Tuesday, July 1, 2025
Tuesday, July 1, 2025

ವಿಮಾನದಲ್ಲಿ ಆಲೂಗಡ್ಡೆಗೇನು ಕೆಲಸ ?

ಆಲೂಗಡ್ಡೆಗಳಲ್ಲಿ ಶೇ.80ರಷ್ಟು ನೀರಿನ ಅಂಶವಿದೆ. ಈ ನೀರಿನ ಅಂಶ ಮತ್ತು ಅವುಗಳಲ್ಲಿ ಇರುವ ಇತರ ರಾಸಾಯನಿಕಗಳ ಬಳಕೆಯಿಂದ ಅವು ಮಾನವ ದೇಹದಂತೆಯೇ ರೇಡಿಯೋ ತರಂಗಗಳನ್ನು ಗ್ರಹಿಸುತ್ತವೆ ಅಥವಾ ಪ್ರತಿಬಿಂಬಿಸುತ್ತವೆ. ವೈ-ಫೈ ತರಂಗಗಳು ಹೆಚ್ಚಾಗಿ 2.4 GHz ಮತ್ತು 5 GHz ವಾಯು ಅಲೆಯನ್ನು ಬಳಸುತ್ತವೆ.

ವೈಮಾನಿಕ ಕ್ಷೇತ್ರದಲ್ಲಿ ಭದ್ರತೆ, ಆರಾಮ ಮತ್ತು ತಂತ್ರಜ್ಞಾನ ಗಮನಾರ್ಹ ಅಂಶಗಳೆಂಬುದರಲ್ಲಿ ಎರಡು ಮಾತಿಲ್ಲ. ಇದರ ಜತೆಗೆ, ಪ್ರಯಾಣಿಕರಿಗೆ ಉತ್ತಮ ಅನುಭವ ಒದಗಿಸಲು ವಿಮಾನಗಳಲ್ಲಿ ನೀಡುವ ವೈ-ಫೈ ಸೇವೆಯೂ ಅಷ್ಟೇ ಮಹತ್ವದ್ದು. ಆದರೆ ಈ ವೈ-ಫೈ ಸಂಪರ್ಕವನ್ನು ಸರಿಯಾದ ರೀತಿಯಲ್ಲಿ ಪರೀಕ್ಷಿಸಲು ಬೋಯಿಂಗ್ ಕಂಪನಿಯ ಎಂಜಿನಿಯರ್‌ಗಳು 2012ರಲ್ಲಿ ಕೈಗೊಂಡ ಪ್ರಯೋಗವೊಂದು ವೈಮಾನಿಕ ಇತಿಹಾಸದ ವಿಚಿತ್ರ ಮತ್ತು ವಿಶಿಷ್ಟವಾಗಿದೆ.

wifi flight

ಇಡೀ ವಿಮಾನದಲ್ಲಿ ಸಾವಿರಾರು ಕಿಲೋ ಆಲೂಗಡ್ಡೆಯನ್ನು ಚೀಲದಲ್ಲಿ ತುಂಬಿ, ಅವೆಲ್ಲವುಗಳನ್ನು ಪ್ರಯಾಣಿಕರ ಸೀಟಿಗೆ ಕಟ್ಟಿ ವೈ-ಫೈ ಸಿಗ್ನಲ್ ಪರೀಕ್ಷೆ ನಡೆಸಿದ್ದು ವಿಚಿತ್ರವಾದರೂ ಸತ್ಯ. ಈ ಅನನ್ಯ ಪ್ರಯೋಗದ ಹಿನ್ನೆಲೆಯನ್ನು ವಿವರಿಸಬೇಕು. 2010ರ ದಶಕದ ಆರಂಭದಲ್ಲಿ ವಿಮಾನಗಳಲ್ಲಿ ವೈ-ಫೈ ವ್ಯವಸ್ಥೆಯ ಅಳವಡಿಕೆಯನ್ನು ಹಲವು ವಿಮಾನಯಾನ ಕಂಪನಿಗಳು ಆರಂಭಿಸಿದವು.

