ಹೈದರಾಬಾದ್ನ ಈ ಅರಮನೆ 200 ವರ್ಷಗಳಿಗೂ ಹಳೆಯದು...
ಹೈದರಾಬಾದ್ನ ನಿಜಾಮರು 200 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಆಳಿದರು. ಅಲ್ಲದೇ ಫಲಕ್ನುಮಾ ಅರಮನೆ ಮತ್ತು ಚೌಮಹಲ್ಲಾ ಅರಮನೆಯಂತಹ ವಾಸ್ತುಶಿಲ್ಪದ ಅದ್ಭುತಗಳನ್ನು ನಿರ್ಮಿಸಿದರು.
ಹೈದರಾಬಾದ್ ಎಂದಾಕ್ಷಣೆ ಚಾರ್ಮಿನಾರ್, ಗೋಲ್ಕೊಂಡ ಕೋಟೆ, ಫಲಕ್ನುಮಾ ಅರಮನೆ, ರಾಮೋಜಿ ಫಿಲ್ಮ್ ಸಿಟಿ ಹೀಗೆ ಅನೇಕ ಐತಿಹಾಸಿಕ ಸ್ಥಳಗಳು ಕಣ್ಣ ಮುಂದೆ ಹಾದು ಹೋಗುತ್ತವೆ. 12ನೇ ಶತಮಾನದಲ್ಲಿ ಆಡಳಿತ ನಡೆಸುತ್ತಿದ್ದ ಕಾಕತೀಯ ರಾಜವಂಶ, 18 ನೇ ಶತಮಾನದಲ್ಲಿದ್ದ ಅಸಫ್ ಜಾಹಿ ರಾಜವಂಶದವರು ಹೈದರಾಬಾದ್ ನಲ್ಲಿ ಇಂತಹ ಅದ್ಭುತಗಳನ್ನು ಸೃಷ್ಟಿಸಿದವರು.
ನಂತರ ಬಂದ ನಿಜಾಮರು, ಹೈದರಾಬಾದನ್ನು ಸುಮಾರು 200 ವರ್ಷಗಳಿಗೂ ಹೆಚ್ಚು ಕಾಲ ಆಳ್ವಿಕೆ ನಡೆಸಿದರಲ್ಲದೆ, ಕಲೆ, ಸಾಹಿತ್ಯ, ವಾಸ್ತುಶಿಲ್ಪ ಮತ್ತು ವಿಜ್ಞಾನದ ಮಹಾನ್ ಪೋಷಕರಾಗಿ ಹೆಸರುವಾಸಿಯಾಗಿದ್ದರು. ಫಲಕ್ನುಮಾ ಅರಮನೆಯ ವಿಸ್ತಾರವಾದ ಸೊಬಗಿನ ಜೊತೆಗೆ, ಅವರು ಚೌಮಹಲ್ಲಾ ಅರಮನೆಯನ್ನು ನಿರ್ಮಿಸಿದರು. ಇದು ನವ-ಶಾಸ್ತ್ರೀಯ ಸಂಪ್ರದಾಯದಲ್ಲಿ ನಿರ್ಮಾಣಗೊಂಡ ಒಂದು ಭವ್ಯವಾದ ರಚನೆಯಾಗಿದ್ದು, ಇದನ್ನು ಈಗ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ.

ಚೌಮಹಲ್ಲಾ ಅರಮನೆ - ಒಂದು ಅದ್ಭುತ ವಾಸ್ತುಶಿಲ್ಪ
ನಿಜಾಮ್ ಸಲಭಟ್ ಜಂಗ್, ಚೌಮಹಲ್ಲಾ ಅರಮನೆಗಳ ನಿರ್ಮಾಣವನ್ನು 1750 ರಲ್ಲಿ ಪ್ರಾರಂಭಿಸಿದರು. ನಿಜಾಮ್ ಅಫ್ಜರ್-ಉದ್-ದೌಲಾ ಬಹದ್ದೂರ್ ರವರು 1857 ಮತ್ತು 1869 ರ ನಡುವೆ ಈ ಯೋಜನೆಯನ್ನು ಪೂರ್ಣಗೊಳಿಸಿದರು. ಈ ಸಂಕೀರ್ಣವನ್ನು ಇರಾನ್ನ ಟೆಹ್ರಾನ್ನಲ್ಲಿರುವ ಸ'ದಾಬಾದ್ ಸಂಕೀರ್ಣ (ಷಾ ಅರಮನೆ) ಮಾದರಿಯಲ್ಲಿ ನಿರ್ಮಿಸಲಾಗಿದೆ.
