Saturday, August 1, 2026
Saturday, August 1, 2026

ಚಿಕ್ಕ-ಪುಟ್ಟ ದೇಶಗಳಿಂದ ಕಲಿಯಬಹುದಾದ ಟೂರಿಸಂ ಪಾಠಗಳೇನು?

ಪಲಾವ್ ದೇಶಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವಿದೇಶಿ ಪ್ರವಾಸಿಯೂ ವಿಮಾನ ನಿಲ್ದಾಣದಲ್ಲಿ ಇಮಿಗ್ರಿಷನ್ ಪ್ರಕ್ರಿಯೆ ಮುಗಿಸುವಾಗ, ಅವರ ಪಾಸ್‌ಪೋರ್ಟ್ ಮೇಲೆ ಪರಿಸರ ಪ್ರತಿಜ್ಞಾವಿಧಿಯ ಮುದ್ರೆ ಒತ್ತಲಾಗುತ್ತದೆ. ಪ್ರವಾಸಿಗರು ಆ ಪ್ರತಿಜ್ಞೆಗೆ ಸಹಿ ಮಾಡಿದ ನಂತರವೇ ಅವರಿಗೆ ದೇಶದೊಳಗೆ ಪ್ರವೇಶಿಸಲು ಅನುಮತಿ ಸಿಗುತ್ತದೆ. 'ಪಲಾವ್‌ನ ಮಕ್ಕಳೇ, ನಿಮ್ಮ ಸುಂದರ ದ್ವೀಪದ ಗೃಹಕ್ಕೆ ಆಗಮಿಸುವ ನಾನು ಪರಿಸರ ಪ್ರಜ್ಞೆಯಿಂದ ನಡೆಯುತ್ತೇನೆ. ನೈಸರ್ಗಿಕ ಸಂಪತ್ತನ್ನು ರಕ್ಷಿಸುತ್ತೇನೆ. ಯಾವುದೇ ಹಾನಿ ಎಸಗದೇ, ಕೇವಲ ಹೆಜ್ಜೆಗುರುತುಗಳನ್ನು ಮಾತ್ರ ಬಿಟ್ಟು ಹೋಗುತ್ತೇನೆ' ಇಂದು ಪ್ರತಿಜ್ಞೆ ಸ್ವೀಕರಿಸಬೇಕು ಮತ್ತು ಹಾಗಂತ ಬರೆದುಕೊಡಬೇಕು.

ನೀವು ಪಲಾವ್ (Palau) ಎಂಬ ಹೆಸರಿನ ಪಶ್ಚಿಮ ಪೆಸಿಫಿಕ್ ಮಹಾಸಾಗರದಲ್ಲಿರುವ, ಮೈಕ್ರೋನೇಷ್ಯಾ ವಲಯದ ಅತ್ಯಂತ ಸುಂದರ ದ್ವೀಪ ರಾಷ್ಟ್ರದ ಹೆಸರನ್ನು ಕೇಳಿರಬಹುದು. ಸುಮಾರು 340 ಕ್ಕೂ ಹೆಚ್ಚು ಸುಣ್ಣದ ಕಲ್ಲು ಮತ್ತು ಜ್ವಾಲಾಮುಖಿ ದ್ವೀಪಗಳ ಸಮೂಹವನ್ನು ಹೊಂದಿರುವ ಈ ಪುಟ್ಟ ದೇಶದ ಒಟ್ಟು ಜನಸಂಖ್ಯೆ ಕೇವಲ ಹದಿನೆಂಟು ಸಾವಿರ. ಇದರ ರಾಜಧಾನಿ ನಗೆರುಲ್ಮುಡ್ ಹಾಗೂ ಕೊರೊರ್ ಪ್ರಮುಖ ನಗರ. ನೈಸರ್ಗಿಕ ವಿಸ್ಮಯಗಳಿಗೆ ಹೆಸರಾಗಿರುವ ಪಲಾವ್, ಜಗತ್ತಿನ ಅತ್ಯುತ್ತಮ ಸ್ಕೂಬಾ ಡೈವಿಂಗ್ ಮತ್ತು ನೌಕಾಯಾನ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ 'ರಾಕ್ ಐಲ್ಯಾಂಡ್ಸ್' ಹಸಿರು ಗುಡ್ಡಗಳಂತೆ ಸಮುದ್ರದಲ್ಲಿ ತೇಲುವ ದೃಶ್ಯ ವೈಭವಗಳಿಗೆ ಹೆಸರುವಾಸಿ. ಹಾಗೆಯೇ, ಲಕ್ಷಾಂತರ ವಿಷರಹಿತ ಜೆಲ್ಲಿಫಿಶ್‌ಗಳನ್ನು ಹೊಂದಿರುವ ‘ಜೆಲ್ಲಿಫಿಶ್ ಲೇಕ್’ ಈ ದೇಶದ ಪ್ರಮುಖ ಆಕರ್ಷಣೆ.

