• ಆಕಾಂಕ್ಷ ಶೇಖರ್‌

ಅನಾದಿ ಕಾಲದಿಂದಲೂ ʼದೇಶ ಸುತ್ತು, ಕೋಶ ಓದುʼ ಅನ್ನೋ ಮಾತನ್ನು ನಾವು-ನೀವೆಲ್ಲಾ ಕೇಳುತ್ತಲೇ ಬಂದಿದ್ದೇವೆ. ಹಾಗೆ ನೋಡಿದರೆ ಕೋಶ ಓದೋದು ಕೆಲವರಿಗೆ ಕಷ್ಟವಾದ್ರೂ, ದೇಶ ಸುತ್ತೋದು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ? ಅದರಲ್ಲೂ ಈ ಸೋಷಿಯಲ್‌ ಮೀಡಿಯಾ ಪ್ರಭಾವ ಹೆಚ್ಚಾದ ಮೇಲಂತೂ ಪ್ರವಾಸಕ್ಕೆ ಹೊರಡುವವರ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಇತ್ತೀಚೆಗೆ ನಡೆದಿರೋ ಜಾಗತಿಕ ಸಮೀಕ್ಷೆ ಪ್ರಕಾರ, ಸುಮಾರು 35% ಜನರು ತಮ್ಮ ಪ್ರಯಾಣಕ್ಕೆ ಸಾಮಾಜಿಕ ಮಾಧ್ಯಮಗಳಿಂದ ಪ್ರೇರಣೆ ಪಡೆಯುತ್ತಾರಂತೆ! ಹೀಗಾಗಿ ಇವತ್ತಿನ ಪ್ರಪಂಚದಲ್ಲಿ ಪ್ರವಾಸ ಒಂದು ಟ್ರೆಂಡ್‌ ಆಗಿ ಬದಲಾಗಿರುವುದರಲ್ಲಿ ಅಚ್ಚರಿಯೇನಿಲ್ಲ. ಆದರೆ ಈ ಪ್ರವಾಸಿ ಪ್ರಪಂಚದಲ್ಲಿ ಒಂದಷ್ಟು ರೂಲ್ಸ್ ಇವೆ. ಅದನ್ನು ನಾವೆಲ್ಲ ಫಾಲೋ ಮಾಡಲೇಬೇಕು ಅಂದ್ರೆ ನಂಬ್ತೀರಾ? ಈ ರೂಲ್ಸ್ ಏನೂ ಸಂವಿಧಾನದ ಕೊನೆ ಪುಟದಲ್ಲಿಲ್ಲ. ಬದಲಿಗೆ ನಮ್ಮಲ್ಲೇ ಇದೆ. ಇವು ಒಂದು ವಿಧದ ಅಲಿಖಿತ ನಿಯಮಗಳು. ಹಾಗೆ ನೋಡಿದರೆ ಈಗಾಗಲೇ ಗೊತ್ತಿಲ್ಲದಂತೆ ನಾವೊಂದಿಷ್ಟು‌ ರೂಲ್ಸ್‌ಗಳನ್ನು ಫಾಲೋ ಮಾಡುತ್ತಿರುತ್ತೀವಿ. ಕೆಲವನ್ನು ಮರೆತಿರುತ್ತೀವಿ. ಇನ್ನು ಕೆಲವೊಂದಿಷ್ಟನ್ನು ಗೊತ್ತಿದ್ದರೂ ನಿರ್ಲಕ್ಷ್ಯ ಮಾಡುತ್ತಾ ಬಂದಿರ್ತೀವಿ. ಹಾಗಾದರೆ ಆ ಅಲಿಖಿತ ನಿಯಮಗಳಾವುವು ಅಂತ ಕಣ್ಣಾಯಿಸೋಣ.

