ಹವಾಮಾನ ವೈಪರೀತ್ಯ ಎನ್ನುವುದು ಇನ್ನು ಮುಂದೆ ಕೇವಲ ಗ್ಲಾಸ್ಗೋ ಅಥವಾ ಪ್ಯಾರಿಸ್ ಶೃಂಗಸಭೆಗಳಲ್ಲಿ ವಿಜ್ಞಾನಿಗಳು-ರಾಜಕಾರಣಿಗಳು ಕೋಟ್ ಸೂಟ್ ಧರಿಸಿ ಚರ್ಚಿಸುವ ಪರಿಸರದ ವಿಷಯವಾಗಿ ಉಳಿದಿಲ್ಲ. ಪ್ರತಿವರ್ಷ ನಾವೆಲ್ಲಾದರೂ ಪ್ರವಾಸ ಪ್ಲಾನ್ ಮಾಡುವಾಗ, ಅಲ್ಲಿ ಮಳೆ ಹೆಚ್ಚಿದೆಯೇ, ಭೂಕುಸಿತ ಸಂಭವಿಸುತ್ತಿದೆಯೇ ಅಥವಾ ವಿಪರೀತ ಬಿಸಿಲಿದೆಯೇ ಎಂದು ಯೋಚಿಸುವಷ್ಟರ ಮಟ್ಟಿಗೆ ಅದು ನಮ್ಮ ದೈನಂದಿನ ಜೀವನಕ್ಕೆ, ನಮ್ಮ ರಜೆಗಳ ಯೋಜನಾ ಕ್ರಮಕ್ಕೆ ಬಂದು ತಟ್ಟಿದೆ. ನಾವು ಚಿಕ್ಕವರಿದ್ದಾಗ ಬೇಸಗೆಯ ರಜೆಯಲ್ಲಿ ಊಟದ ಬುತ್ತಿ ಕಟ್ಟಿಕೊಂಡು ಹೋದ ನೆಮ್ಮದಿಯ, ಸಾಹಸದ ಪ್ರವಾಸಿ ತಾಣಗಳು ಇವತ್ತು ಕಣ್ಣೆದುರೇ ತಮ್ಮ ಸ್ವರೂಪವನ್ನು ಕಳೆದುಕೊಳ್ಳುತ್ತಿವೆ. ಪ್ರಪಂಚದಲ್ಲೇ ಅತಿ ದೊಡ್ಡ ಉದ್ಯಮಗಳಲ್ಲೊಂದಾದ ಪ್ರವಾಸೋದ್ಯಮ ಇವತ್ತು ಸುಳಿಯಲ್ಲಿ ಸಿಲುಕಿದೆ. ಇಲ್ಲಿರುವ ದೊಡ್ಡ ವಿಚಿತ್ರ ವಿಷಯ ಎಂದರೆ ನಾವು ಪ್ರವಾಸಕ್ಕೆ ಹೋಗಲು ಹತ್ತುವ ವಿಮಾನಗಳು, ಐಷಾರಾಮಿ ಕ್ರೂಸ್ ಹಡಗುಗಳು, ತೀರಗಳಲ್ಲಿ ಕಟ್ಟುವ ಬೃಹತ್ ರೆಸಾರ್ಟ್‌ಗಳೇ ಕಾರ್ಬನ್ ಎಮಿಷನ್ ಮಾಡಿ ಪರಿಸರದ ಹಾನಿಗೆ ದೊಡ್ಡ ಕೊಡುಗೆ ನೀಡುತ್ತಿವೆ. ಆದರೆ, ಅದೇ ಹವಾಮಾನ ಬದಲಾವಣೆಯ ಭೀಕರ ಪೆಟ್ಟನ್ನು ಮೊದಲು ಅನುಭವಿಸುತ್ತಿರುವುದು ಸಹ ಇದೇ ಪ್ರವಾಸೋದ್ಯಮ ಕ್ಷೇತ್ರ. ಇವತ್ತು ಪರಿಸ್ಥಿತಿ ಹೇಗಾಗಿದೆ ಎಂದರೆ, ಜನರಿಗೆ ಜಗತ್ತನ್ನು ಸುತ್ತಬೇಕು ಎಂಬ ಆಸೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಆದರೆ ಅವರು ಕನಸು ಕಾಣುವ ಸುಂದರ ತಾಣಗಳು ಮಾತ್ರ ಕಣ್ಮರೆಯಾಗುತ್ತಿವೆ ಅಥವಾ ಅಪಾಯಕಾರಿ ವಲಯಗಳಾಗಿ ಬದಲಾಗುತ್ತಿವೆ.

