Saturday, April 18, 2026
Saturday, April 18, 2026

ಭಾರತದ ಪ್ರವಾಸೋದ್ಯಮಕ್ಕಿದೆ ಬೃಹತ್ ಭವಿಷ್ಯ – ಅಧ್ಯಯನಶೀಲ ಯೋಜನೆಗಳು ಅಗತ್ಯ

2030ರ ವೇಳೆಗೆ ಭಾರತದ ಪ್ರವಾಸೋದ್ಯಮದ ಸ್ವರೂಪದಲ್ಲಿ ಮಹತ್ತರ ಬದಲಾವಣೆ ಕಾಣಬಹುದು. ಹಿಂದಿನ ದಿನಗಳಲ್ಲಿ ಪ್ರವಾಸಿಗರು ಸ್ಮಾರಕಗಳು, ಪುರಾತನ ಕಟ್ಟಡಗಳು ಅಥವಾ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರಯಾಣಿಸುತ್ತಿದ್ದರು. ಆದರೆ ಈಗಿನ ಪ್ರವಾಸಿಗರು ಕೇವಲ ನೋಡುವುದಕ್ಕಿಂತ, ಆ ಸ್ಥಳದ ಇತಿಹಾಸ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಅನುಭವಿಸಲು ಬಯಸುತ್ತಿದ್ದಾರೆ.

ಕೆ ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು , ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘ (ರಿ)

--

ಭಾರತದ ಪ್ರವಾಸೋದ್ಯಮವು ಈಗ ಕೇವಲ ಗಮ್ಯಸ್ಥಾನಗಳ ಪರಿಚಯವಲ್ಲ; ಅದು ಮಾನವ ಸ್ಪರ್ಶ ಕಾಣದ ಪ್ರದೇಶಗಳ ಅನುಭವವನ್ನು ಆರ್ಥಿಕತೆಯಾಗಿ ರೂಪಿಸುವ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ. ಇದು ಹೊಸ ತಲೆಮಾರಿನ ಉದ್ಯಮಿಗಳಿಗೆ ಅಪಾರ ಅವಕಾಶಗಳನ್ನು ತೆರೆದಿಡುತ್ತದೆ. ಈ ಅವಕಾಶಗಳನ್ನು ಸಮರ್ಪಕವಾಗಿ ಬಳಸಲು ಪ್ರಾದೇಶಿಕ ಮಟ್ಟದಲ್ಲಿ ಬಲವಾದ ಬೆಂಬಲ, ಮೂಲಸೌಕರ್ಯ ಮತ್ತು ನೀತಿ, ಸಹಕಾರ ಅಗತ್ಯವಾಗಿದೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಿದೆ. ಸುಮಾರು 143 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ, ಯುವಜನರ ಪ್ರಮಾಣ ಹೆಚ್ಚು ಇರುವುದರಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಮಾರುಕಟ್ಟೆ ಸಿಗುತ್ತಿದೆ. 65% ಕ್ಕಿಂತ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವುದು, ಅನುಭವಾಧಾರಿತ ಪ್ರವಾಸಕ್ಕೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತಿದೆ. ಮಧ್ಯಮ ವರ್ಗದ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದರಿಂದ ದೇಶೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ ದೊರೆಯುತ್ತಿದೆ. ಭಾರತವು ಇನ್ನು ಕೇವಲ ಪ್ರವಾಸಿಗರು ಭೇಟಿ ನೀಡುವ ದೇಶ ಮಾತ್ರವಲ್ಲ. ಅದು ವಿಶ್ವದ ಅತ್ಯಂತ ಶಕ್ತಿಶಾಲಿ ಅನುಭವ ಆರ್ಥಿಕತೆಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಪ್ರವಾಸವು ಈಗ “ಯಾವ ಸ್ಥಳಕ್ಕೆ ಹೋಗಬೇಕು?” ಎಂಬ ಪ್ರಶ್ನೆಯಿಂದ “ಯಾವ ಅನುಭವವನ್ನು ಪಡೆಯಬೇಕು?” ಎಂಬ ಹೊಸ ಚಿಂತನೆಯತ್ತ ಸಾಗುತ್ತಿದೆ.

