ಕಳೆದ ವಾರಾಂತ್ಯದೇಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಟ್ರಾವೆಲ್ ಟೂರಿಸಂ ಫೇರ್ ಆಯೋಜನೆಗೊಂಡಿತ್ತು. ಕೆಲವು ವರ್ಷಗಳಿಂದ ಪ್ರತಿ ವರ್ಷ ಈ ಸಮಯದಲ್ಲಿ ಈ ಟ್ರಾವೆಲ್ ಮೇಳ ನಡೆಯುತ್ತಿದೆ. ಬಿ ಟು ಸಿ ಮತ್ತು ಬಿ ಟು ಬಿ ಮೇಳವಾಗಿರುವ ಇದು ಬಹಳ ಯೋಜಿತವಾಗಿಯೇ ಪ್ರತಿವರ್ಷ ಮಾರ್ಚ್- ಏಪ್ರಿಲ್ ನಲ್ಲಿ ಜರುಗುತ್ತದೆ. ಇದೇ ರೀತಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿಯೂ ಇದನ್ನು ಆಯೋಜಿಸಲಾಗುತ್ತದೆ. ಪ್ರವಾಸಕ್ಕೆ ಅತ್ಯಂತ ಪ್ರಶಸ್ತ ಸಮಯ ಯಾವುದು ಅಂದರೆ ಅದು ಬೇಸಗೆ. ಒಟ್ಟಾರೆಯಾಗಿ ಹೇಳುವುದಾದರೆ ಡಿಸೆಂಬರ್ ನಿಂದ ಜೂನ್ ತನಕದ ಅವಧಿ ಪ್ರವಾಸಕ್ಕೆ ಹೇಳಿಮಾಡಿಸಿದ್ದು. ಶಾಲಾ ಕಾಲೇಜುಗಳ ರಜೆಯನ್ನೂ ಪರಿಗಣಿಸಿದರೆ ಏಪ್ರಿಲ್ ನಿಂದ ಜುಲೈ ಅವಧಿಯವರೆಗೆ ಗರಿಷ್ಠ ಪ್ರವಾಸಗಳು ಬುಕ್ ಆಗುತ್ತವೆ. ಇದೇ ಕಾರಣಕ್ಕೆ ಪ್ರವಾಸ ಮೇಳಗಳು ಹೆಚ್ಚು ಹೆಚ್ಚು ಆಯೋಜನೆಗೊಳ್ಳುತ್ತವೆ.

ಇದನ್ನೂ ಓದಿ: ಸ್ಕ್ಯಾನರ್ ಅಡಿಯಲ್ಲಿ ಪ್ರವಾಸೋದ್ಯಮ!