ಇದನ್ನೂ ಓದಿ: ಜೆನ್ ಜಿ ಹೇಗೆ ಪ್ರಯಾಣ ಮಾಡ್ತಾರೆ ಗೊತ್ತಾ?

Untitled Design - 2026-11-06T155435.674

ಹವಾಮಾನ ವೈಪರೀತ್ಯದ ಈ ಭೀಕರ ಹೊಡೆತ ಮೊದಲು ಬೀಳುತ್ತಿರುವುದು ಅತ್ಯಂತ ಸೂಕ್ಷ್ಮ ಪರಿಸರ ವ್ಯವಸ್ಥೆಗಳ ಮೇಲೆ. ಸಮುದ್ರದ ಮಳೆಕಾಡುಗಳಿದ್ದಂತೆ ಇರುವ ಹವಳದ ಬಂಡೆಗಳು ನೀರಿನ ತಾಪಮಾನ ಏರಿಕೆಯಿಂದಾಗಿ ವೇಗವಾಗಿ ಬಣ್ಣ ಕಳೆದುಕೊಂಡು ಸಾಯುತ್ತಿವೆ. ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಕಥೆ ಹಾಗಿರಲಿ, ನಮ್ಮ ದೇಶದ ಲಕ್ಷದ್ವೀಪ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲೂ ಇದೇ ದುರಂತ ಸಂಭವಿಸುತ್ತಿದೆ. ಸಮುದ್ರದ ಸ್ವಚ್ಛ ನೀರು, ರಂಗುರಂಗಿನ ಮೀನುಗಳನ್ನು ನೋಡಲು ಸಾವಿರಾರು ರುಪಾಯಿ ಖರ್ಚು ಮಾಡಿ ಹೋಗುವ ಪ್ರವಾಸಿಗರಿಗೆ ಇವತ್ತು ಪ್ಲಾಸ್ಟಿಕ್ ಹಾಗೂ ಸತ್ತು ಬಿಳುಚಿಕೊಂಡಿರುವ ಹವಳದ ದಿಬ್ಬಗಳಷ್ಟೇ ಕಾಣಸಿಗುತ್ತಿದ್ದು, ಇದು ಸ್ಕೂಬಾ ಡೈವಿಂಗ್ ಹಾಗೂ ಸ್ಥಳೀಯ ದೋಣಿ ಮಾಲೀಕರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ದಕ್ಷಿಣ ಏಷ್ಯಾದ ಮಾಲ್ಡೀವ್ಸ್‌ನಿಂದ ಹಿಡಿದು ನಮ್ಮ ಭಾರತದ ಲಕ್ಷದ್ವೀಪದವರೆಗೆ, ಸಮುದ್ರ ಮಟ್ಟ ಏರಿಕೆಯಾಗುತ್ತಿರುವುದರಿಂದ ದ್ವೀಪಗಳು ಮುಳುಗುವ ಭೀತಿಯಲ್ಲಿವೆ. ನಾವು ಸೋಷಿಯಲ್ ಮೀಡಿಯಾ, ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳಲ್ಲಿ ನೋಡುವ ʼಸ್ವರ್ಗಸಮಾನ ತಾಣಗಳುʼ ಇನ್ನು ಕೆಲವೇ ದಶಕಗಳಲ್ಲಿ ಭೂಪಟದಿಂದಲೇ ಅಳಿಸಿಹೋದರೂ ಆಶ್ಚರ್ಯವಿಲ್ಲ.