ಇದನ್ನೂ ಓದಿ: ಹೆಸರಿಗೆ ತಕ್ಕಂತೆ ʼತಾಜಾʼ ತಿಂಡಿ ತಾಣ

ಇಷ್ಟೇ ಆಗಿದ್ದಿದ್ದರೆ ನಾನು ಪಲಾವ್ ಬಗ್ಗೆ ಬರೆಯುತ್ತಿರಲಿಲ್ಲ. ವಿಶ್ವದಲ್ಲಿಯೇ ಅತ್ಯುತ್ತಮ ಟೂರಿಸಂ ಪ್ರಾಕ್ಟಿಸ್‌ಗಳನ್ನು ಈ ದೇಶ ಅಳವಡಿಸಿಕೊಂಡು ಆಚರಿಸಿಕೊಂಡು ಬರುತ್ತಿದೆ. ಸಾಗರ ಜೀವವೈವಿಧ್ಯಗಳನ್ನು ಕಾಪಾಡುವಲ್ಲಿ ಪಲಾವ್ ವಿಶ್ವಕ್ಕೆ ಮಾದರಿಯಾಗಿದೆ. ದೇಶ ಸಣ್ಣದಿರಬಹುದು, ಆದರೆ ಗರಿಷ್ಠ ಪ್ರವಾಸೋದ್ಯಮ ಅನುಭವವನ್ನು ನೀಡಬೇಕು ಮತ್ತು ಅತ್ಯುತ್ತಮ ಅಭ್ಯಾಸವನ್ನು ಜಾರಿಗೊಳಿಸಬೇಕು ಎಂಬ ಅದರ ತುಡಿತವನ್ನು ಪ್ರಶಂಸಿಸಲೇಬೇಕು. 2009ರಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ 'ಶಾರ್ಕ್ ಸಂರಕ್ಷಣಾ ವಲಯ'ವನ್ನು ಘೋಷಿಸಿದ ಹೆಗ್ಗಳಿಕೆ ಈ ದೇಶಕ್ಕಿದೆ. ಪ್ರವಾಸಿಗರು ಪ್ರಕೃತಿಗೆ ಹಾನಿ ಮಾಡದಂತೆ ಕಡ್ಡಾಯಗೊಳಿಸಿರುವ 'ಪಲಾವ್ ಪ್ರತಿಜ್ಞೆ (ಪ್ಲೆಡ್ಜ್)' ಹಾಗೂ ರಾಸಾಯನಿಕ ಸನ್‌ಸ್ಕ್ರೀನ್ ನಿಷೇಧದಂಥ ಕ್ರಾಂತಿಕಾರಿ ನೀತಿಗಳು ಇಡೀ ಪ್ರಪಂಚಕ್ಕೆ ಪರಿಸರ ಕಾಳಜಿಯ ದಾರಿದೀಪವಾಗಿವೆ.

