Wednesday, July 1, 2026
Wednesday, July 1, 2026

ಎರಡು ಎಲೆ ಒಂದು ಮೊಗ್ಗು .. ಟೀ, ಕಾಫಿಯ ಘಮ ಗಮ್ಯದೆಡೆಗೆ!

ಕಾಫಿಯ ಅಮಲು ಎಷ್ಟಿದೆ ಎಂದರೆ ಬೆಕ್ಕಿನ ತ್ಯಾಜ್ಯವಾಗಿ ಉಂಡುಂಡೆಯಾಗಿ ಬೀಳುವ ಬೀಜಗಳನ್ನು ಆಯ್ದು, ಒಣಗಿಸಿ, ಹುರಿದು ಪುಡಿ ಮಾಡಿ ತಯಾರಿಸುವ Kopi Luwak ಮತ್ತು Civet Coffee ಕುಡಿಯಲು ವಾರ್ಷಿಕ 6 ರಿಂದ 8 ಲಕ್ಷ ಪ್ರವಾಸಿಗಳು ಇಂಡೋನೇಶಿಯಾ ದೇಶಕ್ಕೆ ಹೋಗುತ್ತಾರೆ. ’ಕಾಫಿ ಟ್ರಯಾಂಗಲ್’ ಎಂದೇ ಪ್ರಸಿದ್ಧವಾಗಿರುವ ಕೊಲಂಬಿಯಾ ದೇಶದ ಮನಿಜಾಲೆಸ್, ಅರ್ಮೇನಿಯ ಮತ್ತು ಪೆರೇರಾ ಪ್ರದೇಶಗಳಿಗೆ ವಾರ್ಷಿಕ 5 ಲಕ್ಷ ಕಾಫಿ ಪ್ರಿಯರು ಪ್ರವಾಸ ಮಾಡುತ್ತಾರೆ.

- ಅಂಜಲಿ ರಾಮಣ್ಣ

ಚಹಾ ಮತ್ತು ಕಾಫಿಯ ಬಗ್ಗೆ ನೂರಾರು ಮೆಚ್ಚುಗೆಯ ಮಾತುಗಳಿವೆ. ಅವುಗಳಲ್ಲಿ ಚಹಾದ ಬಗ್ಗೆ ನಾಟಕಕಾರ Arthur Wing Pinero ಹೇಳಿದ ‘Where there's a tea there's hope’ ಎನ್ನುವ ಮಾತು ನನಗೆ ಬಹಳ ಇಷ್ಟವಾದದ್ದು. ವರ್ಗ ಮತ್ತು ಸಮಯದ ಭೇದವಿಲ್ಲದೆ ಸಾಮಾನ್ಯ ಪೇಯಗಳೆಂದು ಗುರುತಿಸಿಕೊಂಡಿದ್ದ ಚಹಾ ಮತ್ತು ಕಾಫಿಯು ಪ್ರವಾಸೋದ್ಯಮದ ಅವಿಭಾಜ್ಯ ಅಂಗವಾಗಿ ಬೆಳೆದಿರುವುದು ಮಾತ್ರ ಸೋಜಿಗ. ಶತಮಾನಗಳ ಕಾಲ ಚಹಾ ಮತ್ತು ಕಾಫಿ ಮನೆಯಲ್ಲಿ ಅಥವಾ ಕೆಫೆಯಲ್ಲಿ ಸೇವಿಸುವ ವಸ್ತುಗಳಾಗಿದ್ದವು. ಇಂದು, ಅವು ವಿಮಾನದಲ್ಲಿ ಟಿಕೆಟ್ ಬುಕ್ ಮಾಡಲು ಮುಖ್ಯ ಕಾರಣಗಳಲ್ಲಿ ಒಂದಾಗಿವೆ. ಒಂದು ಕಪ್ ಎಂದು ಆರಂಭವಾದ ದ್ರವವು ಈಗ ಘನವಾದ ಆರ್ಥಿಕತೆಯಾಗಿ ಬದಲಾಗಿದೆ.

ಇದನ್ನೂ ಓದಿ: ಮೋರಿ ಮುಚ್ಚಳದ ಮೇಲೆ ಇತಿಹಾಸದ ಮೆಮೋರಿಗಳು!

ಮಂಜು ಮುಸುಕಿದ ತೋಟಗಳಲ್ಲಿ ನಡೆಯುವುದು, ರೈತರೊಂದಿಗೆ ಎಲೆ, ಚಿಗುರು ಮತ್ತು ಹಣ್ಣುಗಳನ್ನು ಕೀಳುವುದು, ಅವುಗಳನ್ನು ಆಘ್ರಾಣಿಸುವುದು, ದೊಡ್ಡದೊಡ್ಡ ಕಡಾಯಿಗಳಲ್ಲಿ ಕಾಳುಗಳನ್ನು ಹುರಿಯುವುದು ಅಷ್ಟೇ ಅಲ್ಲ ಚಹಾ ಮತ್ತು ಕಾಫಿಯನ್ನು ಸಾಂಪ್ರದಾಯಿಕವಾಗಿ ತಯಾರು ಮಾಡುವ, ಕುಡಿಯುವ ಪದ್ಧತಿ ಹಾಗೂ ಆಚರಣೆಗಳನ್ನು ವೀಕ್ಷಿಸುವುದು ಅದರ ಜತೆಗೇ ಕಲಿಯುವುದು. ಒಟ್ಟಾಗಿ, ಚಹಾ ಮತ್ತು ಕಾಫಿ ಪ್ರವಾಸೋದ್ಯಮ ಇಂದು $16–17 ಬಿಲಿಯನ್ ಡಾಲರ್ ಜಾಗತಿಕ ಉದ್ಯಮವಾಗಿದೆ. ಅಚ್ಚರಿಯೆಂದರೆ ಅವುಗಳು ಬೇರೆ ಯಾವುದೇ ಪಾನೀಯಗಳಿಗಿಂತ ಆರ್ಥಿಕ ಮೂಲವಾಗಿ ವೇಗವಾಗಿ ಬೆಳೆಯುತ್ತಿವೆ.

Untitled design (12)

ಸಾಮಾನ್ಯವಾಗಿ ಮಾದಕ ಪೇಯಗಳು ಜನರನ್ನು ಆಕರ್ಷಿಸುತ್ತವೆ ಎನ್ನುವುದು ಸಹಜವಾದ ತಿಳಿವಳಿಕೆ. ಆದರೆ ಚಹಾ ಮತ್ತು ಕಾಫಿ ಎನ್ನುವ ಸರಕುಗಳ ತೋಟಗಾರಿಕೆ ಪ್ರವಾಸೋದ್ಯಮವಾಗಿ ಪರಿವರ್ತಿತವಾಗಿದ್ದು ಹೇಗೆ? ಅದಕ್ಕೆ ಕಾರಣಕರ್ತನಾದದ್ದು ’ಪ್ರವಾಸ ಕುತೂಹಲಿ’. ನದಿಮೂಲ ಋಷಿಮೂಲ ತಿಳಿಯುವಷ್ಟೇ ಆಸಕ್ತಿ ಪ್ರವಾಸಿಗೆ ಎಲ್ಲಾ ವಿಷಯದಲ್ಲೂ ಇರುತ್ತದೆ. ಅವನೊಬ್ಬ ಗ್ರಾಹಕನೂ ಆದಾಗ ಚಹಾ ಮತ್ತು ಕಾಫಿಯ ಮೂಲಕ್ಕೂ ಇಳಿದುಬಿಟ್ಟ. ಸ್ಪೆಷಾಲಿಟಿ ಕಾಫಿ ಮತ್ತು ಎಸ್ಟೇಟ್ ಚಹಾವನ್ನು ಕುಡಿಯುವಾಗ ಪ್ರವಾಸಿಗರು ಕೇಳಲು ಆರಂಭಿಸಿದ ’ಇದು ಎಲ್ಲಿಂದ ಬಂತು?’ ’ಇದು ಬೇರೆ ಸ್ಥಳಗಳಲ್ಲಿ ದೊರೆಯುವುದಕ್ಕಿಂತ ಹೇಗೆ ಭಿನ್ನ?’ ಎನ್ನುವ ಪ್ರಶ್ನೆಗಳನ್ನೇ ಉದ್ಯಮವಾಗಿಸಿಕೊಂಡು ಹಣಗಳಿಕೆ ಆರಂಭಿಸಿದರು ವ್ಯವಹಾರಸ್ಥರು.

