ದೇವರು ಎಂದರೇನು ಎಂಬ ಪ್ರಶ್ನೆಗೆ ಪ್ರಯಾಣವೇ ಉತ್ತರವಾಗಲಿ!
ತಮ್ಮನ್ನು ತಾವು ಸೆಕ್ಯುಲರ್ ಎಂದು ಘೋಷಿಸಿಕೊಳ್ಳುವುದು ಬಹುಪಾಲು ದೇಶಗಳ ಇಂದಿನ ಅವಶ್ಯಕತೆಯಾಗಿದೆ. ಅದರಂತೆ ಜಪಾನ್ ದೇಶವು ಕೂಡ ತನ್ನನ್ನು ಸೆಕ್ಯುಲರ್ ದೇಶ ಎಂದು ಘೋಷಿಸಿಕೊಂಡಿದೆ. ‘ಶಿಂಟೋ’ ಎಂಬುದು ಜಪಾನ್‌ನ ಮೂಲ ಧರ್ಮ. ಇದನ್ನು ಜಪಾನ್‌ನ ಸ್ಥಳೀಯ ಮತ್ತು ಅತ್ಯಂತ ಪ್ರಾಕೃತಿಕ ಧರ್ಮವೆಂದು ಹೇಳಲಾಗಿದೆ. ಶಿಂಟೋ ಧರ್ಮವನ್ನು ಯಾವುದೇ ವ್ಯಕ್ತಿಯೊಬ್ಬ ತನ್ನ ಕ್ರಿಯೆಯಿಂದ ಅಥವಾ ಗ್ರಂಥದಿಂದ ನಿಯಂತ್ರಿಸುವುದಿಲ್ಲ. ಇದೊಂದು ತನಗೆ ತಾನೇ ಉಗಮವಾಗಿ, ಆದಿ ಅಂತ್ಯವಿಲ್ಲದೆ ಇರುವ ಧರ್ಮ.
- ಅಂಜಲಿ ರಾಮಣ್ಣ
ಉತ್ತಮ ಪ್ರವಾಸಿಯೊಬ್ಬನಿಗೆ ಇರಲೇ ಬೇಕಾದ ಸಾಮಾನ್ಯ ಶಿಸ್ತು ಎಂದರೆ ಎಲ್ಲಿಯೂ ಯಾರೊಡನೆಯೂ ಧರ್ಮ, ಆಹಾರ ಮತ್ತು ಭಾಷೆಯ ಬಗ್ಗೆ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಎನ್ನುವುದು. ಆದರೆ ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು ಎನ್ನುವ ನೀತಿಯನ್ನು ಅನುಸರಿಸುವುದನ್ನು ಕಲಿತಿದ್ದರೆ ಎಲ್ಲಿಯೂ ಇವುಗಳ ಬಗ್ಗೆ ಮಾತನಾಡಿ, ಕೇಳಿ ತಿಳಿದುಕೊಂಡು ಮಾಹಿತಿಯನ್ನು ಆಸ್ವಾದಿಸಬಹುದು ಎನ್ನುವುದೂ ಪ್ರವಾಸದ ಮತ್ತೊಂದು ಗುಣಲಕ್ಷಣ.
ಆ ದಿನ ಗ್ರೀಸ್ ದೇಶದ ಅಥೆನ್ಸ್ ನಗರದ Syntagma Square ಎನ್ನುವ ರಸ್ತೆಯಲ್ಲಿ ಹಸಿರು ಬಣ್ಣದ ಡ್ರ್ಯಾಗನ್ ವೇಷಧಾರಿಗಳು ರಸ್ತೆಯ ಎರಡು ಬದಿಯಲ್ಲಿಯೂ ನೀಳವಾಗಿ ನುಲಿಯುತ್ತಾ ಸಾಗುತ್ತಿದ್ದರು. ಅವರ ನಡುವೆ ನೂರಕ್ಕೂ ಹೆಚ್ಚು ಜನರು ಗುಲಾಬಿ ಮತ್ತು ಬಿಳಿ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಕೆಲವು ವಾದ್ಯಗಳನ್ನು ನುಡಿಸುತ್ತಾ, ಕೇಳಿರದ ಭಾಷೆಯಲ್ಲಿ ಅಪರಿಚಿತ ರಾಗದಲ್ಲಿ ಹಾಡುತ್ತಾ ಹೆಜ್ಜೆ ಹಾಕುತ್ತಿದ್ದರು. ನೋಡಲು ಹೊಸದಾಗಿತ್ತು. ಅದು ಏನು ಎಂದು ತಿಳಿದುಕೊಳ್ಳುವ ಹುಕಿ ಬಂದಿತ್ತು. ಬಿಳಿ ಪ್ಯಾಂಟ್ ಅದೇ ಬಣ್ಣದ ಷರ್ಟು ಹಾಕಿಕೊಂಡು ನೀಲಿ ಟೋಪಿ ಹಾಕಿಕೊಂಡು ನೌಕಪಡೆಯ ಯೋಧನಂತೆ ಕಾಣುತ್ತಿದ್ದ ಯುವಕನನ್ನೂ ಸೇರಿ ಐದಾರು ಜನರನ್ನು ಕೇಳಿದರೂ ಆ ಗುಂಪಿನಲ್ಲಿದ್ದ ಒಬ್ಬರಿಗೂ ಇಂಗ್ಲಿಷ್ ಭಾಷೆ ಬರುತ್ತಿರಲಿಲ್ಲ.

