ಕೇರಳದ ಮಾನ್ಸೂನ್ ಟೂರಿಸಂ ಸೃಜನಶೀಲತೆಗೊಂದು ಮಾದರಿ
‘ಉಳಿದೆಲ್ಲ ಕಾಲಕ್ಕಿಂತ ಕೇರಳ ಮಳೆಗಾಲದಲ್ಲಿ ಹೆಚ್ಚು ಚೆಂದ’ ಎಂಬ ಜಾಹೀರಾತು ಫಲಕಗಳು ದೇಶದೆಲ್ಲೆಡೆ ರಾರಾಜಿಸಲಾರಂಭಿಸಿದವು. ಅಲ್ಲಿ ತನಕ ‘ಮಾನ್ಸೂನ್ ಟೂರಿಸಂ’ ಎಂಬ ಪದವನ್ನೇ ಯಾರೂ ಕೇಳಿರಲಿಲ್ಲ. ಮಾನ್ಸೂನ್ ಟೂರಿಸಂನ್ನು ಅನುಭವಿಸಬೇಕೆಂದರೆ ಅದಕ್ಕೆ ಪ್ರಶಸ್ತ ಸ್ಥಳ ಕೇರಳ ಎಂಬ ಕ್ಯಾಂಪೇನುಗಳನ್ನು ಮಾಡಲಾಯಿತು.
Creativity is seeing what everyone else has seen and thinking what no one else has thought.
- Albert Einstein
ಕೇರಳ ಪ್ರವಾಸೋದ್ಯಮ ಚಿಂತಾಕ್ರಾಂತವಾಗಿತ್ತು. ವರ್ಷದ ಎಂಟು ತಿಂಗಳು ದೇಶ ಮತ್ತು ವಿಶ್ವದೆಲ್ಲೆಡೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ನಾಲ್ಕು ತಿಂಗಳು ಮಾತ್ರ ಪ್ರವಾಸಿಗರೇ ಆಗಮಿಸುತ್ತಿರಲಿಲ್ಲ. ಕಾರಣ ಇಷ್ಟೇ - ಮಳೆ, ಮಳೆ ಮತ್ತು ಮಳೆ ! ಒಮ್ಮೆ ಮಳೆಗಾಲ ಶುರುವಾದರೆ ಸಾಕು, ಅದು ಮುಗಿಯುವವರೆಗೆ ಪ್ರವಾಸಿಗರು ಕೇರಳದತ್ತ ಸುಳಿಯುತ್ತಿರಲಿಲ್ಲ. ವರ್ಷದ ಎಂಟು ತಿಂಗಳು ಗಳಿಸಿದ್ದು ಆ ನಾಲ್ಕು ತಿಂಗಳಲ್ಲಿ ಕರಗಿ ಹೋಗುವಂಥ ಸ್ಥಿತಿ. ಯಾವುದೇ ಉದ್ಯಮವಾದರೂ ಸತತ ನಾಲ್ಕು ತಿಂಗಳು ಬಕ್ಕಬೋರಲಾದರೆ, ಆರ್ಥಿಕ ಹೊರೆಯ ಹೊಡೆತವನ್ನು ತಡೆದುಕೊಳ್ಳುವುದು ಕಷ್ಟ. ಇದಕ್ಕೊಂದು ಪರಿಹಾರವನ್ನು ಕೇರಳ ಕಂಡುಕೊಳ್ಳಲೇ ಬೇಕಿತ್ತು.
'ದೇವರ ಸ್ವಂತ ನಾಡು' ಎಂದು ಕರೆಯಿಸಿಕೊಂಡಿದ್ದ ಪ್ರವಾಸಿಗರ ಸ್ವರ್ಗಕ್ಕೆ ಉಪಮೆಯಾಗಿದ್ದ ಕೇರಳ, ಯೋಗ, ಆಯುರ್ವೇದ, ಆತಿಥ್ಯ (ಹಾಸ್ಪಿಟಾಲಿಟಿ) ಹಾಗೂ ಪ್ರತಿಷ್ಠಿತ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದರೂ, ನಾಲ್ಕು ತಿಂಗಳು ಯಾವ ಬಿಜಿನೆಸ್ ಇಲ್ಲದೇ ಗರಬಡಿದವರಂತೆ ಸುಮ್ಮನೆ ಕುಳಿತಿರುತ್ತಿತ್ತು. 'ಧೋ' ಎಂದು ಸುರಿಯುವ ಕೇರಳದ ಮಳೆಗೆ ಹೆದರಿ ಯಾರೂ ಅತ್ತ ತಲೆ ಹಾಕುತ್ತಿರಲಿಲ್ಲ. ಒಂದೆಡೆ ಎಂಟು ತಿಂಗಳು ತೀವ್ರ ಚಟುವಟಿಕೆ, ಇನ್ನೊಂದೆಡೆ ನಾಲ್ಕು ತಿಂಗಳು ಸ್ಮಶಾನ ಮೌನ. ಇವರೆಡರ ಮಧ್ಯೆ ಒಂದು ಸಮತೋಲನ ಸಾಧಿಸಲೇಬೇಕಿತ್ತು.
