ವಿಮಾನದ ಇಂಧನ ಟ್ಯಾಂಕ್
ಪ್ರಪಂಚದ ಅತಿದೊಡ್ಡ ಪ್ರಯಾಣಿಕ ವಿಮಾನವಾದ ಏರ್‌ಬಸ್ ಎ-380, ಖಂಡಾಂತರದ ದೀರ್ಘ-ಶ್ರೇಣಿಯ ವಿಮಾನಗಳ ಹಾರಾಟಕ್ಕೆ ಬೆಂಬಲ ನೀಡಲು, 82000 ಗ್ಯಾಲನ್‌ಗಳಿಗಿಂತ ಹೆಚ್ಚು (310000 ಲೀಟರ್) ಇಂಧನವನ್ನು ಅನೇಕ ಟ್ಯಾಂಕ್‌ಗಳ ಮೂಲಕ ಒಯ್ಯುತ್ತದೆ. ಎ-380 ವಿಮಾನವು ಒಟ್ಟು ಹನ್ನೊಂದು ಇಂಧನ ಟ್ಯಾಂಕ್ ಗಳನ್ನು ಹೊಂದಿದೆ.
ವಿಶ್ವದ ಅತಿ ದೊಡ್ಡ ವಿಮಾನವಾದ ಏರ್‌ಬಸ್ ‘ಎ-380’ನ ಇಂಧನ ಟ್ಯಾಂಕ್ ಹೇಗಿರಬಹುದು, ಅದರ ವಿನ್ಯಾಸ ಹೇಗಿರಬಹುದು ಎಂಬ ಬಗ್ಗೆ ಯೋಚಿಸಿದ್ದೀರಾ? ಎ-380 ಇಂಧನ ಟ್ಯಾಂಕ್ ಅನ್ನು ವಿನ್ಯಾಸ ಸಮತೋಲನ ಮತ್ತು ವ್ಯಾಪ್ತಿಯಲ್ಲಿ ಒಂದು ‘ಮಾಸ್ಟರ್‌ಕ್ಲಾಸ್’ ಎಂದು ಪರಿಗಣಿಸಲಾಗಿದೆ.
ಪ್ರಪಂಚದ ಅತಿದೊಡ್ಡ ಪ್ರಯಾಣಿಕ ವಿಮಾನವಾದ ಏರ್‌ಬಸ್ ಎ-380, ಖಂಡಾಂತರದ ದೀರ್ಘ-ಶ್ರೇಣಿಯ ವಿಮಾನಗಳ ಹಾರಾಟಕ್ಕೆ ಬೆಂಬಲ ನೀಡಲು, 82000 ಗ್ಯಾಲನ್‌ಗಳಿಗಿಂತ ಹೆಚ್ಚು (310000 ಲೀಟರ್) ಇಂಧನವನ್ನು ಅನೇಕ ಟ್ಯಾಂಕ್‌ಗಳ ಮೂಲಕ ಒಯ್ಯುತ್ತದೆ. ಎ-380 ವಿಮಾನವು ಒಟ್ಟು ಹನ್ನೊಂದು ಇಂಧನ ಟ್ಯಾಂಕ್ ಗಳನ್ನು ಹೊಂದಿದೆ.
ಇವುಗಳನ್ನು ರೆಕ್ಕೆಗಳು ಮತ್ತು ವಿಮಾನದ fuselage ತನಕ ವ್ಯಾಪಿಸಿದೆ. ವಿಮಾನದ ಸಮತೋಲನ ಮತ್ತು ರಚನಾತ್ಮಕ ದಕ್ಷತೆಗಾಗಿ (structural efficiency) ಇವು ಎರಡೂ ರೆಕ್ಕೆಗಳಲ್ಲಿ ಇರುತ್ತವೆ. ಒಳ ಮತ್ತು ಹೊರ ರೆಕ್ಕೆ ಟ್ಯಾಂಕ್‌ಗಳು ರೆಕ್ಕೆಗಳ ಒಳಗೆ ಇರುವ ಮುಖ್ಯ ಶೇಖರಣಾ ಟ್ಯಾಂಕ್‌ಗಳಾಗಿವೆ. ಟ್ರಿಮ್ ಟ್ಯಾಂಕ್‌ಗಳು ವಿಮಾನದ ಹಿಂಭಾಗದಲ್ಲಿರುವ ಸಮತಲ ಸ್ಟೆಬಿಲೈಜರ್‌ನಲ್ಲಿ (horizontal stabilizer) ನೆಲೆಗೊಂಡಿವೆ.
