India is Costly ಎಂಬ ಕಳಂಕದಿಂದ ಪಾಠ ಕಲಿಯುವ ಕಾಲ
“ಎಲ್ಲೆಡೆ ‘ವಿದೇಶಿಗ’ ಎಂಬ ಶಬ್ದದ ಬೆಲೆ ಹೆಚ್ಚಾಗಿದೆ!” ಎಂದು ವಿದೇಶಿ ಬ್ಲಾಗರ್‌ಗಳು ತಮ್ಮ ವಿಡಿಯೋಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಇದು ಅತ್ಯಂತ ವೇಗವಾಗಿ ಜನರಿಂದ ಜನರಿಗೆ ಹರಡುತ್ತಿದೆ. ದೆಹಲಿಯ ಸ್ಮಾರಕದಲ್ಲಿ ಆಸ್ಟ್ರೇಲಿಯಾ ಪ್ರವಾಸಿಗನೊಬ್ಬ “2400% ಹೆಚ್ಚುವರಿ ವಸೂಲಿ” ಆಗಿದೆಯೆಂದು ಹೇಳಿದ ವಿಡಿಯೋ ವೈರಲ್ ಆದದ್ದು ಕೇವಲ ಘಟನೆಯಲ್ಲ; ಅದು ದೇಶದ ಪ್ರವಾಸೋದ್ಯಮದ ನಂಬಿಕೆಯ ದಹನದ ಕಿಡಿ.
- ಕೆ. ರಾಧಾಕೃಷ್ಣ ಹೊಳ್ಳ
ಭಾರತವು ಅಜಂತಾ-ಎಲ್ಲೋರಾದ ಕಲ್ಲಿನಲ್ಲಿ ಕಲೆ ಕೆತ್ತಿದ ದೇಶ. ಹಂಪಿಯ ಅವಶೇಷಗಳಲ್ಲಿ ಇತಿಹಾಸ ಉಸಿರಾಡುವ ರಾಷ್ಟ್ರ. ತಾಜ್ ಮಹಲ್‌ನ ಸೌಂದರ್ಯದಲ್ಲಿ ಪ್ರೇಮದ ಶಾಶ್ವತ ಸಂಕೇತ ಕಂಡುಬರುವ ಭೂಮಿ. ಮೈಸೂರಿನ ಅರಮನೆಯಲ್ಲಿ ಆಡಳಿತದ ಸೌಂದರ್ಯವನ್ನು ಮೆಲುಕು ಹಾಕುವಂತೆ ಈ ವೈಭವದ ನಾಡು ಇಂದು ವಿಶ್ವ ಪ್ರವಾಸೋದ್ಯಮದ ನಕ್ಷೆಯಲ್ಲಿ ಒಂದು ವಿಭಿನ್ನ ಸ್ಥಾನ ಹೊಂದಿದೆ. ಆದರೆ, ಈ ವೈಭವದ ಮಧ್ಯೆ ಕೇಳಿಬರುತ್ತಿರುವ ಒಂದು ಕಹಿ ಮಾತು- “India is Costly”. ಇದು ನಮ್ಮ ಕಿವಿಗಳಿಗೆ ಎಚ್ಚರಿಕೆ ಗಂಟೆಯಂತೆ ಕೇಳಿಸುತ್ತಿದೆ.
ಪ್ರವಾಸೋದ್ಯಮದ ಕಳಂಕದ ಬೆಲೆ
ಇತ್ತೀಚಿನ ದಿನಗಳಲ್ಲಿ ಥೈಲ್ಯಾಂಡ್, ವಿಯೆಟ್ನಾಂ, ಬಾಲಿ, ಮಲೇಷ್ಯಾ, ಕಾಂಬೋಡಿಯಾ ಮತ್ತು ಶ್ರೀಲಂಕಾ ಮುಂತಾದ ರಾಷ್ಟ್ರಗಳು ವಿಶ್ವ ಪ್ರವಾಸಿಗರ ಮೆಚ್ಚಿನ ತಾಣಗಳಾಗುತ್ತಿವೆ. ಅಗ್ಗದ ವೆಚ್ಚ, ಸುಲಭ ವೀಸಾ, ಪಾರದರ್ಶಕ ದರಗಳು ಮತ್ತು ಆತ್ಮೀಯ ಆತಿಥ್ಯದ ಕಾರಣಗಳೇ ಇದಕ್ಕೆ ಕಾರಣವಾಗಿವೆ. ಹೋಲಿಕೆಯಲ್ಲಿ ಭಾರತದಲ್ಲಿ ವಿದೇಶಿಗರಿಗೆ ವಿಧಿಸಲಾಗುತ್ತಿರುವ ಹೆಚ್ಚುವರಿ ಪ್ರವೇಶ ಶುಲ್ಕ, ಕ್ಯಾಮೆರಾ ಫೀಸ್ ಹಾಗೂ ಸೇವಾ ದರಗಳು ಅವರನ್ನು ದೂರ ಸರಿಸುತ್ತಿವೆ.
