ಕಾಗನೇರ್ ಬೊಂಬೆಯ ಸೃಷ್ಟಿಯ ಹಿಂದಿನ ರಹಸ್ಯ!
ಇಲ್ಲಿ ಬೇರೆಯವರ ಮಗುವನ್ನು ಮುಟ್ಟುವುದು, ಗಲ್ಲ ಹಿಂಡುವುದು, ಮುತ್ತು ಕೊಡುವುದು ನಿಷಿದ್ಧ. ಆದರೆ ರಸ್ತೆಯಲ್ಲಿ ಹೋಗುವಾಗ ಮಗುವಿನ ಹೆಸರೇನು? ಕೆ ತಿಯಂಪು ತಿಯನೆ? ಅಂದರೆ ಎಷ್ಟು ತಿಂಗಳು, ವರ್ಷ ಎನ್ನುವ ಅರ್ಥದಲ್ಲಿ ಕೇಳುತ್ತಾರೆ. ಮಗುವಿನ ಕಿವಿ ನೋಡಿ ಹೆಣ್ಣು ಅಥವಾ ಗಂಡು ಎನ್ನುವುದರ ನಿರ್ಧಾರ ಮಾಡಿಕೊಂಡು ' ಗಂಡು ಮಗುವಾಗಿದ್ದರೆ ' ಕೆ ವಾಪೋ ' (ಸುಂದರ ) ಎಂದೂ, ಹೆಣ್ಣು ಮಗುವಾಗಿದ್ದರೆ ' ಕೆ ವಾಪ ' (ಸುಂದರಿ ) ಎನ್ನುವ ಉದ್ಗಾರವನ್ನು ಹೊರಡಿಸುತ್ತಾರೆ.
- ರಂಗಸ್ವಾಮಿ ಮೂಕನಹಳ್ಳಿ
ಬಾರ್ಸಿಲೋನಾ ಒಂದೇ ದಿನದಲ್ಲಿ ತನ್ನ ಎಲ್ಲಾ ವಿಷಯಗಳನ್ನು ಬಿಟ್ಟು ಕೊಡುವುದಿಲ್ಲ. ಎಲ್ಲಾ ದೇಶಗಳೂ, ನಗರಗಳೂ ಹಾಗೆ ಅಲ್ಲವೇ? ಅಲ್ಲಿ ನೆಲೆ ನಿಲ್ಲಬೇಕು. ಅಲ್ಲಿನ ಸ್ಥಳೀಯರೊಂದಿಗೆ ಬೆರೆಯಬೇಕು. ಕೇವಲ ನಮ್ಮ ಕಣ್ಣಿಗೆ ಕಂಡದ್ದು ಸತ್ಯ ಎನ್ನುವ ಮನೋಭಾವದಿಂದ ಹೊರಬರಬೇಕು. ಎಲ್ಲಕ್ಕೂ ಇದೇನು? ಹೀಗೇಕೆ? ಎನ್ನುವ ಪ್ರಶ್ನೆಗಳನ್ನು ಮಾಡಬೇಕು. ತಕ್ಷಣ ’ನಮ್ಮಲ್ಲಿ ಹಾಗೆ ಇಲ್ಲೇಕೆ ಹೀಗೆ’ ಎನ್ನುವುದು ಅಥವಾ ನಮ್ಮ ದೇಶದ ಸಂಪ್ರದಾಯ ಮೇಲು ಎನ್ನುವುದು ಅಥವಾ ಹೋಲಿಕೆ ಮಾಡುವುದು ಬಿಟ್ಟು ಮುಕ್ತ ಮನಸಿನಿಂದ ಬೆರೆಯುತ್ತಾ ಹೋದಂತೆ ಅಲ್ಲಿನ ಜನ, ಸಂಪ್ರದಾಯ ಕೂಡ ಅರ್ಥವಾಗುತ್ತಾ ಹೋಗುತ್ತದೆ.
