Wednesday, January 14, 2026
Wednesday, January 14, 2026

ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದೆ 'ರಾತ್ರಿ ಪ್ರವಾಸೋದ್ಯಮ'!

ಈ ‘ನೋಕ್ಟರಿಸಂ’ ಅನ್ನೋದು ಬರಿ ಮೋಜಿನ ವಿಷಯವಲ್ಲ. ಇದು ನಮ್ಮೊಳಗಿನ ಒಂಟಿತನವನ್ನು ಸೆಲೆಬ್ರೇಟ್ ಮಾಡುವ ಒಂದು ಅದ್ಭುತ ಕಲೆ. ಹಗಲಿನಲ್ಲಿ ನಾವು ನೂರಾರು ಮುಖವಾಡಗಳನ್ನು ಹಾಕಿಕೊಂಡು ಸಂಚರಿಸುತ್ತೇವೆ. ಆದರೆ ರಾತ್ರಿಯ ನಿಶ್ಯಬ್ದದಲ್ಲಿ ಆ ನಕ್ಷತ್ರಗಳ ಕೆಳಗೆ ನಿಂತಾಗ ಮಾತ್ರ ನಮಗೆ ನಮ್ಮ ಅಸಲಿ ಮುಖ ದರ್ಶನವಾಗುತ್ತದೆ. ಆಕಾಶದತ್ತ ಕಣ್ಣು ನೆಟ್ಟು ಕುಳಿತಾಗ, ನಕ್ಷತ್ರಗಳು ನಮ್ಮ ಕಿವಿಯಲ್ಲಿ ‘ಇಷ್ಟಕ್ಕೇ ಯಾಕೆ ಆತಂಕ ಪಡ್ತೀಯಾ?’ ಎಂದು ಪಿಸುಗುಟ್ಟಿದಂತೆ ಭಾಸವಾಗುತ್ತದೆ. ಅದು ನಮಗೆ ಜೀವನದ ಮೇಲಿರುವ ಭಯವನ್ನು ಹೋಗಲಾಡಿಸಿ, ಒಂದು ವಿಚಿತ್ರವಾದ ಧೈರ್ಯವನ್ನು ತುಂಬುವ ಕ್ಷಣ.

ಸೂರ್ಯ ಪಶ್ಚಿಮದ ಕೆಂಪು ಸಮುದ್ರ ಅಥವಾ ಪರ್ವತದಾಚೆ ಮುಳುಗಿ, ಇಡೀ ಜಗತ್ತು ಚಾದರ ಹೊದ್ದು ಮಲಗಲು ಸಿದ್ಧವಾಗುವ ಹೊತ್ತಿಗೆ ಕೆಲವು ಜೀವಗಳು ಕಣ್ಣು ಬಿಡುತ್ತವೆ. ಹಗಲಿನ ಅಬ್ಬರ, ವಾಹನಗಳ ಕರ್ಕಶ ಸದ್ದು ಮತ್ತು ಜನಜಂಗುಳಿ ಅಡಗಿದ ಮೇಲೆ ಅಸಲಿ ಆಟ ಶುರುವಾಗುತ್ತದೆ. ಅರೆಬರೆ ನಿದ್ದೆಯಲ್ಲಿರುವ ಭೂಮಿಯ ಮೇಲೆ ಚಂದ್ರನ ತಣ್ಣನೆಯ ಬೆಳಕು ಬಿದ್ದಾಗ ಪ್ರಕೃತಿ ಎಷ್ಟು ಸುಂದರವಾಗಿ ಕಾಣುತ್ತದೆ ಅಂದ್ರೆ, ಅದನ್ನು ನೋಡಲು ಎರಡು ಕಣ್ಣು ಸಾಲದು. ನಾವು ಹಗಲಿನಲ್ಲಿ ನೋಡುವ ಪ್ರಪಂಚವೇ ಬೇರೆ, ರಾತ್ರಿಯ ನಿಗೂಢತೆಯೇ ಬೇರೆ. ಹಗಲಿನಲ್ಲಿ ಹಸಿರಾಗಿ ಕಾಣುವ ಕಾಡು, ರಾತ್ರಿಯ ಹೊತ್ತು ಕಡುಗಪ್ಪಾಗಿ, ತನ್ನೊಳಗೆ ಸಾವಿರಾರು ರಹಸ್ಯಗಳನ್ನು ಅಡಗಿಸಿಕೊಂಡು ನಿಂತಿರುತ್ತದೆ. ಇದು ಕೇವಲ ಕುಡಿದು ಕುಪ್ಪಳಿಸುವ ರಾತ್ರಿ ಪಾರ್ಟಿಗಳ ಕಥೆಯಲ್ಲ, ಇದು ನಕ್ಷತ್ರಗಳ ಜತೆ ಮಾತನಾಡುವ, ಗಾಳಿಯ ಮರ್ಮರ ಆಲಿಸುವ ಮತ್ತು ನಿದ್ರಿಸುತ್ತಿರುವ ನಗರಗಳ ಉಸಿರಾಟವನ್ನು ಕೇಳಿಸಿಕೊಳ್ಳುವ ಒಂದು ಅದ್ಭುತ ಪಯಣ.

