ಕಣಿವೆ ರಾಜರ ಸಮಾಧಿಯ ಕಲ್ಲುಗಳು ಹೇಳುವ ಇತಿಹಾಸದ ಕಥೆಗಳು
ಇದೇ ವ್ಯಾಲಿಯನ್ನು ಸಮಾಧಿಯ ಸ್ಥಳವನ್ನಾಗಿ ಏಕೆ ಆಯ್ಕೆ ಮಾಡಿಕೊಂಡರು ಎನ್ನುವುದಕ್ಕೆ ನಾವು ಗೂಗಲ್ ಮಾಡುವ ಅವಶ್ಯಕತೆ ಬರುವುದೇ ಇಲ್ಲ. ಈ ಪ್ರದೇಶದ ಸುತ್ತಲೂ ಪರ್ವತಗಳಿವೆ. ಸಹಜವಾಗಿಯೇ ಇದು ಸಮಾಧಿ ಮಾಡಲು ಹೆಚ್ಚು ಸುರಕ್ಷಿತ ಜಾಗ. ಅಂದರೆ ಈ ಬೆಟ್ಟಗಳನ್ನು ಕೊರೆದು ಅಲ್ಲಿ ಸಮಾಧಿ ನಿರ್ಮಿಸುವುದು ಒಂದರ್ಥದಲ್ಲಿ ಸುಲಭವಾಗಿತ್ತು. ಬೆಟ್ಟವನ್ನು ಕೊರೆದರೆ ಸಾಕಿತ್ತು, ಗೋಡೆಗಳನ್ನು ಕಟ್ಟುವ ಜಂಜಾಟವಿರುವುದಿಲ್ಲ.
- ರಂಗಸ್ವಾಮಿ ಮೂಕನಹಳ್ಳಿ
ನಾವಿದ್ದ ಮನೆಯ ಮಾಲೀಕ ಸ್ನೇಹಜೀವಿಯಾಗಿದ್ದರು. ಪರವಾಗಿಲ್ಲ ಎನ್ನುವ ಮಟ್ಟಿಗೆ ಇಂಗ್ಲಿಷ್ ಭಾಷೆಯ ಜ್ಞಾನವೂ ಇತ್ತು. ಆತ ನಮ್ಮನ್ನು ಅಗತ್ಯಕ್ಕಿಂತ ಹೆಚ್ಚು ಚೆನ್ನಾಗಿ ನೋಡಿಕೊಂಡರು. ಏರ್ ಬಿ ಎನ್ ಬಿ ಮೂಲಕ ನಾವದನ್ನು ಕಾಯ್ದಿರಿಸಿದ್ದೆವು. ಹೋದ ತಕ್ಷಣ ಕುಶಾರಿಯನ್ನು ತಿನ್ನಲು ನೀಡಿದರು. ಅದಕ್ಕೆ ಅವರು ಹಣವನ್ನು ತೆಗೆದುಕೊಳ್ಳಲಿಲ್ಲ. ತಯಾರಿಸುವಾಗ ಮಾಂಸಕ್ಕೆ ಬಳಸಿದ ಪರಿಕರಗಳನ್ನು ಬಳಸಿರಬಹುದು ಎನ್ನುವ ಕಾರಣಕ್ಕೆ ನಾಗೇಂದ್ರ ಅವರು ತಿನ್ನಲಿಲ್ಲ. ನಾನು ಸ್ವಾಹಾ ಮಾಡಿದೆ. ಆತನ ಸ್ನೇಹಪರತೆ ಕಂಡು ಹಾಟ್ ಏರ್ ಬಲೂನ್ ಪ್ರದಕ್ಷಿಣೆ ಹೋಗಬೇಕು ಎಂದೆವು. ಆತ ಅದಕ್ಕೇನಂತೆ ನಾನು ಲೋಕಲ್ ಟ್ರಾವೆಲ್ ಏಜೆಂಟ್ ಬಳಿ ಮಾತನಾಡಿ ನಿಮಗೆ ಒಳ್ಳೆಯ ಡೀಲ್ ಕೊಡಿಸುತ್ತೇನೆ ಎಂದರು. 150 ಅಮೆರಿಕನ್ ಡಾಲರ್ ಇಬ್ಬರಿಗೂ ಸೇರಿ ಎಂದು ತೀರ್ಮಾನವಾಯ್ತು. ಬೆಳಗ್ಗೆ ಸೂರ್ಯ ಹುಟ್ಟುವುದಕ್ಕೆ ಮುಂಚೆ ಸ್ಥಳದಲ್ಲಿರಬೇಕು ಎಂದರು. ಬೆಳಗಿನ ಜಾವ ನಾಲ್ಕೂವರೆಗೆ ಮನೆ ಮುಂದೆ ಕಾರು ಬರುತ್ತೆ ಸಿದ್ಧವಾಗಿರಿ, ನಿಮ್ಮ ಪಿಕ್ ಅಪ್ ಮತ್ತು ಡ್ರಾಪ್ ನಾವೇ ಮಾಡುತ್ತೇವೆ ಎಂದಿದ್ದರು. ರಾತ್ರಿ ನಾವು ಮಲಗಿದಾಗ ಹನ್ನೊಂದು ಗಂಟೆಯಾಗಿತ್ತು.
