ಕಳೆದ ಐದು ವರ್ಷಗಳ ಕಾಲಘಟ್ಟವನ್ನು ತಿರುಗಿ ನೋಡಿದರೆ, ಜಗತ್ತು ನಮಗೇ ಅರಿವಿಲ್ಲದಂತೆ ಒಂದು ದೊಡ್ಡ ಮಜಲನ್ನು ದಾಟಿ ಬಂದಿದೆ. ಹತ್ತು ವರ್ಷಗಳ ಹಿಂದೆ ಪ್ರವಾಸಕ್ಕೆ ಹೋಗಬೇಕೆಂದರೆ ನಕ್ಷೆಗಳನ್ನು ಹಿಡಿದು, ಅಪರಿಚಿತರ ದಾರಿ ಕೇಳಿ, ಟ್ರಾವೆಲ್ ಏಜೆಂಟರ ಕಚೇರಿಗಳಿಗೆ ಅಲೆಯುತ್ತಿದ್ದ ಕಾಲವೊಂದು ಇತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಸ್ಮಾರ್ಟ್‌ಫೋನ್ ಎನ್ನುವ ಮಾಂತ್ರಿಕ ಕನ್ನಡಿ ನಮ್ಮ ಕೈ ಸೇರುತ್ತಿದ್ದಂತೆ, ಪ್ರವಾಸೋದ್ಯಮದ ಆಯಾಮವೇ ಬದಲಾಗಿದೆ. ಕಳೆದ ಐದಾರು ವರ್ಷಗಳಲ್ಲಿ ತಂತ್ರಜ್ಞಾನ ಎನ್ನುವ ರಕ್ಕಸ ವೇಗ, ಪ್ರವಾಸೋದ್ಯಮದ ಹಳೆಯ ಸಂಪ್ರದಾಯಗಳನ್ನು ಪುಡಿಗಟ್ಟಿ, ಡಿಜಿಟಲ್ ಲೋಕದ ಹೊಸ ದಿಗಂತವನ್ನು ತೆರೆದಿದೆ.

ಇನ್ನು ಈ ಬದಲಾವಣೆಯ ಕೇಂದ್ರಬಿಂದುವಾಗಿ ನಿಂತಿರುವುದು ಕೃತಕ ಬುದ್ಧಿಮತ್ತೆ ಅಥವಾ ಎಐ (AI). ಇಂದು ಎಐ ಎನ್ನುವುದು ಕೇವಲ ಕಂಪ್ಯೂಟರ್ ಕೋಡಿಂಗ್‌ಗೆ ಸೀಮಿತವಾದ ವಿಷಯವಲ್ಲ. ಅದು ಪ್ರವಾಸೋದ್ಯಮದ ‘ಕೈಗನ್ನಡಿ’ಯಂತೆ ಕೆಲಸ ಮಾಡುತ್ತಿದೆ. ನೀವು ಯಾವ ದೇಶಕ್ಕೆ ಹೋಗಬೇಕು, ಅಲ್ಲಿನ ಹವಾಮಾನ ಹೇಗಿದೆ, ಯಾವ ಹೊಟೇಲ್‌ನಲ್ಲಿ ತಂಗಬೇಕು ಮತ್ತು ಯಾವ ರಸ್ತೆಯಲ್ಲಿ ನಡೆದರೆ ನಿಮಗೆ ಇಷ್ಟವಾದ ಆಹಾರ ಸಿಗುತ್ತದೆ ಎಂಬ ಪ್ರತಿಯೊಂದು ಸಣ್ಣ ನಿರ್ಧಾರವನ್ನೂ ಇಂದು ಎಐ ಪ್ರಭಾವಿಸುತ್ತಿದೆ. ಉದಾಹರಣೆಗೆ, ನೀವು ‘ನನಗೆ ಶಾಂತವಾದ ಜಾಗ ಇಷ್ಟ, ಹಳೆಯ ದೇವಸ್ಥಾನಗಳು ಬೇಕು ಮತ್ತು ನಾನು ಸಸ್ಯಾಹಾರಿ’ ಎಂದು AI ಚಾಟ್‌ಬಾಟ್‌ಗೆ ಹೇಳಿದರೆ, ಅದು ಕೇವಲ ಅಂಥ ಜಾಗಗಳನ್ನು ಮತ್ತು ಅಲ್ಲಿನ ಸಸ್ಯಾಹಾರಿ ಹೊಟೇಲ್‌ಗಳನ್ನು ಮಾತ್ರ ಆರಿಸಿ ನಿಮಗೊಂದು ಪಟ್ಟಿ ನೀಡುತ್ತದೆ. ಇದು ಕೇವಲ ಮಾಹಿತಿಯಲ್ಲ, ಬದಲಿಗೆ ಪ್ರವಾಸಿಗನ ಮನದಾಳದ ಆಸೆಗಳನ್ನು ಅರಿತು ನೀಡುವ ‘ವೈಯಕ್ತಿಕ ಸಲಹೆಗಾರ’ನಾಗಿ ರೂಪಾಂತರಗೊಂಡಿದೆ.