ದಕ್ಷಿಣ ಭಾಗದ ಸಂಕೀರ್ಣವು ಅತ್ಯಂತ ಹಳೆಯ ಭಾಗವಾಗಿದ್ದು, ಕೇಂದ್ರ ಕಾರಂಜಿ ಮತ್ತು ಕೊಳದ ಸುತ್ತಲೂ ತಹ್ನಿಯತ್ ಮಹಲ್, ಮಹ್ತಾಬ್ ಮಹಲ್, ಅಫ್ಜಲ್ ಮಹಲ್ ಮತ್ತು ಅಫ್ತಾಬ್ ಮಹಲ್ ಎಂಬ ನಾಲ್ಕು ಆಕರ್ಷಕ ಅರಮನೆಗಳಿವೆ. ಚೌಮಹಲ್ಲಾ ಅರಮನೆಯ ಹೃದಯಭಾಗ ಖಿಲ್ವತ್ ಮುಬಾರಕ್. ಇದು ವಿಶೇಷವಾಗಿ ಅದರ ಗೋಡೆಗಳು ಮತ್ತು ಛಾವಣಿಗಳ ಮೇಲಿನ ಅಲಂಕಾರಗಳಿಂದಲೇ ಹೆಸರು ಮಾಡಿದೆ.
250 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ಯಾಂತ್ರಿಕ ಗಡಿಯಾರ, ದರ್ಬಾರ್ ಹಾಲ್ನಲ್ಲಿ ಬೆಲ್ಜಿಯಂ ಸ್ಫಟಿಕದ 19 ಗೊಂಚಲು ದೀಪಗಳು ಮತ್ತು ತಖ್ತ್-ಎ-ನಿಶಾನ್ (ರಾಜಮನೆತನ) ಇರಿಸಲಾದ ಅಮೃತಶಿಲೆಯ ವೇದಿಕೆಗೆ ಹೆಸರುವಾಸಿಯಾಗಿದೆ.
ಚೌಮಹಲ್ಲಾ ಅರಮನೆಯ ಪುನಃಸ್ಥಾಪನೆ
ಹೈದರಾಬಾದ್ನ ನಿಜಾಮರ ಹಿಂದಿನ ನಿವಾಸವನ್ನು 2000ನೇ ಇಸವಿಯಲ್ಲಿ ದುರಸ್ತಿಗೊಳಿಸಿ, ಪುನಃಸ್ಥಾಪಿಸಲಾಯಿತು. ಇದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಕಾರಣವಾಯಿತು. ಈ ಯೋಜನೆಗೆ 2010 ರಲ್ಲಿ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಗಾಗಿ ಯುನೆಸ್ಕೋ ಏಷ್ಯಾ ಪೆಸಿಫಿಕ್ ಮೆರಿಟ್ ಪ್ರಶಸ್ತಿಯನ್ನು ನೀಡಲಾಯಿತು.

ಇಲ್ಲಿನ ಕೌನ್ಸಿಲ್ ಹಾಲ್ ನಿಜಾಮರು ಪ್ರಮುಖ ಅಧಿಕಾರಿಗಳು ಮತ್ತು ಗಣ್ಯರನ್ನು ಭೇಟಿಯಾಗುತ್ತಿದ್ದ ಸ್ಥಳವಾಗಿತ್ತು. ಇಂದು, ಇದನ್ನು ಅಪರೂಪದ ಹಸ್ತಪ್ರತಿಗಳು ಮತ್ತು ಅಮೂಲ್ಯ ಪುಸ್ತಕಗಳ ಸಂಗ್ರಹದೊಂದಿಗೆ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಚೌಮಹಲ್ಲಾ ಅರಮನೆ ಸಂಗ್ರಹದ ನಿಧಿಗಳ ತಾತ್ಕಾಲಿಕ ಪ್ರದರ್ಶನಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಜೊತೆಗೆ ವರ್ಣಚಿತ್ರಗಳು, ಛಾಯಾಚಿತ್ರಗಳು, ಜವಳಿ, ಪುಸ್ತಕಗಳು, ಧಾರ್ಮಿಕ ವಸ್ತುಗಳು, ನಕ್ಷೆಗಳು ಮತ್ತು ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ನಡೆಸಲಾಗುತ್ತದೆ. ಬಗ್ಗಿ ಖಾನಾದಲ್ಲಿ ನಿಜಾಮರ ವಿಂಟೇಜ್ ಕಾರುಗಳ ಸಂಗ್ರಹವನ್ನು ಹೊಂದಿದ್ದು, ಇದು ಸಾರ್ವಜನಿಕರಿಗೆ ಮುಕ್ತವಾಗಿದೆ.
ಹತ್ತಿರದ ಆಕರ್ಷಣೆಗಳು
ಚೌಮಹಲ್ಲಾ ಅರಮನೆಯಿಂದ ಹೈದರಾಬಾದ್ನ ಐಕಾನಿಕ್ ಚಾರ್ಮಿನಾರ್ ಒಂದು ಕಿಲೋಮೀಟರ್ನಷ್ಟು ದೂರದಲ್ಲಿದೆ. ನಿಜಾಮ್ ಯುಗದ ಕಾರಂಜಿಯನ್ನು ಹೊಂದಿರುವ ಜನಪ್ರಿಯ ಚೌಕವಾದ ಗುಲ್ಜಾರ್ ಹೌಜ್ ಕೂಡ ಹತ್ತಿರದಲ್ಲಿದೆ.