Saturday, May 16, 2026
Saturday, May 16, 2026

ಶಿಸ್ತು ಕಲಿಯಲು ಪರದೇಶ ನೋಡಬೇಕಿಲ್ಲ; ಪರರಾಜ್ಯವೇ ಸಾಕು

ಜವಾಬ್ದಾರಿಯುತ ಪ್ರವಾಸ ಎಂದರೇನು ಎಂದು ಅರಿಯಲು ವಿದೇಶಕ್ಕೆ ಹೋಗಬೇಕಿಲ್ಲ. ಅಕ್ಕಪಕ್ಕದ ರಾಜ್ಯಗಳ ಪ್ರವಾಸೋದ್ಯಮದಿಂದಲೂ ಸಾಕಷ್ಟು ಕಲಿಯಬಹುದು ಅಲ್ಲವೇ? ಪಕ್ಕದ ರಾಜ್ಯದಲ್ಲಿ ಸಾಧ್ಯವಾಗುವುದು ನಮ್ಮ ರಾಜ್ಯದಲ್ಲೇಕೆ ಅಸಾಧ್ಯ ಎಂಬ ಪ್ರಶ್ನೆ ನಮ್ಮನ್ನು ನಾವು ಕೇಳಿಕೊಳ್ಳಬೇಕಿದೆ. ಸರಕಾರಕ್ಕೆ ಕೇಳಬೇಕಿದೆ.

  • ಅನಿಲ್ ಹೆಚ್.ಟಿ.

ಗೋವಾಕ್ಕೆ ತೆರಳಿದ್ದೆವು. ಮೊದಲ ದಿನ ಪ್ರವಾಸಿ ತಾಣ ವೀಕ್ಷಿಸಿ ಮರಳುವಾಗ ಗೆಳೆಯನ ಪುಟ್ಟ ಮಗ ಮಿನಿ ಬಸ್‌ನಿಂದ ಇಳಿದವನು ಸಹಜವೆಂಬಂತೆ ಕೈಯಲ್ಲಿದ್ದ ಜ್ಯೂಸ್ ಬಾಟಲಿಯನ್ನು ನೆಲಕ್ಕೆ ಎಸೆದುಬಿಟ್ಟ.

ಮಿನಿ ಬಸ್ ಚಾಲಕ ಈ ದೃಶ್ಯ ನೋಡುತ್ತಿದ್ದಂತೆಯೇ ಗಾಬರಿಗೊಳಗಾಗಿ ತನ್ನ ಸೀಟಿನಿಂದ ಇಳಿದು ಓಡೋಡಿ ಬಂದ. ಸಲೀಮ್‌ ಹೆಸರಿನ ಆ ಡ್ರೈವರ್ ಬಂದವನೇ, ತಕ಼ಣ ಆ ಜ್ಯೂಸ್ ಬಾಟಲಿಯನ್ನು ನೆಲದಿಂದ ಮೇಲಕ್ಕೆತ್ತಿ ಬಸ್ ಒಳಗೆ ತಂದು ಅಲ್ಲಿದ್ದ ತ್ಯಾಜ್ಯ ವಿಲೇವಾರಿ ಬ್ಯಾಗ್ ನಲ್ಲಿ ಇರಿಸಿಬಿಟ್ಟ. ಒಂದು ನೆಮ್ಮದಿಯ ನಿಟ್ಟುಸಿರನ್ನೂ ಬಿಟ್ಟ. ನಮಗೆ ಅವನ ವರ್ತನೆ ಅಚ್ಚರಿ ತಂದಿತು. ಹೀಗೇಕೆ ಎಂದು ಅವನನ್ನು ಪ್ರಶ್ನಿಸುವ ಮುನ್ನವೇ ನಮ್ಮನ್ನು ಗದರಲಾರಂಭಿಸಿದ.

ಇದನ್ನೂ ಓದಿ: ಸಾಹಸ ಮತ್ತು ಭಕ್ತಿಯ ತಾಣ ನೇಪಾಳ

’ಏನ್ ಸಾರ್. ಹೀಗೆ ಕಸ ಎಸೆದು ನನ್ನ ಕುತ್ತಿಗೆಗೆ ತರುತ್ತೀರಿ.. ಎಲ್ಲಿಯೂ ಕಸ ಹಾಕಬೇಡಿ ಸಾರ್’ ಎಂದು ಕೊಂಚ ಅಸಮಾಧಾನದಿಂದಲೇ ಕೇಳಿಕೊಂಡ. ಕುತೂಹಲದಿಂದ ’ಯಾಕೆ ಏನಾಯಿತು’ ಎಂದು ಕೇಳಿದೆ.