ಇದನ್ನೂ ಓದಿ: ನವ ಪ್ರವಾಸೋದ್ಯಮ : ಪ್ರವಾಸಿಗರನ್ನು ಮತ್ತೆ ಮತ್ತೆ ಸೆಳೆಯುವ ಕಲೆ

ಒಮ್ಮೆ ಕಲ್ಪನೆ ಮಾಡಿಕೊಳ್ಳಿ. ನೀವು ಪ್ಯಾರಿಸ್‌ನ ಲೂವ್ರ್ ಮ್ಯೂಸಿಯಂನಲ್ಲೋ ಅಥವಾ ಹಂಪಿಯ ಕಲ್ಲಿನ ರಥದ ಮುಂದೋ ನಿಂತಿದ್ದೀರಿ. ನಿಮ್ಮ ಫೋನ್‌ನಲ್ಲಿರುವ AI ನಿಮ್ಮ ಕಣ್ಣುಗಳನ್ನು ಗಮನಿಸುತ್ತಾ ಇರುತ್ತದೆ. ನೀವು ಆ ಕಲಾಕೃತಿಯನ್ನು ದಿಟ್ಟಿಸಿ ನೋಡುವಾಗ ನಿಮ್ಮ ಮುಖದಲ್ಲಿ ಮೂಡುವ ಆ ಆಶ್ಚರ್ಯ, ಆ ಕುತೂಹಲವನ್ನು ಅದು ‘ಕ್ಯಾಚ್’ ಮಾಡುತ್ತದೆ. ನೀವು ಬಾಯಿ ಬಿಟ್ಟು ಕೇಳುವ ಮೊದಲೇ ಅದು ಮೆಲ್ಲಗೆ ಪಿಸುಗುಟ್ಟುತ್ತದೆ — ‘ಈ ಕೆತ್ತನೆ ಹಿಂದೆ ಒಂದು ಕಣ್ಣೀರಿನ ಕಥೆಯಿದೆ, ಕೇಳಿಸಲಾ?’ಅಂತ.

ai in tourism industry 2

ಇದು ಹಳೆಯ ಕಾಲದ ಒನ್-ವೇ ಟಾಕ್ ಅಲ್ಲ. ಇಲ್ಲಿ ‘ನಾನು ಹೇಳಿದ್ದನ್ನು ನೀನು ಕೇಳಲೇಬೇಕು’ ಎನ್ನುವ ದರ್ಪವಿಲ್ಲ. ನೀವು ಆ ಕಲಾಕೃತಿಯ ಮುಂದೆ ನಿಂತು, ‘ಇದು ಚೆನ್ನಾಗಿದೆ, ಆದರೆ ಇದರ ಕೆಳಭಾಗದಲ್ಲಿರುವ ಆ ಸಣ್ಣ ಗೆರೆಗಳ ಅರ್ಥ ಏನು?’ ಅಂತ ಕೇಳಿದರೆ, ಆ AI ಗೈಡ್ ಕೇವಲ ಹತ್ತು ಸೆಕೆಂಡ್‌ನಲ್ಲಿ ಅದರ ಇಡೀ ಜಾತಕವನ್ನೇ ನಿಮ್ಮ ಮುಂದೆ ಬಿಚ್ಚಿಡುತ್ತದೆ. ‘ಇದರ ಬಗ್ಗೆ ಇನ್ನೂ ಸ್ವಲ್ಪ ಆಳವಾಗಿ ಹೇಳು’ ಅಂದ ಕೂಡಲೇ, ಅದು ಇತಿಹಾಸದ ಆಳಕ್ಕೆ ಇಳಿದು, ಆ ಶಿಲ್ಪಿ ಬಳಸಿದ ಉಳಿ ಯಾವುದು, ಅವನ ಮನಸ್ಥಿತಿ ಹೇಗಿತ್ತು ಎನ್ನುವುದನ್ನು ಒಂದು ಸುಂದರ ಸಂಭಾಷಣೆಯಂತೆ ವಿವರಿಸುತ್ತದೆ. ಇದು ಕೇವಲ ತಂತ್ರಜ್ಞಾನವಲ್ಲ, ಇದೊಂದು ‘ಎಮೋಷನಲ್ ಕನೆಕ್ಟ್’. ನಿಮ್ಮ ಆಸಕ್ತಿ ಎಲ್ಲಿದೆ ಅಂತ ಅದಕ್ಕೆ ಗೊತ್ತು. ನಿಮಗೆ ಯುದ್ಧಗಳ ಕಥೆ ಇಷ್ಟನಾ? ಅದು ರಣರಂಗದ ವಿವರ ಕೊಡುತ್ತದೆ. ನಿಮಗೆ ಪ್ರೇಮಕಥೆ ಬೇಕಾ? ಆ ಕಲ್ಲಿನಲ್ಲೂ ಅಡಗಿರುವ ವಿರಹದ ಕಥೆಯನ್ನು ಅದು ಹೊರತೆಗೆಯುತ್ತದೆ. ಇಲ್ಲಿ ಗೈಡ್ ನಿಮ್ಮನ್ನು ಸುತ್ತಿಸುವುದಿಲ್ಲ, ಬದಲಿಗೆ ನಿಮ್ಮ ಇಷ್ಟದ ಲೋಕಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ.

