ಸೀಶೆಲ್ಸ್ ವಿಮಾನ ನಿಲ್ದಾಣವೇ ಒಂದು ಪ್ರವಾಸಿ ತಾಣ!
ಮೊದಲ ನೋಟದಲ್ಲಿ ಸೀಶೆಲ್ಸ್ ಮೇಲೆ ಪ್ರೇಮಾಂಕುರವಾಗದಿದ್ದರೆ ನಿಮ್ಮಲ್ಲೇ ಏನೋ ದೋಷವಿದೆ ಎಂದರ್ಥ! ಸೀಶೆಲ್ಸ್ ತನ್ನ ಗರ್ಭದಲ್ಲಿ ಅದೆಷ್ಟು ರೋಚ’ಕತೆ’ಗಳನ್ನು ಹುದುಗಿಸಿಕೊಂಡಿದೆ ಎಂಬುದು ವಿಮಾನ ನಿಲ್ದಾಣದಲ್ಲಿಯೇ ಗೊತ್ತಾಗಿಬಿಡುತ್ತದೆ. ಅಷ್ಟಕ್ಕೂ ಆ ವಿಮಾನ ನಿಲ್ದಾಣವೇ ಒಂದು ಅದ್ಭುತ ಪ್ರವಾಸಿ ತಾಣ.
ವಿಮಾನ ಸೀಶೆಲ್ಸ್ ವಿಮಾನ ನಿಲ್ದಾಣವನ್ನು ಸ್ಪರ್ಶಿಸಲು ಇನ್ನೂ ನಾಲ್ಕೈದು ನಿಮಿಷಗಳಿದ್ದಿರಬಹುದು. ಕೆಳಗೆ ದೃಷ್ಟಿ ಹಾಯಿಸಿದರೆ ಎಲ್ಲೆಡೆ ತಿಳಿ ನೀಲಿ ಬಣ್ಣದ ಜಲ ಚಾಪೆ. ಅದಕ್ಕೆ ಹೊಂದಿಕೊಂಡ ದಟ್ಟ ಹಸಿರಿನ ಗಿರಿವನ ರಾಶಿ, ಕಣ್ಣೆವೆ ಹಾಯುವ ತನಕ ಕಾಡು. ವಿಮಾನ ನಿಧಾನವಾಗಿ ಇಳಿಯುತ್ತಿದ್ದಂತೆ ಪ್ರಶಾಂತವಾಗಿ ಗೋಚರಿಸುವ ವೈಡೂರ್ಯ ಬಣ್ಣದ ಸಾಗರ. ಅವುಗಳಿಗೆ ತೆಂಗಿನ ಗರಿಗಳ ತೋರಣ. ಈ ಸುಂದರ ಚಿತ್ರಪಟದ ನಡುವೆ, ಸಾಗರಕ್ಕೆ ಮುತ್ತಿಕ್ಕುವಂತೆ ನಿರ್ಮಿಸಿರುವ ರನ್‌ವೇ ಕಾಣಿಸುತ್ತದೆ. ಸೀಶೆಲ್ಸ್ ಏರ್ ಪೋರ್ಟಿನಲ್ಲಿ ವಿಮಾನ ಸಮುದ್ರದ ದಡದ ಮೇಲೆಯೇ ಲ್ಯಾಂಡ್ ಆಗುತ್ತದೆ ಎಂದು ಕೇಳಿದ್ದ ನನಗೆ, ವಿಮಾನ ಇಳಿಯುತ್ತಾ ಇಳಿಯುತ್ತಿದ್ದಂತೆ ಕುತೂಹಲ ಏರುತ್ತಾ ಏರುತ್ತಾ ಹೋಗುತ್ತಿತ್ತು.

