ಅಲ್ಲಿ ಸಾಲ ವಸೂಲು ಮಾಡಲು ಶೌಚಾಲಯಕ್ಕೂ ಬೆನ್ನತ್ತುತ್ತಾರೆ!
ಇವರು ನಮ್ಮ ಭಾರತೀಯ ಖಾಸಗಿ ಬ್ಯಾಂಕಿನ ಗೂಂಡಾಗಳಂತೆ ವರ್ತಿಸುವುದಿಲ್ಲ.ಇವರ ಕೆಲಸ ಸಾಲ ವಾಪಸ್ ಕೊಡದವನ ಹಿಂದೆ ಮುಂದೆ ನಿತ್ಯ ಸುತ್ತುವುದು.ಸಾಲ ಪೂರ್ಣ ವಾಪಸ್ ಸಿಗುವ ತನಕ ನಕ್ಷತ್ರಿಕನಂತೆ ಅವರ ಹಿಂದೆ ಮುಂದೆ ಸುತ್ತುತ್ತಲೇ ಇರುತ್ತಾರೆ.
- ರಂಗಸ್ವಾಮಿ ಮೂಕನಹಳ್ಳಿ
ಬಾರ್ಸಿಲೋನಾ ಅಂದರೆ ಬಾರ್! ಹೌದು ಪ್ರತಿ ಹತ್ತು ಹೆಜ್ಜೆಗೆ ಒಂದು ಬಾರು! ಉತ್ಪ್ರೇಕ್ಷೆ ಅಲ್ಲ ನಿಜ . ಐವತ್ತೋ ಅರವತ್ತೋ ಮನೆ ಇರುವ ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿ 2-3 ಬಾರು ಗ್ಯಾರಂಟಿ !
ನೀವು ನಂಬಲಿಕ್ಕಿಲ್ಲ, ಜನ ಮನೇಲಿ ಕಾಫಿ, ತಿಂಡಿ ಮಾಡುವ ಬದಲು, ಕೆಳಗೆ ಬಂದು ಗಂಟೆಗಟ್ಟಲೆ ಹರಟೆ ಹೊಡೆಯುತ್ತಾ ಕಾಫಿ ಹೀರಿ, ಒಂದೆರಡು ಸಿಗರೇಟು ಸುಟ್ಟು, ಬೋಕಾತ್ತ (ಬ್ರೆಡ್ಡು, ನಡುವೆ ಹಂದಿ /ಹಸು /ಮೇಕೆ, ನೀವು ಕೇಳುವ ಪ್ರಾಣಿಯ ಮಾಂಸದ ತುಂಡು ಇಟ್ಟು ತಯಾರಾದ ಒಂದು ಬೆಳಗಿನ ಉಪಾಹಾರ) ತಿಂದು ಕೆಲಸಕ್ಕೆ ಹೊರಡುತ್ತಾರೆ.

ಹಂದಿ ಮಾಂಸ, ವೈನ್ ಊಟದಲ್ಲಿ ಇರಲೇಬೇಕು. ಇಲ್ಲಿನ ಹಂದಿ ಮಾಂಸ , ಯೂರೋಪಿನ ಇತರ ದೇಶಗಳಿಗೆ ರಫ್ತು ಆಗುತ್ತದೆ. ಸ್ಪ್ಯಾನಿಷ್ ವೈನ್ ಕೂಡ ಬಹಳವೇ ಪ್ರಸಿದ್ಧಿ. ಟಕಿಲ ಎನ್ನುವ ಹೆಸರಿನ ಮದ್ಯ ಬಲು ಪ್ರಸಿದ್ಧಿ. ಹಂದಿ ಮಾಂಸ ಬಹಳ ದುಬಾರಿ. ಏಕೆಂದರೆ ಇದನ್ನು 10-12 ವರ್ಷ ಒಣಗಿಸಿ, ಕೆಡದಂತೆ ಸಂರಕ್ಷಿಸಿ ಇಡುತ್ತಾರೆ. ಇದನ್ನು ಬೇಯಿಸುವುದಿಲ್ಲ. ಹಾಗೆ ತೆಳ್ಳಗೆ ಕಟ್ ಮಾಡಿ ಬ್ರೆಡ್ಡಿನ ಮಧ್ಯೆ ಇಟ್ಟು ಮೆಲ್ಲುತ್ತಾರೆ.