ಇದನ್ನೂ ಓದಿ: ಈಜಿಪ್ಟ್‌ನಲ್ಲಿ ರಾಮಮಂದಿರವಿಲ್ಲ ರಾಮ್ ಸೆಸ್ ಮಂದಿರವಿದೆ!
ಬೆಳಗ್ಗೆ ಏಳುವುದು ನನಗೆ ಹೊಸದೇನೂ ಅಲ್ಲ. ನಾಲ್ಕೂವರೆ ಎನ್ನುವುದು ಬೇಗ ಎಂದು ನನಗೇನೂ ಅನಿಸಲಿಲ್ಲ. ಆದರೆ ಸಹೋದರ ನಾಗೇಂದ್ರ ಬೆಳಗ್ಗೆ ಏಳುತ್ತಾರೆಯೇ? ಎನ್ನುವ ನನ್ನ ಗುಮಾನಿಯನ್ನು ಅವರು ಸುಳ್ಳು ಮಾಡಿದರು. ನಮ್ಮ ಪ್ರವಾಸದ ಅಷ್ಟೂ ದಿನದಲ್ಲಿ ಒಂದು ದಿನವೂ ನನಗಾಗಿ ಅವರು, ಅವರಿಗಾಗಿ ನಾನು ಕಾಯಲಿಲ್ಲ. ಪ್ರತಿ ದಿನ ರಾತ್ರಿ ನಾಳಿನ ದಿನದ ಶೆಡ್ಯೂಲ್ ಮಾತಾಡಿಕೊಂಡು ಬಿಡುತ್ತಿದ್ದೆವು. ಅದನ್ನು ಚಾಚೂ ತಪ್ಪದೆ ಪಾಲಿಸಿದೆವು. ನಮಗಿದ್ದ ದಿನಗಳಲ್ಲಿ ಎಲ್ಲವನ್ನೂ ನೋಡಲು ಸಾಧ್ಯವಾದದ್ದು ನಾವು ಸಮಯವನ್ನು ಸರಿಯಾಗಿ ದುಡಿಸಿಕೊಂಡ ಕಾರಣದಿಂದ ಮಾತ್ರ!