ಆಗ ಕೇರಳದ ಪ್ರವಾಸೋದ್ಯಮ ಕಾರ್ಯದರ್ಶಿಯಾಗಿದ್ದ ಅಮಿತಾಬ್ ಕಾಂತ್ ಎನ್ನುವ ಐಎಎಸ್ ಅಧಿಕಾರಿ, ಕೇರಳ ಪ್ರವಾಸೋದ್ಯಮಕ್ಕೆ ಯಾವುದೋ ಶಾಪವಾಗಿ ಪರಿಣಮಿಸಿದೆಯೋ ಅದನ್ನೇ ವರವಾಗಿ ಪರಿವರ್ತಿಸಲು ನಿರ್ಧರಿಸಿದರು. ಕೇರಳದ ಮಳೆಗೆ ಹೆದರಿ, ಯಾವ ನಾಲ್ಕು ತಿಂಗಳು ಪ್ರವಾಸಿಗರು ಮುಖ ಹಾಕುತ್ತಿರಲಿಲ್ಲವೋ, ಆ ಅವಧಿಯಲ್ಲಿಯೇ ಹೆಚ್ಚು ಪ್ರವಾಸಿಗರು ಬರುವಂತೆ ಮಾಡುವುದು ಹೇಗೆ ಎಂದು ಅವರು ಯೋಚಿಸುತ್ತಿದ್ದರು. ಕಳೆದುಕೊಂಡ ಜಾಗದಲ್ಲಿಯೇ ಅವರು ಹುಡುಕಲು ಹೊರಟಿದ್ದರು.

ಆಗ ಹುಟ್ಟಿಕೊಂಡಿದ್ದೇ ‘ಮಾನ್ಸೂನ್ ಪ್ರವಾಸೋದ್ಯಮ’!
ಮಳೆಗಾಲದಲ್ಲಿಯೇ ಹೆಚ್ಚು ಪ್ರವಾಸಿಗರನ್ನು ಸೆಳೆಯುವುದು ಹೇಗೆ ಎಂಬ ಕಾರ್ಯತಂತ್ರವನ್ನು ಕೇರಳ ಪ್ರವಾಸೋದ್ಯಮ ಹೆಣೆಯಿತು. ಸಾಮಾನ್ಯವಾಗಿ ಮಳೆಗಾಲದ ಸಮಯ ಪ್ರವಾಸಕ್ಕೆ ಅನುಕೂಲಕರ ಕಾಲವಲ್ಲ ಎನ್ನುವ ಅಭಿಪ್ರಾಯವಿದೆ. ಆದರೆ, ಕೇರಳದ ಪ್ರವಾಸೋದ್ಯಮ ಇಲಾಖೆ ಈ ಕಾಲದಲ್ಲಿಯೇ ಪ್ರಕೃತಿಯ ವಿಭಿನ್ನ ರಂಗುಗಳನ್ನು ಪ್ರದರ್ಶಿಸಲು ಪ್ರಯತ್ನಿಸಿ, ಮಳೆಗಾಲವನ್ನೇ ಪ್ರವಾಸೋದ್ಯಮದ ತಾಕತ್ ಆಗಿಸಲು ತೀರ್ಮಾನಿಸಿತು. ಯಾವುದಕ್ಕೆ ಹೆದರಿ ಪ್ರವಾಸಿಗರು ಕೇರಳದತ್ತ ಸುಳಿಯುತ್ತಿರಲಿಲ್ಲವೋ, ಅದೇ ಕಾರಣಕ್ಕೆ ಕೇರಳವನ್ನು ಹುಡುಕಿಕೊಂಡು ಬರುವಂತೆ ಮಾಡಲು ಅವರು ನಿರ್ಧರಿಸಿದರು.