palau-hero

ಸಣ್ಣ ಭೂಪ್ರದೇಶವಾಗಿದ್ದರೂ, ತನ್ನ ನಿಸರ್ಗ ಸೌಂದರ್ಯ ಮತ್ತು ಕಟ್ಟುನಿಟ್ಟಿನ ಹಸಿರು ನೀತಿಗಳಿಂದಾಗಿ ಪಲಾವ್ ಜಾಗತಿಕ ಭೂಪಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಿ ಆದಾಯ ಗಳಿಸುವ ಆತುರದಲ್ಲಿದ್ದರೆ, ಪಲಾವ್ ಮಾತ್ರ ತನ್ನ ನೈಸರ್ಗಿಕ ಪರಿಸರ ಹಾಗೂ ಹವಳದ ದಿಬ್ಬಗಳನ್ನು (Coral Reefs) ಉಳಿಸಿಕೊಳ್ಳಲು ಪ್ರವಾಸಿಗರ ಮೇಲೆಯೇ ಶಾಸನಬದ್ಧ ಹೊಣೆಗಾರಿಕೆಯನ್ನು ಹೊರಿಸಿದೆ. ಡಿಸೆಂಬರ್ 2017ರಲ್ಲಿ ಜಾರಿಗೆ ಬಂದ ‘ಪಲಾವ್ ಪ್ಲೆಡ್ಜ್’ (Palau Pledge) ಎಂಬ ಈ ಕ್ರಾಂತಿಕಾರಿ ನಿಯಮವು ವಿಶ್ವದ ಗಮನ ಸೆಳೆದಿದೆ.

ಪಲಾವ್ ದೇಶಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವಿದೇಶಿ ಪ್ರವಾಸಿಯೂ ವಿಮಾನ ನಿಲ್ದಾಣದಲ್ಲಿ ಇಮಿಗ್ರಿಷನ್ ಪ್ರಕ್ರಿಯೆ ಮುಗಿಸುವಾಗ, ಅವರ ಪಾಸ್‌ಪೋರ್ಟ್ ಮೇಲೆ ಪರಿಸರ ಪ್ರತಿಜ್ಞಾವಿಧಿಯ ಮುದ್ರೆ ಒತ್ತಲಾಗುತ್ತದೆ. ಪ್ರವಾಸಿಗರು ಆ ಪ್ರತಿಜ್ಞೆಗೆ ಸಹಿ ಮಾಡಿದ ನಂತರವೇ ಅವರಿಗೆ ದೇಶದೊಳಗೆ ಪ್ರವೇಶಿಸಲು ಅನುಮತಿ ಸಿಗುತ್ತದೆ. 'ಪಲಾವ್‌ನ ಮಕ್ಕಳೇ, ನಿಮ್ಮ ಸುಂದರ ದ್ವೀಪದ ಗೃಹಕ್ಕೆ ಆಗಮಿಸುವ ನಾನು ಪರಿಸರ ಪ್ರಜ್ಞೆಯಿಂದ ನಡೆಯುತ್ತೇನೆ. ನೈಸರ್ಗಿಕ ಸಂಪತ್ತನ್ನು ರಕ್ಷಿಸುತ್ತೇನೆ. ಯಾವುದೇ ಹಾನಿ ಎಸಗದೇ, ಕೇವಲ ಹೆಜ್ಜೆಗುರುತುಗಳನ್ನು ಮಾತ್ರ ಬಿಟ್ಟು ಹೋಗುತ್ತೇನೆ' ಇಂದು ಪ್ರತಿಜ್ಞೆ ಸ್ವೀಕರಿಸಬೇಕು ಮತ್ತು ಹಾಗಂತ ಬರೆದುಕೊಡಬೇಕು. ವಿಶೇಷವೆಂದರೆ, ಈ ಪ್ರತಿಜ್ಞೆಯನ್ನು ಪಲಾವ್ ದೇಶದ ಚಿಕ್ಕ ಮಕ್ಕಳು ತಯಾರಿಸಿದ್ದು, ಪ್ರವಾಸಿಗರಿಗೆ ತಮ್ಮ ಭವಿಷ್ಯದ ಜವಾಬ್ದಾರಿಯನ್ನು ನೆನಪಿಸುವ ವಿಶಿಷ್ಟ ಮಾದರಿಯಾಗಿದೆ.