ದೇವರು ಪ್ರತ್ಯಕ್ಷ ಆದಾಗ ಸ್ವರ್ಗ ಕೊಡು ಎಂದು ಕೇಳಿಕೊಂಡರೆ ಭೂಮಿ ಕೊಡುತ್ತಾನಂತೆ, ಭೂಮಿ ಕೊಡು ಎಂದು ಕೇಳಿಕೊಂಡರೆ ಏನನ್ನೂ ಕೊಡುವುದಿಲ್ಲವಂತೆ. ಈ ಕಥೆ ನೆನಪಾಯಿತು. ಈ ಕಥೆಯ ಸಾರಕ್ಕೆ ಜೋತುಬಿದ್ದು ಆ ಪರೇಡಿನಲ್ಲಿ ಹೋಗುತ್ತಿದ್ದ ಪ್ರತಿಯೊಬ್ಬರನ್ನೂ ಮಾತಿಗೆಳೆದಾಗ ಸಿಕ್ಕ ವಿಷಯ ಎಂದರೆ, Falun Dafa (Falun Gong) ಚೀನಾ ದೇಶದಲ್ಲಿ ಒಂದು ಅಧ್ಯಾತ್ಮದ ಮಾರ್ಗವಾಗಿ ಹುಟ್ಟಿ ಈಗ ಧರ್ಮವಾಗಿ ಗುರುತಿಸಿಕೊಂಡಿದೆ. ಸತ್ಯ, ಕರುಣೆ ಮತ್ತು ಸಹಿಷ್ಣುತೆ ಇದರ ಮೂಲಭೂತ ತತ್ತ್ವ.
1992ರಲ್ಲಿ Master Li Hongzhi ಎನ್ನುವವರು ಆರಂಭಿಸಿದ ಈ ಪಂಥವನ್ನು ಚೀನಾ ದೇಶದ ಕಮ್ಯುನಿಸ್ಟ್ ಸರ್ಕಾರ ಮೊದಲಿನಿಂದಲೂ ವಿರೋಧಿಸುತ್ತಿದೆ. ಕೇವಲ ಏಳು ವರ್ಷಗಳಲ್ಲಿ ನೂರು ಮಿಲಿಯನ್ ಜನರು ಈ ಮಾರ್ಗದ ಅನುಯಾಯಿಗಳಾಗಿದ್ದರು ಎನ್ನಲಾಗುತ್ತದೆ. ಜುಲೈ 1999 ರಿಂದ ಚೀನಾ ದೇಶದ ಸರ್ಕಾರವು ಈ ಮಾರ್ಗದವರನ್ನು ನಾಶ ಮಾಡಲು ನಿರ್ಧರಿಸಿ ಅವರಿಂದ ಉದ್ಯೋಗ, ಮನೆ ಸವಲತ್ತುಗಳನ್ನು ಕಿತ್ತುಕೊಂಡು ಗೃಹಬಂಧನದಲ್ಲಿ ಇಡುತ್ತಿದೆ. ಇದರ ವಿರುದ್ಧ ಬೇರೆ ದೇಶಗಳಲ್ಲಿನ ಈ ಪಂಥದಲ್ಲಿ ನಂಬಿಕೆ ಇರುವ ಜನರು ಚೀನಾ ಪ್ರಜೆಗಳು ಅಲ್ಲದವರು Falun Dafa ಧರ್ಮವನ್ನು ಬೆಂಬಲಿಸಲು ತಮ್ಮದೇ ಸಂಘಟನೆ ಮಾಡಿಕೊಂಡಿದ್ದಾರೆ.

ಗ್ರೀಸ್ ದೇಶದಲ್ಲಿ ಅವರದ್ದೇ ಒಂದು ಮ್ಯೂಸಿಕ್ ಬ್ಯಾಂಡ್ ಮಾಡಿಕೊಂಡಿದ್ದಾರೆ. ಅದರ ಹೆಸರು The European Tian Guo Marching Band. ಆಗ ಅಲ್ಲಿ ಹೋಗುತ್ತಿದ್ದವರು ಅವರೇ. ಚೀನಾ ಮೂಲಕ್ಕೆ ಸೇರಿದ್ದರೂ ಆ ದೇಶಕ್ಕೆ ಹೋಗಲಾರದ ಜನರು ಇವರು. ಜಗತ್ತಿನ ವಿವಿಧ ದೇಶಗಳಲ್ಲಿ ಸ್ವಲ್ಪವೇ ಸಂಖ್ಯೆಯಲ್ಲಿ ಇರುವ ಈ ಧರ್ಮದವರ ಪೂರ್ವಜರು ಇನ್ನೂ ಚೀನಾ ದೇಶದಲ್ಲಿ ಇದ್ದಾರೆ. ಆದರೆ ಸರಕಾರವು ಅವರು ತಮ್ಮ ಕುಟುಂಬದೊಡನೆ ಯಾವುದೇ ರೀತಿಯಲ್ಲೂ ಸಂಪರ್ಕದಲ್ಲಿ ಇರಲು ಬಿಡುವುದಿಲ್ಲ. ಹಾಗೇನಾದರೂ ಸರಕಾರದ ಆದೇಶವನ್ನು ಮೀರಿದರೆ ಅದು ಆ ದೇಶದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗುವ ಅಪರಾಧ.
ಶಾಲಾ ದಿನಗಳಿಂದ ಮೂರೋ ಐದೋ ಪ್ರಮುಖವಾಗಿ ಹಬ್ಬಿ ನಿಂತಿರುವ ಧರ್ಮ, ಮತಗಳ ಬಗ್ಗೆ ಮಾತ್ರ ಓದಿ ನೋಡಿ ತಿಳಿದುಕೊಂಡಿರುವ ಜನರಿಗೆ ಧರ್ಮ, ಧಾರ್ಮಿಕ ನಂಬಿಕೆ ಎನ್ನುವುದು ಮನುಷ್ಯನಿಗೆ ಅನ್ನ ಪಾನೀಯದಷ್ಟೇ ಪ್ರಾಥಮಿಕ ಅವಶ್ಯಕತೆ ಎನ್ನಿಸುತ್ತದೆ ಪ್ರಪಂಚದ ಸ್ಥಳೀಯ ಧರ್ಮಗಳ ಬಗ್ಗೆ ತಿಳಿದುಕೊಂಡಾಗ.
ದಕ್ಷಿಣ ಅಮೆರಿಕ, ಆಫ್ರಿಕಾದ ದೇಶಗಳು ಮತ್ತು ಏಷ್ಯಾ ಖಂಡದ ದೇಶಗಳಲ್ಲಿ ಉಗಮವಾಗಿ ನಂತರದ ದಿನಗಳಲ್ಲಿ ಇಲ್ಲವಾಗಿರುವ Indigenous Religion (ಸ್ಥಳೀಯ ಧರ್ಮ)ಗಳ ಸಂಖ್ಯೆಯೇ ನೂರಾರು ಎನ್ನುವ ವಿಷಯ ನಂಬಲು ಅಸಾಧ್ಯ ಎನಿಸುತ್ತದೆ. ದೆಹಲಿಯಲ್ಲಿ ಬಹಾಯಿ ಮಂದಿರ (Lotus Temple) ಪ್ರಚಲಿತಕ್ಕೆ ಬರುವವರೆಗೂ ಅದೊಂದು ಧರ್ಮವಾಗಿತ್ತು ಎನ್ನುವ ವಿಷಯವೇ ಬಹುಪಾಲು ಭಾರತೀಯರಿಗೆ ತಿಳಿದಿರಲಿಲ್ಲ. ಇಸ್ರೇಲಿನ ಹೈಫಾ ಎನ್ನುವ ನಗರದಲ್ಲಿ ಬಹಾಯಿ ಗಾರ್ಡನ್ಸ್ ಎನ್ನುವ ಅತ್ಯಂತ ಸುಂದರ ಉದ್ಯಾನವನವಿದೆ. ಅದರೊಳಗೊಂದು ಗೋಪುರವಿರುವ ಮಂದಿರವಿದೆ. 200 ವರ್ಷಗಳ ಹಿಂದೆ ಪರ್ಷಿಯಾ ದೇಶದ ಸಯ್ಯದ್ ಅಲಿ ಮೊಹಮ್ಮದ್ ಶಿರಾಝಿ ಎನ್ನುವ ವ್ಯಕ್ತಿ ಈ ಧರ್ಮವನ್ನು ಸ್ಥಾಪಿಸಿದ್ದು ಎನ್ನಲಾಗುತ್ತದೆ. ತನ್ನನ್ನು ತಾನು ಬಹಾವುಲ್ಲ ಎನ್ನುವ ದೇವಧೂತ ಎಂದು ಘೋಷಿಸಿಕೊಂಡು ಬಹಾಯಿ ಧರ್ಮವನ್ನು ಆರಂಭಿಸಿದ ಆರು ವರ್ಷಗಳಲ್ಲಿ ಆತನನ್ನು ನೇಣಿಗೇರಿಸಲಾಗುತ್ತದೆ. ಜಗತ್ತಿನ ಹೊಸ ಧರ್ಮಗಳ ಸಾಲಿನಲ್ಲಿ ನಾಲ್ಕನೆಯ ದೊಡ್ಡ ಧರ್ಮ ಎನ್ನುವ ಬಹಾಯಿ ಧರ್ಮವನ್ನು ಇಂದಿಗೂ ಏಳು ಮಿಲಿಯನ್ ಜನರು ಅನುಸರಿಸುತ್ತಿದ್ದಾರಂತೆ. ಅವರಿಗೆ ಇರುವ ಎರಡು ಪವಿತ್ರ ಸ್ಥಳಗಳಲ್ಲಿ ಹೈಫಾದಲ್ಲಿ ಇರುವ ಬಹಾಯಿ ಗಾರ್ಡನ್ಸ್ ಒಂದು.
ಕ್ರಿಶ್ಚಿಯನ್ ಬಿಷಪ್ Desmond Tutu ಹೇಳಿರುವ ಮಾತು “When the missionaries came to Africa they had the Bible and we had the land. They said ‘Let us pray.’ We closed our eyes. When we opened them we had the Bible and they had the land” ಇದು ಆಫ್ರಿಕಾ ಮೂಲದ ಪ್ರತಿಯೊಬ್ಬನ ಮನಸ್ಸಿನ ತುಡಿತ ಕೂಡ ಹೌದು. ಕೆಲವೇ ಧರ್ಮಗಳು ಭೂಗೋಳವನ್ನೇ ಆಕ್ರಮಿಸಿಕೊಳ್ಳಬೇಕು ಎನ್ನುವ ಹಠ ತೊಟ್ಟು ಮುಂದಡಿ ಇಡುವ ಮೊದಲೇ ಸನಾತನ ಧರ್ಮದಷ್ಟೇ ಹಳೆಯದಾದ ಧರ್ಮವೊಂದು ಜಪಾನಿನಲ್ಲಿ ಜನರ ಸಹಜ ಜೀವನವಾಗಿತ್ತು.

ತಮ್ಮನ್ನು ತಾವು ಸೆಕ್ಯುಲರ್ ಎಂದು ಘೋಷಿಸಿಕೊಳ್ಳುವುದು ಬಹುಪಾಲು ದೇಶಗಳ ಇಂದಿನ ಅವಶ್ಯಕತೆಯಾಗಿದೆ. ಅದರಂತೆ ಜಪಾನ್ ದೇಶವು ಕೂಡ ತನ್ನನ್ನು ಸೆಕ್ಯುಲರ್ ದೇಶ ಎಂದು ಘೋಷಿಸಿಕೊಂಡಿದೆ. ‘ಶಿಂಟೋ’ ಎಂಬುದು ಜಪಾನ್‌ನ ಮೂಲ ಧರ್ಮ. ಇದನ್ನು ಜಪಾನ್‌ನ ಸ್ಥಳೀಯ ಮತ್ತು ಅತ್ಯಂತ ಪ್ರಾಕೃತಿಕ ಧರ್ಮವೆಂದು ಹೇಳಲಾಗಿದೆ. ಶಿಂಟೋ ಧರ್ಮವನ್ನು ಯಾವುದೇ ವ್ಯಕ್ತಿಯೊಬ್ಬ ತನ್ನ ಕ್ರಿಯೆಯಿಂದ ಅಥವಾ ಗ್ರಂಥದಿಂದ ನಿಯಂತ್ರಿಸುವುದಿಲ್ಲ. ಇದೊಂದು ತನಗೆ ತಾನೇ ಉಗಮವಾಗಿ, ಆದಿ ಅಂತ್ಯವಿಲ್ಲದೆ ಇರುವ ಧರ್ಮ. ಈ ಧರ್ಮದ ಅನುಯಾಯಿಗಳಲ್ಲಿ ನಂಬಿಕೆ ಮತ್ತು ಆಚರಣೆಯ ವೈವಿಧ್ಯವು ಸ್ಪಷ್ಟವಾಗಿ ಕಂಡುಬರುತ್ತದೆ.