ಹಾಟ್ ಏರ್ ಬಲೂನ್ ನೋಡಲು ಉತ್ಸುಕರಾಗಿದ್ದೆವು. ಇದು ನನಗೂ ಮತ್ತು ನಾಗೇಂದ್ರ ಇಬ್ಬರಿಗೂ ಹೊಸ ಅನುಭವ. ಬೆಳಗ್ಗೆ ಹೇಳಿದ ಸಮಯಕ್ಕೆ ಪಿಕ್ ಮಾಡಿದರು. ನಮ್ಮ ನಂತರ ಫ್ರೆಂಚ್ ದಂಪತಿಗಳನ್ನು ಕೂಡ ಹತ್ತಿಸಿಕೊಂಡು ನಾವು ಸಮಯಕ್ಕೆ ಮುಂಚಿತವಾಗಿ ನಿಗದಿತ ಸ್ಥಳದಲ್ಲಿದ್ದೆವು. ಹಾಟ್ ಏರ್ ಬಲೂನ್ ಆಕಾಶಕ್ಕೆ ಜಿಗಿಯಲು ಏರ್ ಪೋರ್ಟ್ ಅಥಾರಿಟಿ ಅವರಿಂದ ಅನುಮತಿ ಬೇಕು. ಹೀಗಾಗಿ ನಮ್ಮ ಐಡೆಂಟಿಟಿ ಕಾರ್ಡ್ ಕಾಪಿ ನೀಡುವುದು ಕಡ್ಡಾಯ. ವಯಸ್ಸು ಮತ್ತು ತೂಕವನ್ನು ಸಪರೇಟ್ ಆಗಿ ಬರೆದುಕೊಳ್ಳುತ್ತಾರೆ. ಇಷ್ಟು ತೂಕ ಮಾತ್ರ ಒಂದು ಬಲೂನಿನಲ್ಲಿ ಹಾಕಬಹುದು ಎನ್ನುವ ಲೆಕ್ಕಾಚಾರವಿರುತ್ತದೆ. ಏರ್ ಪೋರ್ಟ್ ನಿಂದ ಅನುಮತಿ ಬರುವವರೆಗೂ ಸಪ್ಪಗೆ, ಶಾಂತವಾಗಿದ್ದ ವಾತಾವರಣ ಅಲ್ಲಿಂದ ಒಪ್ಪಿಗೆ ಬಂದ ತಕ್ಷಣ ವಿದ್ಯುತ್ ಪ್ರವಹಿಸಿದಂತೆ ಬದಲಾಗಿ ಬಿಡುತ್ತದೆ. ಹತ್ತು ನಿಮಿಷದಲ್ಲಿ ನಾವು ನಭದಲ್ಲಿದ್ದೆವು! ಭೂಮಿಯಿಂದ ಎರಡು ಸಾವಿರ ಅಡಿ ಎತ್ತರದಿಂದ ದಾರಿಯಲ್ಲಿ ಹೋಗುವ ಕಾರು, ಬಸ್ಸು, ಜನ ಇರುವೆಗಳಂತೆ ಕಂಡರು. ನಾವು ನಭಕ್ಕೆ ಚಿಮ್ಮಿದ ಹಲವು ನಿಮಿಷಗಳಲ್ಲಿ ಸೂರ್ಯ ಮೋಡದ ಮರೆಯಿಂದ ಬಂದು ದರ್ಶನ ನೀಡಿದ. ಓಹ್ ಅದೊಂದು ಅಮೋಘ ದೃಶ್ಯ! ನೈಲ್ ನದಿ, ಹಸಿರು ಹೊದ್ದು ಮಲಗಿದ ಭೂಮಿ, ಆಕಾಶದಲ್ಲಿ ಹೊಂಗಿರಣವನ್ನು ಸೂಸುವ ಸೂರ್ಯ, ವಾಟ್ ಎ ಕಾಂಬಿನೇಷನ್! ನಾನು ಮತ್ತ ನಾಗೇಂದ್ರ ಮಕ್ಕಳಾಗಿದ್ದೆವು. ಅಲ್ಲಿನ ವಾತಾವರಣದ ಭರಪೂರ ಮಜವನ್ನು ಅನುಭವಿಸಿದೆವು. ಪ್ರಮಾಣ ಮಾಡಿ ಹೇಳುತ್ತೇನೆ, ಕೆಲವೊಂದನ್ನು ಬರೆಯಲು ಪದಗಳು ಸಿಗುವುದಿಲ್ಲ. ಎಷ್ಟೇ ಬರೆದರೂ ಅದನ್ನು ಅನುಭವಿಸಿಯೇ ತೀರಬೇಕು. ನಮ್ಮ ಬಲೂನ್ ಜತೆಗೆ ಆಕಾಶಕ್ಕೆ ಚಿಮ್ಮಿದ ಬಲೂನುಗಳ ಸಂಖ್ಯೆ ಐವತ್ತು! ಅವೆಲ್ಲವೂ ಒಂದೊಂದು ನಕ್ಷತ್ರದಂತೆ ಮತ್ತು ನಾವು ಸೌರವೂಹ್ಯದಲ್ಲಿರುವಂತೆ ನನಗೆ ಭಾಸವಾಯ್ತು. ಮತ್ತದೇ ಹೇಳುವೆ ಕೆಲವೊಂದು ಜೀವನದಲ್ಲಿ ಅನುಭವಿಸಿದರೆ ಮಾತ್ರ ಅದರ ಪೂರ್ಣ ಹೂರಣ ಸಿಗುತ್ತದೆ. ನಮಗೆ ಸಿಕ್ಕ ಅನುಭವದ ಮುಂದೆ ನೂರೈವತ್ತು ಅಮೆರಿಕನ್ ಡಾಲರ್ ತೀರಾ ಸಣ್ಣ ಮೊತ್ತ ಅನಿಸಿತು. ಒಂದೂವರೆ ತಾಸು ನಮ್ಮನ್ನು ಸುತ್ತಾಡಿಸಿದರು. ಇಳಿಯಲು ಮನಸ್ಸಿರಲಿಲ್ಲ. ಆದರೂ ಇಳಿಯಲೇಬೇಕಲ್ಲ. ಇನ್ನಷ್ಟು ಹೊತ್ತು ಟೈಮ್ ಫ್ರೀಜ್ ಆಗಿದಿದ್ದರೆ ಚೆಂದವಿತ್ತು ಎಂದು ಮನಸ್ಸು ಹೇಳಿತು. ಅವೆಲ್ಲವೂ ಸಾಧ್ಯವಿಲ್ಲದ ಮಾತು. ಹೀಗಾಗಿ ಇಳಿದೆವು. ನಮ್ಮ ಕ್ಯಾಪ್ಟನ್ ಆಲಿ ಎನ್ನುವ ವ್ಯಕ್ತಿಯ ಹಾಟ್ ಏರ್ ಬಲೂನ್ ಹತ್ತಿದ್ದೆವು. ಎರಡು ಸಾವಿರ ಅಡಿಯಲ್ಲಿ ಪ್ರಯಾಣ ಮಾಡಿದ್ದೆವು ಎಂದು ಹೇಳುವ ಒಂದು ಸರ್ಟಿಫಿಕೇಟ್ ಕೂಡ ಕೊಟ್ಟರು. ನೀವು ಈಜಿಪ್ಟ್ ಅಥವಾ ಟರ್ಕಿಗೆ ಹೋಗುವವರಿದ್ದರೆ ಹಾಟ್ ಏರ್ ಬಲೂನ್ ಪ್ರವಾಸ ತಪ್ಪಿಸಬೇಡಿ. ಕೆಲವೊಮ್ಮೆ ಅಲ್ಲಿನ ದರ ಹೆಚ್ಚು ಅನಿಸುತ್ತದೆ. ಆದರೆ ಅದು ಕೊಡುವ ಅನುಭವದ ಮುಂದೆ ನಾವು ಕೊಡುವ ಹಣ ಏನೇನೂ ಅಲ್ಲ.
ಈಜಿಪ್ಟ್‌ನ ಲಕ್ಸರ್ ನಗರದ ಪಶ್ಚಿಮ ತೀರದಲ್ಲಿ ಇರುವ ವ್ಯಾಲಿ ಆಫ್ ದ ಕಿಂಗ್ಸ್ (Valley of the Kings) ಪ್ರಾಚೀನ ಈಜಿಪ್ಟ್‌ನ ಅತ್ಯಂತ ರಹಸ್ಯಮಯ ಮತ್ತು ಮಹತ್ವದ ಐತಿಹಾಸಿಕ ತಾಣಗಳಲ್ಲಿ ಒಂದು. ಇದು ಶಕ್ತಿಶಾಲಿ ಮತ್ತು ಪ್ರಸಿದ್ಧ ರಾಜಕುಮಾರರ ಸಮಾಧಿಗಳಿಗಾಗಿ ಬಳಸಲ್ಪಟ್ಟ ಸ್ಥಳ. ಪಿರಮಿಡ್‌ಗಳ ಬದಲು, ಗುಪ್ತ ಸಮಾಧಿಗಳನ್ನು ನಿರ್ಮಿಸುವ ಉದ್ದೇಶದಿಂದ ಈ ಕಣಿವೆಯನ್ನು ಆಯ್ಕೆ ಮಾಡಲಾಗಿತ್ತು ಎನ್ನುವುದು ಇತಿಹಾಸ ಹೇಳುವ ಕಥೆ.