Untitled Design - 2026-11-06T161028.985

ಬೆಟ್ಟ-ಗುಡ್ಡಗಳ ಪ್ರವಾಸೋದ್ಯಮದ ಕಥೆಯಂತೂ ಇನ್ನೂ ಕರುಣಾಜನಕವಾಗಿದೆ. ಉತ್ತರ ಅಮೆರಿಕ ಅಥವಾ ಯುರೋಪಿನ ಆಲ್ಪ್ಸ್ ಪರ್ವತಗಳಲ್ಲಿ ಮಂಜು ಬೀಳುವುದು ಕಡಿಮೆಯಾಗಿ, ಸ್ಕೀಯಿಂಗ್ ರೆಸಾರ್ಟ್‌ಗಳು ಬಾಗಿಲು ಮುಚ್ಚುವಂತಾಗಿದ್ದು, ಸ್ಕೀಯಿಂಗ್ ಸೀಸನ್ ಉಳಿಸಿಕೊಳ್ಳಲು ಅಪಾರ ನೀರು ಮತ್ತು ವಿದ್ಯುತ್ ಬಳಸಿ ಕೃತಕ ಮಂಜು ತಯಾರಿಸುವ ಯಂತ್ರಗಳನ್ನು ಬಳಸಲಾಗುತ್ತಿದೆ. ಇನ್ನು ನಮ್ಮ ಭಾರತದ ಹಿಮಾಲಯದ ಕಡೆ ಕಣ್ಣು ಹಾಯಿಸಿದರೆ ಎದೆ ಝಲ್ಲೆನ್ನುತ್ತದೆ. ಕೆಲವೇ ವರ್ಷಗಳ ಹಿಂದೆ ಸಂಭವಿಸಿದ ಉತ್ತರಾಖಂಡದ ಕೆದಾರನಾಥ ಭೀಕರ ಪ್ರವಾಹ, ಇತ್ತೀಚೆಗೆ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಹಿಮಾಚಲ ಪ್ರದೇಶದ ಮನಾಲಿ-ಶಿಮ್ಲಾಗಳಲ್ಲಿ ಹಠಾತ್ ಪ್ರವಾಹದಿಂದ ಹೆದ್ದಾರಿಗಳೇ ಕೊಚ್ಚಿಹೋದದ್ದು ಹಾಗೂ ಜೋಶಿಮಠದಲ್ಲಿ ಭೂಮಿ ಕುಸಿದು ಇಡೀ ಊರೇ ಬಿರುಕು ಬಿಟ್ಟದ್ದು, ಇವೆಲ್ಲವೂ ನಮಗೆ ಪ್ರಕೃತಿ ನೀಡುತ್ತಿರುವ ಕಠಿಣ ಎಚ್ಚರಿಕೆಗಳಾಗಿವೆ. ನಾವು ಚಾರ್ ಧಾಮ್ ಯಾತ್ರೆಗೋ ಅಥವಾ ಹಿಮಾಲಯದ ಚಾರಣಕ್ಕೋ ಹೊರಡುವಾಗ, ನಾವು ಕ್ಷೇಮವಾಗಿ ಮನೆಗೆ ಹಿಂತಿರುಗುತ್ತೇವೆಯೇ ಎನ್ನುವ ಭಯ ಪ್ರವಾಸಿಗರನ್ನು ಆವರಿಸುತ್ತಿದೆ. ಹಿಮಾಲಯದ ನೀರ್ಗಲ್ಲುಗಳು ವೇಗವಾಗಿ ಕರಗುತ್ತಿರುವುದರಿಂದ ಹಠಾತ್ ಮೇಘಸ್ಫೋಟಗಳು ಹೆಚ್ಚುತ್ತಿದ್ದು, ಪ್ರವಾಸೋದ್ಯಮವನ್ನೇ ಸಂಪೂರ್ಣವಾಗಿ ನಂಬಿಕೊಂಡಿದ್ದ ಸ್ಥಳೀಯ ಹೊಟೇಲ್ ಮಾಲೀಕರು, ಶೇರ್ಪಾ ಮಾರ್ಗದರ್ಶಿಗಳು ಹಾಗೂ ಚಾಲಕರು ಕ್ಷಣಾರ್ಧದಲ್ಲಿ ಬೀದಿಗೆ ಬೀಳುತ್ತಿದ್ದಾರೆ.