ಇದನ್ನೂ ಓದಿ: ವಿಮಾನದ ರೆಕ್ಕೆಗಳು ಮುರಿಯಬಹುದೇ ?
ವಿಮಾನದ ಹಾರಾಟದ ಸಮಯದಲ್ಲಿ ಗುರುತ್ವ ಕೇಂದ್ರವನ್ನು (Center of Gravity- CG) ಸರಿಹೊಂದಿಸಲು ಇವುಗಳನ್ನು ಬಳಸಲಾಗುತ್ತದೆ. ಫೀಡ್ ಟ್ಯಾಂಕ್‌ಗಳು ಇಂಧನವನ್ನು ನೇರವಾಗಿ ಎಂಜಿನ್‌ಗಳಿಗೆ ಪೂರೈಸುತ್ತವೆ. ಸರ್ಜ್ ಟ್ಯಾಂಕ್‌ಗಳು ಇಂಧನ ತುಂಬಿಸುವ/ಖಾಲಿ ಮಾಡುವ ಸಮಯದಲ್ಲಿ ಅಧಿಕ ಒತ್ತಡವನ್ನು ತಡೆಯಲು ಇವು ಸಹಾಯ ಮಾಡುತ್ತವೆ.
ಎ-380ನಲ್ಲಿರುವ ಇಂಧನ ನಿರ್ವಹಣಾ ವ್ಯವಸ್ಥೆಯು ಬಹಳ ಸಂಕೀರ್ಣ ಮತ್ತು ಸ್ವಯಂ ಚಾಲಿತವಾಗಿರುತ್ತದೆ. ವಿಮಾನದ ಸಮತೋಲನ, ದಕ್ಷತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಟ್ಯಾಂಕ್ ಗಳ ನಡುವೆ ಸ್ವಯಂಚಾಲಿತವಾಗಿ ಇಂಧನವನ್ನು ವರ್ಗಾಯಿಸುತ್ತದೆ. ಇದು ಕಂಪ್ಯೂಟರ್-ನಿಯಂತ್ರಿತ ಪಂಪ್‌ಗಳು ಮತ್ತು ಕವಾಟಗಳನ್ನು ಬಳಸುತ್ತದೆ.

ಎ-380 ವಿಮಾನದ ಇಡೀ ಟ್ಯಾಂಕ್ ತುಂಬಿದಾಗ ಅದರ ಇಂಧನದ ತೂಕವು 250 ಮೆಟ್ರಿಕ್ ಟನ್ ಗಳಿಗಿಂತಲೂ ಹೆಚ್ಚು ಇರುತ್ತದೆ- ಅಂದರೆ, ಇದು ಸುಮಾರು 50 ಆನೆಗಳ ತೂಕಕ್ಕೆ ಸಮಾನವಾಗಿರುತ್ತದೆ! ಏರ್‌ಬಸ್ ಎ-380 ಇಂಧನ ವ್ಯವಸ್ಥೆಯು ಕೇವಲ ಟ್ಯಾಂಕ್‌ಗಳ ಜೋಡಣೆಯಲ್ಲ. ಇದು ವಿಮಾನಯಾನ ಎಂಜಿನಿಯರಿಂಗ್‌ನ ಒಂದು ಸಂಕೀರ್ಣ ಸಾಧನೆಯಾಗಿದೆ.
ಇಂಧನವನ್ನು ರೆಕ್ಕೆಗಳಲ್ಲಿ ತುಂಬಿಸುವುದರಿಂದ ಕೇವಲ ಸ್ಥಳಾವಕಾಶ ಸಿಗುವುದಲ್ಲ, ಅದರಿಂದ ಎಂಜಿನಿಯರಿಂಗ್ ಲಾಭವೂ ಇದೆ. ವಿಮಾನವು ಹಾರುವಾಗ, ರೆಕ್ಕೆಗಳು ಮೇಲಕ್ಕೆತ್ತಲು ಪ್ರಯತ್ನಿಸುತ್ತವೆ. ವಿಮಾನದ ರೆಕ್ಕೆಗಳೊಳಗೆ ಇಂಧನವನ್ನು ತುಂಬಿದಾಗ, ಇಂಧನದ ಭಾರವು ಈ ಮೇಲಕ್ಕೆ ಎತ್ತುವ ಬಲಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ.
ಇದು ರೆಕ್ಕೆಗಳ ಬುಡದಲ್ಲಿನ ಒತ್ತಡ ಮತ್ತು ಬಾಗುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಎ-380 ವಿಮಾನದ ರೆಕ್ಕೆಗಳು ಹಾರಾಟದ ಸಮಯದಲ್ಲಿ ಸುಮಾರು 4 ಮೀಟರ್ ಗಳಷ್ಟು ಮೇಲಕ್ಕೆ ಬಾಗಬಹುದು. ಭಾರವಾದ ಇಂಧನವನ್ನು (ವಿಶೇಷವಾಗಿ ಹೊರಗಿನ ಟ್ಯಾಂಕ್‌ಗಳಲ್ಲಿ) ತುಂಬುವುದರಿಂದ ಈ ಬಾಗುವಿಕೆಯ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.
ವಿಮಾನದ ಹಿಂಭಾಗದ ಸಮತಲ ಸ್ಟೆಬಿಲೈಜರ್ ನಲ್ಲಿ (Horizontal Stabilizer) ಇರಿಸಲಾದ ಟ್ರಿಮ್ ಟ್ಯಾಂಕ್‌ಗಳು ದಕ್ಷತೆಗೆ ಅತ್ಯಂತ ನಿರ್ಣಾಯಕವಾಗಿವೆ. ವಿಮಾನವು ಹೆಚ್ಚಿನ ವೇಗದಲ್ಲಿ (Cruise Speed) ಹಾರುವಾಗ, ವಿಮಾನದ ಗುರುತ್ವ ಕೇಂದ್ರ (Center of Gravity) ವು ಸ್ವಲ್ಪ ಹಿಂಭಾಗಕ್ಕೆ ಚಲಿಸಿದರೆ, ವಾಯುಬಲ ವಿಜ್ಞಾನದ ಎಳೆತ ಕಡಿಮೆಯಾಗುತ್ತದೆ.
ಫೀಡ್ ಟ್ಯಾಂಕ್‌ಗಳ ಒಳಗೆ ಒಂದು ಸಣ್ಣ ಸಂಗ್ರಾಹಕ ಕೋಶ (Collector Cell) ಇರುತ್ತದೆ. ವಿಮಾನವು ತೀವ್ರವಾಗಿ ತಿರುಗಿದರೂ ಅಥವಾ ಪಕ್ಕಕ್ಕೆ ವಾಲಿದರೂ, ಎಂಜಿನ್ ಪಂಪ್ ಗಳಿಗೆ ನಿರಂತರವಾಗಿ ಇಂಧನ ಪೂರೈಕೆಯಾಗುವುದನ್ನು ಇದು ಖಚಿತಪಡಿಸುತ್ತದೆ. ಯಾವುದೇ ಒಂದು ಎಂಜಿನ್‌ನ ಫೀಡ್ ಟ್ಯಾಂಕ್‌ನಲ್ಲಿ ಸಮಸ್ಯೆ ಎದುರಾದರೆ, ಇತರ ಟ್ಯಾಂಕ್‌ಗಳಿಂದ ಇಂಧನವನ್ನು ಸರಬರಾಜು ಮಾಡಲು ಕ್ರಾಸ್‌ಫೀಡ್ ವ್ಯವಸ್ಥೆ ಇದೆ. ಇದರಿಂದ ಒಂದು ಎಂಜಿನ್, ತನ್ನ ಪಕ್ಕದ ರೆಕ್ಕೆಯ ಟ್ಯಾಂಕ್‌ನಿಂದಲೂ ಇಂಧನ ಪಡೆಯಬಹುದು.
 
                         
                     
                                            
                                             
                                                
                                                