ಮಾರಮ್ಮ ಶಿರಸಿಯ ಊರ ದೇವತೆಯಾದಳು!
ದಂತಕತೆಯ ಪ್ರಕಾರ ಮಾರಿಕಾಂಬ ದೇವಿಯು ತ್ರಿಪುರ ಸುಂದರಿಯೆಂಬ ಕನ್ಯೆಯ ರೂಪದಲ್ಲಿದ್ದಳು. ಇವಳನ್ನು ನೋಡಿದ ಮಹಿಷಾಸುರ ಸುಂದರ ಯುವಕನ ರೂಪದಲ್ಲಿ ಬಂದು ಇವಳನ್ನು ಮದುವೆಯಾದನು. ಒಮ್ಮೆ ಕೋಣವನ್ನು ಕೊಂದು ಆಹಾರಕ್ಕಾಗಿ ಉಪಯೋಗಿಸುವುದನ್ನು ಗಮನಿಸಿದ ಈಕೆ ತನ್ನ ತಾಯಿಗೆ ತಿಳಿಸುತ್ತಾಳೆ. ಇದರಿಂದ ಕೋಪಗೊಂಡು ಬಂದು ಅವಳ ತಾಯಿಯನ್ನು ನೋಡಿದ ಮಹಿಷಾಸುರ ಕೋಣನ ರೂಪ ತಾಳುತ್ತಾನೆ.
- ಶ್ರೀನಿವಾಸ ಮೂರ್ತಿ ಎನ್ ಎಸ್
ದೇವಿಯ ಆರಾಧನೆ ನಮ್ಮಲ್ಲಿ ಅನಾದಿ ಕಾಲದಿಂದ ನಡೆದು ಬಂದಿದೆ. ಸ್ಥಳೀಯ ದೇವತೆ ರಾಜ್ಯದ ಶಕ್ತಿ ಪೀಠವನ್ನು ನೀವು ನೋಡಬೇಕೆಂದರೆ ನೀವು ಉತ್ತರ ಕನ್ನಡದ ಶಿರಸಿಗೆ ಬರಬೇಕು.
ಇತಿಹಾಸ ಪುಟದಲ್ಲಿ ಶಿರಸಿ ಪ್ರಮುಖವಾಗಿ ಕಾಣಿಸಿದ್ದು ಸೋಂದೆ ಅರಸರ ಕಾಲದಲ್ಲಿ. ಇಲ್ಲಿ ಅವರ ಕಾಲದಲ್ಲಿ ಹಲವು ದೇವಾಲಯಗಳು ನಿರ್ಮಾಣವಾಗಿದ್ದು, ಅದರಲ್ಲಿ ತನ್ನದೇ ನಂಬಿಕೆ ಮತ್ತು ವಾಸ್ತು ಶೈಲಿಯಿಂದ ಕಾಣಿಸುವ ದೇವಾಲಯ ಮಾರಿಕಾಂಬ ದೇವಾಲಯ. ದಸರಾ ಸಮಯದಲ್ಲಿ ವೈಭವದಿಂದ ಪೂಜೆ ಆಗುವ ದೇವಾಲಯಗಳ ಪೈಕಿ ಇದಕ್ಕೆ ಅಗ್ರಸ್ಥಾನ.
ಇತಿಹಾಸ ಪುಟದಲ್ಲಿ ಬಸವ ಎಂಬ ಅಸಾದಿಗೆ ಇಲ್ಲಿನ ಕೆರೆಯಲ್ಲಿ ಸಿಕ್ಕ ದೇವಿಯ ವಿಗ್ರಹಕ್ಕೆ, ಆಗಿನ ನಂದಿಕೇಶ್ವರ ಮಠದ ಸ್ವಾಮಿಗಳ ಮುಖಾಂತರ ಸೋದೆಯ ಅರಸರಾಗಿದ್ದ ಸದಾಶಿವರಾಯರಲ್ಲಿ ವಿನಂತಿಸಿ ಸ್ಥಾಪಿಸಿದರು ಎನ್ನಲಾಗಿದೆ. ಸ್ಥಳ ಪುರಾಣದ ಪ್ರಕಾರ ಬಸವ ಎಂಬ ಅಸಾದಿ ಸಮೀಪದ ಚಂದ್ರಗುತ್ತಿಯಲ್ಲಿನ ಜಾತ್ರೆಗೆ ಹೋಗುತ್ತಿದ್ದನು. ಒಮ್ಮೆ ಸಂಗಡಿಗರೊಡನೆ ಹೋಗುವಾಗ ಅಲ್ಲಿನ ಜನ ತಡೆಯುತ್ತಾರೆ. ಇದರಿಂದ ಬೇಸರಗೊಂಡ ಬಸವನಿಗೆ ಆಗ ಸ್ಥಳೀಯವಾಗಿ ಪೂಜಿಸುತ್ತಿದ್ದ ಮರ್ಕಿ ಮತ್ತು ದುರ್ಗೆಯ ಪರಮ ಭಕ್ತನಾದ ಕಾರಣ ಕನಸಿನಲ್ಲಿ ದ್ವಾಮವ್ವ ಬಂದು ನಾನು ಕೆರೆಯಲ್ಲಿದ್ದೇನೆ ತೆಗೆದು ಇಲ್ಲಿಯೇ ಸ್ಥಾಪಿಸು ಎನ್ನಲು ಮಾರನೇ ದಿನ ಊರಿನ ಗೌಡರ ಸಹಾಯದಿಂದ ತೆಗೆದು ಸ್ಥಾಪಿಸಿದರು ಎನ್ನಲಾಗಿದೆ. ಇಲ್ಲಿನ ಕೈಫತ್ತಿನ ಪ್ರಕಾರ ಬಂಕಾಪುರದಿಂದ ದೇವಿ ಬಂದಳು ಎನ್ನಲಾಗಿದೆ. ಆದರೆ ವಿವರಗಳಿಲ್ಲ. ನಂಬಿಕೆಗಳು ಏನೇ ಇರಲಿ ದೇವಿ ಮಾರಮ್ಮ ಇಲ್ಲಿ ಸ್ಥಾಪಿತಳಾಗಿದ್ದು ಸತ್ಯ. ದೇವಿಯ ವಿಗ್ರಹದ ಪೆಟ್ಟಿಗೆ ಇಟ್ಟ ಜಾಗದಲ್ಲಿ ಈಗಲೂ ಚಿಕ್ಕ ಮಂದಿರದಲ್ಲಿ ಶಿಲಾ ವಿಗ್ರಹವಿದ್ದು ಗಾಳಿ ಮಾರಿ ಕಟ್ಟೆ ಎಂದೇ ಕರೆಯಲಾಗುತ್ತದೆ. ಈಗಲೂ ಸ್ಥಾಪನೆಗೆ ಕಾರಣರಾದ ಅಸಾದಿ ಜನಾಂಗದವರೇ ದೇವಾಲಯದ ಪ್ರಮುಖ ಉಸ್ತುವಾರಿಯನ್ನ ವಹಿಸುತ್ತಾರೆ.

ಸುಮಾರು 1689ರ ವೈಶಾಖ ಶುದ್ದ ಅಷ್ಟಮಿ ಮಂಗಳವಾರದಂದು ಈಗಿನ ಸ್ಥಳದಲ್ಲಿ ಮಾರಿಕಾಂಬ ದೇವಿಯನ್ನು ಸ್ಥಾಪಿಸಲಾಗಿದ್ದು ಈಗಲೂ ಆ ದಿನವನ್ನು ದೇವಿಯ ಜಯಂತಿ ಎಂದೇ ಅಚರಿಸಲಾಗುತ್ತಿದೆ. ನಂತರದ ದಿನಗಳಲ್ಲಿ ಜನರ ನಂಬಿಕೆಗಳನ್ನು ಈಡೇರಿಸುವ ದೇವಿಯಾದಳು. ಗರ್ಭಗುಡಿಯಲ್ಲಿ ಸುಮಾರು ಏಳು ಅಡಿ ಎತ್ತರದ ಕಾಷ್ಟ ಶಿಲ್ಪದ ಮಾರಿಕಾಂಬ ನೆಲೆಸಿದ್ದು ಅಷ್ಟಭುಜಧಾರಿಯಾಗಿದ್ದಾಳೆ.
ಜನರ ನಂಬಿಕೆ ಹೆಚ್ಚಾದಂತೆ ಮಾರಮ್ಮ ಊರ ದೇವತೆಯಾದಳು. ಹರಕೆಗಳು ಜಾಸ್ತಿ ಆದಂತೆ ಗ್ರಾಮ ದೇವತೆ, ನಾಡದೇವತೆಯಾದಳು. ಚಿಕ್ಕದಾಗಿದ್ದ ಮಂದಿರಕ್ಕೆ ನೂತನ ಸ್ವರೂಪ ಸಿಕ್ಕಿದ್ದು 1760ರಲ್ಲಿ ದೇವಿಗೆ ಗರ್ಭಗುಡಿ, ರಂಗಮಂಟಪ, ಶಿಖರವನ್ನು ನಿರ್ಮಾಣ ಮಾಡಲಾಯಿತು. 1873ರಲ್ಲಿ ವಿಶಾಲವಾದ ಮಂಟಪ ಸೇರ್ಪಡೆಗೊಂಡಿತು. ನಂತರದ ದಿನಗಳಲ್ಲಿ ದೇವಾಲಯದ ಮುಂಭಾಗವನ್ನು ವರ್ಣ ಚಿತ್ರಗಳಿಂದ ಅಲಂಕರಿಸಲಾಯಿತು. ಈಗ ದೇವಾಲಯಕ್ಕೆ ದೊಡ್ಡದಾದ ಆನೆಗಳು, ಭೂತರಾಜನ ಮಂದಿರ, ಮಹಾಗಣಪತಿ ಮತ್ತು ಆಂಜನೇಯ ದೇವಾಲಯಗಳು ಸೇರ್ಪಡೆಗೊಂಡಿದೆ.
ದಂತಕತೆಯ ಪ್ರಕಾರ ಮಾರಿಕಾಂಬ ದೇವಿಯು ತ್ರಿಪುರ ಸುಂದರಿಯೆಂಬ ಕನ್ಯೆಯ ರೂಪದಲ್ಲಿದ್ದಳು. ಇವಳನ್ನು ನೋಡಿದ ಮಹಿಷಾಸುರ ಸುಂದರ ಯುವಕನ ರೂಪದಲ್ಲಿ ಬಂದು ಇವಳನ್ನು ಮದುವೆಯಾದನು. ಒಮ್ಮೆ ಕೋಣವನ್ನು ಕೊಂದು ಆಹಾರಕ್ಕಾಗಿ ಉಪಯೋಗಿಸುವುದನ್ನು ಗಮನಿಸಿದ ಈಕೆ ತನ್ನ ತಾಯಿಗೆ ತಿಳಿಸುತ್ತಾಳೆ. ಇದರಿಂದ ಕೋಪಗೊಂಡು ಬಂದು ಅವಳ ತಾಯಿಯನ್ನು ನೋಡಿದ ಮಹಿಷಾಸುರ ಕೋಣನ ರೂಪ ತಾಳುತ್ತಾನೆ. ಆಗ ಮಾರಿಕಾಂಬೆ ಅವನನ್ನು ಕೊಂದು ತಾನು ಸಾಯುತ್ತಾಳೆ. ಆದರೆ ಜನರ ಕೋರಿಕೆಯಂತೆ ಆದಿ ಶಕ್ತಿ ರೂಪದಲ್ಲಿ ಇಲ್ಲಿ ನೆಲೆಸಿದಳು ಎಂಬ ನಂಬಿಕೆ ಇದೆ. ಈ ಕಾರಣದಿಂದಲೇ ಇಲ್ಲಿ ಕೋಣವನ್ನು ಬಲಿ ಕೊಡುವ ಪದ್ಧತಿ ಇತ್ತು. ಈಗ ಸಾಂಕೇತಿಕವಾಗಿ ಆಚರಿಸಲಾಗುತ್ತದೆ.

ದೇವಿಯ ಮತ್ತೊಂದು ಆಕರ್ಷಣೆ ಎಂದರೆ ಜಾತ್ರೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆ ರಾಜ್ಯದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು. ಊರಿನ ಬಿಡಕಿ ಬೈಲಿನಲ್ಲಿ ನಡೆಯುವ ಈ ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಆ ಸಮಯದಲ್ಲಿ ಮೇಟಿದೀಪ, ಲಗ್ನ, ರಥೋತ್ಸವ, ಗಡಿಯ ಬಲಿ, ಮಾತಂಗಿ ಸೇವೆ ಪ್ರಮುಖ ಸನ್ನಿವೇಶಗಳು. ಶ್ರೀ ಮಾರಿಕಾಂಬ, ಮರ್ಕಿ – ದುರ್ಗಿ ದೇವಿಯನ್ನು ದೇವಾಲಯದ ಎದುರು ಇರುವ ಸಭಾಮಂಟಪದಲ್ಲಿನ ಗದ್ದುಗೆಯಲ್ಲಿ ಕೂರಿಸಿ ರಥೋತ್ಸವ ನಡೆಯುವುದು. ಈ ಮುಂಚೆ ವಿಜೃಂಭಣೆಯಿಂದ ನಡೆಯುತ್ತಿದ್ದ ಬಲಿ ಈಗ ಸಾಂಕೇತಿಕವಾಗಿ ಪರಿವರ್ತನೆಯಾಗಿದೆ.
ಪ್ರತಿ ವರ್ಷದ ದಸರಾ ಸಮಯದಲ್ಲಿ ದೇವಿಗೆ ವಿಶೇಷ ಪೂಜೆಗಳು ನಡೆಯಲಿದ್ದು ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.
ಶಿರಸಿಯಲ್ಲಿ ಇನ್ನು ಹಲವು ದೇವಾಲಯಗಳಿದ್ದು ಮಾರಿಕಾಂಬ ದೇವಾಲಯಕ್ಕೆ ಹೋದಾಗ ಮರೆಯದೇ ನೋಡಿ.
ಗೋಪಾಲಕೃಷ್ಣ ದೇವಾಲಯ
ಸುಮಾರು 137 ವರ್ಷಗಳ ಪುರಾತನವಾದ ಈ ದೇವಾಲಯವನ್ನು ಈಗ ನವೀಕರಿಸಲಾಗಿದ್ದು ಗರ್ಭಗುಡಿಯಲ್ಲಿ ವೇಣುಗೋಪಾಲನ ಮೂರ್ತಿ ಇದೆ. ಮಾರಿಕಾಂಬ ದೇವಾಲಯದ ಸನಿಹದಲ್ಲಿ ಇರುವ ಈ ದೇವಸ್ಥಾನದಲ್ಲಿ ಜನ್ಮಾಷ್ಟಮಿಯಂದು ವಿಶೇಷ ಪೂಜೆ ನಡೆಯುತ್ತದೆ. 1886ರಲ್ಲಿ ಶ್ರೀ ಕೃಷ್ಣ ವಾಸುದೇವರ ನೆನಪಲ್ಲಿ ಇಲ್ಲಿನ ಗೌಡ ಸಾರಸ್ವತ ಸಮುದಾಯದವರು ಈ ದೇವಸ್ಥಾನವನ್ನು ಸ್ಥಾಪಿಸಿದರು. ಆ ಸಮಯದಲ್ಲಿ ಇಲ್ಲಿನ ಬೀದಿಯ ಒಂದು ಬದಿ ಮಾರಿಕಾಂಬ ಮತ್ತು ಮತ್ತೊಂದು ಬದಿಯಲ್ಲಿ ವೀರಭದ್ರನ ದೇವಾಲಯವಿತ್ತು. ಆಗ ಇಲ್ಲಿ ಸಾತ್ವಿಕ ದೇವಾಲಯ ಬೇಕೆಂದು ಶ್ರೀ ಕೃಷ್ಣಪ್ಪ ಡಾಕಪ್ಪನವರು ತಮ್ಮ ಸಮುದಾಯದ ನೆರವಿನಿಂದ ಸ್ಥಾಪಿಸಿದರು.
ರಾಯರ ಪೇಟೆಯ ಮಹಾಗಣಪತಿ
ಇಲ್ಲಿನ ಮತ್ತೊಂದು ದೇವಾಲಯವೆಂದರೆ ಮಹಾಗಣಪತಿಯ ದೇವಾಲಯ. ಸುಮಾರು 1.8 ಮೀ ಎತ್ತರ ಹಾಗು 1.6 ಮೀ ಅಗಲ ಇರುವ ಮೂರ್ತಿಯನ್ನು ಸೋಂದಾ ಅರಸರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಸುಂದರವಾದ ಮುಖ ಹೊಂದಿರುವ ಈ ಮೂರ್ತಿಯ ತಲೆಯಲ್ಲಿ ಭವ್ಯವಾದ ಕಿರೀಟ, ಕೊರಳಲ್ಲಿ ಪದಕವುಳ್ಳ ಹಾರ, ಸರ್ಪಬಂಧ ಹಾಗು ದೊಡ್ಡದಾದ ಉತ್ತರೀಯ ಹೊಂದಿದೆ. ಶಿಲ್ಪದಲ್ಲಿನ ಎಡ ದಂತ ಅರ್ಧವಾಗಿದ್ದು ಎಡಮುರಿ ಸೊಂಡಿಲನ್ನು ಹೊಂದಿದೆ. ಮೋದಕ ಹಿಡಿದಿರುವ ಕೈ ಇದ್ದರೆ ಇನ್ನುಳಿದ ಕೈಗಳಲ್ಲಿ ಅಂಕುಶ, ಕಮಲ ಹಾಗು ವರದ ಹಸ್ತವಿದೆ. ಇಲ್ಲಿ ಸುಂದರ ಕೆಂಪು ಶಿಲೆಯ ಬಲಮುರಿ ಗಣಪತಿಯ ಚಿಕ್ಕ ಶಿಲ್ಪವೂ ಇದೆ. ಈ ದೇವಾಲಯ ರಾಯರ ಪೇಟೆಯಲ್ಲಿದೆ.
ಶ್ರೀ ಅಂಬಗಿರಿ ಕಾಳಿಕಾ ಮಂದಿರ
ಇಲ್ಲಿನ ಚಿಕ್ಕ ಬೆಟ್ಟದ ಮೇಲೆ ಇರುವ ಈ ದೇವಾಲಯ ಕಾಳಿಕಾ ದೇವಿಗೆ ಸಮರ್ಪಿತವಾಗಿದೆ. ಶ್ರೀ ಅಂಬಿಕಾನಂದ ಸ್ವಾಮಿಗಳು ನಿರ್ವಹಣೆ ಮಾಡುತ್ತಿದ್ದು 2003ರಲ್ಲಿ ದೇವಾಲಯವನ್ನು ಶ್ರೀ ರಾಮಚಂದ್ರಪುರ ಮಠಕ್ಕೆ ಹಸ್ತಾಂತರ ಮಾಡಿದರು. 2007ರಲ್ಲಿ ಭಿನ್ನ ವಿಗ್ರಹದ ಬದಲಾಗಿ ಹೊಸ ಶಿಲ್ಪವನ್ನು ಸ್ಥಾಪಿಸಲಾಗಿದೆ.
ಶ್ರೀ ಆಂಜನೇಯ ದೇವಾಲಯ ಮತ್ತು ಮುಸುಕಿನ ಬಾವಿ ನಾಡಿಗೇರ ಗಲ್ಲಿ
ಇಲ್ಲಿ ನವೀಕರಣಗೊಂಡ ದೇವಾಲಯದಲ್ಲಿ ಪುರಾತನ ಆಂಜನೇಯನ ಶಿಲ್ಪವಿದ್ದು ಸಮೀಪದಲ್ಲಿ ಶಿರಸಿಗೆ ಹೋದವರು ಹೆಚ್ಚಾಗಿ ನೋಡದ ಪುರಾತನ ಮುಸುಕಿನ ಬಾವಿ ಇದೆ. ಸೋದೆ ಅರಸ ಸದಾಶಿವರಾಯರ ಕಾಲದಲ್ಲಿ ತನ್ನ ಪತ್ನಿ ಚೆನ್ನಾದೇವಿಗೆ ಸುಮಾರು 17ನೇ ಶತಮಾನದಲ್ಲಿ ನಿರ್ಮಿಸಿದ ಈ ಬಾವಿ ನೆಲಮಟ್ಟಕ್ಕಿಂತ ಕೆಳಭಾಗದಲ್ಲಿದ್ದು ಆಗಿನ ಕಾಲದ ಸ್ನಾನದ ತೊಟ್ಟಿಯಾಗಿತ್ತು. ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಾಣವಾದ ಈ ಸ್ನಾನಗೃಹಕ್ಕೆ ಸುಮಾರು 300 ಮೀ ಉದ್ದದ ಗುಹೆ ಇದ್ದು ಮತ್ತೊಂದು ಸ್ನಾನ ಗೃಹಕ್ಕೆ ಕೊಂಡಿಯಾಗಿತ್ತು ಎನ್ನಲಾಗಿದೆ. ಈಗ ಕಾರಂಜಿ ಮತ್ತು ಉದ್ಯಾನವನ ನಿರ್ಮಾಣವಾಗಿದ್ದು ಇತಿಹಾಸದ ಮೂಕ ಸಾಕ್ಷಿಯಾಗಿದೆ.