ಭಾರತ ಎಷ್ಟು ವಿಶಾಲವಾಗಿದೆಯೋ ಅಷ್ಟೇ ವೈವಿಧ್ಯವೂ ಆಗಿದೆ. ದಶ ದಿನಗಳ ದಸರಾ ಆಚರಣೆ ಕರ್ನಾಟಕದ ನಾಡಹಬ್ಬ. ಹಾಗೆಂದ ಮಾತ್ರಕ್ಕೆ ಈ ಆಚರಣೆ ಇಲ್ಲಿ ಮಾತ್ರ ನಡೆಯಬೇಕೆಂದೇನು ಇಲ್ಲ, ಅಲ್ವ? ನಾನು ಹೇಳುತ್ತಿರುವ ಈ ಪರಿಯ ದಸರಾ ಆಚರಣೆ ಕೇಳಿ ನಿಮಗೆ ಅಚ್ಚರಿಯಾಗಬಹುದು, ಈ ಹಬ್ಬ ನಡೆಯೋದು ಕರ್ನಾಟಕದಲ್ಲಿ ಅಲ್ಲ ಬದಲಿಗೆ ಆಂಧ್ರದಲ್ಲಿ. ಕೊಂಚ ಭಿನ್ನವಾಗಿದ್ದರೆ ಸಾಕಷ್ಟು ಸುದ್ದಿಯಾಗುತ್ತಿರಲಿಲ್ಲ. ವೈಶಿಷ್ಟ್ಯ ಏನು ಎಂದಿರಾ... ಹತ್ತು ದಿನಗಳ ಈ ದಸರಾ ಕೊನೆಯ ದಿನದಂದು ನಾವೆಲ್ಲರು ಬನ್ನಿಯನ್ನು ಮನೆ ಮನೆಗೆ ಅಲೆದು ಕೊಟ್ಟು, ʻಬನ್ನಿ ತಗೊಂಡು ಬಂಗಾರದಂಗ ಇರಿʼ ಎನ್ನುತ್ತೇವೆ. ಇದು ಬಳ್ಳಾರಿಯ ಭಾಷೆಯಾದರೂ, ಸಾಮಾನ್ಯವಾಗಿ ಎಲ್ಲರ ಆಶಯ ಇದೇ ಆಗಿರುತ್ತದೆ. ಆದರೆ ಆಂಧ್ರಪ್ರದೇಶದ ಕರ್ನೂಲಿನ ದೇವರಗಟ್ಟುವಿನಲ್ಲಿ ಇದಕ್ಕೆ ವಿರುದ್ದ ಎನ್ನುವಂತೆ, ಹೊಡೆದಾಟವೇ ಹಬ್ಬ.

dasara 1 (1)

ಇತಿಹಾಸ

ಸುತ್ತ ಊರಿನ ಜನ ಸ್ವಂತ ಅಣ್ಣ ತಮ್ಮಂದಿರಂತೆ ಇರಬೇಕು ಅಂತ ಅನ್ನೋದನ್ನು ಕೇಳಿದ್ದೇವೆ. ಆದರೆ ಸುತ್ತ ಐದು ಹಳ್ಳಿಗಳ ಜನರು ಈ ದಸರಾ ಆಚರಣೆಗಾಗಿಯೇ ಕಬ್ಬಿಣದ ಉಂಗುರ, ತಂತಿ ಬೇಲಿಯನ್ನು ಹಾಕಿದ ಉದ್ದ ಬಿದಿರಿನ ಕೋಲುಗಳೊಂದಿಗೆ ಪರಸ್ಪರ ಹೊಡೆದಾಡುತ್ತಾರೆ. ಇದಕ್ಕೆ ತೆಲುಗುವಿನಲ್ಲಿ ಕರ್ರಲಗಟ್ಟು ಉತ್ಸವ ಎಂಬ ಹೆಸರಿದೆ. ಬೆಂಕಿಯ ಪಂಜುಗಳನ್ನು ತೂರಾಡುವಾಗ, ನೋಡುವವರಿಗೆ ಯುದ್ಧ ಸದೃಶ ದೃಶ್ಯ. ಇದರಿಂದ ಹಬ್ಬಕ್ಕೆ ತೆರಳಿದ ಸಾಕಷ್ಟು ಜನರು ರಕ್ತಸಿಕ್ತರಾಗಿ ಮನೆಗೆ ಮರಳುವುದು ಸಾಮಾನ್ಯ. ಇಲ್ಲಿನ ಆಚರಣೆಯಲ್ಲವೇ ಎಲ್ಲವೂ ಇಲ್ಲಿನಂತೆ. ಇದಕ್ಕೆ ಪೊಲೀಸರ ವಿರೋಧವಿದೆ. ಅಂತೆಯೇ ದಂತಕಥೆಯೂ ಇದೆ. ಅದರ ಪ್ರಕಾರ, ಮಣಿ ಮತ್ತು ಮಲ್ಲಾಸುರ ಎಂಬ ರಾಕ್ಷಸರು ದೇವರಗಟ್ಟು ಬೆಟ್ಟ ಪ್ರದೇಶಗಳಲ್ಲಿ ಇದ್ದರು. ಅಲ್ಲಿ ತಪಸ್ಸು ಮಾಡುತ್ತಿದ್ದ ಋಷಿಗಳನ್ನು ದಿನಂಪ್ರತಿ ಹಿಂಸಿಸುತ್ತಿದ್ದರು. ಪರಮೇಶ್ವರ ಮತ್ತು ಪಾರ್ವತಿ ದೇವಿಗೆ ಈ ಕುರಿತು ಋಷಿಗಳು ದೂರಿದಾಗ, ವಿಜಯದಶಮಿಯ ರಾತ್ರಿಯಲ್ಲಿ ಈಶ್ವರ ದೇವನು ರಾಕ್ಷಸರನ್ನು ಸಂಹರಿಸಲು ಬೆಟ್ಟದ ಮೇಲೆ ಬಂದನಂತೆ. ಆಗ ತಮ್ಮ ಸಾವು ಸಮೀಪಿಸುತ್ತಿರುವುದನ್ನು ಅರಿತ ರಾಕ್ಷಸರು ಪ್ರತಿ ವರ್ಷ ಮಾನವ ಬಲಿಯನ್ನು ನೀಡುವಂತೆ ಬೇಡಿದರಂತೆ. ಇದನ್ನು ನಿರಾಕರಿಸಿದ ಶಿವನು ಬದಲಿಗೆ ತನ್ನ ಒಂದು ಮುಷ್ಟಿ ರಕ್ತವನ್ನು ಕೊಟ್ಟನಂತೆ. ಹೀಗೆ, ಇಲ್ಲಾದ ಸನ್ನಿವೇಶವನ್ನು ಮರುಸೃಷ್ಟಿಸಲು ಈ ಪರಿಯ ದಸರಾವನ್ನು ಆಚರಿಸುತ್ತಾರೆ.

dasara 3

ಮಾಳ ಮಲ್ಲೇಶ್ವರ ನಾಮೋತ್ಪತ್ತಿ

ಮಣಿ ಮತ್ತು ಮಲ್ಲಾಸುರರಿಂದ ಜನರನ್ನು ರಕ್ಷಿಸಿದ್ದರಿಂದ ಇಲ್ಲಿ ಶಿವನನ್ನು ಶ್ರೀ ಮಣಿ ಮಲ್ಲೇಶ್ವರ ಸ್ವಾಮಿ (ಮಾಳ ಮಲ್ಲೇಶ್ವರ) ಎಂದು ಪೂಜಿಸಲಾಗುತ್ತಿದೆ. ಇಲ್ಲಿಯ ಬನ್ನಿ ಉತ್ಸವವು ಮಾಳ ಮಲ್ಲೇಶ್ವರ ಬನ್ನಿ ಹಬ್ಬ ಎಂದು, ಗುಡ್ಡದ ಮೇಲೆ ನಡೆಯುವುದರಿಂದ ಸ್ಥಳೀಯವಾಗಿ ಗುಡ್ಡದ ಬನ್ನಿ ಎಂದು ಜನಪ್ರಿಯವಾಗಿದೆ. ಹನ್ನೊಂದು ದಿನಗಳ ಕಾಲ ಈ ಹಬ್ಬದ ಆಚರಣೆ ನಡೆಯುತ್ತದೆ ಮತ್ತು ವಿಜಯದಶಮಿಯ ದಿನದಂದು ಕೊನೆಗೊಳ್ಳುತ್ತದೆ,

ದಶಮಿ ದಿನದಂದು ಪ್ರಧಾನ ಅರ್ಚಕರು ಗಣಪತಿ ಪೂಜೆ, ಕಂಕಣಧಾರಣೆ, ಮಾಳ ಮಲ್ಲೇಶ್ವರ ಸ್ವಾಮಿ ಮತ್ತು ಪಾರ್ವತಿಗೆ ನಿಶ್ಚಿತಾರ್ಥ ಮಾಡಿ ಉತ್ಸವವನ್ನು ಪ್ರಾರಂಭಿಸುತ್ತಾರೆ. ನಂತರ ಭಕ್ತರು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವತೆಗಳ ವಿಗ್ರಹಗಳನ್ನು ಬೆಟ್ಟದಿಂದ ಕೆಳಗೆ ಮೆರವಣಿಗೆಗೆ ಒಯ್ಯಲಾಗುತ್ತದೆ. ಸುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಸೇರಿ ದೇವರ ವಿಗ್ರಹವನ್ನು ಪಡೆದುಕೊಳ್ಳುವ ಉದ್ದೇಶಕ್ಕಾಗಿ ಪರಸ್ಪರ ಹೊಡೆದಾಡುತ್ತಾರೆ. ಲೋಹದ ಉಂಗುರಗಳು, ಮುಳ್ಳಿನ ತಂತಿಗಳನ್ನು ಸುತ್ತಿದ ಉದ್ದನೆಯ ಕೋಲುಗಳು ಮತ್ತು ಬೆಂಕಿ ಹೊತ್ತಿಸಿ ಉರಿಯುತ್ತಿರುವ ಪಂಜುಗಳನ್ನು ತೂರಾಡುತ್ತ ಹೊಡೆದಾಡುವುದು ನೋಡಿದರೆ ಎಂಥ ಗಂಡೆದೆಯ ಗುಂಡಿಗೆಯೂ ಅರೆಘಳಿಗೆ ಝಲ್‌ಎನ್ನದಿರದು. ಹಾಂ.. ಈ ಸಮಯದಲ್ಲಿ ಶ್ರೀ ದೇವರ ಅರ್ಚಕರು ಕಬ್ಬಿಣದ ಸರಪಳಿಯನ್ನು ಹರಿದು, ಅಲ್ಲಿ ಆಗಬಹುದಾದ ಮಳೆ-ಬೆಳೆಯ ಕುರಿತು ಹೇಳಿಕೆ ನುಡಿಯುತ್ತಾರೆ. ಇದನ್ನು ಇಲ್ಲಿನ ಜನರು ನಂಬುತ್ತಾರೆ ಕೂಡ.

ವಿಷಯ ತಿಳಿದು ನೀವೇನಾದರೂ ಇಲ್ಲಿಗೆ ಭೇಟಿ ನೀಡಿದರೆ ಅದು ತಪ್ಪು ಇದು ಸರಿ ಎಂದು ಹೇಳುವ ಗೋಜಿಗೆ ಹೋಗಲೇಬೇಡಿ. ಬದಲಿಗೆ ʼಉಡಿದಿರ್ದ ಕೈದು ನೆತ್ತರ ಕಡಲೊಳಗಡಿಗಡಿಗೆ ತಳಮನುರ್ಚುತ್ತಿರೆʼ ಪಿಯುಸಿಯ ಈ ಪದ್ಯವನ್ನು ನೆನೆಯಿರಿ. ಇಲ್ಲಿ ಅಷ್ಟು ಘನ-ಘೋರವಾಗಿರದಿದ್ದರೂ, ಊಹಿಸಲಿಕ್ಕೆ ಕಡಿಮೆ ಏನೂ ಇಲ್ಲ.