ಯಶಸ್ಸಿಗೆ ಒಂದು ಸೂತ್ರ ಇರುತ್ತದೆ. ಆದರೆ ಆ ಸೂತ್ರ ಯಾವುದೇ ಕ್ಷಣದಲ್ಲೂ ಸವಕಲಾಗಬಹುದು. ಆಗ ಹೊಸ ಸೂತ್ರವೊಂದು ಬೇಕಾಗುತ್ತದೆ. ಅದಕ್ಕೂ ಒಂದು ಎಕ್ಸ್‌ಪೈರಿ ಡೇಟ್ ಇರುತ್ತದೆ. ಯಾವ ಸೂತ್ರವೂ ಸಾರ್ವಕಾಲಿಕವಲ್ಲ. ಹಳೆಯ ಸಿದ್ಧಸೂತ್ರಗಳಲ್ಲಿ ಯಶಸ್ಸು ಸಿಗುತ್ತಿಲ್ಲವೆಂದಾಗ ಆ ಸೂತ್ರ ಮುರಿಯಬೇಕಾಗುತ್ತದೆ. ಅದೇ ಹೊಸ ಯಶಸ್ಸಿಗೆ ನಾಂದಿ ಹಾಡುತ್ತದೆ. ಪ್ರವಾಸೋದ್ಯಮಕ್ಕೂ ಇದು ಅನ್ವಯ. ವಿಶ್ವಪ್ರವಾಸೋದ್ಯಮ ಬೇಡ ...ಭಾರತದ ಪ್ರವಾಸೋದ್ಯಮವನ್ನೇ ಉದಾಹರಣೆಯಾಗಿ ತಗೊಳ್ಳಿ; ಎಷ್ಟು ವರ್ಷ ಅಂತ ಅದೇ ತಾಜಮಹಲ್, ಅದೇ ಕುತುಬ್ ಮಿನಾರ್, ಅದೇ ಚಾರ್‌ಮಿನಾರ್ ಅಥವಾ ಕರ್ನಾಟಕದಲ್ಲಿ ಅದೇ ಬೇಲೂರು ಹಳೇಬೀಡು ಬಾದಾಮಿ ಗೋಲಗುಂಬಜ್ ಜೋಗಫಾಲ್ಸ್ ಅಂತ ತೋರಿಸ್ತೀರಿ? ಉದ್ಯಮ ಸ್ಯಾಚುರೇಟ್ ಆಗುವುದೇ ಇಲ್ಲಿ. ಪ್ರವಾಸೋದ್ಯಮ ಬದಲಾವಣೆಯ ಗಾಳಿಗೆ ತೆರೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುವುದು ಇಂಥ ಸಂದರ್ಭದಲ್ಲಿ. ಈಗ ಆಗಿರುವುದು ಇದೇ.

