Tuesday, September 16, 2025
Tuesday, September 16, 2025

ಟೇಕಾಫ್‌ ಟ್ಯಾಂಗೋ ಎಂದರೇನು ?

ನೀವು ಟೇಕಾಫ್‌ ಟ್ಯಾಂಗೋ (Takeoff Tango) ಬಗ್ಗೆ ಕೇಳಿದ್ದೀರಾ? ’ಟೇಕ್‌ಆಫ್‌ ಟ್ಯಾಂಗೋ’ ಎಂಬುದು ವಿಮಾನ ಟೇಕಾಫ್‌ ಆಗುವಾಗ ಪೈಲಟ್‌ಗಳು ಅನುಸರಿಸುವ ಒಂದು ತಂತ್ರ. ವಿಮಾನವು ಸುರಕ್ಷಿತವಾಗಿ ಹಾರಲು ಅಗತ್ಯವಾದ ಶಕ್ತಿಯನ್ನು ಉಪಯೋಗಿಸಬೇಕು. ಅದೇ ಸಮಯದಲ್ಲಿ, ವಿಮಾನದಿಂದ ಬರುವ ಶಬ್ದವು ವಿಮಾನ ನಿಲ್ದಾಣದ ಸುತ್ತಮುತ್ತ ವಾಸಿಸುವ ಜನರಿಗೆ ತೊಂದರೆ ಯಾಗಬಾರದು. ಈ ಎರಡೂ ಅಂಶಗಳನ್ನು ಸಮತೋಲನದಲ್ಲಿ ಇಡುವುದನ್ನೇ ’ಟೇಕಾಫ್‌ ಟ್ಯಾಂಗೋ’ ಅಂತಾರೆ.

ನೀವು ಟೇಕಾಫ್‌ ಟ್ಯಾಂಗೋ (Takeoff Tango) ಬಗ್ಗೆ ಕೇಳಿದ್ದೀರಾ? ’ಟೇಕ್‌ಆಫ್‌ ಟ್ಯಾಂಗೋ’ ಎಂಬುದು ವಿಮಾನ ಟೇಕಾಫ್‌ ಆಗುವಾಗ ಪೈಲಟ್‌ಗಳು ಅನುಸರಿಸುವ ಒಂದು ತಂತ್ರ. ವಿಮಾನವು ಸುರಕ್ಷಿತವಾಗಿ ಹಾರಲು ಅಗತ್ಯವಾದ ಶಕ್ತಿಯನ್ನು ಉಪಯೋಗಿಸಬೇಕು. ಅದೇ ಸಮಯದಲ್ಲಿ, ವಿಮಾನದಿಂದ ಬರುವ ಶಬ್ದವು ವಿಮಾನ ನಿಲ್ದಾಣದ ಸುತ್ತಮುತ್ತ ವಾಸಿಸುವ ಜನರಿಗೆ ತೊಂದರೆಯಾಗಬಾರದು. ಈ ಎರಡೂ ಅಂಶಗಳನ್ನು ಸಮತೋಲನದಲ್ಲಿ ಇಡುವುದನ್ನೇ ’ಟೇಕಾಫ್‌ ಟ್ಯಾಂಗೋ’ ಅಂತಾರೆ.

ವಿಮಾನ ಪೈಲಟ್‌ಗಳು ವಿಮಾನದ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುತ್ತಾ, ಶಬ್ದ ನಿಯಂತ್ರಣ ನಿಯಮಗಳನ್ನು ಪಾಲಿಸುವುದು ಇದರ ಮುಖ್ಯ ಉದ್ದೇಶ. ಹಾಗಾದರೆ ಪೈಲಟ್‌ಗಳು ಥ್ರಸ್ಟ್ ಮತ್ತು ಶಬ್ದವನ್ನು ಹೇಗೆ ಸಮತೋಲನಗೊಳಿಸುತ್ತಾರೆ? ಪೈಲಟ್‌ಗಳು ವಿಮಾನದ ಥ್ರಸ್ಟ್ (thrust) ಅನ್ನು ಕಡಿಮೆ ಮಾಡುವ ಮೂಲಕ ಶಬ್ದವನ್ನು ನಿಯಂತ್ರಿಸುತ್ತಾರೆ. ಇದಕ್ಕೆ ಸೀಮಿತ ಥ್ರಸ್ಟ್ ಟೇಕಾಫ್‌‌ ಎಂದು ಕರೆಯುತ್ತಾರೆ. ಇಲ್ಲಿ, ಪೈಲಟ್‌ಗಳು ವಿಮಾನ ಹಾರಲು ಅಗತ್ಯವಾದ ಶಕ್ತಿಗಿಂತ ಸ್ವಲ್ಪ ಕಡಿಮೆ ಥ್ರಸ್ಟ್ ಬಳಸುತ್ತಾರೆ. ಇದರಿಂದ ವಿಮಾನವು ರನ್ ವೇ‌ ಮೇಲೆ ಹೆಚ್ಚು ದೂರ ಚಲಿಸುತ್ತದೆ. ಆದರೆ ಶಬ್ದದ ಮಟ್ಟ ಕಡಿಮೆ‌ಯಾಗಿರುತ್ತದೆ.