ಕೇರಳದಲ್ಲಿ ಜೂನ್ ತಿಂಗಳಲ್ಲಿ ನೈರುತ್ಯ ಮಾನ್ಸೂನ್ (South-West Monsoon) ಪ್ರಾರಂಭವಾಗುತ್ತದೆ. ಅದಾದ ಬಳಿಕ ನದಿಗಳು, ಜಲಪಾತಗಳು, ಕೆರೆ, ಸರೋವರಗಳು ತುಂಬಿ, ಗುಡ್ಡ-ಬೆಟ್ಟಗಳು ಹಸಿರು ರಾಜಿಗಳಿಂದ ಕಂಗೊಳಿಸುತ್ತವೆ. ಪ್ರಕೃತಿ ಹೊಸ ಕಳೆಯಲ್ಲಿ ಕಂಗೊಳಿಸುತ್ತಾಳೆ. ಮಳೆಗಾಲದಲ್ಲಿ ಕೇರಳ ಹೊಸ ರೂಪವನ್ನು ಪಡೆಯುತ್ತದೆ. ಅದನ್ನು ನೋಡುವ ಸೊಬಗೇ ಸೊಬಗು. ‘ಮಳೆ ಸುರಿಯುವುದನ್ನು ನೋಡುವ ಅನನ್ಯ ಅನುಭವವನ್ನು ಸವಿಯಬೇಕೆಂದರೆ ಕೇರಳಕ್ಕೆ ಬನ್ನಿ’ ಎಂಬ ಸ್ಲೋಗನ್ ಗಳು ಹರಿಯಲಾರಂಭಿಸಿದವು.

‘ಉಳಿದೆಲ್ಲ ಕಾಲಕ್ಕಿಂತ ಕೇರಳ ಮಳೆಗಾಲದಲ್ಲಿ ಹೆಚ್ಚು ಚೆಂದ’ ಎಂಬ ಜಾಹೀರಾತು ಫಲಕಗಳು ದೇಶದೆಲ್ಲೆಡೆ ರಾರಾಜಿಸಲಾರಂಭಿಸಿದವು. ಅಲ್ಲಿ ತನಕ ‘ಮಾನ್ಸೂನ್ ಟೂರಿಸಂ’ ಎಂಬ ಪದವನ್ನೇ ಯಾರೂ ಕೇಳಿರಲಿಲ್ಲ. ಮಾನ್ಸೂನ್ ಟೂರಿಸಂನ್ನು ಅನುಭವಿಸಬೇಕೆಂದರೆ ಅದಕ್ಕೆ ಪ್ರಶಸ್ತ ಸ್ಥಳ ಕೇರಳ ಎಂಬ ಕ್ಯಾಂಪೇನುಗಳನ್ನು ಮಾಡಲಾಯಿತು. ‘ಮಳೆಗಾಲವೆಂದು ಎಲ್ಲೂ ಹೋಗದೇ ಮನೆಯಲ್ಲಿ ಕುಳಿತಿರಬೇಡಿ. ಮಳೆ ಸುರಿಯುವುದನ್ನು ನೋಡುವುದಕ್ಕಾಗಿ ಕೇರಳಕ್ಕೆ ಬನ್ನಿ. ಅಂಥ ಅವಕಾಶ ಮತ್ತು ದೃಶ್ಯ ನಿಮಗೆ ಮತ್ತೆಲ್ಲೂ ಸಿಗಲಿಕ್ಕಿಲ್ಲ’ ಎಂಬ ಅಭಿಯಾನ ಜನರಲ್ಲಿ ತೀವ್ರ ಕುತೂಹಲ ಹುಟ್ಟಿಸಿದವು.
