Friday, August 29, 2025
Friday, August 29, 2025

ಜಗದ ತುದಿಯಲ್ಲಿ ಜೀವವೂ ತುದಿಗೆ ಬಂದಿತ್ತು!

ಹಾರ್ಟನ್ ಪ್ಲೈನ್ಸ್ ಶ್ರೀಲಂಕಾ ದೇಶದ ಮಧ್ಯದಲ್ಲಿದೆ. ಇದೊಂದು ನ್ಯಾಷನಲ್ ಪಾರ್ಕ್. ಸರಿಸುಮಾರು 7500 ಅಡಿ ಎತ್ತರವನ್ನು ಏರಬೇಕಾಗುತ್ತದೆ. ಜಿಂಕೆಗಳು, ಬಣ್ಣಬಣ್ಣದ ಚಿಟ್ಟೆಗಳು, ವಿವಿಧ ಜೀವ ಜಂತುಗಳು, ಹಲವು ರೀತಿಯ ಮರಗಿಡಗಳನ್ನು ಹೊಂದಿದ ಜಾಗ. ಈ ನ್ಯಾಷನಲ್ ಪಾರ್ಕ್ ನಲ್ಲಿ ಮಿನಿ ವರ್ಲ್ಡ್ಸ್ ಎಂಡ್ , ವರ್ಲ್ಡ್ಸ್ ಎಂಡ್ ಮತ್ತು ಬೇಕರ್ಸ್ ಫಾಲ್ಸ್ ಎನ್ನುವ ಮೂರು ಮುಖ್ಯ ಆಕರ್ಷಣೆಗಳಿವೆ.

  • ರಂಗಸ್ವಾಮಿ ಮೂಕನಹಳ್ಳಿ

ಪ್ರವಾಸ ಹೊರಡುವುದು ಎಂದರೆ ಅವ್ಯಕ್ತ ಆನಂದ. ಇಂಥ ಆನಂದ ತಿಂಗಳುಗಟ್ಟಲೆ ಇರುತ್ತದೆ. ಅದಕ್ಕೆ ಕಾರಣ ಎಲ್ಲಿ ಹೋಗಬೇಕು ಎನ್ನುವುದನ್ನು ನಿರ್ಧಾರ ಮಾಡುವುದರಿಂದ ಪ್ರಾರಂಭವಾಗಿ, ಹೋಗಬೇಕಾದ ಸ್ಥಳದ ಮಾಹಿತಿ ಸಂಗ್ರಹ ಮಾಡುವುದು, ನಂತರ ಅಲ್ಲಿನ ವಾಸ್ತವ್ಯ, ಏರ್ ಟಿಕೆಟ್ ನಿಂದ ಹಿಡಿದು ಎಲ್ಲಾ ಸೌಕರ್ಯಗಳ ಕಾಯ್ದಿರಿಸುವ ಪ್ರಕ್ರಿಯೆ ಹೀಗೆ ತಿಂಗಳುಗಳು ಕಳೆದದ್ದು ತಿಳಿಯುವುದೇ ಇಲ್ಲ. ಇರಲಿ. ಹೀಗೆ ಒಂದು ದಿನ ಮಾತಿಗೆ ಕೂತಾಗ ರಮ್ಯ ಶ್ರೀಲಂಕಾಗೆ ಹೋಗೋಣ ಎಂದಳು. ಪಾಪ ಅವಳು ಈ ಮಾತನ್ನು ಕಳೆದ ಎರಡು ವರ್ಷದಿಂದ ಹೇಳುತ್ತಾ ಬಂದಿದ್ದಾಳೆ. ನನಗೆ ಶ್ರೀಲಂಕಾ ಎಂದರೆ ನಮ್ಮ ತಮಿಳುನಾಡಿನ ಚಿತ್ರ ಕಣ್ಣಿನ ಮುಂದೆ ಬರುತ್ತಿತ್ತು. ಕೆಲವೊಮ್ಮೆ ನಾವು ಕಂಡು