Thursday, June 12, 2025
Thursday, June 12, 2025

ಮಣಿಪಾಲದಲ್ಲಿದೆ 'ಹಸ್ತ ಶಿಲ್ಪ ಪಾರಂಪರಿಕ ಗ್ರಾಮ'

ಇತಿಹಾಸವನ್ನು ಮುಂದಿನ ಪೀಳಿಗೆಯೊಂದಿಗೆ ಬೆಸೆಯುವ ಉದ್ದೇಶದಿಂದ ದಿ. ವಿಜಯನಾಥ ಶೆಣೈಯವರು ʻಹಸ್ತ ಶಿಲ್ಪ ಹೆರಿಟೇಜ್‌ ವಿಲ್ಲೇಜ್‌ ಮ್ಯೂಸಿಯಂʼ ಹುಟ್ಟುಹಾಕಿದ್ದಾರೆ. ಉಡುಪಿಯ ಸಮೀಪದಲ್ಲೇ ಇರುವ ಈ ಪ್ರವಾಸಿ ತಾಣದ ಮಾಹಿತಿ ನಿಮಗಾಗಿ.

ವಿಶೇಷವಾದ ವಾಸ್ತುಶಿಲ್ಪ, ಕರಕುಶಲ ವಸ್ತುಗಳು, ಕಲೆ, ಸಾಂಸ್ಕೃತಿಕ ಪರಂಪರೆಗಳಿಂದ ಶ್ರೀಮಂತವಾಗಿರುವ ನಾಡು ಕರ್ನಾಟಕ. ಕರ್ನಾಟಕದ ಪ್ರತಿಯೊಂದು ಪ್ರದೇಶವೂ ಒಂದಿಲ್ಲೊಂದು ವಿಚಾರಗಳಿಗೆ ಜನಮನ್ನಣೆಗಳಿಸಿದೆ. ಅಂತಹ ಪ್ರದೇಶಗಳ ಪೈಕಿ ಉಡುಪಿಯಿಂದ ಸುಮಾರು 5 ಕಿಮೀ ದೂರದ ಮಣಿಪಾಲದಲ್ಲಿರುವ ಹಸ್ತ ಶಿಲ್ಪ ಪಾರಂಪರಿಕ ಗ್ರಾಮವು ಮಹತ್ವವನ್ನು ಪಡೆದುಕೊಂಡಿದೆ.

images (3)

ಹಸ್ತ ಶಿಲ್ಪ ಹೆರಿಟೇಜ್‌ ವಿಲ್ಲೇಜ್‌ ಮ್ಯೂಸಿಯಂ, 1997ರಲ್ಲಿ ಆರಂಭಗೊಂಡಿದ್ದು, ದಿ. ವಿಜಯನಾಥ ಶೆಣೈ ಇದರ ರೂವಾರಿಗಳಾಗಿದ್ದಾರೆ. ಹಸ್ತ ಶಿಲ್ಪ ಹೆರಿಟೇಜ್‌ ಹೌಸ್‌ ನಿರ್ಮಾಣಕ್ಕೆ ಮುಂದಾಗಿದ್ದ ವಿಜಯನಾಥ ಶೆಣೈ ಅವರು ನಂತರ ದಿನಗಳಲ್ಲಿ ಹಸ್ತ ಶಿಲ್ಪ ಪಾರಂಪರಿಕ ಗ್ರಾಮವನ್ನೇ ಹುಟ್ಟುಹಾಕಿದರು. ಈ ಕಲಾ ಗ್ರಾಮವು ಸುವರ್ಣ ಯುಗದ ಭಾರತೀಯ ಪರಂಪರೆ, ಕಲಾಕೃತಿಗಳು ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಸಾಂಪ್ರದಾಯಿಕ ವಾಸಸ್ಥಳಗಳು, ಕಲಾಕೃತಿಗಳು, ಜವಳಿ, ಪಾತ್ರೆಗಳು, ಪೀಠೋಪಕರಣಗಳು, ಕರಕುಶಲ ವಸ್ತುಗಳು ಮತ್ತು ಆಟಿಕೆಗಳನ್ನು ಪ್ರದರ್ಶನ ಇಲ್ಲಿರುವುದು ವಿಶೇಷ.

IMG_1183-1

ಅಲ್ಲದೆ ಇಲ್ಲಿರುವ ಪ್ರತಿಯೊಂದು ಕಟ್ಟಡ, ಪ್ರದರ್ಶನ, ಕಂಬಗಳೂ ಸಹ ಒಂದೊಂದು ಕಥೆಯನ್ನು ಹೇಳುವಂತಿದ್ದು, ಮಲೆನಾಡು, ದಕ್ಷಿಣ ಮತ್ತು ಉತ್ತರ ಕನ್ನಡದ 18 ಐತಿಹಾಸಿಕ ಮನೆಗಳ ಸೌಂದರ್ಯವನ್ನು ಮತ್ತು ಉತ್ತರ ಕರ್ನಾಟಕದ ಕೆಲವು ಗತಕಾಲದ ಸೌಂದರ್ಯವನ್ನು ಇಲ್ಲಿ ಪ್ರವಾಸಿಗರು ಅನುಭವಿಸಬಹುದು. ಕರ್ನಾಟಕದ ಹೆಸರಾಂತ ದೇವಾಲಯಗಳು, ವಿಶೇಷವಾಗಿ 13ನೇ ಶತಮಾನದ ಹರಿಹರ ಮಂದಿರವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಅಲ್ಲದೆ ದಕ್ಷಿಣ ಕನ್ನಡದ ಜಾನಪದ ಕಲೆ, ದೇವರು, ದೈವಗಳ ರೂಪಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.

IMG_3681

ನೋಡಲೇಬೇಕಾದದ್ದು:

- ಮಿಯೂರ್‌ ಹೌಸ್:‌ ಕಲಾ ಗ್ರಾಮದ ಒಳಗೆ ಪ್ರವೇಶಿಸುತ್ತಿದ್ದಂತೆಯೇ 19 ನೇ ಶತಮಾನದ ಮಧ್ಯಭಾಗದ ನಿರ್ಮಿಸಲಾಗುತ್ತಿದ್ದ ಮಿಯೂರ್‌ ಹೌಸ್‌ ಕಾಣಸಿಗುತ್ತಿದ್ದು, ಇಲ್ಲಿ ಪ್ರವೇಶ ಚಾವಡಿ, ಮೇಲಿನ ಮಹಡಿಯಲ್ಲಿ ಸುಂದರವಾದ ಬಾಲ್ಕನಿಗಳಿವೆ.

- ಗಂಜೀಫಾ ಗ್ಯಾಲರಿ: ಕಲಾ ಇತಿಹಾಸಕಾರ ಡಾ. ಪ್ರಮೀಳಾ ಲೋಚನ್ ಸಹ-ನಿರ್ವಹಿಸಿದ ಗಂಜೀಫಾ ಗ್ಯಾಲರಿಯು ವಸ್ತುಸಂಗ್ರಹಾಲಯದ ಅತ್ಯಂತ ಆಸಕ್ತಿದಾಯಕ ಪ್ರದೇಶಗಳಲ್ಲಿ ಒಂದಾಗಿದೆ.

- ಕುಕನೂರು ಕಮಲ್ ಮಹಲ್: ಇದೊಂದು ವಿಶೇಷವಾದ ಕಟ್ಟಡವಾಗಿದ್ದು, ವಿಜಯನಗರ ಕಾಲದ ಆರಂಭದಿಂದಲೂ ಇರುವುದಾಗಿ ಹೇಳಲಾಗಿದೆ.

- ಬಜಾರ್ ಬೀದಿ: 20ನೇ ಶತಮಾನದ ಅಂತ್ಯದವರೆಗೆ ಸಾಮಾನ್ಯವಾಗಿದ್ದ ಸಾಂಪ್ರದಾಯಿಕ ಭಾರತೀಯ ಬಜಾರ್‌ನ ಮರುಸೃಷ್ಟಿ ಇದಾಗಿದೆ.

- ಮುಧೋಳ ಅರಮನೆ: ಸಾರ್ವಜನಿಕ ಪ್ರೇಕ್ಷಕರ ದರ್ಬಾರ್ ಹಾಲ್ ಅನ್ನು ಕ್ಲಾಸಿಕ್ ಮರಾಠಾ ಶೈಲಿಯಲ್ಲಿ 19ನೇ ಶತಮಾನದ ಆರಂಭದಲ್ಲಿ ನಿರ್ಮಿಸಲಾಗಿದೆ.

ಒಟ್ಟಿನಲ್ಲಿ ನಮ್ಮ ಸಾಂಪ್ರದಾಯಿಕ ಕಟ್ಟಡಗಳು, ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಹಸ್ತ ಶಿಲ್ಪ ಹೆರಿಟೇಜ್‌ ಹೌಸ್‌ ಕಾರ್ಯನಿರ್ವಹಿಸುತ್ತಿದ್ದು, ಇಡೀ ವಸ್ತುಸಂಗ್ರಹಾಲಯವನ್ನು ನೋಡಲು ನಿಮಗೆ ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಈ ಪ್ರಮುಖ ಪ್ರವಾಸಿ ತಾಣವನ್ನು ವೀಕ್ಷಿಸಲು 300 ರೂಪಾಯಿ ಪ್ರವೇಶ ಶುಲ್ಕವನ್ನು ತೆರಬೇಕಾಗಿದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