ಇಂಗ್ಲಿಷ್ ಕ್ಯಾಲೆಂಡರ್‌ನಲ್ಲಿ ವರ್ಷಾಂತ್ಯ ಸಮೀಪಿಸುತ್ತಿದೆ. ವರ್ಷಾಂತ್ಯ ಎಂಬುದು ಪ್ರವಾಸದ ಸೀಸನ್. ವರ್ಷದ ಎಲ್ಲ ರಜೆಗಳನ್ನು ಒಟ್ಟುಮಾಡಿ ಅಂತ್ಯದಲ್ಲಿ ಪ್ರವಾಸಕ್ಕೆ ಪ್ಲಾನ್ ಮಾಡುವುದು ರೂಢಿ. ಡಿಸೆಂಬರ್ ಅಂತ್ಯದಲ್ಲಿ ಪ್ರವಾಸಿ ತಾಣಗಳು ಗಿಜಿಗುಟ್ಟಿದರೆ, ಇತರ ಊರುಗಳು ಬಣಗುಟ್ಟುತ್ತವೆ. ವರ್ಷಾಂತ್ಯದ ಪ್ರವಾಸ ಅಂದಾಗ ಇಡೀ ಭಾರತದ ಆಕರ್ಷಣೆ ಗೋವಾ ಆಗಿರುತ್ತದೆ. ಮುಕ್ಕಾಲು ಪಾಲು ಭಾರತದ ಜನಸಂಖ್ಯೆಯೇ ಗೋವಾದಲ್ಲಿದೆಯೇನೋ ಅನಿಸುವಂತಿರುತ್ತದೆ. ವಿದೇಶಿಗರಿಗೂ ಭಾರತದಲ್ಲಿ ಗೋವಾ ಹೆಚ್ಚು ಪ್ರಿಯ. ಆದರೆ ಇದೀಗ ಅಚ್ಚರಿದಾಯಕ ಮಾಹಿತಿಯೊಂದು ಹೊರಬಿದ್ದಿದೆ. 2025ರ ಗೂಗಲ್ ಸರ್ಚ್ ರಿಪೋರ್ಟ್ ಹೇಳುವ ಪ್ರಕಾರ ಈ ಬಾರಿ ಅತಿ ಹೆಚ್ಚು ಸರ್ಚ್ ಆಗಿರುವ ಸ್ಥಳ ಗೋವಾ ಅಲ್ಲ. ಗೋವಾಗೆ ಟಾಪ್ ಹತ್ತರಲ್ಲೂ ಜಾಗವಿಲ್ಲ. ಇಂಟರೆಸ್ಟಿಂಗ್ ಸಂಗತಿ ಏನೆಂದರೆ, ಈ ವರ್ಷ ಅತಿ ಹೆಚ್ಚು ಸರ್ಚ್ ಆಗಿರುವುದು ಭಾರತದ ಧಾರ್ಮಿಕ ಪ್ರವಾಸಿ ಕ್ಷೇತ್ರಗಳು ಮತ್ತು ಈವೆಂಟ್‌ಗಳು! ನಾವು ಕಳೆದ ವಾರದಲ್ಲಿ ಒಂದು ಸರ್ವೇ ನಡೆಸಿದ್ದೆವು. ಭಾರತದಲ್ಲಿ ಸ್ಪಿರಿಚುವಲ್ ಟೂರಿಸಂ ಬೇಡಿಕೆ ಹೆಚ್ಚಾಗಿರುವುದು ಹಾಗೂ ಯುವಜನತೆ ಹೆಚ್ಚು ಧಾರ್ಮಿಕ ಪ್ರವಾಸಕ್ಕೆ ಒತ್ತುಕೊಡುತ್ತಿರುವುದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಅದನ್ನು ಬೆಂಬಲಿಸುವ ರೀತಿಯಲ್ಲಿ ಈಗ ಗೂಗಲ್ ಡೇಟಾ ಹೊರಬಿದ್ದಿದೆ.