ನಮಗೆ ಗೊತ್ತಿಲ್ಲದೇ ಒಂದು ಹೊಸ ರೀತಿಯ ಪ್ರವಾಸೋದ್ಯಮ ಜನಪ್ರಿಯವಾಗುತ್ತಿದೆ. ಅದನ್ನು 'ನೋಕ್ಟರಿಸಂ' (Noctourism) ಅಂತ ಕರೆಯಲಾಗುತ್ತಿದೆ. ಇದನ್ನು ‘ನಿಶಾಚರ ಪ್ರವಾಸೋದ್ಯಮ’ ಅಥವಾ ಸರಳವಾಗಿ ‘ರಾತ್ರಿ ಪ್ರವಾಸೋದ್ಯಮ’ ಎನ್ನಬಹುದು.

ಕೆಲವರಿಗೆ ರಾತ್ರಿ ಅಂದ್ರೆ ಭಯ, ಇನ್ನು ಕೆಲವರಿಗೆ ರಾತ್ರಿ ಅಂದ್ರೆ ಭರವಸೆ. ಈ ನೋಕ್ಟರಿಸಂ ಅಂದ್ರೆ ಹಾಗೇ... ದೂರದ ಯಾವುದೋ ಬೆಟ್ಟದ ತುದಿಯಲ್ಲಿ ನಿಂತು, ಕೋಟಿ ಕೋಟಿ ಮೈಲಿ ದೂರದ ನಕ್ಷತ್ರಗಳನ್ನು ಬರಿಗಣ್ಣಿನಿಂದ ನೋಡುತ್ತಾ ‘ನಾನು ಈ ಬ್ರಹ್ಮಾಂಡದ ಒಂದು ಪುಟ್ಟ ಕಣ’ ಅಂತ ಅಂದುಕೊಳ್ಳುವಾಗ ಸಿಗುವ ಕಿಕ್ ಇದೆಯಲ್ಲ, ಅದು ಹಗಲಿನ ಯಾವ ಐಷಾರಾಮಿ ಕಾರಿನ ಸವಾರಿಯಲ್ಲೂ ಸಿಗುವುದಿಲ್ಲ. ಇಲ್ಲಿ ವಿಜ್ಞಾನವಿದೆ, ಅಧ್ಯಾತ್ಮವಿದೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಮನುಷ್ಯನ ಸಾಹಸೀ ಪ್ರವೃತ್ತಿಯಿದೆ. ಇವತ್ತು ಜಗತ್ತು ಬದಲಾಗುತ್ತಿದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನ ಇಂದು ಇರುಳಿನ ಹಾದಿ ಹಿಡಿಯುತ್ತಿದ್ದಾರೆ. ಜನಜಂಗುಳಿ ಇಲ್ಲದ ಹಂಪಿಯ ಕಲ್ಲುಗಳು ಚಂದ್ರನ ಬೆಳಕಿನಲ್ಲಿ ಏನು ಮಾತಾಡುತ್ತವೆ ಅಂತ ಕೇಳಿಸಿಕೊಳ್ಳಲು ಜನ ಕಾಯುತ್ತಿದ್ದಾರೆ. ಕತ್ತಲೆಯನ್ನು ಕತ್ತಲೆ ಅಂತ ಅಂದುಕೊಳ್ಳಬೇಡಿ, ಅದು ಬೆರಗುಗಳ ಗಣಿ. ಈ ‘ನೋಕ್ಟರಿಸಂ’ ಅನ್ನೋದು ಕತ್ತಲೆಯ ಒಳಗೆ ಬೆಳಕನ್ನು ಹುಡುಕುವ ಅಥವಾ ಆ ಕತ್ತಲೆಯನ್ನೇ ಪ್ರೀತಿಸುವ ಒಂದು ಹೊಸ ಕ್ರೇಜ್!