ಇದನ್ನೂ ಓದಿ: ಈಜಿಪ್ಟಿಗೆ ಹೋಗುವ ಮುನ್ನ ಒಂದಷ್ಟು ತಯಾರಿ ಬೇಕು!
ಹೀಗೆ ಸ್ಪೇನ್ ನಲ್ಲಿ ಆಚರಣೆಯಲ್ಲಿರುವ ಹಲವು ಸಂಪ್ರದಾಯಗಳು ಅಲ್ಲಿನ ಸ್ಥಳೀಯರಿಗೆ ಮಾತ್ರ ಅರ್ಥವಾಗುವಂಥವುಗಳು. ಬೇರೆ ದೇಶದಿಂದ ಬಂದವರಿಗೆ ಇದೇನಿದು? ಅನಿಸಬಹುದು. ಆದರೆ ಇಲ್ಲಿ ಇರುವುದು ಹೀಗೆ. ಕೆಲವು ಸಂಪ್ರದಾಯಗಳು ನೂರಾರು ವರ್ಷದ ಇತಿಹಾಸ ಹೊಂದಿವೆ ಆದರೆ ಕೆಲವೊಂದು ಹತ್ತಿಪ್ಪತ್ತು ವರ್ಷದ ಇತಿಹಾಸ ಹೊಂದಿ ಕೂಡ ಬಹಳ ಹಳೆಯ ಸಂಪ್ರದಾಯವೇನೋ ಎನ್ನುವಂತೆ ಜನ ಪಾಲಿಸುತ್ತಾರೆ. ಕೆಲವೊಂದು ಸಂಪ್ರದಾಯಗಳು ಎಲ್ಲೆಡೆಯಂತೆ ಜನ ಮಾನಸದಿಂದ ಸರಿದು ಹೋಗುತ್ತಿವೆ. ಇಲ್ಲಿಗೆ ಬಂದ ಹೊಸತರಲ್ಲಿ ಹೀಗೆ ಇಲ್ಲಿನ ಜನರ ಹಲವು ಕಸ್ಟಮ್ಸ್ ನನಗೆ ಅಚ್ಚರಿ ತಂದಿತ್ತು. ಕಾಲಕ್ರಮೇಣ ಅದು ಬದುಕಿನ ಅಂಗವಾಗಿ ಹೋಯ್ತು. ಇವತ್ತು ಅಂಥ ಒಂದಷ್ಟು ಸಂಪ್ರದಾಯಗಳ ನೆನಪುಗಳನ್ನು ನಿಮಗೂ ಹೇಳುವೆ.

ಕಿಯನೆಸ್ ಉಲ್ತಿಮೋ?: ನಿಮಗೆಲ್ಲಾ ಆಶ್ಚರ್ಯ ಆಗಬಹುದು ಏಕೆಂದರೆ ಜಗತ್ತು ಇಂದಿಗೆ ನವ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಾಗುತ್ತಿದೆ. ಆದರೆ ಸ್ಪೇನ್ ನಲ್ಲಿ ಇಂದಿಗೂ ಸರದಿಯ ಸಾಲಿನಲ್ಲಿ ನಿಂತಾಗ ಕಿಯನೆಸ್ ಉಲ್ತಿಮೋ? ಎನ್ನುವ ಪ್ರಶ್ನೆ ಅತ್ಯಂತ ಸಾಮಾನ್ಯ. ಅಂದರೆ ಕೊನೆಯವರು ಯಾರು ಎನ್ನುವ ಪ್ರಶ್ನೆ. ನಿಮಗೆ ನಂಬಲು ಕಷ್ಟ ಆಗಬಹುದು ಆದರೆ ಅದೆಷ್ಟೇ ದೊಡ್ಡ ಸಾಲಿರಲಿ, ಎಷ್ಟೇ ಜನ ಸಂದಣಿ ಇರಲಿ, ಇಲ್ಲಿ ಇದು ವರ್ಕ್ ಆಗುತ್ತದೆ. ಜನ ತಾವಾಗೇ ಬಂದು ಇಲ್ಲಿ ಕೊನೆಯವರು ಯಾರು ಎನ್ನುವ ಪ್ರಶ್ನೆಯನ್ನು ಜೋರಾಗಿ ಕೂಗಿ ಕೇಳುತ್ತಾರೆ. ಸರದಿಯ ಕೊನೆಯ ವ್ಯಕ್ತಿ 'ಯೋ' ಅಂದರೆ 'ನಾನು' ಎಂದು ಮರು ಕೂಗಿ ಕೈ ಎತ್ತುವುದು ಕೂಡ ಸಾಮಾನ್ಯ. ಆಸ್ಪತ್ರೆ, ಬ್ಯಾಂಕು, ತರಕಾರಿ ಅಂಗಡಿಯ ಸಾಲು, ಹೀಗೆ ಎಲ್ಲೆಲ್ಲಿ ಸಾಲು ನಿಲ್ಲಬಹುದು ಅಲ್ಲೆಲ್ಲ ಇಂಥ ಪ್ರಶ್ನೆ ಸಾಮಾನ್ಯ. ಇತ್ತೀಚೆಗೆ ಮುನಿಸಿಪಾಲಿಟಿ ಕಛೇರಿಗಳಲ್ಲಿ ಟೋಕನ್ ಸಿಸ್ಟಮ್ ಅಳವಡಿಸಿದ್ದಾರೆ. ಕೆಲವೊಂದು ಆಸ್ಪತ್ರೆಗಳು ಕೂಡ ಬದಲಾಗುತ್ತಿವೆ. ಆದರೆ ಇಂದಿಗೂ ಜನ ಸಾಮಾನ್ಯನ ಜೀವನದಲ್ಲಿ ಸರದಿಯ ಕೊನೆಯವರು ಯಾರು ಎಂದು ಕೇಳುವುದನ್ನು ನೀವು ಕಾಣಬಹುದು.
ಬಾರ್ಸಿಲೋನಾಗೆ ಬಂದ ಪ್ರಥಮ ದಿನಗಳಲ್ಲಿ ಇದು ಗೊತ್ತಿರದೆ, ಭಾಷೆಯೂ ಬಾರದೆ ಸರದಿಯ ಸಾಲಿನಲ್ಲಿ ನಿಂತದ್ದು, ನನಗಿಂತ ಹಿಂದೆ ಬಂದವರು ಈ ರೀತಿ ಕೇಳಿದ್ದು ಅದಕ್ಕೇನೆಂದು ಉತ್ತರಿಸಬೇಕು ಎನ್ನುವುದು ತಿಳಿಯದೆ ಸುಮ್ಮನೆ ನಿಂತು ಎಲ್ಲರೂ ಹೋದ ಮೇಲೆ ಕೆಲಸ ಮುಗಿಸಿಕೊಂಡು ಬಂದದ್ದು ಇಂದಿಗೂ ಮರೆಯಲಾಗದು. ನಾನು ಕೊನೆಯವನು ಎಂದು ನೀವು ಹೇಳದಿದ್ದರೆ, ನೀವು ಸಾಲಿನಲ್ಲಿಲ್ಲ ಎಂದು ಅರ್ಥೈಸಿಕೊಳ್ಳುತ್ತಾರೆ. ಹೀಗಾಗಿ ಇಲ್ಲಿ ಭಾಷೆಯೂ ಬರಬೇಕು ಜೊತೆಗೆ ಇಲ್ಲಿನ ಸಂಪ್ರದಾಯಗಳು ಕೂಡ ಗೊತ್ತಿರಬೇಕು ಇಲ್ಲದಿದ್ದರೆ ಇಲ್ಲಿ ಬದುಕು ಸುಲಭವಲ್ಲ.