ದೊಡ್ಡ ವಿಮಾನ ನಿಲ್ದಾಣಗಳಲ್ಲಿ, ವಿಮಾನ ಹಾರಲು ನಿರ್ದಿಷ್ಟ ಮಾರ್ಗಗಳು ಮತ್ತು ನಿಯಮಗಳನ್ನು ಅನುಸರಿಸಲಾಗುತ್ತದೆ. ಇದನ್ನು ಶಬ್ದ ತಗ್ಗಿಸುವ ನಿರ್ಗಮನ ಪ್ರಕ್ರಿಯೆಗಳು ಎನ್ನುತ್ತಾರೆ. ಈ ಪ್ರಕ್ರಿಯೆಗಳು ಪೈಲಟ್‌ಗಳು ಯಾವ ಕೋನದಲ್ಲಿ ವಿಮಾನವನ್ನು ಮೇಲಕ್ಕೆ ಹಾರಿಸಬೇಕು, ಯಾವ ಎತ್ತರದಲ್ಲಿ ಎಂಜಿನ್ ಶಕ್ತಿಯನ್ನು ಕಡಿಮೆ ಮಾಡಬೇಕು ಎಂದು ತಿಳಿಸುತ್ತವೆ.

ಇದನ್ನೂ ಓದಿ: ಹೆಡ್‌ ವಿಂಡ್‌ ಮತ್ತು ಟೇಲ್‌ ವಿಂಡ್

ಆಧುನಿಕ ವಿಮಾನಗಳು ಮತ್ತು ಅವುಗಳ ಎಂಜಿನ್‌ಗಳು ಶಬ್ದವನ್ನು ಕಡಿಮೆ ಮಾಡಲು ವಿಶೇಷ ತಂತ್ರಜ್ಞಾನಗಳನ್ನು ಬಳಸುತ್ತವೆ. ಉದಾಹರಣೆಗೆ, ಚೆವ್ರೊನ್ ನಳಿಕೆಗಳು (chevron nozzles) ಜೆಟ್ ಇಂಜಿನ್‌ನಿಂದ ಹೊರಬರುವ ಗಾಳಿಯನ್ನು ನಿಧಾನವಾಗಿ ಬೆರೆಸುವ ಮೂಲಕ ಶಬ್ದವನ್ನು ತಗ್ಗಿಸುತ್ತವೆ.

ಶಬ್ದ ನಿಯಂತ್ರಣದ ಪ್ರಮುಖ ಅಂಶಗಳೇನು? ವಿಮಾನದ ಶಬ್ದವನ್ನು ನಿಯಂತ್ರಿಸುವಲ್ಲಿ ಎಂಜಿನ್‌ ನ ಶಕ್ತಿಯನ್ನು ನಿರ್ವಹಿಸುವುದು ಬಹಳ ಮುಖ್ಯ. ಹೆಚ್ಚಿನ ವಿಮಾನ ನಿಲ್ದಾಣಗಳಲ್ಲಿ ಶಬ್ದ ತಗ್ಗಿಸುವಿಕೆಗಾಗಿ ಕೆಲವು ನಿರ್ದಿಷ್ಟ ಮತ್ತು ಪ್ರಮಾಣೀಕೃತ ಕಾರ್ಯ ವಿಧಾನಗಳನ್ನು ಅನುಸರಿಸಲಾಗುತ್ತದೆ.

