ಭಾರತದಲ್ಲಿದ 10 ಆರ್ಟ್ ಗ್ಯಾಲರಿಗಳ ಬಗ್ಗೆ ನೀವು ತಿಳಿಯಲೇಬೇಕು
ಕಲೆಗೆ ಗೌರವ ಸಿಗುವುದು ಆ ಕಲೆಗೆ ನೋಡುಗನಿಂದ ಮೆಚ್ಚುಗೆ ಸಿಕ್ಕಿದಾಗ ಎಂಬ ಮಾತಿದೆ..ಅಂತಹ ಅತ್ಯದ್ಭುತ ಚಿತ್ರಕಾರರ ಕುಂಚದಿಂದ ರೂಪುಗೊಂಡ ವಿಶೇಷ ಚಿತ್ರಕಲೆಗಳನ್ನು ವೀಕಷಿಸಲು ಭಾರತದ ಈ ಪ್ರಮುಖ ಆರ್ಟ್ ಗ್ಯಾಲರಿಗಳು ನೀವು ಹೋಗಲೇಬೇಕು..
ಭಾರತೀಯ ಕಲೆ, ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಬೆಂಗಳೂರಿನ ತುಂಬಾ ಲೆಕ್ಕಕ್ಕೆ ಸಿಗದಷ್ಟು ಆರ್ಟ್ ಗ್ಯಾಲರಿಗಳಿವೆ. ಕರ್ನಾಟಕ ಚಿತ್ರಕಲಾ ಪರಿಷತ್, ಇಂಡಿಯನ್ ಕಾರ್ಟೂನ್ ಗ್ಯಾಲರಿ, ರಂಗೋಲಿ ಮೆಟ್ರೋ ಆರ್ಟ್ ಸೆಂಟರ್, ಮಹುವಾ ಆರ್ಟ್ ಗ್ಯಾಲರಿ, ಸ್ವಸ್ತಿ ಕಂಟೆಂಪರರಿ ಆರ್ಟ್ ಗ್ಯಾಲರಿ, ಶೇಡ್ಸ್ ಕ್ರಿಯೇಟವ್ ಗ್ಯಾಲರಿ ಹೀಗೆ ಕಲೆಗೆ ಗೌರವ ಸಲ್ಲಿಸುವ ಸಲುವಾಗಿ ಕಾರ್ಯನಿರ್ವಹಿಸುವ ಗ್ಯಾಲರಿಗಳು ಅನೇಕ. ಆದರೆ ಭಾರತದ ಹೆಸರಾಂತ ಆರ್ಟ್ ಗ್ಯಾಲರಿಗಳ ಪರಿಚಯ ನಿಮಗಿದೆಯಾ..? ಹಿರಿಯ ಮತ್ತು ಉದಯೋನ್ಮುಖ ಭಾರತೀಯ ಕಲಾವಿದರ ಕುಂಚದಿಂದ ಅರಳಿದ ಚಿತ್ರಕಲೆಗಳು ಮಾತ್ರವಲ್ಲದೆ ವಿದೇಶಿ ಚಿತ್ರಕಲಾವಿದರ ಕೈಚಳಕವನ್ನೂ ಇಲ್ಲಿ ಕಣ್ತುಂಬಿಕೊಳ್ಳಬಹುದು.
ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA)
ನವದೆಹಲಿಯಲ್ಲಿ 1954 ರಲ್ಲಿ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸ್ಥಾಪಿತವಾಯಿತು. ಇದು 18 ನೇ ಶತಮಾನದಿಂದ ಸಮಕಾಲೀನ ಕಾಲದವರೆಗೆ ಭಾರತದ ಕಲಾತ್ಮಕ ವಿಕಾಸದ ಪ್ರದರ್ಶನವನ್ನು ಹೊಂದಿದ್ದು, ಸರಿಸುಮಾರು 14,000 ಕಲಾಕೃತಿಗಳನ್ನು ಇಲ್ಲಿ ವೀಕ್ಷಿಸಬಹುದು.

ಜೀನ್ನರೆಟ್ ಹೌಸ್ ಗ್ಯಾಲರಿ
ಚಂಡೀಗಢದ ಶ್ರೀಮಂತ ಕಲಾತ್ಮಕ ಪರಂಪರೆಯನ್ನು ಪ್ರತಿಬಿಂಬಿಸುವ ಜೀನ್ನರೆಟ್ ಹೌಸ್ ಗ್ಯಾಲರಿಯು ಒಂದು ಕಾಲದಲ್ಲಿ ಪಿಯರೆ ಜೀನೆರೆಟ್ ಎಂಬ ಸ್ವಿಟ್ಜರ್ಲ್ಯಾಂಡ್ ನ ವಾಸ್ತುಶಿಲ್ಪಿಯ ವಾಸಸ್ಥಾನವಾಗಿತ್ತು. ನಂತರದ ದಿನಗಳಲ್ಲಿ ಸಮಕಾಲೀನ ಕಲೆ, ವಿನ್ಯಾಸ ಮತ್ತು ವಾಸ್ತುಶಿಲ್ಪದ ಪ್ರದರ್ಶನ ಕೇಂದ್ರವಾಗಿ ರೂಪುಗೊಂಡಿತು.
ಜವಾಹರ್ ಕಲಾ ಕೇಂದ್ರ (ಜೆಕೆಕೆ)
ಚಾರ್ಲ್ಸ್ ಕೊರಿಯಾ ವಿನ್ಯಾಸಗೊಳಿಸಿದ, ಜೆಕೆಕೆ ರಾಜಸ್ಥಾನದ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದೆ. ಸಾಂಪ್ರದಾಯಿಕ ಮತ್ತು ಸಮಕಾಲೀನ ರಾಜಸ್ಥಾನಿ ಕಲೆಯನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಅನೇಕ ಪ್ರದರ್ಶನಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತದೆ.
ಕಿಂಕಿನಿ ಆರ್ಟ್ ಗ್ಯಾಲರಿ, ಬೆಂಗಳೂರು
ಹಿರಿಯ ಮತ್ತು ಉದಯೋನ್ಮುಖ ಭಾರತೀಯ ಕಲಾವಿದರ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಮಹತ್ತರದ ಪಾತ್ರ ನಿರ್ವಹಿಸುವ ಕಿಂಕಿನಿ ಆರ್ಟ್ ಗ್ಯಾಲರಿಯು 2004 ರಲ್ಲಿ ಸ್ಥಾಪಿತವಾಯಿತು. ಇದು ಕ್ರಿಯಾತ್ಮಕ ಸಮಕಾಲೀನ ಪರಿಸರಕ್ಕೆ ಹೊಂದಿಕೊಳ್ಳುವಂತಹ ವರ್ಣಚಿತ್ರಗಳು, ಶಿಲ್ಪಗಳು ಸೇರಿದಂತೆ ಅನೇಕ ಕಲಾಪ್ರಕಾರಗಳನ್ನು ಇಲ್ಲಿ ಕಣ್ತುಂಬಿಕೊಲ್ಳಬಹುದು.

ಎಕ್ಸ್ಪೆರಿಮೆಂಟರ್ ಗ್ಯಾಲರಿ
ಕೋಲ್ಕತಾದ ಪ್ರಮುಖ ಗ್ಯಾಲರಿಗಳಲ್ಲಿ ಒಂದು ಎಕ್ಸ್ಪೆರಿಮೆಂಟರ್ ಗ್ಯಾಲರಿ. 2009 ರಲ್ಲಿ ಪ್ರಿಯಾಂಕಾ ಮತ್ತು ಪ್ರತೀಕ್ ರಾಜಾರಿಂದ ಸ್ಥಾಪಿಸಲ್ಪಟ್ಟ ಎಕ್ಸ್ಪರಿಮೆಂಟರ್ ನವ್ಯ ಕಾಲಘಟ್ಟದ ಸಮಕಾಲೀನ ಕಲೆಯನ್ನು ಪ್ರದರ್ಶಿಸುತ್ತದೆ. ಕೋಲ್ಕತಾಕ್ಕೆ ಭೇಟಿ ಕೊಡುವವರು ನೀವಾದರೆ ತಪ್ಪದೇ ಈ ಗ್ಯಾಲರಿಗೆ ಒಮ್ಮೆ ಭೇಟಿ ನೀಡಿ.
ದಕ್ಷಿಣ ಚಿತ್ರ ಮ್ಯೂಸಿಯಂ
ದಕ್ಷಿಣ ಭಾರತದ ಕಲೆ, ಕರಕುಶಲ ಮತ್ತು ವಾಸ್ತುಶಿಲ್ಪವನ್ನು ಪ್ರದರ್ಶನವನ್ನು ನೋಡಬೇಕೆಂದರೆ ಚೆನ್ನೈನ ಈ ಬಯಲು ವಸ್ತುಸಂಗ್ರಹಾಲಯ ದಕ್ಷಿಣ ಚಿತ್ರ ಮ್ಯೂಸಿಯಂಗೆ ಹೋಗಲೇಬೇಕು. ಸಾಂಪ್ರದಾಯಿಕ ಚಿತ್ರಕಲೆಗಳು, ಜವಳಿ ಮತ್ತು ಶಿಲ್ಪಗಳ ಅನೇಕ ರೀತಿಯ ಪ್ರದರ್ಶನಗಳನ್ನು ಅದರ ಪರಂಪರೆಯ ಹಳ್ಳಿಯ ಸೆಟ್ಟಿಂಗ್ಗಳೊಂದಿಗೆ ಇಲ್ಲಿ ನೋಡಬಹುದು.
ನೇಚರ್ ಮೋರ್ಟೆ
ಮೂಲತಃ 1982ರಲ್ಲಿ ನ್ಯೂಯಾರ್ಕ್ನಲ್ಲಿ ಸ್ಥಾಪಿಸಲಾಗಿದ್ದ ನೇಚರ್ ಮೋರ್ಟೆ 1997ರಲ್ಲಿ ನವದೆಹಲಿಯಲ್ಲಿ ಮರು-ಸ್ಥಾಪಿತವಾಯಿತು. ಸಮಕಾಲೀನ ಭಾರತೀಯ ಕಲಾವಿದರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವಲ್ಲಿ ನೇಚರ್ ಮೋರ್ಟೆ ಪಾತ್ರ ಪ್ರಮುಖವಾದುದು.
ವಡೆಹ್ರಾ ಆರ್ಟ್ ಗ್ಯಾಲರಿ
ನವದೆಹಲಿಯ ಜನಪ್ರಿಯ ಆರ್ಟ್ ಗ್ಯಾಲರಿಗಳಲ್ಲಿ ವಡೆಹ್ರಾ ಆರ್ಟ್ ಗ್ಯಾಲರಿ ಬಹಳ ವಿಶೇಷವಾದುದು. 1987ರಲ್ಲಿ ಸ್ಥಾಪಿತವಾದ ಈ ಗ್ಯಾಲರಿ ಎಂ.ಎಫ್. ಹುಸೇನ್ ಮತ್ತು ಟೈಬ್ ಮೆಹ್ತಾರಂತಹ ಆಧುನಿಕ ಮತ್ತು ಸಮಕಾಲೀನ ಕಲಾವಿದರ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಮಹುವ ಆರ್ಟ್ ಗ್ಯಾಲರಿ
ಬೆಂಗಳೂರಿನಲ್ಲಿ ಲೆಕ್ಕಕ್ಕೆ ಸಿಗದಷ್ಟು ಆರ್ಟ್ ಗ್ಯಾಲರಿಗಳಿದ್ದು, ಅವುಗಳಲ್ಲಿ ಬಹು ಬೇಡಿಕೆ ಹೊಂದಿರುವುದು ಮಹುವ ಆರ್ಟ್ ಗ್ಯಾಲರಿ. ಇಲ್ಲಿ ಸ್ಥಳೀಯ ಮತ್ತು ಸಮಕಾಲೀನ ಭಾರತೀಯ ಕಲಾವಿದರನ್ನು ಉತ್ತೇಜಿಸುವ ಸಲುವಾಗಿ ಅನೇಕ ಚಟುವಟಿಕೆಗಳು ನಡೆಯುತ್ತವೆ. ಅಲ್ಲದೆ ಕರ್ನಾಟಕದ ಶ್ರೀಮಂತ ಕಲಾತ್ಮಕ ಸಂಪ್ರದಾಯಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ.
ಗೋವಾ ಚಿತ್ರ ಮ್ಯೂಸಿಯಂ
ನಿಮ್ಮ ಗೋವಾ ಪ್ರವಾಸದ ವೇಳೆ ʻಗೋವಾ ಚಿತ್ರವು ಮ್ಯೂಸಿಯಂʼಗೆ ಭೇಟಿ ಕೊಟ್ಟರೆ, ಸಮಕಾಲೀನ ಕಲಾ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳಬಹುದು. ಆಧುನಿಕ ಕಲಾತ್ಮಕ ಅಭಿವ್ಯಕ್ತಿಗಳೊಂದಿಗೆ ಗೋವಾದ ಸಾಂಸ್ಕೃತಿಕ ಪರಂಪರೆಯನ್ನು ವಿಲೀನಗೊಳಿಸುವ ಮೂಲಕ ವಿಭಿನ್ನ ಪ್ರಯತ್ನವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.