ಜೊತೆಯಲಿ… ಜೊತೆ ಜೊತೆಯಲಿ!
ಸಹ ಪ್ರಯಾಣ ಅಂದ್ರೆ, ಕಣ್ಣು, ಕಿವಿ, ಮೂಗು, ಹೀಗೆ ನಿಮ್ಮ ಪಂಚೇಂದ್ರಿಯಗಳಿಗೆ ಸಂಪೂರ್ಣ ಸರ್ವಾನಂದ ನೀಡುವ ಘಳಿಗೆಗಳಾಗಿ ಮಾರ್ಪಾಡಾಗುತ್ತವೆ. ನಿಮ್ಮ ಕೋಚ್‌ನಲ್ಲಿ, ನಿಮ್ಮೆದುರೇ ಕುಳಿತ ಒಂದು ಫ್ಯಾಮಿಲಿ ಬಂದು ಕುಳಿತಲ್ಲಿಂದ, ಪ್ರಯಾಣದ ಅಷ್ಟೂ ಹೊತ್ತು, ಒಂದಾದಮೇಲೆ ಒಂದರಂತೆ ಬೇರೆ ಬೇರೆ ತಿಂಡಿಗಳ ಐಟಂಗಳನ್ನು ಟಿಫಿನ್ ಬಾಕ್ಸ್‌ನಿಂದ ಹೊರಗೆ ತೆಗೆಯುವಾಗ, ನಿಮಗದು ಕಣ್ಣಿಗೆ ಹಬ್ಬ, ಮೂಗಿಗೆ ಸಂಭ್ರಮ, ಬೇಕೋ ಬೇಡವೊ ಅವರ ಆಯ್ಕೆಯ ಆಹಾರ, ನಿಮ್ಮ ಚಾಯ್ಸ್ ಆಗಲೇಬೇಕಾಗುತ್ತದೆ. ಕೆಲವೊಮ್ಮೆ ನಿಮಗೂ ತಿನ್ನಿಸಲು ಪ್ರಯತ್ನಿಸುತ್ತಾರೆ. ನುಂಗಬೇಕೋ, ಉಗುಳಬೇಕೋ...
- ಬಡೆಕ್ಕಿಲ ಪ್ರದೀಪ
ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನ ಹಾಗೂ ಇತರೆ ನೆರೆಹೊರೆಯ ದೇಶಗಳ ಕುರಿತಾಗಿ ಮಾತನಾಡುವಾಗ ಹೇಳಿದ ಮಾತು ʻನಿಮ್ಮ ಗೆಳೆಯರನ್ನು ಬದಲಿಸಬಹುದು, ಆದರೆ, ನಿಮ್ಮ ನೆರೆಹೊರೆಯವರನ್ನಲ್ಲ’.
ಇದನ್ನೂ ಓದಿ: ಸ್ಮಾರ್ಟ್ ಟ್ರಾವೆಲ್ ತಂತ್ರ ಗೊತ್ತಿದ್ದರೆ ಕಡಿಮೆ ಖರ್ಚು, ಉತ್ತಮ ಪ್ರಯಾಣ
ಇದು ನಿಜ. ಆದರೆ, ಎಲ್ಲೋ ಒಂದು ಊರಿಗೆ ಪ್ರಯಾಣ ಬೆಳೆಸುವಾಗ ನಾವು ಬೇಕು ಅಂದು ಕೇಳದಿದ್ದರೂ ಸಿಗುವ ಸಹ ಪ್ರಯಾಣಿಕರೂ ನಮಗೆ ಆ ಪ್ರಯಾಣದ ಮಟ್ಟಿಗೆ ನೆರೆಹೊರೆಯವರೇ. ತೀರಾ ಅನಿವಾರ್ಯ ಎನಿಸುವವರೆಗೆ ಅವರನ್ನು ಬದಲಿಸುವುದೋ, ನಾವು ಸೀಟು ಬದಲಿಸುವುದೋ ಅಸಾಧ್ಯದ ಮಾತು. ನುಂಗಿಕೊಂಡು ಪ್ರಯಾಣ ಬೆಳೆಸಬೇಕಾದ ಅನಿವಾರ್ಯ ನಮ್ಮೆಲ್ಲರದು.
ಹಾಗಿದ್ದರೆ ಯಾವ್ಯಾವ ಪರಿಸ್ಥಿತಿ ನಮಗೆ ನಿಮಗೆ ಬಂದೀತು, ಬಂದರೆ ಏನು ಮಾಡುವುದು ಎನ್ನುವುದರೊಂದಿಗೆ ಪಯಣ ಬೆಳೆಸೋಣ ಬನ್ನಿ!