ಇದೇ ವ್ಯಾಲಿಯನ್ನು ಸಮಾಧಿಯ ಸ್ಥಳವನ್ನಾಗಿ ಏಕೆ ಆಯ್ಕೆ ಮಾಡಿಕೊಂಡರು ಎನ್ನುವುದಕ್ಕೆ ನಾವು ಗೂಗಲ್ ಮಾಡುವ ಅವಶ್ಯಕತೆ ಬರುವುದೇ ಇಲ್ಲ. ಈ ಪ್ರದೇಶದ ಸುತ್ತಲೂ ಪರ್ವತಗಳಿವೆ. ಸಹಜವಾಗಿಯೇ ಇದು ಸಮಾಧಿ ಮಾಡಲು ಹೆಚ್ಚು ಸುರಕ್ಷಿತ ಜಾಗ. ಅಂದರೆ ಈ ಬೆಟ್ಟಗಳನ್ನು ಕೊರೆದು ಅಲ್ಲಿ ಸಮಾಧಿ ನಿರ್ಮಿಸುವುದು ಒಂದರ್ಥದಲ್ಲಿ ಸುಲಭವಾಗಿತ್ತು. ಬೆಟ್ಟವನ್ನು ಕೊರೆದರೆ ಸಾಕಿತ್ತು, ಗೋಡೆಗಳನ್ನು ಕಟ್ಟುವ ಜಂಜಾಟವಿರುವುದಿಲ್ಲ. ಜತೆಗೆ, ಇಲ್ಲಿ ಕಾಣುವ ಶಿಖರವು ಪಿರಮಿಡ್ ಆಕಾರವನ್ನು ಹೋಲುವುದರಿಂದ ಮತ್ತು ಈ ಪಿರಮಿಡ್ ಆಕಾರ ಪುರಾತನ ಈಜಿಪ್ಟಿನ ಸಂಕೇತವೆಂದು ಪರಿಗಣಿಸಿದ ಕಾರಣ ಈ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದರು. ಸಮಾಧಿಗಳನ್ನು ನೆಲದ ಒಳಗೆ ಆಳವಾಗಿ ತೋಡಿ ನಿರ್ಮಿಸಲಾಗಿದ್ದು, ಸಮಾಧಿ ದೋಚುವವರಿಂದ ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.
ಈ ಕಣಿವೆಯಲ್ಲಿ ಇದುವರೆಗೆ 60ಕ್ಕೂ ಹೆಚ್ಚು ಸಮಾಧಿಗಳು ಪತ್ತೆಯಾಗಿವೆ. ಪ್ರತಿಯೊಂದು ಸಮಾಧಿಯೂ ಉದ್ದವಾದ ದಾರಿಗಳು, ಕೊಠಡಿಗಳು ಮತ್ತು ಅದ್ಭುತ ಭಿತ್ತಿಚಿತ್ರಗಳಿಂದ ಕೂಡಿದೆ. ಈ ಚಿತ್ರಗಳು ಮತ್ತು ಹೈರೋಗ್ಲಿಫ್ ಬರಹಗಳು ಫರೋಗಳ ಮರಣಾನಂತರದ ಪ್ರಯಾಣ, ದೇವತೆಗಳ ಕಥೆಗಳು ಮತ್ತು ಆತ್ಮದ ಪುನರ್ಜನ್ಮದ ನಂಬಿಕೆಯನ್ನು ವಿವರಿಸುತ್ತವೆ. ಈಜಿಪ್ಟ್ ಜನರು ಮರಣವನ್ನು ಅಂತ್ಯವೆಂದು ಎಂದಿಗೂ ಅಂದುಕೊಂಡವರಲ್ಲ, ಸಾವು ಹೊಸ ಜೀವನದ ಆರಂಭವೆಂದು ನಂಬಿದ್ದರು ಎಂಬುದಕ್ಕೆ ಇವು ಇಂದಿಗೂ ಸಾಕ್ಷಿ ಹೇಳಲು ನಿಂತಿವೆ.