ಇನ್ನೇನು ವಿಮಾನ ರನ್ ವೇ ಮೇಲೆ ಇಳಿಯುತ್ತಿದ್ದಂತೆ, ಪಕ್ಕದಲ್ಲಿಯೇ ನೀಲಿ ಸಮುದ್ರ! ಅಲೆ ಜೋರಾಗಿ ಅಪ್ಪಳಿಸಿದರೆ ನೀರು ರನ್ ವೇಯನ್ನು ತೋಯಿಸುವಷ್ಟು ಹತ್ತಿರ. ಒಂದು ವೇಳೆ ವಿಮಾನವೇನಾದರೂ ಇಪ್ಪತ್ತು-ಮೂವತ್ತು ಮೀಟರ್ ಪಕ್ಕದಲ್ಲಿ ಇಳಿದುಬಿಟ್ಟರೆ... ಸಮುದ್ರ ಪಾಲು! ಒಂದು ಕ್ಷಣ ಸಾಗರದ ಮೇಲೆಯೇ ಇಳಿಯುತ್ತಿದ್ದೇವೇನೋ ಎನ್ನುವ ಭಾವ. ವಿಮಾನ ಭೂಸ್ಪರ್ಶಿಸಿ ವೇಗವಾಗಿ ರನ್ ವೇ ಮೇಲೆ ಓಡುತ್ತಿದ್ದರೆ ಪಕ್ಕದಲ್ಲಿ ನೀಲಿ ಕಡಲಿನ ಜಲ ರಾಶಿಯ ಮನಮೋಹಕ ದೃಶ್ಯ ತೋರಣ.
ಮೊದಲ ನೋಟದಲ್ಲಿ ಸೀಶೆಲ್ಸ್ ಮೇಲೆ ಪ್ರೇಮಾಂಕುರವಾಗದಿದ್ದರೆ ನಿಮ್ಮಲ್ಲೇ ಏನೋ ದೋಷವಿದೆ ಎಂದರ್ಥ!
ಸೀಶೆಲ್ಸ್ ತನ್ನ ಗರ್ಭದಲ್ಲಿ ಅದೆಷ್ಟು ರೋಚ’ಕತೆ’ಗಳನ್ನು ಹುದುಗಿಸಿಕೊಂಡಿದೆ ಎಂಬುದು ವಿಮಾನ ನಿಲ್ದಾಣದಲ್ಲಿಯೇ ಗೊತ್ತಾಗಿಬಿಡುತ್ತದೆ. ಅಷ್ಟಕ್ಕೂ ಆ ವಿಮಾನ ನಿಲ್ದಾಣವೇ ಒಂದು ಅದ್ಭುತ ಪ್ರವಾಸಿ ತಾಣ. ಸಮುದ್ರವನ್ನು ಹುಗಿದು ಕಟ್ಟಿದ ಆ ನಿಲ್ದಾಣವೇ ನಿಜವಾದ ಪ್ರೇಕ್ಷಣೀಯ ಸ್ಥಳ.

'ಸ್ವರ್ಗಕ್ಕೆ ಹೆಬ್ಬಾಗಿಲು' ಎಂದು ಕರೆಯಿಸಿಕೊಳ್ಳುವ ಸೀಶೆಲ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆಯಲ್ಲ, ಅದು ಕೇವಲ ನಿಲ್ದಾಣವಲ್ಲ, ಅದೊಂದು ದಿವ್ಯಾತಿದಿವ್ಯ ಅನುಭವ. ಅದು ನಮ್ಮ ಪ್ರವಾಸದ ಒಂದು ಅವಿಭಾಜ್ಯ ಅಂಗ. ಪಯಣದ ಉದ್ದೇಶ ಕೇವಲ ಸ್ಥಳವನ್ನು ತಲುಪುವುದಲ್ಲ, ಪ್ರವಾಸವೂ ಸುಂದರವಾಗಿರಬೇಕು ಎಂಬ ಮಾತಿಗೆ ಸೀಶೆಲ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪರಿಪೂರ್ಣ ಉದಾಹರಣೆ.