ಈ AI ಅನ್ನೋದು ಪ್ರವಾಸೋದ್ಯಮದ ಪಾಲಿಗೆ ದೇವದೂತನಂತೆ ಬಂದಿದೆ. ಅಲ್ಲಿ ಗಲಾಟೆಯಿಲ್ಲ, ಸುಳ್ಳು ಮಾಹಿತಿಯಿಲ್ಲ, ‘ಇಷ್ಟು ಹಣ ಕೊಡಿ’ ಎನ್ನುವ ಪೀಡನೆಯಿಲ್ಲ. ಕೇವಲ ಒಂದು ಸಂಭಾಷಣೆ, ಮನುಷ್ಯ ಮನುಷ್ಯನ ಜತೆ ಮಾತನಾಡುವಷ್ಟೇ ಸಹಜವಾಗಿ ಇರುತ್ತದೆ. ನೀವು ಒಂದು ಜಾಗವನ್ನು ಕೇವಲ ನೋಡುವುದಿಲ್ಲ, ಆ ಜಾಗದ ಜತೆ ಮಾತನಾಡುತ್ತೀರಿ. AI ಆಧಾರಿತ VR ಮೂಲಕ ನೀವು ಮನೆಯಲ್ಲೇ ಕುಳಿತು ಪೆಟ್ರಾ ನಗರದ ಬೀದಿಗಳಲ್ಲಿ ಓಡಾಡಬಹುದು ಅಥವಾ ಹೊಟೇಲ್ ರೂಮಿನ ಒಳಗಡೆ ಸುತ್ತಾಡಿ ನೋಡಬಹುದು. ‘ನೋಡಿದ್ದು ಒಂದು, ಸಿಕ್ಕಿದ್ದು ಇನ್ನೊಂದು’ ಎಂಬ ಬೇಸರ ಇಲ್ಲಿ ಇರುವುದಿಲ್ಲ. ಹೊಟೇಲ್ ಬುಕ್ ಮಾಡುವ ಮೊದಲು ಅಥವಾ ಒಂದು ಜಾಗಕ್ಕೆ ಹೋಗುವ ಮೊದಲೇ ಆ ಜಾಗ ಹೇಗಿದೆ ಎಂದು 'ನೋಡಿ ಬರುವ' ಅವಕಾಶ. ಎಐ ಡೇಟಾ ವಿಶ್ಲೇಷಣೆಯ ಮೂಲಕ ‘ನೀವು ಹೋಗಬೇಕೆಂದಿರುವ ಆ ಜಾಗದಲ್ಲಿ ಈಗ ತುಂಬಾ ಜನ ಇದ್ದಾರೆ, ನೀವು ಸದ್ಯಕ್ಕೆ ಹತ್ತಿರದ ಮ್ಯೂಸಿಯಂಗೆ ಹೋಗಿ ಬನ್ನಿ, ಸಂಜೆ ನಾಲ್ಕು ಗಂಟೆಗೆ ಇಲ್ಲಿ ಜನ ಕಮ್ಮಿ ಇರುತ್ತಾರೆ’ ಎಂಬ ಮುನ್ಸೂಚನೆಯನ್ನು ನಿಮ್ಮ ಫೋನ್‌ಗೆ ನೀಡುತ್ತದೆ. ಇದರಿಂದ ನಿಮ್ಮ ಪ್ರವಾಸ ಆರಾಮದಾಯಕವಾಗುತ್ತದೆ.

ತಂತ್ರಜ್ಞಾನದ ಈ ಅಬ್ಬರ ಪ್ರವಾಸಿಗನ ಬದುಕನ್ನು ಸುಲಭಗೊಳಿಸಿರುವುದು ಸುಳ್ಳಲ್ಲ. ವಿಮಾನದ ಟಿಕೆಟ್ ದರ ಯಾವಾಗ ಕಡಿಮೆ ಆಗುತ್ತದೆ ಎಂಬುದರಿಂದ ಹಿಡಿದು, ವಿದೇಶಿ ಭಾಷೆಯ ನಾಮಫಲಕವನ್ನು ತನ್ನದೇ ಭಾಷೆಗೆ ಕ್ಷಣಾರ್ಧದಲ್ಲಿ ಭಾಷಾಂತರಿಸುವವರೆಗೆ ಎಲ್ಲವೂ ಬೆರಳ ತುದಿಗೆ ಬಂದಿವೆ. ಈ ಹಿಂದೆ ಪ್ರವಾಸೋದ್ಯಮವು ಕೇವಲ ‘ಜಾಗ ನೋಡುವುದು’ ಆಗಿತ್ತು, ಆದರೆ ಇಂದು ಅದು 'ಅನುಭವಿಸುವುದು' (Experience) ಆಗಿ ಬದಲಾಗಿದೆ. ವರ್ಚುವಲ್ ರಿಯಾಲಿಟಿ (VR) ಮೂಲಕ ಹೋಗಬೇಕಾದ ಜಾಗವನ್ನು ಮನೆಯಲ್ಲೇ ಕುಳಿತು ನೋಡಿ ನಿರ್ಧರಿಸುವ ಮಟ್ಟಕ್ಕೆ ನಾವು ಬೆಳೆದಿದ್ದೇವೆ.

ಆದರೆ, ಈ ತಂತ್ರಜ್ಞಾನದ ಸುನಾಮಿಯ ನಡುವೆ ಒಂದು ಸೂಕ್ಷ್ಮ ಸತ್ಯ ಅಡಗಿದೆ. ಈ ಐದು ವರ್ಷಗಳ ಬದಲಾವಣೆ ಪ್ರವಾಸೋದ್ಯಮವನ್ನು ಎಷ್ಟು ವೇಗಗೊಳಿಸಿದೆಯೋ, ಅಷ್ಟೇ ಯಾಂತ್ರಿಕವಾಗಿಯೂ ಮಾಡಿದೆ. ಚಾಟ್‌ಬಾಟ್‌ಗಳ ಜತೆ ಮಾತನಾಡಿ ಟ್ರಿಪ್ ಪ್ಲಾನ್ ಮಾಡುವುದು ಸುಲಭವಿರಬಹುದು. ಆದರೆ ಆ ಪ್ರವಾಸದಲ್ಲಿ ಸಿಗುವ ಮಾನವೀಯ ಸ್ಪರ್ಶ ಮತ್ತು ಅನಿರೀಕ್ಷಿತ ತಿರುವುಗಳ ಮಜ ಕಡಿಮೆಯಾಗುತ್ತಿದೆಯೇ ಎಂಬ ಅನುಮಾನ ಮೂಡುವುದು ಸಹಜ. ಈ ಎಐ ಕ್ರಾಂತಿಯು ಪ್ರವಾಸೋದ್ಯಮದ ಪಾಲಿಗೆ ವರವೋ ಅಥವಾ ಶಾಪವೋ ಎಂಬ ಚರ್ಚೆಯ ನಡುವೆಯೇ, ಇಂದು ತಂತ್ರಜ್ಞಾನವಿಲ್ಲದ ಪ್ರವಾಸವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ ಎಂಬ ಹಂತಕ್ಕೆ ನಾವು ಬಂದು ನಿಂತಿದ್ದೇವೆ.

ಇಂದು ನೀವು ಹೊಟೇಲ್ ಬುಕ್ ಮಾಡುವಾಗ ಅಥವಾ ವಿಮಾನದ ಟಿಕೆಟ್ ಹುಡುಕುವಾಗ ಗಮನಿಸಿರಬಹುದು, ನಿಮ್ಮ ಪ್ರತಿ ಕ್ಲಿಕ್ ಅನ್ನು ಎಐ (AI) ಗಮನಿಸುತ್ತಿರುತ್ತದೆ. ಇದು ಕೇವಲ ಅಂಕಿ-ಅಂಶಗಳ ಆಟವಲ್ಲ; ಬದಲಿಗೆ ನಿಮ್ಮ ಆಸಕ್ತಿ, ಬಜೆಟ್ ಮತ್ತು ಹಿಂದಿನ ಪ್ರವಾಸಗಳ ಇತಿಹಾಸವನ್ನು ಆಧರಿಸಿ ನಿಮಗೆ ಬೇಕಾದ್ದನ್ನೇ ಎದುರು ತಂದು ನಿಲ್ಲಿಸುವ ಮಾಂತ್ರಿಕ ವಿದ್ಯೆ. ಇದನ್ನು ‘ಪ್ರಿಡಿಕ್ಟಿವ್ ಅನಲಿಟಿಕ್ಸ್’ ಎನ್ನಲಾಗುತ್ತದೆ. ಅಂದರೆ, ನೀವು ಯಾವ ಸಮಯದಲ್ಲಿ ಹಸಿದಿರುತ್ತೀರಿ ಮತ್ತು ನಿಮಗೆ ಯಾವ ರೀತಿಯ ಊಟ ಇಷ್ಟವಾಗುತ್ತದೆ ಎಂಬುದು ನಿಮಗಿಂತ ಮುಂಚೆಯೇ ನಿಮ್ಮ ಮೊಬೈಲ್‌ನಲ್ಲಿರುವ ಆಪ್‌ಗಳಿಗೆ ತಿಳಿದಿರುತ್ತದೆ. ಈ ಮಟ್ಟದ ವೈಯಕ್ತಿಕೀಕರಣ (Personalisation) ಕಳೆದ ಐದು ವರ್ಷಗಳಲ್ಲಿ ಪ್ರವಾಸೋದ್ಯಮವನ್ನು ಒಂದು ಉದ್ಯಮಕ್ಕಿಂತ ಹೆಚ್ಚಾಗಿ ಒಂದು ‘ಸೇವೆ’ಯನ್ನಾಗಿ ಮಾಡಿದೆ.

