Monday, July 6, 2026
Monday, July 6, 2026

ಬೈಕ್ ರೈಡ್ ಇಷ್ಟವಾಗಲು ಕಾರಣಗಳು ಬೇಕೇ?

ಮೆಟ್ರೋ, ಬಸ್ಸು, ಕಾರು ಎಲ್ಲದರಲ್ಲೂ ಸಿಗದ ಒಂದು ಮಜ, ಒಂಟಿತನದಲ್ಲೂ ಒಂದು ನೆಮ್ಮದಿಯಿದೆ ಎಂಬ ಸಮಾಧಾನ ಈ ಎರಡು ಚಕ್ರಗಳ ಮೇಲಿದೆ. ಸಾಮನ್ಯವಾಗಿ ಬೈಕ್‌ ರೈಡ್‌ ಯಾಕೆ ಇಷ್ಟ ಎನ್ನುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ.

  • ಪ್ರಮೋದ ಮೋಹನ ಹೆಗಡೆ

ಬೈಕ್‌ ಹತ್ತಿ ಹೈವೇಯಲ್ಲೋ, ಘಾಟ್‌ ಸೆಕ್ಷನ್‌ ಅಲ್ಲೋ ಅಥವಾ ಯಾವುದೋ ಹಳ್ಳಿ ರಸ್ತೆಯಲ್ಲಿ ಹೋಗುವ ಅನುಭವ ಹೇಗಿರುತ್ತದೆ ಎಂದು ಒಬ್ಬ ಬೈಕ್‌ ರೈಡರ್‌ಗೆ ಕೇಳಿದರೆ ಬಹುಶಃ ಅರ್ಥವಾಗುವಂಥ ಸೂಕ್ತ ಉತ್ತರ ಸಿಗುವುದು ಕಷ್ಟ. ಸಿಹಿಯನ್ನು ಹೇಗಾದರೂ ವಿವರಿಸಿ ಎಂದರೆ ಹೇಗೆ ಸಾಧ್ಯ? ತಿಂದು ನೋಡಬೇಕು ಅಷ್ಟೇ! ಅದೇ ರೀತಿ ಈ ಅನುಭವ ಹೇಗಿರುತ್ತದೆ ಎಂದು ಕೇಳಿದರೆ ಅನುಭವಿಸಬೇಕು ಎನ್ನುವುದೊಂದೇ ಉತ್ತರ. ಹಾಗಂತ ಇದು ಎಲ್ಲರಿಗೂ ರುಚಿಸುವ ಸಿಹಿಯಂತಿರುವುದಿಲ್ಲ. ಕೆಲವರಿಗೆ ವರ್ಜ್ಯ. ಆದರೆ, ಇಷ್ಟಪಡುವವರ ದೃಷ್ಟಿಯಿಂದ ನೋಡಿದರೆ ಹೊಸ ಆಯಾಮವೇ ಕಾಣಿಸುತ್ತದೆ. ಅದೇನೋ ಬೊರೋ ಅಂತ ಗಾಡಿ ಓಡ್ಸಿ ಹೋಗೋದಂತೆ, ಯಾವುದೋ ಗುಡ್ಡದ ಮೇಲೆ ಸಣ್ಣ ಟೀ ಅಂಗಡಿಯಲ್ಲಿ ಟೀ ಕುಡಿಯೋದಂತೆ ಮತ್ತೆ ಅಲ್ಲಿಂದ ಬೊರೋ ಅಂತ ಗಾಡಿ ಓಡ್ಸ್‌ಕೊಂಡು ಬರೋದಂತೆ ಎಂದು ಮಾತನಾಡುವವರಿಗೆ ಬೈಕ್‌ ರೈಡ್‌ ಫೀಲ್‌ ಹೇಳುವುದಾದರೂ ಹೇಗೆ?