night tour

ಈ ‘ನೋಕ್ಟರಿಸಂ’ ಅನ್ನೋದು ಬರಿ ಮೋಜಿನ ವಿಷಯವಲ್ಲ. ಇದು ನಮ್ಮೊಳಗಿನ ಒಂಟಿತನವನ್ನು ಸೆಲೆಬ್ರೇಟ್ ಮಾಡುವ ಒಂದು ಅದ್ಭುತ ಕಲೆ. ಹಗಲಿನಲ್ಲಿ ನಾವು ನೂರಾರು ಮುಖವಾಡಗಳನ್ನು ಹಾಕಿಕೊಂಡು ಸಂಚರಿಸುತ್ತೇವೆ. ಆದರೆ ರಾತ್ರಿಯ ನಿಶ್ಯಬ್ದದಲ್ಲಿ ಆ ನಕ್ಷತ್ರಗಳ ಕೆಳಗೆ ನಿಂತಾಗ ಮಾತ್ರ ನಮಗೆ ನಮ್ಮ ಅಸಲಿ ಮುಖ ದರ್ಶನವಾಗುತ್ತದೆ. ಆಕಾಶದತ್ತ ಕಣ್ಣು ನೆಟ್ಟು ಕುಳಿತಾಗ, ನಕ್ಷತ್ರಗಳು ನಮ್ಮ ಕಿವಿಯಲ್ಲಿ ‘ಇಷ್ಟಕ್ಕೇ ಯಾಕೆ ಆತಂಕ ಪಡ್ತೀಯಾ?’ ಎಂದು ಪಿಸುಗುಟ್ಟಿದಂತೆ ಭಾಸವಾಗುತ್ತದೆ. ಅದು ನಮಗೆ ಜೀವನದ ಮೇಲಿರುವ ಭಯವನ್ನು ಹೋಗಲಾಡಿಸಿ, ಒಂದು ವಿಚಿತ್ರವಾದ ಧೈರ್ಯವನ್ನು ತುಂಬುವ ಕ್ಷಣ. ಈ ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲ, ಆದರೆ ಪ್ರಕೃತಿಯ ಈ ರಾತ್ರಿಯ ಲೀಲೆ ಮಾತ್ರ ಅನಾದಿ ಕಾಲದಿಂದಲೂ ಹೀಗೇ ಇದೆ. ನೀವು ವಿಮಾನದಲ್ಲಿ ಕುಳಿತು ಆತಂಕ ಪಡುವಾಗ ಅಥವಾ ಕೆಲಸದ ಒತ್ತಡದಲ್ಲಿ ಬೆವರುವಾಗ ಒಮ್ಮೆ ಯೋಚಿಸಿ, ಇದೇ ಭೂಮಿಯ ಯಾವುದೋ ಮೂಲೆಯಲ್ಲಿ ಕತ್ತಲೆಯನ್ನು ಸೀಳಿಕೊಂಡು ಬೆಳ್ಳಿ ನಕ್ಷತ್ರಗಳು ನಗುತ್ತಿರುತ್ತವೆ. ಆ ನಗುವನ್ನು ನೋಡಲು ಈಗ ಜನ ಸಾವಿರಾರು ರುಪಾಯಿ ಖರ್ಚು ಮಾಡಿ ಬೆಟ್ಟ ಹತ್ತುತ್ತಿದ್ದಾರೆ. ಯಾಕೆಂದರೆ, ಕತ್ತಲೆಯಲ್ಲಿ ಮಾತ್ರ ನಮಗೆ ನಿಜವಾದ ಬೆಳಕು ಅಂದ್ರೆ ಏನು ಅಂತ ಅರ್ಥವಾಗೋದು. ಇದೇ 'ನೋಕ್ಟರಿಸಂ'ನ ಅಸಲಿ ಸತ್ಯ!

ಪ್ರವಾಸೋದ್ಯಮ ಜಗತ್ತು ಇಂದು ಹಗಲಿನ ಸೂರ್ಯನ ಬೆಳಕಿನಿಂದ ಹೊರಬಂದು, ಚಂದ್ರನ ಬೆಳಕು ಮತ್ತು ನಕ್ಷತ್ರಗಳ ನಿಗೂಢತೆಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ. ಸಾಂಪ್ರದಾಯಿಕ ಪ್ರವಾಸೋದ್ಯಮದಲ್ಲಿ ಹಗಲಿನಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ರಾತ್ರಿ ಹೋಟೆಲ್‌ಗಳಲ್ಲಿ ವಿಶ್ರಾಂತಿ ಪಡೆಯುವುದು ರೂಢಿ. ಆದರೆ ಈ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಬದಲಿಸಿರುವುದು ‘ನೋಕ್ಟರಿಸಂ’ ಅಥವಾ ‘ರಾತ್ರಿ ಪ್ರವಾಸೋದ್ಯಮ’. ಹಗಲಿಗೆ ಮಾತ್ರ ಸೀಮಿತವಾಗಿದ್ದ ಪ್ರವಾಸೋದ್ಯಮ ಚಟುವಟಿಕೆಗಳು ಈಗ ರಾತ್ರಿಗೂ ವಿಸ್ತರಿಸಿರುವುದು ವಿಶೇಷ. ಬೆಂಗಳೂರೇ ಇರಬಹುದು, ಹಂಪಿಯೇ ಇರಬಹುದು, ಅದು ಹಗಲಿನಲ್ಲಿ ಕಾಣುವುದಕ್ಕಿಂತ ರಾತ್ರಿಯೇ ಭಿನ್ನವಾಗಿರುತ್ತವೆ. ಹಗಲನ್ನು ನಾಚಿಸುವ ರೀತಿಯಲ್ಲಿ ರಾತ್ರಿ ತೆರೆದುಕೊಳ್ಳಬಹುದು. ಅಮೆರಿಕದ ನ್ಯೂಯಾರ್ಕ್ ಅಥವಾ ಇಸ್ರೇಲಿನ ಟೆಲ್ ಅವಿವ್ ಹಗಲು ಹೊತ್ತಿನಲ್ಲಿ ಒಂಥರ ಮಂಕು ಹಿಡಿದಂತೆ ಕಂಡರೆ, ರಾತ್ರಿ ವೇಳೆ ಅವು ರಂಗುಬಿರಂಗಿ! ಆ ನಗರವನ್ನು ರಾತ್ರಿ ವೇಳೆ ನೋಡದಿದ್ದರೆ ಅದು ಅರ್ಥವೇ ಆಗುವುದಿಲ್ಲ. ಹೀಗಾಗಿ ‘ನಿಶಾಚರ ಪ್ರವಾಸೋದ್ಯಮ’ ಹೊಸ ಆಯಾಮ ಮತ್ತು ಆಕರ್ಷಣೆಯನ್ನು ಪಡೆದುಕೊಳ್ಳುತ್ತಿದೆ.