ಎರಡನೆಯದು, ರೈತರಿಗೂ ಹೊಸ ಆದಾಯ ಬೇಕಿತ್ತು. ಚಹಾ ಪ್ರವಾಸೋದ್ಯಮವು ಪರ್ಯಾಯ ಆದಾಯದ ಮಾರ್ಗವಾಯಿತು. ಆಗ ಅದೇ ಹೆಜ್ಜೆಯ ಮೇಲೆ ಹೆಜ್ಜೆ ಇರಿಸಿತು ಕಾಫಿ ತೋಟಗಳು. ಮುಖ್ಯವಾದ ಮೂರನೆಯ ಕಾರಣ ಪ್ರವಾಸದ ಪ್ರವೃತ್ತಿ ಬದಲಾಗಿರುವುದು. ಮಿಲೆನಿಯಲ್‌ಗಳು ಮತ್ತು ಜೆನ್ Zಗಳು ’ಅನುಭವ’ವನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ. ಡಾಟಾ ಇಂಟೆಲೊ ವರದಿಯ ಪ್ರಕಾರ ’ರುಚಿ ಪ್ರವಾಸಗಳು’ ಮತ್ತು ’ತೋಟದಲ್ಲಿ ತಂಗುವ ಪ್ರವಾಸಗಳು’ ಕೂಡ ಈಗ ಸಾಂಸ್ಕೃತಿಕ ಪ್ರವಾಸ, ಸಾಹಸ ಪ್ರವಾಸ, ಶೈಕ್ಷಣಿಕ ಪ್ರವಾಸಗಳಂತೆ ಔಪಚಾರಿಕ ಪ್ರವಾಸ ವಿಭಾಗಗಳಾಗಿವೆ.

ಭಾರತದ ಡಾರ್ಜಿಲಿಂಗ್, ಅಸ್ಸಾಂ, ಮುನ್ನಾರ್, ನೀಲಗಿರಿ. ಮಕೈಬಾರಿ ಮತ್ತು ಗ್ಲೆನ್‌ಬರ್ನ್‌ನಂಥ ಎಸ್ಟೇಟ್‌ಗಳು ವಸಾಹತುಶಾಹಿ ಪರಂಪರೆಯನ್ನು ಜೈವಿಕ ಕೃಷಿಯೊಂದಿಗೆ ಬೆರೆಸಿ ಪ್ರವಾಸಿಗರನ್ನು ಹೊಸ ಪ್ರಯೋಗದತ್ತ ಸೆಳೆಯುತ್ತಿವೆ. ಪಶ್ಚಿಮ ಬಂಗಾಳ ಸರ್ಕಾರವು ಚಹಾ ಪ್ರವಾಸೋದ್ಯಮವನ್ನು ’ಪರ್ಯಾಯ ಆದಾಯ’ ಎಂದು ದಾಖಲಿಸಿದೆ. ಭಾರತ ಸರ್ಕಾರವು ಚಹಾ ಪ್ರವಾಸೋದ್ಯಮದಿಂದ ಬರುವ ಆದಾಯವನ್ನು ಇನ್ನು ಮುಂದೆ ಪ್ರತ್ಯೇಕವಾಗಿ ವರದಿಯಾಗಿಸಲು ಮುಂದಾಗಿದೆ.