ಭಾಷೆಯ ಸಮಸ್ಯೆ ಎಂಬುದು ಪ್ರವಾಸೋದ್ಯಮದ ಪಾಲಿಗೆ ದೊಡ್ಡ ಅಡ್ಡಿಯಾಗಿತ್ತು. ಆದರೆ ಇಂದು ‘ರಿಯಲ್-ಟೈಮ್ ಟ್ರಾನ್ಸ್‌ಲೇಷನ್’ ಉಪಕರಣಗಳು ಈ ಗೋಡೆಯನ್ನು ಕೆಡವಿ ಹಾಕಿವೆ. ಪ್ಯಾರಿಸ್‌ನ ಗಲ್ಲಿಯಲ್ಲೋ ಅಥವಾ ಟೋಕಿಯೊದ ಮಾರುಕಟ್ಟೆಯಲ್ಲೋ ನೀವು ನಿಂತಾಗ, ಅಲ್ಲಿನ ಭಾಷೆ ನಿಮಗೆ ಬರದಿದ್ದರೂ ಎಐ ಆಧಾರಿತ ಭಾಷಾಂತರ ಅಪ್ಲಿಕೇಶನ್‌ಗಳು ಸಂವಹನವನ್ನು ಸುಲಭಗೊಳಿಸಿವೆ. ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR) ತಂತ್ರಜ್ಞಾನದ ಮೂಲಕ ನೀವು ಯಾವುದೋ ಹಳೆಯ ನಾಮಫಲಕದ ಮೇಲೆ ಕ್ಯಾಮೆರಾ ಹಿಡಿದರೆ, ಅದು ನಿಮ್ಮ ತಾಯ್ನುಡಿಯಲ್ಲಿ ಅರ್ಥ ವಿವರಿಸುತ್ತದೆ. ಇದರಿಂದಾಗಿ ಅನಿವಾರ್ಯವಾಗಿ ದಾರಿಹೋಕರನ್ನು, ಗೈಡ್‌ಗಳನ್ನು ಅವಲಂಬಿಸುವುದು ಕಡಿಮೆಯಾಗಿದ್ದು, ಪ್ರವಾಸಿಗರಿಗೆ ಸ್ವತಂತ್ರವಾಗಿ ಅನ್ವೇಷಿಸುವ ಶಕ್ತಿ ಬಂದಿದೆ.

ಈ ತಂತ್ರಜ್ಞಾನವು ಕೇವಲ ಸೌಲಭ್ಯವನ್ನಷ್ಟೇ ಅಲ್ಲ, ಭದ್ರತೆಯನ್ನೂ ಒದಗಿಸುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ಫೇಶಿಯಲ್ ರೆಕಗ್ನಿಷನ್ (ಮುಖ ಗುರುತಿಸುವಿಕೆ) ತಂತ್ರಜ್ಞಾನದ ಮೂಲಕ ಸರತಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ತಪ್ಪುತ್ತಿದೆ. ಪ್ರವಾಸದ ವೇಳೆ ಏನಾದರೂ ತುರ್ತು ಪರಿಸ್ಥಿತಿ ಎದುರಾದರೆ, ಎಐ ಆಧಾರಿತ ಸುರಕ್ಷತಾ ವ್ಯವಸ್ಥೆಗಳು ತಕ್ಷಣವೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತವೆ. ಹೀಗೆ, ಕಳೆದ ಐದು ವರ್ಷಗಳಲ್ಲಿ ತಂತ್ರಜ್ಞಾನವು ಪ್ರವಾಸೋದ್ಯಮವನ್ನು ಒಂದು ಕಲ್ಪನಾ ಲೋಕದಿಂದ ವಾಸ್ತವದ ಹತ್ತಿರಕ್ಕೆ ತಂದಿದೆ. ಇಂದು ನಾವು ಹೋಗುವ ಪ್ರತಿ ಹೆಜ್ಜೆಯೂ ಡಿಜಿಟಲ್ ಹೆಜ್ಜೆಗುರುತಾಗಿ ಬದಲಾಗುತ್ತಿದ್ದು, ಪ್ರವಾಸೋದ್ಯಮದ ಈ ‘ಸ್ಮಾರ್ಟ್ ಅವತಾರ’ ಮುಂದಿನ ದಿನಗಳಲ್ಲಿ ಇನ್ನು ಏನೆಲ್ಲ ಚಮತ್ಕಾರ ಮಾಡಲಿದೆ ಎಂಬುದು ಕುತೂಹಲದ ಸಂಗತಿ.

ಈ ತಂತ್ರಜ್ಞಾನದ ಅಬ್ಬರ ಕೇವಲ ಪ್ರವಾಸಿಗರಿಗೆ ಮಾತ್ರ ಸೀಮಿತವಾಗಿಲ್ಲ, ಇದು ಪ್ರವಾಸೋದ್ಯಮದಲ್ಲಿ ನಿರತರಾದವರ ಪಾಲಿಗೆ ‘ಬ್ರಹ್ಮಾಸ್ತ್ರ’ವಾಗಿ ಪರಿಣಮಿಸಿದೆ. ಈ ಹಿಂದೆ ಹೊಟೇಲ್ ಮಾಲೀಕರು ಅಥವಾ ಟ್ರಾವೆಲ್ ಏಜೆಂಟರು ಗ್ರಾಹಕರಿಗಾಗಿ ಕಾದು ಕುಳಿತುಕೊಳ್ಳಬೇಕಿತ್ತು. ಆದರೆ ಇಂದು ‘ಬಿಗ್ ಡೇಟಾ’ ಸಹಾಯದಿಂದ ಪ್ರವಾಸಿಗರು ಯಾವ ತಿಂಗಳಲ್ಲಿ ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ ಎಂಬ ‘ನಾಡಿಮಿಡಿತ’ ಅವರಿಗೆ ಮೊದಲೇ ಸಿಗುತ್ತಿದೆ. ಇದನ್ನು ಬಳಸಿಕೊಂಡು ಅವರು ಬೆಲೆಗಳನ್ನು ಏರಿಸುವುದು ಅಥವಾ ಇಳಿಸುವುದು (Dynamic Pricing) ಮಾಡುತ್ತಾರೆ. ನೀವು ಇಂದು ನೋಡಿದ ವಿಮಾನದ ಟಿಕೆಟ್ ದರ ನಾಳೆ ಏರಿಕೆ ಕಂಡರೆ, ಅದರ ಹಿಂದೆ ಈ ಎಐನ ಚಾಣಾಕ್ಷ ಬುದ್ಧಿ ಕೆಲಸ ಮಾಡುತ್ತಿರುತ್ತದೆ ಎಂಬುದು ಗಮನಾರ್ಹ.

