Wednesday, July 1, 2026
Wednesday, July 1, 2026

ಬೇಕು, ಹಿರಿಯ ನಾಗರಿಕರಿಗೆ ಸಹಕಾರಿಯಾಗುವ ಪ್ರವಾಸೋದ್ಯಮ

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಿದೇಶಿ ಪ್ರವಾಸಿಗರಿಗೆ ಸರಿಸುಮಾರು ಎಲ್ಲ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿಯೂ ಪ್ರವೇಶ ಶುಲ್ಕವನ್ನು ವಿಧಿಸುವುದಿಲ್ಲ. ಅವರು ತಮ್ಮ ಪಾಸ್‌ಪೋರ್ಟ್ ತೋರಿಸಿದರೆ ಸಾಕು. ಚೀನಾ ದೇಶವು ಹಿರಿಯ ನಾಗರಿಕರಿಗಾಗಿ ವಿಶೇಷ ರೈಲು ಡಬ್ಬಿಗಳನ್ನು ಪರಿಚಯಿಸಿದೆ. ಅವುಗಳಲ್ಲಿ ವಿಶಾಲವಾದ ಸೀಟುಗಳು, ವೀಲ್ ಚೇರ್‌ಗಳನ್ನಿಡುವ ವಿಶೇಷ ಸ್ಥಳಗಳು, ಅಲಾರಾಂ ಬಟನ್ ವ್ಯವಸ್ಥೆ ಮುಂತಾದವನ್ನು ಅಳವಡಿಸಿರುವುದೇ ಅಲ್ಲದೆ ಹಿರಿಯ ಪ್ರಯಾಣಿಕರಿಗೆ ಎಮರ್ಜೆನ್ಸಿ ವೈದ್ಯಕೀಯ ಸೇವೆಯ ವ್ಯವಸ್ಥೆಯೂ ಇದೆ.

  • ಡಿ.ವಿ. ಗುರುಪ್ರಸಾದ್

ಗುರುಮಂತ್ರ

ಹೋದ ತಿಂಗಳು ನಾನು ಮುಂಬೈನ ಪಂಚತಾರಾ ಹೊಟೇಲ್ ಒಂದರಲ್ಲಿ ಎರಡು ದಿನಗಳ ಕಾಲ ತಂಗಬೇಕಾಗಿತ್ತು. ಅದೊಂದು ಹಳೆಯ ಹೊಟೇಲ್ ಆಗಿದ್ದು, ಅಲ್ಲಿಯ ಸ್ನಾನದ ಕೋಣೆಯಲ್ಲಿನ ಬಾತ್ ಟಬ್ ಎಷ್ಟು ಎತ್ತರದಲ್ಲಿತ್ತೆಂದರೆ ಅದರೊಳಗೆ ಹೋಗಿ ನಿಂತು ಷವರ್‌ನಿಂದ ಸ್ನಾನಮಾಡುವುದು ನನಗೆ ಬಹಳ ಪ್ರಯಾಸದಾಯಕವಾಯಿತು. ಸ್ನಾನ ಮಾಡುವಾಗ ಕಾಲು ಜಾರದಂತೆ ನೋಡಿಕೊಳ್ಳಲು ಆಂಟಿ-ಸ್ಕಿಡ್ ಮ್ಯಾಟ್ ಆಗಲಿ, ಇಲ್ಲವೇ ಕೈಗಳಿಂದ ಹಿಡಿದುಕೊಳ್ಳಲು ಗೋಡೆಗಳ ಮೇಲೆ ಹ್ಯಾಂಡಲ್‌ಗಳಾಗಲಿ ಇರಲೇ ಇಲ್ಲ. ಇದೇ ಕಾರಣಕ್ಕೆ ನಾನು ಅಲ್ಲಿಂದ ಕೂಡಲೇ ಚೆಕ್-ಔಟ್ ಮಾಡಿ ಹಿರಿಯ ನಾಗರಿಕರಿಗೆ ಅನುಕೂಲವಾಗುವಂಥ ರೀತಿಯಲ್ಲಿ ನಿರ್ಮಿಸಿರುವ ಇನ್ನೊಂದು ಹೊಟೇಲ್‌ನಲ್ಲಿ ತಂಗಿದೆ.