ಮಳೆಗಾಲದಲ್ಲಿ ಮುದುಡಿ ಕುಳಿತವರು ಕೇರಳದ ಕಡೆಗೆ ಮುಖ ಮಾಡಲಾರಂಭಿಸಿದರು. ಮಳೆ ಸುರಿಯುವುದಕ್ಕಿಂತ ಮುಂಚಿತವಾಗಿಯೇ ಕೇರಳ ಪ್ರವಾಸೋದ್ಯಮ, ಪ್ರವಾಸಿಗರ ಸ್ವಾಗತಕ್ಕೆ ಅಣಿಯಾಯಿತು. ಅಷ್ಟೇ ಅಲ್ಲ, ಆಯುರ್ವೇದ ಚಿಕಿತ್ಸೆಗೆ ಮಾನ್ಸೂನ್ ಅತ್ಯಂತ ಸೂಕ್ತ ಕಾಲ. ಈ ಅವಧಿಯಲ್ಲಿ ಶರೀರದ ವಾತ, ಪಿತ್ತ, ಕಫಗಳ ಸಮತೋಲನವನ್ನು ಸುಧಾರಿಸಲು ಆಯುರ್ವೇದ ಚಿಕಿತ್ಸೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಕೇರಳದ ಆಯುರ್ವೇದ ರೆಸಾರ್ಟ್‌ಗಳು ಹಾಗೂ ಆಸ್ಪತ್ರೆಗಳಿಗೆ ಬಂದು ಮಳೆಗಾಲದಲ್ಲಿ ವಿಶೇಷ ತಜ್ಞರ ಮಾರ್ಗದರ್ಶನದಲ್ಲಿ ‘ಪಂಚಕರ್ಮ’, ‘ಅಭ್ಯಂಗ‘, ‘ಶಿರೋಧಾರ’ ಮುಂತಾದ ಚಿಕಿತ್ಸಾ ಪ್ಯಾಕೇಜುಗಳನ್ನು ಪಡೆದುಕೊಂಡು ಹೊಸ ಚೇತನ ಪಡೆದುಕೊಳ್ಳಿ ಎಂದು ಪ್ರಚಾರ ಮಾಡಲಾಯಿತು. ಮಳೆಗಾಲದಲ್ಲಿ ಗಿರಾಕಿಗಳಿಲ್ಲದೇ ಸೊರಗುತ್ತಿದ್ದ ಆಯುರ್ವೇದ ಚಿಕಿತ್ಸಾಲಯಗಳೆಲ್ಲ, ಮಳೆ ಸುರಿಯುವ ಮೊದಲೇ ತುಂಬಲಾರಂಭಿಸಿದವು.
ಕೇರಳದಲ್ಲಿ ಮಳೆಗಾಲದ ಪ್ರವಾಸಿಗರ ಅನುಭವವನ್ನು ಇನ್ನಷ್ಟು ಹಸಿರಾಗಿಸಲು ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ವಿಶೇಷ ಪ್ಯಾಕೇಜುಗಳನ್ನು ಘೋಷಿಸಲಾರಂಭಿಸಿದವು. ಉದಾಹರಣೆಗೆ, ಮಳೆಗಾಲ ಋತುಚಕ್ರ ಪ್ಯಾಕೇಜುಗಳು, ‘ರೈನ್ ಸ್ಟೇಸ್’, ‘ಹಿಲ್ಸ್ ಅಂಡ್ ಫಾಲ್ಸ್ ಟೂರ್’, ‘ಬ್ಯಾಕ್‌ವಾಟರ್ ಹೌಸ್‌ಬೋಟ್ ಎಕ್ಸ್‌ಪೀರಿಯನ್ಸ್’ ಮುಂತಾದ ಆಫರ್‌ಗಳನ್ನುಪ್ರವಾಸಿಗರಿಗೆ ನೀಡಲಾಯಿತು. ಇದರಿಂದ ಪ್ರವಾಸಿಗರಿಗೆ ಮಳೆಯ ದೃಶ್ಯಗಳನ್ನು ಸುರಕ್ಷಿತವಾಗಿ, ಸಂತಸದಾಯಕವಾಗಿ, ಆರಾಮಾಗಿ ಅನುಭವಿಸುವ ಹೊಸ ಅವಕಾಶ ತೆರೆದುಕೊಳ್ಳಲಿದೆ ಎಂಬುದನ್ನು ಬಿತ್ತಲಾಯಿತು.
