Friday, August 29, 2025
Friday, August 29, 2025

ಸಾಧ್ಯ ಇದ್ದಿದ್ದರೆ ಸರಕಾರ ಮಳೆಯನ್ನೇ ನಿಷೇಧಿಸಿಬಿಡುತ್ತಿತ್ತೇನೋ!

ಉತ್ತರ ಕನ್ನಡದ ವಿಭೂತಿ ಜಲಪಾತ, ಯಾಣ, ಮಾಗೋಡು ಜಲಪಾತಗಳಂಥ ಜನಪ್ರಿಯ ತಾಣಗಳಿಗೆ ಪ್ರವೇಶ ನಿರ್ಬಂಧಿಸಿರುವುದು ಪ್ರವಾಸೋದ್ಯಮದ ಮೇಲೆ ನೇರ ಪರಿಣಾಮ ಬೀರಿದೆ. ಪ್ರವಾಸಿಗರ ಸುರಕ್ಷತೆ ಮುಖ್ಯವಾದರೂ, ಸಂಪೂರ್ಣ ನಿಷೇಧ ಹೇರುವ ಬದಲು, ನಿಯಂತ್ರಿತ ಪ್ರವೇಶ, ಪೊಲೀಸ್ ಸಿಬ್ಬಂದಿ ಪಹರೆ, ನಿಯೋಜನೆ, ಮಾರ್ಗದರ್ಶಕರ ನೇಮಕ ಮತ್ತು ಮೂಲಸೌಕರ್ಯ ಸುಧಾರಣೆಯಂಥ ಪರ್ಯಾಯ ಮಾರ್ಗಗಳನ್ನು ಸರಕಾರ ಪರಿಗಣಿಸಬಹುದಿತ್ತು.

ಪ್ರವಾಸೋದ್ಯಮವು ಯಾವುದೇ ದೇಶದ ಆರ್ಥಿಕತೆಗೆ ಪ್ರಮುಖ ಆಧಾರ. ಮುಂದುವರಿದ, ಅಭಿವೃದ್ಧಿ ಹೊಂದಿದ ದೇಶಗಳಾದ ಅಮೆರಿಕ, ಫ್ರಾನ್ಸ್, ಜರ್ಮನಿ, ಜಪಾನ್, ಬ್ರಿಟನ್ ಕೂಡ ಪ್ರವಾಸೋದ್ಯಮ ಬಾಬತ್ತಿನಿಂದ ದೊಡ್ಡ ಪ್ರಮಾಣದಲ್ಲಿ ಆದಾಯ ಗಳಿಸುತ್ತಿರುವುದೇ ಇದಕ್ಕೆ ನಿದರ್ಶನ. ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ಅನಾಯಾಸವಾಗಿ ವಿದೇಶಿ ವಿನಿಮಯವನ್ನು ತರುತ್ತದೆ, ಸ್ಥಳೀಯ ಸಂಸ್ಕೃತಿ ಮತ್ತು ಕರಕುಶಲ ವಸ್ತುಗಳನ್ನು ಉತ್ತೇಜಿಸುತ್ತದೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಕಾರಣವಾಗುತ್ತದೆ. ಆದರೂ ಅನೇಕ ಸಂದರ್ಭಗಳಲ್ಲಿ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಬದಲು, ಸರ್ಕಾರಗಳ ನೀತಿಗಳು ಮತ್ತು ನಿರ್ಧಾರಗಳೇ ಅದಕ್ಕೆ ಕಂಟಕವಾಗುತ್ತಿರುವುದು ವಿಪರ್ಯಾಸ.

