• ಪೂರ್ಣಚಂದ್ರ ಹೆಗಡೆ

ಮಾರಿಕಾಂಬೆಯೇ ಶಿರಸಿಮಾತೆಯೇ

ದೂರಿಕೊಂಬೆವು ನಿನ್ನೊಳು

ಘೋರ ದುರಿತದಿ ತೊಳಲು ತಿರುವೆವು

ತೋರು ಕರುಣೆಯ ನಮ್ಮೊಳು

ಮಲೆನಾಡಿನ ಮುಕುಟಮಣಿ ನಮ್ಮ ಶಿರಸಿ. ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿ ಒಂದು. ಗುಡ್ಡದ ಮೇಲಿನ ಸುತ್ತಲಿನ ಜಾಗಕ್ಕೆ ಎತ್ತರದ ಪ್ರದೇಶವಾದ್ದರಿಂದ ಶಿರಸಿ ಎಂಬ ಹೆಸರು ಬಂದಿದೆ ಎಂಬುದು ವಾಡಿಕೆ. ರುದ್ರರಮಣೀಯ ಪ್ರಕೃತಿ ಸೌಂದರ್ಯ, ಸ್ವಚ್ಛ ಪರಿಸರ, ಮರ ಗಿಡಗಳ ತೊಟ್ಟಿಲು, ಅತ್ಯಾಕರ್ಷಣೀಯ ಪ್ರೇಕ್ಷಣೀಯ ಸ್ಥಳಗಳು, ನದಿಗಳ ತವರೂರು, ರಾಜ ಮಹಾರಾಜರು ನೆಲೆಸಿದ್ದ ಬೀಡು, ಇಷ್ಟರ ನಡುವೆ ಮಲೆನಾಡ ಶಿರಸಿ ಶಿಖರದ ಮಧ್ಯಭಾಗದಲ್ಲಿ ನೆಲೆಸಿ ಲೋಕವನ್ನು ಸಲಹುತ್ತಿಹಳು ಶ್ರೀ ಶಿರಸಿ ಮಾರಿಕಾಂಬೆ. ಶಿರಸಿಯ ಅಧಿದೇವತೆಯಾಗಿ, ಸುತ್ತಲಿನ ಜನರಿಗೆ ಅಭಯಪ್ರದಾಯಿನಿಯಾಗಿ, ಬೇಡಿ ಬಂದವರ ಕಷ್ಟಕಾರ್ಪಣ್ಯಗಳನ್ನು ಕರ್ಪೂರದಂತೆ ಮಾಯವಾಗಿಸುವವಳು ಮಹಾಮಾಯೆ ಮಾರಿಕಾಂಬೆ. ಎರಡು ವರ್ಷಗಳಿಗೊಮ್ಮೆ ಜಾತ್ರೆಯಲ್ಲಿ ಮೆರೆದು ತಾಯಿ ಭಕ್ತರನ್ನು ಸಲಹುತ್ತಾಳೆ. ಭಕ್ತ ಸಮೂಹವು ಕೂಡ ಮಾರಿ ಜಾತ್ರೆಯಲ್ಲಿ ಮಿಂದೇಳುತ್ತದೆ. ಸುತ್ತಲಿನ ಮಾರಿ ದೇವಿಯವರಿಗೆಲ್ಲರಿಗೂ ಹಿರಿಯಕ್ಕ ಶಿರಸಿಯ ಮಾರಿಕಾಂಬೆ ಎಂಬುದು ಜನಪ್ರಿಯವಾದ ಮಾತು. ದಕ್ಷಿಣ ಭಾರತದಲ್ಲಿನ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಬಿರುದಾಂಕಿತ ಶಿರಸಿ ಮಾರಿಜಾತ್ರೆಗಿದೆ. ಹೀಗಿರುವಾಗ ಶಿರಸಿ ಜಾತ್ರೆ 2026ನೆಯ ಇಸವಿಯ ಫೆಬ್ರವರಿ 24ರಿಂದ ಶಿರಸಿ ಶಹರದಲ್ಲಿ ವಿಜೃಂಭಣೆಯಿಂದ ಪ್ರಾರಂಭಗೊಳ್ಳಲಿದೆ.

ಇದನ್ನೂ ಓದಿ: ಮಾರಮ್ಮ ಶಿರಸಿಯ ಊರ ದೇವತೆಯಾದಳು!

ಜಾತ್ರಾ ವಿಶೇಷ

ಶಿರಸಿ ಸೀಮೆಯಲ್ಲಿ ನೆಲೆ ನಿಂತ ಮಾರಮ್ಮನ ಜಾತ್ರೆಯಲ್ಲಿ ಭಕ್ತರ ದಂಡು ಬೇರೆ ಬೇರೆ ಊರು ರಾಜ್ಯಗಳಿಂದ ಬಂದು ನೆರೆಯುತ್ತಾರೆ. 9 ದಿನಗಳ ಮಾರಿ ಜಾತ್ರೆಯಲ್ಲಿ ಪ್ರತಿದಿನವೂ ವಿಶೇಷ. ಜಾತ್ರೆಯ ಮೊದಲ ದಿನ ದೇವಾಲಯದಿಂದ ಮಾರಿಕಾಂಬಾದೇವಿ ಜಾತ್ರಾ ಗದ್ದುಗೆ ಬರುತ್ತಾಳೆ. ಸುತ್ತಲೂ ಸಹಸ್ರಾರು ಜನರಿಂದ ಸುತ್ತಲ್ಪಟ್ಟ ರಥ ಬಿಡಕೀಬೈಲಿನ ಗದ್ದುಗೆ ಸೇರುತ್ತದೆ. ತೇರಿನಿಂದ ಇಳಿದ ದೇವಿ, ಗದ್ದುಗೆಯ ಸಿಂಹಾಸನದ ಮೇಲೆ ಸರ್ವಾಲಂಕೃತ ಶೋಭಿತೆಯಾಗಿ ಆಸೀನಳಾಗುತ್ತಾಳೆ. ಅರ್ಚನೆ, ಹಣ್ಣುಕಾಯಿಗಳ ಸರ್ವೋಪಚಾರ ಪೂಜೆ ಜಾತ್ರೆಯ ದಿನದುದ್ದಕ್ಕೂ ನಡೆಯುತ್ತಲೇ ಇರುತ್ತದೆ. ಶಿರಸಿ ಊರಿನವರಿಗೆ ಜಾತ್ರೆ ವರ್ಷವೆಂದರೆ ಹಬ್ಬದ ಖುಷಿ. ದೂರದ ಊರಿನಲ್ಲಿ ನೆಲೆಸಿದ ಜನರು ಸೇರುವ ಖುಷಿಯ ಹಬ್ಬ.

Untitled design - 2026-03-06T163554.772

ಜಾತ್ರೆ ಪೇಟೆ ಸುತ್ತುವ ಆನಂದ, ಖರ್ಚಿನಲ್ಲಿ ಮೋಜಿಗೆ ಸಾಟಿಯೇ ಇಲ್ಲ. ವರ್ಷ ಬಿಟ್ಟು ವರ್ಷ ಜಾತ್ರೆ ಬರುತ್ತದೆ ಜನರಿಗೆ ಜಾತ್ರೆಯ ಹುರುಪು ಹುಮ್ಮಸ್ಸೇ ಬೇರೆ. ಅಂಗಡಿಯ ಸಾಲು, ಆಟಿಕೆಯ ವಸ್ತುಗಳು, ಜನರ ನೂಕುನುಗ್ಗಲು, ಹೇಳುತ್ತಾ ಹೊರಟರೆ ಮುಗಿಯದಷ್ಟು. ಶಿರಸಿಯ ಬಸ್ ಸ್ಟ್ಯಾಂಡ್ ನಿಂದ ಕೋಟೆ ಕೆರೆಯವರೆಗೆ, ದೇವಿಕೆರೆಯವರೆಗೆ, ಸಿಪಿ ಬಜಾರಿನ ತುದಿಯವರೆಗೆ ಅಂಗಡಿಗಳೇ ತುಂಬಿರುತ್ತದೆ. ಜಾತ್ರೆ ಆಕರ್ಷಕ ವಿಷಯಗಳೆಂದರೆ ತೊಟ್ಟಿಲು, ಜೋಕಾಲಿ, ಟೋರಟೋರ, ಹ್ಯಾಮರ್, ಬ್ರೇಕ್ ಡ್ಯಾನ್ಸ್ ಇತ್ಯಾದಿ ಇದೆಲ್ಲದ್ದರಿಂದ ಜಾತ್ರೆಯ ರುಚಿ ಮತ್ತಷ್ಟು ಹೆಚ್ಚುವುದು. ಬಾವಿಯಲ್ಲಿ ಬೈಕು, ಪತ್ತೆದಾರಿ ಕತ್ತೆ ಹಾಗೂ ನಾಯಿಗಳು ಹೀಗೆ ಚಿಕ್ಕ ಪುಟ್ಟ ವಿಷಯಗಳು ಜಾತ್ರೆಯ ನೆನಪು ಉಳಿಯುವಂತೆ ಮಾಡುತ್ತದೆ. ಐಸ್ ಕ್ರೀಮ್, ರುಮಾಲ್ ರೊಟ್ಟಿ ಇನ್ನಿತರ ತಿಂಡಿ ತಿನಿಸು ಪಾನೀಯಗಳು ಕೂಡ ವಿಶೇಷ.

Untitled design - 2026-03-06T163542.512

ನಾಟಕದ ಕಂಪನಿಗಳು ಕೂಡ ಬಂದು ಟೆಂಟ್ ಹಾಕುತ್ತಾರೆ. ಲಕ್ಷಾಂತರ ಭಕ್ತರು ತಾಯಿ ಆಶೀರ್ವಾದವನ್ನು ಪಡೆದು, ಜಾತ್ರೆಯಲ್ಲಿ ತಿರುಗಿ ಪುನೀತರಾಗುತ್ತಾರೆ. ಜಾತ್ರೆ ಮುಗಿದ ನಂತರ ದೇವಿ ಚಪ್ಪರದಿಂದ ತೆರಳುವ ಸನ್ನಿವೇಶವು ಬಹಳ ಗಮನಾರ್ಹ. ಜಾತ್ರೆ ನಂತರ ಕೆಲದಿನಗಳ ಕಾಲ ದೇವಿ ದೇವಾಲಯದಲ್ಲಿ ಇರುವುದಿಲ್ಲ. ಜಾತ್ರೆಯ ನಂತರದ ಯುಗಾದಿಗೆ ಪುನಃ ದೇವಾಲಯಕ್ಕೆ ಆಗಮಿಸುತ್ತಾಳೆ. ಅಲ್ಲಿಯವರೆಗೆ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ. ಶಿರಸಿ ಜಾತ್ರೆಯ ಗಮ್ಮತ್ತು, ಸ್ಫುರದ್ರೂಪಿ ಮಾರಿದೇವಿಯ ಶಕ್ತಿ ಜನರನ್ನು ಸೆಳೆಯುತ್ತದೆ. ಮಾರಿಜಾತ್ರೆಗೆಂದು ಪಕ್ಕದ ತಾಲೂಕು ಊರುಗಳಿಂದ ಶಿರಸಿ ಪಟ್ಟಣಕ್ಕೆ ವಿಶೇಷ ಸಾರಿಗೆ ಬಸ್‌ಗಳ ಸೌಲಭ್ಯವೂ ಇರುತ್ತವೆ. ಇವೆಲ್ಲ ವಿಶೇಷತೆಗಳಿಂದ ಶಿರಸಿ ಜಾತ್ರೆ ಜನರ ಮನದಾಳದಲ್ಲಿ ಬೇರೂರಿದೆ. ನೀವು ಕೂಡ ಶಿರಸಿಯ ಸಿರಿದೇವಿ ಮಾರಿಕಾಂಬ ಜಾತ್ರೆಯನ್ನು ಬಂದು ಕಣ್ತುಂಬಿಕೊಳ್ಳಿ, ಸಂಪನ್ನಗೊಂಡ ಮಾತೆ ಶ್ರೀ ಮಾರಿಕಾಂಬೆ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.