Tuesday, July 21, 2026
Tuesday, July 21, 2026

ಚೆಸ್‌ ಪ್ರವಾಸ: ಚದುರಂಗ ಬಲದಲಿ ಪ್ರವಾಸದ ರಂಗು

ಚೆಸ್‌ ಕೇವಲ ಒಂದು ಆಟವಾಗಿ ಉಳಿದಿಲ್ಲ. ಪ್ರವಾಸೋದ್ಯಮದ ಭಾಗವಾಗಿಯೂ ಬೆಳೆದಿದೆ. ವಿಶ್ವಾದ್ಯಂತ ಚೆಸ್‌ ಪ್ರವಾಸದ ತಾಣಗಳಿವೆ. ವಿಶ್ವದ ಅತಿದೊಡ್ಡ ಚೆಸ್ ಕಾಯಿಗಳಿರುವ ಅಮೆರಿಕದ ವಿಶ್ವ ಚೆಸ್‌ ಹಾಲ್‌ ಆಫ್‌ ಫೆಮ್‌, ಚೆಸ್ ಥೀಮ್ನ ಗೋಡೆಯ ಮನೆಗಳು ಮತ್ತು ಚೌಕಗಳು ಇರುವ ಜರ್ಮನ್‌ನ ಸ್ಟ್ರಾಸ್‌ಬರ್ಗ್, ವಿವಿಧ ವಿನ್ಯಾಸಗಳ ಚೆಸ್‌ ಸೆಟ್‌ಗಳನ್ನು ಒಳಗೊಂಡ ಇಸ್ತಂಬುಲ್‌ನ ಚೆಸ್‌ ಮ್ಯೂಸಿಯಂ ಹೀಗೆ ಸಾಕಷ್ಟು ಪ್ರವಾಸಿ ತಾಣಗಳು ಈ ನಿಟ್ಟಿನಲ್ಲಿ ಜನಪ್ರಿಯವಾಗಿವೆ.

ಚೆಸ್‌, ಚತುರತೆಯ ಆಟ. ಕನ್ನಡದಲ್ಲಿ ಚದುರಂಗದಾಟ. ಹೆಸರಲ್ಲೇ ಜಾಣ್ಮೆ ಎಂಬ ಅರ್ಥವಿದೆ. ದೈಹಿಕ ಬಲ ಅಷ್ಟಾಗಿ ಬೇಡದು. ಚತುರತೆ ಎಷ್ಟಿದ್ದರೂ ಸಾಲದು. ಗುಪ್ತರ ಕಾಲದಲ್ಲಿ ಈ ಆಟ ಪರಿಚಯವಾಯಿತು ಎನ್ನಲಾಗಿದೆ. ಹಾಗಾಗಿ ಭಾರತವೇ ಈ ಆಟದ ತವರು ಎಂದರೆ ತಪ್ಪಾಗದು.

ಅಧ್ಯಯನಗಳ ಪ್ರಕಾರ ಚೆಸ್‌ ಆಟ ಮಕ್ಕಳ ಬುದ್ದಿಮತ್ತೆ ಮತ್ತು ಸೃಜನಶೀಲತೆ ಹೆಚ್ಚಿಸಲು ಸಹಾಯಕ ಎನ್ನಲಾಗಿದೆ. ಇಷ್ಟು ಮಹತ್ವದ ಈ ಆಟದ ಬಗ್ಗೆ ಹೆಚ್ಚಿನವರಿಗೆ ಅರಿವು ಮತ್ತು ಆಸಕ್ತಿ ಮೂಡಿಸಲು, ಪ್ರೋತ್ಸಾಹಿಸಲು ಅಂತಾರಾಷ್ಟ್ರೀಯ ಚೆಸ್ ದಿನ ಒಂದು ಮೈಲುಗಲ್ಲು.

ಇದನ್ನೂ ಓದಿ: ಪ್ರತಿಯೊಬ್ಬನ ಮೊದಲ ಕನಸಿನ ತಾಣ ಈ ಚಂದಿರ

ವಿಶ್ವಾದ್ಯಂತ ಚದುರಂಗ ದಿನ

1924-ಜುಲೈ-20, ಪ್ಯಾರಿಸ್‌ನಲ್ಲಿ ಎಂಟನೆಯ ಬೇಸಗೆ ಒಲಿಂಪಿಕ್ ಕ್ರೀಡಾಕೂಟ ನಡೆಯಿತು, ‘ವಿಶ್ವ ಚೆಸ್ ಫೌಂಡೇಷನ್‌ ಸ್ಥಾಪನೆ ಸಹ. ಇದರ ನೆನಪಿಗಾಗಿ ಪ್ರತಿವರ್ಷ ಜುಲೈ-20ರಂದು ವಿಶ್ವ ಚೆಸ್ ದಿನಾಚರಣೆ ಮಾಡಲಾತ್ತಿದೆ. ಮೊದಲ ಚೆಸ್‌ ದಿನಾಚರಣೆ ಆಗಿದ್ದು 1966-ಜುಲೈ-20ರಂದು. ಆ ಜಾಗತಿಕ ಆಚರಣೆಯಾಗಿದ್ದು ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (FIDE)ನಿಂದ. ನಂತರ 2019ರ ಡಿಸೆಂಬರ್ 12ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಜುಲೈ-20 ರಂದು ವಿಶ್ವ ಚೆಸ್ ದಿನವೆಂದು ಅಧೀಕೃತವಾಗಿ ಘೋಷಿಸಿತು. ಅದರಂತೆ 2020ರಲ್ಲಿ ವಿಶ್ವಸಂಸ್ಥೆಯ ಅಧಿಕೃತ ಸಹಭಾಗಿತ್ವ ಮತ್ತು ಮಾನ್ಯತೆಯೊಂದಿಗೆ ಮೊದಲ ವಿಶ್ವ ಚೆಸ್‌ ದಿನಾಚರಣೆ ನಡೆಯಿತು. ಇಂದಿಗೆ ಹೆಚ್ಚೂಕಮ್ಮಿ ವಿಶ್ವದ ಎಲ್ಲಾ ದೇಶಗಳಲ್ಲಿ ಜುಲೈ-20 ವಿಶ್ವ ಚೆಸ್‌ ದಿನ.

Untitled design - 2026-07-20T195434.984

ಭಾರತದ ಪ್ರಸಿದ್ಧ ಚೆಸ್‌ ಚಾಂಪಿಯನ್‌ಗಳು

  • ವಿಶ್ವನಾಥನ್ ಆನಂದ್ – ಭಾರತದ ಮೊದಲ ಗ್ರ್ಯಾಂಡ್‌ಮಾಸ್ಟರ್. 5 ಬಾರಿ ವಿಶ್ವ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. ಈ ಮೂಲಕ ಭಾರತೀಯ ಚೆಸ್‌ ಇತಿಹಾಸ ಸೃಷ್ಟಿಸಿದವರು. ಜಗತ್ತಿಗೆ ಭಾರತದ ಚೆಸ್ ಶಕ್ತಿಯನ್ನು ಪರಿಚಯಿಸಿದವರು.
  • ಡಿ. ಗುಕೇಶ್ – ಭಾರತೀಯ ಆಟಗಾರ. ಚೆಸ್‌ ಇತಿಹಾಸದಲ್ಲೇ ವಿಶ್ವ ಚಾಂಪಿಯನ್ ಆಗ ಹೊರಹೊಮ್ಮಿದ ಕಿರಿಯ ಆಟಗಾರ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಇವರು ಜಗತ್ತಿನ ಮೂರನೆಯ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್. 2024ರಲ್ಲಿ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಜಗತ್ತಿನ 18ನೆಯ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
  • ಆರ್. ಪ್ರಜ್ಞಾನಂದ – ಭಾರತೀಯ ಆಟಗಾರ. 2023ರ ಚೆಸ್ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಆಗಿದ್ದರು. 12ನೆಯ ವಯಸ್ಸಿಗೆ ಗ್ರ್ಯಾಂಡ್‌ಮಾಸ್ಟರ್ ಪಟ್ಟ ಪಡೆದರು. ವಿಶೇಷವೆಂದರೆ ಇವರ ಅಕ್ಕ ವೈಶಾಲಿ ರಮೇಶ್‌ಬಾಬು ಸಹ ಪ್ರಸಿದ್ಧ ಮಹಿಳಾ ಗ್ರ್ಯಾಂಡ್‌ಮಾಸ್ಟರ್. ಆ ಮೂಲಕ ಗ್ರ್ಯಾಂಡ್‌ಮಾಸ್ಟರ್ ಆಗಿರುವ ಜಗತ್ತಿನ ಮೊದಲ ಅಕ್ಕ-ತಮ್ಮ ಎಂಬ ಅಪರೂಪದ ದಾಖಲೆಯೂ ಇವರದ್ದಾಗಿದೆ.

ಚೆಸ್‌ ಪ್ರವಾಸೋದ್ಯಮದ ತಾಣಗಳು

ಚೆಸ್‌ ಕೇವಲ ಒಂದು ಆಟವಾಗಿ ಉಳಿದಿಲ್ಲ. ಪ್ರವಾಸೋದ್ಯಮದ ಭಾಗವಾಗಿಯೂ ಬೆಳೆದಿದೆ. ವಿಶ್ವಾದ್ಯಂತ ಚೆಸ್‌ ಪ್ರವಾಸದ ತಾಣಗಳಿವೆ. ವಿಶ್ವದ ಅತಿದೊಡ್ಡ ಚೆಸ್ ಕಾಯಿಗಳಿರುವ ಅಮೆರಿಕದ ವಿಶ್ವ ಚೆಸ್‌ ಹಾಲ್‌ ಆಫ್‌ ಫೆಮ್‌, ಚೆಸ್ ಥೀಮ್ನ ಗೋಡೆಯ ಮನೆಗಳು ಮತ್ತು ಚೌಕಗಳು ಇರುವ ಜರ್ಮನ್‌ನ ಸ್ಟ್ರಾಸ್‌ಬರ್ಗ್, ವಿವಿಧ ವಿನ್ಯಾಸಗಳ ಚೆಸ್‌ ಸೆಟ್‌ಗಳನ್ನು ಒಳಗೊಂಡ ಇಸ್ತಂಬುಲ್‌ನ ಚೆಸ್‌ ಮ್ಯೂಸಿಯಂ ಹೀಗೆ ಸಾಕಷ್ಟು ಪ್ರವಾಸಿ ತಾಣಗಳು ಈ ನಿಟ್ಟಿನಲ್ಲಿ ಜನಪ್ರಿಯವಾಗಿವೆ.

Untitled design - 2026-07-20T195441.703

ಕೇರಳದ ‘ಚೆಸ್ ಗ್ರಾಮ’ ಮರೋಟ್ಟಿಚಲ್

ಭಾರತದಲ್ಲಿ ಚೆಸ್‌ ಪ್ರವಾಸೋದ್ಯಮದ ವಿಷಯಕ್ಕೆ ಒತ್ತು ನೀಡಿದಾಗ, ಕೇಳಿಬರುವ ಹೆಸರು ಮರೋಟ್ಟಿಚಲ್. ಇದು ಕೇರಳದ ಹಳ್ಳಿ. ಕೇರಳ, ಪ್ರವಾಸೋದ್ಯಮದಲ್ಲಿ ಎತ್ತಿದ ಕೈ. ಇಲ್ಲಿನ ತ್ರಿಶೂರ್ ಜಿಲ್ಲೆಯಲ್ಲಿ ‘ಮರೋಟ್ಟಿಚಲ್’ ಗ್ರಾಮವಿದೆ. ಅದು ಭಾರತದ ‘ಚೆಸ್ ಹಳ್ಳಿ’ ಎಂದೇ ಪ್ರಸಿದ್ಧ. ಐದಾರು ದಶಕಗಳ ಹಿಂದೆ ಈ ಗ್ರಾಮದ ಚಿತ್ರಣ ಹೀಗಿರಲಿಲ್ಲ. ಆಗ ಇಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳನ್ನು ತಡೆಯುವಲ್ಲಿ ಪೊಲೀಸರ ಶತಯತ್ನಗಳೂ ಸೋತಿದ್ದವು. ಅಷ್ಟು ಹಳ್ಳ ಹಿಡಿದಿದ್ದ ಈ ಹಳ್ಳಿಯನ್ನು ಹಳಿಗೆ ತಂದಿದ್ದು ಚದುರಂಗದಾಟ!

ಈ ಗ್ರಾಮದ ಒಂದು ಚಹಾ ಅಂಗಡಿ ಮಾಲೀಕ ಉನ್ನಿಕೃಷ್ಣನ್. ಅವರಿಗೆ ಚೆಸ್ ಬಗ್ಗೆ ಅಪಾರ ಆಸಕ್ತಿ. ಅದನ್ನು ತಾವೂ ಕಲಿತು ಗ್ರಾಮಸ್ಥರಿಗೂ ಕಲಿಸಲು ಪ್ರಾರಂಭಿಸಿದರು. ಆಗ ಆ ಚಹಾ ಅಂಗಡಿಯೇ ಚೆಸ್‌ ಕ್ಲಬ್‌. ಕ್ರಮೇಣ ಚೆಸ್ ಆಟ ಹಳ್ಳಿಗರ ಮನಗೆದ್ದಿತು. ಅಕ್ರಮ ಚಟುವಟಿಕೆಗಳನ್ನು ಕೈಬಿಡಿಸಿತತು. ಈಗ ಈ ಗ್ರಾಮದ ಹೆಚ್ಚೂಕಮ್ಮಿ ಎಲ್ಲರೂ ಚೆಸ್‌ ಆಟಗಾರರು. ಈ ಯಶೋಗಾಥೆ ಸಿನಿಮಾ, ಸಾಕ್ಷ್ಯಾಚಿತ್ರ, ಪ್ರವಾಸೋದ್ಯಮದ ಸರಕಾಗಿದೆ.

ಒಂದು ಉತ್ತಮ ಕ್ರೀಡೆ, ಜಾಗತಿಕ ಆಕರ್ಷಣೆ, ಪ್ರವಾಸೋದ್ಯಮದ ಸರಕು, ಸಾಮಾಜಿಕ ಬದಲಾವಣೆಯ ದಾರಿದೀಪ ಹೀಗೆ ಹಲವು ಆಯಾಮಗಳಲ್ಲಿ ಸಮಾಜದ ಒಳಿತಿಗೆ ಸಹಕರಿಸಬಲ್ಲದು ಎಂಬುದಕ್ಕೆ ಚೆಸ್‌ ಉದಾಹರಣೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!