ಹಿಂದೂ ಮಹಾಸಾಗರದ ಮುತ್ತಿನಂತಿರುವ ದ್ವೀಪ ಸಮೂಹಕ್ಕೆ ಕಾಲಿಡುವ ಮೊದಲ ಕ್ಷಣದಿಂದಲೇ ನಿಮಗೆ ಅಮೋಘ, ಅನನ್ಯ ಅನುಭವ ನೀಡುವ ಈ ವಿಮಾನ ನಿಲ್ದಾಣ, ಒಂದು ಅಪೂರ್ವ destination! ನಿಮ್ಮ ಕನಸಿನ ಪ್ರವಾಸದ ಮೊದಲ ದೃಶ್ಯಕಾವ್ಯ. ವಿಮಾನದಿಂದ ಇಳಿದಾಗ ಕಣ್ಣಿಗೆ ಕಟ್ಟುವ ಸೌಂದರ್ಯ, ಟರ್ಮಿನಲ್‌ನ ಆಹ್ಲಾದಕರ ವಾತಾವರಣ ಮತ್ತು ಸ್ಥಳೀಯ ಸಂಸ್ಕೃತಿಯ ಮೊದಲ ನೋಟ - ಇವೆಲ್ಲವೂ ಸೇರಿ ಸೀಶೆಲ್ಸ್ ಪ್ರವಾಸದ ಅನುಭವವನ್ನು ಮರೆಯಲಾಗದಂತೆ ಮಾಡುತ್ತದೆ.

ಮಾಹೆ ದ್ವೀಪದಲ್ಲಿರುವ ಈ ವಿಮಾನ ನಿಲ್ದಾಣಕ್ಕೆ ನೀವು ವಿಮಾನದಲ್ಲಿ ಇಳಿಯುವ ಕ್ಷಣವೇ ಮರೆಯಲಾಗದ ಅನುಭವ. ಸೀಶೆಲ್ಸ್ ವಿಮಾನ ನಿಲ್ದಾಣದ ಅತ್ಯಂತ ದೊಡ್ಡ ಆಕರ್ಷಣೆ ಎಂದರೆ ಕಣ್ಮನ ಸೆಳೆಯುವ ಲ್ಯಾಂಡಿಂಗ್. ವಿಮಾನವು ಕೆಳಗಿಳಿಯುತ್ತಿದ್ದಂತೆ, ಕಿಟಕಿಯಿಂದ ಕಾಣುವ ದೃಶ್ಯ ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಒಂದೆಡೆ ದಟ್ಟವಾದ ಕಾಡಿನಿಂದ ಆವೃತವಾದ ಪಚ್ಚೆ ಹಸಿರಿನ ಗ್ರಾನೈಟ್ ಪರ್ವತಗಳು, ಇನ್ನೊಂದೆಡೆ ಕಣ್ಣು ಹಾಯಿಸಿದಷ್ಟು ದೂರ ತಿಳಿನೀಲಿ ಬಣ್ಣದ ಹಿಂದೂ ಮಹಾಸಾಗರ.
ಸಮುದ್ರಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾದ ರನ್‌ವೇ ಮೇಲೆ ವಿಮಾನವು ವೇಗವಾಗಿ ಓಡುತ್ತಿದ್ದರೆ, ಸಾಗರವನ್ನು ಸೀಳಿಕೊಂಡು ಬಂದಂತೆ ನೆಲ ಸ್ಪರ್ಶಿಸುವ ಅನುಭವ ರೋಮಾಂಚನಕಾರಿ. ವಿಮಾನ ಲ್ಯಾಂಡ್ ಆಗಲು ಐದು ನಿಮಿಷಗಳಿರುವಾಗ, ನಿಮ್ಮ ಮೊಬೈಲ್ ಹಿಡಿದು ಕಿಟಕಿಯಾಚೆಯ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿಯಲು ಸಿದ್ಧರಾಗಿರುವಂತೆ ಪೈಲಟ್ ಅಣತಿ ಪಾಲಿಸಿದರೆ, ಮುಂದಿನ ಕ್ಷಣಗಳನ್ನೆಲ್ಲ ಸೆರೆ ಹಿಡಿದು ಒಂದು ಮಧುರ ಅನುಭೂತಿಯಾಗಿಸಿಕೊಳ್ಳಬಹುದು.