ನಿಮಗೆ ಕೆಲವು ನಿದರ್ಶನಗಳನ್ನು ಹೇಳಬೇಕು. ಕರ್ನಾಟಕವು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ರಾಜ್ಯ. ಕರ್ನಾಟಕದಲ್ಲಿ ಇಲ್ಲದ ಸಂಗತಿಗಳೇ ಇಲ್ಲ, ಮರುಭೂಮಿಯೊಂದನ್ನು ಹೊರತುಪಡಿಸಿ. ಪಶ್ಚಿಮ ಘಟ್ಟಗಳು ಅನೇಕ ಸುಂದರ ಜಲಪಾತಗಳಿಗೆ ನೆಲೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲೊಂದು ಇಪ್ಪತ್ತೈದಕ್ಕೂ ಹೆಚ್ಚು ಸುಂದರವಾದ ಜಲಪಾತಗಳಿವೆ. ಹಾಗೆ ಮಡಿಕೇರಿಯಲ್ಲೂ ಅಪರೂಪದ ಜಲಪಾತ ತಾಣಗಳಿವೆ. ಮಳೆಗಾಲದಲ್ಲಿ ಈ ಜಲಪಾತಗಳು ಮೈದುಂಬಿ ಹರಿಯುವ ದೃಶ್ಯವನ್ನು ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ, ಕರ್ನಾಟಕ ಸರಕಾರವು ಮಳೆಗಾಲದಲ್ಲಿ ಜಲಪಾತ ವೀಕ್ಷಣೆಗೆ ನಿರ್ಬಂಧಗಳನ್ನು ವಿಧಿಸಿದೆ. ಮಳೆಗಾಲದಲ್ಲಿ ಈ ಸುಂದರ ಜಲಪಾತಗಳನ್ನು ನೋಡಲು ಆಗುತ್ತಿಲ್ಲ. ಸುರಕ್ಷತಾ ಕಾರಣಗಳನ್ನು (ಉದಾಹರಣೆಗೆ, ಭೂಕುಸಿತದ ಅಪಾಯ, ನೀರಿನ ರಭಸ, ಸಿಕ್ಕಿಹಾಕಿಕೊಳ್ಳುವ ಭೀತಿ) ಉಲ್ಲೇಖಿಸಿ ಈ ನಿರ್ಬಂಧಗಳನ್ನು ಹೇರಲಾಗಿದ್ದರೂ, ಇದು ಪ್ರವಾಸಿಗರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ದೂರದೂರುಗಳಿಂದ ಬಂದ ಪ್ರವಾಸಿಗರು ಪ್ರವೇಶವಿಲ್ಲದೇ ವಾಪಸ್ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.

waterfalls

ಯಾವುದನ್ನು ಯಾವಾಗ ನೋಡಬೇಕೋ ಆಗಲೇ ನೋಡಿದರೆ ಚೆಂದ. ಉದಾಹರಣೆಗೆ, ಜಲಪಾತಗಳನ್ನು ನೋಡಬೇಕಾಗಿದ್ದೇ ಮಳೆಗಾಲದಲ್ಲಿ. ಬೇಸಿಗೆಯಲ್ಲಿ ಜೋಗದಂಥ ಜಗತ್ಪ್ರಸಿದ್ಧ ಜಲಪಾತವನ್ನು ನೋಡಲು ಆಗುವುದಿಲ್ಲ. ಮಳೆಗಾಲದಲ್ಲಿ ಅದರ ವೈಭವವೇ ವೈಭವ. ಆದರೆ ಇಂಥ ಜಲಪಾತಗಳನ್ನು ನೋಡಬೇಕಾಗಿದ್ದೇ ಮಳೆಗಾಲದಲ್ಲಿ. ಚೌತಿ ದಿನ ಗಣಪತಿ ಹಬ್ಬ ಮಾಡುವುದು ಬಿಟ್ಟು ಬೇರೆ ದಿನ ಮಾಡಿ ಅಂದ್ರೆ ಹೇಗೋ, ಮಳೆಗಾಲದಲ್ಲಿ ಜಲಪಾತ ನೋಡುವುದು ಬೇಡ ಎಂದು ಕರ್ನಾಟಕ ಸರಕಾರ ಜಲಪಾತ ವೀಕ್ಷಣೆಗೆ ನಿಷೇಧ ವಿಧಿಸಿದೆ.

