• ಅಂಜಲಿ ರಾಮಣ್ಣ

ಕಲಿಯಬೇಕು ಎಂದುಕೊಳ್ಳುವ ಮನಸ್ಸಿಗೆ ಪ್ರತಿ ಹೆಜ್ಜೆಯೂ ಗುರುವೇ. ಆ ನಿಟ್ಟಿನಲ್ಲಿ ಪ್ರವಾಸ ಎನ್ನುವ ಗುರುವಿನ ಆಳ ಅಗಲ ಅಪರಿಮಿತವಾದದ್ದು. ಎಲ್ಲಿ ಹೋದರೂ ಕಲಿಕೆಯನ್ನು ಹೆಕ್ಕಿತರುವ ಅವಕಾಶವಿದ್ದರೂ ಇಸ್ರೇಲ್ ಮತ್ತು ಜಪಾನ್ ದೇಶಗಳು ವಿಶ್ವಕ್ಕೆ ನೀಡುತ್ತಿರುವ ಪಾಠಗಳು ಜಗತ್ತಿನೆಲ್ಲರಿಗೂ ಎಂದಿಗೂ ಪ್ರಸ್ತುತ. ನಿಘಂಟಿನಲ್ಲಿ ನರಮೇಧ ಎನ್ನುವ ಪದವನ್ನು ನೋಡಿದರೂ ಥಟ್ ಅಂತ ಮನಸ್ಸಿಗೆ ಬರುವ ವ್ಯಕ್ತಿ ಹಿಟ್ಲರ್. ಅವನು ನಡೆಸಿದ ಅಕ್ಷಮ್ಯ ಅನಾಹುತವನ್ನು ಭೂಮಂಡಲ ಮರೆಯಲು ಸಾಧ್ಯವೇ ಇಲ್ಲ.

ಪ್ರಪಂಚದ ಯಾವುದೇ ಜನಾಂಗ ಅಥವಾ ಗುಂಪಿಗೆ ಸೇರಿದ ಇತಿಹಾಸ ಓದುತ್ತಿರುವ ಶಾಲಾ ಬಾಲಕನು ಕೂಡ ಹಿಟ್ಲರನು ಯಹೂದಿಯರ ಮೇಲೆ ದೌರ್ಜನ್ಯ ಮಾಡಿದನು ಎನ್ನುತ್ತಾನೆ. ಆದರೆ ಅತ್ಯಾಶ್ಚರ್ಯದ ವಿಷಯ ಎಂದರೆ ಯಾವ ಯಹೂದಿಯೂ ಎಲ್ಲಿಯೂ ಎಂದೂ ತಮ್ಮ ಮೇಲೆ ದೌರ್ಜನ್ಯ ಮಾಡಿದರು ಎನ್ನುವುದಿಲ್ಲ, ಬದಲಿಗೆ ನಾವು ದೌರ್ಜನ್ಯಕ್ಕೆ ಒಳಗಾದೆವು ಎನ್ನುತ್ತಾರೆ. ಶಾಲೆಗಳಲ್ಲಿ ವಿದ್ಯಾರ್ಥಿಯರಿಗೂ ಅದನ್ನೇ ಕಲಿಸುತ್ತಾರೆ. ಅಬ್ಬಾ, ಎಷ್ಟೊದು ವ್ಯತ್ಯಾಸವಿದೆ ಈ ಎರಡೂ ಆಲೋಚನೆಗಳಲ್ಲಿ.