ಕೆಲವು ವರ್ಷಗಳ ಹಿಂದೆ ಇಂಥದ್ದೇ ಅನುಭವ ನಾನು ಡೆನ್ಮಾರ್ಕ್ನ ರಾಜಧಾನಿ ಕೋಪನ್‌ಹೇಗನ್‌ನ ಒಂದು ಹೊಟೇಲ್‌ನಲ್ಲಿ ತಂಗಿದಾಗಲೂ ಆಗಿತ್ತು. ಅದೊಂದು ಹೆರಿಟೇಜ್ ಹೊಟೇಲ್ ಆಗಿದ್ದು, ಅಲ್ಲಿ ನನಗೆ ಎರಡನೆಯ ಮಹಡಿಯಲ್ಲಿದ್ದ ಕೋಣೆಯೊಂದನ್ನು ಕೊಟ್ಟರು. ಆ ಕಟ್ಟಡದಲ್ಲಿ ಲಿಫ್ಟ್ ಸೌಕರ್ಯವೇ ಇರಲಿಲ್ಲ. ನನ್ನ ಎರಡು ಸೂಟ್‌ಕೇಸ್‌ಗಳನ್ನು ಮೇಲಕ್ಕೆತ್ತಿಕೊಂಡು ಕೋಣೆಯನ್ನು ತಲುಪಲು ಸಾಕುಬೇಕಾಯಿತು. ಏಕೆಂದರೆ ಯುರೋಪಿನ ದೇಶಗಳಲ್ಲಿ ಕೂಲಿ/ಪೋರ್ಟರ್ ಸೌಕರ್ಯ ಸಿಗುವುದಿಲ್ಲ. ನೆದರ್‌ಲ್ಯಾಂಡ್ಸ್‌ನಲ್ಲೂ ನನಗೆ ಹೀಗೇ ಆಗಿತ್ತು.

ಇದನ್ನೂ ಓದಿ: ವಿಶ್ವದಲ್ಲಿ ಅತ್ಯಂತ ಕಡಿಮೆ ಮರಗಳಿರುವ ದೇಶವಿದ್ದರೆ ಅದು ಕತಾರ್!

ಆದರೆ ಇಂಥ ಸನ್ನಿವೇಶಗಳು ಈಚೀಚೆಗೆ ವಿರಳವಾಗುತ್ತಾ ಬರುತ್ತಿವೆ. ನಾನು ಇಲ್ಲಿಯವರೆಗೆ ಪ್ರಯಾಣ ಮಾಡಿರುವ 56 ದೇಶಗಳ ಬಹುತೇಕ ಹೊಟೇಲ್‌ಗಳಲ್ಲಿ ಹಿರಿಯ ನಾಗರಿಕರಿಗೆ ಅನುಕೂಲಕರ ವ್ಯವಸ್ಥೆ ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ವಾಷ್‌ರೂಮ್‌ಗಳಲ್ಲಿ ಹಿರಿಯ ನಾಗರಿಕರಿಗೆ ಅನುಕೂಲವಾಗುವಂಥ ಕಮೋಡ್‌ಗಳು, ಸ್ನಾನದ ಕೋಣೆಗಳಲ್ಲಿ ಜಾರದಿರುವಂತೆ ಮ್ಯಾಟ್‌ಗಳನ್ನು ಹಾಕುವುದಲ್ಲದೆ ಗೋಡೆಗಳಿಗೆ ಹ್ಯಾಂಡಲ್‌ಗಳನ್ನು ಅಳವಡಿಸಲಾಗಿರುತ್ತದೆ. ಎತ್ತರವಿರದ ಮಂಚಗಳನ್ನು ಕೋಣೆಗಳಲ್ಲಿ ಹಾಕಲಾಗುತ್ತದೆ. ಕೆಲವು ಹೊಟೇಲ್‌ಗಳು ಹಿರಿಯ ನಾಗರಿಕರಿಗೆಂದೇ ವಿಶೇಷ ಕೋಣೆಗಳನ್ನು ಹೊಂದಿರುತ್ತವೆ. ಯುರೋಪಿನ ಹೆಸರಾಂತ ಹೊಟೇಲ್ ಚೈನ್‌ಗಳಾದ ಎನ್‌ಯು ಮತ್ತು ಬೆಸ್ಟ್ ವೆಸ್ಟರ್ನ್‌ಗಳು ಇಂಥ ಸವಲತ್ತುಗಳನ್ನು ಕೊಡುವುದರಲ್ಲಿ ಮುಂಚೂಣಿಯಲ್ಲಿವೆ.