Maha Kumbha Mela

ಈ ವರ್ಷದಲ್ಲಿ ಅತಿ ಹೆಚ್ಚು ಪ್ರವಾಸಿಗರು ಸರ್ಚ್ ಮಾಡಿದ್ದು ಮಹಾಕುಂಭಮೇಳ. ನೂರಾನಲವತ್ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಜಗತ್ತಿನಲ್ಲೇ ಯಾವ ಉತ್ಸವಕ್ಕೂ ಸೇರದಷ್ಟು ಯಾತ್ರಿಗಳನ್ನು ಸೇರಿಸಿತ್ತು. ಕೋಟಿಗಳಲ್ಲಿ ಜನಸಾಗರ ಹರಿದುಬಂದಿತ್ತು. ಭಾರತ ಇಷ್ಟು ಬೃಹತ್ ಮೇಳವೊಂದನ್ನು ಸರ್ವ ಸುವ್ಯವಸ್ಥೆಗಳೊಂದಿಗೆ ಆಯೋಜಿಸಬಲ್ಲುದೆಂದು ವಿಶ್ವಕ್ಕೆ ಸಾಬೀತು ಪಡಿಸಿದ್ದು ನಿಜಕ್ಕೂ ಹೆಗ್ಗಳಿಕೆ. ಗೂಗಲ್ ಸರ್ಚ್‌ನಲ್ಲಿ ನಂಬರ್ ಒನ್ ಇರೋದು ಭಾರತದ ಲಿಸ್ಟ್ ಅಲ್ಲ, ವಿಶ್ವ ಪ್ರವಾಸಿ ತಾಣಗಳ ಲಿಸ್ಟ್ ಎಂಬುದು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಈ ಪಟ್ಟಿಯಲ್ಲಿ ಗುಜರಾತ್‌ನ ಸೋಮನಾಥ ಟೆಂಪಲ್ ಏಳನೇ ಸ್ಥಾನವನ್ನು ಗಳಿಸಿಕೊಂಡಿದೆ. ಪಹಲ್ಗಾಮ್ ದುರಂತದ ನಂತರವೂ ಕಾಶ್ಮೀರ ಗೂಗಲ್ ಸರ್ಚ್ ನಲ್ಲಿ ಐದನೇ ಸ್ಥಾನ ಗಳಿಸಿಕೊಂಡಿದೆ. ಜಾರ್ಜಿಯಾ, ವಿಯೆಟ್ನಾಂನ ಫುಕಾಕ್, ಥೈಲ್ಯಾಂಡ್‌ನ ಫುಕೆಟ್, ಫಿಲಿಪ್ಪೀನ್ಸ್, ಮಾರಿಷಸ್, ಪಾಂಡಿಚೇರಿ ಮುಂತಾದುವುಗಳೂ ಅತಿ ಹೆಚ್ಚು ಸರ್ಚ್ ಕಂಡಿವೆ. ಗೋವಾ ಟಾಪ್ ಟೆನ್‌ನಲ್ಲಿಯೂ ಇಲ್ಲವಾಗಿದೆ. ಇದರರ್ಥ ಗೋವಾಗೆ ಹೋಗುವ ಪ್ರವಾಸಿಗರ ಸಂಖ್ಯೆ ಇಳಿಮುಖ ಆಗಿದೆ ಎಂದಲ್ಲ ಭಾರತದ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆಯ ರೂಪದಲ್ಲಿ ಪ್ರವಾಸ ಹೋಗುವವರ ಸಂಖ್ಯೆ ತೀವ್ರ ಏರಿಕೆ ಕಂಡಿದೆ ಎಂದರ್ಥ. ಕೋವಿಡ್ ನಂತರ ಜನರಲ್ಲಿ ದೈವಭಕ್ತಿ ಹೆಚ್ಚಾಯಿತಾ? ಭಾರತದ ದೇವಸ್ಥಾನಗಳ ಮಹತ್ವಗಳು ಅರಿವಿಗೆ ಬಂದಿತಾ? ಧರ್ಮದ ಮೇಲಿನ ಗೌರವ ಹೆಚ್ಚಾಯಿತಾ? ಭಾರತದಲ್ಲಿ ಧಾರ್ಮಿಕ ಪ್ರವಾಸದ ಪ್ರೊಮೋಷನ್ ಹೆಚ್ಚಾಗಿ ಅದರ ಪರಿಣಾಮ ಪ್ರವಾಸಿಗರ ಹೆಚ್ಚಳವಾಯಿತಾ? ಸೋಷಿಯಲ್ ಮೀಡಿಯಾ ಪ್ರಭಾವವಾ? ಸರಕಾರ ಅಭಿವೃದ್ಧಿಪಡಿಸಿರುವ ಮೂಲಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆಗಳು ಜನರನ್ನು ಉತ್ತೇಜಿಸುತ್ತಿದೆಯಾ? ಇಂದಿನ ಯುವಜನತೆ ಅಧ್ಯಾತ್ಮದತ್ತ ವಾಲುತ್ತಿದ್ದಾರಾ? ಅಥವಾ ಇವೆಲ್ಲದರ ಸಂಕಲನವಾ? ಇದು ನಿಜಕ್ಕೂ ದೀರ್ಘ ಚರ್ಚೆಗೆ ಆಹಾರ. ಆದರೆ ಭಾರತ ತನ್ನ ಸಂಸ್ಕೃತಿ ಮತ್ತು ಧರ್ಮದಿಂದ ವಿದೇಶಿಗರನ್ನು ಆಕರ್ಷಿಸುತ್ತಿರುವುದರಲ್ಲಿ ಯಾವ ಸಂದೇಹವೂ ಇಲ್ಲ. ಭಾರತಕ್ಕೆ ಆಗಮಿಸುತ್ತಿರುವ ಹೆಚ್ಚುಪಾಲು ವಿದೇಶಿ ಪ್ರವಾಸಿಗರಿಗೆ ಸಮುದ್ರ, ಹಿಮ, ಬೆಟ್ಟಗುಡ್ಡ, ಮರುಭೂಮಿ, ಸಿಟಿಲೈಫ್, ಅರಣ್ಯ, ನದಿ, ಐಷಾರಾಮಿ ಇವ್ಯಾವುದೂ ಹೊಸತಲ್ಲ. ಅವು ಜಗತ್ತಿನ ಬೇರೆಬೇರೆ ಕಡೆ ಸಿಗುವಂಥವು. ಆದರೆ ಭಾರತದ ಟೆಂಪಲ್ಸ್, ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ ಆಚರಣೆಗಳನ್ನು ನೋಡಬೇಕೆಂದರೆ ಭಾರತಕ್ಕೇ ಬರಬೇಕು. ಇದೀಗ ವಿದೇಶಿಗರಲ್ಲಿ ಇವುಗಳ ಬಗ್ಗೆ ತೀವ್ರ ಆಸಕ್ತಿ ಮೂಡಿರುವುದರಿಂದಲೇ ಗೂಗಲ್ ಸರ್ಚ್‌ನಲ್ಲಿ ಕುಂಭಮೇಳ ನಂಬರ್ ಒನ್ ಸ್ಥಾನ ಪಡೆದದ್ದು. ಕುಂಭಮೇಳದ ಯಶಸ್ಸಿನಿಂದ ಇನ್ನಷ್ಟು ಮತ್ತಷ್ಟು ವಿದೇಶಿ ಪ್ರವಾಸಿಗರು ಭಾರತ ಇತರ ಧಾರ್ಮಿಕ ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿರುವುದು. ಅಯೋಧ್ಯೆ, ಕಾಶಿ, ಮಥುರೆ, ರಾಮೇಶ್ವರ, ಚಾರ್ ಧಾಮ್, ಉಜ್ಜಯನಿ, ಜ್ಯೋತಿರ್ಲಿಂಗ ಇವೆಲ್ಲವೂ ಭಾರತೀಯರಿಗೆ ಮಾತ್ರವೇ ಅಲ್ಲ ವಿದೇಶಿಗರಿಗೂ ಬಕೆಟ್ ಲಿಸ್ಟ್ ಜಾಗಗಳಾಗುತ್ತಿವೆ. ಪ್ರವಾಸೋದ್ಯಮದ ಜತೆಗೆ ಭಾರತದ ಹಿರಿಮೆಯೂ ಹಿಗ್ಗುತ್ತಿದೆ ಎಂಬುದು ಸಂತಸದ ವಿಚಾರ.