ಸಾಮಾನ್ಯವಾಗಿ ವಿಮಾನ್ ನಿಲ್ದಾಣಗಳೆಂದರೆ, ಗಾಜಿನ ಮತ್ತು ಕಾಂಕ್ರೀಟ್‌ನ ಬೃಹತ್ ವಿಶಾಲ ಕಟ್ಟಡ. ಆದರೆ ಸೀಶೆಲ್ಸ್ ವಿಮಾನ ನಿಲ್ದಾಣವು ತನ್ನ ಸ್ಥಳೀಯ ಕ್ರಿಯೋಲ್ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿನ ಪ್ರತಿ ಮೂಲೆಯಲ್ಲೂ ಸೀಶೆಲ್ಸ್‌ನ 'ಕ್ರಿಯೋಲ್' ಆತ್ಮವಿದೆ. ಅಗ್ರಹಾರದ ಪಡಸಾಲೆಗಳಂತೆ ಗೋಚರಿಸುವ ಇಲ್ಲಿನ ಟರ್ಮಿನಲ್‌ಗಳು ಹೆಚ್ಚು ತೆರೆದ ವಿನ್ಯಾಸವನ್ನು ಹೊಂದಿದ್ದು, ನೈಸರ್ಗಿಕ ಗಾಳಿ ಮತ್ತು ಬೆಳಕು ಅದರ ಸಹಜ ಸೌಂದರ್ಯವನ್ನು ಹೆಚ್ಚಿಸಿದೆ. ವಿಮಾನದಿಂದ ಇಳಿದ ತಕ್ಷಣ ನಿಮ್ಮನ್ನು ಸ್ವಾಗತಿಸುವುದು ಉಪ್ಪು ಮತ್ತು ಹೂವುಗಳ ಸುವಾಸನೆ ಹೊತ್ತ ಸಮುದ್ರದ ಅಲೆಗಳಿಂದ ಹೊಮ್ಮಿದ ತಂಗಾಳಿ!

ಟರ್ಮಿನಲ್‌ಗಳ ಛಾವಣಿ ಮತ್ತು ಒಳಾಂಗಣ ವಿನ್ಯಾಸಕ್ಕೆ ಮರಗಳನ್ನು ಸುಂದರವಾಗಿ ಬಳಸಲಾಗಿದೆ. ಇದು ನಿಲ್ದಾಣಕ್ಕೆ ಒಂದು ಹಳ್ಳಿಗಾಡಿನ, ಸಹಜ ಮತ್ತು ಎಂಥವರನ್ನಾದರೂ ಹಿತವಾಗಿ ಆಹ್ವಾನಿಸುವ ಸೊಬಗನ್ನು ನೀಡಿದೆ. ಇಲ್ಲಿನ ವಾತಾವರಣ ನಿರಾಳ. ವಿಮಾನ ನಿಲ್ದಾಣದ ಗಡಿಬಿಡಿಯ ಬದಲು, ಒಂದು ವಿಶಾಲ ರೆಸಾರ್ಟ್‌ಗೆ ಕಾಲಿಟ್ಟಂಥ ಅನುಭವ. ಗಡಿಬಿಡಿಯಿಲ್ಲದ, ಶಾಂತವಾದ ವಾತಾವರಣವು ನಮ್ಮನ್ನು ತಕ್ಷಣವೇ ರಜೆಯ ನಿರಾಳತೆಗೆ ಕೊಂಡೊಯ್ಯುತ್ತದೆ.
ಈ ವಿಮಾನ ನಿಲ್ದಾಣದ ಮುಖ್ಯ ಲಕ್ಷಣ ಅಂದ್ರೆ ಇದು ಜಗತ್ತಿನ ಯಾವ ವಿಮಾನ ನಿಲ್ದಾಣವನ್ನೂ ನಕಲು ಮಾಡದಿರುವುದು. ಇದನ್ನು ಬೇರೆ ನಿಲ್ದಾಣಗಳು ನಕಲು ಮಾಡಲು ಸಹ ಸಾಧ್ಯವಿಲ್ಲ. ಆಧುನಿಕತೆಗಿಂತ ಸ್ಥಳೀಯ ಲಕ್ಷಣಗಳ ಅನಾವರಣಕ್ಕೆ ಹೆಚ್ಚು ಆದ್ಯತೆ ನೀಡಿರುವುದು ತಕ್ಷಣಕ್ಕೆ ಅನುಭವಕ್ಕೆ ಬರುತ್ತದೆ. 1972ರಲ್ಲಿ ಇಂಗ್ಲೆಂಡಿನ ಎರಡನೇ ಎಲಿಜಬೆತ್ ರಾಣಿಯಿಂದ ಉದ್ಘಾಟನೆಗೊಂಡ ಈ ವಿಮಾನ ನಿಲ್ದಾಣವು, ಸೀಶೆಲ್ಸ್‌ನ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡಿತು. ಸಮುದ್ರದಿಂದ ಭೂಮಿಯನ್ನು ಮರುಪಡೆಯುವ ಮೂಲಕ (reclaimed land) ನಿರ್ಮಿಸಲಾದ ಈ ನಿಲ್ದಾಣ ದೇಶದ ಆರ್ಥಿಕತೆಯ ಜೀವನಾಡಿಯಾಗಿದೆ. ಇದು ಸೀಶೆಲ್ಸ್ ಅನ್ನು ಜಗತ್ತಿನೊಂದಿಗೆ ಬೆಸೆಯುವ ಪ್ರಮುಖ ಹೆಬ್ಬಾಗಿಲು.