ಬಹಳಷ್ಟು ಹಿರಿಯ ನಾಗರಿಕರು ಚಾಲನಾ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅದು ಮಂಡಿ ನೋವಿನ ಸಮಸ್ಯೆ ಇರಬಹುದು; ದೇಹದ ಸಮತೋಲನದ ಸಮಸ್ಯೆ ಇರಬಹುದು; ಇಲ್ಲವೇ ವೃದ್ಧಾಪ್ಯ ತರುವ ಇತರ ದೈಹಿಕ ತೊಂದರೆಗಳಿರಬಹುದು. ಹಿರಿಯ ನಾಗರಿಕರು ನಿಧಾನವಾಗಿ ಓಡಾಡುವವರು. ಅವರಿಗೆ ಬಹಳ ಸಮಯ ಒಂದು ಜಾಗದಲ್ಲಿ ನಿಲ್ಲಲು ಸಾಧ್ಯವಿಲ್ಲ. ದೂರ ಕ್ರಮಿಸಲು ಮತ್ತು ಮೆಟ್ಟಿಲುಗಳನ್ನು ಹತ್ತಲು ಕಷ್ಟವಾಗುತ್ತದೆ. ಹೀಗಾಗಿ ಪ್ರವಾಸಿ ತಾಣಗಳಲ್ಲಿ ಅವರಿಗಾಗಿಯೇ ವಿಶೇಷ ಸೌಕರ್ಯಗಳ ಅವಶ್ಯಕತೆಯಿದೆ. ಮೆಟ್ಟಿಲುಗಳ ಎತ್ತರ ಕಡಿಮೆಯಿರುವಂತೆ ನೋಡಿಕೊಳ್ಳುವುದು, (ಯುರೋಪಿನ ಹಲವು ದೇಶಗಳಲ್ಲಿ ಬಸ್ ಮತ್ತು ರೈಲುಗಳ ಮೆಟ್ಟಿಲುಗಳು ನೆಲಮಟ್ಟದಿಂದ ಆರೇಳು ಇಂಚುಗಳಷ್ಟೇ ಎತ್ತರವಿರುತ್ತವೆ) ಅವುಗಳ ಪಕ್ಕದಲ್ಲಿ ಹಿಡಿಗಂಬಗಳು ಮತ್ತು ರ‍್ಯಾಂಪ್‌ಗಳನ್ನು ಅಳವಡಿಸುವುದು, ಮೆಟ್ಟಿಲುಗಳನ್ನು ಹತ್ತಲಾರದಂಥವರಿಗಾಗಿ ಲಿಫ್ಟ್‌ಗಳು, ಟ್ರಾವೆಲೇಟರ್‌ಗಳು, ಎಸ್ಕಲೇಟರ್‌ಗಳನ್ನು ಅಳವಡಿಸುವುದು ಇಂಥ ಕೆಲವು. ಇವಲ್ಲದೆ ವಿಶಾಲವಾದ ಸ್ಥಳಗಳಲ್ಲಿರುವ ಪ್ರವಾಸಿ ತಾಣಗಳಾದ ಹಂಪಿ, ಪೆಟ್ರಾ, ರೋಮನ್ ಫೋರಂ ಮುಂತಾದ ಕಡೆಗಳಲ್ಲಿ ಹಿರಿಯ ನಾಗರಿಕರು ಓಡಾಡಲು ಅನುಕೂಲವಾಗುವಂತೆ ‘ಗಾಲ್ಫ್ ಕಾರ್ಟ್’ ಅಥವಾ ‘ಬಗ್ಗೀ’ಗಳ ವ್ಯವಸ್ಥೆ ಮಾಡುವುದು, ವಿರಮಿಸಿಕೊಳ್ಳಲು ಅಲ್ಲಲ್ಲಿ ಬೆಂಚುಗಳನ್ನು ಅಳವಡಿಸುವುದೂ ಸೀನಿಯರ್ ಸಿಟಿಜನ್ಸ್‌ಗಳ ಅನುಕೂಲಕ್ಕಾಗಿ ತೆಗೆದುಕೊಳ್ಳುವ ಕೆಲವು ಕ್ರಮಗಳು.