ಕೇಳರಿಯದ ಜಾಗಗಳ ಬಗ್ಗೆ ನಾವು ಕಟ್ಟಿಕೊಳ್ಳುವ ಚಿತ್ರಣವಿದೆಯಲ್ಲ ಅದೆಷ್ಟು ಬಾಲಿಶ ಅನ್ನಿಸುತ್ತದೆ. ಒಟ್ಟಿನಲ್ಲಿ 'ಶ್ರೀಲಂಕಾ' ಎಂದರೆ ಒಂದು ರೀತಿಯ ಅಸಡ್ಡೆ. ಪಕ್ಕದಲ್ಲೇ ಇದೆಯಲ್ಲ ಎನ್ನುವ ಕಾರಣವೂ ಇರಬಹುದು. ಶ್ರೀಲಂಕಾ ನನ್ನೆಲ್ಲಾ ತಪ್ಪು ಗ್ರಹಿಕೆಗಳ ದೂರ ಮಾಡಿ ಮತ್ತೆ ಬರುವಂತೆ ಮಾಡುವ ಮೋಡಿ ಮಾಡುತ್ತದೆ ಎನ್ನುವ ಕಿಂಚಿತ್ತು ಅರಿವೂ ಅಂದಿರಲಿಲ್ಲ. ಅಲ್ಲಿಗೆ ಹೋದೆವು. ಒಂದಷ್ಟು ಜೀವನ ಪಾಠ ಕಲಿತೆವು. ನಮ್ಮ ಬಳಿ ಎಷ್ಟೇ ದುಡ್ಡಿರಲಿ, ಎಷ್ಟೇ ಅಧಿಕಾರವಿರಲಿ ಪ್ರಕೃತಿ ಮಾತೆಯ ಎದುರು ನಾವೆಷ್ಟು ಕುಬ್ಜರು ಎನ್ನುವ ಪ್ರತ್ಯಕ್ಷ ಅನುಭವ ಪಡೆದೆವು. ಒಂದೇ ದೇಶದಲ್ಲಿ ಚಳಿ, ಬಿಸಿಲು, ಮಳೆ ಜೊತೆಗೆ ಅಬ್ಬರದ ಗುಡುಗು ಸಿಡಿಲು ಬಹಳ ಹತ್ತಿರದಿಂದ ಕಂಡೆವು. ಬೆಟ್ಟ ಹತ್ತಿದೆವು. ಬೆಟ್ಟ ಮುಚ್ಚುವ ಮೋಡವನ್ನು ನಾವು ಕೈಲಿ ಹಿಡಿದೆವು. ಪ್ರಪಂಚದ ಕೊನೆ ನೋಡಲು ಹೋಗಿ ನಮ್ಮ ಅಂತ್ಯವಾಗುತ್ತದೆಯೇ ಎನ್ನುವ ಸಂಶಯದಲ್ಲಿ ಅರ್ಧ ತಾಸು ಕಳೆದೆವು! ರಿವರ್ ಸಫಾರಿ, ಉದ್ದವಳವೇ ನ್ಯಾಷನಲ್ ಪಾರ್ಕ್ ವೈಲ್ಡ್ ಲೈಫ್ ಸಫಾರಿ ಮಾಡಿದೆವು. ಹಾಗೆ ರಾಮಾಯಣದ ಕುರುಹುಗಳ ನೀಡುವ ಜಾಗಗಳ ಕಂಡೆವು. ಬೆಂಟೋಟದ ಬೀಚ್ ನಲ್ಲಿ ಮನಸೋಯಿಚ್ಛೆ ನಲಿದೆವು. ಒಟ್ಟಿನಲ್ಲಿ ಒಂದೇ ದೇಶದಲ್ಲಿ ಬೆಟ್ಟ-ಗುಡ್ಡ-ನದಿ-ಪರ್ವತ-ಸಮುದ್ರ-ಜಲಾಶಯ-ಪ್ರಾಣಿ-ಪಕ್ಷಿ ಜತೆಗೆ ಅಲ್ಲಿನ ಅತ್ಯುತ್ತಮ ಹೋಟೆಲ್ ಗಳಲ್ಲಿ ನೆಲೆಸಿದ್ದೆವು.