‘ನೋಕ್ಟರಿಸಂ’ ಎನ್ನುವುದು ‘ನೋಕ್ಟರ್ನಲ್’ (ರಾತ್ರಿಯ ವೇಳೆ ಚಟುವಟಿಕೆಯಿಂದ ಇರುವುದು) ಮತ್ತು ‘ಟೂರಿಸಂ’ ಎಂಬ ಎರಡು ಪದಗಳ ಸಮ್ಮಿಲನ. ಸೂರ್ಯಾಸ್ತದ ನಂತರ ಆರಂಭವಾಗುವ ಈ ಪ್ರವಾಸ ರಾತ್ರಿಯ ಹೊತ್ತು ಪ್ರಕೃತಿಯನ್ನು, ಆಕಾಶವನ್ನು ಮತ್ತು ನಗರಗಳ ಜೀವನವನ್ನು ವಿಭಿನ್ನವಾಗಿ ನೋಡಲು ಅವಕಾಶ ಮಾಡಿಕೊಡುತ್ತದೆ. ಇದು ಕೇವಲ ರಾತ್ರಿಯ ಪಾರ್ಟಿಗಳಿಗೆ ಸೀಮಿತವಾಗಿಲ್ಲ, ಬದಲಾಗಿ ಪರಿಸರ, ಅಧ್ಯಾತ್ಮ, ವಿಜ್ಞಾನ ಮತ್ತು ಸಾಹಸದ ಹದವಾದ ಮಿಶ್ರಣ. ‘ಆಸ್ಟ್ರೋ-ಟೂರಿಸಂ’ ಎನ್ನೋದು ‘ನೋಕ್ಟರಿಸಂ’ನ ಅತ್ಯಂತ ಪ್ರಮುಖ ಮತ್ತು ವೇಗವಾಗಿ ಬೆಳೆಯುತ್ತಿರುವ ವಿಭಾಗ. ನಗರೀಕರಣದಿಂದಾಗಿ ನಗರಗಳಲ್ಲಿ ನಕ್ಷತ್ರಗಳು ಕಾಣಿಸುವುದೇ ಅಪರೂಪ. ಆದ್ದರಿಂದ ಪ್ರವಾಸಿಗರು 'ಡಾರ್ಕ್ ಸ್ಕೈ ರಿಸರ್ವ್' (Dark Sky Reserves) ಅಂದರೆ ಬೆಳಕಿನ ಮಾಲಿನ್ಯವಿಲ್ಲದ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ದೂರದರ್ಶಕಗಳ ಮೂಲಕ ಗ್ರಹಗಳು, ನಕ್ಷತ್ರಪುಂಜಗಳು ಮತ್ತು ಕ್ಷೀರಪಥವನ್ನು (Milky Way) ವೀಕ್ಷಿಸುವುದು ಮನುಷ್ಯನನ್ನು ಬ್ರಹ್ಮಾಂಡದ ವಿಸ್ಮಯಕ್ಕೆ ಕೊಂಡೊಯ್ಯುತ್ತದೆ.

Night tour1

ಹಾಗೆಯೇ ಕಾಡಿನ ಅಸಲಿ ಜೀವನ ಆರಂಭವಾಗುವುದೇ ರಾತ್ರಿ ವೇಳೆಯಲ್ಲಿ. ಹಗಲಿನಲ್ಲಿ ಅಡಗಿಕೊಂಡಿರುವ ಚಿರತೆ, ಕಾಡು ಬೆಕ್ಕುಗಳು, ಗೂಬೆಗಳು ಮತ್ತು ಹಾರುವ ಅಳಿಲುಗಳಂಥ ರಾತ್ರಿ ಓಡಾಡುವ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿ ನೋಡಲು ಇದು ಉತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಸಿಂಗಾಪುರದ ‘ನೈಟ್ ಸಫಾರಿ’ ಇದಕ್ಕೆ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಉದಾಹರಣೆ. ಅನೇಕ ಐತಿಹಾಸಿಕ ಸ್ಮಾರಕಗಳು ರಾತ್ರಿಯ ದೀಪಾಲಂಕಾರದಲ್ಲಿ ಭವ್ಯವಾಗಿ ಕಾಣುತ್ತವೆ.

