ಬದುಕನ್ನು ಕಲಿಸುವುದೇ ಪ್ರವಾಸ- ಖುಷಿ ರವಿ
ನನಗೆ ಪ್ರವಾಸ ಎಂದರೆ ಸ್ಟ್ರೆಸ್ ಬಸ್ಟರ್ ಇದ್ದ ಹಾಗೆ. ಎಷ್ಟೇ ಸಂಪತ್ತಿದ್ದರೂ, ಎಷ್ಟೇ ದೊಡ್ಡ ಪ್ರಾಪರ್ಟಿ ಇದ್ದರೂ ಒಂದು ಪ್ರವಾಸ ಹೋಗಿಲ್ಲ ಎಂದರೆ ಅವೆಲ್ಲವೂ ಶೂನ್ಯ ಅನಿಸಿಬಿಡುತ್ತದೆ. ಹತ್ತಿರದ ಸುತ್ತಮುತ್ತಲಿನ ಜಾಗಕ್ಕೆ ಮಾಡುವ ಪ್ರವಾಸಗಳು ಒಂದಿಷ್ಟು ವಿಷಯಗಳನ್ನು ಕಲಿಸಿದರೆ, ದೂರದ ಗೊತ್ತಿಲ್ಲದ ದೇಶಕ್ಕೆ ಹೋದಾಗ ಬದುಕಿನ ಇನ್ನೊಂದು ದೃಷ್ಟಿಕೋನವನ್ನು ಪರಿಚಯಿಸುತ್ತದೆ. ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು, ಯಾವುದು ಎಷ್ಟು ಮುಖ್ಯ, ಯಾವುದಕ್ಕೆ ಎಷ್ಟು ಗಮನ ನೀಡಬೇಕು ಎಲ್ಲವನ್ನೂ ಕಲಿಸುವುದೇ ಪ್ರವಾಸ.
ಕನ್ನಡ ಚಿತ್ರರಂಗದಲ್ಲಿ ಹಲವು ವಿಭಿನ್ನ ಸಿನಿಮಾಗಳಲ್ಲಿ ಛಾಪು ಮೂಡಿಸಿರುವ ನಟಿ ಖುಷಿ ರವಿ ಈಗ ಪರಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಖುಷಿ ಸಣ್ಣ ವಿರಾಮ ಪಡೆದು ಮಗಳ ಜತೆಗೆ ಇತ್ತೀಚೆಗೆ ವಿದೇಶ ಪ್ರವಾಸ ಹೋಗಿಬಂದಿದ್ದಾರೆ. ಈ ಪ್ರವಾಸದ ಅನುಭವ ಹಾಗೂ ಅವರ ಉಳಿದ ಪ್ರವಾಸದ ಕಥೆಗಳನ್ನು ಮುಕ್ತವಾಗಿ ಪ್ರವಾಸಿ ಪ್ರಪಂಚದ ಜತೆಗೆ ಹಂಚಿಕೊಂಡಿದ್ದಾರೆ.
ಪ್ರವಾಸ ಶುರುವಾಗಿದ್ದೇ ತಡವಾಗಿ
ಚಿಕ್ಕ ವಯಸ್ಸಿನಲ್ಲಿ ಅಷ್ಟೆಲ್ಲಾ ಎಲ್ಲೂ ಪ್ರವಾಸ ಹೋಗಿರಲಿಲ್ಲ. ಅಮ್ಮನಿಗೆ ನನ್ನ ಅಜ್ಜ ಅಜ್ಜಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಇದ್ದ ಕಾರಣ ಎಲ್ಲೂ ಹೆಚ್ಚು ಹೋಗಲು ಆಗುತ್ತಿರಲಿಲ್ಲ. ಮೊದಲು ಪ್ರವಾಸ ಅಂತ ಮೈಸೂರು ದಸರಾ ನೋಡಲು ಹೋದಾಗ ನಾನು ಮೊದಲ ವರ್ಷ ಡಿಗ್ರಿ ಮಾಡುವಾಗ. ಅದಾದ ಬಳಿಕ ಅನೇಕ ಪ್ರವಾಸಗಳನ್ನು ಮಾಡುವ ಅವಕಾಶ ಸಿಕ್ಕಿದ್ದು ಸ್ಪಂದನ ತಂಡದಲ್ಲಿ ರಂಗಕರ್ಮಿಯಾಗಿದ್ದಾಗ. ಆಗ, ಅಸ್ಸಾಂ, ಗುವಾಹಟಿ, ಕೊಲ್ಕತ್ತಾ, ಮುಂಬೈ, ದೆಹಲಿ ಹೀಗೆ ಹಲವು ಕಡೆ ಸುತ್ತುವ ಅವಕಾಶ ಸಿಕ್ಕಿತು. ಎನ್‌ಸಿಸಿಯಲ್ಲಿದ್ದಾಗ ದೆಹಲಿಯಲ್ಲಿ ಪರೇಡ್ ಮಾಡುವ ಅವಕಾಶ ಸಿಕ್ಕಿತ್ತು. ಹಾಗೇ ಶುರುವಾದ ಪ್ರವಾಸ ಈಗ ಅನೇಕ ಜಾಗಗಳಿಗೆ ಹೋಗಿದ್ದೇನೆ. ವಿದೇಶ ಪ್ರಯಾಣ ಶುರು ಮಾಡಿದ ಬಳಿಕ ದುಬೈ, ಆಮ್ಸ್‌ಟರ್ಡಮ್, ಇನ್ನೂ ಹಲವು ಕಡೆ ಹೋಗಿದ್ದೇನೆ.