ಟ್ರಾವೆಲ್ ಏಜೆಂಟ್ ಗಳು, ಹೊಟೇಲ್-ರೆಸಾರ್ಟ್ ಗಳು, ಟೂರ್ ಆಪರೇಟರ್ ಗಳು, ಏರ್ ಟಿಕೆಟ್ ಬುಕಿಂಗ್ ನವರು ಎಲ್ಲರೂ ಗಮನ ಸೆಳೆಯುವ ಆಫರ್ ನೀಡಿ ಪ್ರವಾಸಿಗರನ್ನು ಬುಕ್ ಮಾಡುತ್ತಾರೆ. ಪ್ರವಾಸಕ್ಕೆ ಸೀಸನ್ ಎಂಬುದು ಇಲ್ಲವಾದರೂ ಈ ಅವಧಿಯನ್ನು ಪೀಕ್ ಸೀಸನ್ ಅನ್ನಬಹುದು. ಆದರೆ ಈ ಬಾರಿಯ ಟಿಟಿಎಫ್ ನಲ್ಲಿ ನಿರಾಶಾದಾಯಕ ವಾತಾವರಣವಿತ್ತು. ಕೆಲವು ಟೂರ್ ಆಪರೇಟರ್ ಗಳನ್ನು, ಟ್ರಾವೆಲ್ ಏಜೆಂಟ್ಸ್ ಮತ್ತು ರೆಸಾರ್ಟ್ ನ ಸೇಲ್ಸ್ ಮ್ಯಾನೇಜರ್ ಗಳನ್ನು ಮಾತನಾಡಿಸಿದಾಗ ಗೊತ್ತಾದದ್ದೇನೆಂದರೆ, ಇಸ್ರೇಲ್-ಇರಾನ್ ಯುದ್ಧ ಹಾಗೂ ದುಬೈ ಮೇಲಿನ ದಾಳಿ ಇಡೀ ಪ್ರವಾಸೋದ್ಯಮವನ್ನು ನಲುಗಿಸಿದೆ. ಬುಕ್ ಆಗಿರುವ ಪ್ರವಾಸಗಳು ಪ್ಯಾನಿಕ್ ನಿಂದಾಗಿ ರದ್ದು ಗೊಳಿಸುತ್ತಿದ್ದಾರೆ. ಹೊಸ ಪ್ರವಾಸಕ್ಕೆ ಬುಕಿಂಗ್ ಆಗುತ್ತಿಲ್ಲ. ಡೊಮೆಸ್ಟಿಕ್ ಸರ್ಕ್ಯೂಟ್ ನಲ್ಲಿಯೂ ಸ್ಟಾಕ್ ಮಾರ್ಕೆಟ್, ಬೆಲೆ ಏರಿಕೆ, ಎಲ್ ಪಿ ಜಿ ಅಭಾವ ಇಂಥ ಸುದ್ದಿಗಳು ಪ್ರವಾಸದ ಮನಸ್ಥಿತಿಯನ್ನು ಕೊಲ್ಲುತ್ತಿವೆ. ಹೀಗಾಗಿ ಮೇಳದಲ್ಲಿ ಜನಪ್ರತಿಕ್ರಿಯೆಯೂ ಇಲ್ಲ. ಬಿ ಟು ಬಿ ಕೂಡ ಡಲ್.

ಇದು ವಸ್ತುಸ್ಥಿತಿಯೇ ಹೌದಾಗಿದ್ದಲ್ಲಿ, ಖಂಡಿತವಾಗಿಯೂ ಪ್ರವಾಸೋದ್ಯಮದ ದೃಷ್ಟಿಯಿಂದ ಆತಂಕಕಾರಿ ಸಂಗತಿ. ಇದು ತಾತ್ಕಾಲಿಕ ಸಮಸ್ಯೆಯೇ ಆಗಿದ್ದರೂ ನಷ್ಟದ ಮಟ್ಟ ಬಹಳ ದೊಡ್ಡದೇ.

ಆದರೆ ಟ್ರಾವೆಲ್ ಇಂಡಸ್ಟ್ರಿ ಮತ್ತು ದೇಶದ ಪ್ರವಾಸೋದ್ಯಮ ಇಲಾಖೆ ಈ ಪ್ಯಾನಿಕ್ ಪರಿಸ್ಥಿತಿಯಿಂದ ಪ್ರವಾಸಿಗರನ್ನು ಹೊರ ತರಲು ಯಾವ ಪ್ರಯತ್ನ ಮಾಡುತ್ತಿದೆ? ಉಹೂಂ. ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಕಾರಣ ಸ್ಪಷ್ಟ. ಪ್ರವಾಸೋದ್ಯಮ ನಮ್ಮ ದೇಶದ ಆದ್ಯತಾ ಕ್ಷೇತ್ರ ಅಲ್ಲ. ಪ್ರವಾಸೋದ್ಯಮ ತಾತ್ಕಾಲಿಕವಾಗಿ ಅಡ್ಡಡ್ಡ ಮಲಗಿದರೆ ಮಲಗಲಿ ಎಂಬಂತಿದೆ ಪ್ರವಾಸೋದ್ಯಮ ವಿಭಾಗದ ಧೋರಣೆ. ರಾಜ್ಯದಲ್ಲಿ ಸಫಾರಿ ಬ್ಯಾನ್ ಆದಾಗ ಹೇಗೆ ಏಟು ಬಿದ್ದಿತ್ತೋ ಅದೇ ರೀತಿ ಈಗ ಜಾಗತಿಕ ಯುದ್ಧದ ಕಾರಣಕ್ಕೆ ಭಾರತದ ಪ್ರವಾಸೋದ್ಯಮ ಏಟು ತಿನ್ನುತ್ತಿದೆ. ಇಂಥ ಸಮಯದಲ್ಲೂ ಪ್ರವಾಸೋದ್ಯಮ ಕುಸಿತ ಕಾಣಬಾರದು ಅಂದರೆ ಅದಕ್ಕೆ ಪರ್ಯಾಯ ಯೋಜನೆ ಇರಬೇಕು. ಹಾಗೆ ಪರ್ಯಾಯ ಯೋಜನೆ ರೂಪಿಸಬೇಕು ಎಂದರೆ ಇಚ್ಛಾಶಕ್ತಿ ಅಗತ್ಯ.