“ಎಲ್ಲೆಡೆ ‘ವಿದೇಶಿಗ’ ಎಂಬ ಶಬ್ದದ ಬೆಲೆ ಹೆಚ್ಚಾಗಿದೆ!” ಎಂದು ವಿದೇಶಿ ಬ್ಲಾಗರ್‌ಗಳು ತಮ್ಮ ವಿಡಿಯೋಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಇದು ಅತ್ಯಂತ ವೇಗವಾಗಿ ಜನರಿಂದ ಜನರಿಗೆ ಹರಡುತ್ತಿದೆ. ದೆಹಲಿಯ ಸ್ಮಾರಕದಲ್ಲಿ ಆಸ್ಟ್ರೇಲಿಯಾ ಪ್ರವಾಸಿಗನೊಬ್ಬ “2400% ಹೆಚ್ಚುವರಿ ವಸೂಲಿ” ಆಗಿದೆಯೆಂದು ಹೇಳಿದ ವಿಡಿಯೋ ವೈರಲ್ ಆದದ್ದು ಕೇವಲ ಘಟನೆಯಲ್ಲ; ಅದು ದೇಶದ ಪ್ರವಾಸೋದ್ಯಮದ ನಂಬಿಕೆಯ ದಹನದ ಕಿಡಿ. ಹೈದರಾಬಾದ್‌ನಲ್ಲಿ 10 ಬಾಳೆಹಣ್ಣಿಗೆ 1000 ರು ವಸೂಲಿ, ಗೋವಾದಲ್ಲಿ ಹೆಚ್ಚುವರಿ ಟ್ಯಾಕ್ಸಿ ದರ, ಗುರುಗ್ರಾಮದ ಲಂಚ ಪ್ರಕರಣ – ಇವೆಲ್ಲವುಗಳಿಂದ ಭಾರತದ ಪ್ರವಾಸೋದ್ಯಮದ ಮುಖದ ಮೇಲೆ ಧೂಳಿನ ಅಚ್ಚು ಬೀಳುತ್ತಿದೆ.

ನಂಬಿಕೆಯೇ ನಷ್ಟವಾದರೆ ಪ್ರವಾಸಿಗರು ಮರಳಿ ಬರುವುದೆಂತು ?
ಪ್ರವಾಸೋದ್ಯಮ ಕೇವಲ ಸ್ಮಾರಕಗಳು ಅಥವಾ ಹೊಟೇಲ್‌ಗಳ ವ್ಯವಹಾರವಲ್ಲ. ಅದು ದೇಶದ ಆತ್ಮೀಯತೆ, ವಿಶ್ವಾಸ ಮತ್ತು ಮೌಲ್ಯಗಳ ಪ್ರತಿಬಿಂಬ. ಒಮ್ಮೆ ಅತಿಥಿಯ ನಂಬಿಕೆ ಕಳೆದುಕೊಂಡರೆ, ಅವರು ಹಿಂದಿರುಗುವುದಿಲ್ಲ. ಅದು ಕೇವಲ ಪ್ರವಾಸಿಗರ ನಷ್ಟವಲ್ಲ, ದೇಶದ ಆರ್ಥಿಕತೆಗೆ ನೇರ ಹೊಡೆತ.
ಪಾಠ ಕಲಿಯುವ ಕಾಲ
ದಕ್ಷಿಣ ಏಷ್ಯಾ ರಾಷ್ಟ್ರಗಳ ಮಾದರಿ ನಮ್ಮ ಕಣ್ಣೆದುರಿದೆ ಅಗ್ಗದ ದರ, ಸುಲಭ ಪ್ರವೇಶ, ಮೃದು ನಡತೆ, ನೈಜ ಸೇವೆ- ಇವುಗಳ ಸಂಯೋಜನೆಯೇ ಅವರ ಯಶಸ್ಸಿನ ರಹಸ್ಯ.
ಭಾರತದ ಪ್ರವಾಸೋದ್ಯಮದ ಅಭಿವೃದ್ಧಿಗೆ ಮೂರು ಸ್ತಂಭಗಳ ಅಗತ್ಯವಿದೆ.
ಮೊದಲನೆಯದು ಬೆಲೆ ಸಮತೋಲನ. ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ವಿಧಿಸಲಾಗುವ ಅತಿಯಾದ ದರಗಳನ್ನು ಮರುಪರಿಶೀಲನೆ ಮಾಡುವ ಅಗತ್ಯವಿದೆ.
