ಸಾರ್ವಜನಿಕ ಸಾರಿಗೆಯ ಜೀವನಾಡಿ
ದಶಕಗಳ ಕಾಲ ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುವ ಸಾವಿರಾರು ಬಸ್‌ಗಳು ಕಾನೂನು ಬದ್ಧ ಅನುಮತಿಯಿಲ್ಲದೆ ಸಂಚರಿಸುತ್ತಿರುವುದು ಆಡಳಿತದ ನಿರ್ಲಕ್ಷ್ಯ. ಮಹಾ ಹೆದ್ದಾರಿಗಳನ್ನು ಕಟ್ಟುವುದು ಸುಲಭ. ಆದರೆ ಪ್ರಯಾಣಿಕರ ಸುರಕ್ಷಿತ ರಾತ್ರಿ ಸಂಚಾರವನ್ನು ಖಚಿತಪಡಿಸುವುದು ಸರಕಾರದ ನಿಜವಾದ ಕರ್ತವ್ಯ. ಸಂಸತ್‌ನಲ್ಲಿ ಹಲವು ಬಾರಿ ಈ ವಿಷಯದ ಬಗ್ಗೆ ಚರ್ಚೆಗಳು ನಡೆದರೂ, ಚಾಲಕರ ವಿಶ್ರಾಂತಿ ಅವಧಿ, ಪ್ರಯಾಣಿಕರ ಸುರಕ್ಷತೆ, ದರದ ನಿಯಂತ್ರಣ, ನಿಲುಗಡೆ ಕೇಂದ್ರಗಳ ವ್ಯವಸ್ಥೆ ಮುಂತಾದ ವಿಚಾರಗಳಲ್ಲಿ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿಲ್ಲ.
– ಕೆ. ರಾಧಾಕೃಷ್ಣ ಹೊಳ್ಳಾ
ಭಾರತದ ಸಾರ್ವಜನಿಕ ಸಾರಿಗೆಯ ಜೀವನಾಡಿ ಬಸ್‌ಗಳು. ಆದರೆ ಈ ಜೀವನಾಡಿಯೇ (ವಿಶೇಷವಾಗಿ ರಾತ್ರಿ ಸಂಚಾರ) ಇಂದಿಗೂ ಯಾವುದೇ ಸ್ಪಷ್ಟವಾದ ನಿಯಂತ್ರಣದ ರೂಪುರೇಷೆಯಿಲ್ಲದೆ ನಡೆಯುತ್ತಿದೆ ಎಂಬುದು ಆಘಾತಕಾರಿ ಸತ್ಯ.
ಭಾರತದಲ್ಲಿ ಸುಮಾರು 1.47 ಲಕ್ಷ ಕಿಮೀ ರಾಷ್ಟ್ರೀಯ ಹೆದ್ದಾರಿಗಳು, 1.79 ಲಕ್ಷ ಕಿಮೀ ರಾಜ್ಯ ಹೆದ್ದಾರಿಗಳು ಮತ್ತು ಒಟ್ಟು 63 ಲಕ್ಷ ಕಿಮೀ ರಸ್ತೆ ಜಾಲವಿದೆ. ಪ್ರತಿದಿನ ಲಕ್ಷಾಂತರ ಜನರು ಈ ರಸ್ತೆಗಳ ಮೂಲಕ ಸಂಚಾರ ಮಾಡುತ್ತಾರೆ. ರೈಲು ಅಥವಾ ವಿಮಾನಗಳ ಅನುಕೂಲವಿಲ್ಲದ ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಲ್ಲಿ ಇರುವ ಜನರಿಗೆ, ರಾತ್ರಿ ಬಸ್‌ಗಳು ಮಾತ್ರವೇ ದೊಡ್ಡ ನಗರಗಳ ಸಂಪರ್ಕದ ಏಕೈಕ ಸೇತುವೆ. ಆದರೆ ಈ ಜೀವನಾಡಿ ಸೇವೆ ಯಾವುದೇ ಸಮಗ್ರ ನಿಯಂತ್ರಣ ವ್ಯವಸ್ಥೆಯಿಲ್ಲದೆ ನಡೆಯುತ್ತಿದೆ. ಚಾಲಕರು ಎಷ್ಟು ಹೊತ್ತು ನಿರಂತರವಾಗಿ ಚಾಲನೆ ಮಾಡಬಹುದು, ಬಸ್‌ಗಳು ಎಲ್ಲಿ ನಿಲ್ಲಬೇಕು, ಸುರಕ್ಷಿತ ನಿಲುಗಡೆ ಪ್ರದೇಶಗಳಿರಬೇಕೇ? ಇವುಗಳಿಗೆ ಯಾವುದೇ ಸ್ಪಷ್ಟ ನಿಯಮವಿಲ್ಲ.
ಬಾಡಿಬಿಲ್ಡ್ ಕೋಡ್, ಸ್ಲೀಪರ್ ಬಸ್ ಕೋಡ್, ಜಿಪಿಎಸ್ ಸಿಸ್ಟಮ್, ಸ್ಪೀಡ್ ಗವರ್ನರ್ ಮುಂತಾದವುಗಳಿದ್ದರೂ, ರಾತ್ರಿ ಬಸ್ ಸಂಚಾರಕ್ಕೆ ರಾಷ್ಟ್ರ ಮಟ್ಟದ ನೀತಿ ರೂಪುರೇಷೆಯೇ ಇಲ್ಲ. ರೈಲ್ವೆ ಹಾಗೂ ಸರಕಾರಿ ಸಾರಿಗೆ ಸಂಸ್ಥೆಗಳು ಕಟ್ಟುನಿಟ್ಟಿನ ಕಾನೂನು ನಿಯಮಗಳಡಿ ಕೆಲಸ ಮಾಡುತ್ತಿದ್ದರೆ, ದೇಶದ ಅಂತರ್‌ನಗರ ಪ್ರಯಾಣದ ಬಹುಪಾಲು ಹೊತ್ತಿರುವ ಖಾಸಗಿ ಲಕ್ಸುರಿ ರಾತ್ರಿ ಬಸ್‌ಗಳು ಯಾವುದೇ ಅಧಿಕೃತ ಪರವಾನಗಿಯಿಲ್ಲದೆ ಸಂಚರಿಸುತ್ತಿವೆ. ಇವು ಪ್ರವಾಸಿ ಪರವಾನಗಿಯಡಿ ಓಡಬೇಕೇ? ಅಥವಾ ಸ್ಟೇಜ್ ಕ್ಯಾರೇಜ್ ಪರವಾನಗಿಯಡಿ? ರಾತ್ರಿ ಪ್ರಯಾಣಿಕ ಸೇವೆಗಳಿಗೆ ಪ್ರತ್ಯೇಕ ರಸ್ತೆ ಪರವಾನಗಿ ಇಲ್ಲ ಏಕೆ? ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಈ ದಶಕಗಳ ಹಳೆಯ ವ್ಯತ್ಯಾಸ ಕಾಣದೆಯೇ ಇದ್ದಿತೇ?

ದಶಕಗಳ ಕಾಲ ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುವ ಸಾವಿರಾರು ಬಸ್‌ಗಳು ಕಾನೂನು ಬದ್ಧ ಅನುಮತಿಯಿಲ್ಲದೆ ಸಂಚರಿಸುತ್ತಿರುವುದು ಆಡಳಿತದ ನಿರ್ಲಕ್ಷ್ಯ. ಮಹಾ ಹೆದ್ದಾರಿಗಳನ್ನು ಕಟ್ಟುವುದು ಸುಲಭ. ಆದರೆ ಪ್ರಯಾಣಿಕರ ಸುರಕ್ಷಿತ ರಾತ್ರಿ ಸಂಚಾರವನ್ನು ಖಚಿತಪಡಿಸುವುದು ಸರಕಾರದ ನಿಜವಾದ ಕರ್ತವ್ಯ. ಸಂಸತ್‌ನಲ್ಲಿ ಹಲವು ಬಾರಿ ಈ ವಿಷಯದ ಬಗ್ಗೆ ಚರ್ಚೆಗಳು ನಡೆದರೂ, ಚಾಲಕರ ವಿಶ್ರಾಂತಿ ಅವಧಿ, ಪ್ರಯಾಣಿಕರ ಸುರಕ್ಷತೆ, ದರದ ನಿಯಂತ್ರಣ, ನಿಲುಗಡೆ ಕೇಂದ್ರಗಳ ವ್ಯವಸ್ಥೆ ಮುಂತಾದ ವಿಚಾರಗಳಲ್ಲಿ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಸಾವಿರಾರು ಬಸ್‌ಗಳು ನಿಯಂತ್ರಣವಿಲ್ಲದೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಸಂಚರಿಸುತ್ತಿವೆ.
ಈ ಕ್ಷೇತ್ರದಲ್ಲಿಯೂ ದೊಡ್ಡ ಉದ್ಯಮ ಗುಂಪುಗಳು, ಬಂಡವಾಳಶಾಹಿಗಳು ಶಿಕ್ಷಣ ಸಂಸ್ಥೆಗಳಲ್ಲಿ, ಸಕ್ಕರೆ ಕಾರ್ಖಾನೆಗಳಲ್ಲಿ ಹಾಗೂ ಮೆಡಿಕಲ್ ಕಾಲೇಜು ನಿರ್ವಹಣಾ ಮಂಡಳಿಗಳಲ್ಲಿ ಪ್ರಭಾವ ಬೀರಿರುವಂತೆಯೇ ಪ್ರಭಾವ ಬೀರಿದೇಯೇ? ಸರಕಾರಗಳು ಕ್ರಮ ತೆಗೆದುಕೊಳ್ಳುವುದನ್ನು ತಪ್ಪಿಸುತ್ತಿವೆ ಎಂಬ ಭಾವನೆ ಪ್ರಬಲವಾಗಿದೆ. ಅಪಘಾತಗಳು ನಡೆದಾಗ ಮಾತ್ರ ಚರ್ಚೆಗಳು ನಡೆಯುತ್ತವೆ. ಆದರೆ ನಿಜ ಹೇಳಬೇಕಾದರೆ, ನಿಯಂತ್ರಣವಿಲ್ಲದ ರಾತ್ರಿ ಸಾರಿಗೆಯ ಈ ವ್ಯವಸ್ಥೆ ಪ್ರತಿದಿನ ಸಾವಿರಾರು ಜೀವಗಳಿಗೆ ಅಪಾಯ ತಂದೊಡ್ಡುತ್ತಿದೆ. ಆದ್ದರಿಂದ ತಕ್ಷಣದ ಮಟ್ಟಿಗೆ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಕೆಳಗಿನ ಕ್ರಮಗಳನ್ನು ಜಾರಿಗೆ ತರುವುದು ಅತ್ಯವಶ್ಯಕ.
1) ಸುರಕ್ಷಿತ ನಿಲುಗಡೆ ಮತ್ತು ವಿಶ್ರಾಂತಿ ಕೇಂದ್ರಗಳ ನಿರ್ಮಾಣ.
2) ಚಾಲಕರಿಗೆ ಕಡ್ಡಾಯ ವಿಶ್ರಾಂತಿ ಅವಧಿಯ ನಿಯಮ.
3) ಪ್ರಯಾಣಿಕ ವಿಮೆ ಮತ್ತು ತುರ್ತು ರಕ್ಷಣಾ ವ್ಯವಸ್ಥೆ.
4) ಕೇಂದ್ರ ಸಾರಿಗೆ ಸಚಿವಾಲಯವು ತಕ್ಷಣವೇ ದೂರ ಪ್ರಯಾಣದ ರಾತ್ರಿ ಬಸ್ ಸೇವೆಗಳಿಗೆ ಸಮಗ್ರ ಕಾನೂನು ರೂಪುರೇಷೆ ರೂಪಿಸಬೇಕು.
ಭಾರತದ ರಸ್ತೆ ಜಾಲದ ಉದ್ದದ ಬಗ್ಗೆ ಹೆಮ್ಮೆಪಡುವ ಮೊದಲು, ಆ ರಸ್ತೆಯಲ್ಲಿ ಪ್ರಯಾಣಿಸುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಸರಕಾರದ ಕರ್ತವ್ಯ.
ರಾತ್ರಿ ಬಸ್‌ಗಳು ಕೇವಲ ಸಾರಿಗೆಯ ಸಾಧನಗಳಲ್ಲ. ಅವು ಲಕ್ಷಾಂತರ ಜನರ ಆಸೆ, ಸಂಚಾರ, ಬದುಕಿನ ಕೊಂಡಿ. ಆದರೆ ನಿಯಂತ್ರಣವಿಲ್ಲದೆ ಅವು ಅಪಾಯದ ಮಾರ್ಗವಾಗುತ್ತಿವೆ. ಎಲ್ಲರೂ ಹಗಲು ಕನಸು ಕಾಣುತ್ತಾರೆ. ಆದರೆ ಸುರಕ್ಷಿತ ರಾತ್ರಿ ಪ್ರಯಾಣದ ಕನಸು ಕಾಣುವವರು ಎಷ್ಟು ಮಂದಿ? ಆ ಉತ್ತರ ಮತ್ತು ಅದರ ಹೊಣೆಗಾರಿಕೆ ನಿಸ್ಸಂದೇಹವಾಗಿ ಸರಕಾರದ ಮೇಲಿದೆ.