ಇನ್ನು ಪ್ರವಾಸೋದ್ಯಮದ ಭವಿಷ್ಯವು 'ವರ್ಚುವಲ್ ರಿಯಾಲಿಟಿ' (VR) ಮತ್ತು 'ಆಗ್ಮೆಂಟೆಡ್ ರಿಯಾಲಿಟಿ' (AR) ಕೈಯಲ್ಲಿದೆ. ನೀವು ಯಾವುದೋ ಐತಿಹಾಸಿಕ ಸ್ಮಾರಕದ ಮುಂದೆ ನಿಂತಾಗ, ನಿಮ್ಮ ಫೋನ್‌ನ ಕ್ಯಾಮೆರಾ ಹಿಡಿದರೆ ಸಾಕು, ಆ ಸ್ಮಾರಕದ ಇತಿಹಾಸ, ಅದು ಕಟ್ಟಿದ ಕಾಲ ಮತ್ತು ಅದರ ವೈಭವದ ದೃಶ್ಯಗಳು ನಿಮ್ಮ ಕಣ್ಣಮುಂದೆ ಡಿಜಿಟಲ್ ರೂಪದಲ್ಲಿ ಬಂದು ನಿಲ್ಲುತ್ತವೆ. ಅಂದರೆ, ನೀವು ಕೇವಲ ಕಲ್ಲುಗಳನ್ನು ನೋಡುವುದಿಲ್ಲ, ಬದಲಿಗೆ ಆ ಕಲ್ಲುಗಳ ಹಿಂದಿನ ಕಥೆಯನ್ನು ಜೀವಂತವಾಗಿ ಅನುಭವಿಸುತ್ತೀರಿ. ಇದು ಪ್ರವಾಸೋದ್ಯಮವನ್ನು ಕೇವಲ ‘ನೋಡುವಿಕೆ’ಯಿಂದ ‘ತಿಳಿಯುವಿಕೆ’ಯ ಮಟ್ಟಕ್ಕೆ ಕೊಂಡೊಯ್ದಿದೆ. ಹಾಗೆಂದು ಈ ತಂತ್ರಜ್ಞಾನದ ಹಾದಿ ಎಲ್ಲವೂ ಹೂವಿನ ಹಾಸಿಗೆಯಲ್ಲ. ತಂತ್ರಜ್ಞಾನ ಹೆಚ್ಚಾದಂತೆ ಪ್ರವಾಸಿಗರ ‘ಖಾಸಗಿತನ’ ಎಂಬುದು ಮರೀಚಿಕೆಯಾಗುತ್ತಿದೆ. ನಾವು ಎಲ್ಲಿಗೆ ಹೋಗುತ್ತೇವೆ, ಏನು ತಿನ್ನುತ್ತೇವೆ ಮತ್ತು ಎಷ್ಟು ಹಣ ಖರ್ಚು ಮಾಡುತ್ತೇವೆ ಎಂಬ ಪ್ರತಿಯೊಂದು ಮಾಹಿತಿಯೂ ಇಂದು ಡೇಟಾ ಕಂಪನಿಗಳ ಬಳಿ ಇದೆ. ಮನುಷ್ಯನ ಸಹಜ ಪ್ರವೃತ್ತಿಯಾದ ‘ಅನಿರೀಕ್ಷಿತ ಅನ್ವೇಷಣೆ’ ಮಾಯವಾಗಿ, ಎಲ್ಲವೂ ಅಲ್ಗೋರಿದಮ್‌ಗಳು ಹೇಳಿದಂತೆ ನಡೆಯುತ್ತಿದೆ. ನಾವು ನಮಗೆ ಇಷ್ಟವಾದ ಜಾಗಕ್ಕೆ ಹೋಗುತ್ತಿದ್ದೇವೋ ಅಥವಾ ಗೂಗಲ್ ನಮಗೆ ಇಷ್ಟವಾಗುವಂತೆ ಮಾಡಿದ ಜಾಗಕ್ಕೆ ಹೋಗುತ್ತಿದ್ದೇವೋ ಎಂಬ ಸಣ್ಣ ಸಂಶಯ ಕಾಡುವುದು ಸಹ ಸಹಜ.