ಉದಾಹರಣೆಗೆ, ಮೈಸೂರು ಅರಮನೆಯ ದೀಪಾಲಂಕಾರ ಅಥವಾ ಹಂಪಿಯ ಕಲ್ಲುಗಳ ಮೇಲೆ ಬೀಳುವ ಬೆಳಕಿನ ಆಟ. ಇತ್ತೀಚಿನ ದಿನಗಳಲ್ಲಿ ‘ಸೌಂಡ್ ಅಂಡ್ ಲೈಟ್ ಶೋ’ಗಳ ಮೂಲಕ ಇತಿಹಾಸವನ್ನು ರಾತ್ರಿಯ ಹೊತ್ತು ಕಥೆಯ ರೂಪದಲ್ಲಿ ಪ್ರವಾಸಿಗರಿಗೆ ಉಣಬಡಿಸಲಾಗುತ್ತಿದೆ. ಜೋರ್ಡಾನಿನ ಪೆಟ್ರಾ ‘ರಾತ್ರಿ ಪ್ರವಾಸೋದ್ಯಮ’ಕ್ಕೆ ತೆರೆದುಕೊಂಡ ನಂತರ ಅದರ ಖದರೇ ಬದಲಾಗಿ ಹೋಗಿದೆ. ಹುಣ್ಣಿಮೆಯ ಬೆಳಕಿನಲ್ಲಿ ಬೆಟ್ಟ ಹತ್ತುವುದು ಅಥವಾ ಕಾಡಿನ ನಡುವೆ ಟೆಂಟ್ ಹಾಕಿ ಕ್ಯಾಂಪ್ ಫೈರ್ ನಲ್ಲಿ ಕುಳಿತುಕೊಳ್ಳುವುದು ಪ್ರವಾಸಿಗರಿಗೆ ನೆಚ್ಚಿನ ಚಟುವಟಿಕೆ. ಇದು ಪ್ರವಾಸಿಗರಲ್ಲಿ ಹಗಲಿನ ಟ್ರೆಕ್ಕಿಂಗ್‌ಗಿಂತ ಹೆಚ್ಚು ರೋಮಾಂಚನ ಉಂಟುಮಾಡುತ್ತದೆ.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಗಲಿನಲ್ಲಿ ಹೊರಗೆ ಅಡ್ಡಾಡುವುದು ಕಷ್ಟವಾಗುತ್ತಿದೆ. ಬಿಸಿಲಿನ ತಾಪಕ್ಕೆ ಹೆದರುವ ಪ್ರವಾಸಿಗರಿಗೆ ರಾತ್ರಿಯ ತಂಪಾದ ವಾತಾವರಣವು ವರದಾನವಾಗಿದೆ. ಹಗಲಿನಲ್ಲಿ ಮಾತ್ರ ನಡೆಯುತ್ತಿದ್ದ ಪ್ರವಾಸೋದ್ಯಮ ಈಗ ರಾತ್ರಿಯೂ ವಿಸ್ತರಿಸಿರುವುದರಿಂದ ಸ್ಥಳೀಯ ಹೊಟೇಲ್, ಸಾರಿಗೆ ಮತ್ತು ಮಾರ್ಗದರ್ಶಿಗಳಿಗೆ ಹೆಚ್ಚಿನ ಆದಾಯ ದೊರೆಯುತ್ತಿದೆ. ಇದು ‘24/7 ಪ್ರವಾಸೋದ್ಯಮ ಆರ್ಥಿಕತೆ’ಗೆ ನಾಂದಿ ಹಾಡಿದೆ. ನಗರದ ಗದ್ದಲದಿಂದ ದೂರವಿರುವ ರಾತ್ರಿಯ ನಿಶ್ಯಬ್ದವು ಪ್ರವಾಸಿಗರಿಗೆ ಮಾನಸಿಕ ಶಾಂತಿ ಮತ್ತು ಧ್ಯಾನಸ್ಥ ಸ್ಥಿತಿಯನ್ನು ನೀಡುತ್ತದೆ.

ಬುಕಿಂಗ್ ಡಾಟ್ ಕಾಮ್ ಸಮೀಕ್ಷೆಯ ಪ್ರಕಾರ, ಸುಮಾರು ಶೇ.ಅರವತ್ತೊಂದರಷ್ಟು ಪ್ರವಾಸಿಗರು ಹಗಲಿನ ಬೇಸಿಗೆಯ ಬಿಸಿಲಿನಿಂದ ತಪ್ಪಿಸಿಕೊಳ್ಳಲು ರಾತ್ರಿಯ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಹಗಲಿನಲ್ಲಿ ಅತಿಯಾದ ಜನಜಂಗುಳಿ, ವಾಹನದಟ್ಟಣೆಯಿಂದ ತಪ್ಪಿಸಿಕೊಳ್ಳಲು ಜನರು ನಿಶ್ಯಬ್ದ ಮತ್ತು ಪ್ರಶಾಂತವಾದ ರಾತ್ರಿಯನ್ನು ಆರಿಸಿಕೊಳ್ಳುತ್ತಿದ್ದಾರೆ. ಬೇಸಿಗೆಯ ಬಿಸಿಲಿನಿಂದ ಉಂಟಾಗುವ ಆಯಾಸ ಮತ್ತು ಶ್ರಮವನ್ನು ತಪ್ಪಿಸಿಕೊಳ್ಳಲು ಅನೇಕರು ‘ರಾತ್ರಿ ಪ್ರವಾಸೋದ್ಯಮ’ವನ್ನು ಇಷ್ಟಪಡುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿ ಹಗಲಿನಲ್ಲಿ ಇರುವ ತಳ್ಳಾಟ-ನೂಕಾಟ ರಾತ್ರಿ ಇರುವುದಿಲ್ಲ. ಹಗಲಿನಲ್ಲಿ ವಿಶ್ರಾಂತಿ ಪಡೆದು, ರಾತ್ರಿಯಿಡೀ ಹೊಸ ಜಗತ್ತನ್ನು ಅನ್ವೇಷಿಸುತ್ತಾ ಗರಿಷ್ಠ ಸಮಯದ ಸದ್ಬಳಕೆಯನ್ನು ಮಾಡಿಕೊಳ್ಳಬಹುದು. ತಾಪಮಾನ ಜಾಸ್ತಿಯಿರುವ ಊರುಗಳಲ್ಲಿ ಸಾಯಂಕಾಲ ಆರರ ನಂತರ ತೆರೆದುಕೊಳ್ಳುವ ‘ನಿಶಾಚರ ಪ್ರವಾಸೋದ್ಯಮ’ ನೀಡುವ ಅನುಭವವೇ ಬೇರೆ.