ಇದನ್ನೂ ಓದಿ: ರೈಲು ಪ್ರವಾಸದೊಳ್ ಕಂಡ ಜಗತ್ತು
ವಿದೇಶದಲ್ಲಿ ಮಗಳ ಜತೆಗೆ..
ಇತ್ತೀಚೆಗೆ ಸಿನಿಮಾ ಹಾಗೂ ಇತರ ಕೆಲಸಗಳಿಂದ ಒತ್ತಡವಾಗಿತ್ತು. ಒಂದು ಸಣ್ಣ ವಿರಾಮ ಬೇಕಿದ್ದ ಕಾರಣ ವಿದೇಶ ಟ್ರಿಪ್ ಪ್ಲಾನ್ ಆಯಿತು. ಮಗಳಿಗೆ ಚಿಕ್ಕವಯಸ್ಸಿನಲ್ಲಿ ಏನೂ ಗೊತ್ತಾಗುವುದಿಲ್ಲ ಎಂದು ಸುಮ್ಮನಿದ್ದೆವು. ಈಗ ಅವಳಿಗೂ 7 ವರ್ಷಗಳಾಗಿದ್ದರಿಂದ ಜರ್ಮನಿ, ನೆದರ್‌ಲ್ಯಾಂಡ್ಸ್, ಸ್ಕಾಟ್ಲೆಂಡ್‌ಗೆ ಹೋಗುವ ಯೋಜನೆ ಸಿದ್ಧವಾಯಿತು. ಜರ್ಮನಿಯಲ್ಲಿ ನನ್ನ ಅಕ್ಕ ಭಾವ ಇದ್ದ ಕಾರಣ ಏನೂ ಸಮಸ್ಯೆ ಆಗಲಿಲ್ಲ. ಮಗಳಿಗೆ ವಿದೇಶ ವಾತಾವರಣ ಹೊಂದಾಣಿಕೆ ಆಗುತ್ತದೆಯೋ ಇಲ್ಲವೋ, ಊಟ ತಿಂಡಿ ಸರಿಯಾಗುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲೇ ಈ ಪ್ರವಾಸ ಶುರು ಮಾಡಿದ್ದಾಗಿತ್ತು. ಅದೂ ಅಲ್ಲದೆ, ಬಹುತೇಕ ಯುರೋಪ್ ದೇಶಗಳಲ್ಲಿ ಹೆಚ್ಚೆಚ್ಚು ನಡೆಯಬೇಕು. ಅವಳಿಗೆ ಅಷ್ಟು ನಡೆಯಲು ಸಾಧ್ಯವಾಗದಿದ್ದರೆ ಎಂಬ ಭಯವೂ ಇತ್ತು. ಆದರೆ, ಅವೆಲ್ಲದಕ್ಕೂ ಮಗಳು ಬಹಳ ಖುಷಿಯಿಂದ ಸ್ಪಂದಿಸಿದಳು. ಬಹಳ ಎಂಜಾಯ್ ಕೂಡ ಮಾಡಿದಳು.

ಬಕೆಟ್ ಲಿಸ್ಟ್
ಈ ವರ್ಷದ ಪ್ರವಾಸದ ಬಳಿಕ ಪ್ರತಿ ವರ್ಷ ಒಂದಾದರೂ ಹೊರದೇಶದ ಪ್ರವಾಸ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇನೆ. ಕುಟುಂಬ ಅಥವಾ ಫ್ರೆಂಡ್ಸ್ ಯಾರ ಜತೆಗಾದರೂ ಒಂದು ಪ್ರವಾಸಕ್ಕೆ ಹೋದಾಗ ಆಗುವ ಸಮಾಧಾನ ಮತ್ತೊಂದಿಲ್ಲ. ಈಗಾಗಲೇ ಮುಂದಿನ ವರ್ಷ ಬೇಸಗೆಗೆ ಅಮೆರಿಕಕ್ಕೆ ಹೋಗುವ ಯೋಜನೆ ಮಾಡಾಗಿದೆ. ಈಗಾಗಲೇ ವೀಸಾ ಕೂಡ ಅಪ್ಲೈ ಮಾಡಲಾಗಿದೆ. ಅದಾದ ನಂತರ ಇನ್ನೂ ಹಲವು ದೇಶಗಳನ್ನು ಸುತ್ತಬೇಕು ಎಂಬ ಆಸೆಯಿದೆ.