snorkeling-in-jellyfish-lake

ಕೇವಲ ಪ್ರತಿಜ್ಞೆ ಬರೆಸಿಕೊಳ್ಳುವುದಷ್ಟೇ ಅಲ್ಲ, ಪ್ರಕೃತಿಗೆ ಧಕ್ಕೆ ತರುವ ನಡವಳಿಕೆಗಳ ವಿರುದ್ಧ ದೇಶವು ಕಟ್ಟುನಿಟ್ಟಿನ ಕಾನೂನು ಚೌಕಟ್ಟನ್ನು ರೂಪಿಸಿದೆ. ಸಮುದ್ರದಲ್ಲಿ ಈಜುವಾಗ ಅಥವಾ ಸ್ಕೂಬಾ ಡೈವಿಂಗ್ ಮಾಡುವಾಗ ಹವಳಗಳನ್ನು ತುಳಿಯುವುದು, ಮುಟ್ಟುವುದು ಅಥವಾ ಅವುಗಳಿಗೆ ಹಾನಿ ಉಂಟುಮಾಡುವುದು ಗಂಭೀರ ಅಪರಾಧ ಇಂದು ಪರಿಗಣಿಸಲಾಗಿದೆ. ಆಕ್ಸಿಬೆನ್ಝೋನ್ (Oxybenzone) ಮತ್ತು ಆಕ್ಟಿನೋಕ್ಸೇಟ್ (Octinoxate) ನಂಥ ರಾಸಾಯನಿಕಗಳನ್ನು ಹೊಂದಿರುವ ಸನ್‌ಸ್ಕ್ರೀನ್‌ಗಳು ಹವಳಗಳ ಸಾವಿಗೆ ಕಾರಣವಾಗುತ್ತವೆ. ಇದನ್ನು ಮನಗಂಡು, ಪಲಾವ್ ಸರಕಾರವು ಇಂಥ ರಾಸಾಯನಿಕ ಸನ್‌ಸ್ಕ್ರೀನ್‌ಗಳ ಮಾರಾಟ, ಬಳಕೆ ಮತ್ತು ದೇಶದೊಳಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಹಾಗೇ ಪ್ಲಾಸ್ಟಿಕ್ ಎಸೆಯುವುದು, ವನ್ಯಜೀವಿಗಳನ್ನು ಪೀಡಿಸುವುದು ಅಥವಾ ಸಾಗರ ಜೀವಿಗಳಿಗೆ ತೊಂದರೆ ಕೊಡುವುದು ಕಂಡುಬಂದರೆ ಗರಿಷ್ಠ ಒಂದು ಸಾವಿರ ಅಮೆರಿಕನ್ ಡಾಲರ್ (ಸುಮಾರು 80,000 ರುಪಾಯಿಗಳಿಗೂ ಹೆಚ್ಚು) ವರೆಗೆ ಭಾರಿ ದಂಡ ವಿಧಿಸಲಾಗುತ್ತದೆ.

ಪಲಾವ್ ತನ್ನ ಅಪೂರ್ವ ನೈಸರ್ಗಿಕ ಸೌಂದರ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ 2022ರಲ್ಲಿ 'ಒಲ್ವೌ ಪಲಾವ್' (Ol'au Palau) ಎಂಬ ವಿನೂತನ ಆ್ಯಪ್ ಆಧಾರಿತ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತಂದಿದೆ. ಪ್ರವಾಸೋದ್ಯಮದಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ ಪರಿಚಯಿಸಲಾದ ಇದು ಜಗತ್ತಿನ ಮೊಟ್ಟಮೊದಲ ‘ಗೆಮಿಫೈಡ್ ಇಕೋ-ಟೂರಿಸಂ’ (Gamified Eco-tourism) ಅಥವಾ ಆಟದ ಮಾದರಿಯ ಪರಿಸರ-ಸ್ನೇಹಿ ಪ್ರವಾಸೋದ್ಯಮ ವ್ಯವಸ್ಥೆಯಾಗಿದೆ. ಈ ಆ್ಯಪ್ ಮೂಲಕ ಪಲಾವ್ ಸರಕಾರವು ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಪ್ರವಾಸಿಗರ ಹೆಗಲಿಗೇ ಅತ್ಯಂತ ಸೃಜನಾತ್ಮಕವಾಗಿ ವರ್ಗಾಯಿಸಿದೆ. ಈ ವಿನೂತನ ವ್ಯವಸ್ಥೆಯ ಕಾರ್ಯವಿಧಾನವು ಸಂಪೂರ್ಣವಾಗಿ ಪ್ರವಾಸಿಗರ ದೈನಂದಿನ ಪರಿಸರ ಸ್ನೇಹಿ ನಡವಳಿಕೆಗಳು ಮತ್ತು ಆಯ್ಕೆಗಳ ಮೇಲೆ ಆಧಾರಿತವಾಗಿದೆ.

ಪ್ರವಾಸಿಗರು ಪಲಾವ್ ದ್ವೀಪದಲ್ಲಿ ಪ್ರಕೃತಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಆ್ಯಪ್ ಮೂಲಕ ಅವರಿಗೆ ನಿರ್ದಿಷ್ಟ ಡಿಜಿಟಲ್ ಅಂಕಗಳು (ಪಾಯಿಂಟ್ಸ್) ಜಮೆಯಾಗುತ್ತವೆ. ಉದಾಹರಣೆಗೆ, ಸಮುದ್ರದೊಳಗಿನ ಅಪರೂಪದ ಹವಳದ ದಿಬ್ಬಗಳಿಗೆ ಹಾನಿ ಮಾಡದಂಥ ಪರಿಸರ-ಸ್ನೇಹಿ ಸನ್‌ಸ್ಕ್ರೀನ್ ಬಳಸುವುದು, ಸ್ಥಳೀಯವಾಗಿ ಬೆಳೆದ ಸಾವಯವ ಹಾಗೂ ಸುಸ್ಥಿರ ಆಹಾರವನ್ನು ಸೇವಿಸುವುದು, ಒಮ್ಮೆ ಮಾತ್ರ ಬಳಸುವ ಪ್ಲಾಸ್ಟಿಕ್ ವಸ್ತುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು, ದ್ವೀಪದ ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲ ನೀಡುವುದು ಮತ್ತು ತಮ್ಮ ಪ್ರಯಾಣದ ಕಾರ್ಬನ್ ಹೆಜ್ಜೆಗುರುತನ್ನು (Carbon footprint) ಲೆಕ್ಕಹಾಕಿ ಅದನ್ನು ಸರಿದೂಗಿಸುವ ಪರಿಸರ ಯೋಜನೆಗಳಿಗೆ ದೇಣಿಗೆ ನೀಡುವುದು ಮುಂತಾದ ಸಕಾರಾತ್ಮಕ ಕಾರ್ಯಗಳಿಗೆ ಪ್ರವಾಸಿಗರಿಗೆ ಅಂಕಗಳನ್ನು ನೀಡಲಾಗುತ್ತದೆ. ಆಟದ ರೂಪದಲ್ಲಿ ಅಂಕಗಳನ್ನು ಗಳಿಸುವ ಈ ಪ್ರಕ್ರಿಯೆಯು ಪ್ರವಾಸಿಗರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ.

4039e7_6d48b19d5008413c801bbff5b

ಈ 'ಪರಿಸರ ಡಿಜಿಟಲ್ ಪಾಯಿಂಟ್' ವ್ಯವಸ್ಥೆಯ ಅತ್ಯಂತ ಆಕರ್ಷಕ ಮತ್ತು ವಿಶಿಷ್ಟವಾದ ಅಂಶವೆಂದರೆ, ಪ್ರವಾಸಿಗರು ಗಳಿಸಿದ ಅಂಕಗಳನ್ನು ಬಳಸಿ ಪಡೆಯುವ ಪ್ರತಿಫಲ ಅಥವಾ ಬಹುಮಾನಗಳು. ಸಾಮಾನ್ಯ ಪ್ರವಾಸೋದ್ಯಮದಂತೆ ಪ್ರವಾಸಿಗರು ತಾವು ಸಂಗ್ರಹಿಸಿದ ಅಂಕಗಳನ್ನು ವಿಮಾನದ ಟಿಕೆಟ್, ಹೊಟೇಲ್ ಬಿಲ್ ರಿಯಾಯಿತಿಗಳಿಗಾಗಿಯೋ ಅಥವಾ ಶಾಪಿಂಗ್ ಮಾಡಲು ಬಳಸುವಂತಿಲ್ಲ. ಬದಲಾಗಿ, ಈ ಅಂಕಗಳ ಮೂಲಕ ಪಲಾವ್‌ನ ಸ್ಥಳೀಯ ನಿವಾಸಿಗಳಿಗೆ ಮಾತ್ರ ಮೀಸಲಾಗಿರುವ ವಿಶೇಷ ಮತ್ತು ರಹಸ್ಯ ತಾಣಗಳಿಗೆ ಅನನ್ಯ ಪ್ರವೇಶವನ್ನು ಪಡೆಯಬಹುದು. ಅಂದರೆ, ಅಂಕಗಳನ್ನು ಗಳಿಸಿದ ಪರಿಸರ-ಪ್ರೇಮಿ ಪ್ರವಾಸಿಗರಿಗೆ ದ್ವೀಪದ ಗುಪ್ತ ಜಲಪಾತಗಳನ್ನು ವೀಕ್ಷಿಸುವ, ಸ್ಥಳೀಯರೊಂದಿಗೆ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಪಾಲ್ಗೊಳ್ಳುವ, ಐತಿಹಾಸಿಕ ತಾರೋ ಕೃಷಿ ಭೂಮಿಗೆ ಭೇಟಿ ನೀಡುವ ಮತ್ತು ಸ್ಥಳೀಯರ ವಿಶಿಷ್ಟ ಸಾಂಸ್ಕೃತಿಕ ಆಚರಣೆಗಳಲ್ಲಿ ಭಾಗವಹಿಸುವ ಅಪೂರ್ವ ಅವಕಾಶಗಳು ಲಭಿಸುತ್ತವೆ. ಎಷ್ಟೇ ಹಣವಿದ್ದರೂ ಖರೀದಿಸಲಾಗದಂಥ ಈ ವಿಶಿಷ್ಟ ಅನುಭವಗಳು, ಪರಿಸರವನ್ನು ಗೌರವಿಸುವ ಪ್ರವಾಸಿಗರಿಗೆ ಮಾತ್ರ ಸಿಗುವಂತೆ ಮಾಡಲಾಗಿದೆ.