ಬೈಕ್ ರೈಡ್‌ ಮಾಡುವಾಗ ವಿಶೇಷ ನೆಮ್ಮದಿ ಸಿಗುತ್ತದೆ. ನೋಡುವಾಗ ಯಾಕೆ ಬೇಕು ಈ ಕಷ್ಟ ಅನಿಸಬಹುದು. ಆದರೆ, ಜಾಕೆಟ್‌ ಹಾಕಿ, ಫುಲ್‌ ರೆಡಿಯಾಗಿ, ಗಾಡಿ ಸ್ಟಾರ್ಟ್‌ ಮಾಡಿ, ರಸ್ತೆ ಮೇಲೆ ಹೋಗುವಾಗ ಈ ರಸ್ತೆಗೆ, ಗಾಡಿಯಲ್ಲಿರುವ ಪೆಟ್ರೋಲ್‌ ಎಂದಿಗೂ ಖಾಲಿಯಾಗಬಾರದು ಅನಿಸುತ್ತದೆ.

ಇದನ್ನೂ ಓದಿ: ಯಜಡಿ ಎಂಬ ಬೈಕ್‌ ಜತೆಗಿನ ಭಾವಬಂಧ

ಗಾಳಿ ಮತ್ತು ನಾನು

ಕಾರಿನಲ್ಲಿ ಹೋಗುವಾಗ ಸಾಮಾನ್ಯವಾಗಿ ಎರಡು ಸಮಸ್ಯೆಗಳು ಎದುರಾಗುತ್ತವೆ. ಕಾರೊಳಗೆ ಎಸಿ ಹಾಕಕಬೇಕಾಗುತ್ತದೆ. ಹಾಕಿದರೆ ಹೊರಗಿನ ಪರಿಸರದ ಗಾಳಿಯ ಸ್ಪರ್ಶ ಆಗುವುದಿಲ್ಲ. ರಸ್ತೆ ಕಾಣಿಸುತ್ತದೆ, ವೇಗವಾಗಿ ಹೋಗಬಹುದು ಆದರೆ, ಹೊರಗೆ ಗಾಳಿ ಮಾತ್ರ ಕಾರಿನ ಗಾಜಿಗೆ ತಾಕಿ ಮರಣ ಹೊಂದುತ್ತಿರುತ್ತದೆ. ಒಂದುವೇಳೆ ಕಿಟಕಿ ಇಳಿಸಿದರೆ, ಧೂಳು ಕಾರೊಳಗೆ ಬರುತ್ತದೆ. ಕಾರೊಳಗೆ ಅಂಟಿಕೊಳ್ಳುತ್ತವೆ. ಅವುಗಳನ್ನು ತೆಗೆಯುವುದೇ ದೊಡ್ಡ ಸವಾಲಿನ ಕೆಲಸವಾಗುತ್ತದೆ. ಇವೆರಡನ್ನೂ ಬ್ಯಾಲೆನ್ಸ್‌ ಮಾಡುವುದು ಸುಲಭವಲ್ಲ. ಆದರೆ, ಬೈಕ್‌ನಲ್ಲಿ ಹಾಗಿಲ್ಲ. ಗಾಳಿಯ ಸ್ಪರ್ಶ ಆಗುತ್ತಲೇ ಇರುತ್ತದೆ. ಧೂಳಿನ ಚಿಂತೆಯೂ ಇರುವುದಿಲ್ಲ. ಸುತ್ತಲಿನ ಪರಿಸರ ಬೈಕ್‌ ಮೇಲೆ ಕೂತು ನೋಡಿದಾಗ ನಾವೂ ಅದರ ಒಂದು ಭಾಗವೆಂದು ಅರಿವಾಗುತ್ತದೆ.

Untitled design (34)