ನಾನು ಫುಡ್ಡೀ..
ನನಗೆ ಯಾವುದೇ ಪ್ರವಾಸಕ್ಕೆ ಹೋದಾಗ ಅಲ್ಲಿನ ಲೋಕಲ್ ಫುಡ್ ಸೇವನೆ ಮಾಡುವುದು ಬಹಳ ಇಷ್ಟ. ನಾನು ನಾನ್ ವೆಜ್ ಆದರೂ ಮೊದಲಿನಿಂದಲೂ ಸೀ ಫುಡ್ ತಿಂದು ಅಭ್ಯಾಸ ಇರಲಿಲ್ಲ. ಈ ಬಾರಿ ಜರ್ಮನಿಗೆ ಹೋದಾಗ ಅಲ್ಲಿ ಅಕ್ಕನ ಮನೆಯಲ್ಲಿ ಸೀ ಫುಡ್ ಟ್ರೈ ಮಾಡಿದೆ. ಅದು ಕೂಡ ಚೆನ್ನಾಗಿತ್ತು.
ಪ್ರವಾಸ ಕಲಿಸುವ ಪಾಠ
ನನಗೆ ಪ್ರವಾಸ ಎಂದರೆ ಸ್ಟ್ರೆಸ್ ಬಸ್ಟರ್ ಇದ್ದ ಹಾಗೆ. ಎಷ್ಟೇ ಸಂಪತ್ತಿದ್ದರೂ, ಎಷ್ಟೇ ದೊಡ್ಡ ಪ್ರಾಪರ್ಟಿ ಇದ್ದರೂ ಒಂದು ಪ್ರವಾಸ ಹೋಗಿಲ್ಲ ಎಂದರೆ ಅವೆಲ್ಲವೂ ಶೂನ್ಯ ಅನಿಸಿಬಿಡುತ್ತದೆ. ಹತ್ತಿರದ ಸುತ್ತಮುತ್ತಲಿನ ಜಾಗಕ್ಕೆ ಮಾಡುವ ಪ್ರವಾಸಗಳು ಒಂದಿಷ್ಟು ವಿಷಯಗಳನ್ನು ಕಲಿಸಿದರೆ, ದೂರದ ಗೊತ್ತಿಲ್ಲದ ದೇಶಕ್ಕೆ ಹೋದಾಗ ಬದುಕಿನ ಇನ್ನೊಂದು ದೃಷ್ಟಿಕೋನವನ್ನು ಪರಿಚಯಿಸುತ್ತದೆ. ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು, ಯಾವುದು ಎಷ್ಟು ಮುಖ್ಯ, ಯಾವುದಕ್ಕೆ ಎಷ್ಟು ಗಮನ ನೀಡಬೇಕು ಎಲ್ಲವನ್ನೂ ಕಲಿಸುವುದೇ ಪ್ರವಾಸ. ಹಿಂದಿನವರು ದೇಶ ಸುತ್ತು ಕೋಶ ಓದು ಎಂದು ಸುಮ್ನನೇ ಹೇಳಿಲ್ಲ ಎನ್ನುವುದು ಗೊತ್ತಾಗುತ್ತದೆ. ದೂರದ ಪ್ರಯಾಣವಾದರೆ ಕಷ್ಟವಾಗುತ್ತದೆ. ಆದರೆ ನನಗೆ ರಸ್ತೆಯಲ್ಲಿ ಮಾಡುವ ಪ್ರಯಾಣ ತುಂಬಾ ಇಷ್ಟ. ಡ್ರೈವಿಂಗ್ ಅಂತ ಅಲ್ಲ ಆದರೆ ಹಿಂದಿನ ಸೀಟ್ ಅಲ್ಲಿ ಕುಳಿತು ಪೋಡ್ಕಾಸ್ಟ್ ಅಥವಾ ಸೀರೀಸ್ ನೋಡುತ್ತಾ ಹೋಗುವುದು ನನಗೆ ತುಂಬಾ ಇಷ್ಟ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುವಾಗಲೂ ಅಷ್ಟೇ. ಆದಷ್ಟು ವಿಮಾನ ಪ್ರಯಾಣವನ್ನು ಕಡಿಮೆ ಮಾಡಿ, ರಸ್ತೆ ಪ್ರಯಾಣವನ್ನು ಹೆಚ್ಚು ಇಷ್ಟಪಡುತ್ತೇನೆ.

