• ಕಾವ್ಯ

ರಾಜಸ್ಥಾನ ಎಂದಾಕ್ಷಣ ನೆನಪಿಗೆ ಬರೋದು ಸುಂದರ ಕೋಟೆ, ಮರಳುಗಾಡು, ವಿವಿಧ ಪ್ರೇಕ್ಷಣೀಯ ಸ್ಥಳಗಳು. ಇಲ್ಲಿರುವ ಕೋಟೆಗಳು ಹಳೆಯ ರಾಜರ ಕಥೆ ಹಾಗೂ ಅವರು ಮಾಡಿದ ಸಾಧನೆಯನ್ನು ಹೇಳುವಂತಿದೆ. ಇಲ್ಲಿ ಪ್ರತಿನಿತ್ಯ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ ಮತ್ತು ಅಮೂಲ್ಯ ಕ್ಷಣವನ್ನು ಕಳೆದು ಹೋಗುತ್ತಾರೆ. ರಾಜಸ್ಥಾನ ಎಷ್ಟು ಸುಂದರವೋ ಅಷ್ಟೇ ಭಯಾನಕ ಕೂಡ. ಅನೇಕ ರಹಸ್ಯಗಳನ್ನು ಈ ರಾಜ್ಯ ತನ್ನಲ್ಲಿ ಹಿಡಿದಿಟ್ಟುಕೊಂಡಿದೆ. ರಾಜಸ್ಥಾನದ ಭಾನ್ಗಢ್ ಫೋರ್ಟ್ ಇದರಲ್ಲಿ ಒಂದು. ಇದು ಭಯಾನಕ ಪ್ರದೇಶ ಎನಿಸಿಕೊಂಡಿದೆ. ರಾತ್ರಿ ಇಲ್ಲಿ ತಂಗುವುದು ಸಂಪೂರ್ಣ ನಿಷಿದ್ಧ.

bhangharh fort 1

ದೆವ್ವ ಇದೆ ಅಥವಾ ಇಲ್ಲ ಎನ್ನುವ ಬಗ್ಗೆ ಚರ್ಚೆ ಮೊದಲಿನಿಂದಲೂ ಇದೆ. ಕೆಲವರು ಇದನ್ನು ಒಪ್ಪಿದರೆ, ಇನ್ನೂ ಕೆಲವರು ನಿರಾಕರಿಸುತ್ತಾರೆ. ಕೆಲವರಿಗೆ ನೆಗೆಟಿವ್ ಎನರ್ಜಿ ಇರುವ ವಿಚಾರ ಅವರ ಅನುಭವಕ್ಕೆ ಬಂದಿರಬಹುದು. ರಾಜಸ್ಥಾನದ ಭಾನ್ಗಢ್ ಕೋಟೆಯಲ್ಲೂ ಕೆಲವು ವಿಚಿತ್ರ ಘಟನೆಗಳು ನಡೆಯುತ್ತವೆ. ರಾತ್ರಿಮೇಲೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಇದಕ್ಕೆ ಕಾರಣ ಇದರ ಕರಾಳ ಇತಿಹಾಸ.

ಕೋಟೆಯ ಹಿಸ್ಟರಿ

ಭಾರತದಲ್ಲೇ ಅತಿ ಹೆಚ್ಚು ಭಯಾನಕ ಸ್ಥಳಗಳಲ್ಲಿ ಭಾನ್ಗಢ್ ಫೋರ್ಟ್ಗೂ ಸ್ಥಾನ ಇದೆ. ಇದು ರಾಜಸ್ಥಾನದ ಅಲ್ವರ್ ಜಿಲ್ಲೆಯಲ್ಲಿ ಇದೆ. ಇದನ್ನು 17ನೇ ಶತಮಾನದಲ್ಲಿ ರಾಜಾ ಭಗವಂತ್ ದಾಸ್ ತಮ್ಮ ಮಗ ಮಾಧೋ ಸಿಂಗ್ಗಾಗಿ ಕಟ್ಟಿದರು. ಈ ಕೋಟೆಯೇ ಶಾಪಗ್ರಸ್ಥ ಕೋಟೆಯಾಗಿರುವುದು. ಇದರ ಬಗ್ಗೆ ವಿವಿಧ ಥಿಯರಿಗಳು ಇವೆ. ಅನೇಕರ ಅನುಭವಕ್ಕೆ ಬಂದ ಬಳಿಕವೇ ಈ ಜಾಗದ ಮೇಲೆ ನಿಷೇಧ ಹೇರಲಾಗಿದೆ.

bhangharh fort 3

ಬಾಲನಾಥ ಮುನಿ ಶಾಪ

ಒಂದು ದಂತಕಥೆಯ ಪ್ರಕಾರ ಕೋಟೆ ನಿರ್ಮಾಣಕ್ಕೂ ಮೊದಲೇ ಇಲ್ಲಿ ಒಬ್ಬರು ಮುನಿ ವಾಸವಾಗಿದ್ದರಂತೆ. ಆ ಮುನಿ ಹೆಸರು ಗುರು ಬಾಲು. ಕೋಟೆಯ ನೆರಳು ತಾವು ವಾಸವಿರೋ ಮನೆಯನ್ನು ಮುಟ್ಟಬಾರದು ಎಂಬ ಷರತ್ತಿನ ಮೇಲೆ ಋಷಿ ಕೋಟೆಯ ನಿರ್ಮಾಣಕ್ಕೆ ಅವಕಾಶ ನೀಡಿದರು. ಆದಾಗ್ಯೂ ಕೋಟೆ ನಿರ್ಮಾಣ ಮಾಡುತ್ತಾ ಮಾಡುತ್ತಾ ಅದರ ನೆರಳು ಋಷಿಯ ವಾಸಸ್ಥಳದ ಮೇಲೆ ಬಿತ್ತು. ಕೋಪಗೊಂಡ ಋಷಿ ಕೋಟೆಯನ್ನು ಶಪಿಸಿದರು. ಇದರಿಂದಾಗಿ ಕೋಟೆಯ ನಾಶ ಶುರುವಾಯ್ತು ಎಂಬುದು ಒಂದು ಕಥೆ.

ಮಾಂತ್ರಿಕನ ಶಾಪ:

ಈ ಕೋಟೆ ನಾಶವಾಗಲು ಕಾರಣವಾದ ಮತ್ತೊಂದು ಕಥೆ ಇದೆ. ಈ ಕೋಟೆಯಲ್ಲಿ ರಾಜಕುಮಾರಿ ರತ್ನಾವತಿ ವಾಸವಿರುತ್ತಾಳೆ. ಮಾಂತ್ರಿಕನೋರ್ವ ರಾಜಕುಮಾರಿಯನ್ನು ನೋಡಿ ಮನ ಸೋಲುತ್ತಾನೆ. ಆಕೆಯನ್ನು ಪ್ರೀತಿಸಿ, ತನ್ನವಳಾಗುವಂತೆ ಮಾಡಲು ಪ್ರಯತ್ನಿಸುತ್ತಾನೆ. ಎನ್ನಲಾಗಿದೆ. ಇದಕ್ಕಾಗಿ ಆ ಮಂತ್ರವಾದಿ ಮಾಟ-ಮಂತ್ರ ಪ್ರಯೋಗ ಮಾಡುತ್ತಾನೆ. ರಾಜಕುಮಾರಿಗೆ ಮಾಂತ್ರಿಕನ ಕುತಂತ್ರ ಗೊತ್ತಾಗಿ ಹೋಗುತ್ತದೆ.. ಆಕೆ ಮಂತ್ರಿಸಿದ ಎಣ್ಣೆಯನ್ನು ನೆಲದ ಮೇಲೆ ಚೆಲ್ಲುತ್ತಾಳೆ. ಆ ಎಣ್ಣೆ ಬಂಡೆಯಾಗಿ ರೂಪಾಂತರಗೊಂಡು ಮಾಂತ್ರಿಕನನ್ನು ಸಾಯಿಸುತ್ತದೆ. ಸಾಯುವ ಮೊದಲು, ಮಾಂತ್ರಿಕ ಈ ಕೋಟೆ ಮತ್ತು ಪಟ್ಟಣವನ್ನು ಶಪಿಸಿ, ಅವರನ್ನು ವಿನಾಶಕ್ಕೆ ಗುರಿಪಡಿಸುತ್ತಾನೆ. ‘ಈ ಜಾಗ ಯಾರ ವಾಸಕ್ಕೂ ಯೋಗ್ಯವಿರಬಾರದು’ ಎಂದು ಆತ ಶಪಿಸುತ್ತಾನೆ. ಇದು ಇನ್ನೊಂದು ಕಥೆ.

bhangharh fort 2

ರಾತ್ರಿ ಕೇಳುತ್ತೆ ಹೆಣ್ಣಿನ ಧ್ವನಿ

ಆ ಶಾಪದ ಬಳಿಕ ಇಲ್ಲಿ ಸಾಕಷ್ಟು ಸಾವು ನೋವುಗಳು ಉಂಟಾದವು ಎನ್ನಲಾಗಿದೆ. ಈಗ ಇಲ್ಲಿ ರಾತ್ರಿ ವೇಳೆ ಹೆಣ್ಣಿನ ಧ್ವನಿ ಕೇಳುತ್ತದೆ. ಇನ್ನೂ ಕೆಲವರಿಗೆ ಹೆಜ್ಜೆಯ ಸಪ್ಪಳ ಕೇಳಿಸಿದೆ. ರಾತ್ರಿ ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರಿಗೆ ಇಲ್ಲಿ ಇರಲು ಯಾರಿಗೂ ಅವಕಾಶವಿಲ್ಲ. ಈ ಜಾಗದಲ್ಲಿ ಪುರಾತತ್ವ ಇಲಾಖೆ ವಿಶೇಷ ಬೋರ್ಡ್ಗಳನ್ನು ಕೂಡ ಹಾಕಿದೆ.