ಒಂದು ಪ್ರವಾಸಿತಾಣದ ಗರಿಷ್ಠ ಪ್ರಯೋಜನ ಪಡೆಯುವುದು ‘ರಾತ್ರಿ ಪ್ರವಾಸೋದ್ಯಮ’ದಿಂದ ಸಾಧ್ಯವಾಗಿದೆ. ಹಗಲು ಹೊತ್ತಿನಲ್ಲಿ ಜೋಗ ಜಲಪಾತ ನೋಡುವ ಅನುಭವ ಒಂದಾದರೆ, ರಾತ್ರಿ ವೇಳೆ ನೋಡುವುದು ಇನ್ನೊಂದು. ಜೋಗ ಜಲಪಾತಕ್ಕೆ ಲೇಸರ್ ಲೈಟ್ಸ್-ಸೌಂಡ್ ವ್ಯವಸ್ಥೆ ಕಲ್ಪಿಸಿದರೆ ಅದರ ಅನುಭವ ವರ್ಣಿಸಲಸಾಧ್ಯ. ರಾತ್ರಿ ನೂಕು-ನುಗ್ಗಲು, ಜಂಜಾಟಗಳಿಗಿಂತ ರಾತ್ರಿಯ ವೀಕ್ಷಣೆ ಭಿನ್ನ ಅನುಭವ ನೀಡುವುದರಲ್ಲಿ ಅನುಮಾನವೇ ಇಲ್ಲ. ಜತೆಗೆ ಹಗಲಿಗೆ ಮಾತ್ರ ಸೀಮಿತವಾಗಿದ್ದ ಒಂದು ಪ್ರವಾಸಿ ತಾಣದ ಚಟುವಟಿಕೆ ರಾತ್ರಿಗೂ ವಿಸ್ತರಿಸಿ ಗರಿಷ್ಠ ಪ್ರಯೋಜನ ಮತ್ತು ಆ ಮೂಲಕ ಹೆಚ್ಚುವರಿ ಗಳಿಕೆಗೂ ದಾರಿ ಮಾಡಿಕೊಡುತ್ತದೆ. ನಗರ ಪ್ರದೇಶಗಳಲ್ಲಿ ಈಗ ಹೊಸ ಟ್ರೆಂಡ್ ಶುರುವಾಗಿದೆ. ಅದು ದೊಡ್ಡ ಮ್ಯೂಸಿಯಂಗಳು ಮತ್ತು ಕಲಾ ಪ್ರದರ್ಶನಗಳು ಮಧ್ಯರಾತ್ರಿಯವರೆಗೂ ತೆರೆದಿರುವುದು. ಇದು ಕೇವಲ ಪ್ರವಾಸಿಗರಿಗಷ್ಟೇ ಅಲ್ಲ, ಹಗಲಿನಲ್ಲಿ ಕೆಲಸ ಮಾಡುವ ಸ್ಥಳೀಯ ಉದ್ಯೋಗಿಗಳಿಗೂ ಕಲೆ ಮತ್ತು ಇತಿಹಾಸವನ್ನು ಸವಿಯಲು ಅನುವು ಮಾಡಿಕೊಡುತ್ತದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ ಎಫ್ಎಮ್ಐ (Future Market Insights) ಪ್ರಕಾರ, ಈ ಕ್ಷೇತ್ರವು ಮುಂದಿನ ಹತ್ತು ವರ್ಷಗಳಲ್ಲಿ ದುಪ್ಪಟ್ಟು ಬೆಳವಣಿಗೆ ಕಾಣಲಿದೆ. 2035ರ ವೇಳೆಗೆ ವಿಶ್ವದ ಅರ್ಧದಷ್ಟು ಪ್ರವಾಸಿ ತಾಣಗಳಲ್ಲಿ ‘ರಾತ್ರಿ ಪ್ರವಾಸೋದ್ಯಮ’ ಜಾರಿಗೆ ಬಂದಿದ್ದೇ ಆದರೆ, ಅದು ಕಳೆದ ಇಪ್ಪತ್ತು ವರ್ಷಗಳಲ್ಲಿ ಗಳಿಸಿದ ವರಮಾನಕ್ಕೆ ಸರಿ ಹೊಂದಲಿದೆ.

ಲಡಾಖ್‌ನ ಲೇಹ್‌ನಿಂದ ಸುಮಾರು 250 ಕಿಮೀ ದೂರದಲ್ಲಿರುವ ‘ಹಾನ್ಲೆ’ ಒಂದು ಪುಟ್ಟ ಗ್ರಾಮ. ಸಮುದ್ರ ಮಟ್ಟದಿಂದ ಸುಮಾರು ಹದಿನಾಲ್ಕು ಸಾವಿರ ಅಡಿ ಎತ್ತರದಲ್ಲಿರುವ ಈ ಪ್ರದೇಶವು ಇಂದು ಜಾಗತಿಕ ‘ಆಸ್ಟ್ರೋ-ಟೂರಿಸಂ’ ಅರ್ಥಾತ್ ‘ರಾತ್ರಿ ಪ್ರವಾಸೋದ್ಯಮ’ ಭೂಪಟದಲ್ಲಿ ಮಿಂಚುತ್ತಿದೆ. ಇಲ್ಲಿ ಮಳೆ ಮತ್ತು ಮೋಡದ ಪ್ರಮಾಣ ಬಹಳ ಕಡಿಮೆ. ವರ್ಷದ ಬಹುತೇಕ ದಿನಗಳು ಆಕಾಶವು ಅತ್ಯಂತ ಸ್ಪಷ್ಟವಾಗಿರುತ್ತದೆ. ಇಲ್ಲಿ ಜನವಸತಿ ಕಡಿಮೆ ಇರುವುದರಿಂದ ಮತ್ತು ಯಾವುದೇ ಕೈಗಾರಿಕೆಗಳಿಲ್ಲದ ಕಾರಣ, ನಗರಗಳ ಕೃತಕ ಬೆಳಕು ಇಲ್ಲಿನ ಆಕಾಶವನ್ನು ಮಸುಕುಗೊಳಿಸಿಲ್ಲ. ಸಾಮಾನ್ಯವಾಗಿ ನಗರಗಳಲ್ಲಿ ನಮಗೆ ಕೇವಲ ಹತ್ತಾರು ನಕ್ಷತ್ರಗಳು ಕಂಡರೆ, ಹಾನ್ಲೆಯಲ್ಲಿ ನಮ್ಮ ಗ್ಯಾಲಕ್ಸಿಯಾದ 'ಕ್ಷೀರಪಥ' (Milky Way) ಒಂದು ಹಾಲಿನ ನದಿಯಂತೆ ಆಕಾಶದಲ್ಲಿ ಹರಿಯುವುದು ಸ್ಪಷ್ಟವಾಗಿ ಕಾಣುತ್ತದೆ. ಕೆಮೆರಾದಲ್ಲಿ 'ಲಾಂಗ್ ಎಕ್ಸ್‌ಪೋಶರ್' ಮೂಲಕ ನಕ್ಷತ್ರಗಳ ಅದ್ಭುತ ಚಿತ್ರಗಳನ್ನು ಸೆರೆಹಿಡಿಯಲೆಂದೇ ಇಲ್ಲಿಗೆ ಸಾವಿರಾರು ಛಾಯಾಗ್ರಾಹಕರು ಬರುತ್ತಾರೆ. ಸಪ್ತರ್ಷಿ ಮಂಡಲ, ಧ್ರುವ ನಕ್ಷತ್ರ ಮತ್ತು ವಿವಿಧ ರಾಶಿಚಕ್ರಗಳ ನಕ್ಷತ್ರಪುಂಜಗಳನ್ನು ಗುರುತಿಸುವುದು ದೊಡ್ಡ ಆಕರ್ಷಣೆ. ಹಾನ್ಲೆಯಲ್ಲಿ ‘ನೋಕ್ಟರಿಸಂ’ ಆರಂಭವಾದ ಮೇಲೆ ಅಲ್ಲಿನ ಜನರ ಬದುಕೇ ಬದಲಾಗಿದೆ. ಸ್ಥಳೀಯರಿಗೆ ಪ್ರವಾಸಿಗರ ಆತಿಥ್ಯ ನೀಡುವುದರ ಜತೆಗೆ, ನಕ್ಷತ್ರಗಳನ್ನು ತೋರಿಸುವ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ. ಇಲ್ಲಿನ ಹಳ್ಳಿಗರು ರಾತ್ರಿಯ ಹೊತ್ತು ಅನಗತ್ಯ ದೀಪಗಳನ್ನು ಆರಿಸಿ ‘ಬೆಳಕಿನ ಮಾಲಿನ್ಯ’ ತಡೆಗಟ್ಟಲು ಸಹಕರಿಸುತ್ತಾರೆ. ಮನೆಗಳ ಕಿಟಕಿಗಳಿಗೆ ದಪ್ಪ ಪರದೆಗಳನ್ನು ಹಾಕಿದ್ದಾರೆ. ಇದರಿಂದ ಒಳಗಿನ ಬೆಳಕು ಆಕಾಶದ ವೀಕ್ಷಣೆಗೆ ಅಡ್ಡಿಯಾಗುವುದಿಲ್ಲ.