ಇದನ್ನೂ ಓದಿ: ಅಳುವ ಮಗುವಿಗೆ ಹೊಟ್ಟೆತುಂಬ ಹಾಲು : ಕರ್ನಾಟಕ ರಾಜ್ಯ ಬಜೆಟ್ 2026–27

2030ರ ವೇಳೆಗೆ ಭಾರತದ ಪ್ರವಾಸೋದ್ಯಮದ ಸ್ವರೂಪದಲ್ಲಿ ಮಹತ್ತರ ಬದಲಾವಣೆ ಕಾಣಬಹುದು. ಹಿಂದಿನ ದಿನಗಳಲ್ಲಿ ಪ್ರವಾಸಿಗರು ಸ್ಮಾರಕಗಳು, ಪುರಾತನ ಕಟ್ಟಡಗಳು ಅಥವಾ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರಯಾಣಿಸುತ್ತಿದ್ದರು. ಆದರೆ ಈಗಿನ ಪ್ರವಾಸಿಗರು ಕೇವಲ ನೋಡುವುದಕ್ಕಿಂತ, ಆ ಸ್ಥಳದ ಇತಿಹಾಸ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಅನುಭವಿಸಲು ಬಯಸುತ್ತಿದ್ದಾರೆ.

ಇದರಿಂದಾಗಿ “Sightseeing” ಸಂಪ್ರದಾಯ ನಿಧಾನವಾಗಿ “Story-living” (ಅಜ್ಜಿಯ ಕಥೆಗಳಂತೆ ಅನುಭವಿಸುವ ಮಾದರಿ) ಯತ್ತ ತಿರುಗುತ್ತಿದೆ. ರಾತ್ರಿ ವೇಳೆ ಪರಂಪರೆ ಪ್ರವಾಸ (Night Heritage Walk), ಸ್ಥಳೀಯ ಮಾರ್ಗದರ್ಶಕರ ಕಥನ, ಸಂಸ್ಕೃತಿಯ ನೈಜ ಅನುಭವ, ತಂತ್ರಜ್ಞಾನ ಸಹಾಯದಿಂದ Augmented Reality ಮೂಲಕ ಇತಿಹಾಸವನ್ನು ಜೀವಂತಗೊಳಿಸುವಂತಹ ಹೊಸ ಪ್ರಯತ್ನಗಳು ಹೆಚ್ಚಾಗುತ್ತಿವೆ. ಪ್ರವಾಸವು ಕೇವಲ ವೀಕ್ಷಣೆಯಲ್ಲ, ಅದು ಭಾವನೆಗಳೊಂದಿಗೆ ಸಂವಹನವಾಗುತ್ತಿದೆ.

ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ಕೇವಲ ದೊಡ್ಡ ನಗರಗಳಲ್ಲಿ ಮಾತ್ರ ಸೀಮಿತವಾಗಿರುವುದಿಲ್ಲ, ಗ್ರಾಮೀಣ ಪ್ರದೇಶಗಳು ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿವೆ. ಅದರಲ್ಲೂ ಆಧ್ಯಾತ್ಮಿಕ ಪ್ರವಾಸೋದ್ಯಮವು ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿದೆ. ವಿಶ್ವದ ವಿವಿಧ ದೇಶಗಳಿಂದ ಜನರು ಶಾಂತಿ, ಧ್ಯಾನ ಮತ್ತು ಆತ್ಮಶೋಧನೆಗಾಗಿ ಭಾರತಕ್ಕೆ ಬರುತ್ತಿದ್ದಾರೆ. ವಾರಾಣಸಿ, ಋಷಿಕೇಶ, ಬೋಧಗಯಾ ಮುಂತಾದ ಸ್ಥಳಗಳು ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆಯುತ್ತಿವೆ. ಯೋಗ ಮತ್ತು ಧ್ಯಾನ ಸಂಸ್ಕೃತಿ ಭಾರತವನ್ನು ವಿಶ್ವದ ಆತ್ಮೀಯ ಕೇಂದ್ರವನ್ನಾಗಿ ರೂಪಿಸುತ್ತಿದೆ.

ತಂತ್ರಜ್ಞಾನವು ಪ್ರವಾಸೋದ್ಯಮದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನವು ಪ್ರವಾಸ ಯೋಜನೆಗಳನ್ನು ಹೆಚ್ಚು ವೈಯಕ್ತಿಕಗೊಳಿಸುತ್ತದೆ. ಪ್ರವಾಸಿಗರ ಆಸಕ್ತಿ, ವೆಚ್ಚ ಸಾಮರ್ಥ್ಯ ಮತ್ತು ಸಮಯದ ಆಧಾರದ ಮೇಲೆ ಸ್ಮಾರ್ಟ್ ಐಟನರರಿ, ಪೂರ್ವಾನುಮಾನ ಆಧಾರಿತ ಸಲಹೆಗಳು ಮತ್ತು ಸುಲಭ ಬುಕ್ಕಿಂಗ್ ವ್ಯವಸ್ಥೆಗಳು ಸಾಧ್ಯವಾಗುತ್ತವೆ.

Untitled design - 2026-04-17T230342.957

ಪರಿಸರ ಸ್ನೇಹಿ ಮತ್ತು ಜವಾಬ್ದಾರಿಯುತ ಪ್ರವಾಸ ಈಗ ಅನಿವಾರ್ಯವಾಗಿದೆ. ಇಕೊ–ಟೂರಿಸಂ, ಗ್ರಾಮೀಣ ಹೋಂಸ್ಟೇ, ಸ್ಥಳೀಯ ಸಮುದಾಯ ಆಧಾರಿತ ಪ್ರವಾಸ ಮಾದರಿಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಪ್ರವಾಸಿಗರು ಈಗ ಐಶಾರಾಮಿ ಸೌಲಭ್ಯಕ್ಕಿಂತ ಅರ್ಥಪೂರ್ಣ ಅನುಭವ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಪ್ರಯಾಣವನ್ನು ಆಯ್ಕೆ ಮಾಡುತ್ತಿದ್ದಾರೆ.

ಭಾರತದ ಪ್ರವಾಸೋದ್ಯಮದ ಭವಿಷ್ಯವು ಇತರ ದೇಶಗಳೊಂದಿಗೆ ಸ್ಪರ್ಧಿಸುವುದಲ್ಲ. ಜಗತ್ತಿನಲ್ಲಿ ಬೇರೆ ಯಾರೂ ನೀಡಲಾರದಂಥ ವೈವಿಧ್ಯಮಯ ಸಂಸ್ಕೃತಿ, ಪರಂಪರೆ, ಆಹಾರ ಪದ್ಧತಿ, ಭಾಷೆಗಳು, ಹಬ್ಬಗಳು ಮತ್ತು ಆಧ್ಯಾತ್ಮಿಕತೆಯ ಅನುಭವವನ್ನು ನೀಡುವ ಸಾಮರ್ಥ್ಯವೇ ಭಾರತದ ದೊಡ್ಡ ಶಕ್ತಿ.

ಈ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಯಶಸ್ವಿಯಾಗುವವರು ಕೇವಲ ಪ್ರವಾಸ ಏಜೆನ್ಸಿಗಳು ಅಥವಾ ಹೊಟೇಲ್ ಸಂಸ್ಥೆಗಳು ಮಾತ್ರವಲ್ಲ. ಅನುಭವ ಸೃಷ್ಟಿಕರ್ತರು, ತಂತ್ರಜ್ಞಾನ ಆಧಾರಿತ ಪ್ರವಾಸ ವೇದಿಕೆಗಳು, ಸ್ಥಳೀಯ ಕಥನಕಾರರು, ಗ್ರಾಮೀಣ ಉದ್ಯಮಿಗಳು ಮತ್ತು ಪರಿಸರ ಸಂರಕ್ಷಣೆಯತ್ತ ಬದ್ಧರಾಗಿರುವ ನವೋದ್ಯಮಿಗಳು ಪ್ರಮುಖ ಪಾತ್ರವಹಿಸಲಿದ್ದಾರೆ.

ಪ್ರವಾಸ, ಆತಿಥ್ಯ, ಸಾರಿಗೆ ಮತ್ತು ಸೇವಾ ವಲಯದ ಉದ್ಯಮಿಗಳಿಗೆ ಮುಂದಿನ ದಶಕವು ಅತ್ಯಂತ ಮಹತ್ವದ್ದಾಗಿದೆ. ಭಾರತದ ದೊಡ್ಡ ಜನಸಂಖ್ಯೆ, ಹೆಚ್ಚುತ್ತಿರುವ ಆದಾಯ ಮಟ್ಟ ಮತ್ತು ಯುವಜನರ ಆಸಕ್ತಿ — ಇವೆಲ್ಲವು ಪ್ರವಾಸೋದ್ಯಮವನ್ನು ಮತ್ತಷ್ಟು ಬಲಪಡಿಸಲಿವೆ.

ಈಗ ಪ್ರಶ್ನೆ “ಯಾಕೆ ಭಾರತಕ್ಕೆ ಭೇಟಿ ನೀಡಬೇಕು?” ಎಂಬುದಲ್ಲ. “ಭಾರತವನ್ನು ಎಷ್ಟು ಆಳವಾಗಿ ಅನುಭವಿಸಲು ನೀವು ಸಿದ್ಧರಾಗಿದ್ದೀರಿ?” ಎಂಬುದು..ಪರಿಚಯಿಸಲು ನಾವು ಸಿದ್ಧ .

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?