ಉತ್ತರ ಕನ್ನಡದ ವಿಭೂತಿ ಜಲಪಾತ, ಯಾಣ, ಮಾಗೋಡು ಜಲಪಾತಗಳಂಥ ಜನಪ್ರಿಯ ತಾಣಗಳಿಗೆ ಪ್ರವೇಶ ನಿರ್ಬಂಧಿಸಿರುವುದು ಪ್ರವಾಸೋದ್ಯಮದ ಮೇಲೆ ನೇರ ಪರಿಣಾಮ ಬೀರಿದೆ. ಪ್ರವಾಸಿಗರ ಸುರಕ್ಷತೆ ಮುಖ್ಯವಾದರೂ, ಸಂಪೂರ್ಣ ನಿಷೇಧ ಹೇರುವ ಬದಲು, ನಿಯಂತ್ರಿತ ಪ್ರವೇಶ, ಪೊಲೀಸ್ ಸಿಬ್ಬಂದಿ ಪಹರೆ, ನಿಯೋಜನೆ, ಮಾರ್ಗದರ್ಶಕರ ನೇಮಕ ಮತ್ತು ಮೂಲಸೌಕರ್ಯ ಸುಧಾರಣೆಯಂಥ ಪರ್ಯಾಯ ಮಾರ್ಗಗಳನ್ನು ಸರಕಾರ ಪರಿಗಣಿಸಬಹುದಿತ್ತು. ಇದು ಸ್ಥಳೀಯ ಆರ್ಥಿಕತೆಗೂ ಹೊಡೆತ ನೀಡಿದೆ. ಏಕೆಂದರೆ ಈ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ನಂಬಿ ಬದುಕುವ ಸಣ್ಣ ವ್ಯಾಪಾರಿಗಳು, ಮಾರ್ಗದರ್ಶಕರು, ಮತ್ತು ಹೋಮ್‌ಸ್ಟೇ ಮಾಲೀಕರು ಆದಾಯ ಕಳೆದುಕೊಂಡಿದ್ದಾರೆ. ಎಲ್ಲೋ ಒಂದು ಕಡೆ ಅಪಘಾತವಾಗಿದೆಯೆಂದು ಎಲ್ಲೆಡೆ ಜಲಪಾತ ವೀಕ್ಷಣೆಗೆ ನಿಷೇಧ ಹೇರುವುದು ಸರಿಯಾದ ಕ್ರಮವಲ್ಲ.

ಮೊನ್ನೆ ವಿಯೆಟ್ನಾಮಿನ ವಿಶ್ವವಿಖ್ಯಾತ ಹ ಲಾಂಗ್ ಬೇ ಯಲ್ಲಿ ದೋಣಿ ಮಗುಚಿ 34 ಮಂದಿ ಪ್ರವಾಸಿಗರು ಮೃತಪಟ್ಟರು. ಹಾಗಂತ ಅಲ್ಲಿ ದೋಣಿ ವಿಹಾರವನ್ನು ನಿಷೇಧಿಸಲಿಲ್ಲ. ಇತರ ಪ್ರವಾಸಿಗರಿಗೆ ಅಲ್ಲಿ ಒಂದು ಕ್ಷಣವೂ ಅಡಚಣೆ ಆಗಲಿಲ್ಲ. ಹಠಾತ್ತನೆ ನೀರಿನ ಅಬ್ಬರ ಜಾಸ್ತಿಯಾದರೆ ಏನು ಮಾಡಲು ಆದೀತು? ಅದನ್ನು ಸರಕಾರಕ್ಕೆ ನಿಯಂತ್ರಿಸಲು ಆಗುವುದಿಲ್ಲವಲ್ಲ? ಅದೇ ನಮ್ಮ ದೇಶದಲ್ಲಿ ಅಂಥ ಪ್ರಕರಣ ಸಂಭವಿಸಿದ್ದರೆ, ಅಲ್ಲಿ ದೋಣಿ ವಿಹಾರವನ್ನು ನಿಷೇಧಿಸಿಬಿಡುತ್ತಿದ್ದರು.

ಇನ್ನೊಂದು ಸಂಗತಿ ಹೇಳುತ್ತೇನೆ. ಇದು ಸಣ್ಣ ವಿಷಯವೇ ಆಗಿರಬಹುದು, ಆದರೆ ಇದು ಪ್ರವಾಸೋದ್ಯಮದ ಬಗ್ಗೆ ನಮ್ಮ ಮನಸ್ಥಿತಿ ಎಂಥದು ಎಂಬುದನ್ನು ತೋರಿಸುತ್ತದೆ. ಉದಾಹರಣೆಗೆ ಡ್ರೋನ್. ಆಧುನಿಕ ಪ್ರವಾಸೋದ್ಯಮದಲ್ಲಿ ಡ್ರೋನ್‌ಗಳ ಪಾತ್ರ ಮಹತ್ವದ್ದು. ವಿಹಂಗಮ ನೋಟದ ವಿಡಿಯೋಗಳು ಮತ್ತು ಫೋಟೋಗಳು ತಾಣಗಳ ಸೌಂದರ್ಯವನ್ನು ವಿಶ್ವದೆಲ್ಲೆಡೆ ಪ್ರಚುರಪಡಿಸಲು ಸಹಾಯಕ. ಆದರೆ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಡ್ರೋನ್ ಬಳಕೆಗೆ ಕಠಿಣ ನಿಯಮಾವಳಿಗಳಿವೆ. ಭಾರತದಲ್ಲಿ, ಡ್ರೋನ್‌ಗಳ ನೋಂದಣಿ, ಪರ್ಮಿಟ್ ಮತ್ತು ನಿರ್ದಿಷ್ಟ ವಲಯಗಳಲ್ಲಿ (No Fly Zones) ಹಾರಾಟ ನಿಷೇಧದಂಥ ನಿಯಮಗಳಿವೆ. ವಿದೇಶಿ ಪ್ರವಾಸಿಗರಿಗೆ ಡ್ರೋನ್ ಹಾರಾಟಕ್ಕೆ ಅನುಮತಿ ಇಲ್ಲದಿರುವುದು ಪ್ರಮುಖ ಅಡೆತಡೆಗಳಲ್ಲಿ ಒಂದಾಗಿದೆ.

ಈ ನಿಯಮಗಳನ್ನು ಭದ್ರತಾ ಕಾಳಜಿಗಳಿಂದ ರೂಪಿಸಿದ್ದರೂ, ಇದು ಪ್ರವಾಸಿಗರಿಗೆ ತಮ್ಮ ಅನುಭವಗಳನ್ನು ಸೆರೆಹಿಡಿಯಲು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ಅಡ್ಡಿಯಾಗುತ್ತಿದೆ. ಡ್ರೋನ್‌ಗಳು ಕೇವಲ ವಾಣಿಜ್ಯ ಉದ್ದೇಶಕ್ಕಷ್ಟೇ ಅಲ್ಲದೇ, ವೈಯಕ್ತಿಕ ಅನುಭವಗಳನ್ನು ಸಂಗ್ರಹಿಸುವಲ್ಲಿಯೂ ನೆರವಾಗುತ್ತವೆ. ಸಣ್ಣ ಡ್ರೋನ್‌ಗಳಿಗೆ ಅಥವಾ ನಿರ್ದಿಷ್ಟ ವಲಯಗಳಲ್ಲಿ ಸೀಮಿತ ಎತ್ತರದಲ್ಲಿ ಹಾರಾಟಕ್ಕೆ ವಿನಾಯಿತಿ ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಹುದು. ತಂತ್ರಜ್ಞಾನದ ಸದುಪಯೋಗವು ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಕವಾಗಿಸಬಲ್ಲದು.

Seychelles island country

ಈ ವಿಷಯದಲ್ಲಿ ನಾವು ಸೀಶೆಲ್ಸ್ ದ್ವೀಪ ದೇಶದಿಂದ ಕಲಿಯುವಂಥದ್ದು ಸಾಕಷ್ಟಿದೆ. ಅಲ್ಲಿ ಎಲ್ಲೆಡೆ ಡ್ರೋನ್ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ 125 ಮೀಟರ್ ಎತ್ತರಕ್ಕಿಂತ ಮೇಲೆ ಹಾರಿಸುವಂತಿಲ್ಲ. ಅದಕ್ಕಿಂತ ಮುಖ್ಯವಾಗಿ, ಡ್ರೋನ್ ಹಾರಿಸುವ ಮುನ್ನ ಕಡ್ಡಾಯವಾಗಿ ನೋಂದಣಿ ಮಾಡಿ ಅನುಮತಿ ಪಡೆಯಲೇಬೇಕು. ಇದು ಡ್ರೋನ್ ಹಾರಿಸುವವರ ಮೇಲೆ ಕಣ್ಗಾವಲು ಇಡಲು ಸಹಾಯಕ. 249 ಗ್ರಾಂ ಭಾರದ ಡ್ರೋನ್ ಆಟಿಕೆ ವಸ್ತು ಎಂದು ವಿಶ್ವದೆಲ್ಲೆಡೆ ಪರಿಗಣಿತವಾಗಿದೆ. ಆ ಡ್ರೋನ್ ಗೆ ಅನುಮತಿ ನೀಡುವುದರಿಂದ ಅಪಾಯವಿಲ್ಲ. ಆದರೆ ಈ ಸಂಗತಿ ಅರಿಯದ ಸರಕಾರಿ ಅಧಿಕಾರಿಗಳು ಎಲ್ಲ ಡ್ರೋನ್ ಗಳ ಮೇಲೂ ನಿಷೇಧ ಹೇರಿಬಿಟ್ಟರೆ, ಅದು ಪ್ರವಾಸಿಗರ ಆಸೆಗೆ ತಣ್ಣೀರು ಎರಚಿದಂತೆ.