ಸೀಶೆಲ್ಸ್ ವಿಮಾನ ನಿಲ್ದಾಣದಲ್ಲಿ ಇರುವುದು ಒಂದೇ ಒಂದು ರನ್‌ವೇ. ಇದರ ಉದ್ದ ಸುಮಾರು ಮೂರು ಸಾವಿರ ಮೀಟರ್. ಈ ರನ್‌ವೇಯು ಬೋಯಿಂಗ್ 777, ಏರ್‌ಬಸ್ A330 ನಂಥ ದೊಡ್ಡ ವಿಮಾನಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸೀಶೆಲ್ಸ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಏರ್ ಸೀಶೆಲ್ಸ್ (Air Seychelles) ನ ಪ್ರಮುಖ ಕೇಂದ್ರವೂ ಹೌದು. ಇದರ ಜತೆಗೆ, ಎಮಿರೇಟ್ಸ್, ಕತಾರ್ ಏರ್‌ವೇಸ್, ಎತಿಹಾದ್, ಟರ್ಕಿಶ್ ಏರ್‌ಲೈನ್ಸ್, ಇಥಿಯೋಪಿಯನ್ ಏರ್‌ಲೈನ್ಸ್, ಮತ್ತು ಕಂಡೋರ್ (Condor) ನಂಥ ಪ್ರಮುಖ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಇಲ್ಲಿಗೆ ನೇರ ವಿಮಾನ ಸೇವೆಯನ್ನು ಒದಗಿಸುತ್ತವೆ. ಈ ವಿಮಾನ ನಿಲ್ದಾಣವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ ಮತ್ತು ಮಧ್ಯಪ್ರಾಚ್ಯ, ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.
ಸೀಶೆಲ್ಸ್ ಸುಮಾರು115 ದ್ವೀಪಗಳ ಸಮೂಹ. ಮುಖ್ಯ ಟರ್ಮಿನಲ್‌ನಿಂದ ಸ್ವಲ್ಪ ದೂರದಲ್ಲಿಯೇ ದೇಶೀಯ ಟರ್ಮಿನಲ್ (Domestic Terminal) ಇದೆ. ಇಲ್ಲಿಂದ, ಏರ್ ಸೀಶೆಲ್ಸ್ ಸಂಸ್ಥೆಯು ಸೀಶೆಲ್ಸ್‌ನ ಎರಡನೇ ಅತಿ ದೊಡ್ಡ ದ್ವೀಪವಾದ ಪ್ರಾಲಿನ್ ಗೆ ಪ್ರತಿದಿನ ಹಲವಾರು ವಿಮಾನಗಳು ಸಂಚರಿಸುತ್ತವೆ. ಈ ಪ್ರಯಾಣವು ಕೇವಲ 15-20 ನಿಮಿಷಗಳದ್ದಾಗಿದ್ದು, ದ್ವೀಪಗಳ ವೈಮಾನಿಕ ನೋಟವನ್ನು ಸವಿಯಲು ಇದೊಂದು ಉತ್ತಮ ಅವಕಾಶ. ಪ್ರಾಲಿನ್ ದ್ವೀಪದಿಂದ, ಪ್ರವಾಸಿಗರು ಲಾ ಡಿಗ್ ನಂಥ ಇತರ ಸುಂದರ ದ್ವೀಪಗಳಿಗೆ ಫೆರ್ರಿ (ಹಡಗು) ಮೂಲಕ ಸುಲಭವಾಗಿ ಪ್ರಯಾಣಿಸಬಹುದು.

