Friday, June 13, 2025
Friday, June 13, 2025

ವಸಂತ ಋತುವಿನಲ್ಲಿ ಅರಳಿ ನಗುವ ಚೆರ್ರಿ ಹೂಗಳನ್ನು ನೋಡಲು ಈ ದೇಶಗಳನ್ನು ಸುತ್ತಲೇಬೇಕು..

ವಸಂತಕಾಲ ಪ್ರಾರಂಭವಾಯಿತೆಂದರೆ ವಿದೇಶಗಳಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿಬಿಡುತ್ತದೆ. ಇಲ್ಲಿನ ಪ್ರಮುಖ ಬೀದಿಗಳಲ್ಲಿ, ಉದ್ಯಾವನಗಳಲ್ಲಿ ಗುಲಾಬಿ ಹಾಗೂ ಬಿಳಿಯ ಬಣ್ಣದ ಚೆರ್ರಿ ಹೂಗಳು ಅರಳಿ ನಿಂತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ.

ವಸಂತ ಕಾಲ ಪ್ರಾರಂಭವಾಗಿದೆ. ಪ್ರವಾಸಿಗರ ನೆಚ್ಚಿನ ತಾಣಗಳೀಗ ಋತುಗಳ ರಾಜ ವಸಂತನ ಆಗಮನದಿಂದ ತರುಲತೆಗಳು ಚಿಗುರಿ ಹೊಸ ಹೂಗಳು ಕಂಪನ್ನು ಬೀರುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ವಸಂತ ಕಾಲದಲ್ಲಿ ಜಗತ್ತಿನಾದ್ಯಂತ ಅರಳುವ ಗುಲಾಬಿ ಮತ್ತು ಬಿಳಿ ಭೂದೃಶ್ಯದ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಮಾರ್ಚ್‌, ಎಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ದೇಶ ವಿದೇಶಗಳಿಗೆ ತೆರಳುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತವೆ.

ಆಹ್ಲಾದಕರ ವಾತಾವರಣದೊಂದಿಗೆ ವಸಂತದ ಹೂವುಗಳನ್ನು ನೋಡುವುದಕ್ಕಾಗಿ ಎಪ್ರಿಲ್‌ ನಲ್ಲಿ ಭೇಟಿ ಕೊಡಬಹುದಾದ ಪ್ರಮುಖ ದೇಶಗಳು ಯಾವೆಲ್ಲಾ ಗೊತ್ತಾ?

ವಾಷಿಂಗ್ಟನ್ ಡಿ.ಸಿ.(Washington D.C), ಯುಎಸ್ಎ

ವಸಂತಕಾಲದಲ್ಲಿ ಅರಳುವ ಚೆರ್ರಿ ಬ್ಲಾಸಮ್ ಮರಗಳ ಮೋಡಿಯಿಂದಲೇ ಅಮೇರಿಕದ ರಾಜಧಾನಿಯ ವಾಷಿಂಗ್ಟನ್ ಡಿ.ಸಿ. ಜನಪ್ರಿಯವಾಗಿದೆ. 1912ರಲ್ಲಿ ಒಟ್ಟು 3000 ಚೆರ್ರಿ ಹೂವಿನ ಗಿಡಗಳನ್ನು ಜಪಾನ್ ದೇಶವು ಯುಎಸ್ಎಗೆ ಉಡುಗೊರೆಯಾಗಿ ನೀಡಿತ್ತು. ಅವು ಹೆಮ್ಮರವಾಗಿ ಬೆಳೆದು ನಿಂತಿವೆ. ಅಲ್ಲದೆ ಜಪಾನೀಸ್ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಪ್ರತಿ ವರ್ಷವೂ ಇಲ್ಲಿ ಒಂದು ತಿಂಗಳ ಕಾಲ ಚೆರ್ರಿ ಬ್ಲಾಸಮ್ ಉತ್ಸವವನ್ನು ಆಚರಿಸಲಾಗುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

0735c368-cherry-blossom-festival-scaled

ಪ್ಯಾರಿಸ್ (Paris), ಫ್ರಾನ್ಸ್

ಫ್ರಾನ್ಸ್ ನ ಪ್ಯಾರಿಸ್‌ ವಸಂತ ಕಾಲದಲ್ಲಿ ಪ್ರವಾಸಿಗರಿಂದ ತುಂಬಿಕೊಂಡಿರುತ್ತದೆ. ಅದರಲ್ಲೂ ಐಫೆಲ್ ಟವರ್ ಉದ್ದಕ್ಕೂ ನಡೆದುಕೊಂಡು ಹೋದರಂತೂ ಗುಲಾಬಿ ಬಣ್ಣದ ಮನಮೋಹಕ ಹೂವುಗಳು ಕಣ್ತುಂಬಿಕೊಳ್ಳುತ್ತವೆ. ಎಕೋಲ್ ಮಿಲಿಟೈರ್ ಮತ್ತು ಐಫೆಲ್ ಟವರ್ ನಡುವೆ ಇರುವ ಪಾರ್ಕ್ ಡು ಚಾಂಪ್ ಡಿ ಮಾರ್ಸ್‌, ಪ್ಯಾರಿಸ್‌ನ ದಕ್ಷಿಣ ಮುಂಭಾಗದಲ್ಲಿರುವ ನೊಟ್ರೆ-ಡೇಮ್ ಡೆ ಪ್ಯಾರಿಸ್‌ ಸೇರಿದಂತೆ ಪ್ಯಾರಿಸ್‌ ನ ಅನೇಕ ಕಡೆಗಳಲ್ಲಿ ಚೆರ್ರಿ ಮರಗಳು ಬಿಳಿ ಹಾಗೂ ಗುಲಾಬಿಯ ಲೋಕವನ್ನೇ ಸೃಷ್ಟಿಸಿಬಿಡುತ್ತವೆ.

ವ್ಯಾಂಕೋವರ್(Vancouver), ಕೆನಡಾ

ವಸಂತ ಋತುವಿನಲ್ಲಿ ಇಲ್ಲಿ ಸುಮಾರು ನಲುವತ್ತು ಸಾವಿರ ಚೆರ್ರಿ ಮರಗಳು ಏಕಕಾಲಕ್ಕೆ ಹೂ ಬಿಡುತ್ತಿದ್ದು, ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಅದರಲ್ಲೂ ವ್ಯಾನ್‌ಡುಸೆನ್ ಬೊಟಾನಿಕಲ್ ಗಾರ್ಡನ್‌ನಲ್ಲಿರುವ ಐನೂರು ಮರಗಳ ಭವ್ಯ ನೋಟವನ್ನು ಆನಂದಿಸಬಹುದು ಅಥವಾ ಕ್ವೀನ್ ಎಲಿಜಬೆತ್ ಪಾರ್ಕ್, ಸ್ಟಾನ್ಲಿ ಪಾರ್ಕ್‌ಗೆ ಹೋದರಂತೂ ಚೆರ್ರಿ ಹೂಗಳ ಸುಂದರ ನೋಟವನ್ನು ಕಾಣಲು ಸಾಧ್ಯ.

ಬೋನ್‌ (Bonn), ಜರ್ಮನಿ

ಜರ್ಮನಿಯಲ್ಲಿರುವ ಬೋನ್ ನ ಹಳೆಯ ಪಟ್ಟಣವು ಸಾಮಾನ್ಯವಾಗಿ ಚೆರ್ರಿ ಬ್ಲಾಸಮ್ ಸುರಂಗಗಳನ್ನು ಹೊಂದಿವೆ. ಅಲ್ಲದೆ ವಿಶ್ವದ ಅತ್ಯಂತ ಸುಂದರವಾದ ಹೂವುಗಳು ಹೀರ್‌ಸ್ಟ್ರಾಸ್ಸೆಯಲ್ಲಿ ಕಂಡುಬರುತ್ತದೆ. ಇದನ್ನು ಚೆರ್ರಿ ಬ್ಲಾಸಮ್ ಅವೆನ್ಯೂ ಎಂದು ಕರೆಯಲಾಗುತ್ತದೆ. ಪ್ರತಿ ವಸಂತಕಾಲದಲ್ಲಿ, ಈ ಪ್ರದೇಶವು ಗುಲಾಬಿ ಬಣ್ಣದಲ್ಲಿ ಕಂಗೊಳಿಸುತ್ತವೆ. ಋತುವಿನ ಆರಂಭವನ್ನು ಆಲ್ಟ್‌ಸ್ಟಾಡ್ ಉತ್ಸವವನ್ನು ಆಚರಿಸುವ ಮೂಲಕ ಪುಷ್ಪ ಪ್ರಿಯರು ವಸಂತನ ಆಗಮನವನ್ನು ಇಲ್ಲಿ ಸಂಭ್ರಮಿಸುತ್ತಾರೆ.

35516

ಜೆರ್ಟೆ ಕಣಿವೆ (Jerte Valley), ಸ್ಪೇನ್

ವಸಂತ ಕಾಲದಲ್ಲಿ ತಪ್ಪದೇ ಭೇಟಿ ನೀಡಬೇಕಿರುವ ಸ್ಥಳ ಸ್ಪೇನ್‌ನ ಜೆರ್ಟೆ ಕಣಿವೆ. ಇಲ್ಲಿರುವ ಚೆರ್ರಿ ಮರಗಳು ವಸಂತನ ಆಗಮನದಿಂದ ಪುಳಕಗೊಂಡು ಹೂವುಗಳಿಂದ ತುಂಬಿಕೊಳ್ಳುತ್ತವೆ. ಒಮ್ಮೆ ಹೂವು ಬಿಟ್ಟರೆ ಸುಮಾರು ಹತ್ತು ದಿನಗಳವರೆಗೆ ಮಾತ್ರ ಆ ಹೂವುಗಳು ಉಳಿಯುವುದರಿಂದ ಇದರ ನಡುವೆಯೇ ಇಲ್ಲಿ ಪುಷ್ಪ ಉತ್ಸವವನ್ನು ಆಯೋಜಿಸಲಾಗುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರಷ್ಪಪ್ರೇಮಿಗಳು ಇಲ್ಲಿಗೆ ಭೇಟಿನೀಡಿ ವಿಶೇಷ ಅನುಭವವನ್ನು ಪಡೆದುಕೊಳ್ಳುತ್ತಾರೆ.

ಟೋಕಿಯೊ(Tokyo), ಜಪಾನ್

ಎಪ್ರಿಲ್‌ ನಲ್ಲಿ ಜಪಾನಿನಲ್ಲಿ ಚೆರ್ರಿ ಹೂವಿನ ಋತುವಿನ ಕಾಲ. ನಗರಗಳು ಹಾಗೂ ಭೂಪ್ರದೇಶಗಳೆಲ್ಲ ಬಿಳಿ ಹಾಗೂ ಗುಲಾಬಿ ಬಣ್ಣದ ಲೋಕಗಳನ್ನು ಸೃಷ್ಟಿಸಿಬಿಡುತ್ತವೆ. ಇಲ್ಲಿನ ಉಯೆನೊ ಪಾರ್ಕ್‌, ಚಿಡೋರಿಗಾಫುಚಿ ಪಾರ್ಕ್(Chidorigafuchi Park) ಗಳಲ್ಲಿ ವಿಭಿನ್ನ ಚೆರ್ರಿ ಮರಗಳಿದ್ದು, ವಸಂತದಲ್ಲಿ ಹೂಗಳಿಂದ ತುಂಬಿರುತ್ತದೆ. ಇಲ್ಲಿ ನೀವು ದೋಣಿ ಪ್ರವಾಸವನ್ನು ಕೈಗೊಂಡು, ಚೆರ್ರಿ ಹೂಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

a0000001_main

ಸ್ಟಾಕ್‌ಹೋಮ್(Stockholm), ಸ್ವೀಡನ್

ಸ್ವೀಡನ್ ದೇಶದ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ವಸಂತಕಾಲದ ಆಗಮನವಾದಾಗ ಸಂಪೂರ್ಣ ನಗರವೇ ಗುಲಾಬಿ ಚೆರ್ರಿ ಹೂವುಗಳಿಂದ ತುಂಬಿರುತ್ತದೆ. ಇಲ್ಲಿನ ಕುಂಗ್‌ಸ್ಟ್ರಾಡ್‌ಗಾರ್ಡನ್‌ (Kungstradgarden)ನಲ್ಲಿ ಅಲೆದಾಡಬಹುದು. ಅಲ್ಲಿ 60ಕ್ಕೂ ಹೆಚ್ಚು ಚೆರ್ರಿ ಮರಗಳಿದ್ದು, ಆ ಚೆರ್ರಿ ಹೂಗಳ ಸೌಂದರ್ಯಕ್ಕೆ ಮಾರುಹೋಗಬಹುದು. ವರ್ಷವೂ ಇಲ್ಲಿನ ಭವ್ಯವಾದ ಉದ್ಯಾನವನದಲ್ಲಿ ಜಪಾನೀಸ್ ಉತ್ಸವವು ನಡೆಯುತ್ತದೆ. ಈ ವೇಳೆ ಜಪಾನಿ ಸಂಸ್ಕೃತಿಯನ್ನು ಅನುಭವಿಸುವ ಅವಕಾಶವೂ ಪ್ರವಾಸಿಗರಿಗೆ ಲಭ್ಯವಾಗುತ್ತದೆ.

ಆಮ್ಸ್ಟೆಲ್ವೀನ್(Amstelveen), ನೆದರ್ಲ್ಯಾಂಡ್

ಆಮ್ಸ್ಟರ್‌ಡ್ಯಾಮ್ಸ್ ಬೋಸ್‌ನಲ್ಲಿರುವ ಉದ್ಯಾನವನಗಳಲ್ಲಿ ಸಾಮಾನ್ಯವಾಗಿ ವರ್ಷದ ಬಹುಪಾಲು ಸಮಯದಲ್ಲಿ ಅಷ್ಟಾಗಿ ಪ್ರವಾಸಿಗರನ್ನು ಕಾಣಸಿಗುವುದಿಲ್ಲ. ಆದರೆ ವಸಂತಕಾಲದಲ್ಲಿ ಈ ಪ್ರದೇಶವು ಬಿಳಿ ಮತ್ತು ಗುಲಾಬಿ ಬಣ್ಣಗಳ ಚೆರಿ ಹೂವುಗಳಿಂದ ತುಂಬಿರುತ್ತದೆ. ಅಲ್ಲದೆ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. 2000 ನೇ ಇಸವಿಯಲ್ಲಿ, ಸುನಾಮಿ ಸಂತ್ರಸ್ತರಿಗೆ ಗೌರವ ಸಲ್ಲಿಸುವ ಸಲುವಾಗಿ ಜಪಾನಿಯರು ಸುಮಾರು 400 ಚೆರ್ರಿ ಗಿಡಗಳನ್ನು ಇಲ್ಲಿ ನೆಟ್ಟಿದ್ದರಂತೆ. ಸದ್ಯ ವಸಂತ ಕಾಲದಲ್ಲಂತೂ ಇಲ್ಲಿನ ಉದ್ಯಾನವನಕ್ಕೆ ಹೋಗಿ ಗುಲಾಬಿ ಬಣ್ಣದ ಚೆರ್ರಿ ಹೂವುಗಳು ಅರಳಿರುವುದನ್ನು ನೋಡಬಹುದು.

ಎಡಿನ್‌ಬರ್ಗ್(Edinburgh), ಸ್ಕಾಟ್ಲೆಂಡ್

ವಸಂತ ಕಾಲದ ಹೂವುಗಳಿಂದಲೇ ಜನಪ್ರಿಯವಾದ ಪ್ರದೇಶ ಸ್ಕಾಟ್ಲೆಂಡ್‌ ನ ಎಡಿನ್‌ಬರ್ಗ್. ಇಲ್ಲಿ ಅರಳುವ ಹೂವುಗಳು ಬೆಚ್ಚಗಿನ ಸೂರ್ಯನ ಬೆಳಕಿನಲ್ಲಿ ಮಿಂಚುವ ನಯವಾದ ಗುಲಾಬಿ ದಳಗಳೊಂದಿಗೆ ಅದ್ಭುತವಾಗಿ ಕಾಣುತ್ತವೆ. ಗುಲಾಬಿ ಮಾತ್ರವಲ್ಲದೆ ಬಿಳಿ ಬಣ್ಣಗಳ ಸುಂದರ ಹೂವುಗಳ ಜೊತೆಗೆ ಫೋಟೋ ತೆಗೆಸಿಕೊಳ್ಳುವ ಖುಷಿ ಬೇರೆಲ್ಲೂ ಸಿಗದು. ಎಡಿನ್‌ಬರ್ಗ್ ಕೋಟೆಯ ಬಳಿಯ ಪ್ರಿನ್ಸಸ್ ಸ್ಟ್ರೀಟ್ ಗಾರ್ಡನ್‌ನಲ್ಲೂ ಸಹ ನೀವು ಚೆರ್ರಿ ಹೂವುಗಳನ್ನು ಕಣ್ತುಂಬಿಕೊಳ್ಳಬಹುದು.

_106603098_p1040319

ಕುರಿಟಿಬಾ(Curitiba), ಬ್ರೆಜಿಲ್

20ನೇ ಶತಮಾನದಲ್ಲಿ ಸಾವಿರಾರು ಜಪಾನಿಯರು ಬ್ರೆಜಿಲ್‌ಗೆ ವಲಸೆ ಬಂದಿದ್ದು, ಇಂದು ಬ್ರೆಜಿಲ್‌ನಲ್ಲಿ ಜಪಾನಿಯರ ಸಂಖ್ಯೆಯೂ ಹೆಚ್ಚಾಗಿದೆ. ಅವರು ತಮ್ಮೊಂದಿಗೆ ತಂದ ಚೆರ್ರಿ ಸಸಿಗಳು ಹೆಮ್ಮರವಾಗಿ ಬೆಳೆದುನಿಂತು ಇಂದು ವಸಂತ ಋತುವಿನಲ್ಲಿ ಹೂವುಗಳನ್ನು ಬಿಡುತ್ತಿವೆ..ಆದರೆ, ಬ್ರೆಜಿಲ್‌ನಲ್ಲಿ ಚೆರ್ರಿ ಹೂಗಳು ಬಿಡುವ ಸಮಯವು ಪ್ರಪಂಚದ ಉಳಿದ ಭಾಗಗಳಿಗಿಂತ ಭಿನ್ನವಾಗಿದೆ.

ಹೀಗೆ ದೇಶ ವಿದೇಶಗಳ ಉದ್ಯಾನವನಗಳಲ್ಲಿ ವಸಂತ ಋತುವಿನಲ್ಲಿ ಅರಳಿ ನಗುವ ಗುಲಾಬಿ ಹಾಗೂ ಬಿಳಿ ಚೆರ್ರಿ ಹೂಗಳನ್ನು ನೋಡಬೇಕೆಂದುಕೊಂಡರೆ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವುದು ಉತ್ತಮ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