ಕೇರಳದಲ್ಲಿ ಮಳೆಗಾಲದ ಸಮಯದಲ್ಲಿ ಹಲವು ಸಾಂಸ್ಕೃತಿಕ ಹಬ್ಬಗಳು ನಡೆಯುತ್ತವೆ. ಆ ಪೈಕಿ ವಿಶೇಷವಾಗಿ ಒಣಂ ಬಹುಮುಖ್ಯ. ಇದು ಕೇರಳದ ಸಮೃದ್ಧಿ, ಸಂಪತ್ತು ಮತ್ತು ಸಂಭ್ರಮವನ್ನು ಪ್ರತಿಬಿಂಬಿಸುವ ಹಬ್ಬ. ಈ ಹಬ್ಬದ ಸಮಯದಲ್ಲಿ ಪ್ರವಾಸಿಗರಿಗೆ ಕೇರಳದ ನೃತ್ಯ, ಸಂಗೀತ, ಭೋಜನ, ವಸ್ತ್ರ ಸಂಸ್ಕೃತಿ ಮೊದಲಾದವುಗಳನ್ನು ಪ್ರದರ್ಶಿಸುವ ಯೋಜನೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಪರಿಣಾಮಕಾರಿಯಾಗಿ ರೂಪಿಸಲಾಯಿತು. ನವತ್ರ, ಅಥಚ್ಚಾಮ್, ಪುಲಿಕಲಿ ಮುಂತಾದ ಹಬ್ಬಗಳಲ್ಲಿ ಪಾಲ್ಗೊಳ್ಳುವ, ನೋಡುವ ಅವಕಾಶವನ್ನು ಪ್ರವಾಸಿಗರಿಗೆ ಒದಗಿಸಲಾಯಿತು. ಮಳೆಗಾಲದ ಆಕರ್ಷಣೆಯ ಜತೆಗೆ ಇವೆಲ್ಲವುಗಳನ್ನೂ ಅಚ್ಚುಕಟ್ಟಾಗಿ ಜೋಡಿಸಲಾಯಿತು. ಇವೆಲ್ಲವೂ ಕೇವಲ ಮಳೆಗಾಲದಲ್ಲಿ ಸಾಧ್ಯ ಎಂಬ ಕಲ್ಪನೆಯನ್ನು ಜನರ ಮನದಲ್ಲಿ ಮೂಡಿಸಲಾಯಿತು.
ಮಳೆಗಾಲದ ಪ್ರವಾಸೋದ್ಯಮ ಪರಿಸರವನ್ನು ಹಾಳು ಮಾಡುವ ಬದಲು ಸಂರಕ್ಷಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎಂಬ ವಾದವನ್ನು ಜನರ ಮನಸ್ಸಿನಲ್ಲಿ ಗಟ್ಟಿಗೊಳಿಸಲಾಯಿತು. ಮಳೆಗಾಲದಲ್ಲಿ ಬರುವ ಪ್ರವಾಸಿಗರು ಸಾಮಾನ್ಯವಾಗಿ ಪ್ರಕೃತಿ ಪ್ರಿಯರು. ಅವರು ಜಂಗಲ್ ಚಾರಣ, ಪುಟ್ಟ ಹಳ್ಳಿಗಳ ವೀಕ್ಷಣಾ ಪ್ರವಾಸ, ಮಳೆ ನೃತ್ಯ, ಹಸಿರು ಬೆಟ್ಟಗಳಲ್ಲಿ ನೆನೆದು ಫೋಟೋ ಶೂಟ್ ಮುಂತಾದ ಸಾಂದರ್ಭಿಕ ಕಾರ್ಯಕ್ರಮಗಳಲ್ಲಿ ತೊಡಗುತ್ತಾರೆ. ಇದರಿಂದ ಪರಿಸರ ಹಾನಿ ಕಡಿಮೆಯಾಗುತ್ತದೆ ಮತ್ತು ಸ್ಥಳೀಯ ಜನರಿಗೆ ಜವಾಬ್ದಾರಿಯುತ ಪ್ರವಾಸೋದ್ಯಮದ ಅರಿವುಂಟಾಗುತ್ತದೆ ಎಂಬ ಸೂಕ್ಷ್ಮ ಸಂಗತಿಗಳನ್ನು ಮನವರಿಕೆ ಮಾಡಿಕೊಡಲಾಯಿತು.