ಎರಡನೆಯದು ಪಾರದರ್ಶಕ ವ್ಯವಸ್ಥೆ. ಪ್ರವೇಶ ಟಿಕೆಟ್, ಟ್ಯಾಕ್ಸಿ ದರ, ಹೊಟೇಲ್ ಬಿಲ್ ಎಲ್ಲದರಲ್ಲೂ ಸ್ಪಷ್ಟ ನಿಯಮ ಬರಬೇಕಿದೆ.
ಮೂರನೆಯದು ಅತಿಥಿ ದೇವೋಭವ ಎಂಬ ಮನೋಭಾವ. ಸರಕಾರದಿಂದ ಸ್ಥಳೀಯ ಸೇವಕರ ತನಕ, ಎಲ್ಲರ ಮನಸ್ಸಿನಲ್ಲಿ “ಪ್ರವಾಸಿಗನ ವಿಶ್ವಾಸವೇ ನಮ್ಮ ಗೌರವ” ಎಂಬ ದೃಢ ನಂಬಿಕೆ ಮೂಡಬೇಕು.

ಹೆರಿಟೇಜ್ ತಾಣಗಳು ಹೆಮ್ಮೆ ತರಬೇಕೇ ಹೊರತು ಅಸಮಾಧಾನವನ್ನಲ್ಲ.
ASI ಅಡಿಯಲ್ಲಿ ಬರುವ ಕೋಟೆಗಳು, ಸ್ಮಾರಕಗಳು ಮತ್ತು ಸಾಂಸ್ಕೃತಿಕ ತಾಣಗಳು ಪ್ರವಾಸಿಗರಿಗೆ ಆಕರ್ಷಣೆಯಾಗಬೇಕು; ಹೊರಗಿನಿಂದಲೇ ನೋಡಿಕೊಂಡು ಹಿಂದಿರುಗುವಂತಾಗಬಾರದು. ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಭಾರತೀಯ ಇತಿಹಾಸದ ಸೊಗಡು ತೋರಿಸಲು, ದೇಶೀಯ ಪ್ರವೇಶದ ಹೋಲಿಕೆಯಲ್ಲಿ ಪಾರದರ್ಶಕ ಮತ್ತು ಮುಕ್ತವಾದ ದರ ನಿಲುವು ಅಗತ್ಯ.
ಇಲ್ಲಿ ಉದ್ಯಮದ ಹೊಣೆಗಾರಿಕೆಯೂ ಇದೆ.
“India is Costly” ಎಂಬ ಟ್ಯಾಗ್ ಭಾರತಕ್ಕೆ ಕೇವಲ ಕಳಂಕವಲ್ಲ, ಅದು ಉದ್ಯಮದ ಹೃದಯದ ಮೇಲಿನ ಪ್ರಶ್ನೆ. ಪ್ರವಾಸೋದ್ಯಮದ ಗೌರವ ಉಳಿಸಿಕೊಳ್ಳಲು ಸರಕಾರ, ಖಾಸಗಿ ಸಂಸ್ಥೆಗಳು, ಟ್ರಾವೆಲ್ಸ್ ಮಾಲೀಕರು ಮತ್ತು ಸೇವಾ ಪೂರೈಕೆದಾರರು ಒಟ್ಟಾಗಿ ನಿಂತು ನಂಬಿಕೆಯ ವಾತಾವರಣ ನಿರ್ಮಿಸಬೇಕು.
ಭಾರತದ ಪ್ರವಾಸೋದ್ಯಮವು ಮುಂದಿನ ದಶಕದಲ್ಲಿ ದಕ್ಷಿಣ ಏಷ್ಯಾದೊಂದಿಗೆ ಸ್ಪರ್ಧಿಸಬೇಕಾದರೆ, ಅತಿಯಾದ ದರದ ಬಲೆಗೆ ಪ್ರವಾಸಿಗರು ಬಲಿಯಾಗದಂತೆ ನೋಡಿಕೊಳ್ಳುವುದು ಅತ್ಯವಶ್ಯಕ. ನಮ್ಮ ನಾಡು ಅತಿಥಿಯನ್ನು ದೇವರಂತೆ ಕಾಣುವ ಸಂಸ್ಕೃತಿಯನ್ನು ಹೊಂದಿದೆ. ಅದೇ ಸಂಸ್ಕೃತಿ ಇಂದು ʼIndia is Costlyʼ ಎಂಬ ಶಬ್ದದ ಹಿಂದೆ ಮಸುಕಾಗಬಾರದು.
ಅಜಂತಾ-ಹಂಪಿಯ ಕಲೆ, ತಾಜ್ ಮಹಲ್‌ನ ಪ್ರೇಮ, ಗೋವಾದ ತೀರದ ಸ್ವಾಗತ — ಇವುಗಳಲ್ಲಿ ಒಂದೇ ಸಂದೇಶ ಕೇಳಿಸಬೇಕು ಎನ್ನುವುದು ನಮ್ಮ ಆಶಯ.