ಪಲಾವ್ ಸರಕಾರದ ಈ 'ಒಲ್ವೌ ಪಲಾವ್' ಆ್ಯಪ್ ಕೇವಲ ಒಂದು ತಾಂತ್ರಿಕ ಆವಿಷ್ಕಾರವಾಗಿ ಉಳಿದಿಲ್ಲ, ಬದಲಿಗೆ ಜಾಗತಿಕ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇದು ನೀಡಿದ ಒಂದು ಅದ್ಭುತ ಪರಿಸರ-ಪಾಠವಾಗಿದೆ. ಇದು ಕೇವಲ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ವಿನಾಶಕಾರಿ ಪ್ರವಾಸೋದ್ಯಮದ (Extractive tourism) ಬದಲು, ಪರಿಸರವನ್ನು ಮರು-ನಿರ್ಮಾಣ ಮಾಡುವ ಮತ್ತು ಪೋಷಿಸುವ 'ಪುನರುತ್ಪಾದಕ ಪ್ರವಾಸೋದ್ಯಮ'ಕ್ಕೆ (Regenerative tourism) ನಾಂದಿ ಹಾಡಿದೆ. ದ್ವೀಪ ರಾಷ್ಟ್ರಗಳು ಹವಾಮಾನ ಬದಲಾವಣೆ ಮತ್ತು ಮಾಲಿನ್ಯದಿಂದ ಎದುರಿಸುತ್ತಿರುವ ಭಾರಿ ಅಪಾಯಗಳನ್ನು ತಗ್ಗಿಸಲು ಹಾಗೂ ತಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಉಳಿಸಲು ಇಂಥ ಕಟ್ಟುನಿಟ್ಟಾದ ಹಾಗೂ ಸೃಜನಶೀಲ ಕ್ರಮಗಳ ಅತ್ಯಗತ್ಯವಿದೆ. ಪಲಾವ್ ದೇಶದ ಈ 'ಗೆಮಿಫೈಡ್ ಇಕೋ-ಟೂರಿಸಂ' ಮಾದರಿಯು ಪರಿಸರ ಕಾಳಜಿ ಮತ್ತು ಪ್ರವಾಸೋದ್ಯಮವನ್ನು ಹೇಗೆ ಯಶಸ್ವಿಯಾಗಿ ಒಟ್ಟಿಗೆ ಕೊಂಡೊಯ್ಯಬಹುದು ಎಂಬುದಕ್ಕೆ ಇಡೀ ಜಗತ್ತಿನ ಇತರ ದೇಶಗಳಿಗೂ ಒಂದು ಶ್ರೇಷ್ಠ ಹಾಗೂ ಅನುಕರಣೀಯ ಮಾದರಿಯಾಗಿದೆ.