Israel Tourism

ಜೆರುಸಲೆಮ್‌ನಲ್ಲಿರುವ ‘ಗೋಳುಗೋಡೆ’ಯನ್ನು ನಾನು ಭೇಟಿ ಮಾಡಿದ ದಿನ Raizi ಎನ್ನುವ ಮಹಿಳೆ ಅಲ್ಲಿ ನ್ಯಾಷನಲ್ ಸರ್ವಿಸ್ ಮಾಡುತ್ತಿದ್ದರು. ಈ ಗೋಳುಗೋಡೆ ಅಥವಾ ಅಳುವ ಗೋಡೆಗೆ 2044 ವರ್ಷಗಳ ಇತಿಹಾಸವಿದೆ. ಧರ್ಮಧರ್ಮಗಳ ನಡುವಿನ ಹೋರಾಟದಲ್ಲಿ ತಮಗೆ ಆದ ಅನ್ಯಾಯದಲ್ಲಿ ಮಡಿದ ಯಹೂದಿಯರಿಗಾಗಿ ಕಣ್ಣೀರು ಮಿಡಿಯುತ್ತಾ ಶಾಂತಿ ಪ್ರಾರ್ಥನೆ ಮಾಡುವ ಸ್ಥಳವದು. ಅಲ್ಲಿನ ವಾತಾವರಣದಲ್ಲಿಯೇ ನೋವು ನೀರವವಾಗಿ ಹರಡಿದೆ. ಕಪ್ಪು ಮೌನ ಬಣ್ಣವಿಹೀನ ಕಣ್ಣೀರಿನಲ್ಲಿ ಬಿಳಿ ಶಾಂತಿಯನ್ನು ಅರಸುತ್ತಿರುವ ಮನಕಲಕುವ ಚಿತ್ರಣ ಅಲ್ಲಿಯದು. ಆದರೆ ಈಗ ಆ ಗೋಡೆಗೊಂದು ಹೊಸ ವ್ಯಕ್ತಿತ್ವ ಕಟ್ಟಿಕೊಡಬೇಕು ಎಂದು ಅಲ್ಲಿನ ಜನರನ್ನು ಮನವೊಲಿಸುತ್ತಿದ್ದಾರೆ Raizi ಮತ್ತವರ ತಂಡ. ಆಕೆಯ ಪ್ರಕಾರ ಅಳುತ್ತಾ ಇರುವವರೆಗೂ ನಾವು ಎಚ್ಚೆತ್ತುಕೊಳ್ಳುವ ಅವಕಾಶಗಳು ಕಡಿಮೆಯಾಗಿ ಬಿಡುತ್ತವೆ. ನಾವೀಗ ಜಾಗರೂಕರಾಗಿದ್ದೇವೆ ಎಂದು ತಿಳಿಸುವ ಸಂತಸದ ಗೋಡೆಯಾಗಬೇಕು ಇದು. ಹಾಗಾಗಿ ಇದಕ್ಕೆ Wailing wall ಎನ್ನುವ ಬದಲು Happy wall ಎನ್ನುವ ಹೆಸರು ಭವಿಷ್ಯದಲ್ಲಿ ದಾಖಲಾಗಬೇಕು ಎನ್ನುತ್ತಿದ್ದರು Raizi.

ಹೈಫಾ ಪಟ್ಟಣದ Holocaust museumನಲ್ಲಿ ಯಹೂದಿಯರ ಮಾರಣಹೋಮದಲ್ಲಿ ಬದುಕುಳಿದ ವೃದ್ಧರು ಒಟ್ಟಾಗಿ ವಾಸ ಮಾಡುತ್ತಿದ್ದಾರೆ. ಅಲ್ಲಿ ಸಿಕ್ಕಿದ Rita Camalina Brown ತನಗೆ 12 ವರ್ಷ ವಯಸ್ಸಿದ್ದಾಗ ಒಣಹುಲ್ಲಿನ ರಾಶಿಯಲ್ಲಿ ತನ್ನನ್ನು ಅಡಗಿಸಿಟ್ಟುಕೊಂಡು ರಕ್ಷಿಸಿದ ತಂದೆಯನ್ನು ನೆನೆಯುತ್ತಾ ತಮ್ಮ ಅನುಭವವನ್ನು ಬಿಚ್ಚಿಡುತ್ತಲೇ ಹೇಳಿದ್ದು The moment you start blaming others you have lost your power ಎಂದು. ಇದು ಇಸ್ರೇಲಿಗರ ಬಲು ಹಳೆಯ ಮತ್ತು ನೆಚ್ಚಿನ ಗಾದೆ ಮಾತಂತೆ. ಆಕೆ ಸ್ವಲ್ಪ ಹಿಂದಿನ ದಿನದವರೆಗೂ ಇಸ್ರೇಲಿನ ವಿಶ್ವವಿದ್ಯಾಲಯಗಳಲ್ಲಿ Power of Diversity and Resilience of Jews ಎನ್ನುವ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಿದ್ದರಂತೆ.

