ರೈಲು ಮಿಸ್ ಆಯ್ತೆಂದು ಟಿಕೆಟ್ ಬಿಸಾಕದಿರಿ!
ನಿಮಗೆ ರೈಲು ನಿಲ್ದಾಣ ತಲುಪುವಷ್ಟರಲ್ಲಿ ತಡವಾಗಿ, ರೈಲು ಹೊರಟು ಹೋಗಿದ್ದರೆ ಚಿಂತಿಸಬೇಡಿ. ನಿಮ್ಮ ಜೊತೆ ಸಾಮಾನ್ಯ ಟಿಕೆಟ್ ಇದ್ರೆ ನೀವು ಮತ್ತೊಂದು ರೈಲಿನಲ್ಲಿ ಪ್ರಯಾಣಿಸಬಹುದು ಎಂಬ ವಿಚಾರ ನಿಮಗೆ ಗೊತ್ತಾ ?
- ರಾಧಿಕಾ ಬಿ ಎಸ್.
ರೈಲು ನಮ್ಮ ದೇಶದಲ್ಲಿಯೇ ಅತ್ಯಂತ ಜನಪ್ರಿಯ ಸಾರಿಗೆ ಮಾರ್ಗ. ಬಹುತೇಕ ಮಂದಿ ರೈಲನ್ನೇ ನೆಚ್ಚಿನ ಸಾರಿಗೆಯನ್ನಾಗಿಸಿಕೊಂಡಿದ್ದಾರೆ. ಯಾಕೆಂದರೆ ಕಡಿಮೆ ವೆಚ್ಚದಲ್ಲಿ ಅದೆಷ್ಟು ದೂರದವರೆಗೂ ರೈಲಿನಲ್ಲಿ ಪ್ರಯಾಣಿಸಬಹುದು. ರೈಲು ಪ್ರಯಾಣವು ಜನರಿಗೆ ವಿಶೇಷವಾದ ಅನುಭವ ನೀಡುತ್ತದೆ. ಅದರಲ್ಲಿ ಪ್ರಯಾಣಿಸುವ ಮೂಲಕ ಜನರು ವಿಭಿನ್ನ ರೀತಿಯ ಅನುಭವವನ್ನು ಪಡೆಯುತ್ತಾರೆ. ಇದೊಂದು ಕೈಗೆಟುಕುವ ಸಾರಿಗೆ ಮಾತ್ರವಲ್ಲ ಬದಲಾಗಿ ಆರಾಮದಾಯಕವೂ ಹೌದು. ವಾಸ್ತವವಾಗಿ, ಜನರು ರೈಲು ಪ್ರಯಾಣವನ್ನು ತುಂಬಾ ಆನಂದಿಸುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ರೈಲು ಬರುವ ಅರ್ಧ ಮುಕ್ಕಾಲು ಗಂಟೆ ಮುನ್ನವೇ ನೀವು ನಿಲ್ದಾಣಕ್ಕೆ ಬರಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ನಿಮಗೆ ರೈಲು ಮಿಸ್ ಆಗುವ ಸಾಧ್ಯತೆಯಿರುತ್ತದೆ. ಒಂದು ವೇಳೆ ನಿಮಗೆ ರೈಲು ಮಿಸ್ ಆಯಿತು ಅಂದ್ರೆ ಅಪ್ಪಿತಪ್ಪಿಯೂ ನಿಮ್ಮ ಕೈಯಲ್ಲಿದ್ದ ಟಿಕೆಟನ್ನು ನೀವು ಮಿಸ್ ಬಿಸಾಡಬೇಡಿ, ಕಳೆದುಕೊಳ್ಳಬೇಡಿ. ಮಿಸ್ ಆದ ರೈಲಿನ ಟಿಕೆಟ್ ಇಟ್ಟುಕೊಳ್ಳುವುದರಿಂದ ಕೂಡ ನಿಮಗೆ ಅನೇಕ ಪ್ರಯೋಜನಗಳಿವೆ.
ಅದೇ ಟಿಕೆಟ್ ನಲ್ಲಿ ಬೇರೆ ರೈಲಿನಲ್ಲೂ ಪ್ರಯಾಣಿಸಬಹುದಾದ ಅವಕಾಶವಿದೆ:
ನಿಮಗೆ ರೈಲು ನಿಲ್ದಾಣ ತಲುಪುವಷ್ಟರಲ್ಲಿ ತಡವಾಗಿ, ರೈಲು ಹೊರಟು ಹೋಗಿದ್ದರೆ ಚಿಂತಿಸಬೇಡಿ. ನಿಮ್ಮ ಜೊತೆ ಸಾಮಾನ್ಯ ಟಿಕೆಟ್ ಇದ್ರೆ ನೀವು ಮತ್ತೊಂದು ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ಸಾಮಾನ್ಯ ಟಿಕೆಟ್ ಹೊಂದಿರುವ ಸೀಟ್ ನಲ್ಲಿ ಯಾರೂ ಬೇಕಾದರೂ ಕೂರಬಹುದು ಆದ್ದರಿಂದ ಮತ್ತೊಂದು ರೈಲಿನಲ್ಲಿ ಸೀಟ್ ಖಾಲಿ ಇದ್ದರೆ ನೀವೂ ಕೂಡ ಕುಳಿತುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ದೃಢೀಕೃತ ಟಿಕೆಟ್ ಹೊಂದಿದ್ರೆ ನೀವು ಬೇರೆ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಇದನ್ನು ನೆನಪಿನಲ್ಲಿಡಿ.

