Thursday, June 12, 2025
Thursday, June 12, 2025

ಬಾಲಿಯಲ್ಲಿ ಪ್ರವಾಸಿಗರು ಮಾಡುವ ಈ ತಪ್ಪುಗಳಿಂದ ಸ್ಥಳೀಯರು ಪ್ರತಿ ಬಾರಿಯೂ ಬೇಸರಗೊಳ್ಳುತ್ತಾರೆ..!

ಇಂಡೋನೇಷ್ಯಾದ ಬಾಲಿ ನಿಮ್ಮ ಕನಸಿನ ಪ್ರವಾಸಿ ತಾಣವೇ? ಜೀವನದಲ್ಲಿ ಒಮ್ಮೆಯಾದರೂ ಅಲ್ಲಿಗೆ ಭೇಟಿ ಕೊಡಬೇಕು ಅಂದುಕೊಂಡಿದ್ದರೆ, ಪ್ರವಾಸದ ವೇಳೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ವಿಶ್ವದ ಜನಪ್ರಿಯ ತಾಣಗಳ ಪೈಕಿ ಇಂಡೋನೇಷ್ಯಾದ ಬಾಲಿ ಪ್ರಮುಖವಾದುದು. ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿರುವ ಬಾಲಿ ಅನೇಕ ವಿಶೇಷತೆಗಳಿಂದ ಕೂಡಿದೆ. ನಮ್ಮ ಸಹ್ಯಾದ್ರಿಯನ್ನು ಹೋಲುವ ಬೆಟ್ಟ ಹಚ್ಚ ಹಸಿರಿನ ಕಾಡು.. ಸುಂದರವಾದ ಕಡಲತೀರಗಳು, ಮಧ್ಯೆ ಒಂಟಿ ದ್ವೀಪ. ಅಲ್ಲಿಯ ಜನರು ನೋಡಲು ಭಾರತೀಯರಿಗಿಂತ ಸ್ವಲ್ಪ ಭಿನ್ನ ಎಂಬುದು ಬಿಟ್ಟರೆ ಉಳಿದೆಲ್ಲವೂ ಭಾರತದ್ದೇ ಛಾಪು. ಹಿಂದೂ ಸಂಸ್ಕೃತಿಯದ್ದೇ ಥಳುಕು.

ಬಾಲಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದಲೂ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಸ್ಥಳೀಯ ರೂಢಿಗಳು, ಸಂಪ್ರದಾಯ, ಆಹಾರ-ವಿಹಾರ ಎಲ್ಲವನ್ನೂ ಆನಂದಿಸುತ್ತಾರೆ. ಆದರೆ ಇದರ ನಡುವೆ ಪ್ರವಾಸಿಗರು ಮಾಡುವ ಕೆಲವು ತಪ್ಪುಗಳು ಸ್ಥಳೀಯರ ನಿದ್ದೆಕೆಡಿಸುತ್ತದೆ.

ದೇವಾಲಯಗಳಲ್ಲಿ ಅನುಚಿತ ಉಡುಪುಗಳು:

ಬಾಲಿ ಸಂಸ್ಕೃತಿಯು ಆಧ್ಯಾತ್ಮಿಕತೆಯಲ್ಲಿ ಆಳವಾಗಿ ಬೇರೂರಿದೆ ಮತ್ತು ಇಲ್ಲಿನ ದೇವಾಲಯಗಳು ಕೇವಲ ಪ್ರವಾಸಿ ಆಕರ್ಷಣೆಗಳಲ್ಲ; ಅವು ಪವಿತ್ರ ಸ್ಥಳಗಳಾಗಿವೆ. ಆದರೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ದೇವಾಲಯವನ್ನು ಬರಿಯ ಒಂದು ಪ್ರವಾಸಿತಾಣವಾಗಿ ಕಂಡು ತಮಗಿಷ್ಟವೆನ್ನಿಸುವ ಉಡುಗೆಗಳನ್ನು ತೊಟ್ಟುಕೊಳ್ಳುತ್ತಾರೆ. ಇದರಿಂದ ಸಂಸ್ಕೃತಿಗೆ ಕಳಂಕವೆಸಗಿದಂತಾಗುತ್ತದೆ. ಆದ್ದರಿಂದ ದೇವಾಲಯಕ್ಕೆ ಭೇಟಿ ನೀಡುವ ಮುನ್ನ ನಿಮ್ಮ ಉಡುಗೆಗಳ ಬಗ್ಗೆ ಗಮನಹರಿಸಿ.

Bali-Temple-Travel-blog-8

ವೈಯಕ್ತಿಕ ಪಾರ್ಟಿ ಝೋನ್‌ ಅಲ್ಲ:

ಬಿಡುವಿಲ್ಲದ ಜೀವನದಿಂದ ಬೇಸತ್ತು ವಿಶ್ರಾಂತಿ ಪಡೆಯುವುದಕ್ಕಾಗಿ ಬಾಲಿಗೆ ಭೇಟಿ ನೀಡುವ ಪ್ರವಾಸಿಗರು ಈ ದ್ವೀಪವನ್ನು ತಮ್ಮದೇ ವೈಯಕ್ತಿತ ಸ್ಥಳವೆಂಬಂತೆ ಕಾಣುತ್ತಾರೆ. ಬಾಲಿಯ ಕುಟಾ, ಸೆಮಿನಿಯಾಕ್ ಮತ್ತು ಕ್ಯಾಂಗು ಮುಂತಾದ ಪ್ರದೇಶಗಳಲ್ಲಿ ನೈಟ್‌ ಲೈಫ್‌ ಅತ್ಯದ್ಭುತವಾಗಿರುತ್ತದೆ. ಆದರೆ ಅಲ್ಲಿ ಕುಡಿದ ಅಮಲಿನಲ್ಲಿ ಮಾಡುವ ಸಾಹಸ, ಗಲಾಟೆ ಗದ್ದಲಗಳು ಸ್ಥಳೀಯರಿಗೆ ಇರಿಸುಮುರುಸು ಉಂಟುಮಾಡುತ್ತದೆ. ಪ್ರವಾಸಕ್ಕೆ ಬಂದಾಗ ಬೇರೆಯವರ ಮನೆಯಲ್ಲಿ ಅತಿಥಿಯಾಗಿದ್ದೀರಿ ಎಂಬುದನ್ನು ಎಂದಿಗೂ ಮರೆಯಬೇಡಿ.

bali-nightlife-3

ಅನಗತ್ಯ ಚೌಕಾಸಿ :

ಬಾಲಿ ಪ್ರವಾಸಿ ತಾಣವೆಂದಮೇಲೆ ಎಲ್ಲಾ ಕಡೆಗಳಲ್ಲಿರುವಂತೆ ಇಲ್ಲೂ ಶಾಪಿಂಗ್‌ ಮಾಡಲು ಮಾಲ್‌ ಮಾತ್ರವಲ್ಲದೆ ಸ್ಥಳೀಯ ಮಾರುಕಟ್ಟೆಗಳೂ ಇವೆ. ಇಲ್ಲಿ ಶಾಪಿಂಗ್‌ ಅನುಭವವನ್ನು ಪಡೆಯುವ ವೇಳೆ ಅನಗತ್ಯವಾಗಿ ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸುವುದು ಸರಿಯಲ್ಲ. ಬಾಲಿಯಲ್ಲಿ ಜೀವನ ವೆಚ್ಚ ಕಡಿಮೆಯಿರಬಹುದು. ಆದರೆ ಈ ಸ್ಥಳೀಯ ಮಾರಾಟಗಾರರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂಬುದನ್ನು ನೆನಪಿಡಿ.

1627961301_1563260567_cover_image.jpg

ವಸ್ತ್ರ ಸಂಹಿತೆಯ ನಿರ್ಲಕ್ಷ್ಯ:

ಬಾಲಿಯಲ್ಲಿ ಅನೇಕ ಸ್ಥಳೀಯ ಸಮಾರಂಭಗಳು, ಸಾಂಪ್ರದಾಯಿಕ ಸನ್ನಿವೇಶಗಳಲ್ಲಿ ಭಾಗವಹಿಸುವ ಸದವಕಾಶ ಹಲವು ಪ್ರವಾಸಿಗರಿಗೆ ಒದಗಿಬರುತ್ತದೆ. ಆದರೆ ಇಂತಹ ಸಂದರ್ಭಗಳಲ್ಲಿ ವಸ್ತ್ರ ಸಂಹಿತೆಯನ್ನು ಪಾಲಿಸುವಲ್ಲಿ ಪ್ರವಾಸಿಗರು ವಿಫಲರಾಗುತ್ತಾರೆ. ಆದರೆ ಯಾವುದೇ ಸಂಪ್ರದಾಯವನ್ನು ಗೌರವಿಸುವವರು ನಾವಾದರೆ ಪವಿತ್ರವಾದ ಸಮಾರಂಭಗಳಲ್ಲಿ ಭಾಗವಹಿಸುವ ವೇಳೆ ವಸ್ತ್ರ ಸಂಹಿತೆಯನ್ನು ಚಾಚೂ ತಪ್ಪದೆ ಪಾಲಿಸುವುದು ಒಳ್ಳೆಯದು.

ಸ್ಕೂಟರ್‌ ಗಳ ಆಟಿಕೆಗಳಲ್ಲ:

ಬಾಲಿಯಂತಹ ಪ್ರವಾಸಿ ತಾಣಗಳನ್ನು ಕಾರುಗಳಲ್ಲಿ ಸುತ್ತುವುದಕ್ಕಿಂತ ಸ್ಕೂಟರ್‌, ಬೈಕ್‌ ಗಲಲ್ಲಿ ಸುತ್ತುವುದೇ ಉತ್ತಮ. ಯಾಕೆಂದರೆ ಅಲ್ಲಿನ ಕಿರಿದಾದ ರಸ್ತೆಗಳು ಕಾರಿನಲ್ಲಿ ತೆರಳಲು ಯೋಗ್ಯವಲ್ಲ. ಬಾಡಿಗೆಗೆ ಇಲ್ಲಿ ಲಭ್ಯವಾಗುವ ಸ್ಕೂಟರ್‌ ಹಾಗೂ ಬೈಕ್‌ ಗಳನ್ನು ಬಳಸುವ ಪ್ರವಾಸಿಗರು ಪರರ ಸ್ವತ್ತು ನಮಗೇನು ಎಂಬಂತೆ ಕಾಣುವುದು ಸರಿಯಲ್ಲ. ಬಾಡಿಗೆಗೆ ಪಡೆಯುವ ವಾಹನಗಳನ್ನು ಜಾಗರೂಕತೆಯಿಂದ ಬಳಕೆ ಮಾಡುವತ್ತ ಗಮನಹರಿಸಬೇಕು.

scooter-rental-2-bali-holiday-secrets

ಪರಿಸರವನ್ನು ಅಗೌರವಿಸುವುದು:

ದ್ವೀಪಗಳಲ್ಲಿ ಕಾಡುವ ಸಮಸ್ಯೆಗಳಲ್ಲಿ ಪ್ಲಾಸ್ಟಿಕ್‌ ಮಾಲಿನ್ಯ ಪ್ರಮುಖವಾದುದು. ಬಾಲಿ ಸುತ್ತಾಡಲು ಬಂದ ಪ್ರವಾಸಿಗರು, ಬಳಕೆಯಾಗಿ ಬಿಟ್ಟ ಪ್ಲಾಸ್ಟಿಕ್‌ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಾರೆ. ಇದರಿಂದ ಪರಿಸರ ಮಲಿನವಾಗುತ್ತದೆ. ಜನಪ್ರಿಯ ಪ್ರವಾಸಿತಾಣವನ್ನು ಭೇಟಿ ಮಾಡುವಾಗ ಪ್ಲಾಸ್ಟಿಕ್‌ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಅಥವಾ ಬಳಕೆಯ ನಂತರ ನಿಗದಿತ ಜಾಗದಲ್ಲಿರಿಸಿರುವ ಕಸದಬುಟ್ಟಿಯಲ್ಲೇ ಅದನ್ನು ಹಾಕಬೇಕು.

ದೇಶ ಸುತ್ತುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ನಾವು ಭೇಟಿ ಕೊಡುವ ಸ್ಥಳದ ಬಗ್ಗೆ ಮುಂಚಿತವಾಗಿ ಅಧ್ಯಯನ ಮಾಡಿ, ಅಲ್ಲಿನ ಸಂಸ್ಕೃತಿ ಸಂಪ್ರದಾಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ತಯಾರಿ ಮಾಡಿಕೊಳ್ಳುವುದು ಪ್ರವಾಸಿಗರ ಆದ್ಯ ಕರ್ತವ್ಯ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