ಪುರಾಣ ಪ್ರಸಿದ್ಧ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವರ ಸನ್ನಿಧಿ ಗೋಕರ್ಣ. ಅಭಿಮನ್ಯುವಿನ ಚಕ್ರವ್ಯೂಹದಂತಿರುವ ಅಂಕುಡೊಂಕಾದ ಸರ್ಪಾಕಾರದ ಮಾರ್ಗಗಳು ಇಲ್ಲಿವೆ. ಅಂತಹ ಕಿಷ್ಕಿಂಧಾ ಮಾರ್ಗಗಳಲ್ಲೂ ತಮ್ಮ ಕಿರಿ ಕಿರಿ ವಾಹನಗಳಲ್ಲಿ ಪೂಜಾ ಕೈಕಂರ್ಯಗಳಿಗೆ ಬಿಡುವಿಲ್ಲದೆ ರಭಸದಿಂದ ಸಾಗುವ ಪುರೋಹಿತರ ದಂಡು ನೋಡುವುದೇ ಇಲ್ಲಿ ಒಂದು ಚಂದ. ಇಲ್ಲಿ ಬರುವ ಎಲ್ಲರಿಗೂ ತಮ್ಮ ಪಾಲಿನ ಕರ್ಮಗಳನ್ನು ನೆರವೇರಿಸಿ ಹಗುರಾಗುವ ಹಂಬಲ.

ಆದರೆ ಗೋಕರ್ಣ ಎಂದರೆ ಅಷ್ಟೇ ಅಲ್ಲ. ಅದು ಪ್ರಕೃತಿ ಸೌಂದರ್ಯದ ಬೀಡು. ಆರೇಳು ಕಿಲೋಮೀಟರು ದೂರವಿರುವ ಗೋಕರ್ಣದ ʻಓಂ ಬೀಚುʼ ನಯನ ಮನೋಹರ ಸ್ಥಳ. ಸಮುದ್ರದ ನೀರು ಶುದ್ಧ ಬಿಳಿಯ ಮರಳಿನ ತಟಕ್ಕೆ ಬಂದು ಬಡಿಯುವಾಗ ಓಂ ನಾದವನ್ನೇ ನುಡಿಯುತ್ತದೆಯೇನೋ ಎಂಬ ಭಾವ ಇಲ್ಲಿ ಮೂಡಿದೆ ಅಚ್ಚರಿಯಿಲ್ಲ. ದೂರದಿಂದ ಕಂಡಾಗ, ಈ ಬೀಚ್‌ ನ ಆಕಾರವು ಸಂಸ್ಕೃತ ಓಂ ಅಕ್ಷರವನ್ನು ಹೋಲುತ್ತದೆ ಎಎಂಬುದು ಪ್ರಸಿದ್ಧ ಹೇಳಿಕೆ.

istockphoto-105926332-612x612

ಇಲ್ಲಿ ಸ್ಥಳೀಯರು ಕವಡೆ ಕಪ್ಪೆಚಿಪ್ಪು ಮಣಿಗಳಿಂದ ಮಾಡಿದ ಹಾರಗಳನ್ನು ಮಾರುತ್ತಾರೆ. ಸ್ಥಳೀಯವಾಗಿ ಬೆಳೆದ ಅನಾನಸ್ ಹಣ್ಣಿನ ರುಚಿ ಸವಿದವರಿಗಷ್ಟೇ ಗೊತ್ತು. ಬುಡಕಟ್ಟು ಮಾದರಿಯ ಕೇಶಾಲಂಕಾರ ಮಾಡಿಸಿಕೊಳ್ಳಬಹುದು. ಸ್ಥಳೀಯ ನಿವಾಸಿ ಹಾಗೂ ದನಕರುಗಳಿಗೆಂದೇ ಮೀಸಲಿರುವ ಕಾಲುದಾರಿಯಲ್ಲಿ ಎಚ್ಚರಿಕೆಯಿಂದ ಸಾಗಿದರೆ ಗಿಡ ಮರ ಬಂಡೆಗಳ ಚೌಕಟ್ಟಿನಲ್ಲಿ ಸುಂದರ ಸೂರ್ಯಾಸ್ತಮಾನ ಲಭ್ಯವಿದೆ. ಓಂ ಬೀಚ್‌ ನ ಚಂದವನ್ನು ನೋಡಲು ದೇಶಿಯರ ಜತೆ, ವಿದೇಶೀಯರೂ ಬರುವುದುಂಟು.

ಸಮುದ್ರ ದಂಡೆಯಲ್ಲಿ ಸಿಗುವ ನುಣುಪಾದ ಸಣ್ಣ ಸಣ್ಣ ಕಲ್ಲುಗಳನ್ನು ಬಳಸಿ ನಿರ್ಮಿಸಿರುವ ಕಂಬ ಹಾಗೂ ಲಿಂಗಾಕೃತಿ ಗಮನಸೆಳೆಯುತ್ತದೆ. ದೋಣಿ ವಿಹಾರವೂ ಇದೆ.

ಇಲ್ಲೇಕೆ ಹಾರಿಬಂದ ಹನುಮ ?

ಪೇಟೆಯಲ್ಲಿ ಇರುವ ಶ್ರೀ ಆಂಜನೇಯ ಜನ್ಮ ಭೂಮಿಗೆ ದಾರಿ ಎಂಬ ಗೋಡೆಬರಹ ಗೊಂದಲಕ್ಕೀಡು ಮಾಡುತ್ತದೆ. ವಿಚಾರಿಸಿದರೆ ಅಲ್ಲಿ ಏನೂ ಇಲ್ಲ, ಕತ್ತಲೆ ಹೊತ್ತಿನಲ್ಲಿ ಹೋಗಬೇಡಿ ಎಂಬ ಎಚ್ಚರಿಕೆಯ ಹೊರತು ಬೇರೆ ವಿವರ ಸಿಗುವುದಿಲ್ಲ. ಬಹುತೇಕರು ನಂಬಿರುವ ಆಂಜನೇಯನ ಜನ್ಮ ಸ್ಥಳ ಹಂಪಿ ಸಮೀಪದ ಅಂಜನಾ ಪರ್ವತಕ್ಕೆ ಇಲ್ಲಿಂದ ಹೋಗಲು ಸಾಧ್ಯವಿರಬಹುದೇ ? ತಿಳಿಯದು.

dari ellige

ಗೋಕರ್ಣ ಬೀಚಿನ ಸೂಯಾಸ್ತಮವೂ ಕಣ್ಣಿಗೆ ಹಬ್ಬವೇ. ಇಲ್ಲಿ ಕುದುರೆ ಮತ್ತು ಒಂಟೆ ಸವಾರಿಗೂ ಅವಕಾಶವಿದೆ. ಇವುಗಳ ಜೊತೆಗೆ ಸಮೀಪದಲ್ಲೇ "ಅಶೋಕವನ" ಎಂಬಲ್ಲಿ " ಸಸ್ಯ ಸಂಜೀವಿನಿ " ಎಂಬ ಆಯುರ್ವೇದ ಕೇಂದ್ರವಿದೆ. ಅದು ಸದ್ದಿಲ್ಲದೇ ಕಾರ್ಯ ನಿರ್ವಹಿಸುತ್ತಿದೆ. ಸುಮಾರು ಹದಿನೈದು ಎಕರೆ ಜಾಗದಲ್ಲಿ, ಆರು ನೂರು ವಿವಿಧ ಔಷಧೀಯ ಸಸ್ಯಗಳನ್ನು ಬೆಳೆದು ಅವುಗಳ ಬೆಳೆಗಳಿಂದಲೇ ಆಯುರ್ವೇದ ಔಷಧಿಗಳನ್ನು ತಯಾರಿಸಿ ಜನರಿಗೆ ತಲುಪಿಸುವ ಕೆಲಸವನ್ನು ಡಾ.ಪತಂಜಲಿ ಶರ್ಮ ಹಾಗೂ ಡಾ. ಸೌಮ್ಯಶ್ರೀ ಶರ್ಮ ಮಾಡುತ್ತಿದ್ದಾರೆ. ಪ್ರವೇಶ ದ್ವಾರದಲ್ಲಿರುವ ಧನ್ವಂತರಿ ದೇಗುಲ ತನ್ನ ಸರಳ ರೂಪದಿಂದ ಇಷ್ಟವಾಗುತ್ತದೆ. ಗೀರ್ ಮತ್ತು ಮಲೆನಾಡು ಗಿಡ್ಡ ತಳಿಗಳ ಸುಸಜ್ಜಿತ ಗೋಶಾಲೆ ಇಲ್ಲಿನ ವಿಶೇಷ. ಮೂರು ಹಂತದಲ್ಲಿ, ಗಾಢಾಂಧಕಾರದಲ್ಲಿ ಧ್ಯಾನದ ಅವಕಾಶ ಕಲ್ಪಿಸುವ " ಕಾಯಕಲ್ಪ ಕುಟಿ " ಈ ಕೇಂದ್ರದ ವಿಶೇಷತೆ. ವೈದ್ಯರ ಸಹಾಯಕರಾದ ಜಿ ಜಿ ಹೆಗಡೆ ಬಂದವರನ್ನು ಉಪಚರಿಸಿ ಕೇಂದ್ರದ ಪರಿಚಯ ಮಾಡಿಕೊಡುತ್ತಾರೆ.

ಪಾರಮಾರ್ಥಿಕ ದೃಷ್ಟಿಯಿಂದ ಬಂದವರಿಗೆ ಇಹಲೋಕದ ಸೌಂದರ್ಯ ಉಣಬಡಿಸುವ ಗೋಕರ್ಣ ನಿಜಕ್ಕೂ ಒಂದು ಸುಂದರ ಪ್ರಕೃತಿ ತಾಣ.