ಭಯೋತ್ಪಾದಕ ದಾಳಿಯಿಂದ ಪ್ರವಾಸೋದ್ಯಮಕ್ಕೆ ಏಟು ಎಂಬ ಹೆಡ್‌ಲೈನ್ ಏನಾದರೂ ನೋಡಿದರೆ, ಅಜ್ಜಿಗೆ ಅರಿವೆ ಚಿಂತೆ ಆದರೆ, ಮೊಮ್ಮಗಳಿಗೆ ಇನ್ನೇನೋ ಚಿಂತೆ ಎಂಬ ಗಾದೆ ನಿಮ್ಮ ಬಾಯಲ್ಲಿ ಬರಬಹುದು. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಲಾಭ-ನಷ್ಟಗಳನ್ನು ವೈಯಕ್ತಿಕ ನೆಲೆಯಲ್ಲಿ ಅಥವಾ ತನ್ನ ಪರಿಧಿಯ ಸುತ್ತಲೇ ಯೋಚಿಸುವುದು ಸಹಜ. ಉದಾಹರಣೆಗೆ, ಪೆಟ್ರೋಲ್ ಬೆಲೆ ಏರಿಕೆ ಅಂದಾಗ ಸಹಜವಾಗಿಯೇ ಒಬ್ಬೊಬ್ಬರೂ ತಮ್ಮದೇ ಆದ ಒಂದೊಂದು ಚಿಂತೆಯಲ್ಲಿ ಮುಳುಗುತ್ತಾರೆ.

ದೇಶದಲ್ಲಿ ಸಂಭವಿಸುವ ಪ್ರತಿ ಘಟನೆಯೂ ಹಲವಾರು ವಿಭಾಗಗಳ ಮೇಲೆ ತನ್ನ ನೇರ ಅಥವಾ ಪರೋಕ್ಷ ಪರಿಣಾಮಗಳನ್ನು ಹೊಂದಿರುತ್ತದೆ. ಯುದ್ಧ ಎಂದಾಗ, ಬೆಲೆ ಏರಿಕೆ, ಶೇರ್ ಮಾರ್ಕೆಟ್ ಪತನ, ಪ್ರವಾಸೋದ್ಯಮ ಕುಸಿತ ಇತ್ಯಾದಿ ಪರಿಣಾಮಗಳಾಗುತ್ತವೆ. ಪ್ರವಾಹ, ಬರಗಾಲ, ಪ್ಯಾಂಡೆಮಿಕ್, ಎಲ್ಲವೂ ಹಲವು ವಿಭಾಗಗಳ ಮೇಲೆ ಪರಿಣಾಮ ಬೀರುತ್ತವೆ. ಉಗ್ರರ ದುಷ್ಕೃತ್ಯದಿಂದ ಪ್ರವಾಸೋದ್ಯಮದ ಮೇಲೆ ನೇರ ಹೊಡೆತ ಬೀಳುತ್ತದೆ. ಇದನ್ನು ಒಪ್ಪಲೇಬೇಕು.

Redfort terror attack

ಇಸ್ರೇಲ್ ಹಮಾಸ್ ಯುದ್ಧದಿಂದಾಗಿ ಇಸ್ರೇಲಿನ ಪ್ರವಾಸೋದ್ಯಮ ಹೇಗೆ ತಳತಲುಪಿ ಕೂತಿದೆ, ಅದನ್ನು ಮತ್ತೆ ಮೇಲಕ್ಕೆತ್ತಲು ಏನೆಲ್ಲ ಸಾಹಸಗಳನ್ನು ಮಾಡಲಾಗುತ್ತಿದೆ ಎಂಬುದನ್ನು ಒಮ್ಮೆ ಅಧ್ಯಯನ ಮಾಡಬೇಕು. “ಯುದ್ಧ, ಉಗ್ರರ ದಾಳಿ ಇವೆಲ್ಲ ಆದಾಗ ಪ್ರವಾಸೋದ್ಯಮ ಕುಸಿದುಬಿತ್ತು ಎಂದು ಚಿಂತಿಸುವುದು ಅಗತ್ಯವಾ? ಅದು ಆದ್ಯತೆ ಆಗಬೇಕಾ?” ಎಂದು ನೀವು ಪ್ರಶ್ನಿಸಬಹುದು. ಆದರೆ ದೇಶದ ಎಕಾನಮಿಗೆ ಬಹುದೊಡ್ಡ ಪಾಲು ಕೊಡುವ ಪ್ರವಾಸೋದ್ಯಮವನ್ನು ನಾವು ಆದ್ಯತೆಯಾಗಿ ನೋಡಲೇಬೇಕು. ಜತೆಗೆ, ಪ್ರವಾಸೋದ್ಯಮ ಎಂಬುದು ದೇಶದ ಇಮೇಜ್ ಕಟ್ಟಿಕೊಡುವ ಒಂದು ವಿಭಾಗವೂ ಹೌದು. ಒಂದು ದೇಶ ಪ್ರವಾಸಕ್ಕೆ ಯೋಗ್ಯವಾಗಿದೆ ಅಂದರೆ ಅಲ್ಲಿ ಜೀವಕ್ಕೆ ಸುರಕ್ಷತೆ ಇದೆ ಎಂದರ್ಥ. ಪ್ರವಾಸಿಗರು ಪ್ರಥಮವಾಗಿ ನಿರೀಕ್ಷಿಸುವುದು ಸುರಕ್ಷತೆಯನ್ನು. ಉಗ್ರರ ದಾಳಿ, ಯುದ್ಧ ಅಥವಾ ಹವಾಮಾನ ವೈಪರೀತ್ಯಗಳಿರುವ ದೇಶಗಳಿಗೆ, ಪ್ರವಾಸಿಗರನ್ನುಅತಿಥಿಗಳಂತೆ ಕಾಣದ ದೇಶಗಳಿಗೆ ಯಾರೂ ಪ್ರವಾಸ ಹೋಗುವುದಿಲ್ಲ. ಈಗ ಭಾರತ ತನ್ನ ತಪ್ಪಿಲ್ಲದೆಯೂ ಅಂಥ ಕಳಂಕಕ್ಕೆ ಈಡಾಗುತ್ತಿದೆ.