ಇಲ್ಲಿ ನಮ್ಮ ಹುಟ್ಟು ಹಬ್ಬಕ್ಕೆ ನಾವೇ ಪ್ರಾಯೋಜಕರು. ಜಗತ್ತಿನ ಬಹುಪಾಲು ದೇಶದಲ್ಲಿ ನಿಮ್ಮ ಹುಟ್ಟುಹಬ್ಬಕ್ಕೆ ಆಫೀಸ್ ಕೊಲೀಗ್ಸ್ ಅಥವಾ ವಿದ್ಯಾರ್ಥಿ ಯಾಗಿದ್ದರೆ ಸಹಪಾಠಿಗಳು ಹೀಗೆ ಒಟ್ಟಿನಲ್ಲಿ ನಿಮ್ಮ ಸುತ್ತಮುತ್ತಲಿನ ಜನ ಕೇಕ್ ತರಿಸುವುದು, ಅದನ್ನು ಕಟ್ ಮಾಡಿಸಿ ಆನಂದಿಸುವುದು ಸಾಮಾನ್ಯ. ಇಲ್ಲವೇ ನಿಮ್ಮನ್ನು ಹೊಟೇಲ್ ಊಟಕ್ಕೆ ಕರೆದುಕೊಂಡು ಹೋಗುವುದು ಕೂಡ ಹಲವೆಡೆ ರೂಢಿಯಲ್ಲಿರುವ ಪದ್ಧತಿ. ಆದರೆ ಸ್ಪೇನ್ ನಲ್ಲಿ ಸಂಪ್ರದಾಯ ತದ್ವಿರುದ್ದ. ನಮ್ಮ ಹುಟ್ಟು ಹಬ್ಬದ ದಿನ ನಾವೇ ಪಾನದೇರಿಯ ಅಂದರೆ ನಮ್ಮ ಬೇಕರಿಯ ಹೋಲುವ ಅಂಗಡಿಯಲ್ಲಿ ಕ್ರೋಸಾಂತ್ ಎನ್ನುವ ಶಂಕಾಕಾರದಲ್ಲಿರುವ ಬ್ರೆಡ್ ಕೊಂಡು ಹೋಗಬೇಕು. ಕಛೇರಿಯಲ್ಲಿ ಎಷ್ಟು ಜನರಿದ್ದಾರೆ ಅದಕ್ಕಿಂತ ಒಂದಿಪ್ಪತ್ತು ಪ್ರತಿಶತ ಹೆಚ್ಚು ಕೊಂಡು ಹೋಗಬೇಕು. ಏಕೆಂದರೆ ಒಬ್ಬಿಬ್ಬರು ಒಂದಕ್ಕಿಂತ ಹೆಚ್ಚು ತಿನ್ನುವ ಸಾಧ್ಯತೆಯನ್ನು ನೀವು ಅಲ್ಲಗಳೆಯಲು ಬಾರದು. ಹೀಗೆ ಕೊಂಡು ಹೋದ ಕ್ರೋಸಾಂತ್ ನಲ್ಲಿ ಕೂಡ ಹಲವು ವಿಧವಿರುತ್ತದೆ. ಪ್ಲೈನ್, ಚಾಕೊಲೆಟ್, ಇತ್ಯಾದಿ ಅವುಗಳನ್ನು ವಿಂಗಡಿಸಿ ಅದನ್ನ ಪ್ಯಾಂಟ್ರಿಯಲ್ಲಿಡಬೇಕು. ಇಷ್ಟು ಮಾಡಿ ಸುಮ್ಮನೆ ಕೂರುವಂತೆಯೂ ಇಲ್ಲ, ನಮ್ಮ ಸಹೋದ್ಯೋಗಿಗಳನ್ನು ಕುರಿತು ' ಹೊಯ್ ಎಸ್ ಮೀ ಕುಂಪ್ಲೆ ಆನ್ಯೋ ' ಅಂದರೆ ಇಂದು ನನ್ನ ಜನ್ಮ ದಿನ ಎಂದು ಹೇಳಿ ಬರಬೇಕು. ಸಹೋದ್ಯೋಗಿಗಳು ಎದ್ದು ಬಂದು ಫೆಲಿಸಿದಾದೇಸ್ ಅಂದರೆ ಅಭಿನಂದನೆಗಳು ಎಂದು ಹೇಳಲು ಶುರು ಮಾಡುತ್ತಾರೆ. ಅವರಿಗೆಲ್ಲ ಹೀಗೆ ಲಘು ಉಪಾಹಾರ ತಂದಿದ್ದೇನೆ ಎಂದು ಹೇಳಬೇಕು. ಒಬ್ಬೊಬ್ಬರು ಒಂದೊಂದು ಸಮಯದಲ್ಲಿ ಅದನ್ನು ತಿನ್ನುತ್ತಾರೆ. ತಿನ್ನುವ ಸಮಯದಲ್ಲಿ ಹೀಗೆ ನಾನು ತಿನ್ನುತ್ತಿದ್ದೇನೆ ಎನ್ನುವುದನ್ನು ಅವರು ಕೂಗಿ ಹೇಳುತ್ತಾರೆ. ಅದರರ್ಥ ಎದ್ದು ಹೋಗಿ ನಿಮಗೇನು ಬೇಕು ಎಂದು ಕೇಳಿ ಕಾಫಿ, ಹಾಟ್ ಚಾಕೊಲೆಟ್, ಕಾಫೆಚಿನೋ ಯಾವುದು ಇಷ್ಟಪಡುತ್ತಾರೆ ಅದನ್ನು ಅವರಿಗೆ ಕೊಡಿಸಿ ಬರಬೇಕು. ಇದು ಸಂಪ್ರದಾಯ. ಸಾಮಾನ್ಯವಾಗಿ ಅಂದಿನ ದಿನ ಇಲ್ಲಸಲ್ಲದ ವರ್ಕ್ ಲೋಡ್, ಡೆಡ್ ಲೈನ್ ಹಿಂಸೆಗಳಿಗೆ ರಿಯಾಯಿತಿ ಕೂಡ ನೀಡಲಾಗುತ್ತದೆ. ತೀರಾ ಆಪ್ತ ಗೆಳೆಯರನ್ನು ಊಟಕ್ಕೆ ಕರೆದುಕೊಂಡು ಹೋದರೂ ಬಿಲ್ ನೀವೇ ಕೊಡಬೇಕು. ಬಾರ್ಸಿಲೋನಾ ನಗರದಲ್ಲಿ ವಾಸ ಮಾಡಿದ್ದು 18 ವರ್ಷವಾದರೂ ನನ್ನ 23 ಹುಟ್ಟುಹಬ್ಬವನ್ನು ಈ ನಗರದಲ್ಲಿ ಆಚರಿಸಿಕೊಂಡಿದ್ದೇನೆ. ಅದರ ಸವಿ ನೆನಪನ್ನು ಮರೆಯುವುದಾದರೂ ಹೇಗೆ?

ಇಲ್ಲಿ ಹೆಣ್ಣು ಮಗು ಹುಟ್ಟಿದ ತಕ್ಷಣ ಕಿವಿ ಚುಚ್ಚುತ್ತಾರೆ. 21 ನೇ ಶತಮಾನದಲ್ಲೂ ಮಗು ಹುಟ್ಟಿದ ತಕ್ಷಣ ಅಂದರೆ ಹೆಣ್ಣು ಮಗು ಹುಟ್ಟಿದ ತಕ್ಷಣ ಕಿವಿಯನ್ನು ಚುಚ್ಚುವುದು ಇಲ್ಲಿನ ಸಂಪ್ರದಾಯ. ಇದಕ್ಕೆ ವಿಶೇಷ ಕಾರಣವೇನೂ ಇಲ್ಲ, ಮಗು ಹೆಣ್ಣೋ ಅಥವಾ ಗಂಡೋ ಎಂದು ಬಹಳಷ್ಟು ಜನ ಪ್ರಶ್ನೆ ಮಾಡುತ್ತಾರೆ. ಹೀಗಾಗಿ ಜೆಂಡರ್ ಯಾವುದು ಎಂದು ತಿಳಿದುಕೊಳ್ಳಲು ಈ ರೀತಿಯನ್ನು ಅಳವಡಿಸಿಕೊಂಡಿದ್ದಾರೆ.