Israel war

Atlit Detention ಕ್ಯಾಂಪ್‌ನಲ್ಲಿ ಸಿಕ್ಕಿದ್ದ ಎಮಿಲಿ ಎನ್ನುವ ಯಹೂದಿ ಯುವತಿ ನ್ಯೂಯಾರ್ಕ್‌ನಲ್ಲಿ ಪದವಿ ಓದುತ್ತಿದ್ದಳು. ಇಲ್ಲಿ ಒಂದು ವರ್ಷದ ಕಾಲ ಸ್ವಯಂಸೇವೆ ಸಲ್ಲಿಸಲು ಬಂದಿದ್ದಳು. ಆ ಜಾಗವನ್ನು ಇಚಿಂಚೂ ಪರಿಚಯಿಸುತ್ತಿದ್ದಾಗ ಒಮ್ಮೆಯೂ ನಮ್ಮನ್ನು ವಿನಾಶ ಮಾಡಲು ಯತ್ನಿಸಿದರು, ಅದಕ್ಕಾಗಿ ಹಿಂಸಿಸಿದರು ಎನ್ನಲಿಲ್ಲ. ಯಹೂದಿಯರು ಹಿಂಸೆಗೆ ಒಳಗಾದೆವು ಎನ್ನುತ್ತಿದ್ದಳು. ನಡೆದು ಹೋಗಿರುವ ವಿನಾಶಕ್ಕೆ ಕಾರಣರಾದವರನ್ನು ದೂಷಿಸುತ್ತಾ ಕೂರುವ ಬದಲು ಅದರ ನೆನಪಿನಲ್ಲಿ ಭವಿಷ್ಯಕ್ಕೆ ಬೇಕಾಗಿರುವ ಭರವಸೆ ಮತ್ತು ಶ್ರೀಮಂತ ಪರಂಪರೆಯ ನಡುವೆ ಸಂಪರ್ಕ ಏರ್ಪಡಿಸುವುದನ್ನು ಅನಾಯಾಸವಾಗಿ ಕಲಿಸುತ್ತಿದ್ದಾರೆ ಇಸ್ರೇಲಿಗರು.

ಮತ್ತೊಂದು ಪರಿಪಾಠವನ್ನು ಸದ್ದಿಲ್ಲದೆ ಗರ್ವ ತೋರದೆ ಕಲಿಸುತ್ತಿದ್ದಾರೆ ಇತ್ತ ಕಡೆಯ ಜಪಾನೀಯರು. ಆರು ಆಗಸ್ಟ್ 1945 ರಂದು ಹಿರೋಶಿಮಾ ನಗರದ ಮೇಲೆ ಅಟಾಮಿಕ್ ಬಾಂಬ್ ದಾಳಿ ಆದ ಜಾಗದಲ್ಲಿ ಹಿರೋಶಿಮಾ ಶಾಂತಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಅಲ್ಲಿದೆ Hiroshima National peace memorial Hall for the atomic bomb victims. ನೆಲಮಾಳಿಗೆಯಲ್ಲಿ ಸುರುಳಿ ಆಕಾರದಲ್ಲಿ ಇರುವ ಅಪರೂಪದ ಮ್ಯೂಸಿಯಂ ಅದು. ಅಲ್ಲಿ ಕೇವಲ ವಸ್ತುಗಳ ಸಂಗ್ರಹಣೆ ಮಾತ್ರವಲ್ಲ ವ್ಯಕ್ತಿಗಳ ನೆನಪುಗಳನ್ನು, ನೋವುಗಳನ್ನು ಮತ್ತು ಅವುಗಳು ತಂದ ಬದಲಾವಣೆ, ಬೆಳವಣಿಗೆಗಳನ್ನು ಪದಾರ್ಥಗಳ ರೂಪದಲ್ಲಿ, ಧ್ವನಿ ತರಂಗಗಳಲ್ಲಿ, ಪ್ರಾತ್ಯಕ್ಷಿಕೆ ವಿಡಿಯೋಗಳಲ್ಲಿ ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಭವಿಷ್ಯದ ಪೀಳಿಗೆಯು ಪರಮಾಣು ಬಾಂಬಿನ ಕರಾಳತೆಯನ್ನು ಅರಿಯಲು, ಆ ವಿಚ್ಛಿದ್ರತೆಯನ್ನು ಅನುಭವಿಸಿ ನಂತರದಲ್ಲಿ ಸಾಮಾನ್ಯ ಬದುಕಿಗೆ ಸಮಾಜವನ್ನು ತರಲು ಅಮೂಲ್ಯವಾದ ತ್ಯಾಗವನ್ನು ಮಾಡಿದ ಜನರನ್ನು ಸ್ಮರಿಸಲು ನಿಂತಿರುವ ಈ ಸಂಗ್ರಹಾಲಯ ನಿಜಕ್ಕೂ ವಿಭಿನ್ನವಾಗಿದೆ.