ಇದೇ ರೀತಿ, ದಕ್ಷಿಣ ಅಮೆರಿಕ ಖಂಡದ ಇಕ್ವೆಡಾರ್ ದೇಶಕ್ಕೆ ಸೇರಿದ ಗಲಾಪಗೋಸ್ ದ್ವೀಪಗಳು ಜಾಗತಿಕ ಜೀವವೈವಿಧ್ಯದ ರತ್ನ ಕಿರೀಟ ಎನಿಸಿಕೊಂಡಿವೆ. ಪೆಸಿಫಿಕ್ ಮಹಾಸಾಗರದಲ್ಲಿರುವ ಈ ದ್ವೀಪ ಸಮೂಹವು ಚಾರ್ಲ್ಸ್ ಡಾರ್ವಿನ್ ಅವರ ಜೈವಿಕ ವಿಕಾಸವಾದ ಸಿದ್ಧಾಂತಕ್ಕೆ ನೈಜ ಪ್ರೇರಣೆ ನೀಡಿದ ತಾಣ. ಪ್ರಪಂಚದಾದ್ಯಂತ ಅಪರೂಪ ಎನಿಸಿರುವ ದೈತ್ಯ ಆಮೆಗಳು, ಸಮುದ್ರ ಇಗುವಾನಾಗಳು ಹಾಗೂ ಅಪರೂಪದ ಹಕ್ಕಿಗಳಿಗೆ ಇದು ತವರು. ಪ್ರವಾಸಿಗರ ಅತಿಯಾದ ಆಗಮನದಿಂದ ಈ ಸೂಕ್ಷ್ಮ ಸಾಗರ ಮತ್ತು ಭೂ ಆವಾಸಸ್ಥಾನ ನಾಶವಾಗುವುದನ್ನು ತಡೆಯಲು ಇಕ್ವೆಡಾರ್ ಸರಕಾರವು ಅತ್ಯಂತ ಕಟ್ಟುನಿಟ್ಟಿನ ‘ಟ್ರಾನ್ಸಿಟ್ ಕಂಟ್ರೋಲ್ ಕಾರ್ಡ್’ ಮತ್ತು ಶೇ. 100 ಗೈಡೆಡ್ ಟೂರ್ ನಿಯಮಗಳನ್ನು ಜಾರಿಗೆ ತಂದಿದೆ.

ಗಲಾಪಗೋಸ್ ದ್ವೀಪಗಳಿಗೆ ಕಾಲಿಡುವ ಪ್ರತಿಯೊಬ್ಬ ಪ್ರವಾಸಿಯೂ ಟ್ರಾನ್ಸಿಟ್ ಕಂಟ್ರೋಲ್ ಕಾರ್ಡ್ (ಟಿಸಿಸಿ) ಅನ್ನು ಪಡೆಯುವುದು ಶಾಸನಬದ್ಧವಾಗಿ ಕಡ್ಡಾಯ. ಪ್ರವಾಸಿಗರು ಪ್ರಮುಖ ಭೂಭಾಗದಿಂದ ದ್ವೀಪಕ್ಕೆ ವಿಮಾನವೇರುವ ಮುನ್ನವೇ ಈ ಡಿಜಿಟಲ್ ಕಾರ್ಡ್ ಪಡೆಯಬೇಕು. ಈ ವ್ಯವಸ್ಥೆಯು ದ್ವೀಪದಲ್ಲಿ ಪ್ರಸ್ತುತ ಎಷ್ಟು ಜನ ಪ್ರವಾಸಿಗರಿದ್ದಾರೆ, ಅವರು ಎಷ್ಟು ದಿನ ತಂಗಲಿದ್ದಾರೆ ಮತ್ತು ಅವರು ಯಾವ ಮಾರ್ಗದಲ್ಲಿ ಸಂಚರಿಸಲಿದ್ದಾರೆ ಎಂಬುದನ್ನು ಕಟ್ಟುನಿಟ್ಟಾಗಿ ಟ್ರ್ಯಾಕ್ ಮಾಡುತ್ತದೆ. ಇದರೊಂದಿಗೆ, ದ್ವೀಪದ ಯಾವುದೇ ಸಂರಕ್ಷಿತ ಕಾಡು, ಪರ್ವತ ಅಥವಾ ಕರಾವಳಿ ತೀರಕ್ಕೆ ಭೇಟಿ ನೀಡಬೇಕಾದರೆ ಇಕ್ವೆಡಾರ್ ರಾಷ್ಟ್ರೀಯ ಉದ್ಯಾನವನ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟ 'ನ್ಯಾಚುರಲಿಸ್ಟ್ ಗೈಡ್' ಸಾಂಗತ್ಯ ಕಡ್ಡಾಯ. ಯಾವುದೇ ಪ್ರವಾಸಿ ಒಂಟಿಯಾಗಿ ಅಥವಾ ಗೈಡ್ ಇಲ್ಲದೇ ನಿಯಂತ್ರಿತ ವಲಯಗಳಿಗೆ ಪ್ರವೇಶಿಸುವಂತಿಲ್ಲ.