ವ್ಯಾಲಿ ಆಫ್ ದ ಕಿಂಗ್ಸ್‌ನಲ್ಲಿನ ಅತ್ಯಂತ ಪ್ರಸಿದ್ಧ ಸಮಾಧಿಯೆಂದರೆ ಟುಟಾಂಖಾಮನ್‌ನ ಸಮಾಧಿ. 1922ರಲ್ಲಿ ಪುರಾತತ್ವ ತಜ್ಞ ಹೋವರ್ಡ್ ಕಾರ್ಟರ್ ಅವರು ಇದನ್ನು ಪತ್ತೆಹಚ್ಚಿದರು. ಇದು ಇಲ್ಲಿಯವರೆಗೆ ಸಿಕ್ಕ ಸಮಾಧಿಗಳಲ್ಲಿ ಉತ್ತಮ ಸ್ಥಿತಿಯಲ್ಲಿ ದೊರೆತ ಅಪರೂಪದ ಸಮಾಧಿಯಾಗಿದ್ದು, ಅದರಲ್ಲಿ ದೊರೆತ ಚಿನ್ನದ ಮುಖವಾಡ ಮತ್ತು ಅಮೂಲ್ಯ ವಸ್ತುಗಳು ಜಗತ್ತಿನ ಗಮನ ಸೆಳೆದವು. ಈ ಆವಿಷ್ಕಾರವು ಪ್ರಾಚೀನ ಈಜಿಪ್ಟ್ ಸಂಸ್ಕೃತಿಯ ಮಹತ್ವವನ್ನು ಜಗತ್ತಿಗೆ ಪರಿಚಯಿಸಿತು ಎನ್ನಬಹುದು. ಇಲ್ಲಿಯವರೆಗೂ ಕೇವಲ ಅಂತೆಕಂತೆಯ ಕಥೆಯಾಗಿದ್ದ ಪಿರಮಿಡ್ಡಿನ ಸಂಪತ್ತು ನಿಜವೆನ್ನುವುದು ಜಗತ್ತು ನಂಬುವಂತೆ ಮಾಡಿತು.
ಈಜಿಪ್ಟ್‌ನ ಲಕ್ಸರ್ ನಗರದ ಪಶ್ಚಿಮ ತೀರದಲ್ಲಿರುವ ಇನ್ನೊಂದು ಪ್ರಸಿದ್ಧ ದೇವಾಲಯ ಟೆಂಪಲ್ ಆಫ್ ಹ್ಯಾಟ್ಶೆಪ್ಸುಟ್. ಇದನ್ನು ಡೆರ್ ಎಲ್-ಬಹರಿ ಎಂದು ಕೂಡ ಕರೆಯಲಾಗುತ್ತದೆ. ಈ ದೇವಾಲಯವು ಈಜಿಪ್ಟ್ ಇತಿಹಾಸದಲ್ಲಿನ ಅತ್ಯಂತ ಶಕ್ತಿಶಾಲಿ ಮಹಿಳಾ ಫರೋ ಆಗಿದ್ದ ರಾಣಿ ಹ್ಯಾಟ್ಶೆಪ್ಸುಟ್ನ ಸ್ಮರಣಾರ್ಥ ನಿರ್ಮಿಸಲಾಗಿದೆ. ಇದು ಮಹಿಳೆಯೊಬ್ಬಳು ಪುರುಷಪ್ರಧಾನ ಸಮಾಜದಲ್ಲಿ ಫರೋ ಆಗಿ ಅಧಿಕಾರ ನಡೆಸಿದ ಅಪೂರ್ವ ಉದಾಹರಣೆಯ ಸಂಕೇತದ ಜೊತೆಗೆ ಅಂದಿನ ಸಮಯದಲ್ಲಿ ಹೆಣ್ಣು-ಗಂಡು ಎನ್ನುವುದಕ್ಕಿಂತ ಬಲಿಷ್ಠರು, ಸಮರ್ಥರು ಆಡಳಿತ ನಡೆಸಲಿ ಎನ್ನುವ ಮನೋಭಾವ ಹೊಂದಿದ್ದರು ಅನಿಸುತ್ತದೆ.
ಹ್ಯಾಟ್ಶೆಪ್ಸುಟ್ ದೇವಾಲಯವನ್ನು ಕ್ರಿ.ಪೂ. 15ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಇದರ ವಿನ್ಯಾಸವನ್ನು ಆ ಕಾಲದ ಪ್ರಸಿದ್ಧ ವಾಸ್ತುಶಿಲ್ಪಿ ಸೆನೆನ್ಮುಟ್ ರೂಪಿಸಿದರು. ಈ ದೇವಾಲಯವು ಸುತ್ತಲಿನ ಪರ್ವತಶ್ರೇಣಿಗಳೊಂದಿಗೆ ಸಹಜವಾಗಿ ಬೆರೆತು ಹೋಗಿದೆ.