ಸಿನಿಮಾ ಮೇಲೆ ಪ್ರಭಾವ
ಸದ್ಯ ಎರಡು ಕನ್ನಡ ಸಿನಿಮಾಗಳು ನಡೆಯುತ್ತಿವೆ. ಅದರಲ್ಲೊಂದು ಮಂಗಳೂರಿನ ಭಾಗದ ಕಥೆ. ಆ ಚಿತ್ರದ ಚಿತ್ರೀಕರಣಕ್ಕೆ ಮುಂಚಿತವಾಗಿಯೇ ಹೋಗಿದ್ದೆ. ಹೀಗಾಗಿ ನನಗೆ ಅಲ್ಲಿನ ಭಾಷೆ, ಶೈಲಿ, ಜನರ ಹಾವಭಾವ ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಸಹಾಯವಾಯಿತು. ಸುಮ್ಮನೇ ಚಿತ್ರೀಕರಣಕ್ಕೆ ಹೋಗಿ ಬಂದಿದ್ದರೆ ಬಹುಶಃ ಹೆಚ್ಚು ಕಲಿಯಲು ಅವಕಾಶ ಆಗುತ್ತಿರಲಿಲ್ಲ. ಅಲ್ಲಿ ನನ್ನ ಮೈದುನನ ಪಾತ್ರ ಮಾಡುತ್ತಿದ್ದ ಸಹ ಕಲಾವಿದ ಮಂಗಳೂರಿನವರೇ ಆಗಿದ್ದರು. ನನಗೆ ಮಾತಿನ ಧಾಟಿಯನ್ನು ಬಹಳ ಸಂಯಮದಿಂದ ಕಲಿಸುತ್ತಿದ್ದರು.
ಸಿನಿಮಾ ಮತ್ತು ಸಾಹಸ
ತಮಿಳಿನ ಸಿನಿಮಾ ಸದ್ಯ ಒಟಿಟಿಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಅದರ ಜತೆಗೆ ಈಗ ಎರಡು ಕನ್ನಡ ಸಿನಿಮಾಗಳನ್ನು ಮಾಡುತ್ತಿದ್ದೇನೆ. ರಾಹುಲ್ ನಿರ್ದೇಶನದ ಸಿನಿಮಾದಲ್ಲಿ ಮಹಿಳೆಯರೇ ಇಲ್ಲದ ಮನೆಗೆ ಸೊಸೆಯಾಗುವ ಪಾತ್ರ ನನ್ನದು. ಅದೊಂದು ವಿಶೇಷ ರೀತಿಯಲ್ಲಿದೆ. ತಂಡ ಕೂಡ ಅದ್ಭುತವಾಗಿದೆ. ಮಲಯಾಳಂನ ಮಿಧುನ್ ಈ ಚಿತ್ರದ ನಾಯಕ. ಇನ್ನೊಂದು ಗಗನ್ ನಿರ್ದೇಶನದ ಸ್ತ್ರೀ ಪ್ರಧಾನ ಸಿನಿಮಾ. ಇದು ಸಂಪೂರ್ಣ ಮಂಗಳೂರು ಭಾಗದ ಶೈಲಿಯಲ್ಲಿದೆ. ಇದರಲ್ಲಿ ಆಕ್ಷನ್ ಸನ್ನಿವೇಶಗಳು ಕೂಡ ಇವೆ. ಇಂಥದ್ದೊಂದು ಗಟ್ಟಿ ಪಾತ್ರವನ್ನು ಮಾಡಲು ಬಹಳ ಖುಷಿಯಿದೆ. ಈ ಎರಡೂ ಸಿನಿಮಾಗಳು ಮುಕ್ತಾಯ ಹಂತದಲ್ಲಿದೆ. ಒಂದು ಇದೇ ವರ್ಷ ಬರಬಹುದು. ಇನ್ನೊಂದು ಈ ವರ್ಷದ ಕೊನೆ ಅಥವಾ ಮುಂದಿನ ವರ್ಷದ ಶುರುವಿನಲ್ಲಿ ನಿರೀಕ್ಷಿಸಬಹುದು. ಗಗನ್ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮಾಡಿದ ಕರಾವಳಿಯ ವಾತಾವರಣದ ಚಿತ್ರೀಕರಣ ತುಂಬ ಒಳ್ಳೆಯ ಅನುಭವವನ್ನು ನೀಡಿತು. ಹಾಗೆಯೇ ರಾಹುಲ್ ಅವರ ನಿರ್ದೇಶನದಲ್ಲಿ ಮಾಡಿದ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಮೂಡಿ ಬರುತ್ತಿರುವುದು ಖುಷಿಯ ವಿಚಾರ.