ಇಲ್ಲಿ ಬೇರೆಯವರ ಮಗುವನ್ನು ಮುಟ್ಟುವುದು, ಗಲ್ಲ ಹಿಂಡುವುದು, ಮುತ್ತು ಕೊಡುವುದು ನಿಷಿದ್ಧ. ಆದರೆ ರಸ್ತೆಯಲ್ಲಿ ಹೋಗುವಾಗ ಮಗುವಿನ ಹೆಸರೇನು? ಕೆ ತಿಯಂಪು ತಿಯನೆ? ಅಂದರೆ ಎಷ್ಟು ತಿಂಗಳು, ವರ್ಷ ಎನ್ನುವ ಅರ್ಥದಲ್ಲಿ ಕೇಳುತ್ತಾರೆ. ಮಗುವಿನ ಕಿವಿ ನೋಡಿ ಹೆಣ್ಣು ಅಥವಾ ಗಂಡು ಎನ್ನುವುದರ ನಿರ್ಧಾರ ಮಾಡಿಕೊಂಡು ' ಗಂಡು ಮಗುವಾಗಿದ್ದರೆ ' ಕೆ ವಾಪೋ ' (ಸುಂದರ ) ಎಂದೂ, ಹೆಣ್ಣು ಮಗುವಾಗಿದ್ದರೆ ' ಕೆ ವಾಪ ' (ಸುಂದರಿ ) ಎನ್ನುವ ಉದ್ಗಾರವನ್ನು ಹೊರಡಿಸುತ್ತಾರೆ. ಇಲ್ಲಿ ಇನ್ನೊಂದು ಅಚ್ಚರಿಯ ವಿಷಯವೆಂದರೆ ಹೀಗೆ ರಸ್ತೆಯಲ್ಲಿ ನಿಮ್ಮನ್ನು ನಿಲ್ಲಿಸಿ ಹತ್ತು ನಿಮಿಷ ಮಾತನಾಡಿಸಿ ಹೋಗುವ ಜನ ನಿಮಗೆ ಪರಿಚಿತರು ಆಗಿರಬೇಕು ಎನ್ನುವ ಯಾವುದೇ ನಿಯಮವಿಲ್ಲ. ಎಳೆಯ ಮಕ್ಕಳನ್ನು ಕರೆದುಕೊಂಡು ಹೋಗುವ ಹೊಸ ಅಪ್ಪ ಅಮ್ಮಂದಿರಿಗೆ ಬಹಳಷ್ಟು ಹೊಸ ಪರಿಚಯ, ಸ್ನೇಹಿತರು ಮಗುವಿನ ಸಲುವಾಗಿ ದೊರೆಯುತ್ತಾರೆ ಎನ್ನುವುದು ಕೂಡ ಸತ್ಯ. ಅನನ್ಯಳನ್ನು ಪ್ರಾಮ್ ನಲ್ಲಿ ಮಲಗಿಸಿಕೊಂಡು ಎಳೆಬಿಸಿಲಿನಲ್ಲಿ ಸುತ್ತಾಡಿಸಿಕೊಂಡು ಬರುವ ಕಾಯಕ ನನಗೆ ಅತ್ಯಂತ ಖುಷಿ ಕೊಡುವ ಕೆಲಸವಾಗಿತ್ತು. ಹೀಗೆ ಸುತ್ತಾಟ ಮುಗಿಸಿ ಮನೆಗೆ ಹತ್ತಿರವಿದ್ದ ಫಾರ್ಮಸಿಯಲ್ಲಿ ಮಗುವಿಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಳ್ಳುತ್ತಿದ್ದೆ. ಫಾರ್ಮಸಿ ನಡೆಸುವಾಕೆ ಅನನ್ಯಳನ್ನು ಕಂಡು ಹೊಗಳಿಕೆಯ ಮಹಾಪೂರವನ್ನೇ ಹರಿಸುತ್ತಿದ್ದಳು. ಹತ್ತಾರು ಹೊಸ ಪದಾರ್ಥಗಳ ಸ್ಯಾಂಪಲ್ ನಾನು ಕೇಳದೆ ಉಚಿತವಾಗಿ ನೀಡುತ್ತಿದ್ದಳು. ಗೊತ್ತಿಲ್ಲದೇ ಬೆಸೆದು ಕೊಳ್ಳುವ ಇಂಥ ಬಾಂಧವ್ಯಕ್ಕೆ ಏನು ಹೇಳುವುದು?