ನಿಮಗೆ ಬೇಕೋ ಬೇಡವೋ, ನಿಮ್ಮ ಪಕ್ಕದಲ್ಲಿರುವವರು ನೋಡುತ್ತಿರುವ ರೀಲ್‌ಗಳ ಆಡಿಯೋ ಕರ್ಕಶವಾಗಿ ನಿಮ್ಮ ಕಿವಿಗೂ ಬೀಳುತ್ತಾ ಇರುತ್ತೆ. ಅವರಿಗೆ ಮಜಾ ಅನಿಸಬಹುದು. ನಿಮಗೆ ಮಾತ್ರ ಅಂಥ ಸಜಾ ಬೇಡಪ್ಪಾ ಬೇಡ ಅನಿಸುತ್ತಿರಬಹುದು. ಆದರೆ ಅವರು ಮಾತ್ರ ಯಾಕೋ ಕ್ಯಾರೇ ಅಂತಿಲ್ಲ ಎನ್ನುವಾಗ ನಿಮ್ಮ ʻnoise cancelling headphoneʼ ಕಿವಿಗೆ ಹಾಕಿಕೊಳ್ಳಿ, ಅಥವಾ ಅವರ ಫೋನನ್ನು ಹಾಗೇ ಇಣುಕಿ ನೋಡುತ್ತಿರಿ. ವಿಚಿತ್ರ ಮುಖಭಾವಗಳನ್ನು ಮಾಡಿ. ಕೊನೆಗೆ ಅವರಿಗೆ ಅರ್ಥವಾಗಲೂಬಹುದು.

ನಿಮಗೆ ಮೀಸಲಿರುವ ಆರ್ಮ್‌ರೆಸ್ಟ್ ಮೇಲೆ ಪಕ್ಕದಲ್ಲಿ ಕುಳಿತವರ ಕೈ, ಅಥವಾ ಅರ್ಧ ದೇಹವೇ ಬಿದ್ದಿದ್ದರೆ ಏನು ಮಾಡುತ್ತೀರ? ಸುಮ್ಮನೆ ದುರುಗುಟ್ಟೋ ಬದಲು, ತಾಳ್ಮೆಯಿಂದ, ನನಗೆ ಸ್ವಲ್ಪ ಬೆನ್ನು ನೋವಾಗುತ್ತಿದೆ, ಸ್ವಲ್ಪ ನನ್ನ ಕೈ ಕೂಡ ಇಡೋದಕ್ಕೆ ಕೊಟ್ಟರೆ, ರಿಲ್ಯಾಕ್ಸ್ ಆಗುತ್ತೇನೆ ಎನ್ನಲು ಟ್ರೈ ಮಾಡಬಹುದು.
ಇನ್ನು, ಸಹ ಪ್ರಯಾಣ ಅಂದ್ರೆ, ಕಣ್ಣು, ಕಿವಿ, ಮೂಗು, ಹೀಗೆ ನಿಮ್ಮ ಪಂಚೇಂದ್ರಿಯಗಳಿಗೆ ಸಂಪೂರ್ಣ ಸರ್ವಾನಂದ ನೀಡುವ ಘಳಿಗೆಗಳಾಗಿ ಮಾರ್ಪಾಡಾಗುತ್ತವೆ. ನಿಮ್ಮ ಕೋಚ್‌ನಲ್ಲಿ, ನಿಮ್ಮೆದುರೇ ಕುಳಿತ ಒಂದು ಫ್ಯಾಮಿಲಿ ಬಂದು ಕುಳಿತಲ್ಲಿಂದ, ಪ್ರಯಾಣದ ಅಷ್ಟೂ ಹೊತ್ತು, ಒಂದಾದಮೇಲೆ ಒಂದರಂತೆ ಬೇರೆ ಬೇರೆ ತಿಂಡಿಗಳ ಐಟಂಗಳನ್ನು ಟಿಫಿನ್ ಬಾಕ್ಸ್‌ನಿಂದ ಹೊರಗೆ ತೆಗೆಯುವಾಗ, ನಿಮಗದು ಕಣ್ಣಿಗೆ ಹಬ್ಬ, ಮೂಗಿಗೆ ಸಂಭ್ರಮ, ಬೇಕೋ ಬೇಡವೊ ಅವರ ಆಯ್ಕೆಯ ಆಹಾರ, ನಿಮ್ಮ ಚಾಯ್ಸ್ ಆಗಲೇಬೇಕಾಗುತ್ತದೆ. ಕೆಲವೊಮ್ಮೆ ನಿಮಗೂ ತಿನ್ನಿಸಲು ಪ್ರಯತ್ನಿಸುತ್ತಾರೆ. ನುಂಗಬೇಕೋ, ಉಗುಳಬೇಕೋ ಎನ್ನುವುದು ನಿಮಗೆ ಗೊತ್ತೇ ಆಗದ ಪರಿಸ್ಥಿತಿ.