ಕೇರಳ ರಾಜ್ಯದ ಒಟ್ಟೂ ಜಿಡಿಪಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆ ಶೇ.16ರಷ್ಟು. ಆದರೆ, ಹಿಂದಿನ ವರ್ಷಗಳಲ್ಲಿ ಮಳೆಗಾಲದ ಪ್ರವಾಸಿಗರ ಸಂಖ್ಯೆ ಕಡಿಮೆ ಇರುವುದು ಒಂದು ಸವಾಲಾಗಿತ್ತು. ಮಾನ್ಸೂನ್ ಪ್ರವಾಸೋದ್ಯಮದ ಮೂಲಕ offseason ಅನ್ನು profitable season ಆಗಿ ಮಾರ್ಪಡಿಸಲಾಗಿದೆ. ಖಾಸಗಿ ವಲಯ, ಸರಕಾರಿ ಪ್ರವಾಸೋದ್ಯಮ ಇಲಾಖೆ ಮತ್ತು ಸ್ಥಳೀಯ ಜನತೆ - ಎಲ್ಲರೂ ಸಾಂಘಿಕವಾಗಿ ಮಾನ್ಸೂನ್ ಪ್ರವಾಸೋದ್ಯಮವನ್ನು ಉತ್ತೇಜಿಸುವಂತೆ, rebrand ಮಾಡುವಂತೆ, ಮಾಡಿದ ಒಟ್ಟೂ ಪ್ರಯತ್ನ ಚಮತ್ಕಾರಿಕ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಿತು. ಮಳೆಗಾಲದಲ್ಲಿ ಪ್ರವಾಸೋದ್ಯಮವನ್ನು ಮೇಲೆತ್ತದಿದ್ದರೆ ಯಾರಿಗೂ ಉಳಿಗಾಲವಿರಲಿಲ್ಲ. 2010ಕ್ಕಿಂತ ಮೊದಲು ಕೇರಳಕ್ಕೆ ಮಳೆಗಾಲದಲ್ಲಿ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.60 ರಷ್ಟು ಇಳಿಕೆ ಕಂಡು ಬರುತ್ತಿತ್ತು. ಆದರೆ 2015 ರ ನಂತರ ಮಳೆಗಾಲದಲ್ಲಿ ಬರುವ ಪ್ರವಾಸಿಗರ ಆಗಮನದಲ್ಲಿ ಶೇ.15 ರಷ್ಟು ಹೆಚ್ಚಳ ಕಂಡುಬಂದಿದೆ. ಇದರಿಂದ ಹೋಟೆಲ್ ಉದ್ಯಮ, ಗೈಡ್ ಸೇವೆಗಳು, ಆಯುರ್ವೇದ ಕೇಂದ್ರಗಳು, ಟ್ಯಾಕ್ಸಿ ಸೇವೆಗಳು, ಸ್ಥಳೀಯ ಕೃಷಿ ಉತ್ಪನ್ನಗಳ ಮಾರಾಟಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ಮಳೆಯ ಛಾಯೆಯಲ್ಲಿ ಹಸಿರಾಗಿ ಹೊಳೆಯುವ ಟೀ ತೋಟಗಳು, ತಂಪು ಗಾಳಿ, ಕಾಡುಗಳ ಮಧ್ಯೆ ಮೌಲಿಕ ಅನುಭವ ನೀಡುವ ಮುನ್ನಾರ್, ಹೌಸ್‌ಬೋಟ್‌ನಲ್ಲಿ ಹಿನ್ನೀರಿನಲ್ಲಿ ಮಳೆಯ ಕಲ್ಪನೆಯನ್ನು ಅರಳಿಸುವ ಅಲೆಪ್ಪಿ, ಮಳೆ ಸುರಿಯುವ ಪ್ರಾಕೃತಿಕ ಅಭಯಾರಣ್ಯದಲ್ಲಿ ಧ್ಯಾನಾಸಕ್ತ ವಾತಾವರಣ ನಿರ್ಮಿಸುವ ಥೆಕ್ಕಡಿ, ವಾಯನಾಡ್, ಕಡಲ ತೀರದಲ್ಲಿ ಮಳೆಯ ಮತ್ತು ಅಲೆಗಳ ಸಂಗಮವಾಗಿರುವ ವರ್ಕಲಾ ಬೀಚ್, ನದಿಯೇ ಜಲಪಾತವಾಗಿ ಸುರಿಯುವ ಅಥಿರಾಪಲ್ಲಿ ಜಲಪಾತಗಳು ಮಾನ್ಸೂನ್ ಪ್ರವಾಸೋದ್ಯಮಕ್ಕೆ ಬಾಸಿಂಗದಂತೆ ಆಕರ್ಷಣೆಗಳನ್ನು ಕಟ್ಟಿಕೊಡುತ್ತವೆ.