kolambo

ಕೊಲಂಬೋ ಇಳಿದು ನೆಗೊಂಬೊ ಎನ್ನುವ ಒಂದು ತಾಸಿನ ಅವಧಿಯಲ್ಲಿ ಸಿಗುವ ನಗರಕ್ಕೆ ಪ್ರಯಾಣ ಮಾಡಿದೆವು. ಅಲ್ಲಿ ಒಂದು ರಾತ್ರಿ ಇದ್ದೆವು. ಮರುದಿನ ಕ್ಯಾಂಡಿ ನಗರದ ಮೇಲೆ ಹಾದು ತಲುಪಿದ್ದು ನುವಾರ ಎಲಿಯಾ ಎನ್ನುವ ಹಿಲ್ ಸ್ಟೇಷನ್. ಶ್ರೀಲಂಕಾದಲ್ಲಿ 29ರಿಂದ 30 ಡಿಗ್ರೀ ಬಿಸಿಲ ತಾಪಮಾನ ತೋರಿಸುತ್ತಿತ್ತು. ಆದರೆ ನುವಾರದಲ್ಲಿ 18! ನಿಜಕ್ಕೂ ಒಂದು ಸ್ವೆಟರ್ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸುವಷ್ಟು ಚಳಿ. ಮನಸ್ಸಿಗೆ ಹಿತ ನೀಡುವ ವಾತಾವರಣ. ನಮ್ಮದು ರೋಡ್ ಟ್ರಿಪ್. ಹೀಗಾಗಿ ಇಲ್ಲಿಗೆ ತಲುಪುವ ಮುನ್ನ ದಾರಿಯಲ್ಲಿ ಬುದ್ಧನ ಮಂದಿರ, ಭಾರತೀಯ ದೇವಸ್ಥಾನದ ಜತೆಗೆ ಕಣ್ಮನ ಸೆಳೆಯುವ ಜಲಾಶಯ, ಟೀ ಗಾರ್ಡನ್ ಗಳಿಗೆ ಭೇಟಿ ನೀಡಿ ಬಂದೆವು. ಇಲ್ಲಿಗೆ ತಲುಪುವ ವೇಳೆಗೆ ಸಾಯಂಕಾಲ ಆರರ ಸಮಯ. ಆಗಲೇ 'ಧೋ' ಎಂದು ಮಳೆ ಸುರಿಯಲು ಪ್ರಾರಂಭವಾಗಿತ್ತು. ನಮ್ಮ ಗೈಡ್ 'ಈ ಮಳೆ ಇಂದು ನಿಲ್ಲುವ ಸಾಧ್ಯತೆ ಕಡಿಮೆ. ಬೇಗ ಮಲಗಿ ನಾಳೆ ಐದು ಗಂಟೆಗೆ ಇಲ್ಲಿಂದ ಹೊರಡಬೇಕು. ಹೋರ್ಟನ್ ಪ್ಲೈನ್ಸ್ ಕರೆದು ಕೊಂಡು ಹೋಗುತ್ತೇನೆ' ಎಂದರು. ಸರಿ ಮಳೆಯ ಮುಂದೆ ನಮ್ಮ ಆಟ ಏನು ನಡೆದೀತು? ಹೊಟೇಲ್ ನ ರೂಮ್ ಅತ್ಯಂತ ಸುಂದರವಾಗಿತ್ತು. ರಾತ್ರಿ ಊಟಕ್ಕೆ ಭಾರತೀಯ ತಿನಿಸುಗಳು ಇದ್ದವು. ಸಸ್ಯಾಹಾರಿಗಳಿಗೆ ಶ್ರೀಲಂಕಾ ನಿರಾಸೆ ಮಾಡುವುದಿಲ್ಲ. ಕೆಲವು ಹೊಟೇಲ್ ಗಳಲ್ಲಿ ಸಾರು (ರಸಂ ) ಸಾಂಬಾರು, ಅಕ್ಕಿ ರೊಟ್ಟಿ, ಚಟ್ನಿ ಕೂಡ ತಿನ್ನಲು ಸಿಕ್ಕಿತು. ಶ್ರೀಲಂಕಾದ ಹದವಾದ ಟೀ ಮತ್ತು ಕಾಫಿ ಸವಿಯುವುದೇ ಒಂದು ಮಜಾ!