ಊಟದ ವಿಷಯದಲ್ಲಿ ನಾವು ಭಾರತೀಯರು ಬಲು ಜಿಡ್ಡಿನವರು. ಅಡ್ಜಸ್ಟ್ ಆಗುವುದು ಬಹಳ ಕಡಿಮೆ. ಇದಕ್ಕೆ ಕಾರಣ ಇಲ್ಲಿ ಮಾಂಸಾಹಾರವಾದರೂ ಅದಕ್ಕೆ ಭಾರತದಲ್ಲಿ ಬೆರೆಸುವಂತೆ ಮಸಾಲೆ ಬೆರೆಸುವುದಿಲ್ಲ. ಇಲ್ಲೇನಿದ್ದರೂ ಬೇಯಿಸಿ ಅಥವಾ ಸುಟ್ಟು ಅದರ ಮೇಲೆ ಒಂದಷ್ಟು ಉಪ್ಪು ಮತ್ತು ಕಪ್ಪು ಮೆಣಸು (ಪೆಪ್ಪರ್) ಪುಡಿಯನ್ನು ಉದುರಿಸಿದರೆ ಅಲ್ಲಿಗೆ ಮುಗಿಯಿತು.’ನೀವು ವಿಚಿತ್ರ ಜನ ಮಾಂಸದ ರುಚಿಯೇ ಗೊತ್ತಾಗದ ಹಾಗೆ ಮಸಾಲೆ ಬೆರೆಸುತ್ತೀರಿ. ನಿಮಗೆ ಕೋಳಿ, ಕುರಿ ಯಾವ ಮಾಂಸದ ನಿಜವಾದ ರುಚಿಯೇ ಗೊತ್ತಿರುವುದಿಲ್ಲ. ಮಸಾಲೆ ಮಧ್ಯೆ ಒಂದಷ್ಟು ಮಾಂಸ ತಿನ್ನುತ್ತೀರಿ’ ಎನ್ನುವುದು ಇಲ್ಲಿಯ ನನ್ನ ಗೆಳೆಯರ ವಾದ. ಮಾಂಸ ತಿನ್ನದ ನಾನು ಅವರು ಹೇಳುವ ಎಲ್ಲ ವಿಷಯಕ್ಕೂ ಹೌದೌದು ಎಂದು ತಲೆಯಾಡಿಸಿದ್ದು ಬಿಟ್ಟರೆ, ಅದರ ಬಗ್ಗೆ ಮಾತನಾಡುವಷ್ಟು ಜ್ಞಾನವಿರಲಿಲ್ಲ. ಊಟ ತಿಂಡಿ ವಿಷಯ ಬಂದಾಗ ಇಲ್ಲಿನ ಜನರ ನಡವಳಿಕೆ, ಇಲ್ಲಿನ ಹೆಂಗಸರಿಗೆ ಇರುವ ಸ್ವಾತಂತ್ರ್ಯ ಕಂಡಾಗೆಲ್ಲ ಅಮ್ಮ ನೆನಪಾಗುತ್ತಿದ್ದಳು. ಅಮ್ಮ ಬೆಳಿಗ್ಗೆ ಎದ್ದು, ವಾಂಗಿಬಾತು , ಪುಳಿಯೋಗರೆ ಅಥವಾ ರೊಟ್ಟಿ ತಟ್ಟಿ ಜೀವನ ಕಳೆದುಬಿಟ್ಟಳು ಪಾಪ. ಇಲ್ಲಿನ ನಾರಿಯರು ಈ ವಿಷಯದಲ್ಲಿ ಬಹಳ ಲಕ್ಕಿ. ಗಂಡು ಹೆಣ್ಣು ಎಲ್ಲದರಲ್ಲೂ ಸಮಾನ ಭಾಗಿತ್ವ.