eco tourism village

ಕಣ್ಣೆಂಬ ಕ್ಯಾಮೆರಾ ಬಳಸಿ

ಇತ್ತೀಚೆಗೆ ಎಲ್ಲರಲ್ಲೂ ಒಂದು ‘ಸಾಂಕ್ರಾಮಿಕ ವ್ಯಸನ’ ಕಂಡುಬರುತ್ತಿದೆ. ಯಾವುದೇ ಪ್ರವಾಸಿ ತಾಣಕ್ಕೆ ಭೇಟಿ ಕೊಟ್ಟರೂ ಆ ಸ್ಥಳದ ರಮಣೀಯತೆಯನ್ನು ಸವಿಯುವ ಮೊದಲೇ ಮೊಬೈಲ್ ಕ್ಯಾಮೆರಾ ತೆಗೆದು ಸಾಲುಸಾಲು ಫೊಟೋ ಕ್ಲಿಕ್ಕಿಸುವುದು ಹಾಗೂ ರೀಲ್ಸ್‌ ಮಾಡುವುದು. ಅಸಲಿಗೆ ಫೊಟೋ ಕ್ಲಿಕ್ಕಿಸುವುದಾಗಲೀ ಅಥವಾ ವಿಡಿಯೋ ರೆಕಾರ್ಡ್‌ ಮಾಡುವುದಾಗಲಿ ಯಾವುದೂ ತಪ್ಪಲ್ಲ. ನಿಷಿದ್ಧವೂ ಅಲ್ಲ. ಆದರೆ ಅದು ನಮ್ಮ ನೈಜ ಅನುಭವಕ್ಕೆ ಎಂದಿಗೂ ಧಕ್ಕೆ ಮಾಡಕೂಡದು. ರೀಲ್ಸ್‌ ಮಾಡುವ ಭರದಲ್ಲಿ ನಾವು ರಿಯಲ್‌ ಅನುಭವದ ಮೌಲ್ಯವನ್ನು ಕಡೆಗಣಿಸಬಾರದು. ಆ ಒಂದು ನಿರ್ದಿಷ್ಟ ಸ್ಥಳವನ್ನು ಕಣ್ತುಂಬಿಕೊಳ್ಳಲು ನಾವು ಸಮಯ, ಹಣ ಮತ್ತು ಶ್ರಮ ಎಲ್ಲವನ್ನೂ ವ್ಯಯಿಸಿ ಹೋಗಿರುತ್ತೇವೆ. ಹೀಗಿರುವಾಗ ಮೊದಲು ಕಣ್ಣೆಂಬ ಕ್ಯಾಮೆರಾ ಬಳಸಿ ಆ ಸ್ಥಳದ ಸೌಂದರ್ಯವನ್ನು ತೃಪ್ತಿಯಾಗುವಷ್ಟು ಸೆರೆ ಹಿಡಿದು, ಮನಸಿನಲ್ಲಿ ಅದರ ಪ್ರತಿಬಿಂಬವನ್ನು ಮೂಡಿಸಿಕೊಂಡ ನಂತರವಷ್ಟೇ ಮೊಬೈಲ್‌ ಕ್ಯಾಮೆರಾಗೆ ಕೆಲಸ ಕೊಡಬೇಕು. ನೆನಪಿಡಿ; ಇದು ನಾವು ಮರೆತಿರುವ ಆದರೆ ಮರೆಯದೇ ಪಾಲಿಸಬೇಕಾದ ಪ್ರವಾಸದ ಅಲಿಖಿತ ನಿಯಮ. ಏನಂತೀರಾ?

himavad gopalaswamy betta

ಸ್ಥಳದ ಹೆಸರಲ್ಲ - ವಿಶೇಷತೆ ತಿಳಿದುಕೊಳ್ಳಿ:

ನಾವು ಯಾವುದೇ ಸ್ಥಳಕ್ಕೆ ಪ್ರವಾಸ ಹೊರಟರೂ ಸರಿಯೇ, ಆ ಸ್ಥಳದ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳುವುದು ಅಂದರೆ ಆ ಸ್ಥಳದ ಆತ್ಮವನ್ನು ಅರಿತುಕೊಂಡಂತೆ. ನಾವು ಸ್ನೇಹಿತರೊಟ್ಟಿಗೆ ಗೋವಾ ಟ್ರಿಪ್ಪಿಗೆ ಹೊರಟಿರಲಿ ಅಥವಾ ಕುಟುಂಬದೊಟ್ಟಿಗೆ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಹೊರಟಿರಲಿ, ಆ ಸ್ಥಳದ ಇತಿಹಾಸ, ಹಿನ್ನೆಲೆ, ಆಚಾರ-ವಿಚಾರ, ಸಂಸ್ಕೃತಿ, ವೈಶಿಷ್ಟ್ಯಗಳನ್ನು ಮೊದಲು ಓದಿಕೊಂಡು ಆ ನಂತರ ಸ್ಥಳಕ್ಕೆ ಭೇಟಿಕೊಟ್ಟರೆ ಅದರಿಂದ ಸಿಗುವ ಆನುಭವ ವಿವರಿಸಲಸಾಧ್ಯ. ಪ್ರವಾಸ ಸ್ಥಳದ ಕುರಿತಾಗಿನ ಪೂರ್ವ ಅಧ್ಯಯನ ಇಡೀ ಪ್ರವಾಸಕ್ಕೆ ವಿಶಿಷ್ಟ ಆಯಾಮವನ್ನು ನೀಡುವುದರೊಟ್ಟಿಗೆ, ಆ ಸ್ಥಳದ ಕುರಿತಾಗಿನ ನಮ್ಮ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿರ್ದಿಷ್ಟ ಸ್ಥಳಕ್ಕೆ ಹೋದಾಗ ಅಲ್ಲಿ ಸಿಗುವ ಕಲ್ಲು ಶಿಲೆ ಅನಿಸಿದರೆ, ನಡೆದುಕೊಂಡು ಹೋಗುವ ರಸ್ತೆ ಸ್ವರ್ಗದ ರಹದಾರಿ ಅನಿಸುತ್ತದೆ. ಕಾಣಸಿಗುವ ಸಾಲು ಕಂಬಗಳು ನೂರು ಕತೆಗಳನ್ನು ತನ್ನೊಡಲಲ್ಲಿ ಕಾಪಿಟ್ಟುಕೊಂಡಿವೆಯೇನೋ ಎನಿಸುತ್ತದೆ. ಈ ಅನುಭವ ಅರಿವಿನಿಂದ ಮಾತ್ರ ಸಾಧ್ಯ ಅಲ್ಲವೇ? ನೆನಪಿರಲಿ: ನಮ್ಮ ಪ್ರವಾಸ ಕೇವಲ ಫೋಟೋ ಕ್ಲಿಕ್ಕಿಸಲಿಕ್ಕಷ್ಟೇ ಸೀಮಿತವಾಗದೆ, ಸಾರ್ಥಕಯಾತ್ರೆ ಆಗಲಿ. ಈ ಅಲಿಖಿತ ನಿಯಮ ಪಾಲಿಸಿ ನೋಡಿ, ಪ್ರವಾಸಕ್ಕೆ ಸಾರ್ಥಕತೆಯ ಮೆರಗು ನೀಡಿ!

ಪರಿಸರ ಸ್ನೇಹಿ ಪ್ರವಾಸಿ ಆಗಬೇಕು

ಗಮನಿಸಿ ನೋಡಿ.. ಇತ್ತೀಚಿನ ದಿನಗಳಲ್ಲಿ ನಾವು ಭೇಟಿ ನೀಡುವ ಬಹುತೇಕ ಪ್ರವಾಸಿ ತಾಣಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌, ಟಿಶ್ಯೂ, ತಂಬಾಕು ಅಥವಾ ಜಂಕ್‌ ಪ್ಯಾಕೆಟ್ಟುಗಳು ಕಾಣಸಿಗುತ್ತವೆ. ಅಸಲಿಗೆ ಪ್ರಕೃತಿಯ ಸ್ವಚ್ಛ ಸುಂದರ ಮಡಿಲಿಗೆ ಕಸವ ತುಂಬಿದವರಾರು? ನಾವೇ! ಪ್ರಕೃತಿಯಿಂದ ಎಲ್ಲವನ್ನೂ ಉಚಿತವಾಗಿ ಪಡೆಯುತ್ತಾ, ನಾವು ಅದರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ.

ಪ್ರಕೃತಿಯನ್ನು ಕೇವಲ ಮೆಚ್ಚುವುದಲ್ಲ ಅದನ್ನು ನಮ್ಮ ಮನೆಯ ಅಂಗಳದಂತೆ ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ಪ್ರೀತಿಯಿಂದ ಪೋಷಿಸಬೇಕು.