ಇದನ್ನೂ ಓದಿ: ಕಣಿವೆ ರಾಜರ ಸಮಾಧಿಯ ಕಲ್ಲುಗಳು ಹೇಳುವ ಇತಿಹಾಸದ ಕಥೆಗಳು
ಇಲ್ಲಿ ಪಬ್ಲಿಕ್ ನಲ್ಲಿ ಮಗುವಿಗೆ ಹಾಲೂಡಿಸುವುದು ಸಾಮಾನ್ಯ. ಮಗುವನ್ನು ಹೊತ್ತು ಬರುವ ತಾಯಿಯರನ್ನು ಕಂಡ ತಕ್ಷಣ ಯಾರಾದರೂ ಎದ್ದು ಜಾಗ ಬಿಡುವುದು ಇಲ್ಲಿ ಸಾಮಾನ್ಯ ದೃಶ್ಯ. ಅವರಿಗೆ ಎಂದು ಹಲವು ಆಸನಗಳನ್ನು ಬಸ್, ಟ್ರೇನ್, ಮೆಟ್ರೋ ಎಲ್ಲದರಲ್ಲೂ ಕಾದಿರಿಸುತ್ತಾರೆ. ಆದರೆ ಹೀಗಿದ್ದೂ ಬೇರೆಯವರು ಕೂಡ ತಕ್ಷಣ ಜಾಗವನ್ನು ಬಿಟ್ಟು ಕೊಡುವುದು ಕೂಡ ಇಲ್ಲಿನ ಸಂಪ್ರದಾಯ. ಹಿರಿಯ ನಾಗರಿಕರನ್ನು ಕಂಡಾಗ ಕೂಡ ಇದೇ ರೀತಿಯ ನಡವಳಿಕೆಯನ್ನು ನೀವು ಗಮನಿಸಬಹುದು. ಹಾಗೆಯೇ ತಾಯಿಯಾದವಳು ಟ್ರೇನ್ ನಲ್ಲಿ, ಬಸ್ ಹೀಗೆ ಯಾವುದೇ ಪಬ್ಲಿಕ್ ಜಾಗದಲ್ಲಿ ಮಗುವಿಗೆ ಹಾಲುಣಿಸುವುದು ಇಲ್ಲಿ ಓಕೆ. ಯಾರೊಬ್ಬರೂ ಅದನ್ನ ವಿಶೇಷವಾಗಿ ಗಮನಿಸುವುದು, ದಿಟ್ಟಿಸಿ ನೋಡುವುದು ಮಾಡುವುದಿಲ್ಲ. ಇಲ್ಲಿ ಇದೊಂದು ಸಹಜ ಕ್ರಿಯೆ ಎನ್ನುವಂತೆ ನೋಡಲಾಗುತ್ತದೆ. ಏಷ್ಯಾ ಖಂಡದಿಂದ ಹೋದವರಿಗೆ ಇಲ್ಲಿನ ಕೆಲವು ಸಂಪ್ರದಾಯಗಳು ಅಚ್ಚರಿಗೊಳಿಸುವುದು ಸಹಜ.

ಕಾಗನೇರ್ : ಸ್ಪೇನ್ ನ ಒಂದು ರಾಜ್ಯ ಕತಲೂನ್ಯದಲ್ಲಿ ನೀವು ಯಾವುದೇ ಸೊವಿನೀರ್ ಅಂಗಡಿಯನ್ನು ಪ್ರವೇಶಿದರೆ ಅಲ್ಲಿ ಚಡ್ಡಿ ಅರ್ಧ ತೆಗೆದು, ಅರ್ಧ ಪೃಷ್ಠ ಕಾಣುವಂತೆ ಇರುವ ಬೊಂಬೆಗಳನ್ನು ಕಾಣಬಹುದು. ಮೂಲದಲ್ಲಿ ನಾವೆಲ್ಲಾ ಒಂದೇ ಎನ್ನುವುದನ್ನು ಸಾರುವುದಕ್ಕೆ ಇಂಥ ಬೊಂಬೆಗಳನ್ನು ಮಾಡಿ ಇಡಲಾಗಿದೆ. ಇವುಗಳನ್ನು ಜನರು ಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಪ್ರವಾಸಿಗಳು ಕೂಡ ಕೊಳ್ಳುತ್ತಾರೆ. ಆದರೆ ಇದರ ಅರ್ಥ, ಇದೇಕೆ ಹೀಗಿದೆ ಎನ್ನುವುದು ಗೊತ್ತಿರುವುದಿಲ್ಲ. ನೀವು ಯಾರೇ ಆಗಿರಿ, ಎಷ್ಟೇ ಪ್ರಸಿದ್ಧರು, ಹಣವಂತರು, ಜ್ಞಾನಿಗಳು, ಮೂಲಭೂತವಾಗಿ ನೀವು ಮನುಷ್ಯರು ಎನ್ನುವುದನ್ನು ಈ ಬೊಂಬೆಗಳು ಜ್ಞಾಪಿಸುತ್ತವೆ. ಇದಕ್ಕೆ ಕಾಗನೇರ್ ಎನ್ನುತ್ತಾರೆ. ಇಂಗ್ಲಿಷ್ ನಲ್ಲಿ ಪೋಪರ್ ಎನ್ನುತ್ತಾರೆ. ಅಚ್ಚ ಕನ್ನಡದಲ್ಲಿ ಹೇಲಲು ಕೂತ ಭಂಗಿಯ ಬೊಂಬೆ ಎನ್ನಲಡ್ಡಿಯಿಲ್ಲ. ಯಾರಾದರೇನು ತಿನ್ನದೆ, ವಿಸರ್ಜಿಸದೆ ಇರಲು ಸಾಧ್ಯವಿಲ್ಲ. ಹೀಗಾಗಿ ನಾನು ಎನ್ನುವ ಅಹಂಭಾವ ನೆತ್ತಿಗೇರದೆ ಇರಲಿ ಎನ್ನುವುದು ಇಂಥ ಬೊಂಬೆಯ ಸೃಷ್ಟಿಯ ಹಿಂದಿನ ರಹಸ್ಯ.
ಜಗತ್ತು ಅಚ್ಚರಿಗಳ ಆಗರ. ನಮಗೆ ಗೊತ್ತಿಲ್ಲದ ನೂರಾರು, ಸಾವಿರಾರು ಸಂಪ್ರದಾಯಗಳು ಈ ಭೂಮಿಯ ಮೇಲಿದೆ. ಒಳಿತನ್ನು ಸ್ವಾಗತಿಸುತ್ತಾ, ಕೆಡುಕು ಮಾಡುವುದನ್ನು ಅಥವಾ ಇಂದಿನ ಜಗತ್ತಿಗೆ ತೀರಾ ಅನಗತ್ಯ ಅನಿಸಿದ್ದನ್ನು ಬಿಡುತ್ತಾ ಹೋದರೆ ಜಗತ್ತು ಸುಂದರವಾಗುತ್ತದೆ. ಈ ಬಗ್ಗೆ ನಿಮ್ಮ ನಿಲುವೇನು?