ನಾವು ದೂರದ ದೇಶಗಳ ಉದಾಹರಣೆ ನೀಡಬೇಕಿಲ್ಲ, ನಮ್ಮ ಸ್ವಂತ ಕರ್ನಾಟಕದಲ್ಲೂ ಇದೇ ಚಿತ್ರಣ ಕಾಣಸಿಗುತ್ತಿದೆ. ಒಂದು ಕಾಲದಲ್ಲಿ ಕರ್ನಾಟಕದ ಕಾಶ್ಮೀರ ಎಂದೇ ಹೆಸರಾಗಿದ್ದ ಕೊಡಗಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸಂಭವಿಸುತ್ತಿರುವ ಸರಣಿ ಭೂಕುಸಿತಗಳನ್ನು ನೆನಪಿಸಿಕೊಂಡರೆ, ಅತಿಯಾದ ರೆಸಾರ್ಟ್‌ಗಳ ನಿರ್ಮಾಣ ಮತ್ತು ಅಸಹಜ ಮಳೆಯಿಂದಾಗಿ ಸುಂದರ ಬೆಟ್ಟಗಳು ಕುಸಿದುಬೀಳುತ್ತಿರುವುದು ಸ್ಪಷ್ಟವಾಗುತ್ತದೆ. ಪರಿಣಾಮವಾಗಿ ಮಳೆಗಾಲದಲ್ಲಿ ಹೋಮ್‌ಸ್ಟೇಗಳು ಖಾಲಿ ಹೊಡೆಯುತ್ತಿವೆ. ಉಡುಪಿ, ಮಲ್ಪೆ, ಗೋಕರ್ಣ ಮತ್ತು ಮಂಗಳೂರಿನ ಕಡಲತೀರಗಳಲ್ಲಿ ಪ್ರತಿವರ್ಷ ಸಮುದ್ರದ ಅಲೆಗಳು ದಂಡೆಯನ್ನು ನುಂಗಿಹಾಕುತ್ತಿದ್ದು, ತೀರದಲ್ಲಿದ್ದ ರೆಸಾರ್ಟ್‌ಗಳು ಹಾಗೂ ಶ್ಯಾಕ್‌ಗಳು ನೀರುಪಾಲಾಗುತ್ತಿವೆ. ಹಾಗೆಯೇ, ಬೇಸಗೆಯಲ್ಲಿ ತಮಿಳುನಾಡಿನ ಊಟಿ, ಕೊಡೈಕನಾಲ್ ಅಥವಾ ನಮ್ಮ ಮಡಿಕೇರಿಗೆ ಹೋದರೆ ಹಿಂದಿನಂತೆ ತಂಪಾದ ಗಾಳಿ ಸಿಗದೆ ಎಸಿ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದಷ್ಟೇ ಅಲ್ಲದೆ, ಬೇಸಗೆಯಲ್ಲಿ ಸ್ಪೇನ್, ಇಟಲಿ, ಗ್ರೀಸ್ ಹಾಗೂ ನಮ್ಮ ಉತ್ತರ ಭಾರತದಲ್ಲೂ ಬೀಸುತ್ತಿರುವ 'ಹೀಟ್-ವೇವ್' ಪ್ರಯಾಣದ ವ್ಯಾಖ್ಯಾನವನ್ನೇ ಬದಲಾಯಿಸಿದ್ದು, 45°C ಗಿಂತ ಹೆಚ್ಚಿನ ಬಿಸಿಲಿನಲ್ಲಿ ಪ್ರವಾಸ ಮಾಡುವುದು ಜೀವಕ್ಕೆ ಕಂಟಕವಾಗುತ್ತಿದೆ. ಇದರಿಂದಾಗಿ ಜನ ಈಗ ಜೂನ್-ಜುಲೈ ಬೇಸಿಗೆ ರಜೆಗಳ ಬದಲಾಗಿ, ತಾಪಮಾನ ಕೊಂಚ ಕಡಿಮೆಯಿರುವ ಸೆಪ್ಟೆಂಬರ್-ಅಕ್ಟೋಬರ್ ಅಥವಾ ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಪ್ರಯಾಣಿಸಲು ಇಷ್ಟಪಡುತ್ತಿದ್ದಾರೆ.