ಹಾಗಾದರೆ ಪ್ರಕೃತಿ ಪೋಷಣೆಗೆ ಯಾವ್ಯಾವ ಕ್ರಮ ತೆಗೆದುಕೊಳ್ಳಬಹುದು?

ಮೊತ್ತಮೊದಲಿಗೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಪುನರ್ಬಳಕೆಯಾಗಬಲ್ಲ(Eco-friendly) ಪ್ಲೇಟ್‌, ಸ್ಲೂನ್‌ ಹಾಗೂ ಇತರ ಪದಾರ್ಥಗಳನ್ನು ಹೆಚ್ಚು- ಹೆಚ್ಚು ಬಳಸುವಂತಾಗಬೇಕು.

foot steps

ತಿಂಡಿ – ತಿನಿಸು ತಿನ್ನುವ ಪ್ಯಾಕೆಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯದೆ, ನಾಲ್ಕು ಹೆಜ್ಜೆ ನಡೆದರೂ ಸರಿಯೇ ಸಮೀಪದ ಕಸದ ಬುಟ್ಟಿಗೆ ಹಾಕಬೇಕು. ಸುತ್ತಮುತ್ತ ತ್ಯಾಜ್ಯ ವಸ್ತುಗಳು ಕಂಡರೆ ʼಈ ಕೆಲಸ ನನ್ನದಲ್ಲʼ ಅನ್ನುವ ಬದಲಿಗೆ, ಕಾಣುವ ಕಸವನ್ನು ಸಂಗ್ರಹಿಸಿ ಸರಿಯಾದ ಜಾಗಕ್ಕೆ ಹಾಕಬೇಕು. ಒಂದು ಸಣ್ಣ ಕಸ ಸಂಗ್ರಹಿಸುವ ಚೀಲವನ್ನು ಜೇಬು ಅಥವಾ ಬ್ಯಾಗಿನಲ್ಲಿ ಸದಾ ಇಟ್ಟುಕೊಳ್ಳಬೇಕು. ಪ್ರವಾಸಿ ಸ್ಥಳದಿಂದ ಹಿಂದಿರುಗುವಾಗ, ಹೆಜ್ಜೆ ಗುರುತುಗಳನ್ನು ಬಿಟ್ಟು ಬರಬೇಕೇ ಹೊರತು ಕಸದ ರಾಶಿಯನ್ನಲ್ಲ!

ಎಲ್ಲೆಂದರಲ್ಲಿ ಉಗುಳುವುದು, ಸಿಗರೇಟ್‌ ತುಂಡುಗಳನ್ನು ಬಿಸಾಕುವುದು, ನೀರನ್ನು ಅನವಶ್ಯಕ ಪೋಲು ಮಾಡುವುದನ್ನು ನಿಲ್ಲಿಸುವ ಶಪಥಗೈಯ್ಯಬೇಕು.ಇತರರಿಗೂ ಸ್ವಚ್ಛತೆಯ ಮಹತ್ವವನ್ನು ತಿಳಿಸಿ ನಾವೂ ಅದನ್ನು ಮಾತು ಮತ್ತು ಕೃತಿಯಲ್ಲಿ ಜಾರಿಗೊಳಿಸಿಕೊಳ್ಳಬೇಕು.