ಕಾಗದದ ಟಿಕೆಟ್‌ಗಳು:
ನೀವು ಕಾಗದದ ಟಿಕೆಟ್ ಹೊಂದಿದ್ದರೆ, ಅದೇ ಮಾರ್ಗದಲ್ಲಿ ಪ್ರಯಾಣಿಸಲು ಅದು ಸಾಮಾನ್ಯವಾಗಿ ಮುಂದಿನ ನಾಲ್ಕು ಗಂಟೆಗಳವರೆಗೆ ಮಾನ್ಯವಾಗಿರುತ್ತದೆ. ಆದರೆ ನೀವು ಕಾಯ್ದಿರಿಸದ ಕೋಚ್ ಅಂದರೆ ಸಾಮಾನ್ಯ ಕೋಚ್ ನಲ್ಲಿ ಪ್ರಯಾಣಿಸಬೇಕಾಗಬಹುದು.
ಟಿಟಿಇಯೊಂದಿಗೆ ಮಾತನಾಡಿ:
ನೀವು ಮುಂದಿನ ರೈಲಿನಲ್ಲಿ ಟಿಕೆಟ್ ಪರೀಕ್ಷಕರನ್ನು ಸಂಪರ್ಕಿಸಿ. ನಿಮ್ಮ ಪರಿಸ್ಥಿತಿಯನ್ನು ವಿವರಿಸಿ. ಒಂದು ವೇಳೆ ಸೀಟುಗಳು ಲಭ್ಯವಿದ್ದರೆ, ಅವರು ನಿಮಗೆ ಕಾಯ್ದಿರಿಸಿದ ಸೀಟಿಗೆ ಹಣ ಪಾವತಿಸಲು ಅವಕಾಶ ನೀಡಬಹುದು. ಈ ಮೂಲಕ ನೀವು ಮತ್ತೊಂದು ರೈಲಿನಲ್ಲಿ ಪ್ರಯಾಣಿಸಬಹುದು.
ಹತ್ತಿರವಿರುವ ಕೌಂಟರ್ ನಲ್ಲಿ ಸಂಪರ್ಕಿಸಿ:
ರೈಲು ಮಿಸ್ ಆಗಿದ್ರೆ ಇನ್ನೊಂದು ರೈಲಿನ ಟಿಕೆಟ್‌ಗಾಗಿ ಕೌಂಟರ್‌ಗೆ ಹೋಗಿ ಮಾತನಾಡಿ. ಆದರೆ ಒಂದು ರೈಲು ಟಿಕೆಟ್‌ನೊಂದಿಗೆ ಮತ್ತೊಂದು ರೈಲಿನಲ್ಲಿ ಪ್ರಯಾಣಿಸಲು ರೈಲ್ವೆಯಲ್ಲಿ ಯಾವುದೇ ನಿಯಮವಿಲ್ಲ. ಒಂದು ವೇಳೆ ತಪ್ಪಿಸಿಕೊಂಡ ರೈಲಿನ ಟಿಕೆಟ್ ಮರುಪಾವತಿ ಬಯಸಿದ್ರೆ TDR ನೀಡಿ. TDR ಅಂದ್ರೆ ಟಿಕೆಟ್ ಠೇವಣಿ ರಶೀದಿ. ಈ ಮೂಲಕ ನೀವು ಹಣ ಮರುಪಾವತಿಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
TDR ಸಲ್ಲಿಸುವುದು ಹೇಗೆ?
ಒಂದು ವೇಳೆ ನೀವು ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದರೆ, ನೀವು ಸುಲಭವಾಗಿ TDR ಸಲ್ಲಿಸಬಹುದು. ಒಂದು ವೇಳೆ ನೀವು ನಿಲ್ದಾಣದಿಂದ ಟಿಕೆಟ್ ಖರೀದಿಸಿದ್ದರೆ ರೈಲ್ವೆ ನಿಲ್ದಾಣಕ್ಕೆ ಹೋಗಿ TDR ಫಾರ್ಮ್ ಭರ್ತಿ ಮಾಡಿ. ಅಂದಹಾಗೆ ರೈಲು ಮಿಸ್ ಮಾಡಿಕೊಂಡ 1 ಗಂಟೆಯೊಳಗೆ ನೀವು TDR ಅನ್ನು ಸಲ್ಲಿಸಬೇಕು. ಒಂದು ಗಂಟೆ ದಾಟಿದ ಬಳಿಕ ನಿಮಗೆ TDR ಸಲ್ಲಿಸಲು ಅವಕಾಶಗಳು ಸಿಗುವುದಿಲ್ಲ.