ಹೆಲ್ಮೆಟ್ ಒಳಗಿನ ಪ್ರಪಂಚ

ಯಾವ್ಯಾವುದೋ ಚಿಂತೆಗಳಿಂದ ದೂರವಾಗಲು ಒದ್ದಾಡುತ್ತಿರುತ್ತೇವೆ. ಬೇಜಾರಾದಾಗ ಅಳಲೂ ಆಗದಷ್ಟು ಗಟ್ಟಿಯಾಗಿ ಬುದುಕುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೆ, ಎದೆಯೊಳಿಗಿದ್ದ ಎಲ್ಲ ಫ್ರಸ್ಟರೇಷನ್‌ ಹೊರಹಾಕಲು ಒಂದು ಜಾಗ ಬೇಕಾಗುತ್ತದೆ. ಹೆಲ್ಮೆಟ್ ಹಾಕೊಂಡ ತಕ್ಷಣ ನಾವು ಹೊರಗಿನ ಪ್ರಪಂಚದಿಂದ ಕಟ್ ಆಫ್ ಆಬಹುದು. ಆ ಹೆಲ್ಮೆಟ್ ಒಳಗಡೆ ಯಾರದ್ದೂ ಕಾಟ ಇರುವುದಿಲ್ಲ. ನಮ್ಮ ಜತೆ ನಾವೇ ಮಾತಾಡಬಹುದು, ಇಲ್ಲವೆಂದರೆ ಸೈಲೆಂಟ್ ಆಗಿ ಯೋಚನೆ ಮಾಡಬಹುದು. ಕಿರುಚಬಹುದು. ಅದು ಕೇವಲ ನಮ್ಮದೇ ಆದ ಪರ್ಸನಲ್ ಸ್ಪೇಸ್. ಯಾವುದಾದರೂ ಹಾಡು ಕೇಳುತ್ತ ಅಪಸ್ವರದಲ್ಲಿ ಗುನುಗಬಹುದು. ಯಾರೂ ಹೀಗೆ ಹಾಡಬಾರದು ಎಂದು ಪಾಠ ಮಾಡುವುದಿಲ್ಲ.

ಅಪೂರ್ಣ ಪ್ರೇಮಕಥೆ

ಬೈಕ್‌, ರೈಡರ್‌ ಮತ್ತು ರಸ್ತೆಯ ನಡುವೆ ಒಂದು ಅಪೂರ್ಣ ತ್ರಿಕೋನ ಪ್ರೇಮಕಥೆಯಿದೆ. ಅದರಲ್ಲಿ ರಸ್ತೆ ತಾತ್ಕಾಲಿಕ. ಬೈಕ್‌ ಶಾಶ್ವತ. ಯಾವುದೋ ಒಂದು ರಸ್ತೆಯಲ್ಲಿ ಹೋಗುವಾಗ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ಒಡನಾಟ ಬೆಳೆಯುತ್ತದೆ. ಪ್ರತಿಯೊಂದು ತಿರುವು, ಪ್ರತಿಯೊಂದು ಏರಿಳಿತ ನೇರವಾಗಿ ಕನೆಕ್ಟ್ ಆಗುತ್ತದೆ. ಘಾಟ್ ಸೆಕ್ಷನ್‌ಗಳಲ್ಲಿ ಬೈಕ್ ಬೆಂಡ್ ಮಾಡುವಾಗ ರಸ್ತೆ ಹಾಗೂ ಬೈಕ್‌ ಎರಡಕ್ಕೂ ವಿಶೇಷ ಮನವಿ ಇರುತ್ತದೆ. ಆ ಮನವಿಗೆ ರಸ್ತೆ ಮತ್ತು ಗಾಡಿ ಎರಡೂ ಸ್ಪಂದಿಸುತ್ತವೆ ಕೂಡ. ಖಾಲಿ ರಸ್ತೆಯಲ್ಲಿ ಬೈಕ್‌ ಓಡಿಸುವಾಗ, ಆ ಕ್ಷಣ ಆ ರಸ್ತೆ ರನ್‌ವೇ ಆಗಿರುತ್ತದೆ, ನಾವು ಹಾರುತ್ತಿರುತ್ತೇವೆ. ಹಾಗಂತ ಆ ಪ್ರೇಮ ಶಾಶ್ವತವಲ್ಲ ಎನ್ನುವುದು ಗೊತ್ತಿರುವ ಸತ್ಯ. ತಾತ್ಕಾಲಿಕವಾದರೇನಂತೆ, ಪ್ರೇಮವೇ ಅಲ್ಲವೇ?