ಶ್ರೀಲಂಕಾದ ನುವರಾ ಎಲಿಯಾ, ಕ್ಯಾಂಡಿ ಪ್ರದೇಶಗಳಲ್ಲಿ ಇರುವ ಚಹಾ ತೋಟಗಳು ಅಪರೂಪದ ತಳಿಗಳಿಂದ ಶ್ರೀಲಂಕಾವನ್ನು ’ಟೀ ಕಂಟ್ರಿ’ ಎಂದೇ ಪ್ರವಾಸಿ ಭೂಪಟದಲ್ಲಿ ಚಿತ್ರಿಸಿದೆ. ಅಲ್ಲಿನ ಪ್ರವಾಸೋದ್ಯಮದ ಆಧಾರಸ್ತಂಭವಾದ ಚಹಾ ತೋಟಗಳ ನಡುವಿನಲ್ಲಿ ರೆಸಾರ್ಟ್ ಗಳನ್ನು ತೆರೆಯಲಾಗಿದೆ. ಜಪಾನಿನ ಮಾಚಾ ಚಹಾ ಜಗತ್ತಿನಲ್ಲಿ ಮತ್ತೆಲ್ಲೂ ಸಿಗದ ಒಗರು ರುಚಿಗೆ ಖ್ಯಾತಿ. ಅಲ್ಲಿನ ’ಟೀ ಸೆರಮನಿ’ಯನ್ನು ವೀಕ್ಷಿಸಲು ಪ್ರವಾಸಿಯು ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳುತ್ತಾನೆ. ಚೀನಾದ ಡ್ರ್ಯಾಗನ್ ಚಹಾ ಹೆಸರಿನಷ್ಟೇ ಸ್ಟ್ರಾಂಗ್. ಕೀನ್ಯಾದ ಕೆರಿಚೊ, ತೈವಾನ್‌ನ ಅಲಿಶಾನ್ ಊಲಾಂಗ್, ನೇಪಾಳದ ಇಲಾಮ್, ವಿಯೆಟ್ನಾಂನ ಥಾಯ್ ನ್ಗುಯೆನ್ ಚಹಾ ಮಾದರಿಗಳು ’ಪೇಯ ಪ್ರವಾಸದ’ ದಿಕ್ಕನ್ನೇ ಬದಲಿಸುತ್ತಿವೆ. ಜಪಾನೀ ಚಹಾ ಸಮಾರಂಭ, ಇಥಿಯೋಪಿಯನ್ ಬುನಾ, ಭಾರತೀಯ ಫಿಲ್ಟರ್ ಕಾಫಿ ಪ್ರವಾಸಗಳು ಸಂಪ್ರದಾಯಗಳನ್ನು ಜೀವಂತವಾಗಿಡುತ್ತಿವೆ.

ಇಲ್ಲಿ ಕಾಫಿ ಅಲ್ಲಿ ಸಿಗುವ ವಿಷಯ ಇಟಲಿಗೆ ಹೋಗುವವರೆಗೂ ನನಗೆ ತಿಳಿದೇ ಇರಲಿಲ್ಲ. ಚಿಕ್ಕಮಗಳೂರಿನ ಅರೇಬಿಕಾ ಕಾಫಿ ಬೀಜಗಳು ಮನೆಗೆ ಮರಳುವ ಮೊದಲು ಪ್ರಪಂಚವನ್ನೇ ಸುತ್ತಿ ಬರುತ್ತವೆ. ಬಾಬಾ ಬುಡನ್ ಗಿರಿಯ ಬೆಟ್ಟಗಳಲ್ಲಿ ಬೆಳೆದ ಹಸಿರು ಕಾಫಿ ಬೀಜಗಳು ಕರ್ನಾಟಕದಿಂದ ಇಟಲಿಯ ಟ್ರೈಸ್ಟೆಯಲ್ಲಿ ಇರುವ ’Illy Caffe’ ಎನ್ನುವ ಹುರಿಯುವ ಘಟಕಕ್ಕೆ ರಫ್ತಾಗುತ್ತವೆ. ಅಲ್ಲಿ, ಇಲ್ಲಿಯ ವಿಶಿಷ್ಟ 100% ಅರೇಬಿಕಾ ಮಿಶ್ರಣಕ್ಕಾಗಿ ಅವುಗಳನ್ನು ಇತರ ಎಂಟು ದೇಶಗಳ ಅರೇಬಿಕಾ ಬೀಜಗಳೊಂದಿಗೆ ಬೆರೆಸಿ, ಹುರಿದು ಹದಗೊಳಿಸಿ ಡಬ್ಬಗಳಲ್ಲಿ ತುಂಬಿ, ಪ್ರಪಂಚದಾದ್ಯಂತ ರವಾನಿಸಲಾಗುತ್ತದೆ. ಭಾರತ ಬೆಳೆಯುತ್ತದೆ; ಇಟಲಿ ಹುರಿಯುತ್ತದೆ; ನಾವು ಮರಳಿ ಕೊಳ್ಳುತ್ತೇವೆ.

ಕಾಫಿಯ ಅಮಲು ಎಷ್ಟಿದೆ ಎಂದರೆ ಬೆಕ್ಕಿನ ತ್ಯಾಜ್ಯವಾಗಿ ಉಂಡುಂಡೆಯಾಗಿ ಬೀಳುವ ಬೀಜಗಳನ್ನು ಆಯ್ದು, ಒಣಗಿಸಿ, ಹುರಿದು ಪುಡಿ ಮಾಡಿ ತಯಾರಿಸುವ Kopi Luwak ಮತ್ತು Civet Coffee ಕುಡಿಯಲು ವಾರ್ಷಿಕ 6 ರಿಂದ 8 ಲಕ್ಷ ಪ್ರವಾಸಿಗಳು ಇಂಡೋನೇಶಿಯಾ ದೇಶಕ್ಕೆ ಹೋಗುತ್ತಾರೆ. ’ಕಾಫಿ ಟ್ರಯಾಂಗಲ್’ ಎಂದೇ ಪ್ರಸಿದ್ಧವಾಗಿರುವ ಕೊಲಂಬಿಯಾ ದೇಶದ ಮನಿಜಾಲೆಸ್, ಅರ್ಮೇನಿಯ ಮತ್ತು ಪೆರೇರಾ ಪ್ರದೇಶಗಳಿಗೆ ವಾರ್ಷಿಕ 5 ಲಕ್ಷ ಕಾಫಿ ಪ್ರಿಯರು ಪ್ರವಾಸ ಮಾಡುತ್ತಾರೆ. ಕೊಲಂಬಿಯಾ ದೇಶಕ್ಕೆ ಕಾಫಿ ಕುಡಿಯಲು ವರ್ಷ ಒಂದಕ್ಕೆ 12 ಲಕ್ಷ ಪ್ರವಾಸಿಗಳು ಹೋಗುತ್ತಾರೆ ಎನ್ನುತ್ತಿದೆ ಅಲ್ಲಿನ ಅಫಿಶಿಯಲ್ ದಾಖಲೆಗಳು.

ಕೋಸ್ಟಾ ರಿಕಾದ ’ಗೋಲ್ಡನ್ ಬೀನ್ ಕಾಫಿ ತೋಟಗಳ’ ಪ್ರವಾಸದಷ್ಟೇ ಅದ್ಭುತ, ಅರೇಬಿಕಾದ ಜನ್ಮಸ್ಥಳವಾದ ಇಥಿಯೋಪಿಯಾದ ಸಾಂಪ್ರದಾಯಿಕ ಕಾಡು ಕಾಫಿ ಸಮಾರಂಭಗಳು. ಬ್ರೆಜಿಲ್, ವಿಯೆಟ್ನಾಂ, ಹವಾಯಿಗಳಲ್ಲಿ ಮಾತ್ರ ಸಿಗುವ ಜ್ವಾಲಾಮುಖಿ ಮಣ್ಣಿನಲ್ಲಿ ಬೆಳೆದಿರುವ ಕಾಫಿಗೆ ಎಲ್ಲಿಲ್ಲದ ಬೇಡಿಕೆ. ಇವತ್ತಿಗೆ ತಮ್ಮದೇ ಸ್ವಂತದ್ದು ಎಂದಾಗಿಸಿಕೊಂಡಿರುವ ಜಪಾನಿಯರ ಗೇಯಿಶಾ ಕಾಫಿಯ ಮೂಲ ದಕ್ಷಿಣ ಅಮೆರಿಕದಲ್ಲಿದೆ ಎನ್ನುವುದು ರೋಮಾಂಚಕ.

ಚಹಾ ಮತ್ತು ಕಾಫಿ ರುಚಿ ನೋಡುವವರದ್ದು ಮತ್ತೊಂದು ಇಂಟರೆಸ್ಟಿಂಗ್ ವಿಷಯ. ಚಹಾ ಮತ್ತು ಕಾಫಿ ತಯಾರಿಕಾ ಕೇಂದ್ರಗಳಲ್ಲಿ ’ರುಚಿ ತಜ್ಞರು’ ಎನ್ನುವ ಉದ್ಯೋಗ ಇರುತ್ತದೆ. ಅದಕ್ಕೆ ಜಗತ್ತಿನಾದ್ಯಂತ ನಾಲಗೆಯ ಸಂವೇದನಾ ತಜ್ಞರನ್ನು ಪರೀಕ್ಷೆಯ ಮೂಲಕ ಆರಿಸಿ ನೇಮಿಸಿಕೊಳ್ಳಲಾಗುತ್ತದೆ. ಇಷ್ಟೊಂದು ದುಬಾರಿ ಕ್ಷೇತ್ರವನ್ನು ಪ್ರವಾಸಿಗರಿಗೆ ತೆರೆದಿಡದಿದ್ದರೆ ಹಣಕಾಸನ್ನು ತೂಗಿಸುವುದಾದರೂ ಹೇಗೆ?!