ಪ್ರಕೃತಿಯೇ ಇದರ ಮೂಲವಾದ್ದರಿಂದ ಇದನ್ನು ಬಹುದೇವತಾವಾದಿ ಧರ್ಮ ಎಂದು ಹೇಳಲಾಗಿದೆ. ಪಂಚಭೂತಗಳನ್ನು ಮತ್ತು ಅಲೌಕಿಕ ಶಕ್ತಿಯ ಇರುವಿಕೆಯನ್ನು ಮಾನ್ಯ ಮಾಡುವ ಈ ಧರ್ಮದ ದೇವರುಗಳು ಮನೆಯೊಳಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ದೇವಾಲಯಗಳಲ್ಲಿ ಪೂಜಿಸಲ್ಪಡುತ್ತಾರೆ. ನೀರು ಮತ್ತು ಆಹಾರವನ್ನು ನೈವೇದ್ಯ ಮಾಡಲಾಗುತ್ತದೆ. ನೃತ್ಯ, ಸಂಗೀತ ಹಬ್ಬಗಳ ಆಚರಣೆ ಎಲ್ಲಕ್ಕೂ ತನ್ನದೇ ಆದ ಶೈಲಿ ಇರುವುದು ಶಿಂಟೋ ಧರ್ಮದ ವೈಶಿಷ್ಟ್ಯ. ಅಂತರಂಗ ಮತ್ತು ಬಹಿರಂಗ ಶುದ್ಧಿಯ ವಿಧಾನಗಳಲ್ಲಿ ನಂಬಿಕೆ ಇಟ್ಟು ಪ್ರಾದೇಶಿಕ ಸ್ವರೂಪಗಳನ್ನು ಹೊಂದಿರುವ ಶಿಂಟೋ ಧರ್ಮದ ಎಂಬತ್ತು ಸಾವಿರ ದೇವಾಲಯಗಳು ಇದ್ದವಂತೆ ಜಪಾನಿನಲ್ಲಿ. ಶಿಂಟೋ ಧರ್ಮದಲ್ಲಿ ತುಪ್ಪ ಹಾಕಿ ಹೋಮವನ್ನು ಮಾಡುತ್ತಾರೆ. ಅವರುಗಳು ಜಿಂಕೆಗಳನ್ನು ದೇವರ ಸಂದೇಶಗಳ ಮೂರ್ತರೂಪ ಎನ್ನುತ್ತಾರೆ.
ಪ್ರವಾಸದಲ್ಲಿ ಎಲಿನ ಎನ್ನುವ ಉಕ್ರೇನಿನ ಮಹಿಳೆ ಸಿಗದೇ ಹೋಗಿದ್ದರೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇಲ್ಲದವರು ನಾಸ್ತಿಕರು ಎಂದಷ್ಟೇ ತಿಳಿದಿರುತ್ತಿತ್ತು. ಭಾರತೀಯ ಮೂಲದ ಚಾರ್ವಾಕ ಪಥವು Atheism ಎನ್ನುವ ಶಿಷ್ಟ ಧರ್ಮವಾಗಿ ಆಚರಣೆಯಲ್ಲಿದೆ ಎನ್ನುವ ವಿಷಯದ ಬಗ್ಗೆ ಆಸಕ್ತಿ ಹುಟ್ಟಿದ್ದು ಸ್ವತಃ Atheist ಆಗಿದ್ದ ಎಲಿನಾಳಿಂದ. ಆಗ್ನೇಯ ಯುರೋಪಿನಲ್ಲಿರುವ ಅಲ್ಬೇನಿಯಾ ದೇಶವು ತನ್ನನ್ನು ನಾಸ್ತಿಕ ಧರ್ಮೀಯ ದೇಶ ಎಂದು ಗುರುತಿಸಿಕೊಂಡಿರುವುದು ವಿಶೇಷ. ಜಾತಿ, ಮತ, ಧರ್ಮಗಳ ನಡುವಿನ ಪ್ರವಾಸದಲ್ಲಿ ಹುಟ್ಟಾ ನಾಸ್ತಿಕಳಾದ ಎಲಿನಾ ಕೇಳಿದ “ದೇವರು ಎಂದರೆ ಏನು?” ಎನ್ನುವ ಪ್ರಶ್ನೆಗೆ ಪಯಣವೇ ಉತ್ತರವಾಗಲಿ ಎನ್ನುವ ಆಶಯ.