Untitled Design - 2026-11-06T161235.208

ಹವಾಮಾನ ವೈಪರೀತ್ಯಕ್ಕೆ ಉರಿಯುವ ಬೆಂಕಿ ಹಾಗೂ ತುಪ್ಪ ಸುರಿದಂತೆ ಸೇರಿಕೊಂಡಿರುವುದು 'ಅತಿಯಾದ ಪ್ರವಾಸೋದ್ಯಮ'. ವೆನಿಸ್, ಬಾರ್ಸಿಲೋನಾ, ಬಾಲಿ ಇರಲಿ, ಅಥವಾ ನಮ್ಮ ದೇಶದ ಶಿಮ್ಲಾ, ಮನಾಲಿ, ಗೋವಾ ಇರಲಿ, ಸಾಮರ್ಥ್ಯಕ್ಕಿಂತ ಹೆಚ್ಚು ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ವಾರಾಂತ್ಯ ಬಂದರೆ ಸಾಕು ಬೆಂಗಳೂರಿನಿಂದ ಕೊಡಗು, ಚಿಕ್ಕಮಗಳೂರಿಗೆ ಹೋಗುವ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಸಾವಿರಾರು ವಾಹನಗಳು ಹೊರಸೂಸುವ ಹೊಗೆ, ಪ್ರವಾಸಿಗರು ಚೆಲ್ಲುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ತ್ಯಾಜ್ಯಗಳು ಸ್ಥಳೀಯ ಪರಿಸರವನ್ನು ಇನ್ನಷ್ಟು ಹಾಳುಗೆಡವುತ್ತಿವೆ. ನೀರಿನ ಅಭಾವ ಹೆಚ್ಚುತ್ತಿದ್ದು, ಸ್ಥಳೀಯರಿಗೆ ಜೀವನ ವೆಚ್ಚ ಗಗನಕ್ಕೇರುತ್ತಿದೆ. ಪರಿಣಾಮವಾಗಿ, ನಮಗೆ ಪ್ರವಾಸಿಗರು ಬೇಡವೇ ಬೇಡ, ನಮ್ಮ ಊರನ್ನು ನಮಗೆ ಬಿಟ್ಟುಕೊಡಿ ಎಂದು ಬಾರ್ಸಿಲೋನಾ ಮತ್ತು ಗೋವಾದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.