ಥೆರಪಿಯಂತೆ

ಮನಸು ತುಂಬಾ ಬೇಜಾರಿದ್ದಾಗ ಅಥವಾ ತಲೆ ಕೆಟ್ಟಿದ್ದಾಗ ಏನು ಮಾಡುವುದು ಎಂದು ಗೊತ್ತಿಲ್ಲದಿದ್ದಾಗ ಯಾವುದಾದರೂ ರಸ್ತೆಯಲ್ಲಿ ಬೈಕ್‌ ಓಡಿಸಬೇಕು ಅನಿಸುತ್ತದೆ. ಅದರಿಂದ ಎಲ್ಲವೂ ಬಗೆಹರಿಯುತ್ತದೆ ಎಂಬ ಕಾರಣಕ್ಕಲ್ಲ. ಒಬ್ಬ ಗೆಳೆಯ/ಗೆಳತಿ ಜತೆಗೆ ಕುಳಿತು ಏನೂ ಮಾತನಾಡದೆಯೇ ಕಾಲ ಕಳೆದರೂ ಮನಸಿಗೆ ಕೆಲವೊಮ್ಮೆ ಹಿತವಾಗುತ್ತದೆ. ಅಂಥದ್ದೊಂದು ಥೆರಪಿ ಬೈಕ್‌ ರೈಡ್‌ ಕೂಡ ಮಾಡುತ್ತದೆ. ದಾರಿಯಲ್ಲಿ ಏನೋ ಸವಾಲು ಎದುರಾದಾಗ ಅದನ್ನು ಎದುರಿಸುವ ಸಾಮರ್ಥ್ಯ ಹಾಗೂ ಯೋಚಿಸುವ ಶಕ್ತಿ ಇದೆ ಎಂಬ ಅರಿವು ಉಳಿದ ಯೋಚನೆಗಳಿಗೆ ಪರಿಹಾರವಾಗುತ್ತದೆ.

ಬೈಕ್‌ ಎಂಬ ಬೆಸ್ಟ್ ಫ್ರೆಂಡ್

ಸುಂದರ ನೆನಪುಗಳನ್ನು ಕಟ್ಟಿಕೊಡುವ ಬೈಕ್‌ ಯಾವತ್ತಿದ್ದರೂ ರೈಡರ್ಸ್‌ಗೆ ಬೆಸ್ಟ್‌ ಫ್ರೆಂಡ್‌. ಆಗಾಗ ಹೊಸ ಬಟ್ಟೆ, ಒಡವೆಗಳನ್ನು ಕೊಡಿಸಿ ಸಮಾಧಾನ ಮಾಡುತ್ತಿರಬೇಕಾಗುತ್ತದೆ. ಹೀಗೆ ಸಿಂಗಾರ ಮಾಡಿಸಿದ ಬೈಕನ್ನು ರೈಡ್‌ ಕರೆದುಕೊಂಡು ಹೋಗುವುದು ಕರ್ತವ್ಯ. ರೈಡರ್ಸ್‌ಗೆ ಬೈಕ್‌ ಮಷೀನ್‌ ಅಷ್ಟೇ ಅಗಿರುವುದಿಲ್ಲ. ಅದಕ್ಕೆ ಪ್ರೀತಿಯಿಂದ ಹೆಸರಿಡಲಾಗುತ್ತದೆ. ಅದಕ್ಕೆ ಏನಾದರೂ ಸಣ್ಣ ಪ್ರಾಬ್ಲಮ್ ಆದರೂ ಜೀವ ಒದ್ದಾಡುತ್ತದೆ. ಮಳೆ ಬಂದರೆ ಜತೆಗೆ ನೆನೆಯುತ್ತದೆ. ಬಿಸಿಲಲ್ಲಿ ಒದ್ದಾಡುತ್ತದೆ. ಕಷ್ಟದಲ್ಲೂ, ಸುಖದಲ್ಲೂ ಜತೆಗಿರುವ ಆ ಗಾಡಿಯ ಮೇಲಿನ ಪರ್ಸನಲ್ ಕನೆಕ್ಷನ್ ತುಂಬಾ ಅಪರೂಪದ್ದು. ಅದರ ಜತೆಗೆ ರೈಡ್‌ ಹೋಗುವುದು ಎಂದರೆ ಡೇಟ್‌ಗೆ ಹೋಗುವುದಕ್ಕಿಂತಲೂ ಸ್ವಲ್ಪ ಸ್ಪೆಷಲ್‌.