ಜಗತ್ತಿನ ಕೊನೆ ಅಥವಾ ವರ್ಲ್ಡ್ಸ್ ಎಂಡ್ ನೋಡಲು ಶುರುವಾಯ್ತು ಪ್ರಯಾಣ .!

ನಮ್ಮ ಏಳು ದಿನದ ಪ್ರವಾಸಕ್ಕೆ ಮುಂಚಿತವಾಗಿ ಕಾರು ಮತ್ತು ಅದನ್ನು ಚಲಾಯಿಸಲು ಚಾಲಕ ಜತೆಗೆ ಗೈಡ್ ಆಗಿ ಕೆಲಸ ಮಾಡುವ ಒಬ್ಬ ನುರಿತ ವ್ಯಕ್ತಿ ಬೇಕಾಗಿತ್ತು. ನಮಗೆ ಸಿಕ್ಕ ಡ್ರೈವರ್ ಕಮ್ ಗೈಡ್ ರಾಜ ವಿಕ್ರಮ ದಸನಾಯಕೆ. ಹಾರ್ಟನ್ ಪ್ಲೈನ್ಸ್ ಶ್ರೀಲಂಕಾ ದೇಶದ ಮಧ್ಯದಲ್ಲಿದೆ. ಇದೊಂದು ನ್ಯಾಷನಲ್ ಪಾರ್ಕ್. ಸರಿಸುಮಾರು 7500 ಅಡಿ ಎತ್ತರವನ್ನು ಏರಬೇಕಾಗುತ್ತದೆ. ಜಿಂಕೆಗಳು, ಬಣ್ಣಬಣ್ಣದ ಚಿಟ್ಟೆಗಳು, ವಿವಿಧ ಜೀವ ಜಂತುಗಳು, ಹಲವು ರೀತಿಯ ಮರಗಿಡಗಳನ್ನು ಹೊಂದಿದ ಜಾಗ. ನಮ್ಮ ಗೈಡ್ ರಾಜ ವಿಕ್ರಮ ಅರ್ಧ ಕಿಲೋಮೀಟರ್ ನಮ್ಮ ಜೊತೆ ಬಂದವನು 'ನಾನು ಹಾರ್ಟ್ ಪೇಶೆಂಟ್. ಇನ್ನು ಹೆಚ್ಚು ನಡೆಯಲು ಆಗುವುದಿಲ್ಲ, ಇಲ್ಲಿ ನಿಮಗಾಗಿ ಕಾಯುತ್ತೇನೆ. ರೌಂಡ್ ಟ್ರಿಪ್ ಹನ್ನೆರಡು ಕಿಲೋಮೀಟರ್ ಆಗುತ್ತೆ, ರಸ್ತೆ ಬಹಳ ಕೆಟ್ಟದಾಗಿರುತ್ತದೆ ಹುಷಾರು' ಎಂದ. ನಿತ್ಯವೂ ಐದಾರು ಕಿಲೋಮೀಟರ್ ನಡೆದು ಅಭ್ಯಾಸವಿದ್ದ ನಮಗೆ ಆ ಘಳಿಗೆಯಲ್ಲಿ ಹನ್ನೆರಡು ಕಿಲೋಮೀಟರ್ ಏನು ಮಹಾ ಅನಿಸಿತು. ಜತೆಗೆ ಈತ ಬರದಿದ್ದರೆ ಏನಂತೆ? ನಾವು ಹೋಗಿ ಬರುತ್ತೇವೆ ಎನ್ನುವ ಧೈರ್ಯ. ರಾಜ ವಿಕ್ರಮನಿಗೆ ಬೈ ಹೇಳಿ ಹೊರಟೆವು. ನಮ್ಮೊಂದಿಗೆ ಹದಿನೈದು ಯುರೋಪಿಯನ್ ಮತ್ತು ಅಮೆರಿಕನ್ನರು ಇದ್ದರು. ಮೊದಲ ಎರಡು ಕಿಲೋಮೀಟರ್ ಸಪಾಟು ರಸ್ತೆ! ಹಾಡುತ್ತ ಕುಣಿಯುತ್ತಾ ಸಾಗಿತು. ಬೆಳಗ್ಗೆಯ ಎನರ್ಜಿ ಬೇರೆ ಮೈಯಲ್ಲಿ ಹರಿಯುತಿತ್ತು. ಜೊತೆಗೆ ಆರ್ ಘಂಟೆ ಮೂರು ನಿಮಿಷಕ್ಕೆ ಸೂರ್ಯನ ಮೊದಲ ಕಿರಣಗಳು ನಮ್ಮನ್ನು ಸ್ಪರ್ಶಿಸಿ ಪುಳಕ ಉಂಟು ಮಾಡಿದ್ದವು. ದಾರಿ ಸಾಗಿದಂತೆ ರಸ್ತೆ ಕಡಿದಾಗುತ್ತಾ ಹೋಯಿತು. ಈ ನ್ಯಾಷನಲ್ ಪಾರ್ಕ್ ನಲ್ಲಿ ಮಿನಿ ವರ್ಲ್ಡ್ಸ್ ಎಂಡ್ , ವರ್ಲ್ಡ್ಸ್ ಎಂಡ್ ಮತ್ತು ಬೇಕರ್ಸ್ ಫಾಲ್ಸ್ ಎನ್ನುವ ಮೂರು ಮುಖ್ಯ ಆಕರ್ಷಣೆಗಳಿವೆ. ಒಂದು ಗಂಟೆಯ ಅವಧಿಯಲ್ಲಿ ಕಲ್ಲು ಮುಳ್ಳಿನ ದಾರಿಯನ್ನು ಸವೆಸಿ ಮಿನಿ ವರ್ಲ್ಡ್ಸ್ ಎಂಡ್ ತಲುಪಿದಾಗ ಏನೋ ಸಾಧನೆ ಮಾಡಿದ ಸಂಭ್ರಮ!

Horton Plains

ಇಲ್ಲಿಯವರೆಗೆ ಬಂದ ದಾರಿಯನ್ನು ಕ್ರಮಿಸಿ ಅಯ್ಯಪ್ಪ ಎಂದಿದ್ದ ನಮಗೆ ಮುಂದಿನ ದಾರಿಯ ಸುಳಿವು ಕೂಡ ಇರಲಿಲ್ಲ. ಒಂದೈದು ನಿಮಿಷ ಅಲ್ಲಿ ನಿಂತು ಫೋಟೋಗಳನ್ನು ಕ್ಲಿಕ್ಕಿಸಿ ನಡೆಯಲು ಶುರು ಮಾಡಿದೆವು. ಅದು ಇನ್ನೊಂದು ಎತ್ತರಕ್ಕೆ ನಮ್ಮನ್ನು ಕರೆದೊಯ್ಯುತ್ತಿತ್ತು. ಸಾಲದಕ್ಕೆ ಕಲ್ಲು ಮುಳ್ಳುಗಳ ಜತೆ ರಸ್ತೆ ಮರೆಮಾಚಿ ಬೆಳೆದು ನಿಂತ ಗಿಡಗಳು. ಸ್ವಲ್ಪ ಆಯ ತಪ್ಪಿದರೂ ಪ್ರಪಾತ!

