ಥೈಲ್ಯಾಂಡಿನ ಈ ಅಚ್ಚರಿಯ ತಾಣಗಳಿಗೆ ಭೇಟಿಕೊಡಲು ಮರೆಯದಿರಿ..
ಸಾಮಾನ್ಯವಾಗಿ ವಿದೇಶಿ ಪ್ರಯಾಣ ಕೈಗೊಳ್ಳಬೇಕು, ಕಡಿಮೆ ವೆಚ್ಚದಲ್ಲಿ ವಿದೇಶಗಳನ್ನು ಸುತ್ತಬೇಕು ಅಂದುಕೊಳ್ಳುವವರ ಮೊದಲ ಆಯ್ಕೆ ಥೈಲ್ಯಾಂಡ್. ಆದರೆ ಈ ದೇಶ ಸುತ್ತಲು ಹೊರಡುವ ಮುನ್ನ ಅಲ್ಲಿನ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಒಮ್ಮೆ ತಿಳಿದುಕೊಳ್ಳಿ.
ವಿಶ್ವದ ಅತ್ಯಂತ ಸುಂದರವಾದ ಅಭಿವೃಧ್ಧಿ ಹೊಂದಿದ ದೇಶಗಳ ಪೈಕಿ ಥೈಲ್ಯಾಂಡ್ ಪ್ರಮುಖವಾದುದು. ಸಂದರ್ಶಕರನ್ನು ಆಕರ್ಷಿಸುವ ಇಲ್ಲಿನ ಬ್ಯಾಂಕಾಕ್, ಫುಕೆಟ್ ನಂತಹ ಪ್ರದೇಶಗಳಂತೂ ಎಲ್ಲ ಕಾಲದಲ್ಲೂ ಪ್ರವಾಸಿಗರಿಂದಲೇ ತುಂಬಿಕೊಂಡಿರುತ್ತದೆ. ಮರೆಯಲಾಗದ ನೆನಪುಗಳನ್ನು ನೀಡುವ ಇಲ್ಲಿನ ತಿಳಿನೀಲಿ ಕಡಲ ತೀರಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಪರ್ವತ ಶ್ರೇಣಿಗಳು ಹೀಗೆ ಸಾಲು ಸಾಲು ಪ್ರವಾಸಿ ತಾಣಗಳು ಎಲ್ಲರಲ್ಲೂ ಸೆಳೆಯುತ್ತವೆ.
ಕುಟುಂಬ ಇಲ್ಲವೇ ಸ್ನೇಹಿತರ ಜೊತೆ ಪ್ರವಾಸ ಕೈಗೊಳ್ಳಲು ಥೈಲ್ಯಾಂಡ್ನಲ್ಲಿ ಯೋಗ್ಯವಾದ ಸ್ಥಳಗಳು ಯಾವುವು ಗೊತ್ತಾ..?
ಕ್ರಾಬಿ ಪ್ರಾಂತ್ಯದ ಫಿ ಫಿ ದ್ವೀಪಗಳು
ಥೈಲ್ಯಾಂಡ್ನ ಸುಂದರವಾದ ಪ್ರವಾಸಿತಾಣ ಫಿ ಫಿ ದ್ವೀಪಗಳು. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಸ್ಫಟಿಕ-ಸ್ಪಷ್ಟವೆಂಬಂತಿರುವ ನೀರು, ಕಣ್ಣು ಕೋರೈಸುವ ಸುಣ್ಣದ ಕಲ್ಲುಗಳು ಮಾತ್ರವಲ್ಲದೆ ರೋಮಾಂಚಕಾರಿ ಸಮುದ್ರ ಜೀವನವಾಗಿದೆ. ಸ್ನಾರ್ಕ್ಲಿಂಗ್ ಮತ್ತು ಡೈವಿಂಗ್ ಪ್ರಿಯರಿಂಗೆ ಉತ್ತಮ ಉತ್ತಮ ತಾಣವಾಗಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯವೂ ಪ್ರವಾಸಿಗರನ್ನ ತನ್ನತ್ತ ಸೆಳೆಯುವಂತಿದೆ.