ಈಜಿಪ್ಟ್‌ನ ಲಕ್ಸರ್ ನಗರದ ಪಶ್ಚಿಮ ತೀರದಲ್ಲಿರುವ ಮೆಡಿನೆಟ್ ಹಾಬು ಎನ್ನುವ ಇನ್ನೊಂದು ದೇವಾಲಯವನ್ನು ಈಜಿಪ್ಟಿನ ಕೊನೆಯ ಶಕ್ತಿಶಾಲಿ ಫರೋ ರಾಂಸೆಸ್ III ಅವರು ಕ್ರಿ.ಪೂ. 12ನೇ ಶತಮಾನದಲ್ಲಿ ನಿರ್ಮಿಸಿದರು. ಮೆಡಿನೆಟ್ ಹಾಬು ದೇವಾಲಯವು ಮುಖ್ಯವಾಗಿ ದೇವರಾದ ಅಮುನ-ರಾ ಅವರಿಗೆ ಡೆಡಿಕೇಟ್ ಆಗಿದ್ದರೂ, ಇದು ರಾಂಸೆಸ್ III ಅವರ ಅಂತ್ಯ ಸಂಸ್ಕಾರ ಮಾಡಿದ ಜಾಗ ಕೂಡ ಆಗಿದೆ. ಈ ದೇವಾಲಯವು ಎತ್ತರದ ಗೋಡೆಗಳು ಮತ್ತು ಕೋಟೆಯಂತಿರುವ ವಿನ್ಯಾಸವನ್ನು ಹೊಂದಿದ್ದು, ಆ ಕಾಲದ ರಾಜಕೀಯ ಅಸ್ಥಿರತೆ ಮತ್ತು ಬಾಹ್ಯ ಆಕ್ರಮಣಗಳ ಭೀತಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಈ ದೇವಾಲಯದ ಗೋಡೆಗಳ ಮೇಲೆ ಕೆತ್ತಲಾದ ಚಿತ್ರಗಳು ಇಲ್ಲಿನ ಪ್ರಮುಖ ಆಕರ್ಷಣೆ. ವಿಶೇಷವಾಗಿ ವಿದೇಶಿ ಆಕ್ರಮಣಕಾರರ ವಿರುದ್ಧ ರಾಂಸೆಸ್ III ನಡೆಸಿದ ಯುದ್ಧದ ದೃಶ್ಯಗಳು ಅತ್ಯಂತ ಪ್ರಸಿದ್ಧ. ಈ ಶಿಲ್ಪಗಳಲ್ಲಿ ಯುದ್ಧದ ತಂತ್ರಗಳು, ನೌಕಾ ಸಮರ, ಸೈನಿಕರ ಚಲನವಲನ ಮತ್ತು ಶತ್ರುಗಳ ಸೋಲುಗಳನ್ನು ಜೀವಂತವಾಗಿ ಚಿತ್ರಿಸಲಾಗಿದೆ.
ಇದನ್ನೂ ಓದಿ: ಮರುಭೂಮಿಯ ಹೃದಯದಲ್ಲಿ ಮರೆಯಲಾಗದ ಪ್ರಯಾಣ!
ರಾಂಸೆಸ್ III ಅವರನ್ನು “ಕೊನೆಯ ಮಹಾನ್ ಫರೋ” ಎಂದು ಕರೆಯಲಾಗುತ್ತದೆ. ಅವರ ಆಡಳಿತಕಾಲದಲ್ಲಿ ಈಜಿಪ್ಟ್ ತನ್ನ ಶಕ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಆರಂಭವಾದ ಎಲ್ಲವೂ ಅಂತ್ಯವನ್ನು ಕಾಣಬೇಕು. ಅದು ಪ್ರಕೃತಿ ಧರ್ಮ. ಅಂದಿನ ದಿನದಲ್ಲಿ ನಡೆದ ಕಥೆಗಳನ್ನು ಅಲ್ಲಿನ ಕಲ್ಲುಗಳು ಹೇಳುವಂತೆ ಭಾಸವಾಯ್ತು. ಫೊಟೋ ಕ್ಲಿಕ್ಕಿಸಿ ಕೊಳ್ಳುವವರಿಗೆ ಹೇಳದ ಕಥೆಗಳನ್ನು ಶಾಂತವಾಗಿ, ಸಮಯವಿಟ್ಟು ನೋಡುವವರಿಗೆ ಅವು ಸಾವಧಾನವಾಗಿ ಹೇಳುತ್ತಿದ್ದವು.