Untitled design (58)

ಒಂದು ಚಿಕ್ಕ ಉದಾಹರಣೆ ಇದೆ. ಇತ್ತೀಚೆಗೆ ಚೀನಾ ತೈವಾನ್ ವಿರುದ್ಧ ವಿಧವಿಧವಾಗಿ ದಾಳಿಗೈಯ್ಯುತ್ತಿದೆ. ತೈವಾನ್ ಚೀನಾದ ಭೀತಿಯಲ್ಲೇ ಜೀವಿಸುತ್ತಿದೆ. ಈ ಸಂದರ್ಭದಲ್ಲಿ ತೈವಾನ್ ಪರ ನಿಂತಿರುವುದು ಜಪಾನ್. ಜಪಾನ್ ನೇರವಾಗಿ ತೈವಾನ್ ಗೆ ತನ್ನ ಬೆಂಬಲವನ್ನ ಸೂಚಿಸಿತು. ಇದರಿಂದ ಚೀನಾದ ಕೆಂಗಣ್ಣಿಗೂ ಗುರಿಯಾಯಿತು. ಆಗ ಚೀನಾ ಮಾಡಿದ್ದೇನು? ಚೀನೀಯರು ಜಪಾನ್ ಪ್ರವಾಸವನ್ನು ಬಹಿಷ್ಕರಿಸಬೇಕು ಎಂಬ ಕರೆ ನೀಡಿತು. ಚೀನಾದಿಂದ ಸರಾಸರಿ ಪ್ರತಿ ತಿಂಗಳು ಎಂಟು ಲಕ್ಷ ಪ್ರವಾಸಿಗರು ಜಪಾನ್ ಪ್ರವಾಸ ಮಾಡುತ್ತಿದ್ದರು. ದಿಢೀರ್ ಈ ಸಂಖ್ಯೆ ಇಲ್ಲವಾದರೆ ಪ್ರವಾಸೋದ್ಯಮಕ್ಕೆ ಬೀಳುವ ಏಟು ಚಿಕ್ಕದಲ್ಲವಲ್ಲ. ಜಪಾನ್ ಪ್ರವಾಸೋದ್ಯಮ ಈ ಬಹಿಷ್ಕಾರದಿಂದ ತತ್ತರಿಸಿಹೋಗಬೇಕಿತ್ತು. ಆದರೆ ಆಗಿದ್ದೇ ಬೇರೆ. ಈ ಬಹಿಷ್ಕಾರ ಕರೆ ಬಂದ ತಿಂಗಳಲ್ಲೇ ಜಪಾನ್ ಪ್ರವಾಸೋದ್ಯಮ ದಾಖಲೆ ಬರೆಯಿತು. ಫೆಬ್ರವರಿ ತಿಂಗಳಲ್ಲಿ ಚೀನಾದಿಂದ ಬರುತ್ತಿದ್ದ ಪ್ರವಾಸಿಗರ ಸಂಖ್ಯೆ ಎಂಟು ಲಕ್ಷದಿಂದ ನಾಲ್ಕು ಲಕ್ಷಕ್ಕೆ ಕುಸಿದರೆ, ಇತರ ದೇಶಗಳಿಂದ ಬರುವ ಪ್ರವಾಸಿಗರ ಸಂಖ್ಯೆ ಮೂರು-ನಾಲ್ಕು ಪಟ್ಟು ಏರಿಕೆ ಕಾಣುವಂತಾಯ್ತು. ತೈವಾನ್ ನಿಂದ 37%ನಷ್ಟು ಪ್ರವಾಸಿಗರ ಹೆಚ್ಚಳವಾಯ್ತು.

ಪಾಶ್ಚಿಮಾತ್ಯ ದೇಶಗಳಾದ ಅಮೆರಿಕ ಕೆನಡಾ ಮತ್ತಿತರ ದೇಶಗಳಿಂದ ಎಂದಿಗಿಂತ ಹೆಚ್ಚು ಪ್ರವಾಸಿಗರು ಬಂದರು. ಬಂದದ್ದಷ್ಟೇ ಅಲ್ಲ ವಾರಗಟ್ಟಲೆ ಜಪಾನ್ ನಲ್ಲೇ ಉಳಿದರು. ಇದು ಫುಟ್ ಫಾಲ್ ನ ಸಂಖ್ಯಾಬಲ ಹೆಚ್ಚಿಸಿದ್ದಷ್ಟೇ ಅಲ್ಲದೇ ಆದಾಯವನ್ನೂ ಗಣನೀಯವಾಗಿ ಏರಿಸಿತು. ಜಪಾನ್ ಮಾಡಿದ್ದೇನು? ಪಶ್ಚಿಮ ದೇಶಗಳಲ್ಲಿ, ಯುರೋಪಿಯನ್ ದೇಶಗಳಲ್ಲಿ ವ್ಯಾಪಕ ಪ್ರಚಾರ ಮಾಡಿತು. ನನ್ನ ದೇಶದಲ್ಲಿ ನೀವು ನೋಡದ ಹಿಡನ್ ಜೆಮ್ ಗಳು ಬಹಳಷ್ಟಿವೆ. ಅದನ್ನು ನೋಡಬನ್ನಿ ಎಂದು ಹೊಸ ಜಾಗಗಳನ್ನು ತೋರಿಸುವ ಆಸೆ ಹುಟ್ಟಿಸಿತು. ಏಷ್ಯನ್ನರಿಗಿಂತ ಹೆಚ್ಚು ಖರ್ಚು ಮಾಡುವ ಪಾಶ್ಚಿಮಾತ್ಯ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ತನ್ನ ಏಟಿನಿಂದ ಜಪಾನ್ ತತ್ತರಿಸಿಹೋಗುತ್ತದೆ ಎಂದು ಭ್ರಮಿಸಿದ್ದ ಚೀನಾಗೆ ಶಾಕ್ ನೀಡುವ ಅಂಕಿಅಂಶಗಳನ್ನು ಜಪಾನ್ ಪ್ರಕಟ ಮಾಡಿತು. ಇದು ಸಾಧ್ಯವಾಗಿದ್ದು ಇಚ್ಛಾಶಕ್ತಿ ಮತ್ತು ಛಲದಿಂದ. ಪ್ರವಾಸೋದ್ಯಮವನ್ನು ಆದ್ಯತೆಯಾಗಿ ಭಾವಿಸಿದ್ದರಿಂದ. ಭಾರತದಲ್ಲಿಯೂ ಆಗಬೇಕಿರೋದು ಇದೇ. ಟ್ರಾವೆಲ್ ಕಂಪನಿಗಳು ಮತ್ತು ಭಾರತ ಪ್ರವಾಸೋದ್ಯಮ ಇಲಾಖೆಗಳು ಪರ್ಯಾಯ ಸ್ಟ್ರಾಟಜಿಯನ್ನು ತಡಮಾಡದೇ ಅಳವಡಿಸಿಕೊಂಡು ದೇಶೀಯ ಮತ್ತು ವಿದೇಶೀ ಗ್ರಾಹಕರನ್ನು ಸೆಳೆಯಬೇಕು. ನಂಬಿಕೆ ಹುಟ್ಟಿಸಬೇಕು. ಸುರಕ್ಷತೆ ಮತ್ತು ಸಂತಸ-ಸಂತೃಪ್ತಿಯನ್ನು ಖಾತರಿಗೊಳಿಸುತ್ತಲೇ, ಪ್ರವಾಸಕ್ಕೆ ಪ್ರೇರೇಪಿಸಬೇಕು. ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡಬೇಕು.