ಪ್ರವಾಸಿ ಪ್ರಧಾನಿಯ ದೀಪಾವಳಿ ಟೂರ್!
ಮೋದಿಯವರು ಕಳೆದ ಹನ್ನೊಂದು ವರ್ಷದಿಂದ ದೀಪಾವಳಿ ಹೇಗೆ ಆಚರಿಸುತ್ತಿದ್ದಾರೆ ಅಂತ ಒಮ್ಮೆ ಗಮನಿಸಿ. ಅವರು ಪ್ರತಿ ದೀಪಾವಳಿಯಲ್ಲೂ ಪ್ರವಾಸದಲ್ಲಿಯೇ ಇದ್ದಾರೆ. ರಾಜಕಾರಣಿಗಳಿಗೆ ಹಬ್ಬಗಳು ವೈಯಕ್ತಿಕ ಅಥವಾ ರಾಜಕೀಯ ವಿಶ್ರಾಂತಿಯ ಸಮಯ. ಆದರೆ ಮೋದಿ ಪಾಲಿಗೆ ದೀಪಾವಳಿ ಕೂಡ ಒಂದು ರಾಷ್ಟ್ರೀಯ ಹಬ್ಬ. ಅವರು ಪ್ರತಿ ದೀಪಾವಳಿಯನ್ನು ಯೋಧರೊಂದಿಗೆ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ದೀಪಾವಳಿಗೆ ಹೊಸ ಅರ್ಥ ತಂದಿದ್ದಾರೆ.
ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ವಿರೋಧಿಗಳಿಗೆ ಸಿಕ್ಕಿದ್ದ ಒಂದು ಅಸ್ತ್ರ ಅಂದ್ರೆ ಅದು, ಮೋದಿ ಸಿಕ್ಕಾಪಟ್ಟೆ ಟೂರ್ ಹೊಡೀತಾರೆ, ವರ್ಷದಲ್ಲಿ ಆರು ತಿಂಗಳು ಫಾರಿನ್ನಲ್ಲೇ ಇರ್ತಾರೆ ಅನ್ನೋದು. ಆದರೆ ಹಾಗೆ ಪ್ರವಾಸ ಮಾಡಿರೋದ್ರಿಂದ ದೇಶಕ್ಕೆ ಆಗಿರೋ ಲಾಭದ ಬಗ್ಗೆ ಎಂದೂ ವಿರೋಧಿಗಳು ಮಾತನಾಡುವುದಿಲ್ಲ. ದೇಶದೇಶಗಳ ನಡುವಣ ಬಾಂಧವ್ಯ ಉತ್ತಮಗೊಂಡಿರುವುದು, ವ್ಯಾವಹಾರಿಕ ರಾಜತಾಂತ್ರಿಕ ಲಾಭಗಳಾಗಿರುವುದು ಇವ್ಯಾವುದೂ ವಿರೋಧಿಗಳಿಗೆ ಬೇಕಾಗಿಲ್ಲ. ಮೋದಿ ಬರೀ ವಿಮಾನದಲ್ಲಿ ಹಾರಾಡ್ತಾರೆ, ಪರದೇಶಕ್ಕೆ ಹೋಗ್ತಾರೆ ಅನ್ನೋದೊಂದೇ ಗೊಣಗು. ಅರ್ಥ ಮಾಡಿಕೊಳ್ಳಬೇಕಿರೋದೇನಂದ್ರೆ, ಮೋದಿ ಇದುವರೆಗೂ ಒಂದೇ ಒಂದು ವಿದೇಶಪ್ರವಾಸವನ್ನೂ ಸ್ವಂತಕ್ಕಾಗಿ ಮಾಡಿಲ್ಲ. ಆಫೀಸಿಗೆ ರಜೆ ಹಾಕಿ ವಿಶ್ರಾಂತಿಗೆಂದು ಅವರು ಪ್ರವಾಸಕ್ಕೆ ತೆರಳಿದ್ದೇ ಇಲ್ಲ. ಅವರ ಪ್ರವಾಸಗಳೆಲ್ಲವೂ ದೇಶದ ಹಿತ ಕಾಯುವ ಪ್ರವಾಸಗಳೇ ಎಂಬುದು ಗಮನಾರ್ಹ.

ಮೋದಿಯವರು ಕಳೆದ ಹನ್ನೊಂದು ವರ್ಷದಿಂದ ದೀಪಾವಳಿ ಹೇಗೆ ಆಚರಿಸುತ್ತಿದ್ದಾರೆ ಅಂತ ಒಮ್ಮೆ ಗಮನಿಸಿ. ಅವರು ಪ್ರತಿ ದೀಪಾವಳಿಯಲ್ಲೂ ಪ್ರವಾಸದಲ್ಲಿಯೇ ಇದ್ದಾರೆ. ರಾಜಕಾರಣಿಗಳಿಗೆ ಹಬ್ಬಗಳು ವೈಯಕ್ತಿಕ ಅಥವಾ ರಾಜಕೀಯ ವಿಶ್ರಾಂತಿಯ ಸಮಯ. ಆದರೆ ಮೋದಿ ಪಾಲಿಗೆ ದೀಪಾವಳಿ ಕೂಡ ಒಂದು ರಾಷ್ಟ್ರೀಯ ಹಬ್ಬ. ಅವರು ಪ್ರತಿ ದೀಪಾವಳಿಯನ್ನು ಯೋಧರೊಂದಿಗೆ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ದೀಪಾವಳಿಗೆ ಹೊಸ ಅರ್ಥ ತಂದಿದ್ದಾರೆ. 2014ರಲ್ಲಿ ಪ್ರಧಾನಮಂತ್ರಿಯಾದ ತಕ್ಷಣ, ಮೋದಿ ಅವರು ಸಿಯಾಚಿನ್ ಹಿಮಗಡ್ಡೆಯ ಪ್ರದೇಶಕ್ಕೆ ತೆರಳಿ ಸೈನಿಕರೊಂದಿಗೆ ಸಿಹಿತಿಂಡಿ ಹಂಚಿಕೊಂಡು ಮೊದಲ ಬಾರಿಗೆ ದೀಪಾವಳಿಯನ್ನು ಆಚರಿಸಿದರು. ಆಗೊಂದು ಮಾತು ಹೇಳಿದ್ದರು- “ನೀವು ದೇಶ ಕಾಯುತ್ತಿರೋದ್ರಿಂದ ನಿಮ್ಮ ಶೌರ್ಯದಿಂದ ಇಂದು 130 ಕೋಟಿ ಭಾರತೀಯರು ಸುರಕ್ಷಿತವಾಗಿ ದೀಪಾವಳಿ ಆಚರಿಸುತ್ತಿದ್ದಾರೆ” ಎಂದು. ಅಲ್ಲಿಂದ ಮುಂದೆ, 2015ರಲ್ಲಿ ಪಂಜಾಬ್‌ನ ಗಡಿ ಪ್ರದೇಶದಲ್ಲಿ, 2016ರಲ್ಲಿ ಹಿಮಾಚಲ ಪ್ರದೇಶದ ಚೀನಾದ ಗಡಿ ಬಳಿ ಇರುವ ಸುಮ್ಡೋ ಪ್ರದೇಶದಲ್ಲಿ, 2017ರಲ್ಲಿ ಜಮ್ಮು-ಕಾಶ್ಮೀರದ ಗುರೇಜ್ ವ್ಯಾಲಿಯಲ್ಲಿ, 2018ರಲ್ಲಿ ದೇಶಗ್ಗೋಸ್ಕರ, ಯೋಧರಿಗೋಸ್ಕರ ಪ್ರಾರ್ಥಿಸಿ ಉತ್ತರಾಖಂಡ್‌ನ ಹರ್ಷಿಲ್ ಹಾಗೂ ಕೇದಾರನಾಥ ದೇವಸ್ಥಾನದಲ್ಲಿ, 2019ರಲ್ಲಿ ರಾಜಸ್ಥಾನದ ರಾಜಸಂಘರ್‌ನಲ್ಲಿ. 2020ರಲ್ಲಿ ಲೋಂಗ್‌ವಾಲಾ ಗಡಿಯಲ್ಲಿ, 2021ರಲ್ಲಿ ನೌಕಾಪಡೆ ಜತೆಯಲ್ಲಿ, 2022ರಲ್ಲಿ ಕಾಶ್ಮೀರದ ಕಾರ್ಗಿಲ್‌ನಲ್ಲಿ, 2023ರಲ್ಲಿ ಹಿಮಾಚಲದ ಲೆಪ್ಚಾ ಪ್ರದೇಶದಲ್ಲಿ, 2024ರಲ್ಲಿ ಗುಜರಾತ್‌ನ ಕಚ್ ಜಿಲ್ಲೆಯ ಸಿರೀ ಕ್ರಿಕ್ ಪ್ರದೇಶದಲ್ಲಿ ಮತ್ತು ಈ ಬಾರಿ 2025ರಲ್ಲಿ INS Vikrant ನೌಕೆಯಲ್ಲಿ ನೌಕಾಪಡೆಯ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ್ದಾರೆ ಮೋದಿ.

ಒಂದೊಂದು ಪ್ರವಾಸಕ್ಕೂ ಒಂದೊಂದು ಮಹಾರ್ಥವಿರುತ್ತದೆ. ಹಬ್ಬದ ಸಮಯದಲ್ಲೂ ಕುಟುಂಬದಿಂದ ದೂರವಿದ್ದು ದೇಶರಕ್ಷಣೆಯಲ್ಲಿ ನಿರತರಾಗುವ ಯೋಧರನ್ನು ಪ್ರಧಾನಿ ಭೇಟಿ ಮಾಡಿ ಅವರೊಂದಿಗೆ ಹಬ್ಬ ಆಚರಿಸಿದಾಗ ಸಿಗುವ ಮನೋಬಲ ವಿವರಣೆಗೆ ನಿಲುಕದ್ದು. ಈ ಹನ್ನೊಂದು ವರ್ಷಗಳ ಪರಂಪರೆ ಈಗ ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸದ ಒಂದು ನೂತನ ಅಧ್ಯಾಯವಾಗಿದೆ. ದೀಪಾವಳಿ ಹಬ್ಬದ ಮೂಲಕ ದೇಶರಕ್ಷಣೆಯ ಭಾವನೆ ಬೆಳೆಸುವ ಪ್ರಯತ್ನವಿದು. ಅಸಲಿಗೆ ಯಾವ ಪ್ರವಾಸವೂ ವ್ಯರ್ಥ ಪ್ರವಾಸವಲ್ಲ. ಅದರಲ್ಲೂ ಮೋದಿಯ ಎಲ್ಲ ಪ್ರವಾಸಗಳೂ ಭಾರತದ ಹಿತದೃಷ್ಟಿಯಿಂದ ನೋಡಿದಾಗ ಒಳ್ಳೆಯದೇ ಆಗಿದೆ. ಅಂದಹಾಗೆ ಇದ್ಯಾಕೆ ಗುಂಟೂರು ಮಸಾಲದ ಟಾಪಿಕ್ ಅಂತ ಕೇಳ್ತೀರಾ? ಒಮ್ಮೆ ವಿರೋಧಿಗಳಿಗೆ ಓದೋಕೆ ಕೊಡಿ. ಆಗ ಗೊತ್ತಾಗತ್ತೆ ಗುಂಟೂರು ಮಿರ್ಚಿ ಎಷ್ಟು ಖಾರವಿತ್ತೆಂದು.