Untitled design (13)

ಬ್ರಿಟಿಷರು ಬರುವ ಮೊದಲಿಂದಲೂ ಮೇಘಾಲಯ (ಮೊದಲು ಅಸ್ಸಾಂ ರಾಜ್ಯದ ಭಾಗ) ಚಾ (ಖಸಿ ಬುಡಕಟ್ಟು ಜನರ ಭಾಷೆಯಲ್ಲಿ) ಸೇವನೆ ಮಾಡುತ್ತಿದ್ದರಂತೆ. ಇವತ್ತಿಗೂ ಬೇರೆ ತಳಿಗಳ ಜೊತೆಗೆ ತಮ್ಮದೇ 11 ಬಗೆಯ ವಿಶೇಷ ತಳಿಗಳ ಚಹಾ ಎಲೆಗಳನ್ನು ಬೆಳೆಯುತ್ತಾರೆ. ಇದನ್ನು ಅಲ್ಲಿ ಬಿಟ್ಟು ಮತ್ತೆಲ್ಲೂ ಬೆಳೆಯಲೂ ಆಗದು. ಗಾರೋ, ಜೆಂತಿಯಾ ಮತ್ತು ಖಸಿ ಬೆಟ್ಟಗಳ ಸಾಲಿನಲ್ಲಿ ಬೇರೆ ಬೇರೆ ಬಗೆ. ಒಂದರ Red Tea 'sha saw' ಹೆಗ್ಗಳಿಕೆಯಾದರೆ ಮತ್ತೊಂದು ಕಡೆ Orange Tea ಪ್ರಸಿದ್ಧಿ. ಭತ್ತದ ಎಳೆ, ಹಸಿ ತೆನೆಯಿಂದ, ಅಕ್ಕಿಯಿಂದಲೂ ಚಹಾ ಮಾಡುತ್ತಾರೆ ಇಲ್ಲಿನ ಬುಡಕಟ್ಟು ಜನ.

ಎರಡು ಎಲೆ, ಒಂದು ಮೊಗ್ಗು, ಒಂಟಿ ಹಣ್ಣು ಎಂದು ಲೆಕ್ಕ ಹಾಕುತ್ತಾ ಚಹಾ ಕಾಫಿ ತೋಟಗಳಲ್ಲಿ ಅಡ್ಡಾಡುತ್ತಾ, ಸುವಾಸನೆಯನ್ನು ಅಘ್ರಾಣಿಸುತ್ತಾ, ಸಂಸ್ಕರಣೆಯ ವಿಧಾನವನ್ನು ನೋಡುತ್ತಾ, ಸವಾಲುಗಳಿಗೆ ಮಿಡಿಯುತ್ತಾ, ಆಯಾ ದೇಶದ ಸಾಂಸ್ಕೃತಿಕ ಆಚರಣೆಗೆ ಹೊಂದಿಕೊಳ್ಳುವಂತೆ ಅವುಗಳನ್ನು ಕುಡಿಯುವುದು ಹೇಗೆ, ಕಪ್‍ಗಳನ್ನು ಹಿಡಿದುಕೊಳ್ಳುವುದು ಹೇಗೆ ಎಂದೆಲ್ಲಾ ಕಲಿಯುತ್ತಾ, ಭೂಗೋಳದ ಅಲ್ಲಲ್ಲಿ ಪೇಯಗಳ ಸ್ಕ್ರಿಪ್ಟ್ ಬರೆಯುವುದು ಪ್ರವಾಸಿಗೆ ಸ್ವರ್ಗದ ಗಂಧ ತೀಡಿದಂತೆ. ನನಗಂತೂ ಕಾಫಿ ಎಂದರೆ ಮುಂದಿನ ಕ್ಷಣದ ಉಡಾವಣೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?