Untitled design (33)

'ಬ್ರದರ್‌ಹುಡ್' ಎಮೋಷನ್

ಒಬ್ಬ ರೈಡರ್‌ ಇನ್ನೊಬ್ಬ ರೈಡರ್‌ಗೆ ಬಹಳ ಬೇಗ ಹತ್ತಿರವಾಗಿಬಿಡುತ್ತಾರೆ. ಅಪರಿಚಿತ ಬೈಕ್ ರೈಡರ್ ಒಬ್ಬ ಎದುರಿಗೆ ಸಿಕ್ಕಾಗ ತಾನಾಗಿಯೇ ಕೈ ಎತ್ತಿ 'ವೇವ್' ಮಾಡುತ್ತಾರೆ ಅಥವಾ ಹೆಡ್‌ಲೈಟ್ ಡಿಪ್ಪರ್ ಹಾಕಿ ಗೌರವ ಕೊಡುತ್ತಾರೆ. ಈ 'ಬ್ರದರ್‌ಹುಡ್' ಬಾಂಡಿಂಗ್ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಎಲ್ಲೋ ಹೈವೇಲಿ ಗಾಡಿ ಕೆಟ್ಟು ನಿಂತರೆ, ಯಾರೋ ಅನ್ನೋ ರೀತಿ ನೋಡದೆ ಬಂದು ಸಹಾಯ ಮಾಡುವುದು ಇದೇ ಬೈಕ್ ರೈಡರ್ಸ್. ಈ ಸಂಬಂಧಕ್ಕೆ ಹೆಸರಿಡಬಾರದು.

ಪ್ರಯಾಣವೇ ಚೆಂದ!

ಎಲ್ಲೋ ಒಂದು ಕಡೆ ತಲುಪಬೇಕು ಎನ್ನುವ ಅವಸರ ಬೈಕ್ ರೈಡರ್ಸ್‌ಗೆ ಇರುವುದಿಲ್ಲ. ಹೋಗೋ ದಾರಿಯಲ್ಲಿ ಸಿಗುವ ಪ್ರಕೃತಿ, ಸೂರ್ಯೋದಯ, ಸೂರ್ಯಾಸ್ತ, ದಿಢೀರ್ ಅಂತ ಬರೋ ಮಳೆ... ಇವೆಲ್ಲವನ್ನೂ ಲೈವ್ ಆಗಿ ಎಂಜಾಯ್ ಮಾಡುತ್ತಾ ಹೋಗುವುದೇ ಬೈಕ್ ರೈಡಿಂಗ್ ವಿಶೇಷತೆ. ಇಲ್ಲಿ ಡೆಸ್ಟಿನೇಷನ್‌ಗಿಂತ ಜರ್ನಿನೇ ಜೀವನ. ಒಬ್ಬ ರೈಡರ್‌ ಇನ್ನೊಬ್ಬರಿಗೆ ಕೇಳುವ ಪ್ರಶ್ನೆ ʼಹೇಗಿತ್ತು ರೈಡ್?‌ʼ ಎಂದೇ ಹೊರತು ʼಎಲ್ಲಿಗೆ ಹೋಗಿದ್ದೆ?ʼ ಎಂದಲ್ಲ. ರೈಡ್‌ ಮಜ ಬಂದರೆ ಅಷ್ಟೇ ಸಾಕು ಎನ್ನುವುದು ಎಲ್ಲ ರೈಡರ್‌ಗಳಿಗೆ ಗೊತ್ತಿರುವ ಅಲಿಖಿತ ಸತ್ಯ. ಇಷ್ಟೆಲ್ಲಾ ಆದಮೇಲೂ ಮನೆಗೆ ಬಂದು ʼಸಕತ್‌ ರೈಡ್‌, ಫುಲ್‌ ಸುಸ್ತುʼ ಎಂದಾಗ ಕೆಲವೊಮ್ಮೆ ಅಮ್ಮನೋ, ಅಪ್ಪನೋ, ನೆಂಟರೋ, ಗರ್ಲ್‌ಫ್ರೆಂಡೋ, ಬಾಯ್‌ಫ್ರೆಂಡೋ ಯಾರಾದರೂ ʼಅಷ್ಟೆಲ್ಲಾ ಸುಸ್ತು ಮಾಡಿಕೊಂಡು ಯಾಕೆ ಹೋಗಬೇಕಿತ್ತಪ್ಪಾ?ʼ ಎಂದು ಕೇಳುವುದುಂಟು. ಅದು ಸತ್ಯ, ಆದರೇನು ಮಾಡುವುದು ಕೆಲವು ಸುಸ್ತು ಕೂಡ ಹಿತವಾಗಿರುತ್ತವೆ ಅಲ್ಲವೇ!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!