'ಮಳೆ ಎಲ್ಲೆಡೆಯೂ ಸುರಿಯುತ್ತದೆ. ಆದರೆ ಕೇರಳದಲ್ಲಿ ಸುರಿಯುವ ಮಳೆಯನ್ನು ನೋಡುವುದು ಇನ್ನಿಲ್ಲದ ಸೊಬಗು' ಎಂಬಂತೆ ಕೇರಳ ಪ್ರವಾಸೋದ್ಯಮ ಬಿಂಬಿಸಿರುವುದು ಮಾನ್ಸೂನ್ ಪ್ರವಾಸೋದ್ಯಮದ ಕಲ್ಪನೆಗೆ ಕಾಮನಬಿಲ್ಲಿನ ತೋರಣ ಕಟ್ಟಿದಂತಾಗಿದೆ. ಇದರಿಂದ ಮಳೆಯನ್ನು ನೋಡಬೇಕೆಂದರೆ ಪ್ರವಾಸಿಗರು ಕೇರಳಕ್ಕೆ ಬರುವಂತಾಗಿದೆ. ಮಳೆ ಸುರಿಯುವ ಸಹಜ ಪ್ರಾಕೃತಿಕ ಕ್ರಿಯೆಯೂ ಕೇರಳದಲ್ಲಿ ಒಂದು ದಿವ್ಯ ಅನುಭೂತಿಯನ್ನಾಗಿಸಲು ಅಲ್ಲಿನ ಪ್ರವಾಸೋದ್ಯಮ ಯಶಸ್ವಿಯಾಗಿದೆ.
ಮಾನ್ಸೂನ್ ಪ್ರವಾಸೋದ್ಯಮವು ಕೇರಳ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಒಂದು ವಿಶಿಷ್ಟ ಮತ್ತು ಬಹು ಅಪೇಕ್ಷಿತ ಪರಿವರ್ತನೆ ಮತ್ತು ಕ್ರಾಂತಿಯನ್ನು ಉಂಟು ಮಾಡಿರುವುದು ಸತ್ಯ. ಇದು ಕೇವಲ ಮಳೆಗಾಲದಲ್ಲಿ ಪ್ರವಾಸ ಮಾಡುವ ಅನುಭವವಷ್ಟೇ ಅಲ್ಲ, ಆರೋಗ್ಯ, ಪರಿಸರ, ಸಂಸ್ಕೃತಿ ಮತ್ತು ಆರ್ಥಿಕತೆಯ ಸಂತುಲಿತ ಸಂಯೋಜನೆಯಾಗಿದ್ದು, ಒಂದು ಅಪೂರ್ವ ಮ್ಯಾನೇಜಮೆಂಟ್ ಕಲಿಕೆ ಮತ್ತು ಶ್ರೇಷ್ಠತೆಯ ಮಾದರಿಯಾಗಿದೆ. ಪ್ರವಾಸೋದ್ಯಮ ನಿಂತ ನೀರಲ್ಲ. ಅದು ಕಾಲಕ್ಕೆ ತಕ್ಕಂತೆ, ಪ್ರವಾಸಿಗರ ಅಭಿರುಚಿಗೆ ತಕ್ಕಂತೆ, ವರ್ಷ ವರ್ಷ ಬದಲಾಗುವ ಮೊಬೈಲ್ ಫೋನುಗಳ ವರ್ಷನ್ ಗಳಂತೆ ಬದಲಾಗಬೇಕು. ಹೊಸತನಕ್ಕೆ ಮುಖ ಮಾಡುತ್ತಲೇ ಇರಬೇಕು. ಇರುವ ಸಂಪನ್ಮೂಲವನ್ನು ಬಹುಶ್ರುತವಾಗಿ ಬಳಸಿಕೊಳ್ಳಬೇಕು. ಪ್ರವಾಸಿಗರಿಗೆ ಅನನ್ಯ ಅನುಭವ ನೀಡುತ್ತಲೇ ಇರಬೇಕು. ಈ ಎಲ್ಲ ಸಂಗತಿಗಳನ್ನು ಕೇರಳದ ಮಾನ್ಸೂನ್ ಪ್ರವಾಸೋದ್ಯಮದಲ್ಲಿ ಕಾಣಬಹುದು.