ai in tourism industry

ತಂತ್ರಜ್ಞಾನ ಮತ್ತು ಎಐ ಎಂಬುದು ಪ್ರವಾಸೋದ್ಯಮಕ್ಕೆ ಹೊಸ ರೆಕ್ಕೆಗಳನ್ನು ನೀಡಿದೆ. ಇದು ನಮ್ಮ ಪ್ರಯಾಣವನ್ನು ಸುಲಭ, ಸುರಕ್ಷಿತ ಮತ್ತು ಹೆಚ್ಚು ವೈಯಕ್ತಿಕಗೊಳಿಸಿದೆ. ಆದರೆ, ಎಷ್ಟೇ ಎಐ ಬಂದರೂ, ಪ್ಯಾರಿಸ್‌ನ ಗಲ್ಲಿಯಲ್ಲಿ ಬಣ್ಣದ ಕುಂಚ ಹಿಡಿದ ಕಲಾವಿದನ ಕಣ್ಣಲ್ಲಿರುವ ಕಾಂತಿಯನ್ನಾಗಲಿ ಅಥವಾ ಮಲ್ಲೇಶ್ವರದ ಕಾಫಿಯ ಅಸಲಿ ಘಮಲನ್ನಾಗಲಿ ಒಂದು ಸಾಫ್ಟ್‌ವೇರ್ ಕೊಡಲು ಸಾಧ್ಯವಿಲ್ಲ. ತಂತ್ರಜ್ಞಾನವು ನಮ್ಮ ಹಾದಿಯನ್ನು ಸುಗಮಗೊಳಿಸಲಿ, ಆದರೆ ಪ್ರವಾಸದ ಅಸಲಿ ಉದ್ದೇಶವಾದ ‘ಮನುಷ್ಯತ್ವದ ಭೇಟಿ’ ಮತ್ತು ‘ಪ್ರಕೃತಿಯ ಅನುಭೂತಿ’ ಮಾತ್ರ ನಾವೇ ಕಂಡುಕೊಳ್ಳಬೇಕಾದ ವಿಧಿ.

ಮೊದಲಾಗಿದ್ದರೆ ಟ್ರಾವೆಲ್ ಏಜೆಂಟ್ ಹೇಳಿದ್ದೇ ಕೊನೆ ಮಾತಾಗಿತ್ತು. ಅಂದು ಪ್ರವಾಸಕ್ಕೆ ಹೋಗಬೇಕೆಂದರೆ ನಮಗೆ ಟ್ರಾವೆಲ್ ಏಜೆಂಟ್ ಎಂಬ ‘ಪರಮಪಿತ’ನ ಅನಿವಾರ್ಯತೆ ಇತ್ತು. ದೆಹಲಿಯ ಖಾನ್ ಮಾರ್ಕೆಟ್‌ನಲ್ಲೋ ಅಥವಾ ಮೆಜೆಸ್ಟಿಕ್‌ನ ಯಾವುದೋ ಗಲ್ಲಿಯಲ್ಲೋ ಕುಳಿತಿದ್ದ ಆ ಏಜೆಂಟ್, ಯಾವುದೋ ನಾರುತ್ತಿರುವ ಹೊಟೇಲ್ ಫೊಟೋ ತೋರಿಸಿ ‘ಸಾರ್, ಇದು ಸ್ವರ್ಗದ ಸುಖ ನೀಡುತ್ತದೆ’ ಎಂದರೆ ನಾವು ಕುರಿಮರಿಗಳಂತೆ ತಲೆ ಅಲ್ಲಾಡಿಸಬೇಕಿತ್ತು. ಅವನ ಅಸಂಬದ್ಧ ಪ್ಯಾಕೇಜುಗಳು, ಅವನು ಹೇಳಿದ ಟೈಮಿಂಗ್ಸ್, ಅವನು ತೋರಿಸಿದ ‘ಪ್ಯಾರಡೈಸ್ ಹೊಟೇಲ್’ - ಇವೆಲ್ಲವೂ ನಮ್ಮ ಪಾಲಿಗೆ ವೇದವಾಕ್ಯವಾಗಿದ್ದವು. ನಾವು ಹಣ ಕೊಟ್ಟರೂ ಅವನು ಹೇಳಿದಂತೆ ಬದುಕಬೇಕಿತ್ತು. ಅಕ್ಷರಶಃ ಸೈನ್ಯದ ಬದುಕಿನಂತೆ ಆ ಏಜೆಂಟ್ ನಮ್ಮ ಪ್ರವಾಸದ ‘ಕಮಾಂಡರ್’ ಆಗಿದ್ದ. ಈಗ ಈ ಕೃತಕ ಬುದ್ಧಿಮತ್ತೆ ಎಂಬ ಮಾಯಾವಿ ಬಂದಿದ್ದಾನೆ. ಈಗ ಟ್ರಾವೆಲ್ ಏಜೆಂಟ್‌ನ ಆ ಮುಖದ ಮೇಲಿನ ಸುಳ್ಳಿನ ನಗು ಮತ್ತು ಅವನ ಜೇಬು ತುಂಬಿಸುವ ಕಮಿಷನ್ ಧಂದೆಗೆ ಬ್ರೇಕ್ ಬಿದ್ದಿದೆ. ಈಗ ಪ್ರವಾಸದ ಅಧಿಪತಿ ನೀನೇ. ನಿನ್ನ ಫೋನ್‌ನೊಳಗಿರುವ ಆ ಚತುರ ಬುದ್ಧಿ ನಿನ್ನ ಪ್ರತಿಯೊಂದು ಹೆಜ್ಜೆಯನ್ನೂ ನಿನ್ನ ಇಚ್ಛೆಗೆ ತಕ್ಕಂತೆ ರೂಪಿಸುತ್ತದೆ.