JELU

ಈ ದ್ವೀಪಗಳ ಮತ್ತೊಂದು ವಿಶೇಷ ಅಂದ್ರೆ ವನ್ಯಜೀವಿಗಳ ಸ್ವತಂತ್ರ ಜೀವನಕ್ಕೆ ನೀಡಲಾಗಿರುವ ಕಾನೂನುಬದ್ಧ ರಕ್ಷಣೆ. ಇಲ್ಲಿನ ದೈತ್ಯ ಆಮೆಗಳು ಮತ್ತು ಸಮುದ್ರ ಇಗುವಾನಾಗಳು ಮಾನವರನ್ನು ಕಂಡು ಹೆದರುವುದಿಲ್ಲ; ಹಾಗೆಂದು ಪ್ರವಾಸಿಗರು ಅವುಗಳನ್ನು ಸ್ಪರ್ಶಿಸುವುದು, ಆಹಾರ ಹಾಕುವುದು ಅಥವಾ ಚೇಷ್ಟೆ ಮಾಡುವುದು ಗುರುತರ ಅಪರಾಧ. ಪ್ರವಾಸಿಗರು ಪ್ರಾಣಿಗಳಿಂದ ಕನಿಷ್ಠ 2 ಮೀಟರ್ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಫ್ಲ್ಯಾಶ್ ಛಾಯಾಗ್ರಹಣ ಮತ್ತು ಡ್ರೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗೈಡ್‌ಗಳು ಈ ನಿಯಮಗಳು ಚಾಚೂತಪ್ಪದೆ ಪಾಲನೆಯಾಗುತ್ತಿವೆಯೇ ಎಂಬುದನ್ನು ಪ್ರತಿ ಹಂತದಲ್ಲೂ ಮೇಲ್ವಿಚಾರಣೆ ಮಾಡುತ್ತಾರೆ.

ಪ್ರವಾಸೋದ್ಯಮ ರಂಗದಲ್ಲಿ ಈ ರೀತಿಯ ದೂರದರ್ಶಿ ನಿರ್ಧಾರಗಳನ್ನು ಸಣ್ಣ ಸಣ್ಣ ದೇಶಗಳು ಜಾರಿಗೆ ತಂದಿರುವಾಗ, ನಮಗೇನು ಸಮಸ್ಯೆ? ಬೇರೆ ದೇಶಗಳು ಹಾಕಿಕೊಟ್ಟಿರುವ ಅತ್ಯುತ್ತಮ ಮಾದರಿಗಳನ್ನು ಜಾರಿಗೊಳಿಸಲು ನಮಗೇಕೆ ಇನ್ನೂ ಸಾಧ್ಯವಾಗಿಲ್ಲ? ಇಂಥ ಸಣ್ಣ ಕ್ರಮಗಳು ನಮ್ಮ ಪ್ರವಾಸಿ ತಾಣಗಳ ಗುಣಮಟ್ಟವನ್ನು ಹೆಚ್ಚಿಸಲು, ಅವುಗಳನ್ನು ಸಂರಕ್ಷಿಸಲು ಮತ್ತು ರಾಜ್ಯದಲ್ಲಿ ಉತ್ತಮ ಪ್ರವಾಸಿ ಪರಿಸರ ಪ್ರಜ್ಞೆಯನ್ನು ಸಹಾಯಕವಾಗುವುದರಲ್ಲಿ ಸಂದೇಹವೇ ಇಲ್ಲ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?