Hiroshima peace memorial

ಆ ಸುರುಳಿಯ ಆಕಾರದ ಕಟ್ಟಡದ ಒಂದು ಸುರುಳಿಯ ಅಂಚಿನಲ್ಲಿ ಇದ್ದ ಫಲಕದಲ್ಲಿ ಹೇಳಿದ್ದ ಮಾತುಗಳನ್ನು ಬಹುಶಃ ಜಗತ್ತಿನ ಯಾವುದೇ ಸರ್ಕಾರ, ರಾಜಕಾರಣಿ, ನಾಯಕ, ಆಡಳಿತ ವ್ಯವಸ್ಥೆ ಹೇಳಿರಲು ಸಾಧ್ಯವಿಲ್ಲ. ಅದರಲ್ಲಿ ಹೀಗೆ ಬರೆಯಲಾಗಿದೆ “ಈ ಮೂಲಕ ಪರಮಾಣು ಬಾಂಬ್ ದಾಳಿಯಲ್ಲಿ ಮಡಿದವರಿಗೆ ಸಂತಾಪ ಸೂಚಿಸುತ್ತೇವೆ. ಇದೇ ಸಮಯದಲ್ಲಿ ನಮ್ಮ ತಪ್ಪು ರಾಷ್ಟ್ರೀಯ ನೀತಿಗೆ ಬಲಿಯಾದ ಅನೇಕ ಜೀವಗಳನ್ನು ನಾವು ಬಹಳ ದುಃಖದಿಂದ ನೆನಪಿಸಿಕೊಳ್ಳುತ್ತೇವೆ ಮತ್ತು ನಮ್ಮ ತಪ್ಪಿಗೆ ಕ್ಷಮೆ ಯಾಚಿಸುತ್ತೇವೆ. ಇಂಥ ದುರಂತಗಳು ಎಂದಿಗೂ ಪುನರಾವರ್ತನೆಯಾಗದಂತೆ ಖಚಿತಪಡಿಸಿಕೊಳ್ಳಲು ಜಪಾನ್ ಮತ್ತು ಪ್ರಪಂಚಕ್ಕೆ ಈ ಘಟನೆಯ ಸತ್ಯವನ್ನು ತಿಳಿಸಲು ಭವಿಷ್ಯದ ಪೀಳಿಗೆಗೆ ರವಾನಿಸಲು ಮತ್ತು ಶೀಘ್ರವಾಗಿ ಪರಮಾಣು ಅಸ್ತ್ರಗಳಿಂದ ಮುಕ್ತವಾದ ಶಾಂತಿಯುತ ಜಗತ್ತನ್ನು ನಿರ್ಮಿಸಲು ನಾವು ಪ್ರಮಾಣ ಮಾಡುತ್ತೇವೆ”

ಅವನು ಮಡ್ಡಿ ತಿಂದ ಅದಕ್ಕೇ ನಾವು ಮಣ್ಣು ತಿನ್ನುತ್ತಿದ್ದೇವೆ ಎನ್ನುವ ಇಂದಿನ ರಾಜಕಾರಣದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡು ದೇಶದ ಅಭಿವೃದ್ಧಿಗೆ ಮುಖಮಾಡಿ ನಿಲ್ಲುವ ಜಪಾನ್ ಜನರು ಇಷ್ಟಪಟ್ಟು ಪಾಲಿಸುವ ಮಾತು An apology is the shape of a person’s heart ಎನ್ನುವುದು.

ಹಿಂದಿನವರು ಏನು ಮಾಡಿದರು ಎನ್ನುವುದಕ್ಕಿಂತ ನಾನು ಮುಂದೆ ಏನು ಮಾಡಬೇಕು ಎನ್ನುವುದು ನಿಚ್ಚಳವಾಗಿರುವುದೇ ರಾಷ್ಟ್ರಪ್ರೇಮ. ಇದನ್ನು ಭಾರತ ದೇಶದ ಸಾಮಾನ್ಯರು, ಆಳುವವರು ಅರ್ಥ ಮಾಡಿಕೊಂಡರಷ್ಟೇ ಸಾಲದೇ ಎನ್ನುವ ಪ್ರಶ್ನೆ ಕಾಡುತ್ತದೆ ಜಪಾನ್ ಪ್ರವಾಸದಲ್ಲಿ.

Don’t lose hopes ಎನ್ನುವ ಇಸ್ರೇಲ್, There’s always a hope ಎನ್ನುವ ಜಪಾನ್ ಈ ಎರಡೂ ದೇಶಗಳನ್ನು ನೋಡದಿದ್ದರೆ ಕಲಿಯದಿದ್ದರೆ ಜಗತ್ಪರ್ಯಟನೆ ಅಪೂರ್ಣ.