ಉತ್ತರ ಥೈಲ್ಯಾಂಡ್ ನ ಚಿಯಾಂಗ್ ಮಾಯ್
ಥಾಯ್ ಭಾಷೆಯಲ್ಲಿ ಚಿಯಾಂಗ್ ಮಾಯ್ ಎಂದರೆ ಹೊಸ ನಗರ ಎಂದು ಅರ್ಥ. ಹೆಸರೇ ಹೇಳುವಂತೆ ನಿತ್ಯವೂ ಹೊಸತನದಿಂದ ಕಂಗೊಳಿಸುವ ಈ ನಗರವು ತನ್ನ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯದಿಂದ ಸಮೃದ್ಧವಾಗಿದೆ. ಉತ್ತರ ಥೈಲ್ಯಾಂಡ್ ನ ಅತಿ ದೊಡ್ಡ ನಗರವಾಗಿರುವ ಚಿಯಾಂಗ್ ಮಾಯ್, ಬ್ಯಾಂಕಾಕ್ ಮತ್ತು ನಖೋನ್ ರಾಟ್ಚಸಿಮಾ ನಂತರ ದೇಶದ ಮೂರನೇ ಅತಿದೊಡ್ಡ ನಗರವೆನ್ನಿಸಿಕೊಂಡಿದೆ. . ಇದು ಪಿಂಗ್ ನದಿಯ ಮೇಲೆ ಇದ್ದು, ಚಾವೊ ಫ್ರೇಯಾ ನದಿಯ ಪ್ರಮುಖ ಉಪನದಿಯಾಗಿದೆ. ಪರ್ವತಗಳಲ್ಲಿ ನೆಲೆಸಿರುವ ಈ ಪ್ರದೇಶವು ಹಚ್ಚಹಸಿರಿನ ಕಾಡು, ಪ್ರಾಚೀನ ದೇವಾಲಯಗಳ ಬೀಡು. ಇಲ್ಲಿ ಹಾಲಿನಂತೆ ಧುಮ್ಮಿಕ್ಕುವ ಜಲಪಾತಗಳು, ಅಪರೂಪದ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳುವುದು ಮಾತ್ರವಲ್ಲದೆ ಥೈಲ್ಯಾಂಡ್ ಹಳ್ಳಿಗಳ ಸೊಬಗನ್ನೂ ಸಹ ಆನಂದಿಸಬಹುದು.
ಫುಕೆಟ್ ನ ಫಾಂಗ್ ನ್ಗಾ ಬೇ
ಥೈಲ್ಯಾಂಡ್ ನಲ್ಲಿ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಫುಕೆಟ್ ಕೂಡ ಒಂದಾಗಿದೆ. ಇಲ್ಲಿನ ಫಾಂಗ್ ನ್ಗಾ ಕೊಲ್ಲಿಯು ಮಲಕ್ಕಾ ಜಲಸಂಧಿಯ ಒಂದು ಭಾಗವಾಗಿದ್ದು, ಸುಮಾರು 400 ಚದರ ಕಿಲೋಮೀಟರ್ ಹರಡಿ ನಿಂತಿದೆ. ಕೊಲ್ಲಿಯು ಹಚ್ಚ ಹಸಿರಿನ ಕಾಡುಗಳು, ಪ್ರಭಾವಶಾಲಿ ಭೂವೈಜ್ಞಾನಿಕ ರಚನೆಗಳು, ಪ್ರಮುಖ ಪುರಾತತ್ವ ಸ್ಥಳಗಳು ಮತ್ತು ನೂರಾರು ದ್ವೀಪಗಳಿಂದ ಕೂಡಿದೆ. 2004 ರ ವಿನಾಶಕಾರಿ ಸುನಾಮಿಯ ಹೊಡೆತದಿಂದಾಗಿ ಈ ಕೊಲ್ಲಿಯು ನಾಶವಾಗಿತ್ತಾದರೂ ಕಾಲ ಕಳೆದಂತೆ ಸುಸ್ಥಿತಿಗೆ ಬರಲಾರಂಭಿಸಿದೆ. ಗಮನಿಸಬೇಕಿರುವ ಅಂಶವೆಂದರೆ ದಿ ಮ್ಯಾನ್ ವಿಥ್ ದಿ ಗೋಲ್ಡನ್ ಗನ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ಜೇಮ್ಸ್ ಬಾಂಡ್ ಐಲ್ಯಾಂಡ್ ಅದರ ಅತ್ಯಂತ ಪ್ರಸಿದ್ಧ ಹೆಗ್ಗುರುತುಗಳಲ್ಲಿ ಒಂದಾಗಿದ್ದು, ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ.
ಥೈಲ್ಯಾಂಡ್ ಅಯುತಾಯ
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಅಯುತಾಯ ಥೈಲ್ಯಾಂಡ್ ಅತ್ಯಂತ ಸೊಗಸಾದ ಪ್ರವಾಸಿ ತಾಣವಾಗಿದೆ. ಥೈಲ್ಯಾಂಡಿನ ಅಯುತಾಯ ನಗರವು ಭಾರತೀಯ ಯಾತ್ರಾರ್ಥಿಗಳಿಗೆ ಅಯೋಧ್ಯೆಯನ್ನು ನೆನಪಿಸುತ್ತದೆ. ಈ ನಗರವು ತನ್ನ ಇತಿಹಾಸಕ್ಕೆ ಸಾಕ್ಷಿಯಾಗಿರುವ ಭವ್ಯವಾದ ದೇಗುಲಗಳು, ಅವಷೇಶಗಳನ್ನು ಹೊಂದಿದೆ. ಥಾಯ್ ಮತ್ತು ಬರ್ಮಿಸ್ ವಾಸ್ತುಶಿಲ್ಪಗಳ ಕೌಶಲಕ್ಕೆ ಈ ನಗರ ಸಾಕ್ಷಿಯಾಗಿದೆ.

ಕ್ರಾಬಿ ಪ್ರಾಂತ್ಯದ ರೈಲೇ ಬೀಚ್
ಕ್ರಾಬಿ ಪ್ರಾಂತ್ಯನಲ್ಲಿ ರೈಲೇ ಬೀಚನ್ನು ರೈ ಲೆಹ್ ಎಂದೂ ಕರೆಯುತ್ತಾರೆ .ಇದು ಕ್ರಾಬಿ ನಗರ ಮತ್ತು ಥೈಲ್ಯಾಂಡ್ನ ಆವೊ ನಾಂಗ್ ನಡುವಿನ ಒಂದು ಸಣ್ಣ ಪರ್ಯಾಯ ದ್ವೀಪವಾಗಿದೆ. ಎತ್ತರದ ಸುಣ್ಣದ ಕಲ್ಲು ಬಂಡೆಗಳು ಮುಖ್ಯ ಭೂಭಾಗದ ಪ್ರವೇಶವನ್ನು ಕಡಿತಗೊಳಿಸುವುದರಿಂದ ಇದನ್ನು ದೋಣಿಯ ಮೂಲಕ ಮಾತ್ರ ಪ್ರವೇಶಿಸಬಹುದು. ಸುಂದರವಾದ ಮತ್ತು ಏಕಾಂತ ಕಡಲತೀರಕ್ಕೆ ಹೆಸರುವಾಸಿಯಾಗಿದ್ದು, ಈ ಸ್ಥಳದ ಸ್ಪಷ್ಟವಾದ ನೀರು ಮತ್ತು ಶಾಂತವಾದ ವೈಬ್ಗೆ ಪ್ರವಾಸಿಗರು ಮಾರುಹೋಗಿದ್ದಾರೆ.
ಪೈ, ಮೇ ಹಾಂಗ್ ಸನ್ ಪ್ರಾಂತ್ಯ
ಥೈಲ್ಯಾಂಡ್ನ ಎಪ್ಪತ್ತಾರು ಪ್ರಾಂತ್ಯಗಳಲ್ಲಿ ಒಂದಾಗಿರುವ ಮೇ ಹಾಂಗ್ ಸನ್ ಪ್ರಾಂತ್ಯ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಮೇ ಹಾಂಗ್ ಸನ್ ಅನ್ನು "ಮೂರು ಮಂಜುಗಳ ನಗರ" ಎಂದೂ ಕರೆಯುವುದಿದೆ. ಇದು ಶಾನ್ ಬೆಟ್ಟಗಳ ಎತ್ತರದ ಪರ್ವತ ಶ್ರೇಣಿಗಳಿಂದ ಆವೃತವಾಗಿದೆ. ಥೈಲ್ಯಾಂಡ್ನ ಅತ್ಯಂತ ಪರ್ವತಮಯ ಪ್ರಾಂತ್ಯ ಇದಾಗಿದ್ದು, 12,765 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಈ ಪ್ರಾಂತ್ಯವು ಹೆಚ್ಚಾಗಿ ಮಂಜಿನಿಂದ ಆವೃತವಾಗಿರುತ್ತದೆ.. 2012 ರಲ್ಲಿ, ಮೇ ಹಾಂಗ್ ಸನ್ ಥೈಲ್ಯಾಂಡ್ನ ಅತ್ಯಂತ ಬಡ ಪ್ರಾಂತ್ಯವಾಗಿತ್ತು. ಆದರೆ ಇಂದು ಶ್ರೀಮಂತವಾದ ಪರಸರದೊಂದಿಗೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.