ಡ್ರೈವರ್ ಸಲೀಮ್ ಹೇಳಿದ.. ‘ಗೋವಾದಲ್ಲಿ ಎಲ್ಲಿಯೇ ಕಸ ಎಸೆದರೂ, ತ್ಯಾಜ್ಯ ಬಿಸಾಡಿದರೂ ಆ ಪ್ರವಾಸಿಗರನ್ನು ಕರೆದೊಯ್ಯುವ ವಾಹನದ ಚಾಲಕನೇ ಜವಾಬ್ದಾರನಾಗುತ್ತಾನೆ. ಕಸ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡವನ್ನು ತೆರಬೇಕಾದವನೂ ಚಾಲಕನೇ. ಪ್ರವಾಸಿಗರನ್ನು ಗೋವಾದ ಪ್ರವಾಸಿತಾಣಗಳಿಗೆ ಕರೆದೊಯ್ಯುವ ಜವಾಬ್ದಾರಿ ಮಾತ್ರವಲ್ಲದೆ, ಆ ಪ್ರವಾಸಿಗರು ಗೋವಾದ ಎಲ್ಲಿಯೂ ತ್ಯಾಜ್ಯ ಎಸೆಯದಂತೆ ನೋಡಿಕೊಳ್ಳುವ ಹೊಣೆಯೂ ಪ್ರವಾಸಿ ವಾಹನಗಳ ಚಾಲಕನದ್ದೇ ಆಗಿರುತ್ತದೆ. ಅಲ್ಲಲ್ಲಿ ಇರಿಸಲಾಗಿರುವ ಸಿಸಿ ಕ್ಯಾಮೆರಾಗಳಲ್ಲಿ ಕಸ ಎಸೆದ ದೃಶ್ಯ ಸೆರೆಯಾಗಿರುತ್ತದೆ. ಅಂತೆಯೇ ಕಸ ಎಸೆದವರು ಬಂದ ವಾಹನದ ನಂಬರ್ ಕೂಡಾ ಸಿಸಿ ಕ್ಯಾಮೆರಾದಲ್ಲಿರುತ್ತದೆ. ಹೀಗಾಗಿಯೇ ಗೋವಾದಲ್ಲಿ ಪ್ರವಾಸಿಗರನ್ನು ಕರೆದೊಯ್ಯುವಾಗ ಬಹಳ ಎಚ್ಚರಿಕೆಯಿಂದ ನಾವು ಎಲ್ಲಿಯೂ ಕಸ ಎಸೆಯದ ಹಾಗೇ ಗಮನ ನೀಡುತ್ತೇವೆ’.

Untitled design - 2026-05-16T155353.095

ಮುಂದುವರಿದು ಸಲೀಮ್ ಹೇಳಿದ...’ನೀವೇನೋ ಪ್ರವಾಸಿಗರು ಗೋವಾಕ್ಕೆ ಬರುತ್ತೀರಿ. ಕೆಲ ದಿನಗಳು, ಕೆಲ ಗಂಟೆಗಳು ಇಲ್ಲಿದ್ದು ಕಂಡಕಂಡಲ್ಲಿ ಕಸ ಹಾಕಿ ಮತ್ತೆ ವಾಪಸ್ ತೆರಳಿಬಿಡುತ್ತೀರಿ. ಆ ಕಸದೊಂದಿಗೆ ಜೀವನ ನಡೆಸಬೇಕಾದವರು ಸ್ಥಳೀಯರಾದ ನಾವೇ ಅಲ್ಲವೇ? ಹೀಗಾಗಿಯೇ ನಾನೂ ಸೇರಿದಂತೆ ಗೋವಾ ನಿವಾಸಿಗಳು ತ್ಯಾಜ್ಯ ವಿಲೇವಾರಿ ಬಗ್ಗೆ ಖಡಕ್ ಆಗಿದ್ದೇವೆ. ಎಲ್ಲಿಯೂ ಪ್ರವಾಸಿಗರು ಕಸ ಬಿಸಾಡದಂತೆ ಗಮನ ಹರಿಸುತ್ತಿದ್ದೇವೆ. ಪ್ರವಾಸಿಗರಿಗೆ ಪ್ರಾರಂಭದಲ್ಲಿಯೇ ಕಸ ಎಸೆಯದಂತೆ ಮುನ್ನೆಚ್ಚರಿಕೆ ನೀಡುತ್ತೇವೆ. ನಿಮಗೆಲ್ಲಾ ಗೋವಾ ಸುಂದರವಾಗಿ ಕಾಣುತ್ತಿದೆ ಎಂದಾದರೆ ಇದಕ್ಕೆ ನಾವು ಮಾತ್ರ ಕಾರಣರಲ್ಲ. ಗೋವಾಕ್ಕೆ ಬಂದು ಇಲ್ಲಿ ಕಸ ಎಸೆಯದೇ ಗೋವಾವನ್ನು ಸುಂದರವಾಗಿ ಕಾಪಾಡಿಕೊಳ್ಳುವ ಹೊಣೆ ಹೊಂದಿರುವ ನೀವೂ ಕೂಡ ಕಾರಣ’.

ಗೋವಾದಲ್ಲಿ ನಾಲ್ಕು ದಿನಗಳಿದ್ದೆವು. ನಮ್ಮೊಂದಿಗಿದ್ದ ಮಗು ಅಷ್ಟೂ ದಿನಗಳು ತನ್ನೊಂದಿಗಿದ್ದ ಐಸ್ ಕ್ರೀಮ್ ಬೌಲ್, ಜ್ಯೂಸ್ ಬಾಟಲಿ, ನೀರಿನ ಬಾಟಲ್ ಸೇರಿದಂತೆ ಎಲ್ಲಾ ಕಸವನ್ನು ಬಸ್‌ನೊಳಗಿದ್ದ ತ್ಯಾಜ್ಯ ವಿಲೇವಾರಿ ಬ್ಯಾಗ್‌ನಲ್ಲಿಯೇ ಹಾಕುತ್ತಿದ್ದ. ಮಗುವೇ ಹಾಕಿದ ಮೇಲೆ ದೊಡ್ಡವರು ನೋಡಿಕೊಂಡಿರಲು ಸಾಧ್ಯವೇ? ಮಗುವನ್ನೇ ಎಲ್ಲರೂ ಅನುಸರಿಸಿದರು.!

ಕೊನೆಯದಾಗಿ ನಮ್ಮ ತಂಡಕ್ಕೆ ವಿದಾಯ ಹೇಳುವಾಗ ಆ ಡ್ರೈವರ್ ಸಲೀಮ್ ಹೇಳಿದ... ‘ಥ್ಯಾಂಕ್ಯೂ.. ನನ್ನೊಂದಿಗೆ ವ್ಯವಹರಿಸಿದ್ದಕ್ಕೆ.. ಥ್ಯಾಂಕ್ಯೂ.. ಪ್ರವಾಸ ಕಾಲದಲ್ಲಿ ಎಲ್ಲಿಯೂ ಕಸ ಬಿಸಾಡದೇ ಗೋವಾವನ್ನು ಮಾಲಿನ್ಯಗೊಳಿಸದೇ ಇದ್ದುದಕ್ಕೆ. ಮತ್ತೆ ಬನ್ನಿ. ನಿಮ್ಮದೇ ಗೋವಾಕ್ಕೆ..’!

ಜವಾಬ್ದಾರಿಯುತ ಪ್ರವಾಸ ಎಂದರೇನು ಎಂದು ಅರಿಯಲು ವಿದೇಶಕ್ಕೆ ಹೋಗಬೇಕಿಲ್ಲ. ಅಕ್ಕಪಕ್ಕದ ರಾಜ್ಯಗಳ ಪ್ರವಾಸೋದ್ಯಮದಿಂದಲೂ ಸಾಕಷ್ಟು ಕಲಿಯಬಹುದು ಅಲ್ಲವೇ? ಪಕ್ಕದ ರಾಜ್ಯದಲ್ಲಿ ಸಾಧ್ಯವಾಗುವುದು ನಮ್ಮ ರಾಜ್ಯದಲ್ಲೇಕೆ ಅಸಾಧ್ಯ ಎಂಬ ಪ್ರಶ್ನೆ ನಮ್ಮನ್ನು ನಾವು ಕೇಳಿಕೊಳ್ಳಬೇಕಿದೆ. ಸರಕಾರಕ್ಕೆ ಕೇಳಬೇಕಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?