ಕೆಲವು ದೇಶಗಳು ಹಿರಿಯ ನಾಗರಿಕರ ಬಗ್ಗೆ ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳುತ್ತಲೇ ಇವೆ. ನಾನು ಬೆಲ್ಜಿಯಂ ದೇಶದ ಘೆಂಟ್ ನಗರಕ್ಕೆ ಹೋದಾಗ ಅಲ್ಲಿನ ಬಸ್ ಮತ್ತು ಟ್ರಾಮ್‌ಗಳಲ್ಲಿ ಸಂಚರಿಸುವಾಗ ಪ್ರಯಾಣದ ಶುಲ್ಕವನ್ನೇ ಕೊಡಲಿಲ್ಲ. ಏಕೆಂದರೆ ಅಲ್ಲಿ ಎಲ್ಲ ಸೀನಿಯರ್ ಸಿಟಿಜೆನ್ಸ್‌ಗಳಿಗೂ ಉಚಿತ ಪ್ರಯಾಣ ಸೌಲಭ್ಯವಿದೆ. ನೆದರ್‌ಲ್ಯಾಂಡ್ಸ್ ದೇಶದಿಂದ ಹಿಡಿದು ಯುರೋಪಿನ ಸರಿಸುಮಾರು ಎಲ್ಲ ದೇಶಗಳಲ್ಲಿಯೂ ಹಿರಿಯ ನಾಗರಿಕರಿಗೆ ರೈಲು, ವಿಮಾನ ಮತ್ತು ಬಸ್‌ಗಳ ದರದಲ್ಲಿ ಡಿಸ್ಕೌಂಟ್ ಕೊಡಲಾಗುತ್ತದೆ. ಇದು ಸಾಲದೆಂಬಂತೆ ಮ್ಯೂಸಿಯಂಗಳು ಮತ್ತು ಇತರ ಪ್ರವಾಸಿ ತಾಣಗಳ ಪ್ರವೇಶ ಶುಲ್ಕದಲ್ಲಿಯೂ ಹಿರಿಯರಿಗೆ ಸಾಕಷ್ಟು ರಿಯಾಯಿತಿಯನ್ನು ನೀಡುತ್ತಾರೆ.