ಸೀಶೆಲ್ಸ್ ಗೆ ಬಂದವರಿಗೆ ಅಲ್ಲಿನ ವಿಮಾನ ನಿಲ್ದಾಣ ಕನಸಿನ ನಾಡಿಗೆ ಮೊದಲ ಹೆಜ್ಜೆ. ಒಂದು ವಿಮಾನ ನಿಲ್ದಾಣವೇ ಪ್ರವಾಸಿ ತಾಣದಷ್ಟೇ ಸುಂದರವಾಗಿರುವುದರಿಂದ 'ಜಗತ್ತಿನ ಸುಂದರ ವಿಮಾನ ನಿಲ್ದಾಣ' ಎಂಬ ಅಗ್ಗಳಿಕೆಗೂ ಪಾತ್ರವಾಗಿದೆ. ದೇಶಕ್ಕೆ ಆಮದು ಮತ್ತು ರಫ್ತು ಆಗುವ ಹೆಚ್ಚಿನ ಸರಕುಗಳು ಇದೇ ವಿಮಾನ ನಿಲ್ದಾಣದ ಮೂಲಕ ಸಾಗುತ್ತವೆ. ಸೀಶೆಲ್ಸ್‌ನ ಪ್ರಮುಖ ಉದ್ಯಮವಾದ ಮೀನುಗಾರಿಕೆಯಿಂದ, ವಿಶೇಷವಾಗಿ ಟುನ ಮೀನು ರಫ್ತು ಮಾಡುವಲ್ಲಿ ಈ ವಿಮಾನ ನಿಲ್ದಾಣವು ಪ್ರಮುಖ ಪಾತ್ರ ವಹಿಸುತ್ತದೆ. ತಾಜಾ ಮೀನುಗಳನ್ನು ಇಲ್ಲಿಂದ ಯುರೋಪ್ ಮತ್ತು ಏಷ್ಯಾದ ಮಾರುಕಟ್ಟೆಗಳಿಗೆ ವೇಗವಾಗಿ ಸಾಗಿಸಬಹುದಾಗಿದೆ.
ಸೀಶೆಲ್ಸ್ ವಿಮಾನ ನಿಲ್ದಾಣವು ಸಾಗರ ಮತ್ತು ಪರ್ವತಗಳ ನಡುವಿನ ಒಂದು ಕಲಾಕೃತಿ. ಭೂಮಿಯ ಮೇಲಿನ ಸ್ವರ್ಗವೊಂದು ಹೇಗಿರಬಹುದೆಂಬುದರ ಸಣ್ಣ ಸುಳಿವು ಮತ್ತು ಮೊದಲ ಭರವಸೆಯ ನೋಟವದು. ಸೀಶೆಲ್ಸ್ ನಿಲ್ದಾಣದಲ್ಲಿ ವಿಮಾನ ಇಳಿಯುವಾಗ ನೀವು ನಿದ್ದೆ ಮಾಡುತ್ತಿದ್ದರೆ, ನೀವು ಒಂದು ಸುಂದರ ಅನುಭವದಿಂದ ವಂಚಿತರಾದಂತೆ. ಟೇಕಾಫ್ ಮತ್ತು ಲ್ಯಾಂಡಿಂಗ್ ದೃಶ್ಯಗಳು ಇಲ್ಲಿನಷ್ಟು ಸುಂದರವಾಗಿ ಮತ್ತೆಲ್ಲೂ ಇರಲಿಕ್ಕಿಲ್ಲ!
ಯಾವ ಬಾಣ ಬಿಟ್ರೂ ಜಗದಾಗ
ಒಂದಿರುವೆಲ್ಲ ಎರಡಾಗತಾವ
ಪ್ರೇಮಬಾಣ ಬಿಟ್ರೆ ಜಗದಾಗ
ಎರಡಿರುವೆಲ್ಲ ಒಂದಾಗತಾವ