ಭಾರತದಲ್ಲಿ ಬಹಳ ವರ್ಷಗಳ ಕಾಲ ಓಬೀರಾಯನ ಕಾಲದ ನಿಯಮಗಳು ಜಾರಿಯಲ್ಲಿದ್ದವು. ವಿಶ್ವದ ಅಚ್ಚರಿಗಳಲ್ಲಿ ಒಂದಾದ ಆಗ್ರಾದ ತಾಜಮಹಲ್ ಸುತ್ತಮುತ್ತ ಫೋಟೋ ತೆಗೆಯಬಾರದು ಎಂದು ಒಂದು ತಿಂಗಳ ಮಟ್ಟಿಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಆಗ್ರಾದ ಸುತ್ತಮುತ್ತ ನಾಯಿಕೊಡೆಗಳ ಥರ ತಲೆಯೆತ್ತಿದ ಫ್ಯಾಕ್ಟರಿಗಳಿಂದ ಹೊಮ್ಮಿದ ಕಲುಷಿತ ಹೊಗೆ ಕಣಗಳು ತಾಜಮಹಲ್ ಗುಮ್ಮಟದ ಮೇಲೆ ಕುಳಿತು ಅದರ ಹೊಳಪನ್ನು ಕುಂದಿಸುತ್ತಿದೆ ಎಂಬ ಪತ್ರಿಕಾ ವರದಿ ಬಂದಿದ್ದೇ ಇದಕ್ಕೆ ಕಾರಣವಾಗಿತ್ತು. ಅದ್ಯಾವ ಅಧಿಕಾರಿ ಮಂಡೆಯಲ್ಲಿ ಫೋಟೋಗ್ರಫಿ ನಿಷೇಧಿಸುವುದರಿಂದ ಹೊಗೆ ಕಣಗಳು ಕುಳಿತುಕೊಳ್ಳುವದನ್ನು ತಡೆಯಬಹುದು ಎಂದು ಅನಿಸಿತೋ ಏನೋ? ಅಲ್ಲಿನ ಆಡಳಿತ ಅಂಥ ಅವಿವೇಕಿ ಕ್ರಮಕ್ಕೆ ಮುಂದಾಗಿತ್ತು. ಆದರೆ ಸಾರ್ವಜನಿಕ ಒತ್ತಾಯದ ಮೇರೆಗೆ ಆ ನಿಷೇಧವನ್ನು ವಾಪಸ್ ಪಡೆಯಲಾಯಿತು. ಇಂದಿಗೂ ಇಂಥ ಹುಚ್ಚು ನಿರ್ಧಾರಗಳು ಪ್ರವಾಸೋದ್ಯಮಕ್ಕೆ ಕಂಟಕವಾಗುತ್ತಿರುವುದು ಸುಳ್ಳಲ್ಲ.

‘ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ’ ಹಾಕುವ ಅವಿವೇಕದ ನಿರ್ಧಾರಗಳನ್ನು ಸರಕಾರದ ಅಧಿಕಾರಿಗಳು ಬಿಡಬೇಕು. ಪ್ರವಾಸೋದ್ಯಮ ನೀತಿಗಳನ್ನು ರೂಪಿಸುವಾಗ, ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸರಕಾರ ಪ್ರವಾಸೋದ್ಯಮ ಕ್ಷೇತ್ರ, ಸ್ಥಳೀಯ ಸಮುದಾಯಗಳು ಮತ್ತು ಪರಿಸರವಾದಿಗಳೊಂದಿಗೆ ಸಮಾಲೋಚಿಸಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ‘ನಿಷೇಧ’ ಪರಿಹಾರ ಅಲ್ಲ. ಇದು ಪ್ರವಾಸಿಗರ ಮೇಲೆ ಬೀಸುವ ಪ್ರಹಾರ.