ಇದನ್ನೂ ಓದಿ: ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದೆ 'ರಾತ್ರಿ ಪ್ರವಾಸೋದ್ಯಮ'!

ಜೋರ್ಡನ್‌ನ ಯಾವುದೋ ಗಲ್ಲಿಯಲ್ಲೋ ಅಥವಾ ಜಪಾನ್‌ನ ಯಾವುದೋ ಮಾರುಕಟ್ಟೆಯಲ್ಲೋ ನಿಂತಾಗ ಭಾಷೆ ಎಂಬುದು ಮೌನವಾಗಿ ನಮ್ಮನ್ನು ಗೋಳಾಡಿಸುತ್ತಿತ್ತು. ಆ ಏಜೆಂಟ್ ಕಳಿಸಿದ ಗೈಡ್‌ಗೆ ಕನ್ನಡ ಬರುತ್ತಿರಲಿಲ್ಲ, ನಮಗೆ ಅರೇಬಿಕ್ ಅರ್ಥವಾಗುತ್ತಿರಲಿಲ್ಲ. ಸನ್ನೆಗಳ ಮೂಲಕವೇ ಜೀವನ ಕಳೆಯಬೇಕಿತ್ತು. ಆದರೆ ಈಗ ನಿಮ್ಮ ಹತ್ತಿರ ಗೂಗಲ್ ಲೆನ್ಸ್ ಇದೆ. ನೀವು ಆ ಅರೇಬಿಕ್ ಅಕ್ಷರಗಳ ಮುಂದೆ ನಿಮ್ಮ ಕ್ಯಾಮೆರಾ ಹಿಡಿದರೆ ಸಾಕು, ಅದು ಕ್ಷಣಾರ್ಧದಲ್ಲಿ ಕನ್ನಡಕ್ಕೆ ರೂಪಾಂತರಗೊಳ್ಳುತ್ತದೆ. ಎದುರಿರುವ ವ್ಯಕ್ತಿ ವಿಚಿತ್ರವಾಗಿ ಮಾತಾಡಿದರೆ, ಎಐ ಅದನ್ನು ಭಾಷಾಂತರಿಸಿ ನಿಮ್ಮ ಕಿವಿಗೆ ಕನ್ನಡದಲ್ಲೇ ಉಣಬಡಿಸುತ್ತದೆ. ಈಗ ಜಗತ್ತಿನ ಯಾವುದೇ ಮೂಲೆಯಲ್ಲಿ ನೀವು ‘ಅನಾಥ’ನಲ್ಲ, ಅಲ್ಲಿನ ಪ್ರತಿಯೊಬ್ಬನೂ ನಿಮ್ಮವನೇ. ಈ ಮೊದಲು ಏಜೆಂಟ್ ನಿಮಗೆ ಬಸ್ ಟಿಕೆಟ್ ಕೊಟ್ಟರೆ ಅದು ಸೀಟೋ ಅಥವಾ ಡ್ರೈವರ್ ಪಕ್ಕದ ಮರದ ಹಲಗೆಯೋ ಎಂಬುದು ಗೊತ್ತಾಗುತ್ತಿರಲಿಲ್ಲ. ಇಂದು ನೀವು ಬುಕ್ ಮಾಡುವ ಸ್ಲೀಪರ್ ಬಸ್ಸಿನ ಪ್ರತಿಯೊಂದು ಶಬ್ದವನ್ನೂ, ಅದರ ಲೈವ್ ಲೊಕೇಶನ್ ನ್ನೂ ಎಐ ಮೂಲಕ ಟ್ರ್ಯಾಕ್ ಮಾಡಬಹುದು. ನಿಮ್ಮ ಲಗೇಜ್ ಎಲ್ಲಿದೆ ಎಂದು ತಿಳಿಯಲು ಏರ್ ಟ್ಯಾಗ್ಸ್ ಬಳಸಬಹುದು.

ಇಂದು ಪ್ರವಾಸೋದ್ಯಮದ ಚಹರೆಯೇ ಬದಲಾಗಿದೆ. ಯಾರು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೋ, ಅವರು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರಬಹುದು. ಪ್ರವಾಸೋದ್ಯಮ ಕೇವಲ ಜಾಗಗಳನ್ನು ನೋಡುವ ಹವ್ಯಾಸವಾಗಿ ಉಳಿದಿಲ್ಲ, ಇದೊಂದು ‘ಡೇಟಾ ಮತ್ತು ಎಮೋಷನ್’ ನಡುವಿನ ಜುಗಲ್‌ಬಂದಿ. ಈ ಬದಲಾದ ಕಾಲಘಟ್ಟದಲ್ಲಿ ಯಾರು ತಂತ್ರಜ್ಞಾನವನ್ನು ಕೇವಲ ಒಂದು ಯಂತ್ರವಾಗಿ ನೋಡದೆ, ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೋ, ಅವರು ಮಾತ್ರ ಈ ಕಲಾತ್ಮಕ ಮತ್ತು ವ್ಯಾವಹಾರಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರಲು ಸಾಧ್ಯ.