Mumbai Terror attack

ದೆಹಲಿಯಲ್ಲಿ ನಡೆದ ಉಗ್ರರ ವಿಧ್ವಂಸಕ ಕೃತ್ಯ ಇದೀಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದು, ಅದರ ನೇರ ಪರಿಣಾಮ ಪ್ರವಾಸೋದ್ಯಮದ ಮೇಲಾಗಿದೆ. ಭಾರತದ ಪ್ರಮುಖ ನಗರಗಳಾದ ದೆಹಲಿ ಮತ್ತು ಮುಂಬಯಿಯಲ್ಲಿ ಆಗುವ ಭಯೋತ್ಪಾದಕ ಕೃತ್ಯಗಳು ಜಗತ್ತಿನ ಗಮನ ಸೆಳೆಯುತ್ತವೆ. ಸಾರಾಸಗಟಾಗಿ ಭಾರತಕ್ಕೆ ಹೋಗುವುದು ಸೇಫ್ ಅಲ್ಲ ಎಂಬ ನಿರ್ಧಾರಕ್ಕೆ ಬರುವಂತೆ ಮಾಡುತ್ತವೆ. ಈಗ ಆಗಿರೋದು ಕೂಡ ಅದೇ. ಯುಎಸ್ ಮತ್ತು ಯುಕೆ ಈಗಾಗಲೇ ತನ್ನ ಪ್ರಜೆಗಳನ್ನು ಅಲರ್ಟ್ ಮಾಡಿದೆ. ಭಾರತ ಪ್ರವಾಸದ ಪ್ಲಾನ್ ಇದ್ದಲ್ಲಿ, ಇನ್ನೊಂದು ಮೂರು ತಿಂಗಳು ಮುಂದೂಡಿ, ನಂತರ ನಿರ್ಧರಿಸಿ ಎಂಬ ಅಫಿಷಿಯಲ್ ಸೂಚನೆಯನ್ನೇ ನೀಡಿದೆ. ನೆರೆದೇಶ ಹುಟ್ಟುಹಾಕಿ ಕಳಿಸಿದ ಉಗ್ರವಾದಿಗಳಿಂದ ಈಗ ಭಾರತಕ್ಕೆ ಜೀವಹಾನಿ ಮಾತ್ರವಲ್ಲ ಮಾನಹಾನಿಯೂ ಆಗುತ್ತಿದೆ. ನೆನಪಿಡಿ, ಇಲ್ಲಿ ನಲುಗುವುದು ಪ್ರವಾಸೋದ್ಯಮ ಮಾತ್ರವಲ್ಲ, ಆತಿಥ್ಯ ಕ್ಷೇತ್ರ ಕೂಡ. ಒಟ್ಟಾರೆ ಆರ್ಥಿಕತೆಗೆ, ಭಾರತದ ಇಮೇಜ್‌ಗೆ ಆಗಿರುವ ಧಕ್ಕೆ ಸಣ್ಣದಲ್ಲ. ಉಗ್ರವಾದವನ್ನು ಮಟ್ಟಹಾಕದಿದ್ದರೆ ಭಾರತ ಸೇಫ್ ಇದೆ, ದಯವಿಟ್ಟು ಬನ್ನಿ ಎಂದು ಪ್ರವಾಸಿಗರನ್ನು ಗೋಗರೆಯುವ ಪರಿಸ್ಥಿತಿ ಬರುತ್ತದೆ. ಪ್ರವಾಸೋದ್ಯಮ ಭಾರತದ ಪ್ರಮುಖ ಅಂಗವಲ್ಲದೇ ಇರಬಹುದು, ಆದರೆ ಪ್ರವಾಸೋದ್ಯಮ ಬೇರೆಲ್ಲ ಪ್ರಮುಖ ಅಂಗಗಳು ದೃಢವಾಗಲು ಬೇಕಿರೋ ಅಗತ್ಯದ ಟಾನಿಕ್ ಅಂತೂ ಹೌದು. ಶೀಘ್ರದಲ್ಲಿ ಉಗ್ರವಾದಕ್ಕೊಂದು ಅಂತ್ಯ ಕಾಣಿಸುವುದು ಭಾರತದ ಸರ್ವತೋಮುಖ ಉದ್ಧಾರಕ್ಕೆ ಅತ್ಯವಶ್ಯಕವಾಗಿದೆ.