- ಕೆ. ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ

ನಿರ್ದೇಶಕರು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ

ಯಾವುದೇ ದೇಶ ಅಥವಾ ಪ್ರದೇಶ ಅಭಿವೃದ್ಧಿಯ ದಾರಿಯಲ್ಲಿ ಸಾಗಬೇಕಾದರೆ ಅದರ ಅಡಿಪಾಯ ಶಾಂತಿಯೇ ಆಗಿರಬೇಕು. ಶಾಂತಿ ಕೇವಲ ಯುದ್ಧದ ಅಭಾವವಲ್ಲ; ಅದು ಭದ್ರತೆ, ವಿಶ್ವಾಸ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮೂಲಶಕ್ತಿ. ಶಾಂತಿಯ ನೆಲೆಯಲ್ಲಿ ಮಾತ್ರ ಹೂಡಿಕೆಗಳು ಹರಿದುಬರುತ್ತವೆ, ಉದ್ಯಮಗಳು ಬೆಳೆಯುತ್ತವೆ ಮತ್ತು ಪ್ರವಾಸೋದ್ಯಮ ಅರಳುತ್ತದೆ ಇದಕ್ಕೆ ಭಾರತವೂ ಹೊರತಲ್ಲ.

ಜಗತ್ತಿನ ಅನೇಕ ರಾಷ್ಟ್ರಗಳು ಇದಕ್ಕೆ ಸಾಕ್ಷಿ. ದುಬೈ, ಇಂಡೋನೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ, ಬಾಲಿ, ಸಿಂಗಾಪುರ ಮತ್ತು ಭೂತಾನ್ ದೇಶಗಳು ಪ್ರವಾಸೋದ್ಯಮದಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ಪ್ರಮುಖ ಕಾರಣ ಶಾಂತಿ ಮತ್ತು ಭದ್ರತೆ. ಪ್ರವಾಸಿಗರು ಕೇವಲ ಪ್ರಕೃತಿ ಸೌಂದರ್ಯವನ್ನಷ್ಟೇ ಅಲ್ಲ, ಸುರಕ್ಷಿತ ಮತ್ತು ಪ್ರಶಾಂತ ವಾತಾವರಣವನ್ನೇ ಹುಡುಕುತ್ತಾರೆ.

ಭಾರತವೂ ತನ್ನ ಧರ್ಮ ಸಹಿಷ್ಣುತೆ, ವೈವಿಧ್ಯಮಯ ಸಂಸ್ಕೃತಿ ಮತ್ತು ರಾಜತಾಂತ್ರಿಕ ಪರಿಪಕ್ವತೆಯಿಂದ ಜಾಗತಿಕ ವಿಶ್ವಾಸವನ್ನು ಗಳಿಸಿದೆ. ಆದರೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಜಾಗತಿಕ ಅಸ್ಥಿರತೆಯನ್ನು ಹೆಚ್ಚಿಸಿ, ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಇಂಧನದ ದರ ಏರಿಕೆ, ಸರಬರಾಜು ವ್ಯತ್ಯಯ ಮತ್ತು ಹಣದುಬ್ಬರವು ಸಾಮಾನ್ಯ ಜನರ ಬದುಕಿಗೂ ಹೊರೆ ಆಗುತ್ತಿದೆ.

ಇದನ್ನೂ ಓದಿ: ಪ್ರವಾಸಿಗರಿಗೆ ಹೊಸ ಯುದ್ಧಸ್ಮಾರಕ ನೋಡುವ ಸಂಕಟ ಬಾರದಿರಲಿ

ಈ ಪರಿಸ್ಥಿತಿಯಲ್ಲಿ ಪ್ರವಾಸೋದ್ಯಮ ಮತ್ತು ಅತಿಥ್ಯ ಕ್ಷೇತ್ರಗಳು ಮೊದಲ ಹೊಡೆತ ಅನುಭವಿಸುತ್ತಿವೆ. ಭದ್ರತಾ ಆತಂಕ ಮತ್ತು ಆರ್ಥಿಕ ಅನಿಶ್ಚಿತತೆ ಪ್ರವಾಸಿಗರ ಓಡಾಟವನ್ನು ಕಡಿಮೆ ಮಾಡುತ್ತಿವೆ. “ಶಾಂತಿ ಎಲ್ಲಿ ಇದೆಯೋ ಅಲ್ಲಿ ಪ್ರವಾಸಿಗರ ಕಲರವ” ಎಂಬುದು ಮತ್ತೆ ಸಾಬೀತಾಗಿದೆ.

ಇಂತಹ ಸಂದರ್ಭದಲ್ಲಿ ಜಾಗತಿಕ ಶಾಂತಿ ಅತ್ಯಗತ್ಯ. United Nations ಮುಂತಾದ ಸಂಸ್ಥೆಗಳು ಸಂಘರ್ಷ ಪರಿಹಾರಕ್ಕೆ ಆದ್ಯತೆ ನೀಡಬೇಕು. ಯುದ್ಧದ ದಾರಿ ಅಭಿವೃದ್ಧಿಗೆ ಅಲ್ಲ ಅದು ಅನಿಶ್ಚಿತತೆಯ ದಾರಿ.

ಅಂತಿಮವಾಗಿ, ಅಭಿವೃದ್ಧಿಯ ನಿಜವಾದ ದಾರಿ ಶಾಂತಿಯಲ್ಲಿ ಮಾತ್ರ ಇದೆ.

ಪ್ರೀತಿಯ ಪರಿವಾಳ ಹಾರಿ ಬರಲಿ; ಶಾಂತಿಯ ಸಂದೇಶವೇ ವಿಶ್ವದ ಬೆಳವಣಿಗೆಯ ಮಾರ್ಗವಾಗಲಿ.