ಕರ್ನಾಟಕದಲ್ಲಿಯೂ ರಾತ್ರಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ರಾಜ್ಯದ ಕೆಲವು ತಾಣಗಳು ಬೆಳಕಿನ ಮಾಲಿನ್ಯದಿಂದ ದೂರವಿದ್ದು, ಆಕಾಶ ವೀಕ್ಷಣೆಗೆ ಅತ್ಯುತ್ತಮವಾಗಿವೆ. ಚಿಕ್ಕಮಗಳೂರು, ಕೊಡಗಿನ ಒಳಗಿನ ಭಾಗಗಳಲ್ಲಿರುವ ಕಾಫಿ ತೋಟಗಳ ನಡುವಿನ ಹೋಂಸ್ಟೇಗಳು ನಕ್ಷತ್ರ ವೀಕ್ಷಣೆಗೆ ಹೇಳಿಮಾಡಿಸಿದಂತಿವೆ. ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‌ಗಿರಿ ಸುತ್ತಮುತ್ತಲಿನ ಪ್ರದೇಶಗಳು ಮೋಡವಿಲ್ಲದ ದಿನಗಳಲ್ಲಿ ಆಕಾಶ ವೀಕ್ಷಣೆಗೆ ಉತ್ತಮ ಅವಕಾಶ ನೀಡುತ್ತವೆ. ಕುದುರೆಮುಖ ಮತ್ತು ಪಶ್ಚಿಮ ಘಟ್ಟಗಳ ಹಲವೆಡೆ ಬೆಳಕಿನ ಮಾಲಿನ್ಯ ಕನಿಷ್ಠ ಮಟ್ಟದಲ್ಲಿರುವುದರಿಂದ ಈ ಪ್ರದೇಶದ ಟ್ರೆಕ್ಕಿಂಗ್ ಪಾಯಿಂಟ್‌ಗಳು ಮತ್ತು ಎಕೋ-ರೆಸಾರ್ಟ್‌ಗಳಲ್ಲಿ ಆಕಾಶವು ಅತ್ಯಂತ ಸುಂದರವಾಗಿ ಕಾಣುತ್ತದೆ. ಸಕಲೇಶಪುರದ ಅನೇಕ ಹೋಂಸ್ಟೇಗಳು ಈಗ ಪ್ರವಾಸಿಗರಿಗೆ ಖಗೋಳ ವೀಕ್ಷಣೆಯ ಕಿಟ್‌ಗಳನ್ನು ಒದಗಿಸಲು ಮುಂದಾಗುತ್ತಿವೆ. ಕರ್ನಾಟಕದಲ್ಲಿ ನಕ್ಷತ್ರ ವೀಕ್ಷಣೆಗೆ ನವೆಂಬರ್‌ನಿಂದ ಫೆಬ್ರವರಿ ತಿಂಗಳುಗಳು ಅತ್ಯಂತ ಸೂಕ್ತ. ಕಾರಣ ಈ ಸಮಯದಲ್ಲಿ ಆಕಾಶವು ಮೋಡಗಳಿಲ್ಲದೇ ಶುಭ್ರವಾಗಿರುತ್ತದೆ.

ಪ್ರವಾಸೋದ್ಯಮದ ಬಗ್ಗೆ ನಮಗಿರುವ ಸ್ಥಾಪಿತ ಅಭಿಪ್ರಾಯವನ್ನು ಬದಲಿಸಿಕೊಳ್ಳಲು ಇದು ಸಕಾಲ. ಜಗತ್ತಿನಲ್ಲಿ ತಂತ್ರಜ್ಞಾನ ಕ್ಷೇತ್ರದ ನಂತರ ಅತಿ ಹೆಚ್ಚು ಬದಲಾವಣೆಗಳು, ಸ್ಥಿತ್ಯಂತರಗಳು, ಹೊಸತನಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಾಗುತ್ತಿವೆ. ‘ನೋಕ್ಟರಿಸಂ’ ಎನ್ನುವುದು ಮನುಷ್ಯ ಮತ್ತು ನಿಸರ್ಗದ ನಡುವಿನ ಕತ್ತಲೆಯ ಅನುಬಂಧ. ಇದು ಬದಲಾಗುತ್ತಿರುವ ಹವಾಮಾನಕ್ಕೆ ಮನುಷ್ಯ ಹೊಂದಿಕೊಳ್ಳುತ್ತಿರುವ ರೀತಿಯೂ ಹೌದು. ಇದು ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡುತ್ತಿದ್ದು, ಪ್ರಕೃತಿ ಮತ್ತು ನಗರ ಜೀವನವನ್ನು ನೋಡುವ ನಮ್ಮ ದೃಷ್ಟಿಕೋನವನ್ನೇ ಬದಲಿಸುತ್ತಿದೆ. ಇದು ನಮಗೆ ಹಗಲು ನೀಡದ ಇನ್ನೊಂದು ಲೋಕದ ಪರಿಚಯ ಮಾಡಿಕೊಡುತ್ತದೆ. ಸರಿಯಾದ ನಿಯಮಗಳು ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮದ ಮೂಲಕ ‘ನೋಕ್ಟರಿಸಂ’ ಅನ್ನು ಬೆಳೆಸಿದರೆ, ಇದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಿದೆ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?