ಆದರೆ ಬೋಯಿಂಗ್‌ಗೆ ಸಮಸ್ಯೆಯೊಂದು ಎದುರಾಯಿತು. ವೈ-ಫೈ ಸಿಗ್ನಲ್‌ಗಳ ವಿತರಣೆಯು ಹತ್ತಿರದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಂದ ಪ್ರಭಾವಿತವಾಗಿ ಸಂಪರ್ಕ ಸಮರ್ಪಕವಾಗಿ ಆಗುತ್ತಿರಲಿಲ್ಲ. ಬೋಯಿಂಗ್‌ನ ಎಂಜಿನಿಯರ್‌ಗಳು ಪ್ರಯಾಣಿಕರ ದೇಹಗಳು, ಬಟ್ಟೆಗಳು ಮತ್ತು ಅವರ ಚಲನೆ ವೈ-ಫೈ ಸಿಗ್ನಲ್ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಿದ್ದರು.

ಇದನ್ನೂ ಓದಿ: ಪೈಲೆಟ್ ಗೆ ನಿದ್ದೆ ಬಂದರೆ ?

ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಗಂಟೆಗಟ್ಟಲೆ ವಿಮಾನದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿ ಪ್ರಯೋಗ ಮಾಡುವುದು ತುಸು ಕಷ್ಟಸಾಧ್ಯವೆಂದು ಅನಿಸಿತು. ಈ ಸಂದರ್ಭದಲ್ಲಿ ಬೋಯಿಂಗ್ ತಂಡವು ಯಾರೂ ನಿರೀಕ್ಷಿಸದ ಪರಿಹಾರವನ್ನು ಕಂಡುಹಿಡಿಯಿತು. ಪ್ರಯಾಣಿಕರ ಬದಲು ವಿಮಾನದಲ್ಲಿ ಆಲೂಗಡ್ಡೆಯನ್ನು ತುಂಬಿ ಪ್ರಯೋಗ ಮಾಡಲು ನಿರ್ಧರಿಸಿತು.

ಆಲೂಗಡ್ಡೆಗಳಲ್ಲಿ ಶೇ.80ರಷ್ಟು ನೀರಿನ ಅಂಶವಿದೆ. ಈ ನೀರಿನ ಅಂಶ ಮತ್ತು ಅವುಗಳಲ್ಲಿ ಇರುವ ಇತರ ರಾಸಾಯನಿಕಗಳ ಬಳಕೆಯಿಂದ ಅವು ಮಾನವ ದೇಹದಂತೆಯೇ ರೇಡಿಯೋ ತರಂಗಗಳನ್ನು ಗ್ರಹಿಸುತ್ತವೆ ಅಥವಾ ಪ್ರತಿಬಿಂಬಿಸುತ್ತವೆ. ವೈ-ಫೈ ತರಂಗಗಳು ಹೆಚ್ಚಾಗಿ 2.4 GHz ಮತ್ತು 5 GHz ವಾಯು ಅಲೆಯನ್ನು ಬಳಸುತ್ತವೆ. ಅಂದರೆ, ಆಲೂಗಡ್ಡೆಗಳು ಸಿಗ್ನಲ್‌ಗಳ ಮಾರ್ಗದಲ್ಲಿ ಮಾನವ ದೇಹದಂತೆಯೇ ವರ್ತಿಸುತ್ತವೆ. ಇದು ಬೋಯಿಂಗ್ ಎಂಜಿನಿಯರ್‌ಗಳಿಗೆ ತಮ್ಮ ವೈ-ಫೈ ಪರಿಕರಗಳನ್ನು ಯಾವುದೇ ತೊಂದರೆಯಿಲ್ಲದೆ ಪರೀಕ್ಷಿಸಲು ಒಂದು ಪರಿಪೂರ್ಣ ಪರ್ಯಾಯವಾಗಿ ಪರಿಣಮಿಸಿತು. ಬೋಯಿಂಗ್ ತನ್ನ777 ವಿಮಾನ ಮಾದರಿಯನ್ನು ನಿರ್ದಿಷ್ಟವಾಗಿ ಆರಿಸಿಕೊಂಡಿತು. ಈ ವಿಮಾನದಲ್ಲಿ ಪ್ರಯಾಣಿಕರ ಆಸನಗಳನ್ನು ತುಂಬಲು ಸಾವಿರಾರು ಕಿಲೋ ಆಲೂಗಡ್ಡೆಗಳನ್ನು ವಿಶಿಷ್ಟ ಶಾಕ್ ಪ್ರೂಫ್‌ ಬ್ಯಾಗುಗಳಲ್ಲಿ ಇಡಲಾಯಿತು.