Untitled Design - 2026-11-06T161400.872

ಈ ಹವಾಮಾನ ಬಿಕ್ಕಟ್ಟಿನ ದಿನಗಳಲ್ಲಿ ಕಂಡುಬರುತ್ತಿರುವ ಅತ್ಯಂತ ವಿಚಿತ್ರ ಹಾಗೂ ದುಃಖಕರ ಪ್ರವೃತ್ತಿಯೆಂದರೆ ʼಲಾಸ್ಟ್-ಚಾನ್ಸ್ ಟೂರಿಸಂʼ. ಈ ಜಾಗ ಇನ್ನು ಹತ್ತು ವರ್ಷದಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗುತ್ತದಂತೆ, ಮುಳುಗಿಹೋಗುತ್ತದಂತೆ... ಆದ್ದರಿಂದ ಈಗಲೇ ಒಮ್ಮೆ ನೋಡಿಬಂದು ಬಿಡೋಣ ಎನ್ನುವ ಮನಸ್ಥಿತಿ ಬೆಳೆಯುತ್ತಿದೆ. ಐಸ್‌ಲ್ಯಾಂಡ್‌ನ ಕರಗುತ್ತಿರುವ ಹಿಮಪರ್ವತಗಳು, ಕಣ್ಮರೆಯಾಗುತ್ತಿರುವ ಆಫ್ರಿಕಾದ ಕಿಲಿಮಂಜಾರೋ ಪರ್ವತದ ಹಿಮ, ಮುಳುಗುತ್ತಿರುವ ಟುವಾಲು, ಮಾಲ್ಡೀವ್ಸ್ ದ್ವೀಪಗಳು ಹಾಗೂ ಭಾರತದ ಸುಂದರಬನ್ನಿನ ಮೇಘಾವೃತ ಕಾಡುಗಳನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ. ಆದರೆ ಇದರಲ್ಲೊಂದು ದೊಡ್ಡ ನೈತಿಕ ವಿರೋಧಾಭಾಸವಿದೆ, ಆ ತಾಣ ಅಳಿದುಹೋಗುತ್ತದೆ ಎಂದು ನೋಡಲು ಧಾವಿಸುವ ಲಕ್ಷಾಂತರ ಪ್ರವಾಸಿಗರ ವಿಮಾನ ಪ್ರಯಾಣ ಮತ್ತು ತ್ಯಾಜ್ಯವೇ, ಆ ಜಾಗದ ವಿನಾಶವನ್ನು ಇನ್ನಷ್ಟು ವೇಗಗೊಳಿಸುತ್ತಿದೆ. ಅಂದರೆ, ನಾವು ಯಾವುದನ್ನು ಉಳಿಸಬೇಕು ಅಥವಾ ಕೊನೆಯದಾಗಿ ನೋಡಬೇಕು ಅಂದುಕೊಳ್ಳುತ್ತೇವೋ, ಅದಕ್ಕೆ ನಾವೇ ಕಂಟಕವಾಗುತ್ತಿದ್ದೇವೆ.

ಕರಾವಳಿ ತೀರದ ಹೊಟೇಲ್‌ಗಳು, ರೆಸಾರ್ಟ್‌ಗಳಿಗೆ ವಿಮಾ ಕಂಪೆನಿಗಳು ಇವತ್ತು ಇನ್ಶೂರೆನ್ಸ್ ನೀಡಲು ಹಿಂದೇಟು ಹಾಕುತ್ತಿದ್ದು, ಚಂಡಮಾರುತ ಮತ್ತು ಪ್ರವಾಹದ ಭೀತಿಯಿಂದಾಗಿ ವಿಮಾ ಕಂತುಗಳು ಗಗನಕ್ಕೇರಿವೆ. ಇದು ಸಣ್ಣ ಮಟ್ಟದ ಪ್ರವಾಸಿ ಉದ್ಯಮಿಗಳನ್ನು, ಅಂದರೆ ಸಣ್ಣ ಹೋಟೆಲ್ ಇಟ್ಟುಕೊಂಡವರನ್ನು, ಹೋಮ್‌ಸ್ಟೇ ನಡೆಸುವವರನ್ನು ಸಂಪೂರ್ಣವಾಗಿ ದಾರಿ ದೀಪವಿಲ್ಲದಂತೆ ಮಾಡುತ್ತಿದೆ. ಆದರೆ, ಈ ಕತ್ತಲ ನಡುವೆಯೂ ಒಂದಷ್ಟು ಆಶಾದಾಯಕ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಅಗತ್ಯವಿಲ್ಲದಿದ್ದರೆ ವಿಮಾನ ಪ್ರಯಾಣವನ್ನು ತಪ್ಪಿಸಿ, ರೈಲು ಅಥವಾ ಇವಿ ವಾಹನಗಳ ಮೂಲಕ ಪ್ರಯಾಣಿಸುವ 'ವಿಮಾನ ಶರತ್ತು' (Flight Shame) ಪರಿಕಲ್ಪನೆ ಬೆಳೆಯುತ್ತಿದೆ. ಸ್ಥಳೀಯ ಪರಿಸರಕ್ಕೆ ಹಾನಿ ಮಾಡದ, ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವ ಸುಸ್ಥಿರ ಪ್ರವಾಸೋದ್ಯಮ ಹಾಗೂ ನೀವು ಹೋದ ಜಾಗದಲ್ಲಿ ಗಿಡ ನೆಡುವುದು, ಪರಿಸರವನ್ನು ಶುಚಿಗೊಳಿಸುವ ಕೆಲಸಗಳಲ್ಲಿ ಭಾಗಿಯಾಗುವ ರೀಜನರೇಟಿವ್‌ ಪ್ರವಾಸೋದ್ಯಮ ಜನಪ್ರಿಯವಾಗುತ್ತಿವೆ. ಜತೆಗೆ, ಭೂತಾನ್ ದೇಶದಂತೆ ದಿನಕ್ಕೆ ಇಂತಿಷ್ಟು 'ಪರಿಸರ ಶುಲ್ಕ' ವಿಧಿಸುವುದು ಅಥವಾ ಸಿಕ್ಕಿಂ ಮತ್ತು ಕೊಡೈಕನಾಲ್‌ನಂತೆ ಪ್ರವಾಸಿ ವಾಹನಗಳ ಸಂಖ್ಯೆಗೆ ಮಿತಿ ಹೇರುವ ಕಠಿಣ ನಿಯಮಗಳು ಜಾರಿಯಾಗುತ್ತಿವೆ.

ಹವಾಮಾನ ವೈಪರೀತ್ಯವು ಪ್ರಯಾಣವನ್ನು ಕೇವಲ ಒಂದು ನಿಶ್ಚಿಂತೆಯ, ವಾರಾಂತ್ಯದ ಮೋಜಿನ ಚಟುವಟಿಕೆಯಿಂದ ಇವತ್ತಿನ ಅತ್ಯಂತ ಪ್ರಮುಖ ಪರಿಸರ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನಾಗಿ ಬದಲಾಯಿಸಿದೆ. ಒಂದು ಕಾಲದಲ್ಲಿ ಶಾಶ್ವತ ಎಂದೆನಿಸಿದ್ದ ನೈಸರ್ಗಿಕ ವಿಸ್ಮಯಗಳು ಇವತ್ತು ಧೂಳಿಪಟವಾಗುತ್ತಿವೆ. ಪ್ರವಾಸೋದ್ಯಮದ ಭವಿಷ್ಯವು ನಾವು ಪ್ರಕೃತಿಯ ಮಿತಿಯನ್ನು ಗೌರವಿಸುತ್ತೇವೆಯೇ ಇಲ್ಲವೇ ಎಂಬುದರ ಮೇಲೆ ನಿಂತಿದೆ. ನಾವು ಪ್ರಯಾಣಿಸುವ ಶೈಲಿಯನ್ನು, ಪ್ರಕೃತಿಯನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳದಿದ್ದರೆ, ನಾವು ನಮ್ಮ ಮುಂದಿನ ಪೀಳಿಗೆಗೆ ಕೇವಲ ಫೊಟೋ ಆಲ್ಬಮ್‌ಗಳಲ್ಲಿ ಉರಿದುಹೋದ, ಮುಳುಗಿಹೋದ ಜಗತ್ತಿನ ಕಥೆಗಳನ್ನು ಮಾತ್ರ ಬಿಟ್ಟುಹೊಗುವ ಪರಿಸ್ಥಿತಿ ನಿರ್ಮಾಣ ಆಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.