ಗೊರಕೆ ವೀರರ ಕಥೆ ಮಾತ್ರ ದೇವರಿಗೇ ಪ್ರೀತಿ. ಬಸ್ಸೊಳಗೆ ಹತ್ತಿ ಕುಳಿತ ನಂತರ ಗೊರಕೆ ಶುರು. ರಾತ್ರಿ ಪೂರ್ತಿ ನಾನ್ ಸ್ಟಾಪ್ ಗೊರಕೆ ಹಬ್ಬ ನಿಮಗೆ ಫ್ರೀ. ನಾನು ಬಳಸೋ ಉಪಾಯ ಅಂದ್ರೆ, ಅವರನ್ನು ಸ್ವಲ್ಪ ಎಬ್ಬಿಸಿಬಿಡೋದು (ಅವರಿಗೆ ಗೊತ್ತಾಗದ ಹಾಗೆ). ಹೆಚ್ಚಾಗಿ ಒಂದೆರಡು ನಿಮಿಷವಾದರೂ ಸೈಲೆನ್ಸ್ ಮನೆ ಮಾಡುತ್ತದೆ. ಸಾಧ್ಯವಾದರೆ ಆ ಟೈಮ್‌ನಲ್ಲಿ ನಿದ್ದೆಗೆ ಜಾರಿ. ನಾಯ್ಸ್ ಕ್ಯಾನ್ಸಲಿಂಗ್ ಹೆಡ್‌ಸೆಟ್ ಸಹ ಬಳಸಬಹುದು. ನಾನು ಬಳಸುವುದು ರಿಲ್ಯಾಕ್ಸ್ ಆಗುವ ಸಂಗೀತ ಅಥವಾ ವೈಟ್ ನಾಯ್ಸ್ ಅಂತ ಒಂದಿಷ್ಟು ಪ್ರಕೃತಿಯ ಧ್ವನಿಗಳು. ಯೂಟ್ಯೂಬ್ ಅಥವಾ ಯಾವುದೇ ಮ್ಯೂಸಿಕ್ ಪ್ಲೇಯರ್‌ಗಳಲ್ಲಿ ಸಿಗುತ್ತವೆ. ಐಫೋನ್ ಆದರೆ ಸೆಟ್ಟಿಂಗ್‌ನಲ್ಲಿ ಬ್ಯಾಗ್ರೌಂಡ್ ಸೌಂಡ್ಸ್ ಫೀಚರ್ ಮೂಲಕ ಪ್ಲೇ ಮಾಡಬಹುದು. ನಿದ್ದೆ ಬರದೇ ಇರುವವರಿಗೆ ಇದು ರಾಮಬಾಣ.
ಈ ಥರದ ಪರಿಸ್ಥಿತಿಗಳಿಗೆ ಲೆಕ್ಕವೇ ಇಲ್ಲ
- ಪೂರ್ತಿ ಬಸ್ ಕತ್ತಲೆ ತುಂಬಿರುವಾಗ, ಫುಲ್ ಬ್ರೈಟ್‌ನೆಸ್‌ನಲ್ಲಿ ಫೋನ್ ಯೂಸ್ ಮಾಡುವವರು.
- ನೀವು ಹತ್ತುವ ಮುಂಚೆ ನಿಮ್ಮ ವಿಂಡೋ ಸೀಟಿನಲ್ಲಿ ಪವಡಿಸಿರುವವರು. ಎಬ್ಬಿಸಿದರೂ ಎದ್ದೇಳಲು ರೆಡಿ ಇಲ್ಲದವರು.
- ಎಲ್ಲರೂ ಮಲಗಿರುವ ಹೊತ್ತಲ್ಲಿ ಚಿಪ್ಸ್ ಪ್ಯಾಕೆಟ್ ತೆಗೆದು ಕಟಕಟ ಶಬ್ದ ಮಾಡುತ್ತಾ ತಿನ್ನುವವರು.
- ನೀವು ಎಸಿ ಕಮ್ಮಿ ಮಾಡಿದರೆ, ಸೆಕೆಯಲ್ಲಿ ತಡೆಯೋಕಾಗದ ಪುಣ್ಯಾತ್ಮ ಒಬ್ಬ ಫುಲ್ ಕೂಲಿಂಗ್‌ಗೆ ಬದಲಿಸಿ ಇಡೀ ಕ್ಯಾಬಿನ್ ಅನ್ನು ಹಿಮಾಲಯದ ತಪ್ಪಲು ಮಾಡಿಬಿಡೋದು.
- ಸಂಗೀತಪ್ರಿಯರ ಗುಂಪು ಅಥವಾ ಪಾರ್ಟಿ ಪ್ರಿಯರ ಮೂಡು, ಕಂಟ್ರೋಲ್ ಮಾಡುವುದು ಯಾರು ಅನ್ನೋದೇ ಚಾಲೆಂಜ್. ಜೋರಾಗಿ ಮ್ಯೂಸಿಕ್ ಹಾಕುತ್ತಾ, ಕಿವಿ ತುಂಬುವ ಹಾಗೆ ಸಂಗೀತದ ಧಾರೆ ಎರೆಯುವವರ ಕಥೆ ಬೇಡವೇ ಬೇಡ. ಅದರಲ್ಲಿ ಕುಡಿದು ಬಂದವರು ಇದ್ದಾರೆ, ನೀವು ಹೇಳಿದ್ದನ್ನು ಕೇಳಿಸಿಕೊಳ್ಳಲು ಅವರು ರೆಡಿ ಇರುವುದಿಲ್ಲ. ಅವರಿಂದ ಅಸಂಬದ್ಧ ಗಲಾಟೆಗಳೂ ಆಗಬಹುದು.
ಇವೆಲ್ಲದರ ಮಧ್ಯೆ ನೀವು ಹುಡುಗಿಯಾಗಿದ್ದರೆ, ಪಕ್ಕದಲ್ಲಿರುವ ಅಂಕಲ್ ಅಥವಾ ಇನ್ಯಾರೋ ಗಂಡಸು ನಿಮ್ಮನ್ನು ಗುರಾಯಿಸುವುದಾಗಲಿ, ಹಾಗೇ ಕೈಯನ್ನು ಅಲ್ಲಿ ಇಲ್ಲಿ ಸರಿಸೋ ನೆಪದಲ್ಲಿ ನಿಮ್ಮನ್ನು ಮುಟ್ಟುವುದಾಗಲೀ ಮಾಡಿದರೆ, ನೀವು ರೆಬೆಲ್ ಆಗಿಗ್ರೆ ಕಪಾಳಕ್ಕೇ ಬಾರಿಸಬಹುದು. ಸುಮ್ಮನೆ ಕುಳಿತು ಸಹಿದುವವರಾದರೆ ನಿಮ್ಮ ಪಾಡು ಯಾರಿಗೂ ಬೇಡ.
ಒಟ್ಟಿನಲ್ಲಿ, ಪ್ರವಾಸದ ಪ್ರಯಾಸ ಬಸ್ಸೋ ರೈಲೋ ಏರಿದ ಕೂಡಲೆ ಶುರುವಾದರೆ ಪಾಪ, ನಿಮ್ಮ ಇಡೀ ಪ್ರಯಾಣದ ಮೂಡು ಖರಾಬ್ ಆಗುತ್ತದೆ. ಇನ್ನು ಶೇರ್ಡ್, ಹಾಸ್ಟೆಲ್ ರೀತಿಯ ರೂಮನ್ನು ಬುಕ್ ಮಾಡಿ ಖರ್ಚು ಕಂಟ್ರೋಲ್ ಮಾಡುವ ಪ್ಲಾನ್ ಮಾಡಿದ್ದರೆ, ನಿಮಗೆ ಕಾಟ ಕೊಡುವ ರೂಮ್‌ಮೇಟ್‌ಗಳು ಸಿಗದೇ ಇರುವ ಹಾಗೆ ದೇವರ ಹತ್ರ ಬೇಡಿಕೊಳ್ಳಿ.
ದಣಿವನ್ನು ಮರೆಯಲು ಹೋಗುವ ಪ್ರಯಾಣವೇ ಹೊಸ ಸ್ಟ್ರೆಸ್‌ಗೆ ಮೂಲವಾಗದಂತೆ ಆಗುವುದಕ್ಕೆ ನಿಮ್ಮ ಜಾಣ್ಮೆ ಹಾಗೂ ದೇವರ ದಯೆ, ಎರಡೂ ಬೇಕಾಗಿರುವುದಂತೂ ನಿಜ.
ಪಂಚ್-ರ್ ಶಾಪ್
ಪಕ್ಕದ ಪ್ಯಾಸೆಂಜರ್ ಜೋರಾಗಿ ಉಸಿರಾಡುತ್ತಾ (ಗೊರಕೆಯೇ ಇರಬಹುದೋ ಏನೋ!) ಇರುವುದು ಸಹಿಸದವನೊಬ್ಬ ಡ್ರೈವರ್‌ಗೆ ಕಂಪ್ಲೇಂಟ್ ಮಾಡಿದ್ದಕ್ಕೆ, ಡ್ರೈವರ್ ʻಅವರು ಉಸಿರಾಡುತ್ತಾ ಇರುವವರೆಗೂ ಪ್ರಾಬ್ಲಮ್ ಇಲ್ಲ. ಉಸಿರಾಡುತ್ತಿಲ್ಲ ಎನ್ನುವುದಾದರೆ ಕಷ್ಟ ಸಾರ್ʼ ಅನ್ಬೇಕೇ!