ವಿಮಾನ ನಿಲ್ದಾಣದ ಸುತ್ತಮುತ್ತ ಇರುವ ಜನರ ಸಹಕಾರವು ಬಹಳ ಮುಖ್ಯ. ಹಳೆಯ ವಿಮಾನಗಳಿಗಿಂತ ಹೊಸದಾಗಿ ತಯಾರಿಸಲಾದ ವಿಮಾನಗಳು ಶಬ್ದವನ್ನು ಶೇ.50ರಷ್ಟು ಕಡಿಮೆ ಉತ್ಪಾದಿಸುತ್ತವೆ. ಹಲವು ವಿಮಾನ ನಿಲ್ದಾಣಗಳಲ್ಲಿ ಶಬ್ದವನ್ನು ಅಳೆಯುವ ವ್ಯವಸ್ಥೆಗಳಿವೆ. ಈ ವ್ಯವಸ್ಥೆಗಳು ಯಾವ ವಿಮಾನಗಳು ಹೆಚ್ಚು ಶಬ್ದ ಮಾಡುತ್ತವೆ ಎಂದು ಗುರುತಿಸಿ, ಆ ವಿಮಾನ ಸಂಸ್ಥೆಗಳಿಗೆ ದಂಡ ವಿಧಿಸಬಹುದು.

Takeoff Tango

ಲಂಡನ್ ಸಿಟಿ ಏರ್‌ಪೋರ್ಟ್‌ನಲ್ಲಿ, ’ಬೋಯಿಂಗ್ ವಿಸ್ಪರ್’ ಎಂಬ ವಿಶೇಷ ತಂತ್ರವನ್ನು ಬಳಸಲಾಗುತ್ತದೆ. ಈ ತಂತ್ರದಲ್ಲಿ ವಿಮಾನವು ಸಾಮಾನ್ಯಕ್ಕಿಂತ ಹೆಚ್ಚು ಎತ್ತರದ ಕೋನದಲ್ಲಿ (3 ಡಿಗ್ರಿ ಬದಲಿಗೆ 5.5 ಡಿಗ್ರಿ) ಟೇಕಾಫ್ ಆಗುತ್ತದೆ. ಇದರಿಂದ ವಿಮಾನವು ನಗರ ಪ್ರದೇಶದಿಂದ ವೇಗವಾಗಿ ಮೇಲೆ ಏರಿ, ಶಬ್ದವನ್ನು ಕಡಿಮೆ ಮಾಡುತ್ತದೆ.

ಟೇಕಾಫ್‌ ಟ್ಯಾಂಗೋ ಎಂಬುದು ವಿಮಾನಯಾನ ಮತ್ತು ವಿಮಾನದ ಶಕ್ತಿ ಹಾಗೂ ಜನರ ಜೀವನದ ಗುಣಮಟ್ಟದ ನಡುವಿನ ಸವಾಲನ್ನು ತೋರಿಸುತ್ತದೆ. ವಿಮಾನವು ತನ್ನ ಸಂಪೂರ್ಣ ಶಕ್ತಿಯನ್ನು ಬಳಸಬೇಕಾದರೂ, ಅದು ಸುತ್ತಮುತ್ತಲಿನ ಪರಿಸರ ಮತ್ತು ಜನರಿಗೆ ತೊಂದರೆ ಮಾಡಬಾರದು. ಕೆಲವು ದೇಶಗಳಲ್ಲಿ ವಿಮಾನ ನಿಲ್ದಾಣದ ಸುತ್ತ ಇರುವವರು ಶಬ್ದದ ತೀವ್ರತೆಯನ್ನು ಸಹಿಸಿಕೊಳ್ಳಲಾಗದೇ, ಮನೆ-ಮಠ ಖಾಲಿ ಮಾಡಿಕೊಂಡು ಹೋದ ಸಾಕಷ್ಟು ನಿದರ್ಶನಗಳಿವೆ.

ಇನ್ನು ಅಸಂಖ್ಯ ಜನ ವಿಮಾನಗಳ ಅತಿಯಾದ ಶಬ್ದದಿಂದ ಗಂಭೀರ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜರ್ಮನಿ ಸೇರಿದಂತೆ ಯೂರೋಪಿನ ಕೆಲವು ದೇಶಗಳು ರಾತ್ರಿ ಹತ್ತು ಗಂಟೆಯಿಂದ ಬೆಳಗಿನ ಆರು ಗಂಟೆವರೆಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿವೆ. ವಿಮಾನ ನಿಲ್ದಾಣ ನಗರದೊಳಗೇ ಇದ್ದರೆ ಅದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುವ ಜನರ ಗೋಳು ಅಷ್ಟಿಷ್ಟಲ್ಲ. ಹೀಗಾಗಿ ವಿಮಾನದ ಶಬ್ದದ ತೀವ್ರತೆಯನ್ನು ಕಮ್ಮಿಗೊಳಿಸುವುದು ಬಹಳ ಮುಖ್ಯ. ಈ ಕಾರಣದಿಂದ ಟೇಕಾಫ್ ಟ್ಯಾಂಗೋ ಮುಖ್ಯವೆನಿಸುತ್ತದೆ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?