Hidden gems

ಭಾರತದ ಪ್ರವಾಸೋದ್ಯಮ ಮಗ್ಗಲು ಬದಲಿಸಿದೆ. ಪ್ರಾದೇಶಿಕತೆಗೆ ಒತ್ತುಕೊಟ್ಟು ತೆರೆಮರೆಯಲ್ಲಿರುವ ಜಾಗಗಳನ್ನು ಪ್ರವಾಸೋದ್ಯಮದ ಭಾಗವಾಗಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ. ಇದರ ಪರಿಣಾಮವಾಗಿ ಪ್ರವಾಸೋದ್ಯಮ ಅದ್ಭುತ ಜಿಗಿತ ಕಂಡಿದೆ. ಇದುವರೆಗಿನ ರೆಡಿಮೇಡ್ ಪ್ರವಾಸಸ್ಥಳಗಳ ಪಟ್ಟಿಯನ್ನು ಬದಿಗಿರಿಸಿ ಹೊಸ ಪ್ರವಾಸಿತಾಣಗಳ ಪಟ್ಟಿಯನ್ನ ಮುನ್ನೆಲೆಗೆ ತಂದಿಡಲಾಗಿದೆ. ಹೊಸಹೊಸ ಪ್ರವಾಸಗಳ ಹೆಸರಿನಲ್ಲಿ ಪರಿಕಲ್ಪನೆಗಳನ್ನು ಸೃಷ್ಟಿಸಲಾಗುತ್ತಿದೆ. ಕೂರ್ಗ್‌ನ ಕಾಫೀ ಎಸ್ಟೇಟ್‌ಗಳೂ ಟೂರಿಸಂ ಸ್ಪಾಟ್ ಆಗಬಹುದು, ಅಲೆಪ್ಪಿಯ ಬ್ಯಾಕ್ ವಾಟರ್ ಕೂಡ ಪ್ರವಾಸಿ ಕ್ಷೇತ್ರವಾಗಬಹುದು, ಏಳೆಂಟು ಕಿಲೋಮೀಟರ್ ಎತ್ತರ ಅಜ್ಞಾತ ಗಿರಿಯೂ ಚಾರಣಪ್ರವಾಸದ ಜಾಗವಾಗಬಹುದು. ಬೆಂಗಳೂರಿಗೆ ಬಂದರೆ ಲಾಲ್ ಬಾಗ್, ವಿಧಾನಸೌಧ, ಕಬ್ಬನ್ ಪಾರ್ಕ್‌ಗಳನ್ನು ಎಷ್ಟಂತ ನೋಡ್ತೀರಿ, ಬೆಂಗಳೂರಿನ ಹೊರವಲಯದಲ್ಲಿರುವ ಬೆಟ್ಟ, ದೇವಾಲಯ, ಲೇಕ್ ಇಂಥವುಗಳನ್ನೂ ನೋಡಿಬನ್ನಿ ಅನ್ನುತ್ತದೆ ಈ ಹೊಸ ಸೂತ್ರ. ಇದರಿಂದ ಆಗುತ್ತಿರುವ ಪರಿಣಾಮವೇನು? ಆತಿಥ್ಯ ಕ್ಷೇತ್ರಗಳ ತೀವ್ರ ಅಭಿವೃದ್ಧಿ. ರೆಸಾರ್ಟ್, ಹೊಟೇಲ್ ಮತ್ತು ಹೋಮ್ ಸ್ಟೇಗಳು ಮತ್ತು ಅವುಗಳಿಂದ ಬರುವ ಆದಾಯವು ಅಸಲಿ ಪ್ರವಾಸೋದ್ಯಮದ ಪೊಟೆನ್ಷಿಯಲ್ ಏನು ಎಂಬುದನ್ನು ನಿರೂಪಿಸುತ್ತಿದೆ. ಯಾವುದೋ ಅಜ್ಞಾತ ಧಾರ್ಮಿಕತಾಣಕ್ಕೆ ದಿಢೀರ್ ಪ್ರಸಿದ್ಧಿ ಬಂದರೆ ಅದರ ಲಾಭ ಪ್ರವಾಸೋದ್ಯಮಕ್ಕೆ. ಕಾರಣ ಅದರ ಸುತ್ತ ಹುಟ್ಟಿಕೊಳ್ಳುವ ಆತಿಥ್ಯ ಕ್ಷೇತ್ರದ ಉದ್ಯಮಗಳು. ಇದುವರೆಗೂ ಇದ್ದ ರೆಡಿಮೇಡ್ ಪ್ರವಾಸಿತಾಣಗಳ ಪಟ್ಟಿ ತರುತ್ತಿದ್ದ ಆದಾಯದ ದುಪ್ಪಟ್ಟು ಅಥವಾ ಹತ್ತುಪಟ್ಟು ಆದಾಯವನ್ನು ಹೊಸದಾಗಿ ಪ್ರಚಲಿತಕ್ಕೆ ಬಂದಿರುವ ಪ್ರವಾಸಿತಾಣಗಳು ತಂದುಕೊಡುತ್ತಿವೆ ಎಂಬುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.

unseen India

ಪ್ರಾದೇಶಿಕ ಪ್ರವಾಸೋದ್ಯಮದ ಅಭಿವೃದ್ಧಿ ತರುವ ಪಾಸಿಟಿವ್ ಬದಲಾವಣೆಗಳನ್ನು ಗಮನಿಸಲು ಇದು ಸಕಾಲ. ಪ್ರವಾಸೋದ್ಯಮವೂ ಒಂದು ಕಡೆಗೆ ಮಾತ್ರ ಕೇಂದ್ರೀಕೃತವಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಒಂದು ರಾಜ್ಯ ಅಂದರೆ ಅದರ ಎಲ್ಲ ಜಿಲ್ಲೆಗಳೂ ಪ್ರವಾಸಯೋಗ್ಯವಾಗುವಂತಾಗಬೇಕು. ಒಂದು ದೇಶ ಅಂತ ಬಂದಾಗ, ಪ್ರತಿರಾಜ್ಯವೂ ಪ್ರವಾಸಯೋಗ್ಯ ಎಂಬಂತಾಗಬೇಕು. ಆಗಲೇ ಪ್ರವಾಸೋದ್ಯಮ ಸಮತೋಲನ ಕಂಡುಕೊಳ್ಳುತ್ತದೆ. ಈ ವಾಸ್ತವವನ್ನು ದೇಶ ಅರ್ಥ ಮಾಡಿಕೊಂಡಿದೆ. ಪ್ರವಾಸಿಗರೇ ಆ ಪಾಠವನ್ನು ಕಲಿಸಿದ್ದಾರೆ. ಸಿದ್ಧಸೂತ್ರ ಮುರಿದಿದೆ. ಯಶಸ್ಸು ಕಾಣುತ್ತಿದೆ. ಈ ಸೂತ್ರ ಸವಕಲಾಗುವುದಿಲ್ಲ. ಆದರೆ ಅತಿರೇಕದಿಂದ ಅಪಾಯ ಒಡ್ಡಬಹುದಷ್ಟೆ. ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಸರಕಾರ ಮತ್ತು ಪ್ರವಾಸಿಗರು ಮನಕೊಡಬೇಕಿದೆ.