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಿದೇಶಿ ಪ್ರವಾಸಿಗರಿಗೆ ಸರಿಸುಮಾರು ಎಲ್ಲ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿಯೂ ಪ್ರವೇಶ ಶುಲ್ಕವನ್ನು ವಿಧಿಸುವುದಿಲ್ಲ. ಅವರು ತಮ್ಮ ಪಾಸ್‌ಪೋರ್ಟ್ ತೋರಿಸಿದರೆ ಸಾಕು. ಚೀನಾ ದೇಶವು ಹಿರಿಯ ನಾಗರಿಕರಿಗಾಗಿ ವಿಶೇಷ ರೈಲು ಡಬ್ಬಿಗಳನ್ನು ಪರಿಚಯಿಸಿದೆ. ಅವುಗಳಲ್ಲಿ ವಿಶಾಲವಾದ ಸೀಟುಗಳು, ವೀಲ್ ಚೇರ್‌ಗಳನ್ನಿಡುವ ವಿಶೇಷ ಸ್ಥಳಗಳು, ಅಲಾರಾಂ ಬಟನ್ ವ್ಯವಸ್ಥೆ ಮುಂತಾದವನ್ನು ಅಳವಡಿಸಿರುವುದೇ ಅಲ್ಲದೆ ಹಿರಿಯ ಪ್ರಯಾಣಿಕರಿಗೆ ಎಮರ್ಜೆನ್ಸಿ ವೈದ್ಯಕೀಯ ಸೇವೆಯ ವ್ಯವಸ್ಥೆಯೂ ಇದೆ. ಎಲ್ಲ ಪ್ರಯಾಣಿಕರಿಗೂ ಉತ್ತಮ ಸೇವೆಯನ್ನು ನೀಡಲು ವಿಶೇಷ ತರಬೇತಿಯನ್ನು ಹೊಂದಿರುವ ಸಿಬ್ಬಂದಿಯನ್ನು ನೇಮಿಸಲಾಗಿದೆ. ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿರುವ ಪ್ರಯಾಣಿಕರಿಗೆ ವಿಶೇಷ ಭೋಜನವನ್ನು ಕೊಡಲಾಗುತ್ತದೆ. 2028ರಲ್ಲಿ ಇಂಥ ವ್ಯವಸ್ಥೆಯಿರುವ 180 ರೈಲುಗಳನ್ನು ಪರಿಚಯಿಸಲು ಅಲ್ಲಿನ ರೈಲ್ವೆ ಇಲಾಖೆ ಉದ್ದೇಶಿಸಿದೆ. ವಿಪರ್ಯಾಸವೆಂದರೆ ಭಾರತೀಯ ರೈಲ್ವೆ ಹಿರಿಯ ನಾಗರಿಕರಿಗೆ ಕೊಡುತ್ತಿದ್ದ ಡಿಸ್ಕೌಂಟ್ ದರಗಳ ಸೌಲಭ್ಯವನ್ನು ಐದಾರು ವರ್ಷಗಳ ಹಿಂದೆಯೇ ಹಿಂಪಡೆದಿದೆ. ಈಗ ಸಿಗುವ ಮುಖ್ಯ ಸೌಲಭ್ಯವೆಂದರೆ ಲೋವರ್ ಬರ್ತ್ ಮತ್ತು ಕೆಲವು ನಿಲ್ದಾಣಗಳಲ್ಲಿ ಬಗ್ಗೀ ಸೌಲಭ್ಯ ಮಾತ್ರ. ಆದರೆ ನಮ್ಮ ಏರ್‌ಲೈನ್ಸ್‌ಗಳು 60ಕ್ಕಿಂತ ಮೇಲ್ಪಟ್ಟು ವಯಸ್ಸಾಗಿರುವವರಿಗೆ ತಮ್ಮ ದರಗಳಲ್ಲಿ ರಿಯಾಯಿತಿ ನೀಡುತ್ತಿವೆ.

ಅಮೆರಿಕದ ವಿವಿಧ ರಾಜ್ಯಗಳ ವಸ್ತುಸಂಗ್ರಹಾಲಯಗಳು, ಆರ್ಟ್ ಗ್ಯಾಲರಿಗಳು, ರಾಷ್ಟ್ರೀಯ ಉದ್ಯಾನಗಳು ಪ್ಲಾನೆಟೇರಿಯಂ ಮುಂತಾದ ತಾಣಗಳಲ್ಲಿ ವಿದೇಶಿ ಹಿರಿಯ ನಾಗರಿಕರೂ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ಸೌಲಭ್ಯವನ್ನು ಪಡೆಯಬಹುದು. ಕೆಲವೆಡೆ ಹಿರಿಯ ನಾಗರಿಕರಿಗೆ ಉಚಿತ ಪ್ರವೇಶವೂ ಉಂಟು. ಖಾಸಗಿಯವರು ನಡೆಸುವ ಡಿಸ್ನಿ ಲ್ಯಾಂಡ್‌ನಲ್ಲಿ 65 ವರ್ಷ ಹಾಗೂ ಮೇಲ್ಪಟ್ಟವರಿಗೆ 10 ರಿಂದ 30% ರಿಯಾಯತಿಯಿದೆ.

ವಿದೇಶಗಳಲ್ಲಿ ಪ್ರವಾಸೋದ್ಯಮ ನೀತಿಯನ್ನು ರೂಪಿಸುವಾಗ ಅಲ್ಲಿಯ ಸರಕಾರಗಳು ಹಾಗೂ ಖಾಸಗಿ ಸಂಸ್ಥೆಗಳು ಹಿರಿಯ ನಾಗರಿಕರನ್ನು ಗಮನದಲ್ಲಿಡುವುದನ್ನು ಮರೆಯುವುದಿಲ್ಲ. ಇದಕ್ಕೊಂದು ವ್ಯಾವಹಾರಿಕ ಕಾರಣವೂ ಇದೆ. ಲಭ್ಯವಿರುವ ಅಂಕಿ ಅಂಶಗಳ ಅನ್ವಯ 2023ರಲ್ಲಿ ವಿಶ್ವದ ಜನಸಂಖ್ಯೆಯಲ್ಲಿ ಹಿರಿಯ ನಾಗರಿಕರ (65 ವರ್ಷ ವಯಸ್ಸಿಗಿಂತ ಮೇಲೆ) ಪಾಲು ಶೇ. 10 ರಷ್ಟಿತ್ತು. ಈ ಪ್ರಮಾಣವು 2050ರ ವೇಳೆಗೆ ಶೇ.16 ರಷ್ಟಾಗುತ್ತದೆ ಎನ್ನುವ ಅಂದಾಜಿದೆ. 60 ವರ್ಷಕ್ಕಿಂತ ಮೇಲ್ಪಟ್ಟು ವಯಸ್ಸಾದ ಪ್ರಯಾಣಿಕರ ಸಂಖ್ಯೆ ಒಟ್ಟಾರೆ ಪ್ರಯಾಣಿಕರ ಸಂಖ್ಯೆಯ ಶೇ. 13 ರಿಂದ 40 ರಷ್ಟು. ಯುರೋಪಿನಲ್ಲಿ ಶೇ.49 ರಷ್ಟು ಹಿರಿಯ ನಾಗರಿಕರು ಪ್ರತಿವರ್ಷ ಒಂದಾದರೂ ವಿದೇಶ ಪ್ರವಾಸವನ್ನು ಮಾಡಿಯೇ ತೀರುತ್ತಾರೆ.

ಹಿರಿಯ ನಾಗರಿಕರ ಬಳಿ ಖರ್ಚುಮಾಡಬಹುದಾದ ಆದಾಯ ಹೆಚ್ಚಾಗಿ ಇರುವುದರಿಂದ ಅವರು ತಮ್ಮ ಪ್ರವಾಸಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲು ಹಿಂಜರಿಯುವುದಿಲ್ಲ. ಅವರಿಗೆ ಪ್ರವಾಸಕ್ಕಾಗಿ ಸಾಕಷ್ಟು ಸಮಯ ಲಭಿಸುವುದರಿಂದ ಅವರು ಇತರರಿಗೆ ಹೋಲಿಸಿದರೆ ಹೆಚ್ಚಿನ ಅವಧಿಗೆ ಪ್ರವಾಸವನ್ನು ಮಾಡುತ್ತಾರೆ. ಬಹುತೇಕ ಹಿರಿಯ ಪ್ರಯಾಣಿಕರು ಉತ್ತಮ ವಿದ್ಯಾಭ್ಯಾಸವನ್ನು ಹೊಂದಿದ್ದು, ಅವರಿಗೆ ಹೊಸ ಹೊಸ ಅನುಭವಗಳನ್ನು ಹೊಂದುವ ಬಯಕೆಯಿದೆ ಎಂದು ಒಂದು ಅಧ್ಯಯನ ತಿಳಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ ಅವರು ವರ್ಷದ ಎಲ್ಲ ಕಾಲವೂ ಪ್ರವಾಸ ಮಾಡಲು ಹಿಂಜರಿಯುವುದಿಲ್ಲ. ಹೀಗಾಗಿ ಅವರಿಗಾಗಿ ಉತ್ತಮ ಸೌಲಭ್ಯವನ್ನು ಕೊಟ್ಟರೆ ತಮ್ಮ ಉದ್ಯಮ ಲಾಭದಾಯಕವಾಗುತ್ತದೆ ಎಂದು ಬಹಳ ಜನರಿಗೆ ಮನವರಿಕೆಯಾಗಿದೆ. ಇದೇ ಕಾರಣಕ್ಕಾಗಿ ಖಾಸಗಿ ವಲಯ ಮತ್ತು ಸರಕಾರಿ ವಲಯಗಳಲ್ಲಿ ಪ್ರವಾಸಿ ತಾಣಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವಾಗ ಹಿರಿಯ ನಾಗರಿಕರ ಬೇಕುಬೇಡಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

ವಿದೇಶಗಳಲ್ಲಿ ಮಾತ್ರವಲ್ಲ, ಭಾರತದಲ್ಲಿಯೂ ಹಲವು ಪ್ರವಾಸಿ ಸಂಸ್ಥೆಗಳು ಹಿರಿಯ ನಾಗರಿಕರಿಗೇ ಮೀಸಲಾದ ಗ್ರೂಪ್ ಟೂರ್ ವ್ಯವಸ್ಥೆಯನ್ನು ರೂಪಿಸಿವೆ. ಏಕೆಂದರೆ ಭಾರತದ ಒಟ್ಟಾರೆ ಪ್ರಯಾಣಿಕರ ಸಂಖ್ಯೆಯ ಶೇ. 35 ರಷ್ಟು ಪಾಲು ಅವರದ್ದೇ. ಭಾರತದ ಶೇ.90 ರಷ್ಟು ಹಿರಿಯ ನಾಗರಿಕರು ತಮ್ಮ ಮಾನಸಿಕ ಸ್ವಸ್ಥತೆಗೆ ಪ್ರಯಾಣ ಅತ್ಯಗತ್ಯ ಎಂದು ಭಾವಿಸುತ್ತಾರೆಂದು ಸಮೀಕ್ಷೆಯೊಂದು ತಿಳಿಸಿದೆ. ಇವರೆಲ್ಲರೂ ಪ್ರತಿ ವರ್ಷವೂ ಕನಿಷ್ಟ ಒಂದು ಬಾರಿ ಸ್ವದೇಶದೊಳಗಾಗಲಿ ಇಲ್ಲವೇ ವಿದೇಶಕ್ಕಾಗಲಿ ಪ್ರವಾಸವನ್ನು ಮಾಡುತ್ತಾರೆ. ಇಂಥವರ ಸಂಖ್ಯೆ ಏರುತ್ತಲೇ ಇದೆ.

ವಯೋವೃದ್ಧರಿಗೆ ಅನುಕೂಲವಾಗುವಂಥ ದೈನಂದಿನ ಕಾರ್ಯಕ್ರಮಗಳು, 24 ಗಂಟೆಗಳ ವೈದ್ಯಕೀಯ ಸೌಲಭ್ಯ, ಮೆಡಿಕಲ್ ಇನ್ಸೂರೆನ್ಸ್, ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆ ಸೌಲಭ್ಯ, ಪ್ರವಾಸಿ ತಾಣಗಳಲ್ಲಿ ಸೂಕ್ತ ರೀತಿಯ ಸಹಾಯ, ಆಹಾರ ವ್ಯವಸ್ಥೆ ಮುಂತಾದವಕ್ಕೆ ಆದ್ಯತೆಯನ್ನು ಟ್ರಾವೆಲ್ ಏಜೆನ್ಸಿಗಳು ನೀಡುತ್ತಿವೆ. ಯುರೋಪಿಯನ್ ನೆಟ್‌ವರ್ಕ್ ಫಾರ್ ಆಕ್ಸೆಸಿಬಲ್ ಟೂರಿಸಂ ಎನ್ನುವ ಸಂಸ್ಥೆ ಹಿರಿಯ ನಾಗರಿಕರಿಗೆ ಪ್ರವಾಸ ಸೌಲಭ್ಯಗಳನ್ನು ರೂಪಿಸುವುದರಲ್ಲಿ ಮುಂಚೂಣಿಯಲ್ಲಿದೆ.

ಮುಂದಿನ ಕೆಲವು ವರ್ಷಗಳಲ್ಲಿ ಪ್ರವಾಸೋದ್ಯಮದ ಫೋಕಸ್ ಹಿರಿಯ ನಾಗರಿಕರತ್ತ ಹೋಗುವುದು ನಿಶ್ಚಯ. ಹಾಗಾದಾಗ ಅವರಲ್ಲಿ ಹೆಚ್ಚಿನ ಜನರು ಪ್ರವಾಸವನ್ನು ಮಾಡಲು ಹಿಂಜರಿಯುವುದಿಲ್ಲ. ಅವರಿಗೆ ಮುಂಬೈನಲ್ಲಿ ನನಗಾದಂಥ ಅನುಭವ ಆಗುವುದಿಲ್ಲ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?