flight wifi fecilities

ಬೋಯಿಂಗ್ ತನ್ನ ಈ ಪ್ರಯೋಗ ಶ್ರೇಣಿಗೆ Project SPUDS ಎಂದು ಹೆಸರಿಟ್ಟಿತು (SPUDS ಪೂರ್ಣ ರೂಪ Synthetic Personnel Using Dielectric Substitution). ಪ್ರತಿಯೊಂದು ಕುರ್ಚಿಯಲ್ಲಿ ಒಂದು ಆಲೂಗಡ್ಡೆ ಮೂಟೆಯನ್ನು ಇರಿಸಿ, ಇಡೀ ವಿಮಾನವನ್ನು ‘ಕೃತಕ ಪ್ರಯಾಣಿಕ’ರಿಂದ ತುಂಬಲಾಯಿತು.

ನಂತರ, ವೈ-ಫೈ ರೌಟರ್‌ಗಳನ್ನು ಹಲವು ಸ್ಥಳಗಳಲ್ಲಿ ಇರಿಸಿ ವಿವಿಧ ಸಿಗ್ನಲ್ ಬಲದ ಪ್ರಮಾಣಗಳ ಪರೀಕ್ಷೆ ನಡೆಸಲಾಯಿತು. ಈ ಪ್ರಯೋಗದ ಮುಖ್ಯ ಉದ್ದೇಶ- ವೈ-ಫೈ ಸಿಗ್ನಲ್ ಪ್ಲಾಟ್ ಫಾರ್ಮ್ ಹೇಗೆ ಹರಡುತ್ತದೆ ಎಂಬುದನ್ನು ಪತ್ತೆ ಮಾಡುವುದು, ಅನಾರೋಗ್ಯಕರ ಸಿಗ್ನಲ್ ಜೋನ್ ಅಥವಾ ಡೆಡ್ ಜೋನ್‌ಗಳನ್ನು ಗುರುತಿಸುವುದು, ಅತ್ಯುತ್ತಮ ಸಿಗ್ನಲ್ ವ್ಯಾಪ್ತಿಗೆ ರೌಟರ್‌ಗಳ ಸರಿಯಾದ ಸ್ಥಳ ನಿರ್ಧಾರ ಹಾಗೂ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ವೈ-ಫೈ ಸೇವೆಯ ಗುಣಮಟ್ಟ ಹೇಗೆ ಬದಲಾಗುತ್ತದೆ ಎಂಬುದನ್ನು ಪತ್ತೆ ಮಾಡುವುದು.

ವಿಮಾನದಲ್ಲಿ ಎಲ್ಲಿ ಎಷ್ಟು ಶಕ್ತಿಯ ಸಿಗ್ನಲ್ ಇದೆ ಎಂಬುದನ್ನು ತಿಳಿಯಲು ‘ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್ ಮ್ಯಾಪಿಂಗ್’ ತಂತ್ರಜ್ಞಾನವನ್ನು ಬಳಸಿದರು. ಈ ತಂತ್ರಜ್ಞಾನದ ಮೂಲಕ ವೈ-ಫೈ ತರಂಗಗಳು ಹೇಗೆ ಹರಡುತ್ತವೆ, ಎಲ್ಲಿ ನಿರ್ಬಂಧಗಳಿವೆ, ಎಲ್ಲಿ ತಡೆಗಳು ಎದುರಾಗುತ್ತವೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಲಾಯಿತು.

ಇದರ ಆಧಾರದ ಮೇಲೆ ಬೋಯಿಂಗ್ ಎಂಜಿನಿಯರ್‌ಗಳು ವೈ-ಫೈ ಎಕ್ಸೆಸ್ ಪಾಯಿಂಟ್‌ಗಳನ್ನು ಪುನರ್‌ಸ್ಥಳಾಂತರಿಸಿ ಪೂರಕ ಬೂಸ್ಟರ್ ಗಳನ್ನು ಸೇರಿಸಿದರು. ಇದರಿಂದ ಪ್ರಯಾಣಿಕರು ಯಾವುದೇ ಕುರ್ಚಿಯಲ್ಲಿ ಕುಳಿತರೂ ಉತ್ತಮ ವೈ-ಫೈ ಸಂಪರ್ಕವನ್ನು ಹೊಂದಲು ಸಾಧ್ಯವಾಯಿತು.

Vishweshwar Bhat

Vishweshwar Bhat

Editor in Chief

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!