ಒಟ್ಟಾರೆ, ಪ್ರಕೃತಿ ಮಾತೆಗೆ ಅನವಶ್ಯಕ ತೊಂದರೆ ನೀಡದೆ, ಆಕೆಯನ್ನು ಸ್ವಾಭಾವಿಕ ಸ್ಥಿತಿಯಲ್ಲಿ ಉಳಿಸಿದರೆ ಅದರಿಂದ ಸಿಗುವ ಪುಣ್ಯ ದೊಡ್ಡದು. ಅವಳ ನೈಸರ್ಗಿಕ ಅಂದವನ್ನು ಕಾಪಾಡುವ ಹಾಗೂ ಪೋಷಿಸುವ ನಿಜವಾದ ಪಾಲಕರಾಗಬೇಕು. ಈ ಮೂಲಕ ಪರಿಸರ ಸ್ನೇಹಿ ಪ್ರವಾಸಿಗರಾಗುವ ಅಲಿಖಿತ ನಿಯಮವನ್ನು ಮರೆಯದೆ ಸಂಕಲ್ಪದಂತೆ ಪಾಲಿಸಿದರೆ ಅದು ಈ ಪ್ರಕೃತಿಗೆ ನೀಡುವ ದೊಡ್ಡ ಕೊಡುಗೆ. ಖುದ್ದು ಪ್ರಕೃತಿಯೇ ಮೆಚ್ಚುವ ಪ್ರವಾಸಿಗರು ನಾವಾಗಬೇಕು. ವಿಶ್ವ ಪ್ರವಾಸೋದ್ಯಮ ದಿನದಂದು ಈ ಆಲೋಚನೆ ಮೊಳಕೆ ಒಡೆದು ನಮ್ಮೊಳಗೆ ನಾವೇ ಪ್ರಮಾಣವಚನ ಸ್ವೀಕರಿಸಿಕೊಂಡರೂ ಸಾಕು ಪ್ರಕೃತಿ ಜೀವಂತವಾಗಿ ಉಳಿಯುತ್ತದೆ.

ಪ್ರವಾಸದಲ್ಲಿ ಅನುಭವ ಮತ್ತು ಜವಾಬ್ದಾರಿ ಪ್ರಮುಖ ಅಂಶಗಳು. ಸೈಲೆಂಟ್ ಝೋನ್ ಅಥವಾ ದೇವಾಲಯ, ಸ್ಮಾರಕ ಪ್ರದೇಶಗಳಲ್ಲಿ ಶಾಂತವಾಗಿ ನಡೆದುಕೊಳ್ಳುವ ಬುದ್ಧಿ ನಮಗೆ ಬರಬೇಕು. ಮೌನಕ್ಕೆ ಆದ್ಯತೆ ನೀಡುವುದನ್ನು ಕಲಿಯಬೇಕಿದೆ. ಗೋಡೆ ಮೇಲೆ ಬರೆಯುವುದು, ಮರಗಳ ಮೇಲೆ ಹೆಸರು ಕೆತ್ತುವುದು ನಿಜಕ್ಕೂ ಅಭಿಮಾನವಲ್ಲ, ಅಜ್ಞಾನ. ಪ್ರೀತಿಯ ತೀವ್ರತೆ ನಮ್ಮ ನಡವಳಿಕೆಯಲ್ಲಿ ವ್ಯಕ್ತವಾಗಲಿ. ಗೋಡೆ ಅಥವಾ ಮರಗಳ ಮೇಲೆ ಅಲ್ಲ. ಪಾರ್ಕ್, ಮ್ಯೂಸಿಯಂ ಇವು ಸಾರ್ವಜನಿಕ ಆಸ್ತಿಗಳು. ಅವುಗಳನ್ನು ಗೌರವಿಸುವುದು ಮತ್ತು ರಕ್ಷಿಸುವುದು ನಮ್ಮ ಹೊಣೆ.

goa tour

ನಾವು ಭೇಟಿ ನೀಡುವ ಸ್ಥಳದ ಸಂಸ್ಕೃತಿ, ಭಾಷೆ ಮತ್ತು ಜನರ ಬಗ್ಗೆ ತಿಳಿದುಕೊಳ್ಳುವುದು ಪ್ರವಾಸಿಗನ ಮುಖ್ಯ ಗುಣ ಲಕ್ಷಣ. ಒಂದು ಕಿರುನಗೆ ನೀಡಿ, ಸ್ನೇಹಪೂರ್ವಕವಾಗಿ ಮಾತನಾಡಿ ನಮ್ಮ ಸಣ್ಣ ನೆನಪನ್ನು ಪ್ರವಾಸಿ ತಾಣಕ್ಕೆ ಹೋದಾಗ ಉಳಿಸಿ ಬರಬೇಕು.