ಸ್ಪೇನ್ ದೇಶ 15 ವರ್ಷದ ಹಿಂದೆ ಸ್ವರ್ಗ. ಮಕ್ಕಳು ಮಾಡಿಕೊಳ್ಳಿ ಪ್ಲೀಸ್ ಅಂತ ಸರಕಾರ ಜನತೆಯನ್ನು ಕೇಳಿಕೊಳ್ಳುತ್ತಿತ್ತು. ಸಾಲದಕ್ಕೆ 2500 ಯುರೋ ಸಹಾಯ ಧನ ಬೇರೆ ಕೊಡುತ್ತಿತ್ತು. ಬದಲಾದ ಸನ್ನಿವೇಶದಲ್ಲಿ ಕೊರೋನದಿಂದ ಜನ ಬಹಳ ಕಂಗಾಲಾಗಿದ್ದಾರೆ. ಪಡೆದ ಸಾಲಕ್ಕೆ ಕಂತು ಕಟ್ಟಲಾಗದೆ ಕೈ ಕಟ್ಟಿ ಕುಳಿತಿದ್ದಾರೆ. ಸಾಲ ಕೊಟ್ಟವರು ಸುಮ್ಮನೆ ಬಿಟ್ಟಾರೆಯೇ? ವಸೂಲಿಗೆ ಒಂದು ದಾರಿ ಹುಡುಕಿದ್ದಾರೆ. ಅವರೇ ವಸೂಲಿಗಾರರು ಅಲಿಯಾಸ್ ಕೋಬ್ರದೊರೆಸ್ (cobradores). ಇವರು ನಮ್ಮ ಭಾರತೀಯ ಖಾಸಗಿ ಬ್ಯಾಂಕಿನ ಗೂಂಡಾಗಳಂತೆ ವರ್ತಿಸುವುದಿಲ್ಲ. ಇವರ ಕೆಲಸ ಸಾಲ ವಾಪಸ್ ಕೊಡದವನ ಹಿಂದೆ ಮುಂದೆ ನಿತ್ಯ ಸುತ್ತುವುದು. ಸಾಲ ಪೂರ್ಣ ವಾಪಸ್ ಸಿಗವ ತನಕ ನಕ್ಷತ್ರಿಕನಂತೆ ಅವರ ಹಿಂದೆ ಮುಂದೆ ಸುತ್ತುತ್ತಲೇ ಇರುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಸಾಲ ಮರಳಿಕೊಡದವನು ಶೌಚಕ್ಕೆ ಹೋದರೂ ಅವರ ಹಿಂದೆ ಹೋಗುತ್ತಾರೆ. ಇವರಲ್ಲೂ ಹಲವು ರೀತಿ. ಕೆಲವರು ಸುಮ್ಮನೆ ಹಿಂದೆ ಹೋಗುತ್ತಾರೆ. ಕೆಲವರು ನೀನು ಸಾಲಗಾರ ಇಷ್ಟು ಬಾಕಿ ಕೊಡಬೇಕು ಎಂದು ನೆನಪಿಸುತ್ತಾ ಇರುತ್ತಾರೆ. ಅಂದಹಾಗೆ ಇದು ಕೊರೋನ ನಂತರ ಶುರುವಾಗಿದೆ ಎನ್ನುವ ಅನುಮಾನ ಇದ್ದರೆ ಅದು ತಪ್ಪು.
ಈ ಹಿಂದೆ ಕೂಡ ಇಂಥ ಹಲವು ರಾಷ್ಟ್ರೀಯ ಸುದ್ದಿಯಾಗಿ ಬಿತ್ತರವಾಗಿವೆ. ಸಾಲ ಎನ್ನುವುದು ವೈಯಕ್ತಿಕವಾದದ್ದು. ’ನಾನು ತೆಗೆದುಕೊಂಡಿರುವ ಸಾಲದ ಮೊತ್ತ, ಇತರ ವಿಷಯಗಳು ಜಗತ್ತಿಗೆ ಏಕೆ ಗೊತ್ತಾಗಬೇಕು’ ಎಂದು ಸಾಲ ಮರಳಿ ಕೊಡಲಾಗದ ವ್ಯಕ್ತಿಯೊಬ್ಬ ಇಂಥ ವಸೂಲಿ ಸಂಸ್ಥೆಯ ಮೇಲೆ ಕೇಸ್ ದಾಖಲಿಸಿದ್ದ. ವಸೂಲಿಗಾರ ಸಂಸ್ಥೆ ಒಬ್ಬ ವ್ಯಕ್ತಿಯನ್ನು ಈತನ ಹಿಂದೆ ಹಾಕಿತ್ತು. ಆತ ಈ ಸಾಲಗಾರನ ಆಫೀಸ್ ಮುಂದೆ , ಮನೆ ಮುಂದೆ ಹೀಗೆ ಆತನ ದಿನ ನಿತ್ಯ ಹೆಚ್ಚು ಸಮಯ ಕಳೆಯುವ ಕಡೆಯಲ್ಲಿ ಟೆಂಟ್ ಹಾಕಿಕೊಂಡು ಅಲ್ಲಿ ವಾಸ್ತವ್ಯ ಹೂಡುತ್ತಿದ್ದ. ಈತ ಸಾಲ ಮಾಡಿರುವುದು ಎಲ್ಲರಿಗೂ ಗೊತ್ತಾಯ್ತು. ಅವನು ನನ್ನ ವೈಯಕ್ತಿಕ ಬದುಕನ್ನು ಹರಾಜು ಹಾಕಿದ್ದಾರೆ ಎಂದು ಕೇಸ್ ಹಾಕಿದ್ದ.
ದಿಯಾ ದೇ ಸಂತ ಜೊರ್ದಿ ! ಏನಿದು?
ನಾನಿದ್ದ ರಾಜ್ಯ ಕಾತಲುನ್ಯದಲ್ಲಿ ಇದು ಪ್ರಸಿದ್ಧ ಹಬ್ಬಗಳಲ್ಲೊಂದು. ಈ ಹಬ್ಬದಲ್ಲಿ ಪುರುಷರು ಮಹಿಳೆಯರಿಗೆ ಗುಲಾಬಿ ಉಡುಗೊರೆ ನೀಡುತ್ತಾರೆ. ಮಹಿಳೆಯರು ಪುರುಷರಿಗೆ ಪುಸ್ತಕ ಉಡುಗೊರೆ ನೀಡುತ್ತಾರೆ. ಬಗೆಬಗೆಯ ಬಣ್ಣದ ಗುಲಾಬಿಗಳು ಕೈ ಬದಲಾಯಿಸುವುದನ್ನು ನೋಡುವುದೇ ಚೆಂದ. ಸ್ನೇಹ, ಪ್ರೀತಿ, ಗೌರವ ವಿನಿಮಯವಾಗಲು ಇದೆಂಥ ಅವಕಾಶ. ಮಹಿಳೆಯರು ಪುಸ್ತಕ ಉಡುಗೊರೆಯಾಗಿ ನೀಡುವಾಗ ಗಂಡನಾಗಿರಬಹುದು, ಸ್ನೇಹಿತನಾಗಿರಬಹುದು, ದೂರದ ಸಂಬಂಧಿಯಾಗಿರಬಹುದು ಎಲ್ಲರಿಗೂ ಒಂದೇ. ಎಲ್ಲರಿಗೂ ಪುಸ್ತಕವೇ.

ಕಾತಲುನ್ಯದ ಕೃತಿ ಕಥೆ
ಹಾಗೆ ನೋಡಿದರೆ ಪುಸ್ತಕ ಉಡುಗೊರೆ ನೀಡುವುದು ಪಾರಂಪರಿಕ ಸಂಪ್ರದಾಯವೇನೂ ಅಲ್ಲ. ತೀರಾ ಈಚಿನದು. 1923ರಿಂದ ಇದು ರೂಢಿಗೆ ಬಂತು. ಅದನ್ನು ಹುಟ್ಟುಹಾಕಿದ್ದು ಕೂಡ ಕಾತಲುನ್ಯ ರಾಜ್ಯವೇ.'ಗುಲಾಬಿ ಪ್ರೀತಿಗೆ- ಪುಸ್ತಕ ನೆನಪಿಗೆ' ಎಂಬ ಘೋಷವಾಕ್ಯದೊಂದಿಗೆ ಪ್ರಾರಂಭವಾದ ಈ ಪ್ರೀತಿಯ ಕೊಡುಗೆ ಸತತವಾಗಿ ಸಾಗಿದೆ. ಯುನೆಸ್ಕೋ 1995ರಿಂದ ಪ್ರತಿವರ್ಷ ಏಪ್ರಿಲ್ 23ನೇ ದಿನಾಂಕವನ್ನು 'ವಿಶ್ವ ಪುಸ್ತಕ ದಿನ'ವನ್ನಾಗಿ ಆಚರಿಸುತ್ತಿದೆ.
ಲವ್ ಆ್ಯಂಡ್ ಲಿಟರೇಚರ್
ಬಾರ್ಸಿಲೋನಾ, ಕಾತಲುನ್ಯ ರಾಜ್ಯದ ರಾಜಧಾನಿ. ಕತಲಾನ್ ಹಾಗೂ ಸ್ಪಾನಿಷ್ ಭಾಷೆಗಳ ಸಾಂಸ್ಕೃತಿಕ ಕೇಂದ್ರ. ಸ್ಪಾನಿಷ್‌ನ ಹೆಸರಾಂತ ಲೇಖಕ, ಕವಿ ಮ್ಯುಗೆನ್ ಸರ್ವಂತೆಸ್ 1616 ಏಪ್ರಿಲ್ 22ರಂದು ನಿಧನನಾಗಿದ್ದ. ಕವಿಯ ಗೌರವಾರ್ಥ ಗುಲಾಬಿ ವಿನಿಮಯ ಶುರುವಾಯಿತು. ಇಂಗ್ಲಿಷಿನ ಹೆಸರಾಂತ ನಾಟಕಕಾರ ಷೇಕ್ಸ್‌ಪಿಯರ್ ಸತ್ತದ್ದು 1616ರಲ್ಲೇ. ಇದು ಕೂಡ ಈ ಆಚರಣೆಗೆ ಮಹತ್ವ ತಂದುಕೊಟ್ಟಿತು. ಕಾತಲುನ್ಯ ಒಂದು ಹೆಜ್ಜೆ ಮುಂದೆ ಹೋಗಿ ಪ್ರೀತಿಯೊಂದಿಗೆ ಸಾಹಿತ್ಯವನ್ನು ಬೆಸೆಯಿತು. 'ಲವ್ ಆ್ಯಂಡ್ ಲಿಟರೇಚರ್' ಹಾಲು ಜೇನು ಸೇರಿದಂತೆ ಜನರ ಮನದಲ್ಲಿ ತಂಪೆರೆಯಿತು. ನಂತರ ಅದನ್ನು ಪೋಷಿಸಿಕೊಳ್ಳುತ್ತಲೇ ಬಂದರು. ಬೆಳಗ್ಗೆಯಿಂದ ರಾತ್ರಿಯವರೆಗೆ ನಡೆಯುವ ಪುಸ್ತಕ, ಗುಲಾಬಿಯ ಮಾರಾಟದ ಭರಾಟೆ ನೋಡಿಯೇ ಸವಿಯಬೇಕು. ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಸರದಿ ಬಂದಾಗ ವಿನಮ್ರತೆಯಿಂದ ತಮ್ಮ ನೆಚ್ಚಿನ ಲೇಖಕನ ಹಸ್ತಾಕ್ಷರವನ್ನು ಪುಸ್ತಕದ ಮೇಲೆ ಪಡೆದು ತಮ್ಮವರಿಗೆ ಉಡುಗೊರೆ ನೀಡಲು ಧಾವಿಸುವ ಜನರ ಹಿಂಡು ಒಮ್ಮೊಮ್ಮೆ ನನಗೆ ಪುಳಕದ ಪರಾಕಾಷ್ಠೆಗೆ ಒಯ್ಯುತ್ತದೆ. ಲೇಖಕರೂ ಅಷ್ಟೇ. ಯಾವುದೇ ಹಮ್ಮುಬಿಮ್ಮು ತೋರದೆ ಓದುಗರೊಂದಿಗೆ ಸಲೀಸಾಗಿ ಬೆರೆತು ನಲಿಯುತ್ತಾರೆ.