ಯಾವುದೋ ಜಲಪಾತದಲ್ಲಿ ಈಜಲು ಹೋದ ಒಬ್ಬಿಬ್ಬರು ಮುಳುಗಿ ಹೋಗಿ ಅನಾಹುತವಾದರೆ, ಜಲಪಾತ ವೀಕ್ಷಣೆಗೇ ನಿಷೇಧ ಹೇರುವುದು ಮೂರ್ಖತನದ ನಿರ್ಧಾರ. ಅದರ ಬದಲು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಜಾಣತನ. ಎಲ್ಲೆಡೆ ಎಚ್ಚರಿಕೆ ಫಲಕಗಳನ್ನು ನಿಲ್ಲಿಸುವುದು, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದು, ಪ್ರವಾಸಿಗರ ಸಂಖ್ಯೆಯನ್ನು ಮಿತಿಗೊಳಿಸುವುದು, ಅಪಾಯಕಾರಿ ಎನಿಸುವ ತಾಣಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು, ಪ್ರವಾಸಿಗರಲ್ಲಿ ಅರಿವು ಮೂಡಿಸುವುದು ಮುಖ್ಯ. ಸೂರ್ಯಗ್ರಹಣ ಆದಾಗ ಅದನ್ನು ಬರಿಗಣ್ಣಿನಿಂದ ನೋಡುವ ಅಪಾಯದ ಬಗ್ಗೆ, ಸುರಕ್ಷಿತವಾಗಿ ನೋಡುವ ಬದಲಿ ಕ್ರಮದ ಬಗ್ಗೆ ತಿಳಿಸಬೇಕೇ ಹೊರತು, ನೋಡಲೇಬಾರದು ಎಂದು ನಿಷೇಧ ಹೇರಿದರೆ ಹೇಗೆ? ಜಲಪಾತ ವೀಕ್ಷಣೆಗೂ ಈ ಮಾತು ಅನ್ವಯ.

ಸೆಲ್ಫಿ ತೆಗೆಯಲು ಹೋಗಿ ಹಲವಾರು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಆ ಕಾರಣ ನೀಡಿ ಸದ್ಯ ಮೊಬೈಲಿನಲ್ಲಿ selfie option ನ್ನೇ ತೆಗೆದು ಹಾಕುವ ಕ್ರಮಕ್ಕೆ ಸರಕಾರ ಮುಂದಾಗಿಲ್ಲವಲ್ಲ! ದಡ್ಡತನ, ಅವಿವೇಕಿ ನಿರ್ಧಾರಗಳೆಲ್ಲ ತನ್ನ ‘ಬೌದ್ಧಿಕ ಆಸ್ತಿ’ ಎಂದು ಸರಕಾರದ ಅಧಿಕಾರಿಗಳು ಭಾವಿಸುವುದನ್ನು ಇನ್ನಾದರೂ ನಿಲ್ಲಿಸಬೇಕು. ಪ್ರವಾಸಿಗರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವುದು ಅತ್ಯಗತ್ಯ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು, ಪ್ರವಾಸಿ ಪೊಲೀಸರನ್ನು ನಿಯೋಜಿಸುವುದು ಮತ್ತು ತುರ್ತು ಸೇವೆಗಳನ್ನು ಸುಧಾರಿಸುವುದು ಪ್ರವಾಸಿಗರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ಕೆಲವು ಜಲಪಾತ ವೀಕ್ಷಣೆಗೆ ಹೇರಿದ ನಿರ್ಬಂಧಗಳನ್ನು ಸರಕಾರ ತಕ್ಷಣ ಹಿಂತೆಗೆದುಕೊಳ್ಳಲಿ. ಸರಕಾರದ ನೀತಿಗಳು ಪ್ರವಾಸೋದ್ಯಮಕ್ಕೆ ಕಂಟಕವಾಗಬೇಕಾಗಿಲ್ಲ. ಸರಿಯಾದ ನೀತಿಗಳನ್ನು ರೂಪಿಸಿದರೆ, ಅವು ಪ್ರವಾಸೋದ್ಯಮದ ಬೆಳವಣಿಗೆಗೆ ಮತ್ತು ಸುಸ್ಥಿರತೆಗೆ ಯಶಸ್ಸಿನ ಮೆಟ್ಟಿಲುಗಳಾಗಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?