ನಾವು ಭೇಟಿ ನೀಡುವ ಪ್ರತಿ ಕ್ಷೇತ್ರವೂ ತೀರ್ಥಕ್ಷೇತ್ರವಾಗದಿರಬಹುದು. ಆದರೆ ಪ್ರಕೃತಿ ಮಾತೆಯ ಪ್ರತಿ ತಾಣವೂ ದೇವಸ್ಥಾನ ಎಂಬುದು ನೆನಪಲ್ಲಿರಲಿ. ನಾವು ಹೋಗುವ ಸ್ಥಳಕ್ಕೆ ತಕ್ಕಂಥ ಉಡುಪನ್ನು ಧರಿಸಬೇಕು. ಇದು ಶಿಷ್ಟಾಚಾರವಾಗಿ ಅಭ್ಯಾಸವಾಗಬೇಕು. ಸ್ಥಳೀಯ ಜನರ ಪರಿಶ್ರಮವನ್ನು ಗೌರವಿಸುವುದು ಪ್ರವಾಸಿ ಕಲಿಯಬೇಕಿರೋ ಮೊದಲ ಗುಣ. ಕಡಿಮೆ ಬೆಲೆಗೆ ಸಿಗಲಿ ಎಂಬ ಲೆಕ್ಕದಲ್ಲಿ ಅವರ ಜೀವನೋಪಾಯಕ್ಕೆ ತೊಂದರೆ ಕೊಡಕೂಡದು.

ಒಟ್ಟಾರೆ, ಪ್ರವಾಸ ಎಂದರೆ ಕೇವಲ ನೆನಪುಗಳ ಕ್ರೂಢೀಕರಣವಲ್ಲ, ಅದು ನಮ್ಮ ಜವಾಬ್ದಾರಿ. ಪ್ರೀತಿ ಮತ್ತು ಗೌರವದ ಪ್ರತಿರೂಪ. ನಾವು ಈಗಾಗಲೇ ಪಾಲಿಸುತ್ತಿರುವ, ಮರೆಯಾದ ಅಥವಾ ಮರೆತಿರುವ ಅಲಿಖಿತ ನಿಯಮಗಳನ್ನು ಮತ್ತೊಮ್ಮೆ ಧೃಢಸಂಕಲ್ಪದಿಂದ ಜಾರಿಗೆ ತಂದಲ್ಲಿ ಅದು ಪ್ರವಾಸಿ ತಾಣಕ್ಕೆ ನಾವು ನೀಡುವ ನಿಜವಾದ ಗೌರವ. ಪ್ರತಿಯೊಂದು ಹೆಜ್ಜೆಯಲ್ಲೂ ಪ್ರಕೃತಿಯ ರಕ್ಷಕರಾಗಿ ಪ್ರತಿಯೊಂದು ನಡೆಗಳಲ್ಲಿ ಪ್ರವಾಸದ ಸಂಸ್ಕೃತಿಗೆ ಗೌರವ ನೀಡಿದಲ್ಲಿ ಪ್ರತಿ ಪ್ರವಾಸಿ ತಾಣವೂ ಪ್ರವಾಸಿಗನ ಗೆಳೆಯನಾಗುತ್ತದೆ. ಪ್ರಕೃತಿಯ ಪ್ರತಿಯೊಂದು ಅಂಶವನ್ನು ಆನಂದಿಸಿ, ಆಸ್ವಾದಿಸಿ ಹಾಗೂ ಅನುಭವಿಸಿ ಮುಂದಿನ ಪೀಳಿಗೆಗೆ ಯಥಾಸ್ಥಿತಿಯಲ್ಲಿ ಹಸ್ತಾಂತರಿಸುವ ಮನಸ್ಥಿತಿ ನಮ್ಮದಾಗಬೇಕು. ಏಕೆಂದರೆ ನಿಜವಾದ ಪ್ರವಾಸಿ ಎಂದರೆ – ಇತರ ಪ್ರವಾಸಿಗರ ಅನುಭವಕ್ಕೂ ಸೂಕ್ತ ಪರಿಸರ ಬಿಟ್ಟು ಹೋಗುವವನು. ಪ್ರಕೃತಿಯ ದಿವ್ಯತೆಗೆ ತನ್ನನ್ನು ಸಂಪೂರ್ಣವಾಗಿ ತೆರೆದುಕೊಂಡು ಗೌರವ, ಶ್ರದ್ಧೆ ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳುವವನು.