ಶತಮಾನಗಳ ಕಥೆ ಹೇಳುವ ಡೆವಿನ್ ಕೋಟೆ
ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ನೆಪೋಲಿಯನ್‌ನ ಸೇನೆಯ ದಾಳಿಗೆ ಸಿಕ್ಕಿ ಇದರ ಹೆಚ್ಚಿನ ಭಾಗ ನಾಶವಾಯಿತು. ಹಾಗಾಗಿ ಇಂದು ನಾವು ಕಾಣುತ್ತಿರುವುದು ಅಳಿದುಳಿದ ಕೋಟೆಯ ಕುರುಹುಗಳನ್ನು ಮಾತ್ರ. ಆದರೆ ಗೆದ್ದು ಮುಕ್ಕಾಗದೆ ನಿಂತ ಕೋಟೆಗಳಿಗಿಂತ ಬಿದ್ದು ನೆಲಕ್ಕಚ್ಚಿದ ಅವಶೇಷಗಳು ಹೇಳುವ ಕಥೆಗಳೇ ಹೆಚ್ಚಲ್ಲವೇ?
- ಸುಚೇತಾ ಕೆ. ನಾರಾಯಣ್
ಸ್ಲೋವಾಕಿಯಾ ದೇಶದ ರಾಜಧಾನಿ ಬ್ರಾಟಿಸ್ಲಾವಾದಿಂದ 10 ಕಿಮೀ ದೂರದಲ್ಲಿ ಮೊರಾವ ಹರಿಯುತ್ತದೆ. ಈ ನದಿ ಮುಂದೆ ಸಾಗಿ ಡ್ಯಾನ್ಯೂಬ್ ನದಿಯನ್ನು ಕೂಡಿಕೊಳ್ಳುವ ಜಾಗದಲ್ಲಿ ಬಂಡೆಕಲ್ಲುಗಳ ಗುಡ್ಡವಿದ್ದು, ಅದರ ಮೇಲೆ ಡೆವಿನ್ ಕೋಟೆ ವಿರಾಜಮಾನವಾಗಿದೆ. ಹಿಂದೊಮ್ಮೆ ಎಷ್ಟೋ ಯುದ್ಧಗಳಿಗೆ ಸಾಕ್ಷಿಯಾಗಿದ್ದ ಇದು, ಇಂದು ಶತಮಾನಗಳ ಕಥೆ ಹೇಳುವ ಇದು ಸ್ಲೋವಾಕಿಯನ್ನರ ಹೆಮ್ಮೆಯ ಪ್ರತೀಕವಾಗಿ ನಿಂತಿದೆ.

ಚಳಿಗಾಲ ಆರಂಭವಾಗುವ ನವೆಂಬರ್ ತಿಂಗಳ ಮೊದಲ ವಾರ, ಮಂಜು ಮುಸುಕಿದ ಮುಂಜಾವು, ಬ್ರಾಟಿಸ್ಲಾವಾದಿಂದ ಹೊರಟ ನಾವಿದ್ದ ಬಸ್, ಡ್ಯಾನ್ಯೂಬ್ ನದಿಯ ಅಂಕುಡೊಂಕುಗಳನ್ನೇ ಅನುಸರಿಸಿಕೊಂಡು ಪಕ್ಕದ ರಸ್ತೆಯಲ್ಲಿ ಸಾಗುತಿತ್ತು. ಸ್ವಲ್ಪ ದೂರದಲ್ಲೇ ಹಠಾತ್ತನೆ ಪಟ್ಟಣದ ಚಿತ್ರಣ ಮರೆಯಾಗಿ ಹುಲ್ಲುಗಾವಲು, ಮೇಯುತ್ತಿದ್ದ ಜಿಂಕೆಗಳು, ಪುಟ್ಟ ಹಳ್ಳಿಗಳು ಕಂಡುಬಂದವು. ಕೆಲವೇ ನಿಮಿಷಗಳಲ್ಲಿ ಪಟ್ಟಣದ ಗಡಿಬಿಡಿಗೂ ತನಗೂ ಸಂಬಂಧವಿಲ್ಲ ಎನ್ನುವಂತೆ ಗುಡ್ಡದ ಮೇಲೆ ಮಂಜಿನ ತೆಳುವಾದ ಪರದೆಯಡಿ ನಿಂತಿದ್ದ ಕಲ್ಲಿನ ಗೋಡೆಗಳ ದರ್ಶನವಾಯಿತು. ಇಂಥ ಪುರಾತನ ಕಟ್ಟಡಗಳನ್ನು ನೋಡಿದಾಗ ನನ್ನಲ್ಲಿ, ಹೇಗಿದ್ದಿರಬಹುದು ಆ ದಿನಗಳು! ಅಲ್ಲಿನ ರಾಜ, ರಾಣಿಯರು, ಕೋಟೆಯ ಸಿಪಾಯಿಗಳು, ಜನಸಾಮಾನ್ಯರು, ನಡೆದ ಯುದ್ಧಗಳು ಎಲ್ಲದರ ಕುರಿತು ಕುತೂಹಲ ತುಂಬಿದ ಪ್ರಶ್ನೆಗಳೇ ಇದ್ದವು. ಹೆಚ್ಚಿನವು ಉತ್ತರ ಸಿಗದ ಪ್ರಶ್ನೆಗಳು.

ಸಮೀಪದ ಬಸ್ ತಂಗುದಾಣದಲ್ಲಿ ಇಳಿದು ಕೋಟೆಯೆಡೆಗೆ ಹೆಜ್ಜೆ ಹಾಕಿದೆವು. ಗ್ರೇಟ್ ಮೊರಾವಿಯನ್ ಅವಧಿ ಎಂದು ಕರೆಯಲಾಗುವ 8ರಿಂದ 10ನೇ ಶತಮಾನದ ಸುಮಾರಿಗೆ ಈ ಕೋಟೆ ಸುಭಧ್ರ ಸ್ಥಿತಿಯಲ್ಲಿತ್ತು. ನಂತರ ಹಂಗೇರಿ ಸಾಮ್ರಾಜ್ಯದ ಆಡಳಿತದಲ್ಲಿ ಡ್ಯಾನ್ಯೂಬ್ ನದಿಯ ಮೂಲಕ ನಡೆಯುತ್ತಿದ್ದ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲು ಪ್ರಾಮುಖ್ಯತೆ ಪಡೆದಿತ್ತು. ಆದರೆ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ನೆಪೋಲಿಯನ್‌ನ ಸೇನೆಯ ದಾಳಿಗೆ ಸಿಕ್ಕಿ ಇದರ ಹೆಚ್ಚಿನ ಭಾಗ ನಾಶವಾಯಿತು. ಹಾಗಾಗಿ ಇಂದು ನಾವು ಕಾಣುತ್ತಿರುವುದು ಅಳಿದುಳಿದ ಕೋಟೆಯ ಕುರುಹುಗಳನ್ನು ಮಾತ್ರ. ಆದರೆ ಗೆದ್ದು ಮುಕ್ಕಾಗದೆ ನಿಂತ ಕೋಟೆಗಳಿಗಿಂತ ಬಿದ್ದು ನೆಲಕ್ಕಚ್ಚಿದ ಅವಶೇಷಗಳು ಹೇಳುವ ಕಥೆಗಳೇ ಹೆಚ್ಚಲ್ಲವೇ?
ದಾರಿ ಸ್ವಲ್ಪ ಸ್ವಲ್ಪವಾಗಿ ಏರುತ್ತಾ ಹೆಬ್ಬಾಗಿಲಿನೆಡೆಗೆ ನಮ್ಮನ್ನು ಕರೆದೊಯ್ದಿತು. ಅಲ್ಲಿಂದ ಒಳಕ್ಕೆ ದಾಟಿದರೆ ಸಿಗುವುದು ಕೋಟೆಯ ಕೆಳಭಾಗ. ಹಿಂದೆ ಚಮ್ಮಾರರು, ಕಮ್ಮಾರರು, ಬಡಗಿಗಳು ಮುಂತಾದ ಕಾರ್ಮಿಕ ವರ್ಗದವರು ವಾಸವಾಗಿದ್ದ ಜಾಗವಿದು. ಮೊರಾವಿಯನ್ ಅವಧಿಯಲ್ಲಿ 9ನೇ ಶತಮಾನದ ಆಸುಪಾಸಿನಲ್ಲಿ ಕಟ್ಟಲಾಗಿದೆ ಎನ್ನಲಾಗಿರುವ ಚರ್ಚ್‌ನ ಅಡಿಪಾಯವನ್ನು ಈಗಲೂ ನಾವಿಲ್ಲಿ ಕಾಣಬಹುದು.

ಇನ್ನೂ ಮುಂದೆ ನಡೆದಾಗ ವಿಶಾಲವಾದ ಮಧ್ಯ ಭಾಗ. ಇದು ಶ್ರೀಮಂತ ವರ್ಗದ ಜನರಿದ್ದ ಕೋಟೆಯ ಹೃದಯ ಭಾಗ ಹಾಗೂ ಸಾಮಾನ್ಯ ವರ್ಗವಿದ್ದ ಹೊರಭಾಗವನ್ನು ಬೇರ್ಪಡಿಸುವ ಅಡ್ಡಗೋಡೆಯಂತಿದೆ. ಮುಖ್ಯವಾಗಿ ಆಹಾರ, ಯುದ್ಧ ಸಾಮಗ್ರಿಗಳನ್ನು ಕೂಡಿಡಲು ಉಪಯೋಗಿಸಲ್ಪಡುತ್ತಿದ್ದ ಈ ಜಾಗದಲ್ಲಿ ಸೈನಿಕರ ವಸತಿ ಗೃಹಗಳೂ ಇದ್ದವು. ಇಲ್ಲಿ 55 ಮೀಟರ್ ಆಳದ ಬಾವಿ ಇದ್ದು, ಹಿಂದೆ ಕೋಟೆಯನ್ನು ಶತೃಗಳು ಮುತ್ತಿಕೊಂಡಾಗ ಪೂರ್ತಿ ಕೋಟೆಗೆ ಇಲ್ಲಿಂದ ನೀರನ್ನು ಬಳಸಲಾಗುತ್ತಿತ್ತು ಎನ್ನುವ ಅಭಿಪ್ರಾಯವಿದೆ. ಇದಲ್ಲದೆ ನಾಣ್ಯಗಳು, ಮಡಿಕೆಗಳು, ಆಯುಧಗಳು, ಆಭರಣಗಳು ಹೀಗೆ ಉತ್ಖನನ ಸಮಯದಲ್ಲಿ ದೊರೆತ ಹಲವಾರು ವಸ್ತುಗಳನ್ನು ಪ್ರದರ್ಶಿಸುವ ಸಂಗ್ರಹಾಲಯ ಇಲ್ಲಿದೆ.
ನಾವು ಅಲ್ಲಿದ್ದ ಮಾಹಿತಿ ಫಲಕಗಳನ್ನೆಲ್ಲ ಓದಿಕೊಳ್ಳುತ್ತಾ, ಜತೆಗೆ ಒಂದಷ್ಟು ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಾ ಮುನ್ನಡೆದೆವು. ಪಕ್ಕದಲ್ಲೇ ವಿಶಾಲವಾದ ಡ್ಯಾನ್ಯೂಬ್ ನದಿ ಹರಿಯುತ್ತಿದ್ದರೆ ಬಂದು ಜತೆಯಾದ ಮೊರಾವ ನದಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಅದರಾಚೆಗೆ ಇದ್ದ ಆಸ್ಟ್ರಿಯಾ ದೇಶದ ಬಯಲು, ಗುಡ್ಡಗಳ ಸಾಲು ಮಂಜಿನ ಹನಿಗಳಿಂದ ತೋಯ್ದು ತಣ್ಣಗಿದ್ದಂತೆ ಕಂಡವು.

ಮುಂದೆ 212 ಮೀಟರ್ ಎತ್ತರದ ಬಂಡೆಕಲ್ಲಿನ ಅಡಿಪಾಯದ ಮೇಲೆ ನಿಂತಿದ್ದ ಕೋಟೆಯ ಮುಖ್ಯ ಭಾಗದೆಡೆ ಹೆಜ್ಜೆ ಹಾಕಿದೆವು. ಹಿಂದೆ ಅಲ್ಲಿದ್ದ ಭವಂತಿಗಳ ಎತ್ತರೆತ್ತರದ ಗೋಡೆಗಳು, ಕಂಬಗಳು, ಹಲವಾರು ಕೋಣೆಗಳನ್ನು ಇಂದಿಗೂ ಇಲ್ಲಿ ಕಾಣಬಹುದು. ನಮಗೆ ಕೋಟೆ ಎಂದಾಕ್ಷಣ ರಾಜ, ರಾಣಿಯರ ಕಲ್ಪನೆ ಬರುತ್ತದೆಯಲ್ಲವೇ. ಆದರೆ ವಿಶೇಷವೇನೆಂದರೆ ಈ ಕೋಟೆಯಲ್ಲಿ ಅರಮನೆ ಇರಲೇ ಇಲ್ಲ. ಇದು ಗಡಿ ಕಾಯುವ, ವ್ಯಾಪಾರ ಮಾರ್ಗಗಳನ್ನು ನಿಯಂತ್ರಿಸುವ ಯುದ್ಧ ತಂತ್ರಗಳಿಗೆ ಬಳಕೆಯಾಗುತ್ತಿದ್ದ ಕೋಟೆ. ರಾಜನ ಸಮೀಪವರ್ತಿಗಳು, ಅಧಿಕಾರಿಗಳು, ಸೇನಾ ಮುಖಂಡರುಗಳಿಗಾಗಿ ಕೋಟೆಯ ಮೇಲ್ಭಾಗ ಮೀಸಲಾಗಿತ್ತು. ಮಧ್ಯಭಾಗದಿಂದ ಕೋಟೆಯ ಮೇಲ್ಭಾಗಕ್ಕೆ ಹೋಗಲು ಪಹರೆಯ ದ್ವಾರವಿತ್ತು ಎಂದು ಶೋಧನೆಗಳಿಂದ ತಿಳಿದು ಬರುತ್ತದೆ.
ಅತಿ ಹೆಚ್ಚಿನ ಛಾಯಾಚಿತ್ರಗಳಲ್ಲಿ ಸೆರೆಯಾದ ಕೋಟೆಯ ಇನ್ನೊಂದು ಭಾಗವೆಂದರೆ ಮೇಡನ್ ಟವರ್. ಇದು ನದಿಗೆ ಅಭಿಮುಖವಾಗಿ ಜಲ ಮಾರ್ಗಗಳ ಮೇಲೊಂದು ಕಣ್ಗಾವಲಿಡಲು ಬಳಕೆಯಾಗುತ್ತಿತ್ತು. ಇದರ ಹಿಂದೊಂದು ದಂತಕಥೆ ಇದೆ. ತನಗಿಷ್ಟವಿಲ್ಲದ ಮದುವೆಗೆ ಒಪ್ಪಬೇಕಾದ ಪರಿಸ್ಥಿತಿ ಬಂದಾಗ ಹೆಣ್ಣು ಮಗಳೊಬ್ಬಳು ಇಲ್ಲಿಂದ ಹಾರಿ ಪ್ರಾಣ ಕಳೆದುಕೊಂಡಳಂತೆ. ಅವಳ ನೆನಪನ್ನು ಹೊತ್ತ ಮೇಡನ್ ಟವರ್ ಅನ್ನು ನಾವು ದೂರದಿಂದಷ್ಟೇ ನೋಡಬಹುದು.
ಕೋಟೆಯ ಅಂದಚೆಂದಗಳನ್ನು ಕಣ್ಮನ ತುಂಬಿಕೊಂಡು ನಿಧಾನವಾಗಿ ಹೊರಗೆ ಬಂದೆವು. ಹೀಗೆ ಅಪರೂಪದ ದಿನವೊಂದು ಮುಗಿದಿತ್ತು.