ಐಪ್ಯಾಡ್ ಯುಗದಲ್ಲೂ ಓದು
ಅಷ್ಟೇ ಏಕೆ, ಯಾವುದೇ ದಿನ ಮೆಟ್ರೋ ರೈಲು ಹೊಕ್ಕರೂ ನಮಗೆ ಕಾಣುವುದು ಪುಸ್ತಕದಲ್ಲಿ ಮುಖ ಹುದುಗಿಸಿರುವವರ ದೃಶ್ಯ. ಕಾಡುಹರಟೆ ಇಲ್ಲವೇ ಇಲ್ಲ. ಅದರಲ್ಲೂ ತರುಣ ತರುಣಿಯರು ಮೊಬೈಲ್, ಐಪ್ಯಾಡ್ ದಿನಗಳಲ್ಲೂ ಪುಸ್ತಕದಲ್ಲಿ ತಲ್ಲೀನರಾಗಿರುತ್ತಾರೆಂದರೆ ನೀವು ನಂಬಲೇಬೇಕು. ಸ್ಪೇನ್ ಮಾತ್ರವಲ್ಲ, ಪೋರ್ಚುಗಲ್, ಇಂಗ್ಲೆಂಡ್, ಜೆಕ್ ರಿಪಬ್ಲಿಕ್, ಹಂಗೇರಿ, ಕೊಸಾವೋ, ಬಲ್ಗೇರಿಯಾ, ರಷ್ಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಇದರ ಆಚರಣೆ ಉಂಟು. ಸ್ಪೇನ್‌ನಲ್ಲಂತೂ ಅರ್ಧ ವರ್ಷದಲ್ಲಾಗುವ ಪುಸ್ತಕ ಮಾರಾಟ ಒಂದೇ ದಿನದಲ್ಲಿ ಆಗುತ್ತದೆ.
75 ಲಕ್ಷ ಜನ ಇರುವ ಕಾತಲುನ್ಯ ರಾಜ್ಯದಲ್ಲಿ ಈ ಒಂದು ದಿನವೇ 15ರಿಂದ 20 ಲಕ್ಷ ಪುಸ್ತಕಗಳು ಮಾರಾಟವಾಗುತ್ತವೆ. ಅಷ್ಟೇ ಪ್ರಮಾಣದ ಗುಲಾಬಿ ಕೂಡ ಕೈ ಕೈ ಬದಲಾಯಿಸುತ್ತವೆ. ಸಾಮಾನ್ಯವಾಗಿ ಇಲ್ಲಿ ಒಂದು ಸಾಧಾರಣ ಪುಸ್ತಕದ ಬೆಲೆ 15ರಿಂದ 30 ಯುರೋ.
ಸ್ವತಃ 'ದಿಯಾ ದೇ ಸಂತ ಜೊರ್ದಿ'ಯಲ್ಲಿ ಪಾಲ್ಗೊಂಡು ಸಾಹಿತ್ಯ ಸಾಂಸ್ಕೃತಿಕ ಸಂಭ್ರಮದಿಂದ ಉಬ್ಬಿದ್ದ ಮನಸ್ಸು ಒಂದು ಕ್ಷಣದಲ್ಲಿ ಭಾವುಕವಾಯಿತು. ಭಾರತೀಯರ ಅಭಿರುಚಿ ಬದಲಾಗುವುದೇ? ಸಾವಿರ ಪುಸ್ತಕ ಮುದ್ರಿಸಿ ಅದನ್ನು ಮಾರಲಾಗದೆ ತಿಣುಕುತ್ತೇವಲ್ಲ. ಅದನ್ನು ಖರೀದಿಸಲಿ ಎಂದು ಗ್ರಂಥಾಲಯದ ಬಾಗಿಲಲ್ಲಿ ಕಾಯುತ್ತೇವಲ್ಲ!
ನಮ್ಮ ಓದಿನ ಅಭಿರುಚಿ ಬದಲಾಗದೆ ಸಮಾಜ ಬದಲಾಗಲು ಹೇಗೆ ಸಾಧ್ಯ? ನಮ್ಮ ಮಕ್ಕಳು ವಿಡಿಯೋ ನೋಡುತ್ತಾ ಸಮಯವನ್ನು ವ್ಯವಯಿಸುತ್ತಿದ್ದಾರೆ. ಓದಿನ ಅಭಿರುಚಿ ಬೆಳೆಸದಿದ್ದರೆ ಮುಂದಿನ ಸಮಾಜ ಉತ್ತಮ ಮಾರ್ಗದಲ್ಲಿ ನಡೆಯುವುದಾದರೂ ಹೇಗೆ? ಈ ನಿಟ್ಟಿನಲ್ಲಿ ನಾವು ಯುರೋಪಿಯನ್ನರಿಂದ ಒಂದಷ್ಟು ಕಲಿಯೋಣವೇ? .