ಹೇಗೋ ಕಷ್ಟ ಪಟ್ಟು ಸಾಗುತ್ತಿದ್ದೆವು. ಅಷ್ಟರಲ್ಲಿ ಕಲ್ಲುಗಳ ಮೇಲೆ ಹೆಜ್ಜೆಯನ್ನು ಅಳೆದು ತೂಗಿ ಇಡುತ್ತಿದ್ದ ರಮ್ಯ ಆಯ ತಪ್ಪಿ ಬಿದ್ದಳು. ಅವಳ ಎಡಗಾಲು ಬುರ್ರನೆ ಊದಿತು. ನಡೆಯಲು ಆಗದೆ ರಮ್ಯ ಕುಳಿತಳು. ನಮ್ಮ ಜೊತೆ ಬಂದ ಜನರು ಚದುರಿದರು. ಕೊನೆಗೆ ಉಳಿದವರು ನಾವು ಮೂವರು ಮಾತ್ರ!

ಹತ್ತು ನಿಮಿಷದಲ್ಲಿ ರಮ್ಯಾಳಿಗೆ ಪರಿಸ್ಥಿತಿಯ ಅರಿವಾಗಿತ್ತು ನಡೆಯೋಣ ನಡೆ ಎಂದಳು. ಕುಂಟುತ್ತಾ ನಡೆಯಲು ಶುರು ಮಾಡಿದೆವ. ಅನತಿ ದೂರ ಸಾಗಿದ ಮೇಲೆ ರಸ್ತೆ ಬಲಕ್ಕೂ ಮತ್ತು ಎಡಕ್ಕೂ ತೆರೆದುಕೊಂಡಿತ್ತು. ಎತ್ತ ಸಾಗುವುದು? ನಾನು ಬಲಕ್ಕೆ ಒಂದು ಕಿಲೋಮೀಟರ್ ನಡೆದೆ. ನಡೆದದ್ದಷ್ಟೇ ಲಾಭ ಅಲ್ಲಿ ಯಾರ ಸುಳಿವಿಲ್ಲ. ರಮ್ಯಾ ಎಡಕ್ಕೆ ಹೋಗೋಣ ಎಂದಳು ಮತ್ತೆ ವಾಪಸ್ ಹೊರಟೆವು. ಎರಡು ದಾರಿ ವಿಭಜಿಸುವ ಕಡೆಗೆ ಬಂದೆವು. ಮತ್ತೆ ರಮ್ಯ ಹೇಳಿದ ಕಡೆ ಒಂದರ್ಧ ಕಿಲೋಮೀಟರ್ ನಡೆದೆವು. ಮತ್ತೆ ಶೂನ್ಯ ಸಂಪಾದನೆ. ಇಷ್ಟರಲ್ಲಿ ನಾವು ಬಹಳ ತಲ್ಲಣ ಗೊಂಡಿದ್ದೆವು. ಅನ್ನಿ ಪಪ್ಪಾ ಆರ್ ವೀ ಲಾಸ್ಟ್ ? ಎಂದಳು. ಆರ್ ವೀ ಗೋಯಿಂಗ್ ಟು ಡೈ? ಎನ್ನುವ ಪ್ರಶ್ನೆಯೂ ತೂರಿಬಂತು. ಕೈಲಿರುವ ಮೊಬೈಲ್, ನೆಟ್ವರ್ಕ್ ಇಲ್ಲದೆ ಒಂದು ಆಟಿಕೆಯಂತೆ ಕಂಡಿತು. ಧ್ವನಿ ಏರಿಸಿ 'ಯಾರಾದರೂ ಇದ್ದೀರಾ ..?? ಹೆಲ್ಪ್ ... ಹೆಲ್ಪ್ ಎಂದು ಕೂಗಹತ್ತಿದೆವು. ಕೊನೆಗೆ ರಮ್ಯ ರಸ್ತೆ ವಿಭಜಕದ ಬಳಿ ಹೋಗಿ ಕಾಯೋಣ ಯಾರಾದರೂ ಖಂಡಿತ ಬರುತ್ತಾರೆ ಎಂದಳು. ಸರಿ ಅನಿಸಿ ವಾಪಸ್ ರಸ್ತೆ ವಿಭಜಕದ ಬಳಿ ಬಂದು ನಿಂತೆವು. ಹತ್ತು ಹದಿನೈದು ನಿಮಿಷದಲ್ಲಿ ಒಂದು ಹೆಣ್ಣು ಒಂದು ಗಂಡು ಜೋಡಿ ಬಂದಿತು. ಅವರಿಗೆ ಹಾಯ್ ಹೇಳಿ ನಮ್ಮ ಕಥೆ ಹೇಳಿಕೊಂಡೆವು. ಅವರು ಪ್ಯಾನಿಕ್ ಆಗುವ ಅವಶ್ಯಕತೆಯಿಲ್ಲ ನೀವು ಬಲಕ್ಕೆ ಹೋಗಿದ್ದು ಸರಿ ಇತ್ತು ಎಂದರು. ನಮ್ಮೊಂದಿಗೆ ಹೆಜ್ಜೆ ಹಾಕಿದರು. ನಾವು ನಿಧಾನಕ್ಕೆ ವರ್ಲ್ಡ್ಸ್ ಎಂಡ್ ತಲುಪಿದೆವು! ಅಬ್ಬಾ ಅದೆಂಥ ದೃಶ್ಯ! ಅಚಾನಕ್ಕಾಗಿ ರಸ್ತೆ ಕೊನೆಯಾಗುತ್ತದೆ . ಕಣ್ಣು ಹೋಗುವಷ್ಟು ಖಾಲಿ ಜಾಗ ದೂರದಲ್ಲೆಲ್ಲೋ ಇನ್ನೊಂದು ಬೆಟ್ಟ ಕಾಣುತ್ತಿದೆ. ಅಲ್ಲಿನ ನಿಶ್ಶಬ್ದದ ಶಬ್ದವನ್ನು, ಹೌದು ನಿಶ್ಶಬ್ದದ ಶಬ್ದವನ್ನು ವಿವರಿಸುವುದು ಹೇಗೆ? ನಿಶ್ಶಬ್ದದ ನೀರವತೆ ಅನುಭವಿಸಿಯೇ ತೀರಬೇಕು. ಅಲ್ಲಿನ ನೋಟವನ್ನು ಯಾವ ಕ್ಯಾಮೆರಾ ಕೂಡ ಕಟ್ಟಿಕೊಡಲಾರದು. ಯಾವ ಪದಗಳು ಕೂಡ ಅಲ್ಲಿನ ವರ್ಣನೆ ಮಾಡಲು ಸಾಲದು. ಅದೊಂದು ಅನಂತ ಅನುಭಾವ! ಇಷ್ಟೆಲ್ಲಾ ಕಷ್ಟ ಪಟ್ಟು ಇಲ್ಲಿಗೆ ಬಂದದ್ದು ಸಾರ್ಥಕ ಅನಿಸಿತು. ಇನ್ನು ಇಳಿಯುವಿಕೆ ಮಧ್ಯದಲ್ಲಿ ಬೇಕರ್ಸ್ ಫಾಲ್ಸ್ ನೋಡಿ ಕೊಂಡು ನಮ್ಮ ಕಾರು ತಲುಪುವುದಷ್ಟೇ. ಹೇಳಲು ಮತ್ತು ಕೇಳಲು ಎಷ್ಟು ಸಲೀಸಾಗಿದೆ ಆದರೆ ನಮ್ಮ ಪ್ರಯಾಣ ಇನ್ನೂ ಮುಗಿದಿರಲಿಲ್ಲ! ಅನನ್ಯ ಬೀಳುವುದು ಬಾಕಿಯಿತ್ತು, ರಮ್ಯ ಇನ್ನೊಂದು ಬಾರಿ ಕೆಸರಲ್ಲಿ ಬೀಳುವುದು ಬಾಕಿಯಿತ್ತು. ಇವರ ಜತೆಗೆ ಅಲ್ಲಿಂದ ನಮ್ಮ ಜತೆಯಾದ ನಾಲ್ವರು ಯುರೋಪಿಯನ್ ಮಹಿಳೆಯರು ಕೂಡ ಬೀಳುವುದು ಬಾಕಿಯಿತ್ತು.

ಅಂತೂ ಇಂತೂ ಕಷ್ಟ ಪಟ್ಟು ನಾಲ್ಕೂವರೆ ತಾಸಿನಲ್ಲಿ ನಮ್ಮ ಸಾಹಸ ಚಾರಣ ಮುಗಿಸಿ ರಾಜ ವಿಕ್ರಮನ ಸೇರಿದಾಗ ನಮಗಾದ ಅನುಭವ ಹೇಳಿಕೊಂಡೆವು. ಆತ ನಾನು ಹೇಳಿದೆ ರಸ್ತೆ ಸರಿಯಿಲ್ಲ ಅಂತ ಎಂದ. ಜತೆಗೆ ಮೆಲ್ಲಗೆ, ತಿಂಗಳ ಹಿಂದೆ ಸ್ವಿಸ್ ಹುಡುಗಿಯೊಬ್ಬಳು ಸತ್ತಳು ಎಂದ. ನಾರ್ವೆಯ ಮೂವರನ್ನು ಹೇಗೋ ಬಚಾವು ಮಾಡಿದರು. ಇಲ್ಲಿ ನಾಪತ್ತೆ ಆದವರನ್ನು ಹುಡುಕಲು ಹೆಲಿಕಾಪ್ಟರ್ ಬಳಸುತ್ತಾರೆ. ಬೇರೆ ದಾರಿಯೇ ಇಲ್ಲ ಎಂದ. ಅದ್ಯಾವ ಭಂಡ ಧೈರ್ಯ ನಮ್ಮನ್ನ ಅಲ್ಲಿಗೆ ಹೋಗಲು ಪ್ರೇರೇಪಿಸಿತೊ? ಅದ್ಯಾವ ಶಕ್ತಿ ಅಲ್ಲಿರುವ ಹಾವು ಚೇಳು, ಝರಿಗಳು ನಮ್ಮ ಕಡಿಯದೆ, ಪ್ರಪಾತಕ್ಕೆ ಬೀಳಿಸದೆ ಸುರಕ್ಷಿತವಾಗಿ ಕರೆತಂದಿತೋ ತಿಳಿಯದು. ಬದುಕಲ್ಲಿ ನಾವೆಷ್ಟೇ ಯಶಸ್ಸು ಪಡೆದಿರಲಿ, ಹಣವಿರಲಿ, ಅಧಿಕಾರವಿರಲಿ ನನ್ನ ಮುಂದೆ ನೀವೇನೂ ಅಲ್ಲ ಎಂದು ಪ್ರಕೃತಿ ನುಡಿದಂತೆ ಭಾಸವಾಯಿತು. ಬದುಕು ನಿಮಗೆ ನಾನು ಕೊಟ್ಟಿರುವ ಭಿಕ್ಷೆ ಸರಿಯಾಗಿ ಬಾಳಿ ಎಂದುಸಿರಿದಂತಾಯಿತು. ಮರುದಿನ ಉದ್ದನವಲೆ ನ್ಯಾಷನಲ್ ಪಾರ್ಕ್ ನಮಗೆ ಇನ್ನೊಂದು ಬದುಕಿನ ಪಾಠ ಕಲಿಸಲು ಸಿದ್ಧವಾಗಿತ್ತು. ಅದರ ಎಳ್ಳಷ್ಟೂ ಅರಿವಿಲ್ಲದ ನಾವು ಅಬ್ಬಾ ಬದುಕಿದೆವು ಎಂದು ಹೊಟೇಲ್ ಸೇರಿದೆವು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?