯುದ್ಧದ ನಂತರ ಈ ಗಡಿಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಲಾಯಿತು. ತದನಂತರ ಹಲವು ವರ್ಷಗಳ ಕಾಲ ಇದು ಸಾರ್ವಜನಿಕ ಸಂಚಾರಕ್ಕೆ ಬಂದ್ ಆಗಿಯೇ ಉಳಿಯಿತು. ಮುಂದೆ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ, 2006ರಲ್ಲಿ ಈ ಮಾರ್ಗವನ್ನು ಸೀಮಿತ ವ್ಯಾಪಾರಕ್ಕಾಗಿ ಮತ್ತೆ ಮುಕ್ತಗೊಳಿಸಲಾಯಿತು. ಇಂದು ಇದು ಗಡಿ ಭದ್ರತೆ, ಜಾಗತಿಕ ವ್ಯಾಪಾರ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಆಯಕಟ್ಟಿನ ಸ್ಥಳವಾಗಿದೆ.
ಮಂತ್ರಮುಗ್ಧಗೊಳಿಸುವ ಪ್ರಕೃತಿ
ನಾತುಲಾ ಪಾಸ್ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವು ನಯನಮನೋಹರವಾಗಿದೆ. ಹಿಮಪದರ ಹೊದ್ದ ಪರ್ವತಗಳು, ಮೈಕೊರೆಯುವ ತಂಪಾದ ಗಾಳಿ ಮತ್ತು ಮೋಡಗಳ ನಡುವೆ ಕಣ್ಣಾಮುಚ್ಚಾಲೆ ಆಡುವ ದೃಶ್ಯಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.
ನಾತುಲಾಕ್ಕೆ ಸಾಗುವ ದಾರಿಯಲ್ಲಿ ಸಿಗುವ ಪ್ರಸಿದ್ಧ ಛಾಂಗು (ತ್ಸೋಂಗೊ) ಸರೋವರ ಮತ್ತು ಗಡಿ ಕಾಯುವ ದೈವೀ ಶಕ್ತಿ ಎನಿಸಿರುವ ಬಾಬಾ ಹರಭಜನ್ ಸಿಂಗ್ ದೇವಸ್ಥಾನವೂ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಸ್ಥಳಗಳಾಗಿವೆ. ಅಲ್ಲಿನ ಶಾಂತ ಹಾಗೂ ಪವಿತ್ರ ವಾತಾವರಣವು ದಣಿದ ಮನಸ್ಸಿಗೆ ಹೊಸ ಚೈತನ್ಯವನ್ನು ನೀಡುತ್ತದೆ.

ಮತ್ತೆ ಬರುವೆ ನಾತುಲಾ...
ಈ ಪ್ರವಾಸದಿಂದ ಕೇವಲ ಪ್ರಕೃತಿಯ ಸೌಂದರ್ಯವಷ್ಟೇ ಅಲ್ಲದೆ, ನಮ್ಮ ದೇಶದ ಗಡಿಯನ್ನು ಕಾಯುವ ಯೋಧರ ತ್ಯಾಗ ಮತ್ತು ದೇಶದ ಐತಿಹಾಸಿಕ ಪರಂಪರೆಯ ಬಗ್ಗೆ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆ ಮೂಡುವುದು ಸಹಜ. ನಾತುಲಾ ಪಾಸ್‌ಗೆ ಭೇಟಿ ನೀಡುವುದು ಪ್ರತಿಯೊಬ್ಬ ಭಾರತೀಯನಿಗೂ ಒಂದು ಅವಿಸ್ಮರಣೀಯ ಹಾಗೂ ಹೆಮ್ಮೆಯ ಅನುಭವವೇ ಸರಿ.
ಒಟ್ಟಾರೆಯಾಗಿ ಹೇಳುವುದಾದರೆ, ನಾತುಲಾ ಪಾಸ್ ಪ್ರವಾಸವು ನನ್ನ ಜೀವನದ ಅತ್ಯಂತ ಸ್ಮರಣೀಯ ಪಯಣವಾಗಿದೆ. ಅಲ್ಲಿನ ಬಿಳಿ ಹಿಮಪರ್ವತಗಳು, ಅದ್ಭುತ ನಿಸರ್ಗ, ಐತಿಹಾಸಿಕ ಮಹತ್ವ ಮತ್ತು ಭಾರತೀಯ ಸೇನೆಯ ಅಪ್ರತಿಮ ಸೇವಾಭಾವ ನನ್ನ ಮನಸಿನಲ್ಲಿ ಎಂದಿಗೂ ಅಳಿಸಲಾಗದ ಗುರುತು ಮೂಡಿಸಿವೆ. ಈ ಪ್ರವಾಸವು ನನ್ನಲ್ಲಿ ದೇಶಪ್ರೇಮ, ಪ್ರಕೃತಿಪ್ರೀತಿ ಮತ್ತು ಇತಿಹಾಸದ ಅರಿವನ್ನು ಇನ್ನಷ್ಟು ಹೆಚ್ಚಿಸಿತು. ಅವಕಾಶ ದೊರೆತರೆ ಮತ್ತೊಮ್ಮೆ ನಾತುಲಾ ಪಾಸ್‌ಗೆ ಭೇಟಿ ನೀಡಿ, ಆ ಸುಂದರ ಅನುಭವವನ್ನು ಪುನಃ ಸವಿಯಬೇಕೆಂಬ ಹಂಬಲ ನನ್ನಲ್ಲಿದೆ. ಮತ್ತೆ ಬರುವೆ.. ನಾತುಲಾ!
ಮಾಹಿತಿ ಪೆಟ್ಟಿಗೆ:
ನಾತುಲಾ ಪಾಸ್ ಭಾರತ-ಚೀನಾ ಗಡಿಯಲ್ಲ ಇರುವುದರಿಂದ ಇಲ್ಲಿಗೆ ಭೇಟಿ ನೀಡಲು ಭಾರತೀಯ ನಾಗರಿಕರಿಗೆ ವಿಶೇಷ ಗಡಿ ಅನುಮತಿ ಪತ್ರ (Protected Area Permit - PAP) ಕಡ್ಡಾಯವಾಗಿದೆ. ನೀವು ಗ್ಯಾಂಗ್ಟಾಕ್ ತಲುಪಿದ ತಕ್ಷಣ ನಿಮ್ಮ ಗುರುತಿನ ಚೀಟಿ ಮತ್ತು ಪಾಸ್‌ಪೋರ್ಟ್ ಸೈಜ್ ಫೊಟೋ ನೀಡಿ ಟ್ರಾವೆಲ್ ಏಜೆಂಟ್ ಮೂಲಕ ಒಂದು ದಿನ ಮುಂಚಿತವಾಗಿ ಈ ಪರ್ಮಿಟ್ ಪಡೆದುಕೊಳ್ಳಬೇಕು. ಸಾಮಾನ್ಯವಾಗಿ ನಾತುಲಾ ಪಾಸ್ ಪ್ರವಾಸಿಗರಿಗೆ ಬುಧವಾರದಿಂದ ಭಾನುವಾರದವರೆಗೆ ಮಾತ್ರ ಮುಕ್ತವಾಗಿರುತ್ತದೆ.